ಅಂಕಣಗಳು

ಕನ್ನಡಿಗರು ಮರೆತ 'ರತ್ನ' ಕಿರೀಟ ಈ ನಾಗರತ್ನಮ್ಮ

ನಾದದೇವತೆ, ರಾಗದೇವತೆ, ವಿದ್ಯಾದೇವತೆ, ಸೌಂದರ್ಯದೇವತೆ, ತ್ಯಾಗದೇವತೆ...

ಕನ್ನಡಿಗರು ಮರೆತ 'ರತ್ನ' ಕಿರೀಟ ಈ ನಾಗರತ್ನಮ್ಮ
Published On :

ನಾದದೇವತೆ, ರಾಗದೇವತೆ, ವಿದ್ಯಾದೇವತೆ, ಸೌಂದರ್ಯದೇವತೆ, ತ್ಯಾಗದೇವತೆ... ಈ ಎಲ್ಲ ಹೊಗಳಿಕೆಗೂ ಪಾತ್ರವಾಗಿದ್ದಾಕೆ-ಬೆಂಗಳೂರು ನಾಗರತ್ನಮ್ಮ. ಈಕೆ, ಕರ್ನಾಟಕ ಸಂಗೀತದ ಪ್ರಮುಖ ಗಾಯಕಿಯರಲ್ಲಿ ಒಬ್ಬರು. 1890ರಿಂದ 1930ರವರೆಗೆ, ಅಂದರೆ ಭರ್ತಿ 40 ವರ್ಷ, ದಕ್ಷಿಣ ಭಾರತದ ಸಂಗೀತ ಸಾಮ್ರಾಜ್ಞಿಯಾಗಿ ಮರೆದದ್ದು ನಾಗರತ್ನಮ್ಮನವರ ಹೆಗ್ಗಳಿಕೆ. ವಿಪರ್ಯಾಸವೇನು ಗೊತ್ತೆ? ಕನ್ನಡನಾಡಿನ ಕೀರ್ತಿಯನ್ನು ದಕ್ಷಿಣ ಭಾರತದ ತುಂಬಾ ಹರಡಿದ ಈ ಮಹಾನ್ ಸಾಧಕಿಯ ಬಗ್ಗೆ ಹೆಚ್ಚಿನ ಕನ್ನಡಿಗರಿಗೆ ಗೊತ್ತೇ ಇಲ್ಲ! ಆಂಧ್ರ ಮತ್ತು ತಮಿಳುನಾಡಿನ ಗಣ್ಯರಿಂದ ಗಾನಕಲಾ ವಿಶಾರದೆ, ತ್ಯಾಗಸೇವಾಸಕ್ತೆ ಎಂದೆಲ್ಲಾ ಕರೆಸಿಕೊಂಡ ನಾಗರತ್ನಮ್ಮ, ತೆಲುಗು ಭಾಷೆಯ ವಿದ್ವಾಂಸೆಯೂ ಆಗಿದ್ದರು. ಹಲವು ಪುಸ್ತಕ ಸಂಪಾದಿಸಿ, ಪ್ರಕಟಿಸಿದರು. ಈಕೆ ಅಸಾಧಾರಣ ನೃತ್ಯ ಕಲಾವಿದೆಯಾಗಿದ್ದರು. ಕವಯತ್ರಿಯಾಗಿದ್ದರು. ಇಂಥ ಅಪರೂಪದ ಹಿನ್ನೆಲೆಯಿದ್ದ ನಾಗರತ್ನಮ್ಮನವರ ಬದುಕಿನ ಪರಿಚಯ ಮಾಡಿಕೊಡುವ ಸದಾಶಯದಿಂದ ಈ ಪುಟ್ಟ ಬರಹ...

1878ರ ನವೆಂಬರ್ 3ರಂದು, ನಂಜನಗೂಡಿನಲ್ಲಿ ಜನಿಸಿದಾಕೆ ನಾಗರತ್ನಮ್ಮ. ಈಕೆಯ ತಾಯಿಯ ಹೆಸರು ಪುಟ್ಟಲಕ್ಷ್ಮಮ್ಮ. ಈಕೆ ದೇವದಾಸಿ ಸಮುದಾಯಕ್ಕೆ ಸೇರಿದವರು. ಅವತ್ತಿನ ಸಾಮಾಜಿಕ ಸಂದರ್ಭದಲ್ಲಿ ದೇವದಾಸಿ ಸಮುದಾಯದ ಹೆಣ್ಣು ಮಕ್ಕಳಿಗೆ, ಉಳಿದವರಂತೆ ಮದುವೆಯಾಗುವ ಸೌಭಾಗ್ಯವಿರಲಿಲ್ಲ. ಅವರು, ಶ್ರೀಮಂತ ಧಣಿಗಳ ನೆರಳಲ್ಲಿ ಬದುಕಬೇಕಿತ್ತು. ಈ ಧಣಿಗಳನ್ನು 'ಆಶ್ರಯದಾತರು' ಎಂದು ಕರೆಯಲಾಗುತ್ತಿತ್ತು. ಸಿರಿವಂತರ ಎರಡನೇ ಹೆಂಡತಿಯರಂತೆ ದೇವದಾಸಿ ಹೆಣ್ಣು ಮಗಳು ಬಳಕೆಯಾಗುತ್ತಿದ್ದರು. ಆದರೆ, ಅವರಿಗೆ ಯಾವುದೇ ಆರ್ಥಿಕ ಭದ್ರತೆ ಇರುತ್ತಿರಲಿಲ್ಲ. 'ಇಟ್ಟುಕೊಂಡಿದ್ದ ಶ್ರೀಮಂತ' ದಿಢೀರ್ ಮನಸ್ಸು ಬದಲಿಸಿದರೆ ಅಥವಾ ಸತ್ತು ಹೋದರೆ, ಈ ಹೆಂಗಸರು ತಕ್ಷಣವೇ ಬೇರೊಂದು ಆಶ್ರಯ ಹುಡುಕಿಕೊಳ್ಳಲೇಬೇಕಿತ್ತು. ಇಂಥ ಹಿನ್ನೆಲೆಯ ಸಮುದಾಯದವರಾಗಿದ್ದ ಪುಟ್ಟಲಕ್ಷ್ಮಮ್ಮ ಅವರಿಗೆ ನಂಜನಗೂಡಿನಲ್ಲಿ ವಕೀಲರಾದ ಸುಬ್ಬರಾಯರು ಆಶ್ರಯದಾತರಾಗಿದ್ದರು. ಈ ಸಂಬಂಧಕ್ಕೆ ಜನಿಸಿದಾಕೆ ನಾಗರತ್ನಮ್ಮ. ಈ ಮಗುವಿಗೆ ಎರಡು ವರ್ಷ ತುಂಬುವುದರೊಳಗೆ, ಸುಬ್ಬರಾಯರು ಮನಸ್ಸು ಮುರಿದುಕೊಂಡರು. ಪರಿಣಾಮ, ಪುಟ್ಟ ಕಂದನೊಂದಿಗೆ ಮೈಸೂರಿಗೆ ಬಂದ ಪುಟ್ಟಲಕ್ಷ್ಮಮ್ಮ ಗಿರಿಭಟ್ಟರ ತಮ್ಮಯ್ಯ ಎಂಬ ವಿದ್ವಾಂಸರ ಬಳಿ ಮಗಳನ್ನು ಸಂಗೀತ ಪಾಠಕ್ಕೆ ಸೇರಿಸಿದಳು.
ನಾಗರತ್ಮಮ್ಮನಿಗೆ 9 ವರ್ಷ ತುಂಬುವವರೆಗೂ ಸಂಗೀತ ಲೋಕದ ಎಲ್ಲ ವಿಷಯವನ್ನೂ ಹೇಳಿಕೊಟ್ಟ ತಮ್ಮಯ್ಯ, ಆನಂತರದಲ್ಲಿ ಯಾವುದೋ ಮನಸ್ತಾಪದಿಂದ - 'ನಾಳೆಯಿಂದ ನಾನು ಪಾಠ ಹೇಳಲಾರೆ' ಎಂದುಬಿಟ್ಟರು. ಮಗಳಿಗೆ ಭವಿಷ್ಯದಲ್ಲಿ ಶ್ರೀಮಂತರ ಆಶ್ರಯ ದೊರಕಬೇಕೆಂದರೆ, ನೃತ್ಯ ಹಾಗೂ ಗಾಯನದಲ್ಲಿ ಆಕೆ ಪಳಗಿರಲೇಬೇಕು ಎಂದು ಭಾವಿಸಿದ್ದ ಪುಟ್ಟಲಕ್ಷ್ಮಮ್ಮ, ತಕ್ಷಣವೇ ಬೆಂಗಳೂರಿಗೆ ಬಂದರು. ಅಲ್ಲಿದ್ದ ಅಣ್ಣನ ಮನೆಯಲ್ಲಿ ಆಶ್ರಯ ಪಡೆದು, ವಿದ್ವಾನ್ ಮುನಿಸ್ವಾಮಪ್ಪ ಎಂಬುವರ ಬಳಿ ಸಂಗೀತ ತರಗತಿಗೂ, ಕಿಟ್ಟಣ್ಣ ಎಂಬುವರ ಬಳಿ ನೃತ್ಯಾಭ್ಯಾಸಕ್ಕೂ ಸೇರಿಸಿದರು. ಗುರುಗಳು ಹೇಳಿಕೊಟ್ಟಿದ್ದನ್ನು ಮರುಕ್ಷಣವೇ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನಾಗರತ್ನಮ್ಮ ಅವರಿಗಿತ್ತು. ಪರಿಣಾಮ, 12 ವರ್ಷ ತುಂಬುವುದರೊಳಗೆ ಗಾಯನ, ನೃತ್ಯದಲ್ಲಿ ಎತ್ತಿದ ಕೈ ಅನ್ನಿಸಿಕೊಂಡರು.
