Hmmm... ಪಾಂಚ್ ನರಭಕ್ಷಕ ಹುಲಿ
ಹಿಂಗೆ ಊರೊಳಗೆ ನುಗ್ಗಿ ಮನುಷ್ಯರನ್ನ ಕೊಂದುತಿನ್ನೋದು ತಪ್ಪಲ್ವಾ?
ಏನ್ ತಪ್ಪು, ಹುಲಿ ಮುಪ್ಪಾದರೆ, ಹುಲ್ಲು ತಿಂತದಾ? ಉಪ್ಪು, ಹುಳಿ ಅಲ್ಲದಿದ್ರೂ ಮಾಂಸ ತಿಂದು ಬೆಳೆದಿರೋ ದೇಹ. ಹುಲಿ ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂ ಹುಲೀನೇ ಗೊತ್ತಾ. ಈಗ ನೀನ್ ಸಿಕ್ಕಿದೀಯಾ..ಕುತ್ತೇ ಮೇ ತೇರಾ ಖೂನ್ ಪೀ ಜಾವೂಂಗ.
- ಓ...ನೀನು ಧರ್ಮೇಂದ್ರನ ಅಭಿಮಾನಿ ಅನ್ಸುತ್ತೆ, ಒಂದ್ ಅರ್ಧಗಂಟೆ ಇರು. ಇವತ್ತಿನ್ ಡೆಡ್‌ಲೈನ್ ಮುಗಿಸ್ಕೊಂಡ್ ವಾಪಸ್ ಬರ್ತೀನಿ, ಆಮೇಲ್ ತಿನ್ನುವಂತೆ...
ಮಗಾ, ಪುಣ್ಯಕೋಟಿ ಕಾಲ ಎಲ್ಲಾ ಈವಾಗಿಲ್ಲಮ್ಮಾ, ಇದು ಕಲಿಗಾಲ.
- ನಿಜ ಹೇಳಬೇಕೂಂದ್ರೆ, ಇದು ಹುಲಿಗಾಲ. ಅದ್ಸರಿ, ಈಗ ಬೋನೊಳಗೆ ಬೀಳ್ಸಿದಾರಲ್ಲ, ಈಗ ಹೇಳು, ನಿನ್ನ ಪ್ರಕಾರ ಯಾರು ಜಾಸ್ತಿ ಸ್ಟ್ರಾಂಗ್? ಮನುಷ್ಯನಾ ಅಥವಾ 'ಹುಲಿಯಾ'?
ಗೊತ್ತಿಲ್ಲ, ಕೆ.ವಿ.ರಾಜು ಅವರನ್ನೇ ಕೇಳ್‌ಬೇಕು.
- ಸರಿ, ಸರಿ, ಆದ್ರೆ, 'ಕಾಡು ಹೋಗು ಅಂತಿದೆ ಊರು ಬಾ ಅಂತಿದೆ' ಅನ್ನೋ ನಿನ್ನ ಸಾಯಿಸ್‌ಬೇಕೂಂತ ಕೆಲವರು ಹೇಳ್ತಿ ದಾರೆ, ಏನಂತೀಯಾ?
ಟೈಗರ್ ಪ್ರಭಾಕರ್, ಬಾಳಾ ಠಾಕ್ರೆ, ಪಟೌಡಿ ಹೀಗೆ ಹುಲಿಗಳ ಸಂತತಿ ಕಡಿಮೆಯಾಗ್ತಿದೆ. ಹಂಗಾಗಿ ನನ್ನನ್ನ ಕೊಲ್ಲಲ್ಲ ಅಂತ ಭರವಸೆ ಇದೆ.
- ಸಿಕ್ಕಾಕ್ಕೊಂಡಿರೋ ಬೋನಿನಲ್ಲಿ ತಿನ್ನೋಕೆ ಬೋನ್ ಸಿಗ್ತಿಲ್ಲ, ಹಂಗೇ ಸತ್ರೂ ಸಾಯಬಹುದು ನೀನು. ಹಂಗೇನಾದ್ರೂ ಆದ್ರೆ, ನಿನ್ ಕೊನೇ ಆಸೆ ಏನು?
'ಹುಲಿ ಹಿಡಿದವರು ಕಂಡಂತೆ' ಅಂತ ನನ್ ಮೇಲೊಂದ್ ಸಿನಿಮಾ ಮಾಡಿದ್ರೆ ಸಾಕು.
