ಅಂಕಣಗಳು

ನಾಲಿಗೇನ ಕಂಟ್ರೋಲ್‌ನಲ್ಲಿ ಇಡ್ತೇನೆ ಅಂತೀರಾ, ಪ್ಲೀಸ್...

Published On :

ಡಿಸೆಂಬರ್‌ಗೆ ಬೈ, ಜನವರಿಗೆ ಜೈ ಎಂದು ಕುಣಿದು ಕುಪ್ಪಳಿಸಲು ಬಾಕಿ ಉಳಿದಿರುವುದು ಇನ್ನು ಎರಡೇ ದಿನ. ನೋವು ಮತ್ತು ನಲಿವನ್ನು ಸಮಪ್ರಮಾಣದಲ್ಲಿ ಕೊಟ್ಟ ವರ್ಷ ಇದು. ಅಥವಾ, ಈ ವರ್ಷದಲ್ಲಿ ನಲಿವಿಗಿಂತ ನೋವಿನ ಪ್ರಮಾಣವೇ ಜಾಸ್ತಿಯಿತ್ತು ಎಂದರೂ ತಪ್ಪಿಲ್ಲವೇನೋ. ಹಳೆಯ ದಿನಗಳನ್ನು ಮರೆತುಬಿಡುವ ಅವಸರ ಬಹಳಷ್ಟು ಮಂದಿಯದು. ಹೆಚ್ಚಿನವರು, ಹೊಸ ವರ್ಷದಲ್ಲಿ ಹೇಗೆ ಬದುಕಬೇಕು, ಯಾವ ಸಾಧನೆ ಮಾಡಬೇಕು, ಎಷ್ಟು ಹಣ ಉಳಿಸಬೇಕು, ಏನೇನು ಖರೀದಿಸಬೇಕು, ಯಾವ ಊರುಗಳಿಗೆ ಪ್ರವಾಸ ಹೋಗಬೇಕು ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೊಸ ವರ್ಷದ ದಿನ ಆ ಅಪರಾತ್ರಿಯಲ್ಲೇ ಸಿಹಿ ತಿಂದು, ಮನೆಯವರಿಗೆಲ್ಲ ಶುಭಾಶಯ ಹೇಳಿ, ಹೊಸ ನಿರ್ಧಾರದೊಂದಿಗೆ ಮೊದಲ ದಿನವನ್ನು ಆರಂಭಿಸಬೇಕು ಎಂಬುದೇ ಎಲ್ಲರ ಲೆಕ್ಕಾಚಾರವಾಗಿದೆ.
ಹೊಸ ವರ್ಷದ ಮೊದಲ ದಿನವಷ್ಟೇ ಅಲ್ಲ; ಬದುಕಿನುದ್ದಕ್ಕೂ ನಮ್ಮ ವರ್ತನೆ ಹೇಗಿದ್ದರೆ ಚೆಂದ ಎಂಬುದಕ್ಕೆ ಉದಾಹರಣೆಯಾಗಿ ಒಂದು ಕಥೆ ಹೇಳುತ್ತೇನೆ ಕೇಳಿ: ಇಬ್ಬರು ಜೀವದ ಗೆಳೆಯರಿದ್ದರು. ಅವರ ಹೆಸರು: ರಮೇಶ-ಸುರೇಶ. ಇಬ್ಬರಿಗೂ ಮದುವೆಯಾಗಿತ್ತು. ಈ ಪೈಕಿ ರಮೇಶನಿಗೆ ವಿಪರೀತ ಸಿಡುಕುತನವಿತ್ತು. ಸಣ್ಣದೊಂದು ಯಡವಟ್ಟಾದರೂ ಸಾಕು; ಆತ ಸಂಯಮ ಕಳೆದುಕೊಳ್ಳುತ್ತಿದ್ದ. ಎಲ್ಲರ ಮೇಲೂ ಕೂಗಾಡುತ್ತಿದ್ದ. ಎದುರಿಗಿದ್ದವರು ತಿರುಗಿ ಉತ್ತರ ಕೊಟ್ಟರೆ, ಅವರಿಗೆ ಹೊಡೆದೇಬಿಡುತ್ತಿದ್ದ. ಒಟ್ಟಾರೆ, ರಮೇಶನಿಗೆ ಸಿಟ್ಟು ಬಂದಿದೆಯೆಂದರೆ, ಎಲ್ಲರಿಗೂ ಕಿರಿಕಿರಿಯಾಗುವಂಥ 'ಸೀನ್‌' ಸೃಷ್ಟಿಯಾಗಿಬಿಡುತ್ತಿತ್ತು. ಒಂದು ಸಮಾಧಾನವೆಂದರೆ ಎಂಥ ಸಿಟ್ಟಿನ ಸಂದರ್ಭದಲ್ಲೂ ಗೆಳೆಯ ಸುರೇಶನನ್ನು ಕಂಡರೆ ಸಾಕು; ರಮೇಶ, 'ಮಿಸ್ಟರ್ ಕೂಲ್‌' ಆಗಿ ಬಿಡುತ್ತಿದ್ದ.
