ಅಂಕಣಗಳು

ಪ್ರತಿ ಹುಡುಗಿಯ ಮನದಲ್ಲೂ ಒಬ್ಬ ಪತ್ತೇದಾರ ಇರ್ತಾನೆ!

ಪ್ರತಿಯೊಂದು ಹುಡುಗಿಯನ್ನು ಪ್ರೀತಿಸುವ, ಆರಾಧಿಸುವ ಪುರುಷರು ಇದ್ದೇ ಇರುತ್ತಾರೆ.

Published On :

ಎಲ್ಲರೂ ಒಪ್ಪಲೇಬೇಕಾದ ಸತ್ಯವೊಂದಿದೆ. ಏನೆಂದರೆ, ಪ್ರತಿಯೊಂದು ಹುಡುಗಿಯನ್ನು (ಅವಳು ಅದೆಷ್ಟೇ ಕುಳ್ಳಿ, ಡುಮ್ಮಿ, ಅಹಂಕಾರಿ, ಕಪ್ಪೆ ಮೂಗಿನ ಕುರೂಪಿಯಾಗಿದ್ದರೂ ಸರಿ) ಪ್ರೀತಿಸುವ, ಆರಾಧಿಸುವ ಪುರುಷರು ಇದ್ದೇ ಇರುತ್ತಾರೆ. ಪಡ್ಡೆ ಹುಡುಗರ ವಿಷಯವನ್ನಂತೂ ಹೇಳುವುದೇ ಬೇಡ. ಮನಸ್ಸಿಗೆ ಒಪ್ಪಿಗೆಯಾಗುವ ಹುಡುಗಿಯಲ್ಲಿ ಅವರು ತಮ್ಮ ಪ್ರೀತಿಯ ಚಿತ್ರನಟಿಯನ್ನು ಕಾಣುತ್ತಾರೆ! ಒಂದು ಆ್ಯಂಗಲ್‌ನಿಂದ ನೋಡಿದ್ರೆ ನನ್ನ ಹುಡುಗಿ ಇಂಥಾ ಚಿತ್ರನಟಿಯ ಥರಾ ಕಾಣ್ತಾಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮನಸ್ಸು ಕದ್ದ ಬೆಡಗಿಯ ಫೋಟೋವನ್ನು ಪರಮಾಪ್ತರಿಗೆ ತೋರಿಸುತ್ತ-ನನ್ನ ಹುಡುಗಿ ಸ್ವಲ್ಪ ಮಟ್ಟಿಗೆ ಆ ಚಿತ್ರನಟಿಯನ್ನೇ ಹೋಲುತ್ತಾಳೆ ಅಲ್ವಾ ಎಂದು ಪ್ರಶ್ನೆ ಹಾಕಿ, ಪಾಸಿಟಿವ್ ಉತ್ತರದ ನಿರೀಕ್ಷೆಯಲ್ಲಿರುತ್ತಾರೆ. ಅಕಸ್ಮಾತ್ ಹುಡುಗನೇನಾದರೂ ಕವಿಯಾಗಿದ್ದರೆ ಮುಗಿದೇ ಹೋಯಿತು. ತನ್ನ ಮನಸ್ಸು ಕ (ಗೆ) ದ್ದವಳ ಮೇಲೆ ಒಂದರ ಹಿಂದೊಂದು ಪದ್ಯ ಬರೆಯುತ್ತಾರೆ. ಪ್ರಿಯತಮೆಯನ್ನು ಬಗೆಬಗೆಯಲ್ಲಿ ವರ್ಣಿಸಿ ಖುಷಿಪಡುತ್ತಾರೆ.
