ಅಂಕಣಗಳು

ಸಂಗೀತಾ ರಿಚರ್ಡ್ಸ್ರ ರಹಸ್ಯ ಭಾರತಕ್ಕೆಂದು ತಿಳಿಯುತ್ತದೆ?

ಒಂದೆಡೆ ದೇವಯಾನಿ ಖೋಬ್ರಾಗಡೆ, ಇನ್ನೊಂದೆಡೆ ಸೆಲೆಬ್ರಿಟಿಗಳನ್ನು ಬೇಟೆಯಾಡುವ ಪ್ರೀತ್ ಬರ್ರಾರಾ. ಈ ಅಸಮಾನತೆಯನ್ನು ಎಷ್ಟು ಚಾಣಾಕ್ಷತನದಿಂದ..

Published On :

ಒಂದೆಡೆ ದೇವಯಾನಿ ಖೋಬ್ರಾಗಡೆ, ಇನ್ನೊಂದೆಡೆ ಸೆಲೆಬ್ರಿಟಿಗಳನ್ನು ಬೇಟೆಯಾಡುವ ಪ್ರೀತ್ ಬರ್ರಾರಾ. ಈ ಅಸಮಾನತೆಯನ್ನು ಎಷ್ಟು ಚಾಣಾಕ್ಷತನದಿಂದ ತಿರುಚಲಾಯಿತೆಂದರೆ, ನಮ್ಮ ಕಣ್ಣಲ್ಲೀಗ ಬರೀ ಸಾತ್ವಿಕ ರೋಷದ ಕಿಡಿಗಳು ಕುಣಿದಾಡುತ್ತಿವೆ. ಒಬ್ಬ ರಾಜತಾಂತ್ರಿಕ ಅಧಿಕಾರಿಯನ್ನು ಅವಮಾನ ಮಾಡಿದ್ದಕ್ಕಾಗಿ ಮತ್ತು ಒಬ್ಬ ಸಾಮಾನ್ಯ ಮನೆಗೆಲಸದವಳನ್ನು ಭಾರತೀಯಳೊಬ್ಬಳು ನಡೆಸಿಕೊಂಡ ರೀತಿಯನ್ನು ನೋಡಿ ನಾವೆಲ್ಲ ಆಕ್ರೋಶಗೊಂಡಿರುವುದೇನೋ ಸರಿ. ಆದರೆ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಲು ವಿಫಲವಾಗುತ್ತಿದ್ದೇವೆ ಎನ್ನುವುದಂತೂ ಸತ್ಯ.
ಭಾವನಾತ್ಮಕ ತಿಕ್ಕಾಟ ವಿವೇಚನೆಯನ್ನು ವಿಫಲಗೊಳಿಸುತ್ತಿದೆ. ಭಾರತ-ಅಮೆರಿಕ ನಡುವಿನ ಸಂಬಂಧ ಆರ್ಥಿಕ ಅಂಶಗಳ ಬುನಾದಿಯ ಮೇಲೆಯೇ ನಿಂತಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ತನ್ನ ಪೂರ್ವ ಏಷಿಯಾದ ನೀತಿಗಳಲ್ಲಿ ಭಾರತವನ್ನು ಪ್ರಮುಖ ಮಿತ್ರರಾಷ್ಟ್ರವೆಂದು ಭಾವಿಸುತ್ತಿದೆ. ಈಗ ಹೇಳಿ- ಅಮೆರಿಕ, ರಾಜತಾಂತ್ರಿಕ ಅಧಿಕಾರಿಯೊಬ್ಬಳು ತನ್ನ ಮನೆಗೆಲಸದವಳಿಗೆ ಕಡಿಮೆ ಸಂಬಳ ಕೊಟ್ಟಳು ಎನ್ನುವ ಕಾರಣಕ್ಕೇ ಭಾರತದೊಂದಿಗೆ ಎಲ್ಲಾ ಕೊಂಡಿಗಳನ್ನು ಕಳಚಿಕೊಂಡು ಬಿಡುತ್ತದೆಯೇ?!  