ಒಮ್ಮೆ ಭೇಟಿ ಕೊಡಿ
ಬದುಕೋಕೋಸ್ಕರ ತಿನ್ನುವವರು, ತಿನ್ನೋಕೋಸ್ಕರ ಬದುಕುವವರು ಎಂಬ ಮಾತು ಊಟದ ವಿಷಯದಲ್ಲಿ ಕಾಮನ್. ಆದರೆ ಚೆನ್ನಾಗಿ ಬದುಕಬೇಕು ಅಂದ್ರೆ ಏನು ತಿನ್‌ಬೇಕು, ಎಷ್ಟು ತಿನ್‌ಬೇಕು ಎಂಬುದೂ ಬಹಳ ಮುಖ್ಯ. ಅದಕ್ಕೆ ಪೂರಕವಾಗಿ ನಮ್ಮ ಫುಡ್ ಹ್ಯಾಬಿಟ್ಸ್ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ಇರುವ ಇಲ್ಲಿನ 'ಮೆನು' ನೋಡಿ.
l bit.ly/1aIEulk, l bit.ly/18f2stL
bit.ly/1eXnNXy l bit.ly/1iJMqN8
bit.ly/1iJMrk1
ಹರಿ-ಕಥೆ
ಖೇಮು ಮತ್ತು ಖೇಮುಶ್ರೀ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದ್ ದಿನ ಸರಿ ಇದ್ರೆ ಒಂದ್ ತಿಂಗಳು ಜಗಳ. ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಸರಿ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡೈವೋರ್ಸ್‌ಗೆ ಅಪ್ಲೈ ಮಾಡೋದು ಅಂತ ತೀರ್ಮಾನ ಮಾಡಿದ್ರು. ಹಂಗೇ ಮಾಡಿದ್ರು. ಕೋರ್ಟ್‌ನಲ್ಲಿ ಜಡ್ಜ್ ತುಂಬಾ ಸಂಭಾವಿತರು. ಹಾಗಾಗಿ ಇಬ್ಬರಿಗೂ ಒಳ್ಳೆ ಮಾತಿನಲ್ಲಿ ಜೊತೆಯಾಗಿ ಬದುಕೋಕೆ ಸಲಹೆ ನೀಡಿದ್ರು. ನೋ ಯೂಸ್, ಖೇಮು, ಖೇಮುಶ್ರೀ ಇಬ್ರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜಡ್ಜ್ ಇವರಿಬ್ಬರಿಗೂ ಡೈವೋರ್ಸ್ ಕೋಡೋಕೆ ಅನುಮತಿ ಕೊಟ್ರು. ಈಗ ವಿಷಯ ಜೀವನಾಂಶಕ್ಕೆ ಬಂತು. ಖೇಮುಶ್ರೀ 'ನಂಗೆ ತಿಂಗಳಿಗೆ 20 ಸಾವಿರ ರುಪಾಯಿ ಜೀವನಾಂಶ ಬೇಕು' ಅಂತ ಪಟ್ಟು ಹಿಡಿದು ಕೂತಳು. ಖೇಮು 'ನನ್ ಕೈಲಿ ಸಾಧ್ಯಾನೇ ಇಲ್ಲ' ಅಂತ ಕೂತ. ಕೊನೆಗೆ ಖೇಮುನ ಒಟ್ಟಾರೆ ಇನ್‌ಕಮ್, ಖೇಮುಶ್ರೀಯ ಅವಶ್ಯಕತೆ ಎಲ್ಲವನ್ನೂ ಪರಿಶೀಲಿಸಿದ ಜಡ್ಜ್ ತೀರ್ಪು ಕೊಟ್ಟರು 'ಎಲ್ಲ ದಾಖಲೆಗಳನ್ನು ನೋಡಿ, ಖೇಮುಶ್ರೀಯ ಪರಿಸ್ಥಿತಿಯನ್ನು ಗಮನಿಸಿ ಆಕೆಗೆ ಪ್ರತಿತಿಂಗಳು 20 ಸಾವಿರ ರುಪಾಯಿಗಳ ಜೀವನಾಂಶ ಕೊಡಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ' ಎಂದರು. ಅದನ್ನು ಕೇಳಿದ ಖೇಮು ಫುಲ್ ಖುಷಿಯಾಗಿ ಹೇಳಿದ 'ನಿಮ್‌ದು ಭಾಳಾ ದೊಡ್ ಮನಸು ಸ್ವಾಮಿ, ಸಾಧ್ಯ ಆದ್ರೆ ಅವಳಿಗೆ ನಾನೂ ಆವಾಗಾವಾಗ ಸ್ವಲ್ಪ ದುಡ್ ಕೊಡೋಕೆ ಟ್ರೈ ಮಾಡ್ತೀನಿ'