ಅವತ್ತಿನ ಸಂದರ್ಭದಲ್ಲಿ ನಾಡಿನ ಎಲ್ಲ  ಸಂಗೀತಗಾರರಿಗೂ ಇದ್ದ ಮಹದಾಸೆಯೆಂದರೆ, ಮೈಸೂರಿನ ಅರಮನೆಯಲ್ಲಿ ಮಹಾರಾಜರ ಮುಂದೆ ಪ್ರತಿಭೆ ಪ್ರದರ್ಶಿಸಿ, ಅವರ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬುದು. ಈ ಸದಾಶಯದಿಂದಲೇ ಮೈಸೂರಿಗೆ ಬಂದ ಮುನಿಸ್ವಾಮಪ್ಪನವರು, ಮೊದಲಿಗೆ ವೀಣೆ ಶೇಷಣ್ಣನವರ ಸಮ್ಮುಖದಲ್ಲಿ ನಾಗರತ್ನಮ್ಮನ ಕಚೇರಿ ಏರ್ಪಡಿಸಿದರು. ಹಾಡುಗಾರಿಕೆ ಮುಗಿಯುತ್ತಿದ್ದಂತೆಯೇ, ಶೇಷಣ್ಣನವರು ಈ ಬಾಲಪ್ರತಿಭೆಯನ್ನು ಮುಕ್ತಕಂಠದಿಂದ ಹೊಗಳಿದರು. ಪರಿಣಾಮವಾಗಿ, ನಾಗರತ್ನಮ್ಮನ ವಿಷಯ ಅವರಿವರಿಂದ ಮಹಾರಾಜರನ್ನು ತಲುಪಿತು. ನಂತರದ ಕೆಲವೇ ದಿನಗಳಲ್ಲಿ ಮಹಾರಾಜರ ಸಮ್ಮುಖದಲ್ಲಿ ನಾಗರತ್ನಮ್ಮನ ಗಾಯನ ಮತ್ತು ನೃತ್ಯ ನಡೆಯಿತು. ಈ ಪ್ರದರ್ಶನ ಕಂಡು ರಾಜ-ರಾಣಿಯರು ಎಷ್ಟೊಂದು ಪ್ರಭಾವಿತರಾದರೆಂದರೆ, ಬೆಳ್ಳಿ ಹರಿವಾಣಗಳನ್ನು ನೀಡಿ ನಾಗರತ್ನಮ್ಮನನ್ನು ಸನ್ಮಾನಿಸಿದ್ದೇ ಅಲ್ಲದೇ, ದರ್ಬಾರ್ನಲ್ಲಿಯೇ ಒಂದು ಉದ್ಯೋಗವನ್ನೂ ದಯಪಾಲಿಸಿದರು. ಬದುಕಿಗೆ ಒಂದು ಭದ್ರತೆ ಸಿಕ್ಕಿತೆಂಬ ಖುಷಿಯಲ್ಲಿ, ಆಸ್ಥಾನ ವಿದ್ವಾಂಸರಾಗಿದ್ದ ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತ ಕಲಿಕೆ ಆರಂಭಿಸಿದರು ನಾಗರತ್ನಮ್ಮ.
ನಾಗರತ್ನಮ್ಮ ಅವರ ಬದುಕಲ್ಲಿ ನೆಮ್ಮದಿಯ ದಿನಗಳು ಶುರುವಾದವು ಅಂದುಕೊಂಡಾಗಲೇ ಅನಾಹುತ ನಡೆದು ಹೋಯಿತು. ಅಂದಿನ ಮಹಾರಾಜರಾಗಿದ್ದ ಚಾಮರಾಜ ಒಡೆಯರ್, 1894ರಲ್ಲಿ ದಿಢೀರನೆ ನಿಧನರಾದರು. ಅರಮನೆಯಲ್ಲಿ ಆಡಳಿತ ಸೂತ್ರ ಕೈ ಬದಲಾಗಿದ್ದರಿಂದ ನಾಗರತ್ನಮ್ಮನ ನೌಕರಿ ಹೋಯಿತು. ಮೈಸೂರಿನಲ್ಲಿ ಆಶ್ರಯದಾತರಿಲ್ಲ ಅನ್ನಿಸಿದಾಗ ಬೆಂಗಳೂರಿಗೆ ವಾಪಸಾದ ನಾಗರತ್ನಮ್ಮ, ಸಂಗೀತ ಪ್ರೇಮಿಗಳಿಗೆಂದು ಕಾರ್ಯಕ್ರಮ ನೀಡಲು ಮುಂದಾದರು. ಇಂಥದೊಂದು ಸಂದರ್ಭದಲ್ಲೇ ನಾಗರತ್ನಮ್ಮನಿಗೆ ಪರಿಚಯವಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನರಹರಿರಾಯರು ಮುಂದೆ ಆಶ್ರಯದಾತರಾದರು. ಕಲಾಪ್ರೇಮಿಯಾಗಿದ್ದ ರಾಯರು, ನಾಗರತ್ನಮ್ಮನನ್ನು ಹೆಜ್ಜೆಹೆಜ್ಜೆಗೂ ಹೊಗಳುತ್ತಿದ್ದರು. ಆಕೆ ಏನಾದರೂ ಬರೆದರೆ ಪ್ರೋತ್ಸಾಹಿಸುತ್ತಿದ್ದರು. ಹೀಗೆಯೇ ದಿನಗಳು ಉರುಳುತ್ತಿದ್ದಾಗ, ತಮ್ಮ ನಿವೃತ್ತಿಯ ದಿನಗಳು ಹತ್ತಿರವಾಗುತ್ತಿವೆ ಎಂದು ತಿಳಿದು, ನರಹರಿರಾಯರು, ಏನೊಂದೂ ಮಾತಾಡದೆ, ಕೂತು ಬಿಡುತ್ತಿದ್ದರಂತೆ. ಆಗ ರಾಯರನ್ನು ಹಾಡಿನ ಮೂಲಕವೇ ಮಾತಾಡಿಸಬೇಕು ಅನ್ನಿಸಿದಾಗ-'ಮಾತಾಡಬಾರದೇನೋ ಮಾರಮಣನೆ' ಎಂಬ ಗೀತೆಯನ್ನು ಆ ಕ್ಷಣದಲ್ಲಿಯೇ ರಚಿಸಿ, ಅದ್ಭುತವಾಗಿ ಅಭಿನಯಿಸುತ್ತಾ ಹಾಡಿಯೇ ಬಿಟ್ಟರಂತೆ ನಾಗರತ್ನಮ್ಮ.
ನಾಗರತ್ನಮ್ಮನವರ ಹೆಸರು ನಾಡಿನ ತುಂಬಾ ಹರಡಲಿ ಎಂಬ ಆಸೆ ನರಹರಿರಾಯರಿಗಿತ್ತು. ಈ ಕಾರಣದಿಂದಲೇ ಅವರು ನಾಗರತ್ನಮ್ಮನನ್ನು ಮದ್ರಾಸಿನ ಮೊದಲಿಯಾರ್ ಎಂಬ ಶ್ರೀಮಂತರ ಆಶ್ರಯಕ್ಕೆ ಕಳಿಸಿದರು. ಆನಂತರದ್ದೆಲ್ಲಾ ನಾಗರತ್ನಮ್ಮನ ಪಾಲಿಗೆ ವೈಭವದ ಕಾಲ. ಸಂಗೀತದಲ್ಲಿ ಅಪಾರ ಪಾಂಡಿತ್ಯ ಪಡೆಯಬೇಕೆಂಬ ಮಹದಾಸೆಯಿಂದ ಆಕೆ ವಿದ್ವಾಂಸರ ಕಛೇರಿಗಳಿಗೆ ಹಾಜರಾಗಿ ವಿಷಯ ಸಂಗ್ರಹ ಮಾಡಿದರು. ಈ ಮಧ್ಯೆಯೇ ತೆಲುಗು ಸಾಹಿತ್ಯ ಓದಿಕೊಂಡರು. ಒಂದು ಕಾಲದಲ್ಲಿ ವೇಶ್ಯೆಯಾಗಿದ್ದ, ಆನಂತರದಲ್ಲಿ 'ರಾಧಿಕಾ ಸಾಂತ್ವನಮು' ಎಂಬ ಶೀರ್ಷಿಕೆಯ ಕವನಗಳನ್ನು ರಚಿಸಿದ್ದ ಮುದ್ದುಪಳನಿ ಎಂಬಾಕೆಯ ಪುಸ್ತಕವನ್ನು ಮರುಮುದ್ರಿಸಿದರು. ಈ ಸಂಕಲನಕ್ಕೆ ಪಂಡಿತರೆಲ್ಲರೂ ತಲೆತೂಗುವಂಥ ಮುನ್ನುಡಿ ಬರೆದರು.
