ಕುಟುಂಬ ರಾಜಕಾರಣ ಕೊನೆ ಆಗದಿದ್ದರೆ ಕಾಂಗ್ರೆಸ್ ಕಥೆ ಖತಂ!
ಆತ್ಮವಿಮರ್ಷೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ..ಸೋತವರೆಲ್ಲ ಈ ಪದ ಉಚ್ಚರಿಸು..
ನಾಲ್ಕು ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಹೊರಬಿದ್ದ ನಂತರ ದೊಡ್ಡ ದೊಡ್ಡ ಪಕ್ಷಗಳೆಲ್ಲ ನಾಚಿಕೆ, ಗೊಂದಲ, ಅಸಹನೆಯಿಂದ ಒದ್ದಾಡುತ್ತಿವೆ. ಕೆಲವು ನಾಯಕರಂತೂ ಹೆದರಿ ಗಡಗಡ ನಡುಗುತ್ತಿದ್ದಾರೆ. ಆತ್ಮವಿಮರ್ಷೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಈಗಂತೂ ಸೋತವರೆಲ್ಲ ಈ ಪದವನ್ನು ಉಚ್ಚರಿಸುವುದು ಫ್ಯಾಷನ್ ಎಂದು ಭಾವಿಸಿದಂತಿದೆ. ಎಂದಿನಂತೆ ಈ ರಾಜಕೀಯದಾಟ ಮತ್ತೆ ಹಳೆಯ ಅಲಿಖಿತ ನಿಯಮಗಳ ಮೇಲೆಯೇ ಸಾಗಿದೆ. ಅವನನ್ನು ಇವನು ಬೈಯುವುದು, ಇವನನ್ನು ಮತ್ತೊಬ್ಬ ಬೈಯ್ಯುವುದು! ವಾಸ್ತವವೇನೆಂದರೆ, ನಮ್ಮ ರಾಜಕಾರಣಿಗಳನ್ನು ಸುಧಾರಿಸುವುದಕ್ಕೆ ಸಾಧ್ಯವಿಲ್ಲ, ಅವರನ್ನೇನಿದ್ದರೂ ಒದ್ದು ಹೊರಗೋಡಿಸಬೇಕು.
ರಾಜಕೀಯ ವರ್ಗದ 'ಎಂದಿಗೂ ಬದಲಾಗದ' ಗುಣವನ್ನೇ ಸೋತ ನಾಯಕರು ತಮ್ಮ ಪ್ರತಿಕ್ರಿಯೆಯ ಮೂಲಕ ಹೊರಗೆಡವುತ್ತಿದ್ದಾರೆ. ಉದಾಹರಣೆಯಾಗಿ ಶರದ್ ಪವಾರ್ ಮತ್ತು ದಿಗ್ವಿಜಯ್ ಸಿಂಗ್ ಅವರನ್ನು ತೆಗೆದುಕೊಳ್ಳೋಣ. ಕಾಂಗ್ರೆಸ್ನ ನಾಯಕತ್ವ ದುರ್ಬಲವಾಗಿದೆ ಎಂದು ಶರದ್ ಪವಾರ್ ಸರಿಯಾಗಿಯೇ ಹೇಳಿದ್ದರು. ಆದರೆ ಆಮ್ ಆದ್ಮಿ ಪಕ್ಷದ ಗೆಲುವಿಗೆ 'ವಾಸ್ತವದೊಂದಿಗೆ ಸಂಪರ್ಕವೇ ಇಲ್ಲದವರು' ಕಾರಣರಾಗಿದ್ದಾರೆ ಎನ್ನುವ ಅವರ ವಾದ ವಾಸ್ತವಕ್ಕೆ ಬಹುದೂರವಾಗಿದೆ!
