ಅಂಕಣಗಳು

ಆಕರ್ಷಣೆಯೇ ಬದುಕಲ್ಲ ಎಂಬುದೇಕೆ ಅರ್ಥವಾಗಲ್ಲ?

Published On :

ಇದು ಇಸವಿ 2000ದ ಮಾತು. ಅವತ್ತಿಗೆ, ಎಲ್ಲ ಹುಡುಗಿಯರ ಮನಸ್ಸಿನ ತುಂಬಾ ಇದ್ದವನು ಅವನೇ: ಹೃತಿಕ್ ರೋಷನ್! ಅವತ್ತಿನ ಸಂದರ್ಭಕ್ಕೆ, ಅವನು ಬೆಳ್ಳಿತೆರೆಯ ಮೇಲೆ ಝಗ್ಗನೆ ಹೊತ್ತಿಕೊಂಡಿದ್ದ ನಕ್ಷತ್ರವಾಗಿದ್ದ. ಹೆಚ್ಚಿನ ಹುಡುಗಿಯರು ಅವನನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಆದರೂ ಆರಾಧಿಸುತ್ತಿದ್ದರು. ಗುಟ್ಟಾಗಿ ಪ್ರೀತಿಸುತ್ತಿದ್ದರು. ಅವನ ಚಿತ್ರವನ್ನೇ ಆಸೆಯಿಂದ, ಅಸೂಯೆಯಿಂದ ನೋಡುತ್ತಿದ್ದರು. ಆಗ, ಹೃತಿಕ್ ರೋಷನ್ ಹೆಸರಿನ ಕ್ರೇಜ್ ಹೇಗಿತ್ತು ಅಂದರೆ, ಹಿಂದಿ ಚಿತ್ರರಂಗದ ಉಳಿದೆಲ್ಲ ಹೀರೋಗಳ ಹೆಸರನ್ನು ಹುಡುಗಿಯರು ಕೆಲವು ದಿನಗಳ ಕಾಲ ಮರೆತೇ ಬಿಟ್ಟರು. ಪರಿಣಾಮವಾಗಿ, ಡಿಗ್ರಿ ಓದುವವಳ ನೋಟ್‌ಬುಕ್‌ನ ಮೊದಲ ಪುಟದಲ್ಲೇ ಅವನಿಗೆ ಜಾಗ ಸಿಕ್ಕಿಬಿಟ್ಟಿತ್ತು. ಪಿಯೂಸಿ ಓದುವವಳ ಕನಸಿಗೆ ನುಗ್ಗಲೂ ಅವನಿಗೆ ಪರವಾನಿಗೆ ಇತ್ತು. ಅವನ ಮೇಲಿನ ಆಸೆಯಿಂದಾಗಿಯೇ, 'ಕಹೋ ನಾ ಪ್ಯಾರ್ ಹೈ' ಸಿನಿಮಾವನ್ನು ಹೆಚ್ಚಿನ ಹುಡುಗಿಯರು ಎರಡೆರಡು ಬಾರಿ ನೋಡಿದರು. ಮನೆಗೆ ಬಂದ ಮೇಲೆ ಹೃತಿಕ್‌ನ ಜಾಗದಲ್ಲಿ ತಮ್ಮ ಬಾಯ್‌ಫ್ರೆಂಡ್‌ನ್ನು, ಬಾಯ್‌ಫ್ರೆಂಡ್‌ನ ಜಾಗದಲ್ಲಿ ಹೃತಿಕ್‌ನನ್ನೂ ಕಲ್ಪಿಸಿಕೊಂಡು ಖುಷಿಪಟ್ಟರು.