ಸುಮಧುರ ಕಂಠ, ಅಸಾಧಾರಣ ಚೆಲುವು, ಇಡೀ ವ್ಯಕ್ತಿತ್ವಕ್ಕೆ ಘನತೆ ತಂದುಕೊಡುವ ವಿದ್ಯೆ ಮತ್ತು ವಿನಯ ಒಬ್ಬರಲ್ಲಿಯೇ ಕಂಡು ಬರುವುದು ವಿರಳ. ಇಂಥ ಅಪರೂಪದ ಗುಣ ನಾಗರತ್ನಮ್ಮ ಅವರಿಗಿತ್ತು. ಆಕೆಯ ಅಭಿಮಾನಿಗಳ ಪಟ್ಟಿಯಲ್ಲಿ ಲಕ್ಷಾಧಿಪತಿಗಳಿದ್ದರು. ಗಾಯನ, ನೃತ್ಯ ಕಾರ್ಯಕ್ರಮ ಅಥವಾ ಚರ್ಚೆ- ಈ ಯಾವುದೇ ಸಂದರ್ಭದಲ್ಲಿ, ನಾಗರತ್ನಮ್ಮ ಅವರಲ್ಲಿ ಸಣ್ಣದೊಂದು ತಪ್ಪು ಹುಡುಕಲೂ ಸಾಧ್ಯವಿರಲಿಲ್ಲ. ಇದನ್ನು ಗಮನಿಸಿದ ಕಲಾರಸಿಕರು, ನಾಗರತ್ನಮ್ಮ ಅವರ ಕಛೇರಿಗಳನ್ನು ಆಗಿಂದ್ದಾಗ್ಗೆ ನೆನಪಿಸಿಕೊಳ್ಳುತ್ತ, ತಾವೂ ಆಕೆಯಂತೆಯೇ ಅಭಿನಯಿಸುತ್ತಾ,- ನಾಗರತ್ನಮ್ಮನ ಸ್ಟೈಲೇ ಸ್ಟೈಲು ಎಂದು ಉದ್ಗರಿಸುತ್ತಿದ್ದರಂತೆ.
ಮದ್ರಾಸಿನಲ್ಲಿ, ಖ್ಯಾತಿಯ ಒಂದೊಂದೇ ಮೆಟ್ಟಿಲು ಹತ್ತಿದ ನಾಗರತ್ನಮ್ಮ, ಅಲ್ಲಿನ ಸಾಹುಕಾರಪೇಟೆಯಲ್ಲಿ ಮನೆಯೊಂದನ್ನು ಕಟ್ಟಿಸಿದಳು. ಗೃಹಪ್ರವೇಶದ ದಿನ, ತನ್ನ ಗುರುಗಳಾದ ಬಿಡಾರಂ ಕೃಷ್ಣಪ್ಪನವರ ಕಚೇರಿ ಏರ್ಪಡಿಸಿದಳು. ಕನ್ನಡದ ಗೀತೆಗಳನ್ನು ಹೆಚ್ಚಾಗಿ ಹಾಡುವಂತೆ ಪ್ರಾರ್ಥಿಸಿದಳು. ಕಚೇರಿ ಮುಗಿಯುತ್ತಿದ್ದಂತೆಯೇ, ನಾಗರತ್ನಮ್ಮನ ಮುಂದೆ ನಿಂತ ಕಲಾರಸಿಕರು, ತಮ್ಮ ಮನೆಗಳಲ್ಲಿಯೂ ಬಿಡಾರಂ ಕೃಷ್ಣಪ್ಪನವರ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡುವಂತೆ ಪ್ರಾರ್ಥಿಸಿದರು. ಮುಂದೆ, ಬಿಡಾರಂ ಕೃಷ್ಣಪ್ಪನವರ ಹೆಸರು ಮದ್ರಾಸಿನಲ್ಲಿ ಮನೆ ಮಾತಾಗಲು ನಾಗರತ್ನಮ್ಮ  ಈ ಮೂಲಕ ಪರೋಕ್ಷವಾಗಿ ಕಾರಣರಾದರು.
ತಮ್ಮ ವಾರಿಗೆಯ ಸಂಗೀತಗಾರರ ಮೇಲೆ ಕೆಂಡ ಕಾರುವುದು, ಕಿರಿಯರನ್ನು ಕಡೆಗಣಿಸುವುದು ಹಾಗೂ ತಮ್ಮನ್ನೇ ಹೊಗಳಿಕೊಂಡು ಮೈಮರೆಯುವುದು-ಇದು ಎಲ್ಲ ಸಂಗೀತಗಾರರಿಗೂ ಇರುವ ಅವಗುಣ. ಉಹುಂ, ಇಂಥ ದುರ್ಬುದ್ಧಿ ನಾಗರತ್ನಮ್ಮನಿಗೆ ಬರಲೇ ಇಲ್ಲ. ಆಕೆ ಕಿರಿಯರನ್ನು ಪ್ರೋತ್ಸಾಹಿಸುತ್ತಿದ್ದಳು. ಹಿರಿಯರನ್ನು ಗೌರವಿಸುತ್ತಿದ್ದರು. ಪ್ರತಿಫಲಾಪೇಕ್ಷೆಯಿಲ್ಲದೆ ಪಾಠ ಹೇಳಿದರು. ಅಮ್ಮಾ ಕಷ್ಟ ಎಂದವರಿಗೆ ಸಿಕ್ಕಿದ್ದಷ್ಟನ್ನೂ ದಾನ ಮಾಡಿದರು. ಇಷ್ಟಾದರೂ ಆಕೆಯ ವೈಯಕ್ತಿಕ ಬದುಕು ಸಂಭ್ರಮದಿಂದ ಕೂಡಿರಲಿಲ್ಲ. ಆಕೆಗೆ ದೊಡ್ಡ ಭರವಸೆಯಂತಿದ್ದ ಇಬ್ಬರು ಮಕ್ಕಳು ಚಿಕ್ಕವಯಸ್ಸಿಗೇ ತೀರಿಕೊಂಡರು. ಆಗ ನಾಗರತ್ನಮ್ಮ, ಮತ್ತೊಂದು ಮಗುವನ್ನು ದತ್ತು ಪಡೆದರು. ಕೆಲವೇ ತಿಂಗಳುಗಳಲ್ಲಿ ಆ ಮಗುವೂ ಸತ್ತು ಹೋಯಿತು.
