ಅಂಕಣಗಳು

ಬಿಜೆಪಿ ಒಳರಾಜಕೀಯದ ಅನಂತ ಅಲೆಗಳು

ಕರ್ನಾಟಕ ಬಿಜೆಪಿ ಒಂದು ರೀತಿ 'ಆತಿ'ಗಳ ಪ್ರತೀಕ. ಅದು ಯಾವುದೇ ವಿಷಯ ಇರಲಿ...

ಬಿಜೆಪಿ ಒಳರಾಜಕೀಯದ ಅನಂತ ಅಲೆಗಳು
Published On :

ಕರ್ನಾಟಕ ಬಿಜೆಪಿ ಒಂದು ರೀತಿ 'ಆತಿ'ಗಳ ಪ್ರತೀಕ. ಅದು ಯಾವುದೇ ವಿಷಯ ಇರಲಿ. ಒಳ್ಳೆಯದೋ, ಕೆಟ್ಟದ್ದೋ, ಸಕಾರಾತ್ಮಕವೋ, ನಕಾರಾತ್ಮಕವೋ ಎಲ್ಲದರಲ್ಲಿಯೂ ಅತಿಯನ್ನು ಕಾಣುವುದೇ ಅದರ ಜಾಯಮಾನ. ಹೀಗಾಗಿ ಅದು ಉತ್ತುಂಗದಲ್ಲಿರಲಿ ಅಥವಾ ಪಾತಾಳದಲ್ಲಿರಲಿ ಎಲ್ಲಿದ್ದರೂ ಮಾತಾಗುತ್ತದೆ.
ಹಾಗಾದರೆ ಬಿಜೆಪಿ ಈಗ ಯಾವ ವಿಚಾರದಲ್ಲಿ ಅತಿ ಮಾಡುತ್ತಿದೆ? ಈ ಪ್ರಶ್ನೆಗೆ ಉತ್ತರ - ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿನ 'ಒಳರಾಜಕೀಯ.' ಇನ್ನೂ ಚುನಾವಣೆ ಬಂದೇ ಇಲ್ಲ. ಆಗಲೇ ಸಿಕ್ಕಾಪಟ್ಟೆ ರಾಜಕೀಯ ಬಿಜೆಪಿ ಒಳಮನೆಯಲ್ಲಿ ಗರಿಗೆದರಿದೆ. ಇದಕ್ಕೆ ಕಾರಣ ರಾಷ್ಟ್ರಮಟ್ಟದಲ್ಲಿ ಬೀಸುತ್ತಿರುವ ನರೇಂದ್ರ ಮೋದಿ ಅಲೆ. ಈ ಅಲೆಯ ಚುಂಗು ಹಿಡಿದು ವಿಪರೀತ ಕನಸು ಕಟ್ಟುತ್ತಿರುವ ರಾಜ್ಯ ಬಿಜೆಪಿ ನಾಯಕರು ಚುನಾವಣೆ 'ಟಿಕೆಟ್ ರಾಜಕೀಯ'ದ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ.