ಹೀಗಿರುವಾಗಲೇ, ಅದೊಂದು ದಿನ ಯಾರೂ ಊಹಿಸದಿದ್ದ ಸುದ್ದಿಯೊಂದು ಪ್ರಕಟವಾಯಿತು. ಮೊದಲ ಸಿನಿಮಾ ಪ್ರಚಂಡ ಯಶಸ್ಸು ಕಂಡು, ಅದೆಷ್ಟೋ ಸಾವಿರ ಬೆಡಗಿಯರು-ಹೃತಿಕ್, ಹೃತಿಕ್ ಎಂದು ಚೀರುತ್ತಿದ್ದಾಗ, ಈ ರೋಮಿಯೋ ತನ್ನ ಬಾಲ್ಯದ ಗೆಳತಿಯನ್ನು ಮದುವೆಯಾಗಿದ್ದ! ಅವತ್ತು ಒಳಗೊಳಗೇ ಬಿಕ್ಕಳಿಸಿದವರಿಗೆ ಲೆಕ್ಕವಿಲ್ಲ. ಅವನಿಗೆ ಮದುವೆ ಆಯ್ತು ಎಂದು ತಿಳಿದಾಗ- "ಅಯ್ಯೋ ಛೇ" ಎಂದು ನೋವಿನಿಂದ ಉದ್ಗರಿಸಿದವರಲ್ಲಿ ಹೆಚ್ಚಿನವರು ಅವನನ್ನು ಪ್ರತ್ಯಕ್ಷ ಕಂಡಿರಲಿಲ್ಲ. ಒಂದು ವೇಳೆ ಮುಖಾಮುಖಿಯಾಗಿದ್ದರೂ, ಇವರನ್ನು ಆತ ಮದುವೆಯಾಗುವ ಸಾಧ್ಯತೆಗಳು ಖಂಡಿತ ಇರಲಿಲ್ಲ. ಆದರೂ ಅವನನ್ನು ಕೃಷ್ಣ ಅಂದುಕೊಂಡರು. ತಾವೆಲ್ಲ ರಾಧೆಯ ಪಾತ್ರ ವಹಿಸಿ ಖುಷಿಪಟ್ಟರು. ಅಂಥ ಚೆಲುವಾಂತ ಚೆನ್ನಿಗನನ್ನು ಮದುವೆಯಾದ ಸೂಸಾನ್‌ಳ ಅದೃಷ್ಟವೇ ಅದೃಷ್ಟ ಎಂದು ಚರ್ಚೆಯ ಮಧ್ಯೆ ಮಾತಾಡಿಕೊಂಡರು.
ಈಗ, ಆ ಹುಡುಗಿಯರೆಲ್ಲಾ ಬೆಚ್ಚುವಂಥ ಸುದ್ದಿಯೊಂದು ಹೊರಬಿದ್ದಿದೆ. ಹೃತಿಕ್ ರೋಷನ್‌ಗೆ ಸುಸಾನ್ ಡೈವೋರ್ಸ್ ನೀಡಿದ್ದಾಳೆ. ಹೃತಿಕ್ ಬಾರ್ಬರಾ ಮೊರಿ ಎಂಬಾಕೆಯ ಹಿಂದೆ ಬಿದ್ದಿರುವುದೇ ಅದಕ್ಕೆ ಕಾರಣ. ಈಗ ಹೃತಿಕ್ ರೋಷನ್ ಮಾಡಿದನಲ್ಲ: ಅಂಥದೇ ಕೆಲಸವನ್ನು ಈ ಹಿಂದೆ ಅಮೀರ್‌ಖಾನ್ ಮಾಡಿದ. ಅದಕ್ಕೂ ಮೊದಲು ಕ್ರಿಕೆಟಿಗ ಅಜರುದ್ದೀನನೂ ಮಾಡಿದ್ದ! ಸ್ವಾರಸ್ಯವೆಂದರೆ, ಅಜರುದ್ದೀನ್, ಅಮೀರ್‌ಖಾನ್ ಹಾಗೂ ಹೃತಿಕ್ ರೋಷನ್‌ಗಳು ಮದುವೆಯಾದದ್ದು ತಮ್ಮ ಬಾಲ್ಯದ ಗೆಳತಿಯರನ್ನೇ. ದಶಕದ ಕಾಲ ಅವರ ದಾಂಪತ್ಯ ಚೆನ್ನಾಗಿಯೇ ಇತ್ತು. ಸಂದರ್ಭ ಬಂದಾಗಲೆಲ್ಲ -ಹೆಂಡತಿ ನನ್ನ ಪಾಲಿನ ದೇವತೆ. ನನ್ನ ಎಲ್ಲ ಯಶಸ್ಸಿಗೂ ಆಕೆಯೇ ಕಾರಣ ಎಂದು ಎಲ್ಲರೂ ಹೇಳಿಕೊಂಡಿದ್ದರು. ಗಂಡಂದಿರ ಇಂಥ ಮಾತುಗಳಿಂದ ಆ ಹೆಂಗಸರೂ ಖುಷಿಪಟ್ಟಿದ್ದರು. ಆದರೆ, ಬೇರೊಬ್ಬಳು ಸುಂದರಿಯ ಸೆರಗು ಕಾಣಿಸಿದ್ದೇ ತಡ; ಅದುವರೆಗೂ ಶ್ರೀರಾಮನಂತೆ ವರ್ತಿಸುತ್ತಿದ್ದ ಮಹರಾಯರು, ದಿಢೀರನೆ ವೇಷ ಮತ್ತು ಮನಸ್ಸು ಬದಲಿಸಿ ಶ್ರೀಕೃಷ್ಣನ ದಿರಿಸು ಹಾಕಿಬಿಟ್ಟರು. ಈ ವಿಷಯವನ್ನೇ ಮತ್ತೆ ಮತ್ತೆ ಗಮನಿಸಿದಾಗ ಎದ್ದು ನಿಲ್ಲುವ ಪ್ರಶ್ನೆ ಇದು: 'ಸಮಯ ಕಳೆದಂತೆಲ್ಲಾ ಪ್ರೀತಿಸಿದ ಹೆಂಗಸಿನೆಡೆಗಿದ್ದ ಆಕರ್ಷಣೆಯನ್ನು ಗಂಡಸರು ಕಳೆದುಕೊಳ್ಳುತ್ತಾರಾ?'