ಸ್ಯಾಂಡಲ್‌ವುಡ್
ಟೋಪಿವಾಲಾ ಚಿತ್ರದ ಡಬ್ಬಿಂಗ್ ಹಕ್ಕುಗಳ ಮಾರಾಟದ ವಿಷಯದಲ್ಲಿ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ನಟ ಉಪೇಂದ್ರ ಅವರ ಮಧ್ಯೆ ಜಗಳ ಆಗುತ್ತಿದೆ. ಡಬ್ಬಿಂಗ್ ರೈಟ್ಸ್ ನನ್ನ ಬಳಿ ಇದೆ. ಆದರೆ, ನಿರ್ಮಾಪಕರು ನನಗೆ ಹೇಳದೆ ಡಬ್ಬಿಂಗ್ ರೈಟ್ಸ್ ಮಾರಿದ್ದಾರೆ ಅಂತ ಉಪೇಂದ್ರ ಹೇಳಿದರೆ, ಅಯ್ಯೋ ಅವರು ವಿದೇಶದಲ್ಲಿದ್ರು, ಅದಕ್ಕೇ ಹೇಳೋಕಾಗಿಲ್ಲ ಎಂಬುದು ಒಳ್ಳೇ ರೇಟು ಬಂದಾಗ ಮಾರಿಕೋ ಎಂಬ ಪಾಲಿಸಿ ಅನುಸರಿಸಿರುವ ನಿರ್ಮಾಪಕರ ವಾದ. ಅದು ಅತಿರೇಕಕ್ಕೆ ಹೋಗಿ. ಈ ಮಧ್ಯೆ ಟೋಪಿವಾಲಾ ಚಿತ್ರದಿಂದ 3 ಕೋಟಿಗೆ ಟೋಪಿ ಹಾಕಿಸಿಕೊಂಡಿದ್ದೇನೆ. ಡಬ್ಬಿಂಗ್ ಮಾಡಿಸಿಟ್ಟು ಡಬ್ಬದಲ್ಲೇ ಕೊಳೆಯುತ್ತಿರುವ ಇದೇ ಉಪೇಂದ್ರ ಅವರ ಓಂಕಾರ ಚಿತ್ರವನ್ನು ಕೊಳ್ಳುವವರಿಲ್ಲ ಅಂತ ಅಪಸ್ವರದ ಮಾತುಗಳೂ ನಿರ್ಮಾಪಕರಿಂದ ಬಂದಿವೆ. ಇಲ್ಲಿ ನಿಜವಾದ ಟೋಪಿವಾಲಾ ಯಾರು, ರಿಯಲ್ ಸ್ಟಾರ್ ಯಾರು ಎಂಬ ಪ್ರಶ್ನೆಗಿಂತ ಚಿತ್ರರಂಗದ ಪ್ರತಿಷ್ಠಿತ ನಾಯಕ ನಟ ಮತ್ತು ನಿರ್ಮಾಪಕರು ಜಗಳ ಆಡಲು ಕಾರಣವಾಗಿರುವ ಹಣದ ಮೊತ್ತ ಎಷ್ಟು ಎಂಬುದು ಇಂಟರೆಸ್ಟಿಂಗ್. ಟೋಪಿವಾಲಾದ ಡಬ್ಬಿಂಗ್ ಹಕ್ಕುಗಳನ್ನು ಮಾರಿ ಸಿಕ್ಕಿರುವ 4.5 ಲಕ್ಷದಲ್ಲಿ ಉಪೇಂದ್ರರಿಗೆ ಸುಮಾರು 2 ಲಕ್ಷ ಸಿಗಬೇಕಂತೆ. ಈ ದುಡ್ಡಿಗೆ ಇಬ್ಬರೂ ಹೀಗೆ ಹಾದಿಬೀದಿ ರಂಪ ಮಾಡಬೇಕಿತ್ತೇ. ಒಂದೇ ಒಂದು ಕಿಂಡಿ ಕೊಟ್ರೂ ವಿಷಯ ಮಾಧ್ಯಮಗಳ ಮುಂದೆ ಹೋಗಿ ಮಾನ ಹರಾಜಾಗುತ್ತೆ, ಅಂತ ಗೊತ್ತಿದ್ದಾಗ, ನಾಲ್ಕು ಗೋಡೆಗಳ ನಡುವೆಯೇ ಜಗಳ ಆಡ್ಕೊಬಹುದಿತ್ತಲ್ಲ....ದ್ಯಾವ್ರೇ!
ಡಬ್ಕುಡಬಲ್ ತುದಾಂಡಲ್...
