ಅಂಕಣಗಳು

ನಲ್ಲಿಯಲ್ಲಿ ಮೋರಿ ನೀರೂ, ಆರ್ವಿ ಬದ್ಲು ಸಾಗರ್‌ಗೆ ಫೋನೂ!

Published On :

ಅಧಿಕಾರ ಇಲ್ಲದಿದ್ದರೆ ಜನನಾಯಕರ ಬಗ್ಗೆ ಜನರಿರಲಿ ಅಧಿಕಾರಿಗಳೂ ಕ್ಯಾರೇ ಅನ್ನುವುದಿಲ್ಲ ಎನ್ನುವುದಕ್ಕೆ ಇಲ್ಲೊಂದು ನಿದರ್ಶನ. ಕಾಂಗ್ರೆಸ್‌ನ ಆರ್.ವಿ. ದೇವರಾಜ್ ಬೆಂಗಳೂರು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ. ಆದರೆ ಇನ್ನೂ ಕೆಲವು ಕಡೆ ಬೋರ್ಡ್‌ಗಳಲ್ಲಿ ಮಾಜಿ ಎಂಎಲ್‌ಎ ಬಿಜೆಪಿಯ ಹೇಮಚಂದ್ರ ಸಾಗರ್ ಅವರ ಹೆಸರೇ ರಾರಾಜಿಸುತ್ತಿದೆ. ಇದನ್ನು ಕಂಡ ಪ್ರಜೆಯೊಬ್ಬರು ಇವರೇ ಹಾಲಿ ಶಾಸಕರು ಎಂದು ತಪ್ಪು ತಿಳಿದುಕೊಂಡು ಹೇಮಚಂದ್ರ ಸಾಗರ್ ಅವರಿಗೆ ಫೋನ್ ಮಾಡಿದ್ದಾರೆ. 'ಸಾರ್ ನಮ್ ಮನೆ ಕೊಳಾಯಿಯಲ್ಲಿ ಚರಂಡಿ ನೀರು ಮಿಕ್ಸ್ ಆಗಿ ಬರ್ತಿದೆ. ಈ ಪ್ರಾಬ್ಲಮ್ ಸಾಲ್ವ್ ಮಾಡಿಕೊಡಿ' ಅಂತ ಕೇಳಿಕೊಂಡಿದ್ದಾರೆ. ಹೇಮಚಂದ್ರ ಸಾಗರ್ ಅವರು ಶಾಸಕರಿರಲಿ, ಕಳೆದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ಟೇ ಸಿಕ್ಕಿರಲಿಲ್ಲ. ಟಿಕೆಟ್ ಸಿಕ್ಕ ಉದಯ ಗರುಡಾಚಾರ್ ಸೋತಿದ್ದಾರೆ. ಆ ಮಾತು ಪಕ್ಕಕ್ಕಿರಲಿ, ಪ್ರಜೆ ಫೋನ್ ಮಾಡಿದ್ದರಿಂದ ಖುಷ್ ಆದ ಹೇಮಚಂದ್ರ ಸಾಗರ್ ಅದೇ ಹಿಂದಿನ ಎಂಎಲ್‌ಎ ಗತ್ತಿನಲ್ಲಿ ಪಾಲಿಕೆಯ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿ ತಕ್ಷಣ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ದಾರೆ. ಈ ತಾಕೀತು ಸ್ವಲ್ಪ ಏರಿದ ಧ್ವನಿಯಲ್ಲೇ ಇತ್ತಂತೆ. ಇದರಿಂದ ಕೊಂಚ ಮುಜುಗರ ಹಾಗೂ ಕೋಪಕ್ಕೆ ಒಳಗಾದ ಆ ಆಧಿಕಾರಿ, 'ಸಾರ್, ಈ ಸಮಸ್ಯೆ ಬಗೆಹರಿಸೋದಕ್ಕೆ ಎಂಎಲ್‌ಎ ದೇವರಾಜ್ ಸಾಹೇಬರು ಈಗಾಗಲೇ ಹೇಳಿದ್ದಾರೆ. ಅವರು ಕೂಡ ಸ್ಪಾಟ್ ವಿಸಿಟ್ ಮಾಡಿದ್ದಾರೆ. ನಾವು ಕ್ರಮ ಕೈಗೊಳ್ತಾ ಇದ್ದೀವಿ' ಅಂತ ಹೇಳಿದ್ರಂತೆ. ಅಧಿಕಾರಿ ಉತ್ತರ ಕೊಟ್ಟ ಸ್ಟೈಲ್, 'ನಮ್ ಕೆಲ್ಸ ನಾವು ಮಾಡ್ತೀವಿ. ನೀವು ಸ್ಕೋಪ್ ತಗೋಬೇಡಿ. ಆರಾಮವಾಗಿ ಮನೇಲಿ ರೆಸ್ಟ್ ತಗೊಳ್ಳಿ' ಎಂಬಂತೆ ಇತ್ತಂತೆ!

