ಅಂಕಣಗಳು

ಇನ್ಶಾ ಅಲ್ಲಾಹ್... ಮಾಸದಿರಲಿ ಬಾಂಗ್ಲಾದ ಮಂದಹಾಸ

ಡಿಸೆಂಬರ್‌ನ ಚಳಿಯಲ್ಲಿ ಮೆಲ್ಲನೆ ಕಾವೇರಲು ಶುರುವಾಗಿದೆ ಚುನಾವಣೆಯ ಬಿಸಿ...

ಇನ್ಶಾ ಅಲ್ಲಾಹ್... ಮಾಸದಿರಲಿ ಬಾಂಗ್ಲಾದ ಮಂದಹಾಸ
Published On :

ಡಿಸೆಂಬರ್‌ನ ಚಳಿಯಲ್ಲಿ ಮೆಲ್ಲನೆ ಕಾವೇರಲು ಶುರುವಾಗಿದೆ ಚುನಾವಣೆಯ ಬಿಸಿ. ಲೋಕಸಭೆ ಚುನಾವಣೆಗೆ ಐದಾರು ತಿಂಗಳುಗಳೇ ದೂರವಿದ್ದರೂ ರಾಜಕೀಯದ ಕ್ಯಾಲೆಂಡರ್‌ಗೆ ಈ ಅಂತರ ಬಹಳ ಚಿಕ್ಕದೇ. ಹಾಗೆಂದೇ ಐದು ರಾಜ್ಯಗಳ ಫಲಿತಾಂಶವನ್ನೇ ಮುನ್ನುಡಿಯಾಗಿರಿಸಿಕೊಂಡು ಚುನಾವಣಾ ಹೋರಾಟದ ಪುಟಗಳು ಅದಾಗಲೇ ಮೈದುಂಬಿಕೊಳ್ಳುವುದಕ್ಕೆ ಪ್ರಾರಂಭಿಸಿವೆ ಅಂತಲೇ ಹೇಳಬಹುದು.
ಇಲ್ಲಿ ಮೋದಿಯೋ, ಗಾಂಧಿಯೋ ಅಂತೆಲ್ಲ ಮಾತು ಬಿರುಸುಗೊಳ್ಳುತ್ತಿರುವ ವೇಳೆಗೆ ಈ ಬಿಸಿಗೆ ತನ್ನದೂ ಕೊಡುಗೆ ಇರಲಿ ಎಂಬಂತೆ ಭಾರತದ ಮಗ್ಗುಲಿನಿಂದಲೂ ಚುನಾವಣೆಯ ಕಾವು. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ ಐದಕ್ಕೆಲ್ಲ ಬಾಂಗ್ಲಾದೇಶದಲ್ಲಿ ಚುನಾವಣೆ ನೆರವೇರಬೇಕು. ಅಲ್ಲಿನ ಚುನಾವಣಾ ಆಯೋಗವೇನೋ ಹೀಗೊಂದು ಮುಹೂರ್ತ ಕೊಟ್ಟಿದೆಯಾದರೂ ಅದು ಸಂಪನ್ನವಾಗುವ ಲಕ್ಷಣಗಳೇ ಕಡಿಮೆಯಾಗುತ್ತಿವೆ. ಪ್ರಮುಖ ಪ್ರತಿಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳೆಲ್ಲ ತಮ್ಮದು ಚುನಾವಣೆಗೆ ಬಹಿಷ್ಕಾರ ಎಂದಿವೆ. ಈಗಿನ ಪ್ರಧಾನಿ, ಆವಾಮಿ ಲೀಗ್‌ನ ಶೇಖ್ ಹಸೀನಾ ನೇತೃತ್ವದ ಸರ್ಕಾರದಡಿಯಲ್ಲಿ ನಡೆಯುವ ಚುನಾವಣೆ ಬಗ್ಗೆ ತಮಗೆ ನಂಬಿಕೆಯೇ ಇಲ್ಲ. ಈ ಹಿಂದಿನ ಉದಾಹರಣೆ ಅನುಸರಿಸಿ, ಮುಖ್ಯ ನ್ಯಾಯಮೂರ್ತಿ ನೇತೃತ್ವದ ಹಂಗಾಮಿ ಸರ್ಕಾರವೊಂದು ಚುನಾವಣೆ ನಡೆಸುವಂತಾಗಲಿ ಎಂಬುದು ಅವರೆಲ್ಲರ ಒತ್ತಾಯ. ಇಂಥದೊಂದು ಬೇಡಿಕೆ ಇಟ್ಟುಕೊಂಡೇ ಹಾದಿಬೀದಿಯಲ್ಲಿ ಪ್ರತಿಭಟನೆ, ದೊಂಬಿ, ಸಂಘರ್ಷಗಳೆಲ್ಲ ತೆರೆದುಕೊಳ್ಳುತ್ತಿವೆ. ತಟಸ್ಥ ಹಂಗಾಮಿ ಸರ್ಕಾರದ ಉಸ್ತುವಾರಿಯಲ್ಲಿ ಚುನಾವಣೆ ನಡೆಸುವ ಪ್ರಕ್ರಿಯೆಯೊಂದನ್ನು 1996ರ ಸಂವಿಧಾನ ತಿದ್ದುಪಡಿ ಮೂಲಕ ತಂದಿದ್ದು ಹೌದಾದರೂ, 2010ರ ಹೈಕೋರ್ಟ್ ಆದೇಶದ ಪ್ರಕಾರ ಅದನ್ನು ರದ್ದುಪಡಿಸಲಾಗಿದೆ. ಹೀಗಾಗಿ ಅಧಿಕಾರದಲ್ಲಿರುವ ಸರ್ಕಾರದಡಿಯಲ್ಲೇ ಚುನಾವಣೆಯಾಗುತ್ತದೆ ಅಂತ ಆವಾಮಿ ಲೀಗ್ ಕೂಡ ಪಟ್ಟು ಹಿಡಿಯುವುದರೊಂದಿಗೆ ಬಾಂಗ್ಲಾದ ಜನತಂತ್ರವೇ ಒಂದರ್ಥದಲ್ಲಿ ಅನಿಶ್ಚಿತತೆಗೆ ಪಕ್ಕಾಗಿದೆ.
ಭವ್ಯ ಭಾರತದ ಮತ ಕಾಳಗದ ಕಾವೇ ಸಾಕಷ್ಟಿರಬೇಕಾದರೆ ಬಾಂಗ್ಲಾದೇಶದ ಜಂಜಾಟ ಕಟ್ಟಿಕೊಂಡು ನಮಗೇನು ಎಂದೆನ್ನುವಂತೆಯೇ ಇಲ್ಲ. ಇಂಥದೇ ಒಂದು ಡಿಸೆಂಬರಿನ ಚಳಿಯಲ್ಲಿ ನೆತ್ತರು- ಚೀತ್ಕಾರಗಳ ನಡುವಿಂದ ಬಾಂಗ್ಲಾದೇಶವೆಂಬ ರಾಷ್ಟ್ರ ಜನಿಸಿದ್ದೇ ನಮ್ಮಿಂದ. 1971ರ ಆ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನವೆಂದು ಕರೆಸಿಕೊಂಡು ಪಶ್ಚಿಮ ಪಾಕಿಸ್ತಾನದವರ ದೌರ್ಜನ್ಯ- ಅತ್ಯಾಚಾರಗಳಿಗೆ ತುತ್ತಾಗಿ, ಲಕ್ಷ ಲಕ್ಷ ಮಂದಿ ಬಂಗಾಳಿ ಹಿಂದುಗಳು ಆರ್ತವಾಗಿ ಭಾರತದ ಗಡಿಯೊಳಗೆ ಬಂದು ಪ್ರಾಣ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾದಾಗ ನಿನಗೇನಾದರೆ ನನಗೇನು ಎಂದು ಭಾರತ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಮಾನವ ಹಕ್ಕು, ಅಂತಾರಾಷ್ಟ್ರೀಯ ನ್ಯಾಯ ಎಂದೆಲ್ಲ ದೊಡ್ಡ ದೊಡ್ಡ ಮಾತುದುರಿಸುವ ಅಮೆರಿಕದಂಥ ದೇಶಗಳು ಅವತ್ತು ಉರಿವ ಮನೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದ್ದರೆ, ಇಂದಿರಾ ಗಾಂಧಿ ನಾಯಕತ್ವದ ಭಾರತ ಮಾತ್ರವೇ ಧಾಡಸಿ ಹೆಜ್ಜೆ ಇಟ್ಟಿತ್ತು. ಜಾಗತಿಕ ಯುದ್ಧ ಚರಿತ್ರೆಯಲ್ಲೇ ಹದಿಮೂರೇ ದಿನಗಳಲ್ಲಿ ಮುಗಿದ ಕ್ಷಿಪ್ರ ಕದನ ಎಂಬ ದಾಖಲೆಗೆ ಪಾತ್ರವಾಗಿರುವ, ಬಾಂಗ್ಲಾ ವಿಮೋಚನೆಗೆ ಕಾರಣವಾದ ಆ ಸಮರದ ನೇತೃತ್ವ ಭಾರತದ್ದಾಗಿತ್ತು ಎಂಬುದು ಹೆಮ್ಮೆಯ ಸಂಗತಿಯಲ್ಲದೇ ಇನ್ನೇನು? ಆ ದೇಶದೊಂದಿಗೆ ಇತಿಹಾಸ ಹಂಚಿಕೊಂಡಿರುವ ನಾವು, ಅದರ ವರ್ತಮಾನದ ಬಗ್ಗೆ, ಅದರ ಆಡಳಿತ ಯಾರ ಕೈಲಿದ್ದರೆ ನಮಗೆ ಚೆನ್ನ ಎಂಬುದರ ಬಗ್ಗೆ ಮಾತನಾಡದೇ ಇರಲಾದೀತೇ? ನಾವೇನೂ ಅವರ ಚುನಾವಣೆಯಲ್ಲಿ ಮತ ಒತ್ತಿ ಬರಲಾರೆವೆಂಬುದು ಹೌದಾದರೂ ಈ ದೇಶ ಹೊರಳಿಕೊಳ್ಳುವ ಬಗೆ ಇಲ್ಲೊಂದು ಕಂಪನವನ್ನು ಸೃಷ್ಟಿಸದೇ ಹೋಗುವುದಿಲ್ಲ. ಹೀಗಾಗಿ ಅದರ ಒಳಿತಿನೊಳಗೆ ಅಂತರ್ಗತವಾಗಿರುವ ನಮ್ಮ ಒಳಿತಿನ ಕುರಿತ ಆಶಯ- ಪ್ರಾರ್ಥನೆಗೆ ಸಕಾಲವಿದು. ಹಾಗಾದರೆ ನಮ್ಮ ಪ್ರಾರ್ಥನೆ ಏನಿರಬೇಕು ಎಂಬುದು ಮನದಟ್ಟಾಗಬೇಕಾದರೆ ಮೊದಲು ದೂರದಲ್ಲೆಲ್ಲೋ ಕ್ಷೀಣವಾಗುತ್ತಿರುವ ಇತಿಹಾಸದ ಹೆಜ್ಜೆ ಸಪ್ಪಳಗಳಿಗೆ ಕಿವಿಯಾಗಬೇಕು.
***
1971ರ ಡಿಸೆಂಬರ್ 11. ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನಿ ಸೇನೆ ಹೆಚ್ಚೂ ಕಡಿಮೆ ಸೋತು ಶರಣಾಗಿತ್ತಾದರೂ ಎಲ್ಲವೂ ಮುಗಿದಿರಲಿಲ್ಲ. ಧನಮಂಡಿ ಪ್ರಾಂತ್ಯದ ಆ ಮನೆಯಿಂದ ಕೇಳಿಬರುತ್ತಿತ್ತು ನಿರಂತರ ಚೀರಾಟ. ಆ ಮನೆಯನ್ನು ಸುಮಾರು ಹದಿನೈದು ಮಂದಿ ಪಾಕಿಸ್ತಾನಿ ಯೋಧರು ಸುತ್ತುವರಿದಿದ್ದರು. ಮನೆಯಲ್ಲಿ ಬಂಧಿತರಾಗಿದ್ದವರು ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯಕ್ಕಾಗಿ ಧ್ವನಿ ಮೊಳಗಿಸಿದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಕುಟುಂಬ. ಮುಜಿಬುರ್ ಅವರನ್ನು ಆ ವರ್ಷದ ಮಾರ್ಚ್ ತಿಂಗಳಿನಲ್ಲೇ ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿತ್ತು. ಇದೀಗ ಇಲ್ಲಿನ ಈ ಮನೆಯಲ್ಲಿ ಸೆರೆಯಲ್ಲಿದ್ದ ಅವರ ಮಗಳು ಶೇಖ್ ಹಸೀನಾ ಸೇರಿದಂತೆ ಎಲ್ಲ ಸದಸ್ಯರನ್ನೂ ಮುಗಿಸಿಬಿಡುವುದಕ್ಕೆ ಸಂದೇಶ ಬಂದಿತ್ತು. ಕ್ಷಣ ತಡವಾಗಿದ್ದರೆ ಇತಿಹಾಸದ ಪಥವೇ ಬೇರೆಯಾಗಿಬಿಡುತ್ತಿತ್ತೇನೋ. ಆಗಲ್ಲಿ ಪಾಕಿ ಸೈನಿಕರ ಎದುರು ಕಾಣಿಸಿಕೊಂಡನೊಬ್ಬ ಭಾರತೀಯ ಸೇನಾಧಿಕಾರಿ!
