ಜನನಾಯಕರ ಜೋಲಿಯಲ್ಲಿ ಆರಾಮ ನಿದ್ರಿಸುತ್ತಿರುವ ಅಧಿಕಾರಶಾಹಿ
ಶಾಸಕಾಂಗ ಆಕಳಿಸುತ್ತಿದೆ, ಕಾರ್ಯಾಂಗ ನಿದ್ರಿಸುತ್ತಿದೆ. ಕರ್ನಾಟಕದ ಮಟ್ಟಿಗೆ ಈ ...

ಶಾಸಕಾಂಗ ಆಕಳಿಸುತ್ತಿದೆ, ಕಾರ್ಯಾಂಗ ನಿದ್ರಿಸುತ್ತಿದೆ.
ಕರ್ನಾಟಕದ ಮಟ್ಟಿಗೆ ಈ ಮಾತನ್ನು ಯಾವುದೇ ಮುಲಾಜಿಲ್ಲದೆ ಹೇಳಬಹುದು.ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರದ ಮೇಟಿ. ಅವರು ಸಿಕ್ಕಸಿಕ್ಕಂತೆ ಚಾಟಿ ಬೀಸುತ್ತಿರುವುದರಿಂದ ಶಾಸಕಾಂಗ ಹಾಗೂ ಕಾರ್ಯಾಂಗ ಎರಡೂ ಹತೋಟಿ ಕಳೆದುಕೊಂಡಿವೆ. ಈ ಎರಡೂ ಅಂಗಗಳಿಗೆ ಒಂದೆಡೆ ತಮ್ಮ-ತಮ್ಮ ಮೇಲೂ ವಿಶ್ವಾಸವಿಲ್ಲ, ಇನ್ನೊಂದೆಡೆ ಪರಸ್ಪರರ ಮೇಲೂ ನಂಬಿಕೆ ಇಲ್ಲ. ಯಾವುದೇ ಸರಕಾರದ ಯಶಸ್ಸಿಗೆ ಸಂವಿಧಾನದ ಈ ಎರಡು ಅಂಗಗಳ ನಡುವೆ ಸಾಮರಸ್ಯ ಅತ್ಯಗತ್ಯ. ಆದರೆ ಶಾಸಕಾಂಗದಲ್ಲಿರುವ ಜನಪ್ರತಿನಿಧಿಗಳು ಹಾಗೂ ಕಾರ್ಯಾಂಗದ ಪ್ರತಿನಿಧಿಗಳಾದ ಅಧಿಕಾರಿಗಳ ನಡುವೆ ಲಿಂಕ್ ತಪ್ಪಿ ಹೋಗಿರುವುದರಿಂದ ರಾಜ್ಯದ ಪ್ರಗತಿ ಯಂತ್ರದ ಚಕ್ರಗಳು ಕೆಟ್ಟು ನಿಂತಿವೆ. ಸರಕಾರದ ಸರಾಗ ಮುನ್ನಡೆಗೆ ಕೀಲೆಣ್ಣೆ ಹಾಕಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಕಿಲುಬು ಹಿಡಿದವರಂತೆ ವರ್ತಿಸುತ್ತಿದ್ದಾರೆ.
ಹೌದು, ರಾಜ್ಯ ಸರಕಾರದ ಧೋರಣೆಯಿಂದಾಗಿ ಅಧಿಕಾರಶಾಹಿ ಜಡ್ಡು ಹಿಡಿದಂತಾಗಿದೆ. ಸರಕಾರದ ಧೋರಣೆ ಎಂದರೆ ಅದರ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಧೋರಣೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಧೋರಣೆ ಎಂದರೆ ಸರಕಾರದ ಧೋರಣೆ ಎಂದರ್ಥ. ಆದರೆ ಇಲ್ಲಿ ತಾಳಮೇಳ ಕಳೆದು ಹೋಗಿದೆ. ತಾಳಮೇಳ ಇಲ್ಲದಿರುವುದರಿಂದ ಅಧಿಕಾರಿಗಳ ವರ್ತನೆ ನೆಪಮಾತ್ರದ ಕರ್ತವ್ಯ ಪಾಲನೆಗೆ ಸೀಮಿತವಾಗಿದ್ದು, ಸೇವಾ ಮನೋಭಾವ ಮಾಯವಾಗಿದೆ. ಸರಕಾರದ ಯಂತ್ರ ಉರುಳುವುದೇ ಅಧಿಕಾರಿಗಳಿಂದ. ಅಂಥವರು ಗೆರೆ ಎಳೆದುಕೊಂಡು ಕೆಲಸ ಮಾಡುತ್ತಿರುವುದರ ಪ್ರಯುಕ್ತ ರಾಜ್ಯದ ಅಭಿವೃದ್ಧಿ ಕುಂಟುತ್ತಿದೆ.
