ಸಿದ್ದು, ಗವರ್ನರ್ ಯುದ್ಧಕ್ಕೆ ಒಣಪ್ರತಿಷ್ಠೆಯೇ 'ನಾಯಕ'
ಮನುಷ್ಯನಿಗೆ ಪ್ರತಿಷ್ಠೆ ಇರಬೇಕು. ಅದು ಆತ್ಮವಿಶ್ವಾಸದ ಸಂಕೇತವಾಗಿರಬೇಕು...

ಮನುಷ್ಯನಿಗೆ ಪ್ರತಿಷ್ಠೆ ಇರಬೇಕು. ಅದು ಆತ್ಮವಿಶ್ವಾಸದ ಸಂಕೇತವಾಗಿರಬೇಕು. ಘನತೆ, ಗೌರವ, ಗಾಂಭೀರ್ಯದ ಪ್ರತಿಫಲನಕ್ಕೆ ಅದು ಪೂರಕವಾಗಿರಬೇಕೇ ವಿನಃ ಒಣಜಂಭದ ಪ್ರತೀಕವಾಗಬಾರದು. ನಾನತ್ವದ ಆಳ್ವಿಕೆಗೆ ಸಾಧನ ಆಗಬಾರದು. ಪ್ರತಿಷ್ಠೆ ಎಂಬುದು ಒಣಪ್ರತಿಷ್ಠೆಗೆ ತಿರುಗಿದಾಗ ಅಹಂಕಾರ ಸದ್ದಿಲ್ಲದೆ ಮಧ್ಯ ನುಸುಳುತ್ತದೆ. ಅನಗತ್ಯ, ಅನಪೇಕ್ಷಿತ ಸಂಘರ್ಷಕ್ಕೆ ಆಸ್ಪದ ಮಾಡಿಕೊಡುತ್ತದೆ.
ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಇತ್ತೀಚೆಗೆ ಸರಣಿಯೋಪಾದಿಯಲ್ಲಿ ಸ್ಫೋಟಗೊಂಡಿರುವ ಸಂಘರ್ಷಕ್ಕೆ ಈ ಮೇಲಿನ ಅಂಶಗಳೇ ಪ್ರೇರಕ. ಆತ್ಮವಿಶ್ವಾಸ ಹಾಗೂ ಆತ್ಮಗೌರವಗಳ ಸ್ಥಾನವನ್ನು ಒಣಪ್ರತಿಷ್ಠೆ ತುಂಬಿಕೊಂಡಿರುವುದರ ಫಲವಾಗಿ ಸರ್ಕಾರದ ಮೇರು ಹುದ್ದೆಗಳಲ್ಲಿರುವ ಇವರಿಬ್ಬರು ಸಾರ್ವಜನಿಕರ ಕುಹಕಕ್ಕೆ ವಸ್ತುವಾಗಿದ್ದಾರೆ.
ಪ್ರಸ್ತುತ ಚಾಲ್ತಿಯಲ್ಲಿರುವ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಸಂಘರ್ಷದಲ್ಲೂ ಒಂದು ವಿಶೇಷ. ಇಬ್ಬರೂ ಕಾಂಗ್ರೆಸ್ ಒಶಪದರದವರು. ತಾವು ಅಲಂಕರಿಸಿರುವ ಹುದ್ದೆಯ ಕಾರಣಕ್ಕೆ ಹಂಸರಾಜ್ ಭಾರದ್ವಾಜ್ ಅವರು ಪಕ್ಷಾತೀತರೇ ಆದರೂ ಅವರ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ. ಅವರು ರಾಜ್ಯಪಾಲರಾಗುವ ಮೊದಲು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರಗಳಲ್ಲಿ ಸಚಿವ ಸ್ಥಾನ ಅಲಂಕರಿಸಿದವರು. ಇನ್ನೊಂದೆಡೆ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿದ್ದರೂ ಅವರ ರಕ್ತಗುಣದಲ್ಲಿ ಜನತಾ ಪರಿವಾರದ ಕಣ ಇನ್ನೂ ಮರೆಯಾಗಿಲ್ಲ. ಹೀಗಾಗಿ ಮೂಲಗುಣಗಳ ವೈರುಧ್ಯವೂ ಇವರ ಸಂಘರ್ಷದಲ್ಲಿ ಪ್ರತಿಫಲಿಸುತ್ತಿದೆ.
