ಅಂಕಣಗಳು

ಸದನದಲ್ಲಿ ಚರ್ಚೆಗಿಂತ ಪ್ರತಿಭಟನೆಗಳೇ ಹೆಚ್ಚಾಗುತ್ತಿವೆ

ಕೆಲವೊಮ್ಮೆ ಗದರಿಸುತ್ತಾ, ಮತ್ತೊಮ್ಮೆ ಸದಸ್ಯರಿಗೆ ಸರಿಯಾದ ಪ್ರಶ್ನೆ...

Published On :

ಕೆಲವೊಮ್ಮೆ ಗದರಿಸುತ್ತಾ, ಮತ್ತೊಮ್ಮೆ ಸದಸ್ಯರಿಗೆ ಸರಿಯಾದ ಪ್ರಶ್ನೆ ಕೇಳುವಂತೆ ಸಲಹೆ ನೀಡುತ್ತಾ, ಮರುಕ್ಷಣ ಸಚಿವರ ಕಾಲೆಳೆಯುತ್ತಾ ವಿಧಾನಸಭೆ ಕಲಾಪದಲ್ಲಿ ಅತ್ಯಂತ ಚಟುವಟಿಕೆಯಿಂದ ಇರುವವರು ಸ್ಪೀಕರ್ ಕಾಗೋಡು ತಿಮ್ಮಪ್ಪ. ಸದಸ್ಯರು ಎಷ್ಟೇ ಗದ್ದಲ ಮಾಡಿದರೂ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸದನವನ್ನು ಮುಂದೂಡದಂತೆ ನಡೆಸಿದ್ದು ನಿಜಕ್ಕೂ  ಪ್ರಶಂಸಾರ್ಹ. ವಿಧಾನಸಭೆ ಸ್ಪೀಕರ್ ಆಗಿ ಅವರು ಮೊದಲ ಬಾರಿಗೆ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಅಧಿವೇಶನ ಮುಗಿಸಿದ ನಂತರ  'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ...

ಅಧಿವೇಶನ, ಚರ್ಚೆ, ಪ್ರಶ್ನೆಯ ಅವಕಾಶವನ್ನು ಸದಸ್ಯರು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಅನಿಸುತ್ತದಾ?
ಸದಸ್ಯರು ಸಮರ್ಥವಾಗಿ ಬಳಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಆಡಳಿತ ವ್ಯವಸ್ಥೆ ಕೆಟ್ಟಿದೆ. ಕೆಟ್ಟಿರುವ ಆಡಳಿತ ವ್ಯವಸ್ಥೆ ಸರಿಪಡಿಸಲು ಶಾಸನ ಸಭೆಯಿಂದ ಮಾತ್ರ ಸಾಧ್ಯ. ಆದರೆ ಸದಸ್ಯರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಗೃಹ, ಕಂದಾಯ, ಕೈಗಾರಿಕೆ, ಸಾರಿಗೆ ಮುಂತಾದ ಸರ್ಕಾರದ ದೊಡ್ಡ ಇಲಾಖೆಗಳ ಬಗ್ಗೆ ಚರ್ಚೆ ನಡೆಯಬೇಕು. ಬಜೆಟ್ ನಂತರ ನಡೆಯುವ ಬೇಡಿಕೆಗಳ ಚರ್ಚೆಯಲ್ಲಿ ಈ ಇಲಾಖೆಗಳ ಬಗ್ಗೆ ಸದಸ್ಯರು ಅತ್ಯಂತ ಪರಿಣಾಮಕಾರಿಯಾಗಿ ಚರ್ಚೆ ನಡೆಸಿದರೆ ಸಚಿವರಿಗೂ ಸದನದ ಕುರಿತು ಒಂದು ಭಯ ಇರುತ್ತದೆ. ಅವರು ತಮ್ಮ ಇಲಾಖೆಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಬರುವ ಅನಿವಾರ್ಯ ಸೃಷ್ಟಿಯಾಗುತ್ತದೆ.
 ನೀವು ಗಮನಿಸಿದಂತೆ ಈ ವೈಫಲ್ಯಕ್ಕೆ ಕಾರಣವೇನು?
 ಬಹುತೇಕ ಸದಸ್ಯರು ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತರಾಗುತ್ತಾರೆ. ಅವರು ಇಡೀ ರಾಜ್ಯಕ್ಕೆ ಶಾಸಕರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಲಾಖೆಗಳ ಬಗ್ಗೆ, ಕಳಪೆ ಕಾಮಗಾರಿಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಬಂದು ವಿಷಯ ಪ್ರಸ್ತಾಪಿಸಬೇಕು. ಆದರೆ ಅಂತಹ ಸದಸ್ಯರ ಸಂಖ್ಯೆ ಕಡಿಮೆ ಇದೆ. ಕೆಲವು ಯುವ ಸದಸ್ಯರು ಉತ್ತಮ ಅಧ್ಯಯನ ಹೊಂದಿದ್ದು, ಅರ್ಥಪೂರ್ಣ ಚರ್ಚೆ ಮಾಡುವ ಸಾಮರ್ಥ್ಯ ಹೊಂದಿರುವುದು ಆಶಾದಾಯಕ ಸಂಗತಿ.
ಪ್ರತಿಭಟನೆಗಳು, ಅದರಲ್ಲೂ ಹೆಚ್ಚಾಗಿ ರಾತ್ರಿ ವಿಧಾನಸಭೆಯಲ್ಲೇ ಉಳಿಯುವಂತಹ ಪ್ರತಿಭಟನೆ ಹೆಚ್ಚುತ್ತಿವೆಯಲ್ಲ?
ಸದನ ಇರುವುದೇ ಚರ್ಚೆಗೆ. ಆದರೆ ಇತ್ತೀಚೆಗೆ ಚರ್ಚೆಗಿಂತ ಪ್ರತಿಭಟನೆಯೇ ಹೆಚ್ಚಾಗುತ್ತಿದೆ. ಪ್ರತಿಭಟನೆ ಕೊನೆಯ ಅಸ್ತ್ರವಾಗಿರಬೇಕು ಮತ್ತು ಸಾಂಕೇತಿಕವಾಗಿರಬೇಕು. ಅದು ಬಿಟ್ಟು ವಿಧಾನಸಭೆಯಲ್ಲೇ ರಾತ್ರಿಯಿಡೀ ಉಳಿಯುವಂತಹ ಪ್ರತಿಭಟನೆಗಳು ಸರಿಯಲ್ಲ.
 ಕಾಂಗ್ರೆಸ್ಸಿಗರೇ ಮಾಡಿದ್ದರಲ್ಲ?
ಯಾರು ಮಾಡಿದರೂ ಸರಿಯಲ್ಲ. ಅತ್ಯಂತ ಗಂಭೀರ ಸಮಸ್ಯೆ ಇದ್ದಲ್ಲಿ ಮಾತ್ರ ಪ್ರತಿಭಟನೆ ಮಾಡಿದರೆ, ಅದಕ್ಕೆ ಅರ್ಥವಿರುತ್ತದೆ. ಇಲ್ಲವಾದಲ್ಲಿ ಪ್ರತಿಭಟನೆಗಳು ಅರ್ಥ ಕಳೆದುಕೊಳ್ಳುವ ಅಪಾಯವಿದೆ. ಇದನ್ನು ಸದಸ್ಯರು ಅರ್ಥ ಮಾಡಿಕೊಳ್ಳಬೇಕು.
 ಕೇವಲ ಚರ್ಚೆಯಿಂದ ಪರಿಹಾರ ಸಾಧ್ಯವೇ?
ಯಾಕೆ ಸಾಧ್ಯವಿಲ್ಲ? ಸದಸ್ಯರು ಸರಿಯಾಗಿ ಅಧ್ಯಯನ ನಡೆಸಿ, ಸಮರ್ಪಕವಾಗಿ ವಾದ ಮಂಡಿಸಿದರೆ ಖಂಡಿತಾ ಪರಿಹಾರ ಸಾಧ್ಯ. ಸದಸ್ಯರು ಆ ರೀತಿಯಲ್ಲಿ ಚರ್ಚೆ ಮಾಡಿದಾಗ ಸಚಿವರಿಗೂ ಆ ಬಗ್ಗೆ ಅಧ್ಯಯನ ಮಾಡಿಕೊಂಡು ಸದನಕ್ಕೆ ಬರುವುದು ಅನಿವಾರ್ಯವಾಗುತ್ತದೆ. ಅವರು ಸಮಸ್ಯೆ ಕುರಿತು ಅಧ್ಯಯನ ಮಾಡಿದಾಗ ಸಮಸ್ಯೆ ಖಂಡಿತಾ ಇತ್ಯರ್ಥವಾಗುತ್ತದೆ.