ಇದೊಳ್ಳೆ ನಾಯಿಪಾಡು
ಮೈಸೂರಿನ ಸಿಎಆರ್ ಮೈದಾನದಲ್ಲಿ ಶ್ವಾನಗಳಿಗೆ ಹೊಸದಾಗಿ ಮನೆಗಳನ್ನು ನಿರ್ಮಿಸಲಾಗಿದೆ. ಈ ಮನೆಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಲ್.ಕೆ. ಪಚಾವೋ ಉದ್ಘಾಟಿಸಲು ಆಗಮಿಸಿದ್ದರು. ಪೊಲೀಸ್ ಗಾಂಭೀರ್ಯ ಮತ್ತು ಶಿಸ್ತನ್ನು ಎಲ್ಲ ಸಂದರ್ಭಗಳಲ್ಲಿ ಕಾಪಾಡಿಕೊಂಡು ಬರುವುದು ಮೆಚ್ಚಬಹುದಾದ ಸಂಗತಿಯೇ. ಆದರೆ ಈ ಪ್ರಶಂಸಾರ್ಹ ನಡೆ ಕೆಲವೊಮ್ಮೆ ಕೈಕೊಡುತ್ತದೆ. ಇಲ್ಲೂ ಹಾಗೆಯೇ ಆಯಿತು. ಪಚಾವೋ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರು ಶ್ವಾನಗಳಿಗೆ ಹಸ್ತಲಾಘವ ಕ್ಷಮಿಸಿ, ಶ್ವಾನಗಳ ಮುಂಗಾಲು ಕುಲಕಿ ಪರಿಚಯ ಮಾಡಿಕೊಳ್ಳಲು ಹೋದರು. ಪೊಲೀಸರು ಯಾರ್ಯಾರಿಗೆಲ್ಲ ಆವಾಜ್ ಹಾಕಿ ಹೆದರಿಸಿದ್ದಿರಬಹುದು. ಆದರೆ ಶ್ವಾನಗಳ ವಿಷಯದಲ್ಲಿ ಇದು ವರ್ಕೌಟ್ ಆಗಬೇಕೆಂದೇನಿಲ್ಲವಲ್ಲ. ನಿಮ್ಮ ರೂಢಿ ನಿಮಗಾದರೆ ನಮ್ಮ ಜಾಯಮಾನ ನಮಗೆ ಆಪ್ತ ಎಂಬಂತೆ ಅವು ಬೌ ಬೌ ಎಂದು ತಮ್ಮ ಅವಾಜು ಶುರುಮಾಡಿದವು. ಅಲ್ಲಿಗೆ ಹಸ್ತಲಾಘವ ಕಾರ್ಯಕ್ರಮ ಮೊಟಕು.