ಅದೇನೆ ಇರಲಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ನಡುವಿನ ಬಹಿರಂಗ ಸಮರ ಜನರ ಬಾಯಾಡಿಕೆ ಪದಾರ್ಥ ಆಗುವುದರ ಜತೆಯಲ್ಲಿ ದಿಲ್ಲಿ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರ ತಲೆಬೇನೆಗೆ ಕಾರಣವಾಗಿದೆ. ಇಬ್ಬರೂ ಹಠಸ್ವಭಾವದವರು. ಸ್ವಾಭಿಮಾನವನ್ನು ಈ ಹಠಕ್ಕೆ ಧಾರೆ ಎರೆದವರು. ಹೀಗಾಗಿ ಇವರ ಸಂಘರ್ಷ ಪರಿಹಾರವೇ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ.
ಇಷ್ಟಕ್ಕೂ ಈ ಸಂಘರ್ಷ ಶುರುವಾದದ್ದು ಏಕೆ? ರಾಜ್ಯಪಾಲರು ಪದೇ ಪದೇ ಪ್ರತಿಪಕ್ಷದವರು ನಾಚಿ ನೀರಾಗುವಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಕೆದಕಿದಾಗ ಅದಕ್ಕೆ ಉತ್ತರ ಎರಡು ತಿಂಗಳ ಹಿಂದೆ ನಾನಾ ವಿಶ್ವವಿದ್ಯಾಲಯಗಳ ರಿಜಿಸ್ಟ್ರಾರ್ ನೇಮಕ ವಿಚಾರಕ್ಕೆ ಹೋಗಿ ನಿಲ್ಲುತ್ತದೆ. ಕೆಲವೊಂದು ನೇಮಕಗಳು ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆದ ರಾಜ್ಯಪಾಲರ ಗಮನಕ್ಕೆ ಬಂದಿಲ್ಲ. ಇದರ ಜತೆಗೆ ರಾಜ್ಯಪಾಲರು ಸೂಚಿಸಿದವರ ಹೆಸರನ್ನು ಸರ್ಕಾರ ಪರಿಗಣಿಸಿಲ್ಲ. ನೇಮಕ ವಿಚಾರದಿಂದ ಶುರುವಾಗಿ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ವಿಷಯದವರೆಗೂ ನಾನಾ ಸಂದರ್ಭಗಳಲ್ಲಿ ರಾಜ್ಯಪಾಲರು ಹಾಗೂ ಅವರ ಮಾತನ್ನು ಉಪೇಕ್ಷಿಸಲಾಗಿದೆ. ಇಲ್ಲಿ ರಾಜ್ಯಪಾಲರನ್ನು 'ಹಸ್ತಕ್ಷೇಪ' ದೃಷ್ಟಿಯಿಂದ ಸರ್ಕಾರ ನೋಡಿದ್ದರೆ, ಸರ್ಕಾರ ಉಡಾಫೆಯ ಪ್ರತೀಕವಾಗಿ ರಾಜ್ಯಪಾಲರಿಗೆ ಕಂಡಿದೆ. ವಿಶ್ವವಿದ್ಯಾಲಯಗಳ 'ಅಧಿಪತಿ' ಎಂದೇ ಗುರುತಿಸಲ್ಪಟ್ಟ ತಮ್ಮನ್ನು ಸರ್ಕಾರ 'ಯಕಶ್ಚಿತ್' ರೀತಿಯಲ್ಲಿ ಪರಿಭಾವಿಸಿತು ಎಂಬ ಭಾವನೆ ರಾಜ್ಯಪಾಲರಲ್ಲಿ ರೋಷ ಉಕ್ಕಿಸಿತು. ಆ ರೋಷಕ್ಕೆ ಆವೇಶ ಸೇರಿದ ಬೆನ್ನಲ್ಲೇ ಮಂಗಳೂರಲ್ಲಿ ಅವರೊಂದು ಹೇಳಿಕೆ ನೀಡಿದರು- "ರಾಜ್ಯದ ಕೆಲ ಮಂತ್ರಿಗಳು ಜನಪರ ಕೆಲಸ ಮಾಡುತ್ತಿಲ್ಲ. ಬದಲಿಗೆ ವ್ಯಾಪಾರ ಮಾಡುತ್ತಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಅವರಿಗೆ ಮುಖ್ಯವಾಗಿದೆ".
