ಅನಿವಾರ್ಯತೆಗೆ ಅನ್ವೇಷಣೆ ಬೇಕಿಲ್ಲ, ಮಳೆನೀರೇ ಸಾಕಲ್ಲ!
ಸಾಮಾನ್ಯವಾಗಿ ಎಲ್ಲರೂ ತುಳಿಯೋ ಹಾದಿ ತುಂಬಾ ಸುಲಭವಾಗಿರುತ್ತದೆ. ಆ ಹಾದಿ...

ಸಾಮಾನ್ಯವಾಗಿ ಎಲ್ಲರೂ ತುಳಿಯೋ ಹಾದಿ ತುಂಬಾ ಸುಲಭವಾಗಿರುತ್ತದೆ. ಆ ಹಾದಿಯಲ್ಲಿ ಯಶಸ್ವಿಯಾಗಿ ಸಾಗಿಯೂ ಬಿಡುತ್ತೇವೆ. ಏಕೆಂದರೆ ಅದು ಆಗಲೇ ಸವೆದ ಹಾದಿ. ಹೀಗಾಗಿ ಅದು ನಿಜಕ್ಕೂ ಹೆಚ್ಚುಗಾರಿಕೆಯೂ ಆಗಿರುವುದಿಲ್ಲ, ಸಾಧನೆಯ ತೃಪ್ತಿಯನ್ನೂ ನೀಡುವುದಿಲ್ಲ. ಆದರೆ, ಹೆಜ್ಜೆಹೆಜ್ಜೆಗೂ ಮುಳ್ಳು ಚುಚ್ಚಿದರೂ ಸೋಲೇ ಎದುರಾದರೂ, ಕಡಿಮೆ ಸವೆದ ಹಾದಿಯಲ್ಲಿ ನಡೆವ ದಾರಿಯ ಸೊಗಸೇ ಬೇರೆ. ಅಲ್ಲಿ ಸಿಗುವ ಗೆಲುವಿನ ಬೆಲೆಯೇ ಬೇರೆ...
ಆ ಯುವ ಪರ್ತಕರ್ತ ಹೇಳುತ್ತ ಹೋಗುತ್ತಾರೆ. ಆತ ಜೈದೀಪ್ ಹರ್ಡೀಕರ್. ಮೂಲತಃ ಮಹಾರಾಷ್ಟ್ರದ ಆತ ಪರಿಸರ ಕುರಿತ ಅತ್ಯುತ್ತಮ ವರದಿಗಾರಿಕೆಗಾಗಿ 2013ರ ಸಾಲಿನ ಪ್ರತಿಷ್ಠಿತ ಪ್ರೇಮ್ ಭಾಟಿಯಾ ಪ್ರಶಸ್ತಿ ಪಡೆದಿದ್ದಾರೆ. ತನ್ನ ಈ ಸಾಧನೆಯ ಹಾದಿಯಲ್ಲಿ ಕಂಡ ಸೋಲು, ನಿರಾಶೆ, ಹಲವು ಆಸಕ್ತಿಕರ ಅನುಭವ ಹಂಚಿಕೊಳ್ಳುವುದು ಆತ ಹೀಗೆಯೇ.