ಹೌದು, ಒಬ್ಬೊಬ್ಬರಿಗೆ ಒಂದೊಂದು ಯೋಚನೆ, ತಮ್ಮದೇ ಆದ ಚಿಂತನೆ. ಈ ಯೋಚನೆ, ಚಿಂತನೆ ಹಿಂದೆ ತಮಗೇನು ಲಾಭ, ಪರರಿಂದ ಅದಕ್ಕೆ ಆಗಬಹುದಾದ ಅಡ್ಡಿ, ಅದರ ನಿವಾರಣೆ ಹೇಗೆ ಎಂಬುದೇ ತುಂಬಿದೆ. ಹೀಗಾಗಿ ಒಬ್ಬರು ಮತ್ತೊಬ್ಬರ ಕಾಲು ಎಳೆಯುವ, ಆ ಕಾಲೆಳೆಯುವ ಪ್ರಕ್ರಿಯೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ ಸೇರುವ ಬಗ್ಗೆ ಸ್ವಲ್ಪ ಗೊಂದಲದಲ್ಲಿದ್ದದ್ದು ನಿಜ. ಅವರು ಇನ್ನೇನು ಸೇರಿಯೇಬಿಟ್ಟರು ಎನ್ನುವಷ್ಟರಲ್ಲಿ ಸುತ್ತಮುತ್ತಲಿನ ಒಂದಷ್ಟು ಜನ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸಾಧನೆಯನ್ನು ತೋರಿಸಿ ಅವರ ತಲೆ ಕೆಡಿಸಿದರು. ಕೆಜೆಪಿಗೆ ಸಹ ಕರ್ನಾಟಕದ ಆಮ್ ಆದ್ಮಿ ಪಾರ್ಟಿ ಆಗುವ ಎಲ್ಲ ತಾಕತ್ತು ಇದೆ ಎಂಬುದು ಅವರ ಒಕ್ಕಣಿಕೆಯಾಗಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯ ಸಾಧನೆ ಅದು 'ಆಮ್ ಆದ್ಮಿ ನಹೀ' ಎಂಬುದನ್ನು ಶೃತಪಡಿಸಿದೆ. ಹೀಗಾಗಿ ಪ್ರಸ್ತುತ ರಾಷ್ಟ್ರ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭವಿಷ್ಯದ ಲಾಭ-ನಷ್ಟ ತೂಗಿ ನೋಡಿರುವ, ನೋಡುತ್ತಿರುವ ಯಡಿಯೂರಪ್ಪ ಸಂಕ್ರಾಂತಿ ನಂತರ ಬಿಜೆಪಿ ಸೇರುವ ಮಾನಸಿಕ ಸಿದ್ಧತೆಯಲ್ಲಿದ್ದಾರೆ. ರಾಷ್ಟ್ರ ಮುಖಂಡರು ಬಹಿರಂಗವಾಗಿ ಏನೂ ಹೇಳದಿದ್ದರೂ ರಾಜ್ಯ ನಾಯಕರಿಗೆ ಯಡಿಯೂರಪ್ಪ ಬಗ್ಗೆ ಒಲವು ಇರುವುದು ನಾನಾ ಹೇಳಿಕೆಗಳ ಮೂಲಕ ಈಗಾಗಲೇ ದೃಢಪಟ್ಟಿದೆ. ಹೀಗಾಗಿ ಯಡಿಯೂರಪ್ಪ ಬಿಜೆಪಿ ಸೇರುವ ಬಗ್ಗೆ ಈಗ ಯಾವುದೇ ಅನುಮಾನಗಳು ಉಳಿದಿಲ್ಲ.
ಯಡಿಯೂರಪ್ಪನವರು ಪಕ್ಷಕ್ಕೆ ಬರುವುದು ಖಚಿತವಾಗಿರುವ ಬೆನ್ನಲ್ಲೇ ಬಿಜೆಪಿ ಒಳಾಂಗಣದಲ್ಲಿ ನಾನಾ ಆಟಗಳು ಶುರುವಾಗಿವೆ. ಬಿಜೆಪಿ ಮೂಲಕ ರಾಜ್ಯಸಭೆ ಪ್ರವೇಶಿಸಿ ರಾಷ್ಟ್ರ ರಾಜಕಾರಣದಲ್ಲಿ ಮಿನುಗಬೇಕು ಎಂಬ ಹಂಬಲ ಯಡಿಯೂರಪ್ಪನವರದು. ಹೇಗಿದ್ದರೂ ರಾಜ್ಯ ರಾಜಕೀಯದಲ್ಲಿ ಮುಂದಿನ ನಾಲ್ಕೂವರೆ ವರ್ಷ ಬಿಜೆಪಿಗೆ ಅಂತಹ ಕೆಲಸವೇನೂ ಉಳಿದಿಲ್ಲ. ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದು ಬಿಟ್ಟು. ಹೇಗಿದ್ದರೂ ರಾಷ್ಟ್ರ ಮಟ್ಟದಲ್ಲಿ ಮೋದಿ ನಿಮಿತ್ತ ಬಿಜೆಪಿ ಪರ ಗಾಳಿ ಬೀಸುತ್ತಿದೆ. ಇಂಥ ಸಂದರ್ಭದಲ್ಲಿ ದಿಲ್ಲಿ ರಾಜಕಾರಣ ಪ್ರವೇಶ ಲಾಭ ತರಬಹುದು ಎಂಬುದು ಅವರ ಲೆಕ್ಕಾಚಾರ. ಇದಕ್ಕೆ ದಿಲ್ಲಿ ಮಟ್ಟದಲ್ಲೂ ಪೂರಕ ಪ್ರತಿಕ್ರಿಯೆಗೆ ಅಸ್ಪದವಿದೆ. ಲಾಲ್‌ಕೃಷ್ಣ ಆಡ್ವಾಣಿ ಅವರ ಪರಮಾಪ್ತ ಅನಂತಕುಮಾರ್ ಅವರಿಗೆ ಪರ್ಯಾಯವಾಗಿ ಮತ್ತೊಬ್ಬ ರಾಷ್ಟ್ರ ನಾಯಕನನ್ನು ರೂಪಿಸುವುದು ಮೋದಿ ಅವರ ಇರಾದೆ. ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಅನಂತಕುಮಾರ್ ಅವರನ್ನು ರಾಷ್ಟ್ರ ಮಟ್ಟದಲ್ಲಿ ಸ್ವಲ್ಪ ಹಿಂದಕ್ಕೆ ತಳ್ಳುವ ತಂತ್ರ ಇದರ ಹಿಂದಿದೆ. ಹಾಗೆಂದು ಯಡಿಯೂರಪ್ಪನವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಯಾರಿಗೂ ಇಷ್ಟವಿಲ್ಲ. ಏಕೆಂದರೆ ಚುನಾವಣೆಗೆ ಸ್ಪರ್ಧಿಸಿದರೆ ಯಡಿಯೂರಪ್ಪ ತಮ್ಮ ಕ್ಷೇತ್ರದಲ್ಲಿ ಗಮನ ಕೇಂದ್ರೀಕರಿಸಬೇಕಾಗುತ್ತದೆ. ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ನಿಮಿತ್ತ ಪ್ರವಾಸ ಮಾಡಲು ಆಗುವುದಿಲ್ಲ. ರಾಜ್ಯದ ಬಹುಸಂಖ್ಯಾತ ಲಿಂಗಾಯತ ಸಮುದಾಯದ ಮುಂಚೂಣಿ ನಾಯಕರೆನಿಸಿರುವ ಯಡಿಯೂರಪ್ಪನವರು ಎಲ್ಲೋ ಒಂದು ಕ್ಷೇತ್ರಕ್ಕೆ ಸೀಮೀತವಾದರೆ ಅದರಿಂದ ಪಕ್ಷಕ್ಕೆ ನಷ್ಟವೇ ಹೆಚ್ಚು. ಹೀಗಾಗಿ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಅವರ ಸೇವೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು, ನಂತರ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವುದು ಸೂಕ್ತ ಎಂಬುದು ರಾಜ್ಯ ನಾಯಕರ ದೂರಾಲೋಚನೆಯಾಗಿದೆ. ಇದರ ಹಿಂದೆ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡೂ ಆಡಗಿದೆ.