29ರ ಹರೆಯದ ಮೇಜರ್ ಅಶೋಕ್ ತಾರಾ ತಮ್ಮ ಪಡೆಯ ಮೂವರು ಯೋಧರೊಂದಿಗೆ ಅಲ್ಲಿಗೆ ತಲುಪಿದ್ದರು. ಇನ್ನೇನು ಢಾಕಾ ವಿಮಾನ ನಿಲ್ದಾಣವನ್ನು ವಶಪಡಿಸಿಕೊಳ್ಳಲಿದ್ದ ಅವರ ಪಡೆಗೆ ಮೊದಲು ಮುಜಿಬುರ್ ಅವರ ಕುಟುಂಬ ಸದಸ್ಯರನ್ನು ರಕ್ಷಿಸಿ ಎಂಬ ಸೂಚನೆ ನೀಡಲಾಗಿತ್ತು. ಇವರನ್ನು ನೋಡುತ್ತಲೇ ಮುಂದಡಿಯಿಟ್ಟರೆ ಗುಂಡಿಕ್ಕುತ್ತೇವೆ ಅಂತ ಬಂದೂಕು ಗುರಿ ಮಾಡಿದರು ಪಾಕ್ ಯೋಧರು. ಆ ಮನೆಯೆಡೆಗೆ ಸಾಗುವ ಹಾದಿಯಲ್ಲಿ ಕಾರೊಂದು ಗುಂಡೇಟಿನಿಂದ ಜರ್ಜರಿತವಾಗಿತ್ತು. ಚಾಲಕ ಸ್ಥಳದಲ್ಲೇ ಸತ್ತಿದ್ದ. ಅದನ್ನೇ ತೋರಿಸಿ ಎಚ್ಚರಿಸಿದರು ಪಾಕ್ ಸೈನಿಕರು. ಆಗ ಮೇಜರ್ ಅಶೋಕ್ ತಾರಾ ತಮ್ಮ ಸ್ಟೆನ್‌ಗನ್ ಅನ್ನು ಪಕ್ಕದಲ್ಲಿದ್ದ ಸೆಕೆಂಡ್ ಇನ್ ಕಮಾಂಡ್‌ಗೆ ಕೊಟ್ಟು ನಿರಾಯುಧರಾಗಿ ಮುಂದಡಿ ಇರಿಸಿದರು! ಗೊಂದಲಕ್ಕೆ ಬಿದ್ದ ಪಾಕ್ ಸೈನಿಕರು ಹತ್ಯಾರವನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಂಡು ಎಚ್ಚರಿಕೆ ಅವಾಜು ಮೊಳಗಿಸತೊಡಗಿದರು. ವೈರ್‌ಲೆಸ್ ಸಂಪರ್ಕ ವ್ಯಸ್ತವಾಗಿದ್ದರಿಂದ ಪಾಕ್ ಸೇನೆಯ ಬಹುಭಾಗ ಭಾರತಕ್ಕೆ ಶರಣಾಗಿರುವ ಸುದ್ದಿ ಅವರನ್ನು ತಲುಪಿರಲಿಲ್ಲ. ಆ ಸುದ್ದಿಯನ್ನು ಅವರಿಗೆ ನಂಬಿಕೆ ಬರುವಂತೆ ಹೇಳುವುದು ಮೇಜರ್ ಅಶೋಕ್ ತಾರಾ ಅವರ ಸವಾಲಾಗಿತ್ತು. ಪಾಕ್ ಯೋಧರು ಅರ್ಥಮಾಡಿಕೊಳ್ಳಬಹುದಾದ ಪಂಜಾಬಿ-ಹಿಂದಿ ಮಿಶ್ರಣದಲ್ಲಿ ಅಶೋಕ್ ಹೇಳಿದರು- 'ನಿಮ್ಮ ಸೇನೆ ಅದಾಗಲೇ ಶರಣಾಗಿದೆ. ನೀವೇನೆಂದುಕೊಂಡಿರುವಿರಿ? ಢಾಕಾ ನಮ್ಮ ತೆಕ್ಕೆಗೆ ಬರದೇ ಹೀಗೆ ಭಾರತೀಯ ಸೇನಾಧಿಕಾರಿಯೊಬ್ಬ ಶಸ್ತ್ರರಹಿತನಾಗಿ ನಿಮ್ಮೆದುರು