ತಮ್ಮ ಮನಸ್ಸು ಕದ್ದವಳ ವಿಷಯದಲ್ಲಿ ಹುಡುಗರು ಯೋಚಿಸುವುದು ಇಷ್ಟೇ, ಇದಿಷ್ಟೆ. ಅದರಿಂದಾಚೆಗೆ ಅವರು ಯೋಚಿಸುವುದಿಲ್ಲ. ಹುಡುಗಿಯ ತಂದೆ, ತಾಯಿ, ಅವರ ಕೌಟುಂಬಿಕ ಹಿನ್ನೆಲೆ, ಹುಡುಗಿಯ ಹಳೆಯ ಚರಿತ್ರೆ (?) ಇಂಥಾ ವಿಷಯಗಳ ಬಗ್ಗೆ ಹೆಚ್ಚಿನ ಹುಡುಗರು ಯೋಚಿಸುವುದಿಲ್ಲ. ಈ ಪತ್ತೇದಾರಿ ಕೆಲಸವನ್ನು ಹುಡುಗನ ಸೋದರ ಸಂಬಂಧಿಗಳು ಮಾಡುತ್ತಾರೆ. ಈಗ ಹೇಳಲು ಹೊರಟ ವಿಷಯ ಅದಲ್ಲ. ಹುಡುಗರಿಂದ ಬಗೆಬಗೆಯಲ್ಲಿ ಹೊಗಳಿಸಿಕೊಳ್ಳುವ, ಹಲವರಿಂದ 'ಅಮಾಯಕಿ' ಎಂಬ ಹೊಗಳಿಕೆಗೆ ಪಾತ್ರವಾಗುವ, ಹಲವು ಸಂದರ್ಭಗಳಲ್ಲಿ ತುಂಬ ಸುಲಭವಾಗಿ ಸಿಂಪಥಿ ಗಿಟ್ಟಿಸಿಕೊಳ್ಳುವ ಹುಡುಗಿಯರಲ್ಲಿ ಬಹಳ ಮಂದಿಗೆ, ಅದರಲ್ಲೂ ಹುಡುಗರಿಗೆ ಗೊತ್ತಿಲ್ಲದ ಒಂದು ವಿಚಿತ್ರ ಗುಣವಿದೆ. ಅದನ್ನು ಉದಾಹರಣೆಯ ಸಮೇತ ವಿವರಿಸುತ್ತೇನೆ ಕೇಳಿ: ನನ್ನ ಗೆಳತಿಯ ಹೆಸರು ದೀಪಿಕಾ. ತುಂಬ ಹೆಚ್ಚೇನಲ್ಲ; ಮೂರು ವರ್ಷದ ಹಿಂದೆ, ನಾನು ಈ ಪಿ.ಜಿ.ಗೆ ಬಂದಾಗ ಪರಿಚಯವಾದವಳು. ಮನೆಯವರು ಅಂತ ಯಾರೂ ಇರುವುದಿಲ್ಲವಲ್ಲ; ಅದೇ ಕಾರಣದಿಂದ ಪಿ.ಜಿ.ಯಲ್ಲಿರುವ ಹುಡುಗಿಯರ ಮಧ್ಯೆ ತುಂಬ ಬೇಗ ಆತ್ಮೀಯತೆ ಬೆಳೆದು ಬಿಡುತ್ತದೆ. (ಪಿ.ಜಿ.ಯಲ್ಲಿರುವ ಹುಡುಗಿಯರೊಂದಿಗೆ 'ಅಷ್ಟಕ್ಕಷ್ಟೇ' ಎಂಬಂಥ ಬಾಂಧವ್ಯ ಹೊಂದಿದ ಬೆಡಗಿಗೆ ಬಾಯ್‌ಫ್ರೆಂಡ್ ಎಂಬ ಮಾಯಾವಿಯ ಸಾಂಗತ್ಯವಿರುತ್ತದೆ. ಈ ಕಟು ಸತ್ಯ ಹೇಳಿ ಬಿಟ್ಟಿದ್ದಕ್ಕಾಗಿ ವಾರಿಗೆಯ ಗೆಳತಿಯರು ಕ್ಷಮಿಸಲಿ) ಹೀಗೆ, ನನ್ನ ಪಾಲಿನ ಆತ್ಮೀಯರಲ್ಲಿ ಒಬ್ಬಳಾದ ದೀಪಿಕಾ, ನಮ್ಮ ಹರಟೆಯ ಮಧ್ಯೆ ಪ್ರೀತಿ-ಪ್ರೇಮದ ವಿಷಯ ಬಂದರೆ ಸಾಕು; ತಕ್ಷಣವೇ ಬೇರೊಂದು ಕಡೆಗೆ ಎದ್ದು ಹೋಗಿ ಬಿಡುತ್ತಿದ್ದಳು. ಅದನ್ನು ಗಮನಿಸಿದ ನಾವೆಲ್ಲ, ಯಾಕೇ ಹೀಗೆ ಆಡ್ತೀಯ? ನೀನು ಮುಂದೆ ಯಾರನ್ನೂ ಲವ್ ಮಾಡೋದೇ ಇಲ್ವೇನೇ ಎಂದು ಪ್ರಶ್ನೆ ಹಾಕುತ್ತಿದ್ದೆವು. ಉಹುಂ, ಅದಕ್ಕೆಲ್ಲಾ ದೀಪಿಕಾ ಉತ್ತರಿಸುತ್ತಿರಲಿಲ್ಲ.