ಹೌದು, ಪರಿಸರದಂಥ ವಿಷಯದ ಮೇಲೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದು ಯಾವತ್ತಿಗೂ ಜನಪ್ರಿಯವಾಗುವುದೇ ಇಲ್ಲ. ಅಂಥ ವಿಷಯಗಳನ್ನು ಓದುಗರಿಗೆ ಮುಟ್ಟಿಸುವುದು, ಅವರನ್ನು ಮೆಚ್ಚಿಸುವುದು ಹರಸಾಹಸವೇ ಸರಿ. ಜೈದೀಪ್ ಹೇಳುವುದು ನೂರಕ್ಕೆ ನೂರು ಸತ್ಯ. ಆತ ಹೇಳಿಕೊಳ್ಳುವಂತೆ ಬರವಣಿಗೆಯಾಗಲೀ, ವರದಿಗಾರಿಕೆಯಾಗಲೀ ಪರಿಸರಾಸಕ್ತ ಪತ್ರಕರ್ತರ ಮೊದಲ ಆಯ್ಕೆ ಆಗಿರುವುದೇ ಇಲ್ಲ. ಒಂದೊಮ್ಮೆ ಅದೇ ಆದ್ಯತೆಯಾಗಿದ್ದರೆ ಜನಪ್ರಿಯ ಬರವಣಿಗೆ ಕಷ್ಟವೇನಲ್ಲ. ಇಂದಿನ ವಿದ್ಯುನ್ಮಾನ ಯುಗದಲ್ಲಿ, ಸಮೂಹ ಮಾಧ್ಯಮಗಳ ಅಬ್ಬರದಲ್ಲಿ ವಿಷಯಗಳಿಗೂ ಬರವಿಲ್ಲ. ಆದರೆ ಅದರಿಂದ ಹೊರತಾಗಿ ಸಾಮಾಜಿಕ ಹೊಣೆಗಾರಿಕೆ ಜವಾಬ್ದಾರಿಯುತ ಪತ್ರಕರ್ತನನ್ನು ಆವರಿಸಿಕೊಂಡಿರುತ್ತದೆ. ಬಹುತೇಕ ಟಿಪಿಕಲ್ ಪರ್ತಕರ್ತರಂತೆ ಕೀರ್ತಿಯ ಬೆನ್ನು ಹತ್ತಿ ಬರೆಯುವುದು, ವರದಿ, ವಿಶೇಷ ವರದಿಗಳಲ್ಲಿ ಕಳೆದು ಹೋಗಿದ್ದರೆ ಜೈದೀಪ್ರಂಥವರು ತಾವೇ ಹೀಗೆ ಸುದ್ದಿಯಾಗುತ್ತಿರಲಿಲ್ಲ. ಅವರಿಗೂ ಒಂದಿಲ್ಲೊಂದು ಕನಸು ಇದ್ದೇ ಇರುತ್ತದೆ. ಆದರೆ, ಪತ್ರಿಕೋದ್ಯಮದ ಗಿರಣಿಗೆ ಬೀಳುವಂತಾಗಿದ್ದು ಹಾಗೂ ಅಲ್ಲೇ ತಮ್ಮ ನಿಜ ಹೊಳಹನ್ನು ಕಂಡುಕೊಳ್ಳುವುದು ಸ್ಪರ್ಧಾಯುಗದ ಸವಾಲು. ಅಂಥ ಅರಿವಾಗಿದ್ದು ಸ್ವತಃ ತನಗೂ ಅಚ್ಚರಿ ಎನ್ನುತ್ತಾನೆ ಜೈದೀಪ್.
ನಿತ್ಯದ ಸಂಗತಿಗಳಿಂದ ಹೊರತಾಗಿ ರೈತರ, ನಿರಾಶ್ರಿತರ, ವಿಧವೆಯರ, ಶೋಷಿತ ಕಾರ್ಮಿಕರ ಪರ ದನಿಯಾಗುವ ನಿಟ್ಟಿನಲ್ಲಿ ಇಂದಿನ ಪತ್ರಿಕೋದ್ಯಮದ ವರದಿಗಾರರು ಉತ್ಸಾಹ ತೋರಬೇಕೆಂಬುದು ಜೈದೀಪ್ ಆಶಯ. ಅದು ನಿಜ. ಏಕೆಂದರೆ, ಆ ವರದಿಗಾರಿಕೆಯಲ್ಲಿ ಸಿಗುವ ಆತ್ಮತೃಪ್ತಿ ಎಲ್ಲ ಪ್ರಶಸ್ತಿಗೂ ಮೀರಿದ್ದು. ಅಭಿನಂದನೆಗಳೊಂದಿಗೆ ಜೈದೀಪ್ಗೊಂದು ಜೈ ಅನ್ನೋಣ.
