ಹಣದ ಕೊರತೆಯಲ್ಲ, ಕಳಪೆ ಆಡಳಿತ ಮತ್ತು ಭ್ರಷ್ಟಾಚಾರದ್ದೇ ತೊಂದರೆ
ಭಾರತದ ಐಟಿ ರಾಜಧಾನಿ ಎಂದು ಉತ್ಪ್ರೇಕ್ಷಿತವಾಗಿ ಕರೆಸಿಕೊಳ್ಳುತ್ತಿರುವ...

ಭಾರತದ ಐಟಿ ರಾಜಧಾನಿ ಎಂದು ಉತ್ಪ್ರೇಕ್ಷಿತವಾಗಿ ಕರೆಸಿಕೊಳ್ಳುತ್ತಿರುವ ಬೆಂಗಳೂರು ವಾಸ್ತವದಲ್ಲಿ ಗುಂಡಿಗಳ ನಗರಿಯಾಗಿದ್ದು ಸಹಾಯಕ್ಕಾಗಿ ಅರಚಿಕೊಳ್ಳುತ್ತಲೇ ಇದೆ. ಕಳೆದ ಕೆಲ ವಾರಗಳಲ್ಲಿ ಎರಡು ಸುದ್ದಿಗಳು ಈ ನಗರದ ನಿವಾಸಿಗಳಲ್ಲಿ ಆಘಾತ ತಂದಿವೆ.
ಸಾರ್ವಜನಿಕ ಸೇವೆ ನೀಡಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಅದರ ಉಸ್ತುವಾರಿ ನೋಡಿಕೊಳ್ಳಬೇಕಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆರ್ಥಿಕ ದಿವಾಳಿ ಹಂತದಲ್ಲಿ ನಿಂತು ಹೊಯ್ದಾಡುತ್ತಿರುವುದು. ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅದರ ಬಳಿ ನಿಧಿಯೇ ಇಲ್ಲ.
ಎರಡನೆಯದು: ಬೆಂಗಳೂರಿಗೆ ವಿದ್ಯುತ್ ಪೂರೈಸುವ ಇನ್ನೊಂದು ನಾಗರಿಕ ಸಂಸ್ಥೆ ಬೆಸ್ಕಾಂ, ಬಿಬಿಎಂಪಿಯ ಎಂಜಿನಿಯರ್‌ಗಳಿಗೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ. ಬೆಸ್ಕಾಮ್‌ಗೆ ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ರುಪಾಯಿಗಳ ಬಿಲ್ ಅನ್ನು ತಕ್ಷಣವೇ ಪಾವತಿಸಿ. ಇಲ್ಲವೇ ಬಂಧನ ಹಾಗೂ ಜೈಲುವಾಸಕ್ಕೆ ಸಿದ್ಧರಾಗಿ ಎಂದು ಅದು ಹೇಳಿದೆ. ಇದಕ್ಕೆ ಪ್ರತಿಯಾಗಿ ರಸ್ತೆಗಳನ್ನು ಅಗೆದಿರುವುದಕ್ಕಾಗಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬಿಬಿಎಂಪಿ ಬೆದರಿಸಿದೆ.
ರಾಜ್ಯದ ಆದಾಯದ ಶೇಕಡಾ 50ರಷ್ಟನ್ನು ತಂದುಕೊಡುವ ನಗರವನ್ನು ವಿನಾಶಕ್ಕೆ ಬಿಡುವುದು ಶೋಚನೀಯವಲ್ಲವೇ? ರಾಜ್ಯ ಸರ್ಕಾರವಾಗಲೀ, ಈ ನಾಗರಿಕ ಸಂಸ್ಥೆಗಳೇ ಆಗಲಿ ಪರಿಸ್ಥಿತಿಯ ಗಹನತೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಎಡವಿವೆ. ಅತಿವೇಗದಲ್ಲಿ ಬೆಳೆಯುತ್ತಿರುವ ನಗರವನ್ನು ಹೇಗೆ ಆಡಳಿತಕ್ಕೆ ಒಳಪಡಿಸಬೇಕು ಎಂಬುದರ ಬಗ್ಗೆ ಯಾವ ನಿಖರ ಆಲೋಚನೆಗಳೂ ಇಲ್ಲದೇ ಅವು ಸುತ್ತಿದಲ್ಲೇ ಸುತ್ತುತ್ತಿವೆ. ಕಳಪೆ ಆಡಳಿತ, ಭ್ರಷ್ಟಾಚಾರ ಹೆಚ್ಚಳ, ಸಾರ್ವಜನಿಕ ಹಣದ ದುರುಪಯೋಗ ಹಾಗೂ ನಗರದ ಬೇರೆ ಬೇರೆ ನಾಗರಿಕ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ ಇವೆಲ್ಲವೂ ಮಹಾನಗರದ ವಿನಾಶಕ್ಕೆ ಕಾರಣವಾಗುತ್ತ ಸಾಗಿವೆ.