 ಹಾಗಾದರೆ ಇಷ್ಟೆಲ್ಲ ಚರ್ಚೆ ನಡೆದರೂ ಸಮಸ್ಯೆಗಳಿಗೆ ಯಾಕೆ ಪರಿಹಾರ ಸಿಗುತ್ತಿಲ್ಲ?
ಚರ್ಚೆಯ ಸಂದರ್ಭದಲ್ಲಿ ಮುಂದೇನಾಗಬೇಕು ಎಂಬುದರ ಬಗ್ಗೆ ಮಾತನಾಡುವುದಕ್ಕಿಂತ ಹಿಂದೇನಾಯಿತು ಎಂಬ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಇದಕ್ಕೇ ಹೆಚ್ಚು ಸಮಯ ವ್ಯಯವಾಗುತ್ತದೆ. ಮುಂದೇನಾಗಬೇಕು ಎಂಬುದರ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಸಿದಾಗ ಯಾವುದೇ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಇತಿಹಾಸ ಕೆದಕುವುದರಿಂದ ಯಾವುದೇ ಪರಿಹಾರ ಕಾಣಲು ಸಾಧ್ಯವಿಲ್ಲ. ಸದಸ್ಯರು ಭವಿಷ್ಯಕ್ಕಿಂತ ಭೂತಕಾಲಕ್ಕೆ ಹೆಚ್ಚು ಪ್ರಾಮುಖ್ಯ ನೀಡುವುದರಿಂದ ಹೆಚ್ಚು ಸಮಯ ವ್ಯಯವಾಗುತ್ತಿದೆ. ಸದಸ್ಯರು ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸಲು ಏನು ಮಾಡಬೇಕು ಎಂಬುದಕ್ಕೆ ಹೆಚ್ಚು ಆದ್ಯತೆ ನೀಡಬೇಕು.
 ಸದನದ ಕಲಾಪಗಳು ಸಮಯ ನಿಗದಿಯಂತೆ ನಡೆಸಲು ನಿಮ್ಮ ಕ್ರಮವೇನು?
ಈ ಬಗ್ಗೆ ಸಾಧ್ಯವಾದಷ್ಟೂ ಪ್ರಯತ್ನಿಸುತ್ತಿದ್ದೇನೆ. ಆದರೆ ಸದಸ್ಯರು ಈ ಬಗ್ಗೆ ಕಾಳಜಿವಹಿಸದೇ ಇದ್ದಲ್ಲಿ ಇದು ಸಾಧ್ಯವಾಗುವುದಿಲ್ಲ. ಸದಸ್ಯರು ಅಗತ್ಯಕ್ಕಿಂತ ಹೆಚ್ಚು ಹೊತ್ತು ಮಾತನಾಡುವುದರಿಂದ ಸದನದ ನಿರ್ಧಾರಿತ ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಸದಸ್ಯರು ಸಂಕ್ಷಿಪ್ತವಾಗಿ ಮಾತನಾಡಬೇಕು. ಅದು ಅರ್ಥಪೂರ್ಣವಾಗಿರಬೇಕು. ಅಂದರೆ ಮಾತ್ರ ಸದನದ ಸಮಯ ಸದ್ಬಳಕೆ ಮತ್ತು ನಿಗದಿತವಾಗಿ ನಡೆಯಲು ಸಾಧ್ಯ.
 ವರ್ಷದಿಂದ ವರ್ಷಕ್ಕೆ ಸದನ ನಡೆಯುವ ದಿನಗಳು ಕಡಿಮೆಯಾಗುತ್ತಿವೆ. ನಾವೇ ತಂದ ಕಾನೂನು ಪಾಲಿಸಲು ನಮಗೆ ಸಾಧ್ಯವಾಗುತ್ತಿಲ್ಲ ಯಾಕೆ?