ಬರಲು ಸಾಧ್ಯವೇ? ಮುಜಿಬುರ್ ಕುಟುಂಬವನ್ನು ನಮ್ಮ ಸುಪರ್ದಿಗೆ ಬಿಡಿ. ಇದಕ್ಕೆ ಪ್ರತಿಯಾಗಿ ನಿಮ್ಮಲ್ಲಿ ಯಾರನ್ನೂ ವಶಕ್ಕೆ ತೆಗೆದುಕೊಳ್ಳದೇ ತೆರಳುವ ಮಾತು ಕೊಡುತ್ತೇನೆ. ಭಾರತದ ವಶದಲ್ಲಿ ಯುದ್ಧಕೈದಿಗಳಾಗಿರುವ ಇತರ ಸೈನಿಕರ ಹಾಗಲ್ಲದೇ ನಿಮ್ಮ ಹೆಂಡತಿ- ಮಕ್ಕಳ ಬಳಿ ತೆರಳಬಹುದು...' ಹೀಗೆಲ್ಲ ಹೇಳುತ್ತಿರಬೇಕಾದರೆ ಆಕಾಶದಲ್ಲಿ ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್‌ಗಳೆರಡು ಹಾರಾಡಿದವು. ಅತ್ತ ನೋಡಿ ಮುಗುಳ್ನಕ್ಕರು ಮೇಜರ್ ಅಶೋಕ್ ತಾರಾ. ಬಂದೂಕಿನ ಬಿಗಿ ಸಡಿಲಿಸಿ ಶರಣಾದರು ಪಾಕ್ ಯೋಧರು! ಅಸಹಾಯಕವಾಗಿ ಸಾವಿಗೆ ಎದುರುನೋಡುತ್ತಿದ್ದ ಮುಜಿಬುರ್ ಕುಟುಂಬಕ್ಕೆ ಭಾರತೀಯ ಸೇನಾ ಸಮವಸ್ತ್ರದ ಯೋಧರನ್ನು ನೋಡುತ್ತಲೇ ದೇವರನ್ನು ಕಂಡ ಹಾಗಾಯಿತು. ಬಂಗಾಳದ ಸಂಸ್ಕೃತಿ ಹಾಗೂ ಜನರ ವಿರುದ್ಧ ಅಮಾನುಷ ಕ್ರೌರ್ಯ ಮೆರೆದ ಪಾಕಿಸ್ತಾನದ ವಿರುದ್ಧ ಸೆಟೆದುನಿಂತು ಸ್ವಾತಂತ್ರ್ಯ ಹೋರಾಟ ನಡೆಸಿದ್ದ ಮುಜಿಬುರ್ ಕುಟುಂಬಕ್ಕೆ ಪ್ರಾಣ ಮತ್ತು ಸ್ವಾತಂತ್ರ್ಯದ ಉಡುಗೊರೆಗಳನ್ನು ಒಟ್ಟಿಗೇ ಕೊಟ್ಟಿತ್ತು ಇಂಡಿಯನ್ ಆರ್ಮಿ. ಹರ್ಷೋದ್ವೇಗಕ್ಕೆ ಒಳಗಾದ ಮುಜಿಬುರ್ ರೆಹಮಾನ್ ಪತ್ನಿ ಬೇಗಂ ಮುಜಿಬುರ್, ಆ ಮನೆಯ ಟೆರೇಸ್ ಹತ್ತಿ ಅಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಸೆಳೆದು ಕಾಲಡಿ ತುಳಿದು, 'ಜೊಯ್ ಬಾಂಗ್ಲಾ' ಎಂದು ಕೂಗುತ್ತಾಳೆ. ನೀನು ನನ್ನ ಮಗನೇ ಕಣಪ್ಪಾ ಅಂತ ಮೇಜರ್ ಅಶೋಕ್ ತಾರಾರನ್ನು ಆಲಂಗಿಸಿಕೊಂಡ ಆ ತಾಯಿ, ಮುಜಿಬುರ್ ರೆಹಮಾನ್ ಪಾಕಿಸ್ತಾನದ ಜೈಲಿನಿಂದ ವಾಪಸಾಗುವವರೆಗೆ ತಮ್ಮ ಜತೆಯೇ ಇರತಕ್ಕದು ಎಂದು ಪ್ರೀತಿಯ ತಾಕೀತು ಹೊರಡಿಸುತ್ತಾಳೆ. ಹಿಂತಿರುಗಿದ ಮುಜಿಬುರ್, ಅಶೋಕ್ ತಾರಾ ಅವರನ್ನು ತಮ್ಮ ಕುಟುಂಬ ಸದಸ್ಯರಂತೆ ಸತ್ಕರಿಸಿ ಬೀಳ್ಕೊಡುವ ಹೊತ್ತಿಗೆ ಕ್ಯಾಲೆಂಡರ್ ಬದಲಾಗಿ ಜನವರಿ 1972...
ಢಢಢ
ಅವತ್ತು ಹಾಗೆ ಬದುಕಿಕೊಂಡ ಕುಟುಂಬದ ಕುಡಿ ಶೇಖ್ ಹಸೀನಾ ಅವರೇ ಇಂದಿನ ಬಾಂಗ್ಲಾದ ಪ್ರಧಾನಿ. 1996ರಲ್ಲಿ ಮೊದಲ ಬಾರಿ ಪ್ರಧಾನಿ ಗಾದಿ ಏರಿದ್ದ ಆಕೆಯ ಜೀವನ ಏಳು- ಬೀಳಿನ ನಿರಂತರ ಹೋರಾಟಗಾಥೆ. ಅಂದು ಬಾಂಗ್ಲಾ ಸ್ವಂತಂತ್ರವಾಗುತ್ತಲೇ ಈಕೆಯ ತಂದೆ ಮುಜಿಬುರ್ ರೆಹ್ಮಾನ್ ಪ್ರಧಾನಿಯಾಗಿದ್ದರು. 1973-74ರಲ್ಲಿ ಆ ದೇಶ ಭೀಕರ ಕ್ಷಾಮ ಎದುರಿಸುತ್ತಲೇ ಉಳಿದೆಲ್ಲ ಪಕ್ಷಗಳ ಅಸ್ತಿತ್ವ ರದ್ದು ಮಾಡಿ ಆವಾಮಿ ಲೀಗ್ ಒಂದನ್ನೇ ಅಧಿಕೃತವಾಗಿಸಿದರು. ಅವರ ವಿರುದ್ಧ ನಿಧಾನಕ್ಕೆ ಮಿಲಿಟರಿಯ ಒಂದು ಭಾಗ ಮತ್ತು ಆಡಳಿತ ವ್ಯವಸ್ಥೆ ಮುನಿಸಿಕೊಂಡಿತ್ತು. ಆಗಸ್ಟ್ 15, 1975ರಲ್ಲಿ ಮಿಲಿಟರಿ ಮಂದಿಯಿಂದ ಮುಜಿಬುರ್ ರೆಹಮಾನ್ ಮತ್ತವರ ಕುಟುಂಬದ ಹೆಚ್ಚಿನ ಸದಸ್ಯರ ಹತ್ಯೆ ನಡೆದುಹೋಯಿತು. ನಂತರ ಬಾಂಗ್ಲಾದೇಶ ಮಿಲಿಟರಿ ಆಡಳಿತದ ಅಸ್ಥಿರತೆಗೆ ಸಿಲುಕಿದ್ದು, ಅಧ್ಯಕ್ಷರಾಗಿ ಪ್ರತಿಷ್ಠಾಪಿಸಿಕೊಂಡ ಲೆಫ್ಟಿನೆಂಟ್ ಜಿಯಾವುರ್ ರೆಹಮಾನ್ 'ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ' ಹುಟ್ಟುಹಾಕಿ ನಂತರ ತಾವೇ ಹತ್ಯೆಗೀಡಾಗಿದ್ದು, ಅದಾಗಿ ಕೆಲಕಾಲ ಲೆಫ್ಟಿನೆಂಟ್ ಜನರಲ್ ಹುಸೇನ್ ಮಹಮದ್ ಇರ್ಷದ್ ಆಳ್ವಿಕೆ, 1991ರಲ್ಲಿ ಜಿಯಾರ ವಿಧವೆ, ಬಿಎನ್‌ಪಿಯ ಖಲೀದಾ ಜಿಯಾ ಚುನಾವಣೆ ಗೆದ್ದು ಬಾಂಗ್ಲಾದ ಪ್ರಥಮ ಮಹಿಳಾ ಪ್ರಧಾನಿ ಎನಿಸಿದ್ದು... ಹೀಗೆ ಇತಿಹಾಸ ಜೀಕುತ್ತದೆ.