ಒಮ್ಮೆ ಏನಾಯಿತೆಂದರೆ, ರಮೇಶ ಜಾಗಿಂಗ್‌ಗೆ ಹೊರಟಾಗಲೇ ಅವನ ಹೆಂಡತಿಯೂ ದೇವಾಲಯಕ್ಕೆ ಹೋದಳು. ವಿಶೇಷ ಪೂಜೆ ಮತ್ತು ವಿಪರೀತ ರಶ್ ಇದ್ದ ಕಾರಣ, ಅವಳು ಮನೆ ತಲುಪುವುದು ತಡವಾಯಿತು. ದುರಾದೃಷ್ಟಕ್ಕೆ, ಆಕೆ ಮನೆಗೆ ಬೀಗ ಹಾಕಿಕೊಂಡು ಹೋಗಿಬಿಟ್ಟಿದ್ದಳು. ಹತ್ತೇ ನಿಮಿಷದಲ್ಲಿ ವಾಪಸ್ ಬರಬಹುದು ಎಂದುಕೊಂಡಿದ್ದ ಆಕೆಯ ಲೆಕ್ಕಾಚಾರವೆಲ್ಲ ಉಲ್ಟಾ ಆಗಿತ್ತು. ರಮೇಶ, ಬೇರೇನೂ ಮಾಡಲು ತೋಚದೆ ಅರ್ಧಗಂಟೆ ಮನೆಯ ಹೊರಗೆ ನಿಂತಿದ್ದ. ಹೆಂಡತಿಯ ಮುಖ ನೋಡುತ್ತಿದ್ದಂತೆಯೇ ಅವನಿಗೆ ವಿಪರೀತ ಸಿಟ್ಟು ಬಂತು. ಆಕೆಯನ್ನು ಬಾಯಿಗೆ ಬಂದಂತೆ ಬೈದ. ನಂತರ, ಟೇಬಲ್‌ನ ಮೇಲೆ ಜೋಡಿಸಿ ಇಟ್ಟಿದ್ದ ವಸ್ತುಗಳನ್ನೆಲ್ಲಾ ಎತ್ತಿ ಹೊರಗೆ ಎಸೆದ. ಆವೇಶದ ಭರದಲ್ಲಿ ತಿಂಡಿಯನ್ನೂ ತಿನ್ನದೆ ಆಫೀಸಿಗೆ ಬಂದೇಬಿಟ್ಟ.
ಆಫೀಸಿನಲ್ಲಿ, ಗೆಳೆಯನನ್ನು ಕಂಡಾಕ್ಷಣ, ನಡೆದದ್ದೆಲ್ಲವನ್ನೂ ಹೇಳಿಕೊಳ್ಳಬೇಕು ಅನ್ನಿಸಿತು. 'ಕಾಫಿಗೆ ಹೋಗೋಣ್ವಾ?' ಎಂದ. ಹೋಟೆಲಿನ ಒಳಗೆ ಕಾಲಿಡುತ್ತಿದ್ದಂತೆಯೇ ಪರ್ಸ್ ತಂದಿಲ್ಲವೆಂದೂ ಹಣ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಪರ್ಸ್‌ನಲ್ಲಿಯೇ ಇವೆಯೆಂದೂ ನೆನಪಾಯ್ತು. ಈತ ಸಂಕೋಚದಿಂದ 'ಕಾಫಿ ಸಾಕು' ಎಂದ. ಆದರೆ ಸುರೇಶ ಬಿಡಲಿಲ್ಲ. ನಾಲ್ಕೈದು ಬಗೆಯ ತಿಂಡಿಗೆ ಆರ್ಡರ್ ಮಾಡಿದ. ವಿಪರೀತ ಹಸಿವಾಗಿತ್ತಲ್ಲ; ಆ ಕಾರಣದಿಂದ ರಮೇಶ ಮರುಮಾತಿಲ್ಲದೆ ಎಲ್ಲವನ್ನೂ ತಿಂದು ಮುಗಿಸಿದ. ಈ ಮಧ್ಯೆಯೇ ಮನೆಯಲ್ಲಿ ಜಗಳ ಮಾಡಿಕೊಂಡು ಬಂದದ್ದನ್ನೂ ತಿಳಿಸಿದ. ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಸುರೇಶ, ಬೇರರ್ ನೀಡಿದ ಬಿಲ್ ಎತ್ತಿಕೊಂಡು -'ನೀನು ನಾಲಿಗೇನ ಸ್ವಲ್ಪ ಕಂಟ್ರೋಲ್‌ನಲ್ಲಿ ಇಟ್ಕೋಬೇಕು ಕಣೋ. ಹೀಗಾದ್ರೆ ಹೇಗೆ?' ಅಂದ. ಜಗಳಗಂಟನಾಗಬೇಡ ಎಂದು ತಿಳಿಸುವ ಉದ್ದೇಶದಿಂದಷ್ಟೇ ಸುರೇಶ ಹೀಗಂದಿದ್ದ. ಆದರೆ, ಹೆಚ್ಚು ತಿಂಡಿ ತಿಂದಿದ್ದಕ್ಕೆ ಹಂಗಿಸಲೆಂದೇ ಸುರೇಶ ಹೀಗೆ ಮಾತಾಡಿದ್ದಾನೆ ಎಂದು ರಮೇಶ ಅರ್ಥಮಾಡಿಕೊಂಡ. ಮರುಕ್ಷಣವೇ ಅವನಿಗೆ ವಿಪರೀತ ಸಿಟ್ಟು ಬಂತು. ಎದುರಿಗಿರುವವನು ಜೀವದ ಗೆಳೆಯ ಎಂಬುದನ್ನು, ತಾವು  ನಿಂತಿರುವುದು ಹೋಟೆಲಿನಲ್ಲಿ ಎಂಬುದನ್ನೂ ಮೆರತು, ಏನಂದ್ಯೋ ರ್ಯಾಸ್ಕಲ್ ಎನ್ನುತ್ತಾ ಜಗಳ ಆರಂಭಿಸಿಯೇ ಬಿಟ್ಟ. ಇಂಥದೊಂದು ಸೀನ್ ಎದುರಾಗಬಹುದೆಂದು ಸುರೇಶ ಊಹಿಸಿರಲಿಲ್ಲ. ತಾನಾಗಿಯೇ ಹೋಟೆಲಿಗೆ ಕರೆದು, ಹಲವರ ಮುಂದೆ ರ್ಯಾಸ್ಕಲ್ ಎಂದು ಹಂಗಿಸಿದ ಗೆಳೆಯನ ಮೇಲೆ ಅವನಿಗೂ ಸಿಟ್ಟು ಬಂತು. ನಿಂಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತೇನೋ ಎನ್ನುತ್ತಾ ಆತನೂ ತಾಳ್ಮೆ ಕಳೆದುಕೊಂಡ. ಆವೇಶದ ಭರದಲ್ಲಿ ಇಬ್ಬರೂ ಬೈಯ್ದುಕೊಂಡರು. ಕೊನೆಗೆ, ತಾಳ್ಮೆ ಕಳೆದುಕೊಂಡ ಸುರೇಶ, ಎರಡೇಟು ಹಾಕಿದ್ದಲ್ಲದೆ, ತೆಪ್ಪಗೆ ಕೂತ್ಕೋ ಎನ್ನುತ್ತಾ ಬಲವಾಗಿ ನೂಕಿದಾಗ, ರಮೇಶ ಜೋಲಿ ತಪ್ಪಿ ಬಿದ್ದು ಬಿಟ್ಟ. ಆ ರಭಸಕ್ಕೆ ತುಟಿ ಒಡೆದು ಹೋಗಿ ಅವನು ಆಸ್ಪತ್ರೆ ಸೇರುವಂತಾಯಿತು.