ಸಚಿವ ಯು.ಟಿ. ಖಾದರ್ ಹಳೆಯ 'ಜೋಕು'ಮಾರ್!
ರಾಜಕಾರಣಿಗಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸದರೆ ಮಾತಿನ ಅಬ್ಬರಕ್ಕೇನೂ ಕೊರತೆ ಇರುವುದಿಲ್ಲ. ಪ್ರತಿಪಕ್ಷದವರಾದರೆ ಸರ್ಕಾರವನ್ನು ತೆಗಳುತ್ತಾರೆ. ಆಡಳಿತ ಪಕ್ಷದವರಾದರೆ ತಮ್ಮ 'ಸಾಧನೆ'ಗಳನ್ನು ಮೆಲುಕು ಹಾಕುತ್ತಾ ಒಣಜಂಭ ಕೊಚ್ಚಿಕೊಳ್ಳುತ್ತಾರೆ. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಮಾತ್ರ ಸ್ವಲ್ಪ ಡಿಫರೆಂಟ್. ತಮ್ಮ ಖಾತೆಗೆ ತಕ್ಕಂತೆ ಒಂದೆರಡು ಹಳಸಲು ಜೋಕ್ ಹೇಳಿ 'ನಗುವುದೇ ಸ್ವರ್ಗ' ಎಂದು 'ಹಿತವಚನ' ಹೇಳಲು ಶುರು ಮಾಡಿದ್ದಾರೆ. ಅದರಲ್ಲೇ ಜನರ 'ಆರೋಗ್ಯ' ಕಾಪಾಡಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಅವರ ಭಾಷಣದಲ್ಲಿ 'ಪದೇ ಪದೇ' ಕೇಳಿ ಬರುವ ಒಂದೆರಡು ಜೋಕ್‌ಗಳ ಝಲಕ್ ಕೇಳಿ. 'ಬಡವ 2000 ಕಳುಹಿಸುವಂತೆ ದೇವರಿಗೆ ಪತ್ರ ಬರೆದ. ಪದೇ ಪದೇ ಪತ್ರ ಹರಿದುಹಾಕಿದ ಅಂಚೆಯಣ್ಣ ಮತ್ತೊಮ್ಮೆ ಪತ್ರ ಕಂಡಾಗ ಮರುಕ ಎನಿಸಿ ಆತನ ಹೆಸರಿಗೆ ತನ್ನ ಕೈಯಿಂದಲೇ 1000 ಕಳುಹಿಸಿದ. ಹಣ ಬಂದದ್ದು ಕಂಡು ಖುಷಿಯಾಗುವ ಬದಲು ಸಿಟ್ಟಾದ ಬಡವ, ನಾನು ದೇವರಲ್ಲಿ 2000 ಕೇಳಿದ್ದೆ. ಆ ಫಟಿಂಗ ಪೋಸ್ಟ್‌ಮ್ಯಾನ್ 1000 ಇಟ್ಕೊಂಡು ಉಳಿದದ್ದನ್ನು ಕಳಿಸಿದ್ದಾನೆ'. ಇನ್ನೊಂದು ಜೋಕ್ ಕೇಳಿ, 'ಒಮ್ಮೆ ಚೀನಾದ ನಾಯಿ ಭಾರತ ಗಡಿ ಪ್ರವೇಶಿಸಿತ್ತು. ಯಾಕೆ ಬಂದದ್ದು ಎಂದು ಭಾರತದ ನಾಯಿ ಪ್ರಶ್ನಿಸಿದಾಗ, ಚೀನಾ ನಾಯಿ ಹೇಳಿದ್ದು- ಚೀನಾದಲ್ಲಿ ಬೊಗಳಲು ಅವಕಾಶ ಇಲ್ಲ'! ಇವೆರಡೂ ಜೋಕ್ ಕೇಳಿ ಕೇಳಿ ಸುಸ್ತಾದ ಮಂಗಳೂರಿನ ಜನತೆ 'ಜೋಕ್‌'ರ ಭಾಷಣ ಕೇಳುವುದು ಕಷ್ಟ ಕಷ್ಟ ಎನ್ನುತ್ತಿದ್ದಾರೆ!