ಯುವ ಪತ್ರಕರ್ತನ ಇಂಥ ಸಾಧನೆಯ ಬೆನ್ನಲ್ಲೇ ಇನ್ನೊಂದು ಕುತೂಹಲಕಾರಿ ಸಂಗತಿಯೊಂದು ಸುದ್ದಿ ಮಾಡಿದೆ ಈ ವಾರ. ನಮ್ಮ ಕಣ್ಮುಂದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಏನೂ ಪ್ರಯೋಜನವಿಲ್ಲ. ಮಳೆ ನೀರು ಹಿಡಿದು ಕುಡಿಯಿರೆಂದರೆ ಇಂದಿಗೂ ಬಹುತೇಕರಿಗೆ ಏನೋ ಆಲಸ್ಯ. ಹೀಗಾಗಿ ಮಳೆ ನೀರು ಮಣ್ಣುಪಾಲಾಗುವುದನ್ನು ತಡೆಯುವುದಾದರೂ ಹೇಗೆ? ಆಕಾಶಕ್ಕೆ ಬಾಯಿಕೊಟ್ಟು ಬೀಳುವ ನೀರನ್ನು ಕುಡಿಯಲಾಗುತ್ತದೆಯೇ?
ಯಾಕಾಗದು ಎನ್ನುತ್ತಾರೆ ಇಂಗ್ಲೆಂಡ್ನ ಸಿಐಐಡಿಯ ವಿದ್ಯಾರ್ಥಿಗಳು.
ಮಳೆ ನೀರು ವ್ಯರ್ಥವೆಂದು ಇನ್ನು ಯೋಚಿಸಬೇಕಾಗಿಲ್ಲ. ರೇನ್ಕೋಟ್ ಇದ್ದರೆ ಸಾಕು. ನೀವು ಬೇಕಾದಷ್ಟು ನೀರು ಕುಡಿಯಬಹುದು. ನಿಮಗೆ ಬಾಯಾರಿಕೆಯ ಚಿಂತೆಯೇ ಇಲ್ಲ! ಇಂಗ್ಲೆಂಡ್ನಂತಹ ದೇಶದಲ್ಲಿ ವರ್ಷಪೂರ್ತಿ ಮಳೆಯಾಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಮಳೆನೀರು ಕುಡಿಯಲು ಯೋಗ್ಯವಾಗಿರುತ್ತದೆ. ಆದರೆ ಪರಿಸರ ಮಾಲಿನ್ಯದಿಂದಾಗಿ ಅಲ್ಲಿನ ಮಳೆನೀರನ್ನು ನೇರವಾಗಿ ಕುಡಿಯುವುದು ಯೋಗ್ಯವಲ್ಲ. ಹೀಗಾಗಿ ಮಳೆಯಲ್ಲಿ ಬಾಯಾರಿದರೂ ನೀರನ್ನು ಕುಡಿಯಲು ಆಗುವುದಿಲ್ಲ ಎಂಬುದು ಅಳಲು. ಮಳೆನೀರನ್ನು ಸಂಗ್ರಹಿಸಿದರೂ ಅದನ್ನು ಶುದ್ಧೀಕರಿಸಿಯೇ ಕುಡಿಯಬೇಕು. ಆದರೆ ಸಿಐಐಡಿ ಕಲಿಯುತ್ತಿರುವ ಹಯೊನಾ ಯಾಂಗ್ ಮತ್ತು ಜೊಶುಯಾ ನೊಬೆಲ್ ಎನ್ನುವ ವಿದ್ಯಾರ್ಥಿಗಳು ಇದಕ್ಕೊಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಇವರು ತಯಾರಿಸಿರುವ ರೇನ್ಕೋಟ್ ತೊಟ್ಟು ಜಗತ್ತಿನ ಯಾವ ಪ್ರದೇಶದ ಮಳೆಯ ನೀರನ್ನಾದರೂ ಕುಡಿಯಬಹುದು.