 ಅನಂತಕುಮಾರ್ ಅವರಿಗೆ ಯಡಿಯೂರಪ್ಪನವರ ಶಕ್ತಿ-ಸಾಮರ್ಥ್ಯ, ಅವರು ರಾಷ್ಟ್ರ ರಾಜಕೀಯಕ್ಕೆ ಬಂದರೆ ತಮಗಾಗುವ ನಷ್ಟವೇನು ಎಂಬುದರ ಬಗ್ಗೆ ಸಂಪೂರ್ಣ ಅರಿವಿದೆ. ಅಲ್ಲದೇ ವಿಧಾನಸಭೆಯಲ್ಲಿ ನಾಲ್ಕೂವರೇ ವರ್ಷ ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಅನೇಕ ಬಿಜೆಪಿ ಶಾಸಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳಾಗ ಈಶ್ವರಪ್ಪ, ಅಶೋಕ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತಿತರ ಜನ ಪ್ರಭಾವಿ ಶಾಸಕರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದರೆ ಪಕ್ಷಕ್ಕೆ ಲಾಭ, ಹೆಚ್ಚು ಸ್ಥಾನಗಳು ಸಿಗುತ್ತವೆ ಎಂಬ ಪೂರಕ ಚಿಂತನೆ ರಾಷ್ಟ್ರ ನಾಯಕರದ್ದೂ ಆಗಿದೆ. ಇದು ಅನಂತಕುಮಾರ್ ಅವರಿಗೆ ತೀರಾ ಯೋಚನೆ ತಂದಿಟ್ಟಿದೆ. ಇವರೆಲ್ಲ ರಾಷ್ಟ್ರ ರಾಜಕಾರಣಕ್ಕೆ ಬಂದಿದ್ದೇ ಆದಲ್ಲಿ ತಾವು ಈವರೆಗೂ ಸ್ಥಾಪಿಸಿರುವ ಸಾಮ್ರಾಜ್ಯಕ್ಕೆ ಲಗ್ಗೆ ಹಾಕುತ್ತಾರೆ. ಇದರಿಂದ ದಿಲ್ಲಿಯಲ್ಲಿ ತಮ್ಮ ಹವಾ ಎಲ್ಲಿ ಕಡಿಮೆ ಆಗುತ್ತದೋ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಬರುವ ಸೂಚನೆಗಳು ಸ್ಪಷ್ಟವಾಗಿರುವ ಸಂದರ್ಭದಲ್ಲಿ ಮಂತ್ರಿ ಮಂಡಲಕ್ಕೆ ತಮಗೆ ಸ್ಪರ್ಧಿಗಳು ಸೃಷ್ಟಿಯಾಗುತ್ತಾರೋ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಹೀಗಾಗಿ ಅವರೊಂದು ಉಪಾಯ ಮಾಡಿದ್ದಾರೆ. ಶಾಸಕರಿಗೆ ಲೋಕಸಭೆ ಚುನಾವಣೆ ಟಿಕೆಟ್ ಕೊಡಬಾರದು ಎಂಬ ನಿರ್ಣಯ ಮಾಡಿಸಲು ಹೊರಟಿದ್ದಾರೆ. ರಾಜ್ಯ ನಾಯಕರ ಮೂಲಕ ದಿಲ್ಲಿ ಮುಖಂಡರನ್ನು ಇದಕ್ಕೆ ಒಪ್ಪಿಸುವ ಪ್ರಯತ್ನ ಪ್ರಗತಿಯಲ್ಲಿದೆ. ಶಾಸಕರಿಗೆ ಟಿಕೆಟ್ ಕೊಟ್ಟಿದ್ದೇ ಆದಲ್ಲಿ ಅವರೆಲ್ಲ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಮರುಚುನಾವಣೆಯಲ್ಲಿ ಏನಾಗುತ್ತದೋ ಗೊತ್ತಿಲ್ಲ. ಪ್ರತಿಕೂಲ ಫಲಿತಾಂಶ ಬಂದರೆ ರಾಜ್ಯದಲ್ಲಿ ಪಕ್ಷದ ಶಕ್ತಿ, ಸಾಮರ್ಥ್ಯ ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ಸಬೂಬನ್ನು ಈ ನಿರ್ಣಯಕ್ಕೆ ನೆಪವಾಗಿ ಜೋಡಿಸಿದ್ದಾರೆ.