ಹಾಗಿದ್ದರೆ, ನಿಜಕ್ಕೂ ನಡೆದದ್ದೇನು? ಇದಕ್ಕೆ ಉತ್ತರಕಂಡುಕೊಳ್ಳುವ ಮೊದಲು ಎರಡು ನಿಷ್ಠುರ ಸತ್ಯಗಳತ್ತ ದೃಷ್ಟಿ ಹರಿಸಿ: ಮೊದಲನೆಯದು, ಅಮೆರಿಕದ ಆಷಾಢಭೂತಿತನ ಮತ್ತು ಭಾರತದ ಗುಲಾಮಗಿರಿ ಮನಸ್ಥಿತಿ. ರಸೆಲ್ ಸೇಜ್ ಫೌಂಡೇಷನ್ ಎನ್ನುವ ಸ್ವತಂತ್ರ ಸಂಶೋಧನಾ ಸಂಸ್ಥೆಯೊಂದು ಹೇಳುವ ಪ್ರಕಾರ ಅಮೆರಿಕದ
ಜವಳಿ, ವಸ್ತ್ರ ಮತ್ತು ದುರಸ್ತಿ ಸೇವೆಗಳಲ್ಲಿ ಕೆಲಸ ಮಾಡುವ 40 ಪ್ರತಿಶತ ಕೆಲಸಗಾರರು ಕನಿಷ್ಠ ವೇತನಕ್ಕಿಂತಲೂ ಕಡಿಮೆ ಹಣ ಪಡೆದು ಬದುಕುತ್ತಿದ್ದಾರೆ. ಇನ್ನು ಅಮೆರಿಕದಲ್ಲಿ ಕನಿಷ್ಠ ವೇತನ ಉಲ್ಲಂಘನೆಯ ಕೇಸುಗಳಲ್ಲಿ 41 ಪ್ರತಿಶತದಷ್ಟು ಕೇಸುಗಳು ಮನೆಕೆಲಸದವರಿಂದಲೇ ದಾಖಲಾಗಿವೆ. ಅಂದರೆ 41 ಪ್ರತಿಶತ ಅಮೆರಿಕನ್ನರೇ ತಮ್ಮ ಮನೆಗೆಲಸದವರನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಾರೆ ಎಂದಂತಾಯಿತು!
ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಂತೂ ಅಮೆರಿಕದ ಮಿಥ್ಯಾಚಾರ ಅತಿಯೆನ್ನಿಸುವಷ್ಟಿದೆ. ಹೇಗ್ನಲ್ಲಿರುವ ಆಂತಾರಾಷ್ಟ್ರೀಯ ನ್ಯಾಯಾಲಯವನ್ನು ಗೌರವಿಸದಿರುವ ಏಕೈಕ ಪ್ರಜಾಪ್ರಭುತ್ವ ರಾಷ್ಟ್ರವೆಂದರೆ ಅಮೆರಿಕವೊಂದೇ. ಇದರರ್ಥವಿಷ್ಟೆ, ಅದು ಕಾನೂನು ಬಾಹಿರ ಕೆಲಸಗಳನ್ನೂ ಮಾಡಿದರೂ ಕೂಡ ಉತ್ತರದಾಯಿಯಾಗಿರುವುದಿಲ್ಲ. 1984ರಲ್ಲಿ ಅಮೆರಿಕ ಸರ್ಕಾರ ನಿಕಾರೆಗ್ವು ಬಂದರುಗಳಲ್ಲಿ ಗಣಿಗಾರಿಕೆ ನಡೆಸಿ ಅಲ್ಲಿನ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಿತ್ತು.  ಅಂತಾರಾಷ್ಟ್ರೀಯ ಕಾನೂನನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಹೇಗ್ ದೂರು ನೀಡಿತು. ಆದರೆ ಅಮೆರಿಕ ಅದರ ಮಾತನ್ನು ಕಡೆಗಣಿಸಿತು. ಅಷ್ಟೇ ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ತನ್ನ ವಿರುದ್ಧ ತೀರ್ಪು ನೀಡದಂತೆ ಕಟ್ಟಿಹಾಕಿತು.