ಸರ್ಕಾರದ ವಿರುದ್ಧ ರಾಜ್ಯಪಾಲರ ಸಂಘರ್ಷ ಟಿಸಿಲೊಡೆದ ಸಂದರ್ಭ ಇದು. ಆಗ ಸಿದ್ದರಾಮಯ್ಯ ಅವರು ಒಂದು ಪ್ರತಿ ಹೇಳಿಕೆ ನೀಡಿದರು- "ರಾಜ್ಯಪಾಲರು ಯಾವ ಹಿನ್ನೆಲೆಯಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ. ಅವರ ಜತೆ ಮಾತಾಡಿ ತಿಳಿದುಕೊಳ್ಳುತ್ತೇನೆ". ಆದರೆ ಇವತ್ತಿನವರೆಗೆ ಸಿದ್ದರಾಮಯ್ಯನವರು ರಾಜ್ಯಪಾಲರನ್ನು ಭೇಟಿ ಮಾಡಿ, ಮಾತಾಡಲಿಲ್ಲ. ಅವತ್ತು ರಾಜ್ಯಪಾಲರು ಶುರು ಮಾಡಿದ ಮಾತನ್ನು ಇವತ್ತಿನವರೆಗೂ ನಿಲ್ಲಿಸಿಲ್ಲ.
ಈ ಪ್ರಹಸನದ ನಂತರ ಉರ್ದು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯಪಾಲರು ಒಂದು ಹೆಸರು ಸೂಚಿಸಿದ್ದರು. ಆದರೆ ಸರ್ಕಾರ ಅದನ್ನೂ ಪರಿಗಣಿಸಲಿಲ್ಲ. ಇತ್ತೀಚೆಗೆ ರಾಜಭವನದಲ್ಲಿ ನಡೆದ ಉರ್ದು ಅಕಾಡೆಮಿ ಕಾರ್ಯಕ್ರಮದಲ್ಲಿ ಸಿಎಂ ಹಾಗೂ ಸಚಿವ ಖಮರುಲ್ ಇಸ್ಲಾಂ ಎದುರೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಉರ್ದು ಅಕಾಡೆಮಿಯ ಯಾವುದೇ ಸಮಸ್ಯೆಗೆ ರಾಜಭವನದ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳುವ ಮೂಲಕ ಅಲ್ಲಿದ್ದ ಸಿಎಂ ಹಾಗೂ ಸಚಿವರ ಪ್ರಸ್ತುತತೆಯನ್ನು ಪಕ್ಕಕ್ಕೆ ಸರಿಸಿಬಿಟ್ಟರು. ಅಂದು ಇಬ್ಬರಿಗೂ ಮುಜುಗರ ಆದದ್ದು ಸುಳ್ಳಲ್ಲ.
ಇದಾದ ನಂತರ ರಾಜ್ಯಪಾಲರ ಕೆಂಗಣ್ಣಿಗೆ ಗುರಿಯಾಗಿದ್ದು ಸಿದ್ದರಾಮೇಶ್ವರ ಜಾತ್ರೆಯ ಕಡ್ಲೆಪುರಿ ವ್ಯಾಪಾರದಂತೆ ನಡೆದ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ. ಈ ರಾಜ್ಯಪಾಲರಿಗೆ ಐಪಿಎಸ್ ಹಾಗೂ ಐಎಎಸ್ ವಲಯದಲ್ಲಿ ಒಂದು ಉತ್ತಮ ಸಂಬಂಧವಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಭಾರತ ಮೂಲದ ಅಧಿಕಾರಿಗಳಿಂದ ಸರ್ಕಾರದ ಆಗು-ಹೋಗುಗಳ ಬಗ್ಗೆ ಮಾಹಿತಿ ರವಾನೆ ಆಗುತ್ತದೆ. ಪೊಲೀಸ್ ವರ್ಗಾವಣೆಯಲ್ಲಿ ಭಾರೀ ಭ್ರಷ್ಟಾಚಾರ, ಅದರಲ್ಲೂ ವಿಶೇಷವಾಗಿ ಸರಕಾರೇತರ ವ್ಯಕ್ತಿಗಳ ಸಾರಥ್ಯದಲ್ಲಿ ನಡೆದಿದೆ ಎಂಬ ದೂರು ಗವರ್ನರ್‌ಗೆ ಬಂತು. ಆಗ ರಾಜ್ಯಪಾಲರು ಈ ವರ್ಗಾವಣೆಗೆ 'ಅಸಂವಿಧಾನಿಕ' ಎಂದು ಷರಾ ಬರೆದರು.
