Hmmm... ಪಾಂಚ್ ಸಾಂತಾ ಕ್ಲಾಸ್

- ಏನ್ ತಾತಾ, ಕ್ರಿಸ್‌ಮಸ್ ಮುಗಿದ್ ಕೂಡಲೇ ಹೊರಟ್‌ಬಿಟ್ಯಾ?
ಹೌದು ಮತ್ತೆ. ನಾನು, ಹಬ್ಬಕ್ಕೆ ಮುಂಚೆ ಬಂದು, ಆಮೇಲೆ ಮೂರು ದಿನಾ ಆದ್ರೂ ಹೋಗದೇ ಇರೋ ನೆಂಟನೂ ಅಲ್ಲ, ಸರ್ದಾರ್ಜಿ ಜೋಕಲ್ಲಿ ಬರೋ ಸಂತಾನೂ ಅಲ್ಲ. ನಾನು ಕ್ರಿಸ್ತನ ಸಂತಾನ.
- ಅದ್ಸರಿ, ಒಂದೇ ದಿನ ಅದೆಂಗೆ ಅಷ್ಟೊಂದ್ ಜನಕ್ಕೆ ಗಿಫ್ಟ್ ಡೆಲಿವರಿ ಮಾಡ್ತೀಯ ನೀನು?
ಸಾಂತಾ ಕ್ಲಾಸ್‌ನ ನೀನು ಹಿಂಗೆಲ್ಲಾ 'ಕ್ರಾಸ್' ಕ್ವೆಶ್ಚನ್ ಮಾಡಂಗಿಲ್ಲ. 'ಕ್ಲಾಸ್' ತಗೋತೀನಿ ಅಷ್ಟೆ.
- ಬೇಡ, ಬೇಡ.. ಆದ್ರೆ, 'ತಾ,ತಾ' ಅಂತ ಅನ್ನಿಸ್ಕೊಂಡ್ ಮೇಲೆ 'ತಗೊಳ್ಳೋದ್' ಬಿಟ್ಟು ಎಲ್ಲರಿಗೂ ಗಿಫ್ಟ್ ಕೊಡ್ತೀಯಲ್ಲ? ನಿಂಗೆ ಯಾರು ಗಿಫ್ಟ್ ಕೊಡಲ್ವಾ?
ನಾನು ತಗೊಳ್ಳೋದೆಲ್ಲಾ ಇಲ್ಲ, ಕೊಡ್ತಾ ಇರ್ತೀನಿ, ನೀವು ಸುಮ್ನೆ ತಗೊತಾ ಇರ್‌ಬೇಕು ಅಷ್ಟೆ.
- ಸರಿ, ಈ ಸಲದ ಕ್ರಿಸ್‌ಮಸ್ ಜರ್ನಿ ಹೇಗಿತ್ತು?
ಚೆನ್ನಾಗಿತ್ತು. ಇತ್ತೀಚೆಗೆ ಕ್ರಿಶ್ ಬಂದು ಹೋಗಿದ್ನಲ್ಲ, ಹಂಗಾಗಿ ನಿಮ್‌ಗೆಲ್ಲಾ ಈ ಸಲ ಕ್ರಿಶ್‌ಮಸ್ ಮತ್ತು ಕ್ರಿಸ್‌ಮಸ್‌ನ ಡಬಲ್ ಮಜಾ ಅಲ್ವಾ..?
- ಹೌದೌದು. ಸರಿ, ಒಂದ್ ಕೊನೇ ಪ್ರಶ್ನೆ, ಕಷ್ಟದಲ್ಲಿದ್ದಾಗ ದೇವರನ್ನು ಕರೀಬೇಕು ಅಂದ್ರೆ ಹೆಂಗೆ ಕರೀಬೇಕು, ಸಾಂತಾ?
ಹೆಂಗ್ ಬೇಕಾದ್ರೂ ಕರೀಬಹುದು, ಕೃಷ್ಣಾ ನೀ ಬೇಗನೆ ಬಾರೋ ಅಂದ್ರೂ ಒಂದೇ, ಕ್ರಿಸ್ತಾ ನೀ ಬೇಗನೆ ಬಾರೋ ಅಂದ್ರೂ ಒಂದೇ.
(ಸಾಂತಾ ಕ್ಲಾಸ್‌ನಿಂದ ಗಿಫ್ಟ್ ಪಡೆದ ಮಗು ನಡೆಸಿದ ಮಾತುಕತೆ)
ಒಮ್ಮೆ ಭೇಟಿ ಕೊಡಿ
ಪ್ರತಿದಿನ ನಾವು ಸೇವಿಸುವ ಊಟದ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ಡಯೆಟ್ ತಜ್ಞರು ಸಲಹೆ ನೀಡುತ್ತಾರೆ. ಆದರೆ ನಿದ್ದೆಯ ಬಗ್ಗೆಯೂ ಮಾಹಿತಿ ನೀಡುವ ಸ್ಲೀಪಿಂಗ್ ಡಯೆಟ್ ಇದು. ನಮ್ಮಲ್ಲಿ, ರಾತ್ರಿ ಎಲ್ಲಾ ನಿದ್ದೇನೇ ಬರ್ಲಿಲ್ಲ ಎನ್ನುವವರೂ ಇದ್ದಾರೆ. ಹಗಲೊತ್ತಲ್ಲೇ ಕನಸು ಬಿತ್ತು ಎನ್ನುವವರೂ ಇದ್ದಾರೆ. ಅಂಥವರಿಗಾಗಿ, ಸಮತೋಲಿತ ನಿದ್ದೆಯ ಬಗೆಗಿನ ಕಿರುಮಾಹಿತಿ ಈ ವೆಬ್‌ಸೈಟ್‌ಗಳಲ್ಲಿ.
bit.ly/1cYmchd
bit.ly/JzhE9j
bit.ly/1dKuif2
bit.ly/1cYmgha
1.usa.gov/19spn3h
ಹರಿ-ಕಥೆ
ಫಸ್ಟ್‌ಕ್ಲಾಸ್ ಟ್ರೇನ್‌ನಲ್ಲಿ ಖೇಮು, ಸೋಮು ಬೆಂಗಳೂರಿಂದ ಮುಂಬೈಗೆ ಹೊರಟಿದ್ದರು. ಅವರದ್ದೇ ಬೋಗಿಯಲ್ಲಿ ಒಂದು ಬ್ಯೂಟಿಪುಲ್ ಹುಡುಗಿ ಕೂತಿದ್ದಳು. ಆದರೆ ಅವಳು ಮೈತುಂಬಾ ಬಟ್ಟೆ ತೊಟ್ಟು ಡೀಸೆಂಟ್ ಆಗಿ ಕುಳಿತಿದ್ದು ಈ ರಸಿಕ ಮಹಾಶಯರಿಗೆ ನಿರಾಸೆ ತಂದಿತ್ತು. ಇವರಿಬ್ಬರೂ ತನ್ನನ್ನು ಆಸೆಕಂಗಳಿಂದ ನೋಡುತ್ತಿದ್ದುದನ್ನು ಆಕೆ ಕಣ್ಣತುದಿಯಲ್ಲೇ ಗಮನಿಸುತ್ತಿದ್ದಳು. ಬೋಗಿಯಲ್ಲಿ ಈ ಮೂವರನ್ನು ಬಿಟ್ಟು ಯಾರೂ ಇರಲಿಲ್ಲವಾದ್ದರಿಂದ ಹುಡುಗಿ ಇವರಿಬ್ಬರ ವೀಕ್‌ನೆಸ್‌ನ ಕ್ಯಾಶ್ ಮಾಡ್ಕೊಬೇಕು ಅಂದ್ಕೊಂಡು ಇಬ್ಬರನ್ನೂ ಮಾತನಾಡಿಸಿದಳು. ನೋಡಿ, ನೀವಿಬ್ಬರೂ ನನಗೆ ತಲಾ ಐನೂರು ರುಪಾಯಿ ಕೊಟ್ಟರೆ ನಾನು ನನ್ನ ಶೂ ಬಿಚ್ಚಿ ನಿಮಗೆ ನನ್ನ ಸುಂದರವಾದ ಪಾದಗಳನ್ನು ತೋರಿಸ್ತೀನಿ ಅಂದ್ಳು. ಸರಿ ಈ ಇಬ್ಬರಿಗೂ ಬರೀ ಆಕೆಯ ಮುಖ ನೋಡಿ ಸಾಕಾಗಿತ್ತು. ಸರಿ ಇಬ್ಬರೂ 500 ರು ಕೊಟ್ಟು ಪಾದ ನೋಡಿ ಪಾವನರಾದರು. ನಂತರ ಹುಡುಗಿ ವರಸೆ ತೆಗೆದಳು. ಇಬ್ಬರೂ ಒಂದೊಂದು ಸಾವಿರ ಕೊಟ್ಟರೆ ನನ್ನ ಕಾಲನ್ನು ಮೊಣಕಾಲಿನವರೆಗೂ ತೋರಿಸುತ್ತೇನೆ ಅಂದ್ಳು. ಸರಿ ಅದೂ ಆಯ್ತು. ಹುಡುಗಿ ಇನ್ನೂ ಮುಂದುವರೀತಾಳಾ ಅಂತ ಇಬ್ರೂ ಕಾದ್ರು. ಹುಡುಗಿ ಮುಂದುವರಿದಳು. ಇಬ್ರೂ ಐದೈದು ಸಾವಿರ ಕೊಟ್ರೆ ನಾನು ಹಾರ್ಟ್ ಆಪರೇಶನ್ ಮಾಡಿಸಿಕೊಂಡ ಜಾಗ ತೋರಿಸ್ತೀನಿ ಅಂದ್ಳು. ಇಬ್ಬರಿಗೂ ಒಂದ್ ಕ್ಷಣ ಎದೆ ಬಡಿತ ನಿಂತೋಯ್ತು. ಸಾವರಿಸಿಕೊಂಡು ಐದೈದು ಸಾವಿರ ತೆಗೆದು ಕೊಟ್ರು. ಒಂದೆರಡು ನಿಮಿಷ ಆದಮೇಲೆ ಹುಡುಗಿ ಮೆಲ್ಲನೆ ತನ್ನ ಪಕ್ಕದ ಕಿಟಕಿ ತೆರೆದು ತೋರಿಸಿ ಹೇಳಿದಳು 'ಅಲ್ನೋಡಿ, ಮೈನಾವತಿ ಹಾಸ್ಪಿಟಲ್. ಅದೇ ನಾನು ಹಾರ್ಟ್ ಆಪರೇಶನ್ ಮಾಡಿಸಿಕೊಂಡ ಜಾಗ'.