ಭಾರತ ಕೂಡ ಅಮೆರಿಕದ ಈ ಇಬ್ಬಗೆತನದ ರುಚಿ ಕಂಡಿದೆ. ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಕಳುಹಿಸಿಕೊಡಲು ಅಮೆರಿಕ ಒಪ್ಪದೇ, ಆತನನ್ನು ತನ್ನ ದೇಶದಲ್ಲೇ ಇಟ್ಟುಕೊಂಡಿತು. ಇನ್ನು ಭೋಪಾಲ್ನ ಅನಿಲ ದುರಂತದ ವಿಷಯ. ಅಮೆರಿಕ ಒಬ್ಬ ಮನೆಗೆಲಸದವಳ ಹಕ್ಕಿನ ಬಗ್ಗೆ ಈ ಪರಿ ಕಾಳಜಿ ವಹಿಸುತ್ತಿದೆಯಲ್ಲಾ? ಅದೇ ಕಾಳಜಿ, ಅದೇ ನೋವು ಯೂನಿಯನ್ ಕಾರ್ಬೈಡ್ನ ಸ್ವಾರ್ಥಕ್ಕೆ ಸಿಲುಕಿ ಅಂಗವೈಕಲ್ಯಕ್ಕೆ ಗುರಿಯಾಗಿರುವ ನೂರಾರು ಮಕ್ಕಳ ಬಗ್ಗೆ ಅದಕ್ಕೇಕೆ ಇಲ್ಲ?   
ಅಮೆರಿಕದ ಮುಂದೆ ಭಾರತ ಎಷ್ಟೋ ವರ್ಷಗಳಿಂದ ಗುಲಾಮನಂತೆ ವರ್ತಿಸುತ್ತಾ ಬಂದಿದೆ. ಇದರ ಮೇಲೆ ಭೋಪಾಲ್ ದುರಂತ ಪರೋಕ್ಷವಾಗಿ ಬೆಳಕು ಚೆಲ್ಲುತ್ತದೆ. ಭಾರತದ ಅಧಿಕಾರ ವರ್ಗ ಅನಿಲ ದುರಂತಕ್ಕೆ ಕಾರಣನಾದ ಯೂನಿಯನ್ ಕಾರ್ಬೈಡ್ನ ಅಧ್ಯಕ್ಷ ಆ್ಯಂಡರ್ಸನ್ಗೆ ಭಾರತದಿಂದ ಪಾರಾಗಲು ಸಹಕರಿಸಿತು.