ನಗರವನ್ನು ಪ್ರತಿನಿಧಿಸುತ್ತಿರುವ 25 ಶಾಸಕರು ಹಾಗೂ 198 ಕಾರ್ಪೋರೇಟರ್‌ಗಳು ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರ್ಯಾರೂ ಮಾತಿಗೆ ಸಿಕ್ಕುವವರೇ ಅಲ್ಲ. ಇವರೆಲ್ಲ ಮತ ಕೇಳುವುದಕ್ಕೆ ಬಂದಾಗ, ತಾವು ನಗರವನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳಿಗೂ ಮುಕ್ತಿ ತೋರಿಸುತ್ತೇವೆ ಎಂದೇ ಹೇಳಿರುತ್ತಾರಲ್ಲವೇ? ಅಸ್ತವ್ಯಸ್ತ ನಗರವನ್ನು ಮತ್ತೆ ಹಳಿಗೆ ತರುವ ಭರವಸೆ ಕೊಟ್ಟೇ ಅವರು ಮತ ಕೇಳುತ್ತಾರಲ್ಲವೇ? ನಗರವು ಕಳೆದುಕೊಂಡಿರುವ ವೈಭವವನ್ನು ಮರುಪ್ರತಿಷ್ಠಾಪಿಸುತ್ತೇವೆ ಎಂದೇ ಹೇಳಿದ್ದರಲ್ಲವೇ? ಆದರೆ ಅವರ್ಯಾರೂ ಈಗ ನಗರದ ಆರೋಗ್ಯದ ಬಗ್ಗೆ ಮಾತಾಡುತ್ತಿಲ್ಲ.
ನಾನಾ ವೇದಿಕೆಗಳಲ್ಲಿ ಸ್ಥಳೀಯ ನಿವಾಸಿಗಳು ಮಾತ್ರ ತಮ್ಮ ಬೇಗುದಿಯನ್ನೂ, ಅಸಮಾಧಾನವನ್ನೂ ಹೊರಹಾಕುತ್ತಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದವರು ಏನೇನೋ ಭರವಸೆಗಳನ್ನು ಕೊಡುತ್ತಾ ಡೆಡ್‌ಲೈನ್‌ಗಳನ್ನು ನಿಗದಿಪಡಿಸುತ್ತಾರೆ ಹಾಗೂ ಅಷ್ಟೇ ಸುಲಭಕ್ಕೆ ಆ ಅಂತಿಮ ದಿನಾಂಕಗಳನ್ನು ಮರೆತೂಬಿಡುತ್ತಾರೆ.
ಸಂಸದರ ಪೈಕಿ ಬೆಂಗಳೂರಿನ ಬಗ್ಗೆ ಕಾಳಜಿ ಹೊಂದಿರುವವರೆಂದರೆ ರಾಜ್ಯಸಭೆಯ ಸ್ವಂತಂತ್ರ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರೊಬ್ಬರೇ. ಬೆಂಗಳೂರನ್ನು ಮೇಲಕ್ಕೆತ್ತುವ ಬಗ್ಗೆ ಅವರು ಅತೀವ ಕಾಳಜಿ ಹೊಂದಿದ್ದಾರೆ. ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಅವರು ನಗರವು ಕುಸಿಯುತ್ತಿರುವುದರ ಬಗ್ಗೆ ಕಾರಣಗಳನ್ನಷ್ಟೇ ಪಟ್ಟಿ ಮಾಡಿಲ್ಲ, ನಗರದ ಇಂದಿನ ಗೊಂದಲಗಳಿಂದ ಹೊರಬರಬಹುದಾದ ಪರಿಹಾರೋಪಾಯಗಳನ್ನೂ ಸಲಹೆ ರೂಪದಲ್ಲಿ ನೀಡಿದ್ದಾರೆ. ಅವುಗಳೆಂದರೆ:
ಸಮರ್ಪಕ ಯೋಜನೆಯ ಕೊರತೆ: ಹಣಕಾಸಿನ ಯೋಜನೆಯೂ ಸೇರಿದಂತೆ ನಗರವು ಕಾನೂನುಬದ್ಧವಾದ ದೀರ್ಘಾವಧಿ ಯೋಜನೆಯನ್ನು ಹೊಂದಬೇಕಿದೆ.