ಸ್ಕ್ಯಾಂಡಲ್‌ವುಡ್
ಚಿತ್ರರಂಗದಲ್ಲಿ ಕಂಠದಾನ ಅಂದಕೂಡಲೇ ಅದು ಸಿನಿಮಾದ ಹೀರೋಯಿನ್‌ಗೆ ಎಂದು ಸುಲಭವಾಗಿ ಹೇಳಬಹುದಾದ ಕಾಲ ಒಂದಿತ್ತು. ರಾಮಾಚಾರಿವರೆಗಿನ ರವಿಚಂದ್ರನ್ ಅವರಿಗೆ ಶ್ರೀನಿವಾಸ್‌ಪ್ರಭು ಕಂಠದಾನ ಮಾಡಿದ್ದು ಬಿಟ್ಟರೆ ನಾಯಕರಿಗೆ ಕಂಠ ಕೊಟ್ಟವರು ಕೊಂಚ ಕಡಿಮೆಯೇ. ಆದರೆ ಇತ್ತೀಚೆಗೆ ಪರಭಾಷೆಯ ವಿಲನ್‌ಗಳಿಗೂ ಕಂಠ ಕೊಡುವ ಕನ್ನಡದ ಕಂದಮ್ಮಗಳಿಗೆ ಈಗ ಕಾಟಾಚಾರಕ್ಕೆ ಅಭಿನಯಿಸೋ ಕೆಲವು ಹೊಸ ನಾಯಕರಿಗೂ ಕಂಠ ಕೊಡಬೇಕಾದ ಪರಿಸ್ಥಿತಿ. ಇದೇ ಸಂಪ್ರದಾಯದಲ್ಲಿ ಮೊನ್ನೆ ಬಿಡುಗಡೆಯಾದ ಛತ್ರಪತಿ ಚಿತ್ರದ ನಾಯಕನಿಗೂ ಕಂಠ ಕೊಟ್ಟಿದ್ದಾರೆ ಕನ್ನಡದ ನವೀನ್‌ಕೃಷ್ಣ. ನವೀನ್‌ಗೆ ಇದೇನು ಹೊಸದಲ್ಲ. ಈ ಹಿಂದೆ ದಂಡಂದಶಗುಣಂ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಕಂಠದಾನ ಮಾಡಿದ್ದೂ ಸೇರಿ ಅನೇಕ ನಟರಿಗೆ ತಮ್ಮ ಸ್ವಚ್ಚ ಕನ್ನಡದ ಕಾಣಿಕೆ ಸಲ್ಲಿಸಿದ್ದಾರೆ ನವೀನ್. ಆದರೆ ಮುಖದ ಮೇಲೆ ಎಕ್ಸ್‌ಪ್ರೆಶನ್ನೇ ಇಲ್ಲದ ನಟರಿಗೆ ಕಂಠದಾನ ಮಾಡುವಾಗ ತಮ್ಮ ಜೋಶ್ ಅನ್ನು ಕಡಿಮೆ ಮಾಡಿಕೊಂಡು ಅವರ ಮಿನಿಮಮ್ ಎಕ್ಸ್‌ಪ್ರೆಶನ್‌ಗೆ ಮ್ಯಾಚ್ ಮಾಡಿಕೊಳ್ಳಲು ಹೆಣಗಬೇಕಾಗುತ್ತದೆ ಎಂಬುದು ಬಹುಶಃ ನವೀನ್ ಈ ಚಿತ್ರದಿಂದ ಕಂಡುಕೊಂಡಿರುವ ಕಂಠ'ಪಾಠ' ಎಂದು ಸಿನಿಮಾ ನೋಡಿದವರು ಮಾತನಾಡಿಕೊಳ್ಳುತ್ತಿರುವುದು ಛತ್ರಪತಿ ವಿಶೇಷ.