ಕಲಾಪ ಹೆಚ್ಚು ದಿನ ನಡೆಯಬೇಕು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಇತ್ತೀಚೆಗೆ ಬೇರೆ ಬೇರೆ ಕಾರಣಕ್ಕೆ ಕಲಾಪಗಳು ಹೆಚ್ಚು ನಡೆಯುತ್ತಿಲ್ಲ. ನನ್ನ ಪ್ರಕಾರ ಬಜೆಟ್ ಅಧಿವೇಶನ ಕನಿಷ್ಠ 20-26 ದಿನ ನಡೆಯಬೇಕು. 1 ವಾರ ರಾಜ್ಯಪಾಲರ ಭಾಷಣದ ಚರ್ಚೆಗೆ. ಬಜೆಟ್ ಚರ್ಚೆಗೆ 1 ವಾರ. 3 ವಾರ ಬೇಡಿಕೆಗಳ ಮೇಲಿನ ಚರ್ಚೆಗೆ ಅವಕಾಶ ಇರುವಂತೆ ಅಧಿವೇಶನ ನಡೆದರೆ, ಉಳಿದ ದಿನಗಳ ಅಧಿವೇಶನವನ್ನು ಚಳಿಗಾಲ ಮತ್ತು ಮಳೆಗಾಲದಲ್ಲಿ ನಡೆಸಲು ಸಾಧ್ಯವಾಗುತ್ತದೆ. ಆಗ ಮಾತ್ರ ನಿಗದಿಗಿಂತ ಹೆಚ್ಚು ದಿನ ಅಧಿವೇಶನ ನಡೆಯುತ್ತದೆ.
 ಗದ್ದಲವಾದಾಗ ಸದನವನ್ನು ಮುಂದೂಡುವುದು ಸಹಜ. ಆದರೆ ನೀವು ಅದಕ್ಕೆ ಬ್ರೇಕ್ ಹಾಕಲು ಕಾರಣ?
ಗದ್ದಲಗಳು ನಡೆದಾಗ ಸದನವನ್ನು ಮುಂದೂಡುವುದು ಸುಲಭ. ಆದರೆ ಹಾಗೆ ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಸದಸ್ಯರ ಮನವೊಲಿಸಿ ಸದನವನ್ನು ನಡೆಸುವುದು ನನ್ನ ಉದ್ದೇಶ. ಈ ಹಂತದಲ್ಲಿ ಕೇಲವೊಮ್ಮೆ ಸ್ನೇಹಪೂರ್ವಕವಾಗಿ ಅಥವಾ ಗದರಿಸಿ ಸುಮ್ಮನಾಗಿಸಬೇಕಾಗುತ್ತದೆ. ಆದರೆ ಮೂಲ ಉದ್ದೇಶ ಸದನದ ಕಲಾಪದ ಸಮಯ ಸದ್ಬಳಕೆ ಆಗಲಿ ಎಂಬುದೇ ಆಗಿರುತ್ತದೆ. ಸದನ ನಡೆಯುವುದೇ ಕಡಿಮೆ ದಿನ. ಅದರಲ್ಲೂ ಸಮಯ ಹಾಳಾದರೆ ಹೇಗೆ? ಇದನ್ನು ಸದಸ್ಯರೂ ಅರ್ಥ ಮಾಡಿಕೊಳ್ಳಬೇಕು.
 ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆಗೆ ಸಾಕಷ್ಟು ಸಮಯ ದೊರೆಯಿತು ಎಂದು ಅನಿಸುತ್ತಿದೆಯೇ?
ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ಮಾಡುವಾಗಲೇ ಉತ್ತರ ಕರ್ನಾಟಕ ಪ್ರದೇಶದ ಸಂಗತಿಗಳ ಚರ್ಚೆಗೆ ಹೆಚ್ಚು ಅವಕಾಶ ನೀಡಬೇಕು ಎಂಬುದು ನನ್ನ ಬಯಕೆಯಾಗಿತ್ತು. ಆದರೆ ಅದಕ್ಕೆ ತಕ್ಕಂತೆ ಉತ್ತರ ಕರ್ನಾಟಕ ಪ್ರದೇಶದ ಸದಸ್ಯರಲ್ಲಿಯೇ ಆ ಬಗ್ಗೆ ಹೆಚ್ಚು ಆಸಕ್ತಿ ಕಂಡುಬಂದಿಲ್ಲ. ಆ ಸದಸ್ಯರು ಇನ್ನಷ್ಟು ಆಸಕ್ತಿ ವಹಿಸಬೇಕಿದೆ. ಆದರೂ ಹಿಂದಿನ ಅಧಿವೇಶನಗಳಿಗೆ ಹೋಲಿಸಿದರೆ ಈ ವರ್ಷ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಸಂಗತಿಗಳ ಚರ್ಚೆಗೆ ಹೆಚ್ಚು ಸಮಯ ಸಿಕ್ಕಿದೆ. ಆದರೆ ನಮ್ಮ ಪ್ರಯತ್ನಗಳನ್ನೆಲ್ಲ ಮೀರಿ ಕೆಲವೊಮ್ಮೆ ಮಸೂದೆ ಮತ್ತು ಬೇರೆ ಸಂಗತಿಗಳ ಚರ್ಚೆಗೇ ಸಮಯ ವ್ಯಯವಾಯಿತು.