-ವಿತ್ತ ಸಂಪನ್ಮೂಲದ ಅಸಮರ್ಪಕ ಬಳಕೆ ಆಗುತ್ತಿದೆ. ಇಲ್ಲಿ ಯೋಜನೆಗಳ ಬದಲಿಗೆ ಸ್ವಹಿತಾಸಕ್ತಿಗಳಿಂದಲೇ ನಿರ್ದೇಶಿತವಾಗಿರುವ ಭ್ರಷ್ಟ ಗುತ್ತಿಗೆ ಪದ್ಧತಿ ಕೆಲಸ ಮಾಡುತ್ತಿದೆ. ಗುತ್ತಿಗೆ ಹಾಗೂ ಹಣದ ಬಳಕೆಯನ್ನು ಇನ್ನಷ್ಟು ಪಾರದರ್ಶಕ, ಸ್ಪರ್ಧಾತ್ಮಕ ಹಾಗೂ ಸಮರ್ಥವನ್ನಾಗಿಸಬೇಕಾದ ಅವಶ್ಯವಿದೆ.
-ಆದಾಯ ಸಂಗ್ರಹದಲ್ಲಿ ಢಾಳಾಗಿರುವ ಲೋಪಗಳನ್ನು ಬೇಕೆಂದೇ ಉಪೇಕ್ಷಿಸಲಾಗುತ್ತಿದೆ. ತೆರಿಗೆ ಸಂಗ್ರಹಣೆಯ ಹರವು ಹೆಚ್ಚಾಗಬೇಕು. ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಗುರಿಗಳನ್ನು ನೀಡಬೇಕು. ಆದಾಯದ ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಸರ್ಕಾರಿ ಆಸ್ತಿಗಳಾದ ಭೂಮಿ ಮತ್ತು ಕಟ್ಟಡಗಳ ಬೇಕಾಬಿಟ್ಟಿ ಬಳಕೆಯಾಗುತ್ತಿದೆ. ಇಲ್ಲಿ ಸಂಪನ್ಮೂಲಗಳ ಉತ್ತಮ ಬಳಕೆ ಹೇಗೆ ಎಂಬುದನ್ನು ಯೋಚಿಸಲಾಗುವುದಿಲ್ಲ, ಬದಲಿಗೆ ಹಿತಾಸಕ್ತಿಗಳೇ ಪ್ರಮುಖವಾಗುತ್ತವೆ. ವಾಣಿಜ್ಯ ಹಿತಾಸಕ್ತಿಗಳಿಂದ ಆಗಿರುವ ಭೂ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಬೇಕು. ಸಾರ್ವಜನಿಕ ಭೂಮಿಯನ್ನು ಮಾರುಕಟ್ಟೆ ದರದಲ್ಲಿಯೇ ಲೀಸ್‌ಗೆ ಅಥವಾ ಮಾರಾಟಕ್ಕೆ ಮುಕ್ತಗೊಳಿಸಿ ವಿತ್ತ ಸಂಪನ್ಮೂಲವನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಸ್ಥಳೀಯ ನಿವಾಸಿಗಳ ಒಕ್ಕೂಟಗಳನ್ನು ಈ ಪ್ರಕ್ರಿಯೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
-ಮನರಂಜನೆ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳೊಂದಿಗೆ ಬೆಂಗಳೂರನ್ನು ಪ್ರವಾಸಿಗರ ಆಕರ್ಷಣೆ ಸ್ಥಳವಾಗಿ ಉಳಿಸಿಕೊಂಡು ನಗರಕ್ಕೆ ಹೆಚ್ಚುವರಿ ಆದಾಯವನ್ನು ತರುವ ಕೆಲಸವಾಗಬೇಕು. ಇದು ಜಗತ್ತಿನ ಎಲ್ಲ ಭಾಗಗಳಿಂದ ಜನರನ್ನು ಸೆಳೆಯುವಷ್ಟು ಸಶಕ್ತವಾಗಿರಬೇಕು.
-ಸಮರ್ಪಕವಾಗಿ ರೂಪಿಸಲಾಗಿರುವ ಗುತ್ತಿಗೆಗಳು ಹಾಗೂ ವಾಣಿಜ್ಯ ನಿಯಮಗಳನ್ನು ಒಳಗೊಂಡು, ನಗರದ ಮೂಲಸೌಕರ್ಯ ಮತ್ತು ಸೇವೆಗಳ ಅಭಿವೃದ್ಧಿಯಲ್ಲಿ ಖಾಸಗಿ ಬಂಡವಾಳವು ವಿಫುಲವಾಗಿ ಹರಿದುಬರುವ ಅವಕಾಶ ಕಲ್ಪಿಸಬೇಕಿದೆ.