ಅದೂ ಅಲ್ಲದೇ ಯಡಿಯೂರಪ್ಪ ಇರಲಿ, ಈಶ್ವರಪ್ಪ, ಅಶೋಕ್, ಲಿಂಬಾವಳಿ ಅವರೆಲ್ಲಿ ಚುನಾವಣೆಗೆ ನಿಂತರೆ ಅವರವರ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಗ್ನರಾಗುತ್ತಾರೆ. ಅನಂತಕುಮಾರ್ ಪ್ರತಿನಿಧಿಸುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಬ್ರಾಹ್ಮಣರಷ್ಟೆ ಅಲ್ಲದೇ ಒಕ್ಕಲಿಗ, ಲಿಂಗಾಯತ, ಕುರುಬ ಹಾಗೂ ಪರಿಶಿಷ್ಟರ ಮತಗಳು ನಿರ್ಣಾಯಕ. ಈ ಮತಗಳು ಬೇಕು ಎಂದರೆ ಆಯಾ ಸಮುದಾಯದ ನಾಯಕರೆಲ್ಲ ತಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಬೇಕು. ಈಗ ಅವರೇ ಚುನಾವಣೆಗೆ ನಿಂತರೆ ಗತಿಯೇನು ಎಂಬ ಭೀತಿಯೂ ಅವರನ್ನು ಕಾಡುತ್ತಿದೆ.
ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ವಿರುದ್ಧ ಅನಂತಕುಮಾರ್ ಪತರುಗುಟ್ಟಿ ಹೋಗಿದ್ದರು. ಆಗ ಅನಂತಕುಮಾರ್ ಅವರ ಕೈ ಹಿಡಿದಿದ್ದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಅವರು ಕಾಂಗ್ರೆಸ್‌ನಿಂದ ಕರೆತಂದ ಸೋಮಣ್ಣ ಹಾಗೂ ಅಶೋಕ್. ತಾವು ಮುಖ್ಯಮಂತ್ರಿಯಾಗಿದ್ದೂ ಅನಂತಕುಮಾರ್ ಸೋತರೆ ಅದರ ಹೊಣೆ ತಮಗೆ ತಗಲಿಕೊಳ್ಳುತ್ತದೆ ಎಂದು ಭಾವಿಸಿದ ಯಡಿಯೂರಪ್ಪ ಬೆಂಗಳೂರು ದಕ್ಷಿಣದಲ್ಲಿ ಸಮುದಾಯದ ಮತದಾರರ ಮೇಲೆ ಪ್ರಭಾವ ಹೊಂದಿದ್ದ ಸೋಮಣ್ಣ ಅವರನ್ನು ಕರೆತಂದರು. ಒಂದೊಮ್ಮೆ ಸೋಮಣ್ಣ ಬಿಜೆಪಿಗೆ ಬರದಿದ್ದರೆ ಅನಂತಕುಮಾರ್ ಖಂಡಿತವಾಗಿಯೂ ಸೋಲುತ್ತಿದ್ದರು. ತದನಂತರ ಇಲ್ಲಿಯೂ ಲಿಂಗಾಯತ ಮತಗಳ ಮೇಲೆ ಪ್ರಾಬಲ್ಯ ಸಾಧಿಸಿದ ಯಡಿಯೂರಪ್ಪ, ಕೆಜೆಪಿಗೆ ಬರಲಿಲ್ಲ ಎಂಬ ಕಾರಣಕ್ಕೆ ಸೋಮಣ್ಣ ಅವರನ್ನೂ ವಿಧಾನಸಭೆ ಚುನಾವಣೆಯಲ್ಲಿ 'ಸುಪಾರಿ' ಕೊಟ್ಟು ಸೋಲಿಸಿದ್ದು ಬೇರೆ ಮಾತು.
ಇಲ್ಲಿ ಅನಂತಕುಮಾರ್ ಅವರಿಗೆ ಇನ್ನೂ ಒಂದು ಅಪಾಯ ಎದುರಾಗಿದೆ. ತಾವು ಬಿಜೆಪಿ ಬಿಟ್ಟು ಹೋಗಲು ಅನಂತಕುಮಾರ್ ಅವರೇ ಪ್ರಮುಖ ಕಾರಣ ಎಂಬ ಕೋಪ ಯಡಿಯೂರಪ್ಪ ಅವರಲ್ಲಿ ಈಗಲೂ ಕುದಿಯುತ್ತಿದೆ. ಈ ಕೋಪ ರೋಷ-ದ್ವೇಷದ ಸ್ವರೂಪ ಪಡೆವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಯಡಿಯೂರಪ್ಪನವರು ಹೀಗೇ ಎಂದು ಹೇಳುವಂತಿಲ್ಲ. ಅದೇ ರೀತಿ ಸೋಮಣ್ಣ ಅವರಿಗೂ ಅನಂತಕುಮಾರ್ ಮೇಲೆ ಸೇಡು ಮಡುಗಟ್ಟಿದೆ. ಯಾರ ಗೆಲುವಿಗಾಗಿ ಬಿಜೆಪಿಗೆ ಬಂದೇನೋ ಅಂತಹ ಅನಂತಕುಮಾರ್ ಕೂಡ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಮಗೆ ಕೈಕೊಟ್ಟರು ಎಂಬ ಸಿಟ್ಟು ನೆತ್ತಿ ಮೇಲೆ ಕೂತಿದೆ. ಒಂದೊಮ್ಮೆ ಯಡಿಯೂರಪ್ಪ ಹಾಗೂ ಸೋಮಣ್ಣ ಇಬ್ಬರೂ ಪ್ರತೀಕಾರಕ್ಕೆ ನಿಂತರೆ ಆ ಭಗವಂತ ಕೂಡ ಅನಂತಕುಮಾರ್ ಅವರನ್ನು ಕಾಪಾಡಲಾರ. ಇದನ್ನು ಅರಿತಿರುವ ಕಾಂಗ್ರೆಸ್ ಪ್ರಭಾವಿ ಆಭ್ಯರ್ಥಿಯನ್ನೇ ಅನಂತಕುಮಾರ್ ವಿರುದ್ಧ ನಿಲ್ಲಿಸಲು ಯೋಚಿಸಿದೆ. ಉದ್ಯಮಿ ನಂದನ್ ನಿಲೇಕಣಿ, ಹಿಂದಿನ ಚುನಾವಣೆಯಲ್ಲಿ ಅನಂತಕುಮಾರ್ ಅವರಿಗೆ ಗಂಜಿ-ನೀರು ಕುಡಿಸಿದ್ದ ಸಚಿವ ಕೃಷ್ಣಬೈರೇಗೌಡ ಸದ್ಯಕ್ಕೆ ಕಾಂಗ್ರೆಸ್ ಪರಿಶೀಲನೆಯಲ್ಲಿರುವ ಅಭ್ಯರ್ಥಿಗಳು. ಹೀಗಾಗಿ ಅನಂತುಕುಮಾರ್ ಅವರು ಪಕ್ಷದ ಒಳಗಿನ ಹಾಗೂ ಹೊರಗಿನ 'ಮಿತ್ರ'ರ ಬಗ್ಗೆ ಬಹಳ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲವೂ ಸಾಮಾನ್ಯ ಸ್ಥಿತಿಯಲ್ಲೇ ಇದ್ದಿದ್ದರೆ ಪರವಾಗಿರಲಿಲ್ಲ. ಏಕೆಂದರೆ ಚುನಾವಣೆ ಎಂಬುದು ಬಾಕಿ ಲೆಕ್ಕ ಚುಕ್ತಾ ಮಾಡುವ ಸಂದರ್ಭ. ಯಾರು ಯಾರಿಗೆ ಏನನ್ನೋ ಕೊಟ್ಟಿರುತ್ತಾರೋ ಅದನ್ನು ಬಡ್ಡಿಸಮೇತ ವಾಪಸು ಕೊಡಲು ಇದಕ್ಕಿಂತ ಬೇರೆ ಅವಕಾಶ ಇರುವುದಿಲ್ಲ. ಹೀಗಾಗಿ ವೈರ, ಗೆಳೆತನ ಎಲ್ಲವೂ ಇಲ್ಲಿಯೇ ಪ್ರತಿಬಿಂಬಿತವಾಗುತ್ತದೆ.