ಹೊರಗಿನಿಂದ ಈ ರೇನ್ಕೋಟ್ ಅನೇಕ ಕಿಸೆಗಳಿರುವ ಸಾಮಾನ್ಯ ಜಾಕೆಟ್ನಂತೆ ಕಾಣಿಸುತ್ತದೆ. ಆದರೆ ಇದರ ಒಳಗಡೆ ಮಳೆನೀರನ್ನು ಶುದ್ಧೀಕರಿಸುವ ಯಂತ್ರವನ್ನು ಅಳವಡಿಸಲಾಗಿದೆ. ಇದಕ್ಕಿರುವ ಆಗಲವಾದ ಕೊರಳುಪಟ್ಟಿ ಮಳೆಯ ನೀರನ್ನು ಹಿಡಿದು ಯಂತ್ರಕ್ಕೆ ರವಾನಿಸುತ್ತದೆ. ಯಂತ್ರದಿಂದ ಶುದ್ಧವಾದ ಕುಡಿಯುವ ನೀರು ಭುಜದ ಸುತ್ತಲೂ ಇರುವ ಕಿಸೆಗಳಲ್ಲಿ ಸಂಗ್ರಹವಾಗುತ್ತದೆ. ಬಾಯಾರಿಕೆ ಆದಾಗಲೆಲ್ಲ ಕೊಳವೆಯ ಮೂಲಕ ಕಿಸೆಯಲ್ಲಿರುವ ನೀರನ್ನು ಕುಡಿಯಬಹುದು.
ಮನಸ್ಸಿದ್ದವರಿಗೆ ಮಾರ್ಗ ಹಲವು. ಜೊತೆಗೆ ಅನಿವಾರ್ಯತೆ ಅನ್ವೇಷಣೆಗೆ ನಮ್ಮನ್ನು ಪ್ರಚೋದಿಸುತ್ತದೆ. ಅಂಥ ಅನಿವಾರ್ಯತೆ ನೀರಿನ ವಿಚಾರದಲ್ಲಿ ಖಂಡಿತಾ ಈಗ ಸೃಷ್ಟಿಯಾಗಿದೆ. ಅನುಮಾನವೇ ಇಲ್ಲ, ನಿಸರ್ಗ ಹೇರಳ ಸಂಪತ್ತಿನ ಆಗರ. ಈ ಸಂಪನ್ಮೂಲ ವಿಪುಲವಾಗಿದೆಯೆಂದು ಅದನ್ನೆಲ್ಲ ಮನಬಂದಂತೆ ಬಳಸಿ ಮುಗಿಸಿದರೆ? ಯಾವುದನ್ನೂ ದುಂದು ಮಾಡುವ ಕಾಲ ಇದಲ್ಲ. ಪ್ರಕೃತಿದತ್ತ ಯಾವುದನ್ನೇ ಆದರೂ ವಿವೇಚನೆಯಿಲ್ಲದೆ ಖರ್ಚು ಮಾಡುತ್ತಿದ್ದರೆ ಆ ಖಜಾನೆ ದಿನದಿಂದ ದಿನಕ್ಕೆ ಕ್ಷಯಿಸುತ್ತದೆ. ನೀರಿನ ವಿಚಾರದಲ್ಲೂ ಹೀಗೆಯೇ ಆಗಿದೆ.