ನಗರವನ್ನು ಮರಳಿ ಹಳಿಗೆ ತರಲು ಇವೆಲ್ಲವೂ ಅಗತ್ಯ ಅಂಶಗಳಾಗುತ್ತವೆಯಲ್ಲವೇ? ಇಂಥ ರಚನಾತ್ಮಕ ಸಲಹೆಯನ್ನು ಸರ್ಕಾರ ಅಪ್ಪಿಕೊಳ್ಳಬೇಕಾಗುತ್ತದೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಆಗುತ್ತಿರುವ ನಿಯಮಗಳ ಉಲ್ಲಂಘನೆ ಉತ್ತಮ ಆಡಳಿತಕ್ಕೆ ಹೇಗೆ ತೊಡಕಾಗುತ್ತಿದೆ ಎಂಬುದನ್ನೂ ರಾಜೀವ್ ಚಂದ್ರಶೇಖರ್ ಅವರು ವಿವರಿಸಿದ್ದಾರೆ. ವಾಸ್ತವದಲ್ಲಿ ಅಕ್ರಮ-ಸಕ್ರಮ ಯೋಜನೆ ನಿಯಮಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದೆ. ಹೀಗಿರುವಾಗ ಸಂಸದರು ಪ್ರಸ್ತಾವಿಸಿರುವ ವಿಷಯಗಳೆಲ್ಲ ಎಷ್ಟೊಂದು ಸಮರ್ಪಕವಾಗಿವೆಯಲ್ಲವೇ? ಆಡಳಿತದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯೇ ಪರಿಹಾರದ ಮಾರ್ಗ ಎಂಬುದನ್ನು ಯಾರು ತಾನೇ ಇಲ್ಲವೆಂದಾರು?
ಕಳಪೆ ಆಡಳಿತಕ್ಕೆ ಸಿಲುಕಿ ನಾಶವಾಗುತ್ತಿರುವುದು ಬೆಂಗಳೂರು ಮಾತ್ರವಲ್ಲ. ಭಾರತದ ಎಲ್ಲ ನಗರಗಳೂ ಹೀಗೆಯೇ ಬಳಲುತ್ತಿವೆ. ಹೆಚ್ಚುತ್ತಿರುವ ಭ್ರಷ್ಟಾಚಾರ, ಪಾರದರ್ಶಕತೆ ಇಲ್ಲದಿರುವುದು, ಉತ್ತರದಾಯಿತ್ವ ಇಲ್ಲದಿರುವಿಕೆ, ದೋಷಪೂರಿತ ಗುತ್ತಿಗೆಗಳು ಹಾಗೂ ಹಿತಾಸಕ್ತಿಗಳ ಆಡುಂಬೊಲದಿಂದ ನಾಗರಿಕರೆಲ್ಲ ರೊಚ್ಚಿಗೆದ್ದಿದ್ದಾರೆ. ನಾನಾ ನಾಗರಿಕ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ ತೊಂದರೆಗಳನ್ನು ಇನ್ನಷ್ಟು ತೀವ್ರಗೊಳಿಸಿದೆ. ಆಗಷ್ಟೇ ಉದಯಿಸಿದ ಆಮ್ ಆದ್ಮಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒಲವು ತೋರುವ ಮೂಲಕ ದೆಹಲಿ ಮತದಾರರು ಹೇಗೆ ತಮ್ಮೊಳಗಿನ ಹತಾಶೆಯನ್ನು ಹೊರಹಾಕಿದ್ದಾರೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ. ರಾಜಕಾರಣಿಗಳು ಈ ಸ್ಪಷ್ಟ ಸಂದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳು ಅದೇ ಹಾದಿ ಹಿಡಿಯಲಿವೆ.
ಕೊನೆ ಕುಟುಕು: ಅರವಿಂದ್ ಕೇಜ್ರಿವಾಲ್ ಅವರ ನೆನಪಲ್ಲುಳಿಯುವ ಹೇಳಿಕೆ- ನನ್ನ ಮತ್ತು ಅಣ್ಣಾ ಹಜಾರೆ ಅವರ ನಡುವೆ ಬಿರುಕು ತಂದವರ ಹೆಸರನ್ನು ಹೇಳುವುದಿಲ್ಲ. ಅಣ್ಣಾಜಿ ಮತ್ತು ನಾನು ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಹೆದರಿರುವ ರಾಜಕೀಯ ಹಿತಾಸಕ್ತಿಗಳು ಇವೆ. ತಮ್ಮ ಮೇಲೆ ಬೀಳಬಹುದಾದ ಅಟಮ್ ಬಾಂಬ್ ಬಗ್ಗೆ ಅವು ಹೆದರಿವೆ.
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