ಈ ಶಾಕ್ನಿಂದ ನಾಗರತ್ನಮ್ಮ ತತ್ತರಿಸಿಹೋದರು. ಆನಂತರದಲ್ಲಿ ತಮ್ಮ ಮಾನಸ ಗುರುವಾಗಿದ್ದ ತ್ಯಾಗರಾಜರ ಕೀರ್ತನೆಗಳನ್ನು ಹಾಡಿಕೊಂಡು ದುಃಖ ಮರೆಯುತ್ತಿದ್ದರು. ಹೀಗಿರುವಾಗಲೇ, ಅದೊಮ್ಮೆ ತ್ಯಾಗರಾಜರ ಆರಾಧನೆಯ ಸಂದರ್ಭದಲ್ಲಿ ಕನಸಿಗೆ ಬಂದ ವೃದ್ಧರೊಬ್ಬರು - 'ತಾಯಿ, ನಿನ್ನ ಭಕ್ತಿ-ಪೂಜೆಯಿಂದ ರಾಮಚಂದ್ರ ತೃಪ್ತನಾಗಿದ್ದಾನೆ. ತಿರುವಯ್ಯಾರ್ನಲ್ಲಿರುವ ತ್ಯಾಗರಾಜರ ಸಮಾಧಿಯ ಬಳಿ ಸೀತಾರಾಮರ ದೇವಾಲಯ ಹಾಗೂ ಮಂಟಪ ಕಟ್ಟಿಸು. ಪ್ರತಿ ವರ್ಷವೂ ಅಲ್ಲಿ ಆರಾಧನಾ ಮಹೋತ್ಸವ ನಡೆಯಲು ಅವಕಾಶ ಕಲ್ಪಿಸಿ ಪುಣ್ಯಶಾಲಿಯಾಗು' ಎಂದು ಹೇಳಿ ಮಾಯವಾದರಂತೆ.
ಆನಂತರದಲ್ಲಿ ನಾಗರತ್ನಮ್ಮನವರು ತಡ ಮಾಡಲಿಲ್ಲ. ಕೆಲವು ಪ್ರಮುಖರನ್ನು ಜೊತೆಗಿಟ್ಟುಕೊಂಡು ತಂಜಾವೂರ್ಗೆ ಸಮೀಪದ ತಿರುವಯ್ಯಾರ್ಗೆ ಹೋದರು. ಅಲ್ಲಿದ್ದ ತ್ಯಾಗರಾಜರ ಸಮಾಧಿ ಸ್ಥಳ ಗುರುತಿಸಿದರು. ಅದರ ಎದುರಿಗೇ ಸೀತಾರಾಮರ ದೇಗುಲ ಹಾಗೂ ವಿಶಾಲವಾದ ಮಂಟಪ ಕಟ್ಟಿಸುವ ನಿರ್ಧಾರಕ್ಕೆ ಬಂದರು. ಈ ಕೆಲಸಕ್ಕೆ ಹಣ ಬೇಕು ಅನ್ನಿಸಿದಾಗ ಒಂದರ ಹಿಂದೊಂದು ಸಂಗೀತ ಕಛೇರಿ ನಡೆಸಿದರು. ಹೀಗೆ ಸಂಗ್ರಹವಾದ ಹಣ ಸಾಕಾಗುತ್ತಿಲ್ಲ ಅನ್ನಿಸಿದಾಗ ತಮ್ಮಲ್ಲಿದ್ದ ಆಭರಣಗಳನ್ನು ಮಾರಿದರು. ಕಡೆಗೆ, ಮನೆಯನ್ನೂ ಮಾರಿಬಿಟ್ಟರು. ಪರಿಣಾಮವಾಗಿ, ಭವ್ಯ ಮಂಟಪ ಹಾಗೂ ಸೀತಾರಾಮರ ದೇವಾಲಯ ಎದ್ದು ನಿಂತಿತು.