ಸರಕಾರದಲ್ಲಿ ಸದ್ಯಕ್ಕೆ ಸಿದ್ದರಾಮಯ್ಯನವರು ಹೇಳಿದ್ದೇ ಮಾತು, ಅವರು ಪ್ರಕಟಿಸಿದ್ದೇ ಯೋಜನೆ. ಎಲ್ಲ ತೀರ್ಮಾನಗಳು ಅವರ ಮೂಗಿನ ನೇರಕ್ಕೇ ಆಗುತ್ತಿವೆ. ಕೆಲವು ತಪ್ಪು ತೀರ್ಮಾನಗಳು ಹೊರಬಿದ್ದರೂ ಯಾರೂ ಅದನ್ನು ಪ್ರಶ್ನಿಸುತ್ತಿಲ್ಲ. ಮಂತ್ರಿಗಳಿಗೆ ತಮ್ಮ ಇಲಾಖೆಗೆ ಸಂಬಂಧಪಟ್ಟ ತೀರ್ಮಾನಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಹಾಗೆಂದು ಅವರು ಸಮರ್ಥರಲ್ಲ ಎಂದು ಅರ್ಥವಲ್ಲ. ಆದರೆ ಅವರಿಗೆ ತಪ್ಪು ತೀರ್ಮಾನಗಳನ್ನು ಪ್ರಶ್ನಿಸುವ ಅಥವಾ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯ ಇಲ್ಲ. ಸಂಪುಟದಲ್ಲಿರುವ ಬಹುತೇಕ ಮಂದಿ ಇಂಥವರೇ ಆಗಿರುವುದರಿಂದ ಅದರ ನೇರ ಪರಿಣಾಮ ಆಡಳಿತದ ಮೇಲಾಗುತ್ತಿದೆ.
ಸಚಿವರ ಜಡ್ಡುಗಟ್ಟುವಿಕೆ ಹೇಗಾಗುತ್ತದೆ ಎಂಬುದಕ್ಕೆ ಇಲ್ಲೊಂದು ಸಣ್ಣ ಉದಾಹರಣೆ. ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದಾಗ ಕರ್ನಾಟಕ ವೃತ್ತಿಶಿಕ್ಷಣ ಕಾಲೇಜುಗಳ ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಕಾನೂನು ರೂಪಿತವಾಯಿತು. ಕಾಲೇಜು ಆಡಳಿತ ಮಂಡಳಿಗಳು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದವು. ಆದರೆ ಸುಪ್ರೀಂ ಕೋರ್ಟ್ ಈ ಕಾನೂನು ಅಗತ್ಯವನ್ನು ಎತ್ತಿಹಿಡಿಯಿತು. ಈಗಿನ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಈ ಕ್ರಾಂತಿಕಾರಕ ಕಾನೂನು ಜಾರಿಗೆ ತರಲು ಮುಂದಾದರು. ಇನ್ನೇನು ಈ ಕಾನೂನು ಜಾರಿಗೆ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ 'ಬಾಹ್ಯ ಒತ್ತಡ'ಗಳಿಗೆ ಮಣಿದ ಸಿದ್ದರಾಮಯ್ಯನವರು ಅಡ್ಡಗಾಲು ಹಾಕಿಬಿಟ್ಟರು. ಈ ಕಾನೂನು ಜಾರಿಗೆ ತರದಿರುವ ತೀರ್ಮಾನ ಕೈಗೊಂಡರು. ಹೀಗಿರುವಾಗ ಶರಣ್ ಪ್ರಕಾಶ್ ಪಾಟೀಲರಂಥ ಸಚಿವರಿಗೆ ಕೆಲಸ ಮಾಡಿ ಅಂದರೆ ಹೇಗೆ ತಾನೇ ಮಾಡುತ್ತಾರೆ? ಕೆಲಸ ಮಾಡಲು ಅವರಿಗೆ ಮನಸ್ಸು ತಾನೇ ಹೇಗೆ ಬರುತ್ತದೆ? ಉಳಿದ ಸಚಿವರಿಗೂ ಇದೇ 'ಮಾದರಿ ಪಾಠ'ವಾಗುತ್ತದೆ. ಜನಪರ ಕೆಲಸಗಳು ಅತ್ತೇ ನಿಲ್ಲುತ್ತವೆ. ಶಾಸಕಾಂಗ ವಿಕಲಚೇತನ ಆಗುತ್ತದೆ.