ಇಲ್ಲಿ ಇನ್ನೂ ಒಂದು ಕಾರಣವಿದೆ. ನೇಮಕ, ವರ್ಗಾವಣೆ ವಿಚಾರದಲ್ಲಿ ಪೊಲೀಸ್ ಆಡಳಿತ ಮಂಡಳಿಯದೇ ಪರಮಾಧಿಕಾರ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಚನೆ ಆಗಿರುವ ಈ ಮಂಡಳಿಯ ನಿಯಮಗಳಿಗೆ ಸರ್ಕಾರ ತಿದ್ದುಪಡಿ ತರುತ್ತಿದೆ. ವರ್ಗಾವಣೆ ಅವಧಿ ಮತ್ತು ಮಾನದಂಡ ಸಡಲಿಸುವುದರ ಜತೆಗೆ ಮಂಡಳಿಯಲ್ಲಿ ಸರ್ಕಾರೇತರ ಸಹಸದಸ್ಯರನ್ನು ಸೇರ್ಪಡೆ ಮಾಡುವುದು ಇದರ ಉದ್ದೇಶ. ಹಿಂದೆ ಯಡಿಯೂರಪ್ಪನವರ ಸರಕಾರ ಈ ತಿದ್ದುಪಡಿ ತರಲು ಹೋದಾಗ ಇದೇ ಸಿದ್ದರಾಮಯ್ಯ ವಿರೋಧಿಸಿದ್ದರು. ಆದರೆ ಈಗ ಅವರೇ ತಿದ್ದುಪಡಿ ತಂದಿದ್ದರಿಂದ ಮತ್ತಷ್ಟು ಕೆಂಡಮಂಡಲರಾದ ರಾಜ್ಯಪಾಲರು ವಿಧೇಯಕವನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಸಂಘರ್ಷ ಹೊಳಹು ಕಂಡ ಪರಿ ಇದು.
ಎಲ್ಲಕ್ಕಿಂತ ಮಿಗಿಲಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳ ರಚನೆಗೆ ಸಂವಿಧಾನ ತಿದ್ದುಪಡಿ ತಂದ ಸಂದರ್ಭ. ಆ ಭಾಗದ ಆರು ಜಿಲ್ಲೆಗಳಿಗೆ ವಿಶೇಷ ಸವಲತ್ತು ಕಲ್ಪಿಸುವ ವಿಚಾರದಲ್ಲಿ ಸರ್ಕಾರಕ್ಕಿಂತ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅಂದರೆ ಯೋಜನೆ ಮಂಜೂರು, ಅನುದಾನ ಬಿಡುಗಡೆ, ನೇಮಕ, ವರ್ಗ ಮತ್ತಿತರ ವಿಚಾರದಲ್ಲಿ ರಾಜ್ಯಪಾಲರ ನಿರ್ಣಯವೇ ಅಂತಿಮ. ಇನ್ನಾರು ತಿಂಗಳ ತಮ್ಮ ಅವಧಿ ಮುಗಿಯುವುದರೊಳಗೆ ಮಂಡಳಿ ರಚನೆ ಪ್ರಕ್ರಿಯೆ ಮುಗಿಸಬೇಕು ಎನ್ನುವ ಹಪಾಹಪಿಗೆ ಅವರು ಬಿದ್ದಿದ್ದಾರೆ. ಇದು ಸಿಎಂಗೆ ಸುತಾರಾಂ ಇಷ್ಟವಿಲ್ಲ. ಎಲ್ಲವನ್ನು ಇವರೇ ಮಾಡುವುದಾದರೆ ತಾವು ಸಿಎಂ ಆಗಿದ್ದು ಯಾವ ಪುರುಷಾರ್ಥಕ್ಕೆ ಎಂಬ ಪ್ರತಿಷ್ಠೆ ಅವರದು. ಹೀಗಾಗಿ ದಿಲ್ಲಿಯಲ್ಲಿ ನಡೆದ ಮೊದಲ ಸಮನ್ವಯ ಸಮಿತಿ ಸಭೆಯಲ್ಲಿ ರಾಜ್ಯಪಾಲರ ಬದಲಾವಣೆಗೆ ಪಟ್ಟು ಹಿಡಿದರು. ಆದರೆ ಹಿರಿಯ ಕಾಂಗ್ರೆಸ್ಸಿಗರಾಗಿ ನಾನಾ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ರಾಜ್ಯಪಾಲರು ತಮ್ಮ ಅವಧಿ ಮುಗಿಯವವರೆಗೂ ಹುದ್ದೆ ಖಾತರಿಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಮೇಲಿನ ಸಿಟ್ಟು, ಸೆಡವುಗಳ ನೂರ್ಮಡಿ ಜತೆಜತೆಯಲ್ಲೇ!