ಈ ಕಡೆ, ತುಂಬ ಬೇಸರದಿಂದಲೇ ಆಫೀಸಿಗೆ ಬಂದ ಸುರೇಶನಿಗೂ, ನಡೆದ ಘಟನೆಯಿಂದ ವಿಪರೀತ ಸಂಕಟವಾಯಿತು. ರಮೇಶನದ್ದು ದುಡುಕು ಬುದ್ಧಿ ಎಂದು ಗೊತ್ತಿದ್ದರೂ ನಾನು ತಾಳ್ಮೆ ಕಳೆದುಕೊಂಡೆ. ಅವನಂತೆಯೇ ನಾನೂ ವರ್ತಿಸಬಾರದಿತ್ತು ಎಂದು ಸಾವಿರ ಬಾರಿ ಅಂದುಕೊಂಡ. ಆದರೆ ಕಾಲ ಮಿಂಚಿ ಹೋಗಿತ್ತು. ಆಸ್ಪತ್ರೆಯಲ್ಲಿ ಗೆಳೆಯ ಹೇಗಿದ್ದಾನೋ ಎಂಬ ಯೋಚನೆ ಬಂದ ಮೇಲಂತೂ ಸಂಯಮದಿಂದ ಕೆಲಸ ಮಾಡಲು ಸಾಧ್ಯವೇ ಇಲ್ಲ ಅನ್ನಿಸಿಬಿಟ್ಟಿತು. ತಕ್ಷಣವೇ ಅರ್ಧ ದಿನ ರಜೆ ಹಾಕಿ ಆಸ್ಪತ್ರೆ ಕಡೆ ನಡೆದ. ಅಲ್ಲಿ ಹೋಗಿ ಗೆಳೆಯನ ಬಳಿ ಕ್ಷಮೆ ಕೇಳಬೇಕೆಂಬುದು ಸುರೇಶನ ಉದ್ದೇಶವಾಗಿತ್ತು.  ಆದರೆ ಇಂಥ ಮನಸ್ಥಿತಿಯಲ್ಲಿ ರಮೇಶ ಇರಲಿಲ್ಲ. ಅವನ ಮನಸ್ಸು ಕಲಕಿಹೋಗಿತ್ತು. ಹೋಟೆಲಿನಲ್ಲಿ ಎಲ್ಲರ ಮುಂದೆಯೇ ಕೈ ಮಾಡಿದ ಗೆಳೆಯನನ್ನು ಹೇಗಾದರೂ ಹಣಿಯಲು ಮನಸ್ಸು ಹಾತೊರೆಯುತ್ತಿತ್ತು. ಆತ ಇಂಥ ಚಡಪಡಿಕೆಯಲ್ಲಿದ್ದಾಗಲೇ ಅಷ್ಟು ದೂರದಲ್ಲಿ ಸುರೇಶ ಬರುತ್ತಿರುವುದು ಕಾಣಿಸಿತು. ಇವನು ತಡ ಮಾಡಲಿಲ್ಲ: ತನಗೆ ಗೊತ್ತಿದ್ದ ಎಲ್ಲ ಬಗೆಯ ಅಶ್ಲೀಲ ಬೈಗುಳಗಳನ್ನೂ ನೆನಪಿಗೆ ತಂದುಕೊಂಡ. ಅವನ್ನೆಲ್ಲಾ ಗೆಳೆಯನ ಮೇಲೆ ಪ್ರಯೋಗಿಸಿದ. ಪರಿಣಾಮ, ರಮೇಶ -ಸುರೇಶನ ಮಧ್ಯೆ ಇದ್ದ ಚೆಂದದ ಗೆಳೆತನ ಆ ಕ್ಷಣದಲ್ಲೇ ಸತ್ತು ಹೋಯ್ತು.

ಈ ಕಥೆಯನ್ನು ಯಾಕೆ ಹೇಳಿದೆ ಗೊತ್ತೆ? ಹೊಸ ವರ್ಷದಲ್ಲಿ ಹಣ ಸಂಪಾದಿಸಬೇಕು, ನೌಕರಿ ಬದಲಿಸಬೇಕು, ಮದುವೆಯಾಗಬೇಕು, ತೆಳ್ಳಗಾಗಬೇಕು, ಬೈಕ್/ಸ್ಕೂಟಿ ಖರೀದಿಸಬೇಕು, ಸೈಟ್ ಮಾಡಬೇಕು ಎಂದೆಲ್ಲಾ ನಿರ್ಧರಿಸುವ ಜನ ಇದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ, ವರ್ಷದಲ್ಲಿ 'ನಾಲಿಗೆಯನ್ನು ನಮ್ಮ ನಿಯಂತ್ರಣದಲ್ಲಿ ಇಟ್ಕೋತೇವೆ' ಎಂಬ ನಿರ್ಣಯ ನಮ್ಮದಾಗಬೇಕು. ನಾಲಿಗೆಯೊಂದು ನಮ್ಮ ಕಂಟ್ರೋಲ್‌ನಲ್ಲಿದ್ದರೆ ಎಷ್ಟೋ ಅನಾಹುತಗಳಾಗುವುದು ತಪ್ಪುತ್ತದೆ. ಏನಂತೀರಿ?


-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.