ಸಚಿವರ ಕತೆಯೇ ಹೀಗಾದರೆ ಇನ್ನು ಅಧಿಕಾರಶಾಹಿಗೆ ಯಾವ ಸಂದೇಶ ರವಾನೆ ಆಗಬಹುದು. ಅದು ಸಚಿವರಿರಲಿ, ಅವರ ಇಲಾಖೆಗಳಿಗೆ ಅಂಟಿಕೊಂಡೇ ಕೆಲಸ ಮಾಡಬೇಕಾದ ಅಧಿಕಾರಿಗಳಿಗೆ ಇರಲಿ. ಆಡಳಿತ ಹೇಗೆ ನಡೆಯುತ್ತಿದೆ, ಹೇಗೆ ನಡೆಸಬೇಕು ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳುಗಳೇ ಕಳೆದಿದ್ದರೂ ಇವತ್ತಿಗೂ ಕೆಲಸ ಹೇಗೆ ಮಾಡಬೇಕೆಂಬದು ತಿಳಿಯದೇ ತಡಬಡಾಯಿಸುತ್ತಿದ್ದಾರೆ. ಏಕೆಂದರೆ ಸಿದ್ದರಾಮಯ್ಯನವರು ಯಾವ ವಿಷಯವನ್ನು ಹೇಗೆ ತೆಗೆದುಕೊಳ್ಳುತ್ತಾರೆ, ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಒಂದೆಡೆ ಮಂತ್ರಿಗಳು ಹಾಗೂ ಇನ್ನೊಂದೆಡೆ ಅಧಿಕಾರಿಗಳು ಸದಾ ಗೊಂದಲದಲ್ಲೇ ಮುಳುಗಿದ್ದಾರೆ.
ಈ ಗೊಂದಲ ಏಕೆ? ಉತ್ತರ ಬಹಳ ಸಿಂಪಲ್. ಸಿದ್ದರಾಮಯ್ಯನವರು ಮೊದಲು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಂತರ ಚಿಂತನೆ ನಡೆಸುತ್ತಾರೆ. ಅದು ಅನ್ನಭಾಗ್ಯ ಇರಬಹುದು, ಶಾದಿಭಾಗ್ಯ ಇರಬಹುದು, ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ಇರಬಹುದು, ಮೂಢನಂಬಿಕೆ ನಿಯಂತ್ರಣ ವಿಚಾರ ಇರಬಹುದು. ತೀರ್ಮಾನಕ್ಕೆ ಮೊದಲು ಸಚಿವರು, ಅಧಿಕಾರಿಗಳ ಜತೆ ಕೂಲಂಕಷ ಚರ್ಚೆ, ಸಮಾಲೋಚನೆ ನಡೆಸುವುದಿಲ್ಲ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪವಿದೆ. ಇವರೇನೋ ಅನ್ನಭಾಗ್ಯ ಘೋಷಣೆ ಮಾಡಿದರು. ಅದನ್ನು ಅನುಷ್ಠಾನಕ್ಕೆ ತರಬೇಕಾದ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಕತೆ ಏನಾಗಬೇಡ? ನಾಳೆ ಯೋಜನೆ ಹೆಚ್ಚು ಕಮ್ಮಿಯಾದರೆ ಜನ ಆಹಾರ ಸಚಿವರನ್ನೂ ಬಾಧ್ಯಸ್ಥರನ್ನಾಗಿ ಮಾಡುತ್ತಾರೆ. ಯೋಜನೆಯ ಸಾಫಲ್ಯ-ವೈಫಲ್ಯದ ಹೆಸರು ಆಯಾ ಸಚಿವರಿಗೂ ಮೆತ್ತಿಕೊಳ್ಳುತ್ತದೆ.
ಇನ್ನು ಅಧಿಕಾರಿಗಳ ಪಾಡು. ಯೋಜನೆಗೆ ಸಂಪನ್ನೂಲ ಕ್ರೋಢೀಕರಣ ಹೇಗೆ? ಸರಕಿನ ದಾಸ್ತಾನು ಹೇಗೆ? ಏಕೆಂದರೆ ಯೋಜನೆಯನ್ನು ನಿಜ ಅರ್ಥದಲ್ಲಿ ಜಾರಿಗೆ ತರುವವರು ಅಧಿಕಾರಿಗಳು. ಅನೌನ್ಸ್ ಮಾಡಿದ ನಾಯಕರು ವಿಧಾನಸೌಧದಲ್ಲಿ ತಣ್ಣಗಿರುತ್ತಾರೆ. ಆದರೆ ಹಣ, ಅಕ್ಕಿ ಹೊಂದಿಸಿ, ಹಂಚಬೇಕಾದ, ಹಂಚದಿದ್ದರೆ ಜನರಿಂದ ಕೊರಳಪಟ್ಟಿ ಹಿಡಿಸಿಕೊಳ್ಳಬೇಕಾದ ಅಧಿಕಾರಿಗಳು ಎಲ್ಲಿಗೆ ಹೋಗಬೇಕು? ಯೋಜನೆ ಪ್ರಕಟಣೆಗೆ ಮುಂಚೆಯೇ ಕೇಳಿದ್ದರೆ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತ ಮಾಹಿತಿ ಕೊಟ್ಟು, ಮನವರಿಕೆ ಮಾಡಿಕೊಡಬಹುದಾಗಿತ್ತು. ಆದರೆ ಈಗ...? ಇದು ಮುಖ್ಯಮಂತ್ರಿಗಳ ಯೋಜನೆ, ಅವರು ಪ್ರಕಟಿಸಿದ್ದಾರೆ, ತಾವು ಮಾಡಬೇಕು ಅಷ್ಟೇ. ಆದರೆ ಮಾಡುವುದು, ಆಗದಿದ್ದರೆ ಬಿಡುವುದು ಎಂಬ ನಿರ್ಭಾವುಕ ಸ್ಥಿತಿಗೆ ಅಧಿಕಾರಿಗಳು ಬಂದು ನಿಂತಿದ್ದಾರೆ.
ಹಾಗೆ ನೋಡಿದರೆ ಸಿದ್ದರಾಮಯ್ಯನವರ ಯೋಚನೆಗಳು, ಯೋಜನೆಗಳು ಬಹು ಹಿಂದಿನ ಕಾಲಮಾನಕ್ಕೆ ಹೊಂದುವಂಥವು. ಈಗಿನ ಕಾಲಘಟ್ಟಕ್ಕಲ್ಲ. ಜಾಗತಿಕ ಆರ್ಥಿಕ ಸುಧಾರಣೆ ನಂತರ, ಇದನ್ನು ಭಾರತ ಒಪ್ಪಿಕೊಂಡ ನಂತರ ಆಡಳಿತಾತ್ಮಕವಾಗಿ ಬಹಳಷ್ಟು ಬದಲಾವಣೆಗಳಾಗಿವೆ. ಅಧಿಕಾರಶಾಹಿ ಕೂಡ ಇದಕ್ಕೆ ಒಗ್ಗಿ ಹೋಗಿದೆ. ಅಕ್ಕಿ ಕೊಡುವುದು, ಹಾಲು ಕೊಡುವುದು, ಹಿಂಡಿಕೊಡುವುದು ತಪ್ಪು ಎಂದೇನೂ ಅಲ್ಲ. ಆದರೆ ಇದೆಲ್ಲ ಈಗಿನ ಆರ್ಥಿಕ ಸನ್ನಿವೇಶದಲ್ಲಿ ಜಾರಿ ಮಾಡಲು ಆರ್ಹವಲ್ಲದ, ಆಗಲೊಲ್ಲದ ಕಲ್ಯಾಣರಾಜ್ಯ ಕಾಲಘಟ್ಟದವು. ಇವು ಅನುಷ್ಠಾನ ಕಷ್ಟ ಯೋಜನೆಗಳು ಎಂಬುದು ಅಧಿಕಾರಿಗಳಿಗೆ ಬಹಳ ಚೆನ್ನಾಗಿ ಗೊತ್ತು. ಆದರೆ ಇದನ್ನು ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿಕೊಡುವ ಧೈರ್ಯವಾಗಲಿ, ಅವಕಾಶವಾಗಲಿ ಅವರಿಗೆ ಇಲ್ಲ. ಹೇಳಿದರೆ ಕೇಳುತ್ತಾರೋ, ಇಲ್ಲವೋ, ಅದನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಭೀತಿ ಅವರದ್ದು. ಸಿದ್ದರಾಮಯ್ಯನವರು ಮೊದಲಿಂದಲೂ ಅಧಿಕಾರಶಾಹಿ ವಿರೋಧಿ, ಅಧಿಕಾರಿಗಳ ಮಾತು ಕೇಳುವುದಿಲ್ಲ ಎಂಬ ಪ್ರತೀತಿ ಇದೆ. ಹೀಗಾಗಿ ಅಧಿಕಾರಿಗಳು ಅವರ ಬಳಿ ಸುಳಿಯಲು ಭಯಪಡುತ್ತಾರೆ. ಆದಷ್ಟು ಅವರಿಂದ ಅಂತರ ಕಾಯ್ದುಕೊಳ್ಳಲು ನೋಡುತ್ತಾರೆ. ಈ ಅಂತರವೇ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಮಾರಕವಾಗಿದೆ.
ಮುಖ್ಯಮಂತ್ರಿಗಳದು ಮತ್ತೊಂದು ಧೋರಣೆ. ಸುತ್ತಮುತ್ತ ಬುದ್ಧಿವಂತರು ಬೇಡ. ತಾವು ಹೇಳಿದ್ದನ್ನು ಕೇಳುವ, ಹೇಳಿದ್ದನ್ನು ಮಾಡುವ ಅಧಿಕಾರಿಗಳನ್ನು ಸನಿಹದಲ್ಲಿ ಇಟ್ಟುಕೊಳ್ಳಲು ನೋಡುತ್ತಾರೆ. ಈ ರೀತಿ ಗೋಣು ಅಲ್ಲಾಡಿಸುವ ಅಧಿಕಾರಿಗಳಿಂದ ಕಾರ್ಯಾಂಗ ಸುಲಲಿತವಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆಗ ತನ್ನಂತಾನೇ ಕೆಲಸಗಳು ನಿಂತಲ್ಲೇ ಬಸ್ಕಿ ಹೊಡೆಯುತ್ತವೆ.
ಇನ್ನೂ ಒಂದು ವರ್ಗದ ಅಧಿಕಾರಿಗಳಿದ್ದಾರೆ. ಹೇಗಿದ್ದರೂ ತಾವು ಅಂದುಕೊಂಡಂತೆ ಕೆಲಸ ಮಾಡಲು ಅಗುವುದಿಲ್ಲ ಎಂಬುದನ್ನೇ ನೆಪ ಮಾಡಿಕೊಂಡು ಸೋಮಾರಿತನಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ. ಇವರಿಗೆ ಆಗುವ ಕೆಲಸ ಮಾಡಲು ಮನಸ್ಸಿಲ್ಲ. ಬಲವಂತವಾಗಿ ಅಸಡ್ಡೆಯನ್ನು ಆವಾಹನೆ ಮಾಡಿಕೊಂಡಿದ್ದಾರೆ. ಹೀಗಾಗಿ ಜನರ ಕೆಲಸಗಳು ಆಗುತ್ತಿಲ್ಲ. ಕಡತಗಳು ಮರಿ ಹಾಕುತ್ತಿವೆ. ಇದರ ಬಿಸಿ ಈಗಾಗಲೇ ಸರಕಾರಕ್ಕೆ ತಟ್ಟಿದೆ. ಒಂದು ಆದೇಶವೂ ಹೊರಬಿದ್ದಿದೆ. ಪ್ರತಿ ತಿಂಗಳ ಮೊದಲ ಸಂಪುಟ ಸಭೆಯಲ್ಲಿ ಎಲ್ಲ ಇಲಾಖೆಗಳ ಕಡತ ವಿಲೇವಾರಿ ಬಗ್ಗೆ ಪರಿಶೀಲನೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಸಮರ್ಪಕ ಕಡತ ವಿಲೇವಾರಿ ಆಗದ ಇಲಾಖೆಗಳ ಮುಖ್ಯ ಅಧಿಕಾರಿಗಳಿಗೆ ಮೊದಲು ಎಚ್ಚರಿಕೆ ಕೊಡುವುದು, ಆಗಲೂ ಸರಿ ಹೋಗದಿದ್ದರೆ ನೋಟೀಸ್ ಜಾರಿ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟ ಸಚಿವರನ್ನೂ ಬಾಧ್ಯಸ್ಥರನ್ನಾಗಿ ಮಾಡಲಾಗಿದೆ. ಇಲ್ಲಿ ಮೂರು ವಿಚಾರ. ಒಂದು ನಿತ್ಯ ತನ್ನಂತಾನೆ ನಡೆಯಬೇಕಾದ ಕೆಲಸಗಳಿಗೆ ಆದೇಶದ ಮೊರೆ. ಇನ್ನೊಂದು ಅಧಿಕಾರಿಶಾಹಿಯ ಮೇಲೆ ಸರಕಾರಕ್ಕಿರುವ ಹಿಡಿತ ಎಂಥದ್ದು ಎಂಬುದರ ಅನಾವರಣ. ಮತ್ತೊಂದು ಅಧಿಕಾರಿಗಳಿಂದ ಕೆಲಸ ಮಾಡಿಸಲು ಮತ್ತದೇ ಬೆದರಿಕೆ ತಂತ್ರ.
ಅಧಿಕಾರಿಗಳು ಕೈಕೊಟ್ಟರೆ ಪರಿಸ್ಥಿತಿ ಹೇಗಾಗುತ್ತದೆ ಎಂಬುದಕ್ಕೆ ಇನ್ನೊಂದು ನಿದರ್ಶನವಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ ಬಹುತೇಕ ಯೋಜನೆಗಳ ಅಧಿಸೂಚನೆಗಳು ಹೊರಬಿದ್ದಿವೆ. ಆದರೆ ಅನುದಾನ ಮಾತ್ರ ಬಿಡುಗಡೆ ಆಗುತ್ತಿಲ್ಲ. ಹಂಚಿಕೆಯೂ ಆಗುತ್ತಿಲ್ಲ. ವಿಧಾನಸೌಧದಲ್ಲಿ ಹೊರಬಿದ್ದ ಅಧಿಸೂಚನೆ ಅಲ್ಲೇ ಗಿರಕಿ ಹೊಡೆಯುತ್ತಿದೆ. ಜಿಲ್ಲಾ ಕೇಂದ್ರಗಳನ್ನು ತಲುಪುತ್ತಿಲ್ಲ. ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಕೆಲಸ ಸಂಬಂಧ ಜಿಲ್ಲಾಧಿಕಾರಿಗಳನ್ನು ವಿಚಾರಿಸಿದರೆ ಅನುದಾನ ಬಿಡುಗಡೆ ಆಗಿಲ್ಲ ಎನ್ನುತ್ತಾರೆ. ಆ ಸರಕಾರಿ ಅದೇಶದ ಬಗ್ಗೆಯೇ ಅವರಿಗೆ ಮಾಹಿತಿ ಇರುವುದಿಲ್ಲ. ಇದು ವಿಧಾನಸೌಧದ ಹೊರಗೆ ಶಾಸಕಾಂಗ ಹಾಗೂ ಕಾರ್ಯಾಂಗದ ನಡುವೆ ಜಟಾಪಟಿ ಸೃಷ್ಟಿಸಿದೆ. ಇಷ್ಟೇ ಅಲ್ಲ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಕೂಡ ಸಕಾಲದಲ್ಲಿ ಬಿಡುಗಡೆ ಆಗದೆ ಅಸಮಾಧಾನದ ಸ್ಫೋಟಕ್ಕೂ ಕಾರಣವಾಗಿದೆ.
ಇಲ್ಲಿ ಇನ್ನೂ ಒಂದು ಸಮಸ್ಯೆಯಿದೆ. ಅಧಿಕಾರಿಗಳ ಅಸಡ್ಡೆಯಿಂದಾಗಿ ಜನರ ಎಷ್ಟೋ ಸಮಸ್ಯೆಗಳು ಸರಕಾರದ ಚುಕ್ಕಾಣಿ ಹಿಡಿದವರ ಗಮನಕ್ಕೂ ಬರುತ್ತಿಲ್ಲ. ಯಾವುದಾದರೂ ಸಮಸ್ಯೆ ಗಮನಕ್ಕೆ ಬರಬೇಕೆಂದರೆ ಅಲ್ಲೊಂದು ಬಲಿ ಆಗಬೇಕು ಎನ್ನುವಷ್ಟರ ಮಟ್ಟಿಗೆ ಅಧಿಕಾರಿಗಳು ಜಡ್ಡುಗಟ್ಟಿ ಹೋಗಿದ್ದಾರೆ. ಅನುದಾನರಹಿತ ಶಾಲೆಗಳ ಶಿಕ್ಷಕರು ವೇತನ ಸಿಗುತ್ತಿಲ್ಲ ಎಂಬುದನ್ನು ಸರಕಾರದ ಗಮನಕ್ಕೆ ತರಲು ವಿಷ ಕುಡಿಯಬೇಕಾಗಿದೆ. ಮುಖ್ಯಮಂತ್ರಿಗಳು, ಮಂತ್ರಿಗಳು ಏನೆಂದುಕೊಳ್ಳುತ್ತಾರೋ ಎಂಬ ಕಾರಣಕ್ಕೆ ಸಮಸ್ಯೆಯನ್ನೇ ಮುಚ್ಚಿಡುವ ಜಾಣತನವನ್ನು ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ.
ಇನ್ನೊಂದು ವಿಚಾರ. ಕೆಲವು ಮಂತ್ರಿಗಳು ತಮಗೆ ಅನುಕೂಲ ಆಗಲೆಂದೇ ಭ್ರಷ್ಟ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಲ್ಲಿ ಇರಿಸಿಕೊಂಡಿದ್ದಾರೆ. ಮಂತ್ರಿಗಳ 'ಆದ್ಯತೆ' ಈಡೇರಿಸುವುದಷ್ಟೇ ಇವರ ಕೆಲಸ. ಜನ ಮತ್ತು ಅವರ ಕೆಲಸ ಎರಡೂ ಬೇಕಿಲ್ಲ ಇವರಿಗೆ. ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಗಳು ಬೇರೆ-ಬೇರೆ ಒತ್ತಡ ತಂದು ಪುನರ್‌ಸ್ಧಾಪನೆ ಆಗುತ್ತಿದ್ದಾರೆ. ಅದೂ ಆಯಕಟ್ಟಿನ ಜಾಗಗಳಲ್ಲಿ. ಒಟ್ಟಾರೆ ಜನರ ನಸೀಬು ಸರಿಯಿಲ್ಲ. ಒಂದೆಡೆ ಆಡಳಿತ ನಾಯಕರ 'ಏಕಮೇವಾದ್ವಿತೀಯ' ಎಂಬಂಥ ವರ್ತನೆ, ಇನ್ನೊಂದೆಡೆ ಆ ವರ್ತನೆಯನ್ನೇ ಅನುಕೂಲಸಿಂಧುವಾದಕ್ಕೆ ಬಳಸಿಕೊಂಡಿರುವ ಅಧಿಕಾರಿಗಳ ಉಡಾಫೆ ರಾಜ್ಯದ ಪ್ರಗತಿ ಕುಂಠಿತ ಆಗುತ್ತಿರುವುದರಲ್ಲಿ ಪ್ರತಿಫಲನ ಆಗುತ್ತಿದೆ.
ಲಗೋರಿ : ಮಾದರಿ ಎಂಬುದು ಉತ್ತಮ ಕೆಲಸಗಳಿಗೆ ಮಾತ್ರ ಸೀಮಿತವಾಗಿಲ್ಲ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