ಈ ಮಧ್ಯೆ ಗಣಿ ಅಕ್ರಮ ಕಳಂಕಿತ ಸಂತೋಷ್ ಲಾಡ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಅನೇಕ ಬಾರಿ ಹೇಳಿದರೂ ಸಿದ್ದರಾಯ್ಯ ಸೊಪ್ಪು ಹಾಕದಿದ್ದುದು ರಾಜ್ಯಪಾಲರಲ್ಲಿ ಸಿಟ್ಟು ಝರಿಯಾಗಿ ಹರಿಯುವಂತೆ ಮಾಡಿತ್ತು. ತಮ್ಮ ಸಲಹೆ ಉಪೇಕ್ಷಿಸಿ ನಂತರ ಮಂತ್ರಿ ಮಂಡಳ ವಿಸ್ತರಣೆ ಒಳರಾಜಕೀಯದಲ್ಲಿ ಲಾಡ್ ಕೈಬಿಟ್ಟದ್ದು ರಾಜ್ಯಪಾಲರ ಪ್ರತಿಷ್ಠೆಯನ್ನು ಕೆಣಕಿತ್ತು.
ರಾಜ್ಯಪಾಲರ ಸಮರ ಎಷ್ಟರ ಮಟ್ಟಿಗೆ ತಾರಕ ಮುಟ್ಟಿದೆಯೆಂದರೆ ವಿಧಾನಮಂಡಲದಿಂದ ಅಂಗೀಕಾರವಾಗಿ ಬಂದ ಪ್ರತಿಯೊಂದು ವಿಧೇಯಕವನ್ನು ಪ್ರತಿಪಕ್ಷದವರಿಗಿಂತಲೂ ಸೂಕ್ಷ್ಮ ಹದ್ದಿನ ಕಣ್ಣುಗಳಿಂದ ಪರಾಮರ್ಶಿಸುತ್ತಿದ್ದಾರೆ. ಪ್ರತಿಪಕ್ಷದವರು ಕೂಡ ಬೆರಗಾಗುವಂತೆ ವರ್ತಿಸಿದ್ದಾರೆ. ತಮಗೆ ಸಮಾಧಾನ ತರದ ವಿಧೇಯಕಗಳ್ನು ಮುಲಾಜಿಲ್ಲದೆ ವಾಪಸು ಕಳುಹಿಸುತ್ತಿದ್ದಾರೆ. ಅಲ್ಲದೇ ಎಲ್ಲೆಂದರಲ್ಲಿ ಸಚಿವರ ಕಾರ್ಯವೈಖರಿಯನ್ನು ತ್ಯಾಜ್ಯವಸ್ತುಗಳಂತೆ ಹರಾಜು ಹಾಕುತ್ತಿದ್ದಾರೆ. ಮೇಲಾಗಿ ಸಿದ್ದರಾಮಯ್ಯ ಸಂಪುಟದ ಡಜನ್‌ನಷ್ಟು ಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಚೇರಿಗೂ ಬರುತ್ತಿಲ್ಲ. ಅವರು ತಮ್ಮ ತಮ್ಮ ಕ್ಷೇತ್ರಗಳಿಗೆ ಮಾತ್ರ ಮಂತ್ರಿಗಳಾಗಿದ್ದಾರೆ, ಇಡೀ ರಾಜ್ಯಕ್ಕಲ್ಲ. ಕೆಲವರನ್ನಂತೂ ದುರ್ಬೀನು ಹಾಕಿ ಹುಡುಕಬೇಕಿದೆ. ಭಾವಾವೇಶದಲ್ಲಿ ಸಿಎಂ ಘೋಷಿಸಿದ ಅನೇಕ ಯೋಜನೆಗಳು ನಿಂತಲ್ಲೇ ಸೈಕಲ್ ತುಳಿಯುತ್ತಿವೆ. ಕೆಲವರಂತೂ ಭ್ರಷ್ಟಾಚಾರಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೇ ಆಯಕಟ್ಟಿನ ಹುದ್ದೆಗಳಿಗೆ ಭ್ರಷ್ಟ ಅಧಿಕಾರಿಗಳನ್ನು ಹುಡುಕಿ ತಂದು ಕೂರಿಸಿದ್ದಾರೆ. ಇವೆಲ್ಲವೂ ಅವರ ಪ್ರತಿಷ್ಠೆಪೂರಿತ ಅಸಮಾಧಾನ ಬಹಿರಂಗ ಮಾತುಗಳಾಗಿ ಹೊರಹೊಮ್ಮುತ್ತಿವೆ.
ಮತ್ತೊಂದು ಮಹತ್ವದ ವಿಚಾರದಲ್ಲಿ ಪ್ರತಿಷ್ಠೆ ಜೂಜು ಆಡುತ್ತಿದೆ. ಮುಖ್ಯಮಂತ್ರಿಗಳಾದವರು ಆಗಿಂದಾಗ್ಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರದ ಆಗುಹೋಗುಗಳು, ರಾಜಕೀಯ ವಿದ್ಯಮಾನಗಳ ಬಗ್ಗೆ ವಿವರ ಕೊಡುವುದು ವಾಡಿಕೆ. ಇದರಲ್ಲಿ ಕರ್ತವ್ಯ ಇಣುಕದಿದ್ದರೂ ಸೌಜನ್ಯದ್ದೇ ಪಾರಮ್ಯ. ಹಿಂದೆ ಇದೇ ರಾಜ್ಯಪಾಲರು ಎಷ್ಟೇ ಟೀಕೆ-ಟಿಪ್ಪಣಿ ಮಾಡಿದರೂ, ತರಾಟೆಗೆ ತೆಗೆದುಕೊಂಡರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಪ್ರಾಮಾಣಿಕವಾಗಿ ಅಟೆಂಡೆನ್ಸ್ ಹಾಕುತ್ತಿದ್ದರು. ಆದರೆ 'ಪ್ರತಿಷ್ಠಿತ' ಸಿದ್ದರಾಮಯ್ಯನವರು ರಾಜಭವನದತ್ತ ತಲೆ ಹಾಕುತ್ತಿಲ್ಲ. ಇದು ಕೂಡ ರಾಜ್ಯಪಾಲರ ಪ್ರತಿಷ್ಠೆಯನ್ನು ಅಣಕ ಮಾಡಿದೆ. ಈಗಿನ ಸರ್ಕಾರಕ್ಕಿಂತ ಹಿಂದಿನ ಯಡಯೂರಪ್ಪ ಸರ್ಕಾರವೇ ಉತ್ತಮವಾಗಿ ಕೆಲಸ ಮಾಡುತ್ತಿತ್ತು ಎಂದು ರಾಜ್ಯಪಾಲರು ಹೇಳಿರುವುದಕ್ಕೆ ಇದು ಕಾರಣ ಅಲ್ಲದಿರಬಹುದು. ಆದರೆ ಆಗೊಮ್ಮೆ-ಈಗೊಮ್ಮೆ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ರಾಜ್ಯಪಾಲರು ಈಗ ವಾರಕ್ಕೆರಡು ಬಾರಿ ತರಾಟೆಗೆ ತೆಗೆದುಕೊಳ್ಳುತ್ತಿರುವುದರ ಹಿಂದೆ ಈ ಎಲ್ಲ ಅಂಶಗಳು ಅಡಕವಾಗಿವೆ ಎನ್ನಲು ಅಡ್ಡಿಯಿಲ್ಲ.