ಇದೀಗ ಬಾಂಗ್ಲಾದೇಶದ ಮತಯುದ್ಧವೇನಿದ್ದರೂ ಉದಾರವಾದಿ ಧೋರಣೆಯ ಶೇಖ್ ಹಸೀನಾ ಹಾಗೂ ಇಸ್ಲಾಮ್‌ವಾದಿಗಳಿಗೆ ಬೆಂಬಲವಾಗಿರುವ ಖಲೀದಾ ಜಿಯಾ ನಡುವೆ. ಇಬ್ಬರಲ್ಲಿ ಶೇಕಡ ನೂರರಷ್ಟು ನಿಯಮಕ್ಕೆ ಬದ್ಧವಾಗಿಯೇ ಆಡಳಿತ ನಡೆಸುವವರು ಯಾರೂ ಇಲ್ಲ. ಆದರೆ ಇಸ್ಲಾಂ ತೀವ್ರವಾದಿಗಳನ್ನು ತಹಬಂದಿಯಲ್ಲಿಡುವ, ಆ ಮೂಲಕ ಭಾರತದ ಗಡಿ ತಲೆಬಿಸಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಶೇಖ್ ಹಸೀನಾ ಜಯವನ್ನೇ ನಾವು ಹಾರೈಸಬೇಕು. 1971ರ ಪಾಕ್ ಹಿಂಸಾಚಾರದಲ್ಲಿ ಪ್ರಾಣತೆತ್ತ ಬಂಗಾಳಿಗಳ ಸಂಖ್ಯೆ 3-5 ಲಕ್ಷ ಎನ್ನಲಾಗುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರ ಲೆಕ್ಕಕ್ಕೆ ಸಿಗದಂತೆ ನಡೆಯಿತು. ಹೀಗೆ ಕೊಲೆ- ಅತ್ಯಾಚಾರ ಎಸಗಿದವರಿಗೆ ಖಲೀದಾ ಜಿಯಾ ಅಧಿಕಾರವಧಿಯಲ್ಲಿ ಕೂದಲೂ ಕೊಂಕಿರಲಿಲ್ಲ. ಆ ಹಿಂಸಾಚಾರಕ್ಕೆ ಖುದ್ದು ಸಾಕ್ಷಿಯಾಗಿದ್ದ ಶೇಖ್ ಹಸೀನಾ, ಯುದ್ಧಾಪರಾಧ ವಿಚಾರಣೆಯ ಟ್ರಿಬ್ಯೂನಲ್ ರಚಿಸಿದ್ದರ ಫಲವಾಗಿ ಹಲವರಿಗೆ ಕಟುಶಿಕ್ಷೆಯಾಗಿದೆ. ಬಿಎನ್‌ಪಿಯ ಮಿತ್ರಪಕ್ಷ ಜಮಾತೆ ಇಸ್ಲಾಮಿ 1971ರ ಸಂದರ್ಭದಲ್ಲಿ ನೇರವಾಗಿ ಪಾಕ್ ಜತೆ ಗುರುತಿಸಿಕೊಂಡು ರಕ್ತಪಾತದಲ್ಲಿ ಭಾಗವಹಿಸಿತ್ತು. ಆ ಪಾಳಯದ ಅಬ್ದುಲ್ ಕಾದರ್ ಮುಲ್ಲಾಗೆ ಅಲ್ಲಿನ ಸುಪ್ರೀಂಕೋರ್ಟ್ ಮರಣದಂಡನೆ ಘೋಷಿಸಿದೆ. ಬಿಎನ್‌ಪಿಯ ಸಂಸದ ಸಲಾಹುದ್ದೀನ್ ಕ್ವಾದರ್ ಚೌಧುರಿಗೂ ಇದೇ ಶಿಕ್ಷೆ ಘೋಷಣೆಯಾಗಿದೆ. ಸಹಜವಾಗಿಯೇ ಪ್ರತಿಪಕ್ಷಗಳು ಇದು ಶೇಖ್ ಹಸೀನಾರ ರಾಜಕೀಯ ಪ್ರೇರಿತ ಕ್ರಮ ಎಂದು ಬೊಬ್ಬೆ ಹೊಡೆದಿವೆ. ಅವತ್ತು ಬಂಗಾಳಿ ಹಿಂದುಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಗ್ಗೊಲೆಯಾಗುತ್ತಿದ್ದಾಗ ಹೊದ್ದು ಮಲಗಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳೂ 'ಅವಸರದಲ್ಲಿ ವಿಚಾರಣೆ ನಡೆಸಿ ತೀರ್ಮಾನಕ್ಕೆ ಬರಲಾಗಿದೆ' ಎಂದು ಬೊಬ್ಬಿರಿಯುತ್ತಿವೆ.
ಬಾಂಗ್ಲಾದ ಜಾಯಮಾನವೆಂದರೆ ಒಮ್ಮೆ ಆರಿಸಿದವರನ್ನು ಇನ್ನೊಮ್ಮೆ ಕೆಡವುವುದು. ಹಾಗೇನಾದರೂ ಈ ಬಾರಿ ಇಸ್ಲಾಮ್ ತೀವ್ರವಾದದ್ದೇ ಮೇಲುಗೈ ಆಗಿ ಹಸೀನಾ ಸೋತರೆ ಎಲ್ಲವೂ ಉಲ್ಟಾ ಆಗಲಿದೆ. ತಾನು ಅಧಿಕಾರಕ್ಕೆ ಬಂದರೆ ಯುದ್ಧಾಪರಾಧ ವಿಚಾರಣಾ ವ್ಯವಸ್ಥೆಯಲ್ಲಿದ್ದವರನ್ನೇ ಶಿಕ್ಷಿಸುವುದಾಗಿ ಬಿಎನ್‌ಪಿ ಹೇಳಿಕೊಳ್ಳುತ್ತಿದೆ. ಈ ಪಕ್ಷದ ಮುಖಂಡೆ ಖಲೀದಾ ಜಿಯಾ ಅದೆಂಥ ಅಸಾಮಿ ಎಂದರೆ ಶಾಲಾ ದಾಖಲೆಗಳ ಪ್ರಕಾರ ಆಕೆಯ ಜನ್ಮದಿನ ಆಗಸ್ಟ್ 9 ಆಗಿದ್ದರೂ ಆಗಸ್ಟ್ 15ರಂದು ಬರ್ತ್‌ಡೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾಳೆ. ಅದು ಹಸೀನಾ ತಂದೆ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯಾದ ದಿನ!
ಸಾವನ್ನು ಸನಿಹದಲ್ಲೇ ಇರಿಸಿಕೊಂಡು ಬದುಕಿನ ಅಸಂಖ್ಯ ಹೋರಾಟಗಳನ್ನು ಜಯಿಸುತ್ತ ಬಂದ ಹಸೀನಾಳ ಎದುರು ಯಾವತ್ತೂ ವಿಜಯಪಥ ತೆರೆದುಕೊಂಡಿರಲಿ ಎಂದು ಮನಸ್ಸೇಕೋ ಚೀರುತ್ತದೆ...

- ಚೈತನ್ಯ ಹೆಗಡೆ
cchegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.