ಇದಕ್ಕೆ, ಕಡ್ಡಿ ಮುರಿದಂತೆ ಹೇಳಬಹುದಾದ ಉತ್ತರ -ಹೌದು!
ಕಾರಣವಿಷ್ಟೆ: ಗಂಡಸರು ಸ್ವಭಾವತಃ ಮಹಾನ್ ಆಸೆಬುರುಕರು. ಅದರಲ್ಲೂ ಬಾಳಸಂಗಾತಿಯ ವಿಷಯಕ್ಕೆ ಬಂದಾಗ, ಈ ಆಸೆಬುರುಕುತನ ವಿಪರೀತ ಎನ್ನುವಷ್ಟಾಗುತ್ತದೆ. ಗಂಡಸೊಬ್ಬ ಪ್ರೇಮದ ಹೊಳೆಗೆ ಇಳಿದ ಅಂದುಕೊಳ್ಳಿ: ಆಗ ಅವನಿಗೆ ತನ್ನ ಪ್ರಿಯತಮೆಯನ್ನು ಬಿಟ್ಟು ಬೇರೆ ಯಾರೂ ಕಾಣಿಸುವುದಿಲ್ಲ. ಯಾರ ಹಿತವಚನವೂ ಕಿವಿಗೆ ಬೀಳುವುದಿಲ್ಲ. ಗಂಡಸೊಬ್ಬ, ಯೌವನದ ದಿನಗಳಲ್ಲಿ ಯಾರನ್ನೂ 'ಲವ್‌' ಮಾಡದೆ, ಪೋಷಕರು ನೋಡಿದ ಹುಡುಗಿಯನ್ನು ಮದುವೆಯಾದ ಎಂದಿಟ್ಟುಕೊಳ್ಳಿ: ಹೆಂಡತಿಯನ್ನೇ ಪ್ರೇಯಸಿಯ ರೂಪದಲ್ಲಿ ಕಂಡು ಥೈ- ಥೈ ಕುಣಿದಿರುತ್ತಾನೆ.
ಆದರೆ, ತುಂಬ ನೆಮ್ಮದಿಯಿಂದಿರುವ ಕುಟುಂಬಕ್ಕೆ, ಮತ್ತೊಬ್ಬಳು ಸುಂದರಿಯ ಎಂಟ್ರಿ ಆದರೆ ಸಾಕು; ಆ ಕುಟುಂಬದ ಯಜಮಾನ ಅಸಹನೆಯಿಂದ ಚಡಪಡಿಸುತ್ತಾನೆ. ಛೆ, ಈ ಸುಂದರಿಯೇ ನನ್ನ ಹೆಂಡತಿ ಆಗಬೇಕಿತ್ತು. ನಾನು ದುಡುಕಿ ಬೇಗ ಪ್ರೀತಿಸಿ ಬಿಟ್ಟೆ, ಮದುವೆಯಾಗಿ ಬಿಟ್ಟೆ ಎಂದು ಅಂದುಕೊಳ್ಳಲು ಮುಂದಾಗುತ್ತಾನೆ. ಮರುದಿನದಿಂದಲೇ ಅವನಿಗೆ ಹೆಂಡತಿಯ ಪ್ರತಿ ಹೆಜ್ಜೆಯಲ್ಲೂ ತಪ್ಪುಗಳು ಕಾಣತೊಡಗುತ್ತವೆ. ಅವಳ ಮೈನಸ್ ಪಾಯಿಂಟ್‌ಗಳು ಮತ್ತೆ ಮತ್ತೆ ನೆನಪಾಗತೊಡಗುತ್ತವೆ. ಅದೇ ವೇಳೆಗೆ ಹೊಸದಾಗಿ ಪರಿಚಯವಾದ ಬೆಡಗಿ, ಥೇಟ್ ಅಪ್ಸರೆಯಂತೆ ಕಾಣತೊಡಗುತ್ತಾಳೆ. ಅಂಥವಳನ್ನು ಹೆಂಡತಿಯಾಗಿ ಪಡೆಯಲು ಸಾಧ್ಯವಾಗದ ಮೇಲೆ ಬದುಕಿ ಪ್ರಯೋಜನವೇನು ಎಂಬ ಅವಸರದ ತೀರ್ಮಾನಕ್ಕೆ ಗಂಡಸರು ಬಂದು ಬಿಡುವುದೇ ಈ ಸಂದರ್ಭದಲ್ಲಿ. ಮೊದಲಿಗೆ, ಗಂಡಂದಿರೇ ಏನಾದರೂ ತಪ್ಪು ಹುಡುಕಿ ಜಗಳ ತೆಗೆಯುತ್ತಾರೆ. ಹೆಜ್ಜೆ ಹೆಜ್ಜೆಗೂ ಹಂಗಿಸುತ್ತಾರೆ. ಸಮಯ ನೋಡಿ ಹೆದರಿಸುತ್ತಾರೆ. ಹೊಡೆಯುತ್ತಾರೆ. ಈ ಮಧ್ಯೆಯೇ, ಮನಸ್ಸು ಕದ್ದವಳೊಂದಿಗೆ ಗುಟ್ಟಾಗಿ ಹಲವು ಒಪ್ಪಂದ ಮಾಡಿಕೊಂಡಿರುತ್ತಾರೆ. ಆನಂತರದಲ್ಲಿ ಒಂದು ದಿನ, ಡೈವೋರ್ಸ್‌ನ ಮಾತಾಡಿ ಹಳೆಯ ಸಂಬಂಧದಿಂದ ಕಳಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ: ಈ ಥರಾ ಮಾಡಿದವರಲ್ಲಿ ನಾನೇ ಮೊದಲಿಗನೇನಲ್ಲ ಎಂಬ ಸಮಾಧಾನವನ್ನೂ ಮಾಡಿಕೊಳ್ಳುತ್ತಾರೆ!
ಈಗ ಹೆಂಗಸರ ಬಗ್ಗೆ ಯೋಚಿಸೋಣ: ಮದುವೆಯ ನಂತರ ಹೆಂಗಸೊಬ್ಬಳು ಮತ್ತೊಬ್ಬ ಗಂಡಸಿನ ಕಡೆಗೆ ಆಕರ್ಷಿತಳಾದರೆ, ಆಕೆ ತಕ್ಷಣವೇ ಗಂಡ, ಮನೆ, ಮಕ್ಕಳು ಹಾಗೂ ಮರ್ಯಾದೆಯ ಬಗ್ಗೆ ಯೋಚಿಸುತ್ತಾಳೆ. ಆನಂತರದಲ್ಲಿ ತನ್ನ ಆಸೆಗಳನ್ನೆಲ್ಲ ಕತ್ತು ಹಿಸುಕಿಕೊಂಡು ಸುಮ್ಮನಾಗುತ್ತಾಳೆ. ಆದರೆ, ಗಂಡಸಾದವನು ಡೈವೋರ್ಸ್ ನೀಡಿ, ಒಂದಿಷ್ಟು ಪರಿಹಾರ ಕೊಟ್ರೆ ಸಾಕು ಎಂದಷ್ಟೇ ಲೆಕ್ಕ ಹಾಕುತ್ತಾನೆ! ಇದನ್ನು ನೆನಪಿಸಿಕೊಂಡಾಗ ಅನಿಸುವುದಿಷ್ಟು: ಆಕರ್ಷಣೆ ಎಂಬುದು ಸ್ವಲ್ಪ ದಿನಗಳಿದ್ದು ಮಾಯವಾಗುವ ಉನ್ಮಾದವೇ ವಿನಃ ಅದೇ ಬದುಕಲ್ಲ ಎಂಬ ಸತ್ಯ ಗಂಡಸರಿಗೆ ಯಾಕೆ ಅರ್ಥವಾಗುವುದಿಲ್ಲ?

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.