ಹಿಂದಾದರೆ ಯಡಿಯೂರಪ್ಪ ಸರ್ಕಾರವನ್ನು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡಾಗ ಆಗಿನ ಉಪಮುಖ್ಯಮಂತ್ರಿ ಈಶ್ಪರಪ್ಪ ರಕ್ಷಣೆಗೆ ಬರುತ್ತಿದ್ದರು. ಆದರೆ ಈಗ ಒಬ್ಬ ಮಂತ್ರಿಯೂ ಆ ಕೆಲಸ ಮಾಡಲು ಸಾಧ್ಯವಿಲ್ಲ. ಅವರದೇ ಪಕ್ಷ ಮೂಲದ ರಾಜ್ಯಪಾಲರು. ಜತೆಗೆ ದಿಲ್ಲಿಯಲ್ಲಿ ಉತ್ತಮ ಸಂಪರ್ಕ ಮತ್ತು ಬಾಂಧವ್ಯ. ಹೀಗಾಗಿ ಹೇರಳ ಬೈಗುಳ ಸ್ವೀಕರಿಸುವುದೊಂದೇ ಅವರ ಪಾಲಿನ ಪಂಚಾಮೃತ.
ಮೊನ್ನೆಯ ಸಮನ್ವಯ ಸಮಿತಿ ಸಭೆಯಲ್ಲೂ ಸಿಎಂ, ಗವರ್ನರ್ ಗಲಾಟೆಯೇ ಪ್ರಮುಖ ಚರ್ಚಾವಸ್ತು. ಆದರೆ ಸೇರುವ ಮೊದಲೇ ಸಭೆ ಬರಕಾಸ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ದಿಗ್ವಿಜಯ್‌ಸಿಂಗ್ ಅವರು ರಾಜ್ಯಪಾಲರ ಸಲಹೆ-ಸೂಚನೆ ಪರಿಗಣಿಸಿ ಎಂದು ಸಿಎಂಗೆ ಕಿವಿಮಾತು ಹೇಳಿ ಹೋಗಿದ್ದಾರೆ. ಇದು ಒಂದು ರೀತಿಯಲ್ಲಿ ಸಿಎಂಗೆ ಹಿನ್ನಡೆಯೇ. ದಿಲ್ಲಿಗೆ ಹೋಗುವ ಮೊದಲು ರಾಜಭವನಕ್ಕೆ ತೆರಳಿ ತೇಪೆ ಹಾಕುವ ಕೆಲಸವನ್ನೂ ಮಾಡಿದ್ದಾರೆ. ಸದ್ಯಕ್ಕೆ ಈ ತೇಪೆಯಿಂದ ರಾಜ್ಯಪಾಲರು, ಮುಖ್ಯಮಂತ್ರಿ ನಡುವಣ ವಾಗ್ಸಮರ ನಿಂತಂತೆ ಭಾಸವಾಗುತ್ತಿದೆ. ಆದರೆ ಒಣಪ್ರತಿಷ್ಠೆಯೇ ಮೂರ್ತಿವೆತ್ತಂತಿರುವ ಸಿದ್ದರಾಮಯ್ಯ ಮತ್ತು ಹಂಸರಾಜ್ ಭಾರದ್ವಾಜ್ ಅವರು ಸುಮ್ಮನಿರುವ ಜಾಯಮಾನದವರಲ್ಲ. ಆರು ತಿಂಗಳು ಗವರ್ನರ್ ಸೇವೆ ಮುಗಿಯಲಿದೆ. ಈಗಿನ ಅವರ ವರ್ತನೆ ನೋಡಿದಾಗ ಸಿದ್ದರಾಮಯ್ಯ ಸರ್ಕಾರಕ್ಕೆ ಸಾಕಷ್ಟು ಗಂಜಿ-ನೀರು ಕುಡಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಲಗೋರಿ: ಸಮರದಲ್ಲಿ ಇಬ್ಬರೂ ಸೋತಿದ್ದಾರೆಂದರೆ ಅಲ್ಲಿ ಪ್ರತಿಷ್ಠೆ ಗೆದ್ದಿದೆ ಎಂದೇ ಅರ್ಥ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