ಇಂಥ ಹುಡುಗಿಯ ಬದುಕಲ್ಲೂ ದಿಢೀರನೆ ಹೊಸಗಾಳಿ ಬೀಸಿತು. ಆರೆಂಟು ತಿಂಗಳ ಹಿಂದೆ ಸಂಬಂಧಿಕರ ಮದುವೆಯಲ್ಲಿ ಒಬ್ಬ ಹುಡುಗ ಪರಿಚಯವಾದನಂತೆ. ತುಂಬ ಅಕ್ಕರೆಯಿಂದ ಮಾತಾಡಿಸಿದನಂತೆ. ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗ ಅದು ಹೇಗೋ ಜಾಗ ಮಾಡಿಕೊಂಡು ದೀಪಿಕಾಳ ಹಿಂದೆಯೇ ನಿಂತನಂತೆ. ಆನಂತರ ಇವಳು ಹೊರಟು ನಿಂತಾಗ ಸಂಕಟದ ದನಿಯಲ್ಲಿ -'ಅಯ್ಯೋ, ಇಷ್ಟು ಬೇಗ ಹೋಗಿ ಬಿಡ್ತೀರಾ?' ಎಂದು ಕೇಳಿದನಂತೆ. ಇವಳು ಬಿಂಕದಿಂದ 'ಹೌದೂ...' ಎಂದು ಉಲಿದಾಗ, ನೀವು ಮುದ್ದಾಗಿ ಕಾಣ್ತಿದೀರ ಕಣ್ರೀ ಎಂದದ್ದಲ್ಲದೆ, ತನ್ನ ಹೆಸರನ್ನೂ ಹೇಳಿ ಬಿಟ್ಟನಂತೆ. ನಿಜವಾಗಿ ನಡೆದದ್ದು ಇಷ್ಟೇ. ಅವತ್ತಿನಿಂದಲೇ ದೀಪಿಕಾಳ ಮನಸ್ಸು ತಾಳ ತಪ್ಪಿತು. ಅಷ್ಟೆಲ್ಲ ಮುತುವರ್ಜಿಯಿಂದ ಮಾತಾಡಿಸಿದ ಅಂದ ಮೇಲೆ, ಆತ ತನ್ನನ್ನು ಪ್ರೀತಿಸುತ್ತಿರಬಹುದು ಎಂದುಕೊಂಡಳು ದೀಪಿಕಾ. ಅವನಿಗೆ ನನ್ನ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ಆದರೆ ಹೇಳಿಕೊಳ್ಳಲು ಅವನಿಗೆ ಸಂಕೋಚ ಕಣ್ರೀ ಎಂದಳು. ಆನಂತರದಲ್ಲಿ ನಾವು ಹುಡುಗಿಯರೆಲ್ಲಾ ಹರಟೆಗೆ ಕೂತರೆ, ದೀಪಿಕಾಳ ಹುಡುಗನ ವಿಷಯವೇ ಚರ್ಚೆಯ ವಸ್ತುವಾಗುತ್ತಿತ್ತು. ಒಂದೆರಡು ಸಂದರ್ಭದಲ್ಲಿ ದೀಪಿಕಾಳೇ ಹೆಮ್ಮೆಯಿಂದ ಹೇಳಿದ್ದಳು:- 'ಸಿನಿಮಾ ಸ್ಟಾರ್ ದಿಗಂತ್ ಇದ್ದಾನಲ್ಲ; ಅದೇ ಥರಾ ನನ್ನ ಹುಡುಗನೂ ಇದ್ದಾನೆ!' ಅವನು ನಿಜವಾಗಿಯೂ ಇಷ್ಟಪಡುತ್ತಿದ್ದಾನೋ ಇಲ್ಲವೋ ಎಂಬುದನ್ನು ತಿಳಿಯಬೇಕಲ್ಲ; ಅದಕ್ಕೆ ದೀಪಿಕಾ ಏನು ಮಾಡಿದಳು ಗೊತ್ತೆ? ಫೇಸ್ ಬುಕ್‌ನಲ್ಲಿ ಹುಡುಗನನ್ನು ಫ್ರೆಂಡ್ ಮಾಡಿಕೊಂಡಳು. ಅವಳ ಮೂಲಕ ಆ ಹುಡುಗ ನನಗೂ ಫ್ರೆಂಡ್ ಆದ. ಮುಂದಿನ ಕೆಲವೇ ದಿನಗಳಲ್ಲಿ ಅವನ ಮೊಬೈಲ್ ನಂಬರ್ ಕೂಡ ಸಿಕ್ಕಿತು. ದಿನಕ್ಕೆ ಎರಡು ಬಾರಿ ಗುಡ್ ಮಾರ್ನಿಂಗ್, ಗುಡ್‌ನೈಟ್ ಹೇಳುವುದು ನಮಗೆ ಅಭ್ಯಾಸವಾಯಿತು: ಅವನಿಗೂ!
ನಾವು ಏನೇ ತಿಪ್ಪರಲಾಗ ಹಾಕಿದರೂ, ಎಲ್ಲ ಹುಡುಗಿಯರೂ ಆಸೆ ಪಡುವಂತಿದ್ದ ದೀಪಿಕಾಳ ಕನಸಿನ ಹುಡುಗ, ಅವಳನ್ನು ಪ್ರೀತಿಸುತ್ತಿದ್ದಾನೋ ಇಲ್ಲವೋ ಎಂಬುದು ಖಚಿತವಾಗಲೇ ಇಲ್ಲ. ಈ ಮಧ್ಯೆ ಪಿ.ಜಿ.ಯಲ್ಲಿದ್ದ ಎಲ್ಲ ಹುಡುಗಿಯರಿಗೂ ಅವನು ಫ್ರೆಂಡ್ ಆಗಿದ್ದರಿಂದ, ಅವನಿಗೆ ಎಲ್ಲರೂ ಮೆಸೇಜ್ ಮಾಡ್ತಿದ್ವಿ. ಪಾಪ, ಅವನು ಚೂರೂ ಬೇಸರಿಸದೆ ಎಲ್ಲರಿಗೂ ಉತ್ತರ ಕೊಡುತ್ತಿದ್ದ. ಈ ಬೆಳವಣಿಗೆಯಿಂದ ಅಸಮಾಧಾನಗೊಂಡವಳು ದೀಪಿಕಾ! ತನ್ನ ಹುಡುಗನಿಗೆ ಗೆಳತಿಯರೇ ಗಾಳ ಹಾಕಿ ಬಿಟ್ಟರೆ ಎಂಬ ಅನುಮಾನ ಅವಳದಾಯ್ತು. ಮರುದಿನದಿಂದಲೇ ಸಂದರ್ಭ ಸಿಕ್ಕಾಗೆಲ್ಲ ನಮಗ್ಯಾರಿಗೂ ಗೊತ್ತಾಗದಂತೆ ನಮ್ಮೆಲ್ಲರ ಮೊಬೈಲ್‌ಗಳನ್ನು ಚೆಕ್ ಮಾಡಿದ್ದಳು. 