ಬಿಜೆಪಿ ವಲಯದಲ್ಲಿ ಇನ್ನೂ ಒಂದು ವಿಷಯ ಚಾಲ್ತಿಗೆ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 200 ಸೀಟುಗಳಿಗಿಂತ ಹೆಚ್ಚಿಗೆ ಬಂದರೆ ನರೇಂದ್ರ ಮೋದಿ ಅವರೇ ಪ್ರಶ್ನಾತೀತ ಪ್ರಧಾನಿ. ಅಕಸ್ಮಾತ್ ಅದಕ್ಕಿಂತ ಕಡಿಮೆ ಬಂದಿದ್ದೇ ಆದಲ್ಲಿ ಪರ್ಯಾಯ ನಾಯಕನ ಹುಡುಕಾಟ ನಡೆಯುತ್ತದೆ. ಆಗ ಸಮ್ಮಿಶ್ರ ಸರಕಾರದ ಅಂಗಪಕ್ಷಗಳ 'ಚೌಕಾಸಿ' ಪ್ರಧಾನಿ ಅಭ್ಯರ್ಥಿಯಾಗಿ ತಾವೇ ಹೊರಹೊಮ್ಮುವ ಅವಕಾಶವಿದೆ ಎಂದು ಅನಂತಕುಮಾರ್ ಭಾವಿಸಿದ್ದಾರಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಚುನಾವಣೆಯನ್ನು ಕಳೆದುಕೊಳ್ಳಬಾರದು, ಹಿಂದೆ ತಮ್ಮಿಂದ 'ಉಪಕೃತ' ಆದವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರ ಪಾಡಿಗೆ ಇರಲು ಅವರಿಗೆ ಬಿಡಬಾರದು, ಅವರ ಜತೆಗಿನ ಅಂತರವನ್ನು ನಿವಾರಿಸಿಕೊಳ್ಳಬೇಕು ಎಂಬ ಧಾವಂತಕ್ಕೆ ಬಿದ್ದಿದ್ದಾರೆ. ಹೀಗಾಗಿ ದಿಲ್ಲಿಯಲ್ಲಿ ತಮ್ಮ 'ಸ್ಥಾನಮಾನ' ಖಾತರಿಪಡಿಸಿಕೊಳ್ಳಲು ಸಾಧ್ಯ ಇರುವ ಎಲ್ಲ ಒಳತಂತ್ರಗಳನ್ನು ರೂಪಿಸುತ್ತಿದ್ದಾರೆ. ಒಂದು ಕಡೆ ತಮಗೆ ಸ್ಪರ್ಧಿಗಳು ಉದ್ಭವಿಸಬಾರದು, ಅದೇ ಕಾಲಕ್ಕೆ ಅವರನ್ನೆಲ್ಲ ತಮ್ಮ ಗೆಲುವಿಗೆ ಬಳಸಿಕೊಳ್ಳಬೇಕು ಎಂಬ ಎಣಿಕೆ ಹಿಂದೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆವ ತಂತ್ರವಿದೆ.
ರಾಜ್ಯ ಬಿಜೆಪಿ ನಾಯಕರಿಗೆ ಅನಂತಕುಮಾರ್ ಗುಣ ಪರಿಚಯ ಇಲ್ಲದೇ ಏನಿಲ್ಲ. ಇವರಂತೆಯೇ ಅವರೂ ಕೂಡ ತಮ್ಮ ಹಿತ ಕುರಿತೇ ಯೋಚಿಸುತ್ತಿದ್ದಾರೆ. ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಏಕೆಂದರೆ ರಾಜಕಾರಣ ಎಂಬುದು ಜನಸೇವೆ ಎಂಬ ಪಾರಿಭಾಷೆಯನ್ನು ಮೀರಿ ಅಧಿಕಾರದ ಅವಕಾಶಗಳ ಅನ್ವೇಷಣೆಯ ಪ್ರತಿರೂಪ ಎಂಬಲ್ಲಿಗೆ ಬಂದು ನಿಂತಿದೆ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ, ಬಿಜೆಪಿಯೂ ಸೇರಿದಂತೆ.
ಲಗೋರಿ: ನೇಪಥ್ಯದಲ್ಲಿ ರಾಜಕೀಯ ಮಾಡುವವರು ತೆರೆಮರೆಯಲ್ಲೇ ಇರುತ್ತಾರೆ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.