- ಪ್ರಶ್ನೋತ್ತರ ಅವಧಿಯಲ್ಲಿ ನೀವು ಬಹುತೇಕ ಸದಸ್ಯರಿಗೆ ಪ್ರಶ್ನೆ ಕೇಳಿ ಎಂದು ಹೇಳುತ್ತಿರುತ್ತೀರಿ. ಇದಕ್ಕೆ ಕಾರಣವೇನು?
ಪ್ರಶ್ನೋತ್ತರ ಅವಧಿ ಇರುವುದೇ ಸದಸ್ಯರು ಪ್ರಶ್ನೆಯ ಮೂಲಕ ಸರ್ಕಾರದಿಂದ ಬೇಕಾದ ಉತ್ತರ ಪಡೆದುಕೊಳ್ಳಲು. ಸದಸ್ಯರು ಸ್ಪಷ್ಟವಾಗಿ ಪ್ರಶ್ನೆಕೇಳಿದಾಗ, ಸಚಿವರಿಗೂ ಸ್ಪಷ್ಟವಾದ ಉತ್ತರ ನೀಡುವುದು ಅನಿವಾರ್ಯವಾಗುತ್ತದೆ. ಆದರೆ ಬಹುತೇಕ ಸದಸ್ಯರು ಪ್ರಶ್ನೆ ಕೇಳುವುದನ್ನು ಬಿಟ್ಟು, ಭಾಷಣ ಮಾಡುತ್ತಾರೆ. ಆಗ ನುಣುಚಿಕೊಳ್ಳಲು ಸಚಿವರಿಗೆ ಅವಕಾಶವಾಗುತ್ತದೆ. ಆದ್ದರಿಂದ ಸದಸ್ಯರು ಚುಟುಕಾದ ಮತ್ತು ಸ್ಪಷ್ಟವಾದ ಪ್ರಶ್ನೆ ಕೇಳಬೇಕು.
-ಶಾಸಕರಿಗೆ ನಿಮ್ಮ ಸಲಹೆಯೇನು?
ಶಾಸಕರು ಕೇವಲ ಅವರ ಕ್ಷೇತ್ರಕ್ಕೆ ಸೀಮಿತವಾಗುತ್ತಿದ್ದಾರೆ. ಅವರು ರಾಜ್ಯದ ಸಂಗತಿಗಳ ಕುರಿತೂ ಗಮನಹರಿಸಬೇಕು. ಪ್ರಶ್ನೆ, ಚರ್ಚೆಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂದು ಮಾತನಾಡಿದ ನಂತರ ಎದ್ದು ಹೋಗುವವರೇ ಹೆಚ್ಚು. ಅದಲ್ಲ. ಸದನದ ಕಲಾಪದಲ್ಲಿ ನಿರಂತರವಾಗಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು. ಬೇರೆಯವರು ಹೇಳುವುದನ್ನು ಆಲಿಸಿಬೇಕು. ಇದರಿಂದ ವಿಷಯ ಜ್ಞಾನ ಬೆಳೆಯುತ್ತದೆ. ಅವರು ಹೇಳಿದ ಸಂಗತಿಗಳ ಕುರಿತು ಹೆಚ್ಚಿನ ಅಂಶಗಳು ಇವರಿಗೆ ತಿಳಿದಿದ್ದರೆ ಅದನ್ನು ಸದನಕ್ಕೆ ತಿಳಿಸುವ ಅವಕಾಶವೂ ಇರುತ್ತದೆ. ಆದರೆ ಇಂತಹ ಸದಸ್ಯರ ಸಂಖ್ಯೆ ಕಡಿಮೆ ಇರುವುದು ಖೇದಕರ.


- ವಿನಾಯಕ ಭಟ್ಟ ಮೂರೂರು, ಕನ್ನಡಪ್ರಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.