ಆರಾಧನಾ ಮಹೋತ್ಸವದ ವೇಳೆಯಲ್ಲಿ ಸಂಗೀತ ಆಲಿಸಲು ಹಾಗೂ ತ್ಯಾಗರಾಜರ ಸಮಾಧಿಯ ದರ್ಶನ ಪಡೆಯಲು ಮೈಸೂರು ಸೀಮೆಯಿಂದ ಬಂದವರಿಗೆ ಉಳಿದುಕೊಳ್ಳಲೆಂದು ಛತ್ರ ಕಟ್ಟಬೇಕು, ಅದಕ್ಕೆ ಮೈಸೂರು ಛತ್ರ ಎಂದೇ ಹೆಸರಿಡಬೇಕೆಂದು ನಾಗರತ್ನಮ್ಮನಿಗೆ ಮನಸ್ಸಾಯಿತು. ಪರಿಣಾಮ, ಆಕೆ ನೇರವಾಗಿ ಬೆಂಗಳೂರಿಗೆ ಬಂದು ಕಛೇರಿ ನಡೆಸಿದರು. ಆದರೆ ಸಂಗ್ರಹವಾದ ಹಣ ಛತ್ರದ ನಿರ್ಮಾಣಕ್ಕೆ ಸಾಕಾಗುವಷ್ಟಿರಲಿಲ್ಲ. ಅದನ್ನು ಗಮನಿಸಿದ ನಾಗರತ್ನಮ್ಮನವರ ಮುಖ ಬಾಡಿತು. ಆಗ ಜೊತೆಗಿದ್ದವರು, ಮದ್ರಾಸಿನಲ್ಲಿಯೇ ಕಛೇರಿಗಳನ್ನು ನಡೆಸಿದ್ದರೆ ಸಾಕಷ್ಟು ಹಣ ಸಿಗುತ್ತಿತ್ತು ಅಂದರಂತೆ. ಆಗ ನಾಗರತ್ನಮ್ಮ ಹೇಳಿದ್ದು: 'ಮದ್ರಾಸಿನಲ್ಲಿ ನಾನು ಹಾಡುವುದೇ ಬೇಕಿಲ್ಲ. ಕಣ್ಸನ್ನೆ ಮಾಡಿದರೆ ಸಾಕು; ಕೇಳಿದಷ್ಟು ಹಣ ಕೊಡುವ ವರ್ತಕರಿದ್ದಾರೆ. ಹೀಗೆ ದುಡ್ಡು ಕೊಟ್ಟವರು, ತಾವು ಸೂಚಿಸಿದ ಹೆಸರನ್ನೇ ಛತ್ರಕ್ಕೆ ಇಡಬೇಕೆಂದು ಒತ್ತಾಯಿಸುತ್ತಾರೆ. ಆದರೆ ನನ್ನ ಉದ್ದೇಶವೇ ಬೇರೆ. ಅದು ಮೈಸೂರು ಛತ್ರ ಎಂದೇ ಹೆಸರಾಗಬೇಕು. ಕನ್ನಡಿಗರಿಗಾಗಿ ಕೈಗೊಂಡ ಕೆಲಸದಲ್ಲಿ ಕನ್ನಡೇತರರ ಕೊಂಕು ಇರಬಾರದು. ಆ ಸದಾಶಯದಿಂದಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ಕಚೇರಿ ನಡೆಸಿ ಹಣ ಸಂಗ್ರಹಿಸಲು ಬಂದೆ...'
ತಿರುವಯ್ಯಾರಿನಲ್ಲಿ ಮೈಸೂರು ಛತ್ರದ ಕಟ್ಟಡ ಕಾಮಗಾರಿ ಶುರುವಾದ ಕೆಲವೇ ದಿನಗಳಲ್ಲಿ ನಾಗರತ್ನಮ್ಮನವರು ಅನಾರೋಗ್ಯಕ್ಕೆ ತುತ್ತಾದರು. ಈ ಸಂದರ್ಭದಲ್ಲಿ ಕ್ಷೇಮ ವಿಚಾರಿಸಲು ಬಂದ ಹಿರಿಯ ಸಾಹಿತಿ ಡಿ.ವಿ.ಜಿ. ಅವರಿಗೆ ನಾಗರತ್ನಮ್ಮ ಹೇಳಿದರಂತೆ :'ನನ್ನ ಸ್ಥಿತಿ ಏನಾಯ್ತು ನೋಡಿದ್ರೇನಪ್ಪಾ? ಮೊದಲು ನಾಗರತ್ನ, ಆಮೇಲೆ ಭೋಗರತ್ನ, ಈಗ ರೋಗರತ್ನ!' ತಕ್ಷಣವೇ ಅವರ ಮಾತುಗಳನ್ನು ತಡೆದ ಡಿ.ವಿ.ಜಿ.-'ಅಮ್ಮಾ, ಮತ್ತೂ ಎರಡನ್ನು ನೀವು ಮರೆತಿದ್ದೀರಿ. ಒಂದು ರಾಗರತ್ನ, ಇನ್ನೊಂದು ತ್ಯಾಗರತ್ನ. ಭೋಗ-ರೋಗಗಳು ಕ್ಷಣಿಕವಾದವು. ನಿಮ್ಮ ರಾಗ ಅದನ್ನು ಕೇಳಿದವರ ಮನದಲ್ಲಿ ಚಿರಕಾಲ ಉಳಿದಿರುತ್ತದೆ. ನಿಮ್ಮ ತ್ಯಾಗಕ್ಕೆ ಸಾಕ್ಷಿಯಾಗಿರುವ ತಿರುವಾಯೂರಿನ ದೇವಾಲಯ ಹಾಗೂ ಮಂಟಪ ಶಾಶ್ವತವಾಗಿ ಉಳಿಯುತ್ತವೆ' ಅಂದರಂತೆ. ಆನಂತರದಲ್ಲಿ ನಾಗರತ್ನಮ್ಮ ಹೆಚ್ಚು ಕಾಲ ಬದುಕಲಿಲ್ಲ. ಆಕೆಯ ಕಣ್ಮರೆಯೊಂದಿಗೇ ಮೈಸೂರು ಛತ್ರದ ಕಾಮಗಾರಿಯೂ ನಿಂತು ಹೋಯಿತು.