ಡಬ್ಕುಡಬಲ್ ತುದಾಂಡಲ್...
ಲವ್‌ನಲ್ಲಿ ಹುಡುಗ ಕೈ ಕೊಟ್ರೆ - ಬಗಣಿ ಗೂಟ
ಹುಡುಗಿ ಕೈ ಕೊಟ್ರೆ - ಭಗಿನಿ ಗೂಟ
ಹಳೆ ಮಾತು: ಸಮುದ್ರ ದಡದಲ್ಲಿ ಕಪ್ಪೆಚಿಪ್ಪುಗಳು ಸಿಗುತ್ತವೆ. ಮುತ್ತುಗಳು ಬೇಕು ಅಂದ್ರೆ ಸಮುದ್ರದ ತಳಕ್ಕೆ ಹೋಗಬೇಕು.
ಹೊಸ ಮಾತು: ವಾಲ್, ಟೈಮ್‌ಲೈನ್‌ಗಳಲ್ಲಿ ಎಲ್ಲರೂ ಸಾಚಾಗಳೇ ಆಗಿರ್ತಾರೆ, ನಿಜವಾದ ಮುಖ ಗೊತ್ತಾಗಬೇಕು ಅಂದ್ರೆ ಇನ್‌ಬಾಕ್ಸ್‌ಗೆ ಹೋಗಬೇಕು.
ಅರವಿಂದ ಕೇಜ್ರಿವಾಲ್ ಯಾರ ಮೇಲೆ ಆಣೆ ಮಾಡಿ ಹೇಗೆ ಪ್ರಮಾಣ ವಚನ ಸ್ವೀಕರಿಸಬಹುದಿತ್ತು?
'ಆಪ್' ಕಿ ಕಸಮ್
ಚಳಿಗಾಲದ ಸಮಸ್ಯೆ
ಬೈಕಿನ ಹಿಂದೆ ಕೂತ ಹುಡುಗಿ ಬಾಯ್‌ಫ್ರೆಂಡ್‌ನ ಅಪ್ಪಿಕೊಂಡಿರುವುದಕ್ಕೆ ಆ ಹುಡುಗನ ಮೇಲಿರೋ ಸಿಕ್ಕಾಪಟ್ಟೆ ಪ್ರೀತಿಯೇ ಕಾರಣ ಅಂತ ಹೇಳೋಕಾಗಲ್ಲ.
ನಮ್ ಜನ ಸರಿ ಇಲ್ಲಪ್ಪ,
ಸಿಟ್ಟು ಬಂದಾಗ ರಾಜಕಾರಣಿಗಳನ್ನು ದೇಶದಿಂದ ಹೊರಗೆ ಹಾಕಬೇಕು ಅಂತಾರೆ
ಈಗ ಅವರಾಗಿಯೇ ದೇಶದಿಂದ ಹೊರಗೆ ಹೋದರೆ ಸಿಟ್ಟು ಮಾಡಿಕೋತಾರೆ
ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿಕ್ಕವರನ್ನೆಲ್ಲ ಹೊರಗೆ ತಳ್ಳುತ್ತ ಆಹ್ವಾನಿತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರನ್ನು ನೋಡಿದವರ ಕಾಮೆಂಟ್.
ಆಹಾ, ಫಿಲ್ಮ್‌ನಲ್ಲಾದ್ರೆ ಎಲ್ಲಾ ಮುಗಿದ್‌ಮೇಲೆ ಕೊನೆಗ್ ಬರ್ತೀರ, ಫಿಲ್ಮ್ ಫೆಸ್ಟಿವಲ್‌ಗೆ ಮಾತ್ರ ಎಲ್ಲರಿಗಿಂತ ಮೊದಲೇ ಬಂದ್‌ಬಿಟ್ಟಿದೀರಾ.
ಫಿಲ್ಮ್ ಫೆಸ್ಟಿವಲ್‌ನ ಉದ್ಘಾಟನಾ ಸಮಾರಂಭದ ವಿಶೇಷ:
ಒಳಗೆ ಕಮಲ್‌ಹಾಸನ್ ಬಂದಾಗ ಅವರಿಗೆ 'ಮುಂದೆ ಬನ್ನಿ' ಸ್ವಾಗತ ಹೊರಗೆ ಪೊಲೀಸರಿಂದ ಪತ್ರಕರ್ತರಿಗೆ 'ಹಿಂದೆ ತಳ್ಳಿ' ಕಾರ್ಯಕ್ರಮ.
-ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