ಹರ್ಷಿಕಾ ಪೂಣಚ್ಛ ಅಭಿನಯದ ಎರಡು ಚಿತ್ರಗಳಾದ 'ಬಿತ್ರಿ' ಮತ್ತು 'ಮರ್ಯಾದೆ' ಸ್ಪೆಷಲ್
- ಬಿತ್ರಿ ಸಿನಿಮಾ 'ಎದ್ರೂ' ಜನ 'ಬಿತ್ರೀ' ಅಂತಾನೆ ಅಂತಾರೆ.
- 'ಮರ್ಯಾದೆ' ಸಿನಿಮಾದ ಬಗ್ಗೆ ಜನ ವಿಚಾರಿಸೋ ಸ್ಟೈಲು..
'ಮರ್ಯಾದೆ ಇದ್ಯಾ?' ಥಿಯೇಟರ್‌ನಲ್ಲಿ?
'ಇಲ್ಲ, 'ಮರ್ಯಾದೆ ಹೋಯ್ತಲ್ಲ', ಹೋದವಾರನೇ..'
'ಓ 'ಮರ್ಯಾದೆ ತೆಗೆದ್ರಾ'...ಸರಿ..ಸರಿ..'
ಚಿತ್ರದ ಸೆಟಲೈಟ್ ರೈಟ್ಸ್ ತೀರಾ ಕಳಪೆ ರೇಟ್‌ಗೆ ಸೇಲ್ ಆದ್ರೆ- ಮರ್ಯಾದೆ ಮೂರ್ ಕಾಸಿಗೆ ಹರಾಜಾಯ್ತು
ಛಾಲೆಂಜಿಂಗ್ ಸ್ಟಾರ್ ದರ್ಶನ್ ಕೊಂಡುಕೊಳ್ಳಬಹುದಾದ ಟಿವಿ ಚಾನೆಲ್
ದೂರ್‌ದರ್ಶನ್
ಅಮ್ಮ ಮಗನಿಗೆ ಹೇಳಿದ್ಳು 'ಹೋಗಿ ಒಂದು ಹಾಲಿನ ಪ್ಯಾಕೆಟ್ ತಗೊಂಬಾ, ಅಂಗಡೀಲಿ ಮೊಟ್ಟೆ ಇದ್ರೆ 6
ತಗೊಂಬಾ'.
ಮಗ ವಾಪಸ್ ಬಂದಾಗ 6 ಹಾಲಿನ ಪ್ಯಾಕೆಟ್ ತಂದಿದ್ದ.
ಅಮ್ಮ ಕೇಳಿದ್ಳು' 6 ಹಾಲಿನ ಪ್ಯಾಕೆಟ್ ಯಾಕೆ ತಂದೆ?'
'ಒಂದು ಹಾಲಿನ ಪ್ಯಾಕೆಟ್ ತಗೊಂಬಾ, ಅಂಗಡೀಲಿ ಮೊಟ್ಟೆ ಇದ್ರೆ 6 ತಗೊಂಬಾ ಅಂದ್ಯಲ್ಲ. ಅಂಗಡೀಲಿ ಮೊಟ್ಟೆ ಇದ್ವು. ಅದಕ್ಕೆ...!'
ಹೆಂಡ್ತಿ: ನಿಮ್ಮ ಕೂದಲು ಹಿಂಗೇ ಉದುರ್‌ತಾ ಇದ್ರೆ, ನಿಮಗೆ ಡೈವೋರ್ಸ್ ಕೊಡ್ತೀನಿ ಅಷ್ಟೆ.
ಗಂಡ: ಥೂ ನಾನೆಂತಾ ಪೆದ್ದ.. ಇಷ್ಟು ದಿನ ಕೂದಲು ಉದುರ್‌ಬಾರ್‌ದು ಅಂತ ಏನೇನೋ ಟ್ರೀಟ್‌ಮೆಂಟ್ ತಗೊಂಡ್ನಲ್ಲ.
ಸುದ್ದಿ: ಅಶ್ವಿನಿ ನಾಚಪ್ಪ ಅವರ ಪರ್ಸ್ ಕದ್ದು ಓಡಿದ ಕಳ್ಳ
ಪ್ರತಿಕ್ರಿಯೆ: ಒಬ್ಬ ಕಳ್ಳನ್ನ ಛೇಸ್ ಮಾಡೋಕಾಗಿಲ್ಲ ಅವರಿಗೆ. ಹಾಗಾಗಿ ಓಟಗಾರ್ತಿ ಅಶ್ವಿನಿ ಅವರು ಗಳಿಸಿದ
ಮೆಡಲ್‌ಗಳನ್ನೆಲ್ಲಾ ವಾಪಸ್ ತಗೋಬೇಕು.
- ಚಿನ್ನಾರಿ ಮುತ್ತ!
ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