ಕೇಳಿ: ಆಂಧ್ರ ಮತ್ತು ಮದ್ರಾಸಿನ ಕಲಾಸಕ್ತರು, ಅವತ್ತಿನ ಕಾಲಕ್ಕೇ ನಾಗರತ್ನಮ್ಮ ಅವರನ್ನು ಗಾನಕಲಾ ವಿಶಾರದೆ, ತ್ಯಾಗ ಸೇವಾಸಕ್ತೆ, ವಿದ್ಯಾಸುಂದರಿ ಎಂದೆಲ್ಲಾ ಗೌರವಿಸಿದ್ದರು. ಆಕೆಯ ಭಾಷಾ ಪ್ರೌಢಿಮೆ, ಗಾಯನದ ಮಾಧುರ್ಯ, ಪರೋಪಕಾರದ ಗುಣವನ್ನು ಹೊಗಳುವ ಪುಸ್ತಕಗಳು ತಮಿಳು, ತೆಲುಗು ಹಾಗೂ ಇಂಗ್ಲೀಷ್ನಲ್ಲಿವೆ. ಪ್ರತಿ ವರ್ಷವೂ ನಡೆವ ತ್ಯಾಗರಾಜರ ಆರಾಧನೆಯ ಸಂದರ್ಭದಲ್ಲಿ ಆಕೆಯ ಮಹತ್ಕಾರ್ಯವನ್ನು ಮದ್ರಾಸಿನ ಜನ ತಪ್ಪದೇ ನೆನಪಿಸಿಕೊಳ್ಳುತ್ತಾರೆ.
ಆದರೆ, ಕನ್ನಡದಲ್ಲಿ? ಡಿ.ವಿ.ಜಿ.ಯವರು ಬರೆದ ಒಂದು ಅಧ್ಯಾಯ, ಮೈಸೂರು ವಾಸುದೇವಾಚಾರ್ಯರು ಬರೆದ ಮತ್ತೊಂದು ಅಧ್ಯಾಯವನ್ನು ಬಿಟ್ಟರೆ, ನಾಗರತ್ನಮ್ಮ ಅವರನ್ನು ಕುರಿತು ಹೆಚ್ಚಿನ ಮಾಹಿತಿಯೇ ಇಲ್ಲ. ಈ ತರತಮದ ಬಗ್ಗೆ ಹಿರಿಯ ಸಾಹಿತಿ 'ಪುಸ್ತಕ ಮನೆ'ಯ ಹರಿಹರಪ್ರಿಯ, ವರ್ಷಗಳ ಹಿಂದೆಯೇ ಪ್ರಶ್ನಿಸಿದ್ದಾರೆ. ಯಾರಿಂದಲೂ ಉತ್ತರ ಬಂದಿಲ್ಲ. ಈಗ, ನಾಗರತ್ನಮ್ಮ ಅವರ ಕುರಿತು ಪುಸ್ತಕ ಬರೆವ ಸದಾಶಯದಿಂದ ಹಿರಿಯ ಪತ್ರಕರ್ತ ಜಗದೀಶ ಕೊಪ್ಪ, ಮಾಹಿತಿ ಸಂಗ್ರಹಣೆಗೆಂದು ತಿರುವಾಯೂರಿಗೇ ಹೊರಟು ನಿಂತಿದ್ದಾರೆ.
ರೂಪು, ವಿನಯ, ವಿದ್ಯೆ, ಸಂಪತ್ತು, ತ್ಯಾಗ-ಗಳ ಮುತ್ತೈದೆಯಾಗಿದ್ದ ನಾಗರತ್ನಮ್ಮ ಅವರನ್ನು ಮರೆಯುವುದು ಕನ್ನಡಿಗರಿಗೆ ಶೋಭೆ ತರದ ವಿಚಾರ. ಅಲ್ಲವೇ?

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.