ಭೂ-ಜಲ ಇದಕ್ಕೊಂದು ತಾಜಾ ಉದಾಹರಣೆ. ದೈನಂದಿನ ಬದುಕಿಗೆ ಅತ್ಯವಶ್ಯ ನೀಲಿ ಬಂಗಾರ ಇಂದು ಬಹುತೇಕ ಬರಿದಾಗಿ ಆಗಿದೆ. ಇದನ್ನು ಅಂತರ್ಜಲ ಗಣಿಗಾರಿಕೆ ಎನ್ನಬಹುದು. ನೆಲಮಟ್ಟದಲ್ಲೇ ಅಥವಾ ಕೆಲವೇ ಅಡಿಗಳ ಆಳದಲ್ಲೇ ಲಭ್ಯವಿದ್ದ ಭೂಜಲ ಇಂದು ಪಾತಾಳ ತಲುಪಿದೆ. ಬೈರಿಗೆ ಯಂತ್ರಗಳು ಕ್ರಿಯಾಶೀಲವಾಗುತ್ತಲೇ ನಡೆದಿವೆ. ಭೂಮಿಯ ಮೇಲೆಲ್ಲ ಬರಿ ತೂತುಗಳೇ. ಪರಿಣಾಮ ನೆಲದಾಳಕ್ಕೆ ಇಳಿದಷ್ಟೂ ಭೂಜಲ ಮರೀಚಿಕೆಯಾಗಿದೆ. ಪರಿಸ್ಥಿತಿ ಹೇಗಿದೆ ಎಂದರೆ, ಹತ್ತರಲ್ಲಿ ಅಂದಾಜು ಆರು ಕೊಳವೆಬಾವಿಗಳು ವಿಫಲವಾಗುತ್ತಿವೆ.
ಹಾಗೆಂದು ರಾಜ್ಯದಲ್ಲಿ ಜಲ-ಭೂಜಲಕ್ಕೆ ಕೊರತೆ ಅಂಬುದೇನೂ ಇಲ್ಲ. ತಕ್ಕಮಟ್ಟಿಗೆ ದೊಡ್ಡ ರಾಜ್ಯವೇ ನಮ್ಮದು. ಗೋದಾವರಿ-ಕೃಷ್ಣ-ಕಾವೇರಿಯಂಥ ನದಿಗಳ ದೊಡ್ಡ ಜಲಾನಯನ ಇದೆ. ಜತೆಗೆ ಪಾಲಾರ್, ಪಿನಾಕಿನಿಗಳು. ಪಶ್ಚಿಮದತ್ತ ಸಮುದ್ರಕ್ಕೆ ದೌಡಾಯಿಸುವ ನದಿಗಳ ಜಾಲ ವ್ಯಾಪಕ. ನಮ್ಮ ನೆಲದ ವಿಸ್ತೀರ್ಣ 1,99,791 ಚದರ ಕಿ.ಮೀ. ಎನ್ನುತ್ತದೆ ಸರಕಾರಿ ಅಂಕಿ ಅಂಶ. ರಾಜ್ಯದಲ್ಲಿ ಪ್ರತಿ ವರ್ಷ ಸುರಿಯುವ ಮಳೆ ಸರಾಸರಿ 1140 ಮಿ.ಮೀ. ಮಲೆನಾಡು ಮತ್ತು ಬಯಲುಸೀಮೆಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಆದರೆ ಒಟ್ಟಾರೆ ನಮ್ಮಲ್ಲಿ ಬೀಳುವ ಮಳೆಯಿಂದ ಸಂಗ್ರಹಿಸಬಹುದಾದ ನೀರಿನ ಪ್ರಮಾಣ ಎನಿಲ್ಲವೆಂದರೂ ಸುಮಾರು 97,800 ದಶಲಕ್ಷ ಘನ ಮೀಟರ್.
ದುರಂತ ನೋಡಿ, ಇಷ್ಟು ಪ್ರಮಾಣದ ಮಳೆ ನೀರಿದ್ದರೂ ಇದನ್ನು ಹಿಡಿದಿಟ್ಟು ಕೃಷಿ ಸೇರಿದಂತೆ ಇತರೆ ಬಳಕೆಗೆ ಒದಗಿಸುವ ಚಿಂತನೆ ನಮ್ಮಲ್ಲಿ ಇಲ್ಲವೇ ಇಲ್ಲ. ಇಂಥ ಪದ್ಧತಿಗೆ ನಮ್ಮನ್ನಾಳುವ ಸರ್ಕಾರಗಳೂ ಯೋಜನೆ ರೂಪಿಸಿಲ್ಲ. ಬೀಳುವ ಅಷ್ಟೂ ನೀರನ್ನು ಹಿಡಿದಿಡಲು ಸಾಧ್ಯವಿಲ್ಲದೆ ಇರಬಹುದು. ಆದರೆ ಗರಿಷ್ಠ ಬಳಕೆಗಂತೂ ಬೇಕಷ್ಟು ಅವಕಾಶಗಳಿವೆ.
ರಾಜ್ಯದಲ್ಲಿ ಇಂದಿಗೂ ಮಳೆನೀರಿನ ಶೇ. 65 ಭಾಗ ಹರಿದು ವ್ಯರ್ಥವಾಗುತ್ತಿದೆ. ನೆಲದ ಮೇಲೆ ಬಿದ್ದು, ಆರಿ ಆವಿಯಾಗಿ ಹೋಗುತ್ತಿದೆ. ಕೆಲವೇ ಕೆಲ ಭಾಗ ಮಾತ್ರ ಅಳಿದುಳಿದ ಸಸ್ಯ ಸಂಕುಲದ ಮೂಲಕ ನೆಲ ಸೇರುತ್ತಿದೆ. ಅದರಲ್ಲೂ ಸಸ್ಯಗಳು ನೀರನ್ನು ಹೀರಿ ಎಲೆಗಳ ಮೂಲಕ ಬಾಷ್ಪವಿಸರ್ಜನೆ ಮಾಡುತ್ತಿವೆ. ಮೊದಲೆಲ್ಲಾ ಬಹುತೇಕ ಮಳೆಯ ನೀರು ಕೆರೆ ಕಟ್ಟೆಗಳಲ್ಲಿ ನಿಂತು, ಬೆಳೆಗೆ ಬಳಸಿ ನಂತರ ಹರಿದುಹೋಗುತ್ತಿತ್ತು. ಈಗ ಕೆರೆಗಳೇ ಇಲ್ಲ. ಇಷ್ಟೆಲ್ಲದರ ಬಳಿಕ ಮಳೆಯ ನೀರಿನಲ್ಲಿ ನೆಲದಾಳಕ್ಕೆ ಪಯಣಿಸುತ್ತಿರುವುದು ಶೇ.6 ರಿಂದ ಶೇ.8 ಭಾಗ ಮಾತ್ರ.
ರಾಜ್ಯಾದ್ಯಂತ ಅಂತರ್ಜಲ ಬಳಕೆಯಾಧರಿಸಿ ತಾಲೂಕುಗಳನ್ನು ಕಪ್ಪು, ಬೂದು ಮತ್ತು ಶ್ವೇತ ವಲಯಗಳೆಂದು ಸಂಬಂಧಪಟ್ಟ ಇಲಾಖೆ ಗುರುತಿಸಿದೆ. ಕಪ್ಪು ವಲಯ ಎಂದು ಗುರುತಿಸಿದ ಪ್ರದೇಶದಲ್ಲಿ ಅಂತರ್ಜಲ ಶೇ. 85ಕ್ಕಿಂತ ಹೆಚ್ಚು ಭಾಗ ಬಳಕೆಯಾಗಿದೆ. ಬೂದು ವಲಯಗಳಲ್ಲಿ ಶೇ. 65ರಿಂದ 85 ಭಾಗದಷ್ಟು ಬಳಕೆಯಾದರೆ, ಶ್ವೇತ ವಲಯದ ಸ್ಥಳಗಳಲ್ಲಿ ಅಂತರ್ಜಲವನ್ನು ಶೇ. 65ಕ್ಕಿಂತ ಕಡಿಮೆ ಉಪಯೋಗಿಸಲಾಗಿದೆ. ಅಂದರೆ ಕಡಿಮೆ ಎಂದರೂ ನಾವು ಶೇ. 65ರಷ್ಟು ಭೂಜಲ ಬಳಕೆ ಮಾಡುತ್ತಿದ್ದೇವೆ. ಶ್ವೇತ ವಲಯ ಎಂದ ಮಾತ್ರಕ್ಕೆ ಅಂತರ್ಜಲ ಸಮೃದ್ಧವಾಗಿ ಇದೆ ಎನ್ನಲಾಗದು.