ಯುವಜನತೆಯೊಂದಿಗೆ ಆಮ್ ಆದ್ಮಿ ಪಕ್ಷ ಬೆಳೆಸಿಕೊಂಡ ಸಂಪರ್ಕವೇ ಅದರ ಈ ಸಾಧನೆಗೆ ಕಾರಣವಾಯಿತು. 21ನೇ ಶತಮಾನದ ವಾಸ್ತವದೊಂದಿಗೆ ಸಂಪರ್ಕ ಕಳೆದಿಕೊಂಡಿರುವವರು ಇಷ್ಟು ವರ್ಷಗಳಿಂದ ಕುಟುಂಬ ರಾಜಕಾರಣದಲ್ಲಿ ಮುಳುಗಿ ಕುಳಿತಲ್ಲೇ ದಪ್ಪಗಾದ ರಾಜಕಾರಣಿಗಳು ಎನ್ನುವುದು ಶರದ್ ಪವಾರ್ಗೆ ಅರ್ಥವಾಗುತ್ತಿಲ್ಲ. ಅದಿರಲಿ, ಈ ಶರದ್ ಪವಾರ್ ದಶಕಗಳಿಂದ ರಾಜಕೀಯದಲ್ಲಿದ್ದಾರೆ, ಅವರಿಂದ ದೇಶಕ್ಕೆ ಏನಾದರೂ ಲಾಭವಾಗಿದೆಯೇ? ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದನ್ನು ರಿಯಲ್ ಎಸ್ಟೇಟ್ ಮಾಫಿಯಾಗಳ 'ಕೃಪಾಕಟಾಕ್ಷ' ಎಂದು ಹೇಳಲಾಗುತ್ತದೆ. ಅವರು ಕೃಷಿ ಸಚಿವರಾದನಂತರವಂತೂ ಅಮೆರಿಕದ ಬೀಜ ಕಂಪನಿಗಳು ನಮ್ಮ ಆಹಾರ ವ್ಯವಸ್ಥೆಯ ಮೇಲೆ ಏಕಸ್ವಾಮ್ಯ ಮೆರೆಯುವಷ್ಟು ಬಲಿಷ್ಠವಾಗಿಬಿಟ್ಟಿವೆ. ಎಂಡೋಸಲ್ಫಾನಂಥ ವಿಷಕಾರಿ ಕ್ರಿಮಿನಾಶಕವನ್ನೂ ಶರದ್ ಪವಾರ್ ತಲೆಯ ಮೇಲೆ ಹೊತ್ತು ಕುಣಿದದ್ದು ತಿಳಿಯದ ಸಂಗತಿಯೇನಲ್ಲ. ದೂರದೃಷ್ಟಿಯಿಲ್ಲದ ನಾಯಕತ್ವ ನಿಜಕ್ಕೂ ಕೆಟ್ಟದ್ದು. ಆದರೆ ಅದಕ್ಕಿಂತಲೂ ಕೆಟ್ಟದ್ದೆಂದರೆ ರಾಷ್ಟ್ರಾಭಿಮಾನವಿಲ್ಲದ ಬಲಿಷ್ಠ ನಾಯಕತ್ವ.
ಇನ್ನು ದಿಗ್ವಿಜಯ್ ಸಿಂಗ್ ಅವರ ವಿಷಯ. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅವರು ಎಷ್ಟೊಂದು ಫ್ಲಾಪ್ ಆದರೆಂದರೆ, ಕಳೆದ ಹತ್ತು ವರ್ಷಗಳಿಂದ ಅವರು ಚುನಾವಣೆಗಳಿಂದ ದೂರವೇ ಉಳಿಯುತ್ತಿದ್ದಾರೆ. ಆದರೂ ತಾನೇ ಕಾಂಗ್ರೆಸ್ನ ಮುಖವಾಣಿಯೇನೋ ಎನ್ನುವಂತೆ ದಿಗ್ವಿಜಯ್ ವರ್ತಿಸುತ್ತಾರೆ. ಚುನಾವಣಾ ಫಲಿತಾಂಶಗಳು ಹೊರಬಿದ್ದದ್ದೇ ತಡ, ರಾಹುಲ್ ಗಾಂಧಿಗೆ ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿ ಕಿರೀಟವನ್ನು ತೊಡಿಸಬೇಕೆಂದು ದಿಗ್ವಿಜಯ್ ಹೇಳಿದರು. ಹೀಗೆ ಹೇಳುವ ಮೂಲಕ ಅವರು ಒಂದೇ ವಾಕ್ಯದಲ್ಲಿ ಕಾಂಗ್ರೆಸ್ನ ಮತ್ತು ದೇಶದ ಹೀನಾಯ ಪರಿಸ್ಥಿತಿಯನ್ನು ಜನತೆಯ ಕಣ್ಣಮುಂದೆ ತರಲು ಯಶಸ್ವಿಯಾದರು.
ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದರಿಂದಲೇ ಈ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಅದು ಸೋತಿತು ಎನ್ನುವುದು ಅವರ ವಾದ. ಅಂದರೆ ರಾಹುಲ್ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿದ್ದರೆ ಮತದಾರರೆಲ್ಲರೂ ಕುರಿ ಮಂದೆಯಂತೆ ಕಾಂಗ್ರೆಸ್ನತ್ತ ಬರುತ್ತಿದ್ದರಂತೆ! ಇದು ನಿಜಕ್ಕೂ ಕಳಪೆ ಮನಸ್ಥಿತಿಯಾದರೂ, ಇಂದು ಕಾಂಗ್ರೆಸ್ ಅನ್ನು ಮುನ್ನಡೆಸುತ್ತಿರುವುದು ಇದೇ ಮನಸ್ಥಿತಿಯೇ.
ರಾಹುಲ್ ಗಾಂಧಿ ಪರಿಹಾರವಲ್ಲ, ಅವರೇ ಸಮಸ್ಯೆ. ಕುಟುಂಬ ರಾಜಕಾರಣವೂ ಸಮಸ್ಯೆ. ಇದು ಪ್ರಜಾಪ್ರಭುತ್ವದ ಅಣಕ ಎನ್ನುವುದು ಅನಕ್ಷರಸ್ಥ ಮತದಾರರಿಗೂ ಈಗ ಮನವರಿಕೆಯಾಗಿದೆ. ಎಲ್ಲಿಯವರೆಗೂ ಕಾಂಗ್ರೆಸ್ಸಿಗರು ಕುಟುಂಬ ರಾಜಕಾರಣದ ನೆರಳಲ್ಲಿ ಬದುಕುತ್ತಾರೋ ಅಲ್ಲಿಯವರೆಗೂ ಜನ ಅವರನ್ನು ತಿರಸ್ಕರಿಸುತ್ತಲೇ ಇರುತ್ತಾರೆ. ಕಾಂಗ್ರೆಸ್ಗೆ ಈ ಬಗ್ಗೆ ಸ್ಪಷ್ಟವಾಗಿ ಅರಿವಾಗಿಲ್ಲ ಎನಿಸುತ್ತದೆ. ಹಾಗಾಗೇ ಒಂದಾದ ನಂತರ ಒಂದರಂತೆ ಹೆಸರುಗಳು ಹಾರಿ ಹಾರಿ ಬರುತ್ತಿವೆ. ಆದರೆ ಒಂದಂತೂ ಸ್ಪಷ್ಟ, ಯಾರು ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುತ್ತಾರೋ ಅವರ ಹೆಸರು ಮಾತ್ರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಎ.ಕೆ. ಆ್ಯಂಟನಿ ಮತ್ತು ಸುಶೀಲ್
ಕುಮಾರ್ ಶಿಂದೆಯಂತೂ ಮನಮೋಹನ್ ಸಿಂಗ್ ತದ್ರೂಪದಂತಿದ್ದಾರೆ(ಕುಟುಂಬಕ್ಕೆ ನಿಷ್ಠರಾಗಿರುವುದರಲ್ಲಿ). ಆದರೆ ಮನಮೋಹನ್ ಸಿಂಗ್ ಅವರಿಗೆ ಕಡೇಪಕ್ಷ ಆರ್ಥಿಕತಜ್ಞ ಎನ್ನುವ ಬಿರುದಾದರೂ ಇದೆ! ಕಳಂಕಿತರ ಬದಲು ಸ್ವಚ್ಛ ಹಿನ್ನೆಲೆಯಿರುವವರಿಗೇ ಆದ್ಯತೆ ಎನ್ನುವ ವಾದವನ್ನು ಪಿ. ಚಿಂದಬರಂ ಹುಸಿ ಮಾಡಲಿದ್ದಾರೆ.
ಸತ್ಯವೇನೆಂದರೆ, ಕುಟುಂಬ ರಾಜಕಾರಣಕ್ಕೆ ತಲೆ ಬಾಗದವರನ್ನು ಕಾಂಗ್ರೆಸ್ ಕಣ್ಣೆತ್ತಿಯೂ ನೋಡುತ್ತಿಲ್ಲ. ಆದರೆ ಒಂದು ವಿಷಯ ಅದಕ್ಕೆ ಅರ್ಥವಾಗುತ್ತಿಲ್ಲ. ಭಾರತೀಯರು ಆ ಘಟ್ಟವನ್ನು ದಾಟಿ ಬಹಳ ಮುಂದೆ ಬಂದು ಬಿಟ್ಟಿದ್ದಾರೆ. ಡೈನಸ್ಟಿ ಪಾಲಿಟಿಕ್ಸ್ ನಿವೃತ್ತಿ ಪಡೆದರೆ ಮಾತ್ರ ಕಾಂಗ್ರೆಸ್ ಬದುಕುಳಿಯಬಲ್ಲದು. ಇಲ್ಲದಿದ್ದರೆ ಅದರ ಕಥೆ ಮುಗಿಯಿತು!
- ಟಿಜೆಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