ರಾಜ್ಯಪಾಲರ 'ದೂರು'ದೃಷ್ಟಿ!
ನಮ್ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಭಲೇ ಪಾಕಡ ಇದ್ದಾರೆ. ಒಂದ್ಸಾರಿ ಸಿದ್ರಾಮಯ್ಯ ಸರಿಯಾಗಿ ಕೆಲ್ಸ ಮಾಡಲ್ಲ ಅಂತಾರೆ. ಅದು ಮರುದಿನ ಪತ್ರಿಕೆಗಳಲ್ಲಿ ಬರ್ತಿದ್ದ ಹಾಗೆ ಸಿಎಂ ಚೆನ್ನಾಗಿಯೇ ಕೆಲಸ ಮಾಡ್ತಿದ್ದಾರೆ. ಆದರೆ ಅವರ ಸಂಪುಟದ ಸದಸ್ಯರು ಸರಿಯಿಲ್ಲ ಅಂತಾರೆ. ಇವರ ಡಿಸೈನ್, ಡಿಸೈನ್ ಹೇಳಿಕೆಗಳನ್ನು ನೋಡಿ ಜನ ಡಿಸೈನ್, ಡಿಸೈನ್ ಆಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ. ಇದು ಇಲ್ಲಿನ ಮಾತಾಯಿತು. ಈಗ ಸಿದ್ರಾಮಯ್ಯ, ಮತ್ತವರ ಸರ್ಕಾರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರಕ್ಕೆ ಅವರೊಂದು ಮಾರ್ಗ ಕಂಡುಕೊಂಡಿದ್ದಾರೆ. ಅವರು ಹಿಂದೆ ಕೇಂದ್ರ ಸಚಿವರಾಗಿದ್ದಾಗ ದಿಲ್ಲಿ ಪತ್ರಕರ್ತರ ಸ್ನೇಹ ಸಂಪಾದಿಸಿದ್ದಾರೆ. ಈ ಪತ್ರಕರ್ತರ ಪೈಕಿ ದಿಲ್ಲಿಯವರೂ ಇದ್ದಾರೆ. ಜತೆಗೆ ಬೇರೆ-ಬೇರೆ ರಾಜ್ಯಗಳಿಂದ ಹೋಗಿ ಅಲ್ಲಿ ಸೆಟಲ್ ಆಗಿರುವ ಪತ್ರಕರ್ತರೂ ಸೇರಿದ್ದಾರೆ.ಅವರಲ್ಲಿ ಕೆಲವರು ಬೆಂಗಳೂರಿಗೆ ಬಂದಾಗ ಸೌಜನ್ಯ ನೆಪದಲ್ಲಿ ಭೇಟಿ ಮಾಡುತ್ತಿದ್ದಾರೆ. ಇನ್ನೂ ಕೆಲವರನ್ನು ರಾಜ್ಯಪಾಲರೇ ಕರೆಸಿಕೊಳ್ಳುತ್ತಿದ್ದಾರೆ. ಹಾಗೋ, ಹೀಗೋ, ಹೇಗೋ ರಾಜಭವನಕ್ಕೆ ಬಂದವರ ಬಳಿಯೆಲ್ಲ ಸಿದ್ರಾಮಯ್ಯ ಸರ್ಕಾರದ ಬಗ್ಗೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಸಿದ್ರಾಮಯ್ಯನೂ ಸರಿಯಿಲ್ಲ. ಅವರ ಮಂತ್ರಿಗಳೂ ಸರಿಯಿಲ್ಲ ಅನ್ನುತ್ತಿದ್ದಾರಂತೆ. ತಾವು ಹೇಳಿದ್ದು ಇವತ್ತಲ್ಲ ನಾಳೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆಯುತ್ತದೆ, ಹೈಕಮಾಂಡ್ ಮಟ್ಟದಲ್ಲೂ ಸಿದ್ರಾಮಯ್ಯಗೆ ಡ್ಯಾಮೇಜ್ ಆಗುತ್ತದೆ ಎಂಬ ನಂಬಿಕೆ ಅವರದು. ಸಿದ್ರಾಮಯ್ಯಗೆ ಡ್ಯಾಮೇಜ್ ಆಗುತ್ತದೋ ಅಥವಾ ಹಾಗೆಂದುಕೊಂಡಿರುವ ರಾಜ್ಯಪಾಲರ ನಂಬಿಕೆಗೇ ಡ್ಯಾಮೇಜ್ ಆಗುತ್ತದೋ ವಸಿ ಕಾಯ್ದು ನೋಡ್ಬೇಕು!

- ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.