ಅಂತರ್ಜಲದ ವಿಚಾರದಲ್ಲಿ ನಮ್ಮದು ಇತ್ತೀಚಿನ ದಿನಗಳಲ್ಲಿ ಕೇವಲ ಓವರ್ಡ್ರಾಫ್ಟ್. ನೂರು ರು. ಆದಾಯದ ಸನ್ನಿವೇಶದಲ್ಲಿ ನಾವು ಮಾಡುತ್ತಿರುವ ಖರ್ಚು ಎರಡೂವರೆಪಟ್ಟು ಹೆಚ್ಚು. ಹಾಗೆಂದು ಅಷ್ಟು ದುಡಿಮೆಯ ಅವಕಾಶ ಇಲ್ಲವೆಂದಲ್ಲ. ಆದರೆ ದುಡಿಯಲಾರದ ಮೈಗಳ್ಳತನ ನಮ್ಮದು. ಇಂಥ ಸನ್ನಿವೇಶದಲ್ಲಿ ಅಂತರ್ಜಲದ ಪರಿಸ್ಥಿತಿ ಏನಾಗಬೇಕೆಂಬುದನ್ನು ಕಲ್ಪಿಸಿಕೊಳ್ಳಿ.
ಕೋಲಾರದಂಥ ಜಿಲ್ಲೆಗಳಲ್ಲಿ ಅಂತರ್ಜಲ ಮಿತಿಮಿರಿ ಬಳಕೆಯಾಗುತ್ತಿದೆ. ಇನ್ನೊಂದೆಡೆ ಅಲ್ಲಿ ಮಳೆಯೂ ಕಣ್ಣಾಮುಚ್ಚಾಲೆ ಆಡುತ್ತಿದೆ. ಅರಣ್ಯ ಭೂಮಿ ಕೃಷಿಗೆ ಬಳಕೆಯಾಗುತ್ತಿದೆ. ಹೀಗಾಗಿ ಮಳೆ ಹೆಚ್ಚಾಗಿ ಬೀಳುತ್ತಿದ್ದ ಜಿಲ್ಲೆಗಳಲ್ಲೂ ಇಂದು ಪ್ರಮಾಣ ಕಡಿಮೆಯಾಗಿ ಅಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿದೆ.
ರಾಜ್ಯದಲ್ಲಿ ಮಳೆಯ ಅಂಕಿ-ಅಂಶ ಗಮನಿಸಿದರೆ ನೆಲದಾಳದಲ್ಲಿ ಶೇಖರಗೊಳ್ಳುವ ನೀರಿನ ಮೊತ್ತ 16,18,388 ದಶಲಕ್ಷ ಘನ ಮೀಟರ್. ಇದರಲ್ಲಿ ಕೃಷಿ, ಕೈಗಾರಿಕೆ, ಕುಡಿಯಲು ಮತ್ತಿತರ ಬಳಕೆಗೆ ಶೇ. 20ರಷ್ಟು ಅಂತರ್ಜಲ ಬಳಕೆಯಾಗುತ್ತದೆ. ಅಂದರೆ ಎನಿಲ್ಲವೆಂದರೂ ಸುಮಾರು 3.25 ದಶಲಕ್ಷ ಘನಮೀಟರ್ನಷ್ಟು ನೀರು. ಇದು ಬಿಟ್ಟು ರಾಜ್ಯದಲ್ಲಿರುವ ಅಂದಾಜು 9 ಲಕ್ಷ ಬಾವಿ/ ಕೊಳವೆಬಾವಿಗಳಿಂದ ಶೇ. 70ರಷ್ಟು ಅಂತರ್ಜಲ ಬಳಕೆಯಾಗುತ್ತಿದೆ. ಅದರ ಮೊತ್ತ ಸುಮಾರು 10 ದಶಲಕ್ಷ ಘನ ಮೀಟರ್. ಅದೆಲ್ಲದರಿಂದ ಹೊರತಾಗಿ ವೈಜ್ಞಾನಿಕವಾಗಿ ಅಂತರ್ಜಲದಲ್ಲಿ ಶೇ. 65ಕ್ಕಿಂತ ಹೆಚ್ಚು ಭಾಗವನ್ನು ಬಳಸುವಂತಿಲ್ಲ. ಹಾಗೂ ಬಳಸಿದ್ದರ ಪರಿಣಾಮವೇ ಕಪ್ಪು ವಲಯಗಳು ನಿರ್ಮಾಣವಾದದ್ದು. ಇದು ರಾಜ್ಯ ಮರುಭೂಮಿಯಾಗಿ ಮಾರ್ಪಡುತ್ತಿರುವ ಸೂಚನೆ.