ಅದು ಬಿಡಿ. ಕೆಲವು ವರ್ಷದ ಹಿಂದೆ ನಮ್ಮ ಮಾಜಿ ರಾಷ್ಟ್ರಪತಿಗಳ ತಪಾಸಣೆ ನಡೆಸಿ ಅಮೆರಿಕದ ವಿಮಾನಯಾನ ಸಂಸ್ಥೆಯೊಂದು ಅವರನ್ನು ಅವಮಾನ ಮಾಡಿತು. ಅದಾದ ನಂತರ ವಾಶಿಂಗ್ಟನ್ಗೆ ಅಧಿಕೃತ ಭೇಟಿ ನೀಡಿದ್ದ ರಕ್ಷಣಾ ಸಚಿವರನ್ನೂ ತಪಾಸಣೆ ಮಾಡಿ ಭಾರತದತ್ತ ಕೊಂಕು ದೃಷ್ಟಿ ಬೀರಿತು ಅಮೆರಿಕ. ಆದರೆ ಅಂಥ ಅವಮಾನಗಳ ವಿರುದ್ಧ ನಮ್ಮ ರಾಷ್ಟ್ರ ಒಂದುಬಾರಿಯಾದರೂ ಪ್ರತಿಭಟಿಸಿದೆಯೇ? ಇದಕ್ಕೆ ಕಾರಣವೇನು? ಅಮೆರಿಕದಲ್ಲಿ ಉನ್ನತ ಹುದ್ದೆ ಅಲಂಕರಿಸುವುದಕ್ಕಾಗಿನ ನಮ್ಮ ಐಎಫ್ಎಸ್/ ಐಎಎಸ್ ಅಧಿಕಾರಿಗಳ ಹಪಾಹಪಿಯೇ ಅಥವಾ ನಮ್ಮ ರಾಜಕಾರಣಿಗಳಿಗೆ ಅಮೆರಿಕದ ಆತಿಥ್ಯದ ಮೇಲಿನ ಅಪರಿಮಿತ ಪ್ರೀತಿಯೇ? ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳ ಕುಟುಂಬಗಳಿಗೆ ನೀಡಿದ್ದ ಏರ್ಪೋರ್ಟ್ ಪಾಸ್ಗಳನ್ನು ಮತ್ತು ಗುರುತು ಚೀಟಿಗಳನ್ನು ಅನರ್ಹಗೊಳಿಸುವ ಮೂಲಕ ಭಾರತ ಸರ್ಕಾರ ಈ ಬಾರಿ ತುಸು ಧೈರ್ಯವಂತೂ ಮೆರೆದಿದೆ. ಆದರೆ ಅವರಿಗೆಲ್ಲ ಈ ಸೌಕರ್ಯಗಳನ್ನು ಕೊಡುವ ಅವಶ್ಯಕತೆಯೇನಿತ್ತು? ಈ ರೀತಿಯ ಸೌಲಭ್ಯಗಳು ಅಮೆರಿಕದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೇಕಿಲ್ಲ? ಏಕೆಂದರೆ ಹಾಗೆ ಮಾಡುವುದನ್ನು ಚಮ್ಚಾಗಿರಿಯೆಂದು ಅಮೆರಿಕ ಭಾವಿಸುತ್ತದೆ!
ಈ ಅಂಶಗಳು ದೇವಯಾನಿ/ಸಂಗೀತ ಪ್ರಕರಣಕ್ಕೆ ಹೊಸ ಆಯಾಮವನ್ನು ನೀಡುತ್ತವೆ. ಸಂಗೀತಾಗೆ ಉತ್ತಮ(ಉನ್ನತ) ಸಂಪರ್ಕಗಳಿದ್ದವು. (ಆಕೆಯ ಪತಿ ಮತ್ತು ತಾಯಿಯೂ ಕೂಡ ಅಮೆರಿಕದ ರಾಜತಾಂತ್ರಿಕರಿಗಾಗಿ ಕೆಲಸ ಮಾಡುತ್ತಿದ್ದರು). ಸಂಗೀತಾ ತನಗೆ ಬೇರೆ ಕೆಲಸ ಮಾಡುವುದಕ್ಕೆ ಅನುಮತಿ ಕೊಡಬೇಕೆಂದು ದೇವಯಾನಿಯನ್ನು ಕೇಳಿದ್ದಳು. ಆದರೆ ಹಾಗೆ ಮಾಡುವುದು ಕಾನೂನು ಬಾಹಿರವಾದ್ದರಿಂದ, ದೇವಯಾನಿ ಅನುಮತಿ ನೀಡಿರಲಿಲ್ಲ. ಕೊನೆಗೆ ಸಂಗೀತಾ ಕಾಣೆಯಾದಳು. ಬಹುಶಃ ಏನು ನಡೆಯುತ್ತಿದೆ ಎನ್ನುವುದು ದೇವಯಾನಿಗೆ ಮೊದಲೇ ತಿಳಿದಿತ್ತೇನೋ? ಇದೇ ಕಾರಣಕ್ಕಾಗಿಯೇ ಆಕೆ ಸಂಗೀತಾಳ ವಿರುದ್ಧ ಮೊಕದ್ದಮೆ ದಾಖಲಿಸಿದಳು. ದೆಹಲಿ ನ್ಯಾಯಾಲಯ ಸಂಗೀತಾಳ ವಿರುದ್ಧ ಬಂಧನದ ವಾರಂಟ್ ಹೊರಡಿಸಿತು. ಕೂಡಲೇ ಎಚ್ಚೆತ್ತುಕೊಂಡ ಅಮೆರಿಕ ಎಲ್ಲಿ ತನ್ನ ಬಂಡವಾಳ ಬಯಲಾಗುತ್ತದೋ ಎಂದು ಹೆದರಿ ಸಂಗೀತಾಳ ಕುಟುಂಬವನ್ನೂ ರಾತ್ರೋರಾತ್ರಿ ತನ್ನ ದೇಶಕ್ಕೆ ಕರೆಸಿಕೊಂಡುಬಿಟ್ಟಿತು! ಕೊನೆಗೆ ದೇವಯಾನಿಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿತು. ಆ ಮೂಲಕ ತಾನು ಬಚಾವಾಯಿತು.
ಅಮೆರಿಕಕ್ಕಾಗಿ ಕೆಲಸ ಮಾಡುತ್ತಿದ್ದ 'ರಾ' ಸಂಸ್ಥೆಯ ಏಜೆಂಟ್ ರವೀಂದರ್ ಸಿಂಗ್ ಅವರ ಕಥೆಯೂ ಇದೇ ರೀತಿಯಲ್ಲಿದೆ. ಭಾರತ ರವೀಂದರ್ನನ್ನು ಬಂಧಿಸುವುದರಲ್ಲಿತ್ತು. ಆದರೆ ಅಮೆರಿಕ ಅದ್ಹೇಗೋ ಆತನನ್ನು ಬಚಾವು ಮಾಡಿ ತನ್ನ ದೇಶಕ್ಕೆ ಸಾಗಿಸಿಬಿಟ್ಟಿತು. ಸಂಗೀತಾ ಕೂಡ ರವಿಂದರ್ ಸಿಂಗ್ ರೀತಿಯೇ ಅಮೆರಿಕಕ್ಕಾಗಿ ಕೆಲಸ ಮಾಡುತ್ತಿರುವವಳು. ಮಾಜಿ ರಾಜತಾಂತ್ರಿಕ ಅಧಿಕಾರಿ ಮೀರಾ ಶಂಕರ್ ಅವರ ಮನೆಗೆಲಸದವಳೂ ಇದೇ ರೀತಿಯಲ್ಲಿ ಕಾಣೆಯಾಗಿದ್ದಳು. ಅಮೆರಿಕ ತನ್ನ ಹಳವಂಡವನ್ನು ಮುಚ್ಚಿಡಲು ದೇವಯಾನಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಬಹುಶಃ ಸಂಗೀತಾ, ರವಿಂದರ್ ಮತ್ತು ಇನ್ನುಳಿದ ಏಜೆಂಟರೆಲ್ಲ ಅಮೆರಿಕ ಸರ್ಕಾರದ ನೆರಳಿನಡಿಯಲ್ಲಿ ಹಾಯಾಗಿ ಬದುಕುತ್ತಿರಬಹುದು. ಇಂಥ ಕಪಟತನಕ್ಕೆ ಭಾವನಾತ್ಮಕ ಕತೆ ಕಟ್ಟಿ ಭಾರತದಮುಂದೆ ತೇಲಿಬಿಟ್ಟಿದೆ ಅಮೆರಿಕ. ಭಾವುಕ ಭಾರತ ಮಾತ್ರ ಮಾನವ ಹಕ್ಕಿನ ಹೆಸರಿನಲ್ಲಿ ವಾಸ್ತವವನ್ನೇ ನೋಡುತ್ತಿಲ್ಲ!


-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.