'ಅವನಿಗೆ' ಯಾರ್ಯಾರು, ಹೇಗೆಲ್ಲಾ ಮೆಸೇಜ್ ಕಳಿಸಿದ್ದಾರೆ? ಅವನು ಏನೆಂದು ಉತ್ತರ ಕಳಿಸಿದ್ದಾನೆ ಎಂದು ಗಮನಿಸಿದ್ದಳು. ಅಷ್ಟೇ ಅಲ್ಲ, ನಮಗೇ ಗೊತ್ತಾಗದಂತೆ ಪಿ.ಜಿ.ಯಲ್ಲಿದ್ದ ಎಲ್ಲ ಹುಡುಗಿಯರ ಫೇಸ್‌ಬುಕ್ ಪಾಸ್‌ವರ್ಡ್‌ಗಳನ್ನು ಹೇಗೋ ಕಂಡು ಹಿಡಿದು ಅಲ್ಲಿ ಕೂಡ ನಾವು ಯಾರಾದರೂ ಅವನೊಂದಿಗೆ ಮಾತುಕತೆ ನಡೆಸಿದ್ದೇವಾ ಎಂದು ನೋಡಿದ್ದಳು. ಅಷ್ಟೇ ಅಲ್ಲ; ಆ ಹುಡುಗನನ್ನು ತುಂಬಾ ಹುಷಾರಾಗಿ ಫಾಲೋ ಮಾಡಿ ಅವನು ದಿನಾಲೂ ಎಲ್ಲೆಲ್ಲಿಗೆ ಹೋಗುತ್ತಾನೆ. ಹೆಚ್ಚಾಗಿ ಯಾರೊಂದಿಗೆ ಮಾತನಾಡುತ್ತಾನೆ? ಹುಡುಗಿಯರೊಂದಿಗೆ ಅವನ ವರ್ತನೆ ಹೇಗಿದೆ? ಅವನ ಮನೆಯಲ್ಲಿ 'ಫೈನಲ್ ' ಎನ್ನುವಂಥ ಮಾತು ಯಾರದಾಗಿರುತ್ತದೆ ಎಂಬಿತ್ಯಾದಿ ವಿವರವನ್ನೆಲ್ಲಾ ಕಲೆ ಹಾಕಿದ್ದಳು. ಅಪ್ಪ-ಅಮ್ಮ ನೋಡುವ ಹುಡುಗಿಯನ್ನೇ ಮದುವೆಯಾಗ್ತೇನೆ ಎಂದು ಆತ ತುಂಬ ಹಿಂದೆಯೇ ಹೇಳಿದ್ದಾನಂತೆ ಎಂಬ ತಿಳಿವಳಿಕೆಯೊಂದಿಗೆ ದೀಪಿಕಾಳ ಪತ್ತೇದಾರಿ ಕೆಲಸಕ್ಕೆ ತೆರೆ ಬಿದ್ದಿತ್ತು. ವಾರದ ಹಿಂದೆ, ತುಸು ಸಂಭ್ರಮ, ತುಸು ವಿಷಾದದಿಂದ ಅವಳೇ ಇದನ್ನೆಲ್ಲ ಹೇಳಿಕೊಂಡಳು. ಅರ್ಥವಾಯ್ತು ತಾನೆ? ಹುಡುಗರಿಂದ ಅಮಾಯಕಿ, ಮುಗ್ಧೆ, ರಾಣಿ, ದೇವತೆ ಎಂದೆಲ್ಲಾ ಕರೆಯಿಸಿಕೊಳ್ಳುವ ಹುಡುಗಿಯರಲ್ಲಿ, ಒಬ್ಬ ಚಾಣಾಕ್ಷ್ಯ ಪತ್ತೇದಾರನೂ ಇರ್ತಾನೆ!

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.