ಹಿಂದೆಲ್ಲ, ಪೌರಾಣಿಕ ಯುಗದಲ್ಲಿ ದೇವತೆಗಳನ್ನು ಒಲಿಸಿಕೊಂಡು, ವರುಣಾರಾಧನೆಯಿಂದ ಮಳೆ ತರಿಸುತ್ತಿದ್ದರಂತೆ. ಅಂಥ ದೃಷ್ಟಾಂತಗಳನ್ನು ಓದಿದ್ದೇವೆ. ಹಳ್ಳಿಗಳಲ್ಲಿ ಇಂದಿಗೂ ಹಲವು ಜಾನಪದೀಯ ಆಚರಣೆಗಳಿವೆ. ಅದು ನಂಬಿಕೆ. ಇನ್ನು ಮೋಡಗಳನ್ನು ಚದುರಿಸಿ ಬೇಕೆಂದಾಗ ಮಳೆ ಸುರಿಸುವ ಸಾಹಸದ ಭ್ರಮೆಯೂ ವೈಜ್ಞಾನಿಕ ಯುಗದಲ್ಲಿ ಸಾಗಿದೆ. ಆದರೆ ನೂರಕ್ಕೆ ನೂರು ಸತ್ಯವೆಂದರೆ ತೀರಾ ಒಣಗಿದ ನೆಲವನ್ನು, ಅದರಾಳವನ್ನು ಮತ್ತೆ ಒದ್ದೆ ಮಾಡಬಹುದಾದ ಏಕೈಕ ಮಾರ್ಗವಿದ್ದರೆ ಅದು ಮಳೆನೀರು ಸಂಗ್ರಹ. ಅದು ಬಹು ಸುಲಭ ತಂತ್ರ ಸಹ. ಇದು ಪ್ರತಿಯೊಬ್ಬರೂ ವೈಯಕ್ತಿಕ ಮಟ್ಟದಲ್ಲಿ ಪ್ರತಿಯೊಬ್ಬರಿಂದಲೂ ಆಗಬೇಕಿರುವುದು. ಇದಕ್ಕಾಗಿ ಸರ್ಕಾರ, ಸಂಘ-ಸಂಸ್ಥೆಗಳನ್ನು ಕಾಯುವುದರಲ್ಲಿ ಅರ್ಥವಿಲ್ಲ. ಅದರ ಅಗತ್ಯವೂ ಇಲ್ಲ. ಹೆಚ್ಚೆಂದರೆ ಸರ್ಕಾರ, ಸಂಘ-ಸಂಸ್ಥೆಗಳು ಯೋಜನೆಗಳನ್ನು ರೂಪಿಸ ಬಹುದು. ಆದರೆ ಅದರಲ್ಲಿ ಪಾಲ್ಗೊಂಡು ಪ್ರಯತ್ನಿಸಿದರೆ ಮಾತ್ರ ನಮ್ಮ ಭೂಜಲದ ಕಣಜ ಮರುಭರ್ತಿಯಾಗಲು ಸಾಧ್ಯ. ಅಂಥ ಅರಿವು ನಮ್ಮಲ್ಲಿ ಇನ್ನಾದರೂ ಮೂಡಲಿ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


