ಅಂಕಣಗಳು

ಭೈರವಿ ಒಲಿದರೂ ಬೈರಾಗಿಯಾಗಿಯೇ ಉಳಿದುಹೋದರು!

ಕರ್ನಾಟಕ ಸಂಗೀತದ ಮಹಾಗುರು ಎಂದು ಹೆಸರಾದವರು ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್..

ಭೈರವಿ ಒಲಿದರೂ ಬೈರಾಗಿಯಾಗಿಯೇ ಉಳಿದುಹೋದರು!
Published On :

ಕರ್ನಾಟಕ ಸಂಗೀತದ ಮಹಾಗುರು ಎಂದು ಹೆಸರಾದವರು ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್. 150 ವರ್ಷಗಳ ಹಿಂದೆ ಅವರು ರಾಗ ಸಂಯೋಜನೆ ಮಾಡಿದ ಹಲವು ಗೀತೆಗಳು ಈಗಲೂ ಜನಪ್ರಿಯತೆ ಉಳಿಸಿಕೊಂಡಿವೆ ಎಂಬುದು ಹಲವು ಸಂಗೀತಗಾರರ ಹೇಳಿಕೆ. ಇಂಥ ಮಹಾಗುರುವಿನ ಶಿಷ್ಯನೇ ಈ ಅಂಕಣದ ಕಥಾನಾಯಕ. ಅವನ ಹೆಸರು ಕೆಂಪೇಗೌಡ ಅಲಿಯಾಸ್ ಭೈರವಿ ಕೆಂಪೇಗೌಡ. ಭೈರವಿ ರಾಗದ ಕೀರ್ತನೆಗಳನ್ನು ಅಮೋಘವಾಗಿ ಹಾಡುತ್ತಿದ್ದುದರಿಂದ ಕೆಂಪೇಗೌಡನ ಹೆಸರಿನ ಹಿಂದೆ 'ಭೈರವಿ' ಎಂಬುದೂ ಸೇರಿಕೊಂಡಿತು. ಗಂಧರ್ವರನ್ನೂ ನಾಚಿಸುವಂತಿದ್ದ ಕೆಂಪೇಗೌಡರ ಗಾಯನಕ್ಕೆ ಮನಸೋತವರಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಮೈಸೂರಿನ ಮಹಾರಾಜ ಚಾಮರಾಜ ಒಡೆಯರ್ ಪ್ರಮುಖರು.
ವಿಪರ್ಯಾಸವೇನು ಗೊತ್ತೆ? 1857-1937ರ ಅವಧಿಯಲ್ಲಿ ಬದುಕಿದ್ದ ಈ ಮಹಾನ್ ಗಾಯಕನ ಕಲಾಪ್ರತಿಭೆಗೆ ಸಿಗಬೇಕಿದ್ದ ಗೌರವಾದರಗಳು ಸಿಗಲೇ ಇಲ್ಲ. ಕೀರ್ತಿ, ಸನ್ಮಾನ ಅಥವಾ ಹಣಕ್ಕಾಗಿ ಈತ ಹಂಬಲಿಸಲೂ ಇಲ್ಲ. ಆತ್ಮಸಂತೋಷಕ್ಕಾಗಿ, ಜನಸಾಮಾನ್ಯರ ಖುಷಿಗಾಗಿ ಹಾಡುತ್ತಿದ್ದ ಕೆಂಪೇಗೌಡರ ಬದುಕು, ಸಂಕಟಗಳ ಚಕ್ರಸುಳಿಗೆ ಮೇಲಿಂದ ಮೇಲೆ ಸಿಕ್ಕಿಕೊಂಡಿತು. ವಿಧಿಯ ಅಟ್ಟಹಾಸಕ್ಕೆ ಸಿಲುಕಿ 'ಕಳೆದು ಹೋದ ಅಧ್ಯಾಯ' ಅನ್ನಿಸಿಕೊಂಡ ಭೈರವಿ ಕೆಂಪೇಗೌಡರ ಬದುಕಿನ ಆರ್ದ್ರ ಚಿತ್ರಣ ಇಲ್ಲಿದೆ.
ಕೆಂಪೇಗೌಡನ ಪೂರ್ವಜರು, ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಶೆಟ್ಟಿಹಳ್ಳಿಯವರು. ಗೌಡರ ತಾತ ಈಸ್ಟ್ ಇಂಡಿಯಾ ಕಂಪನಿಯಲ್ಲಿ ನೌಕರಿಗೆ ಇದ್ದವರು. ಬೇರೊಬ್ಬರ ಕೈ ಕೆಳಗೆ ಕೆಲಸ ಮಾಡಲು ಇಚ್ಛಿಸದ ಕೆಂಪೇಗೌಡರ ತಂದೆ, ವ್ಯಾಪಾರಿಯಾಗಲು ನಿರ್ಧರಿಸಿ ಮಂಡ್ಯದಿಂದ ಕೊಯಮತ್ತೂರಿಗೆ ವಲಸೆ ಹೋದರು. ನಂತರ ಅಲ್ಲಿಯೇ ನೆಲೆ ನಿಂತರು. ಪ್ರಸಿದ್ಧ ವರ್ತಕ ಅನ್ನಿಸಿಕೊಂಡರು. ಇಂಥ ಕುಟುಂಬದಲ್ಲಿ, ಬೆಳ್ಳಿಯ ಚಮಚವನ್ನು ಬಾಯೊಳಗೆ ಇಟ್ಟುಕೊಂಡೇ ಹುಟ್ಟಿದಾತ ಕೆಂಪೇಗೌಡ. ಬಾಲ್ಯದಿಂದಲೇ ಆತ ಗಾಯನದಲ್ಲಿ ಆಸಕ್ತಿ ಬೆಳೆಸಿಕೊಂಡ. ಮಗನೂ ತನ್ನಂತೆಯೇ ವರ್ತಕನಾಗಲಿ ಎಂದು ಬಯಸಿದ್ದ ಕೆಂಪೇಗೌಡರ ತಂದೆ, ಈ ಹಾಡುಗಾರಿಕೆಯಿಂದ ಬದುಕಲು ಸಾಧ್ಯವಿಲ್ಲ. ಅದನ್ನು ಮರೆತು ವ್ಯಾಪಾರದತ್ತ ಗಮನ ಹರಿಸು ಎಂದು ಬುದ್ಧಿಮಾತು ಹೇಳಿದರು. ಆನಂತರವೂ ಮಗ ಸಂಗೀತ ಕಲಿಕೆಯನ್ನು ಮುಂದುವರಿಸಿದಾಗ ಛೀಮಾರಿ ಹಾಕಿದರು.
ಕೊಯಮತ್ತೂರಿನಲ್ಲಿಯೇ ಇದ್ದರೆ ಸಂಗೀತಗಾರನಾಗಲು ಸಾಧ್ಯವೇ ಇಲ್ಲವೆಂದು ಖಚಿತವಾದಾಗ, ಅಜ್ಜನೊಂದಿಗೆ ತನ್ನ ಮನದಾಸೆ ಹೇಳಿಕೊಂಡ ಕೆಂಪೇಗೌಡ, ನೇರವಾಗಿ ಬಂದದ್ದು ತಂಜಾವೂರ್ ಜಿಲ್ಲೆಯ ತಿರುವಯ್ಯಾರ್‌ಗೆ. ಅಲ್ಲಿದ್ದ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಬಳಿ ಸಂಗೀತದ ಪಾಠ ಹೇಳಿಸಿಕೊಳ್ಳಬೇಕು ಎಂಬುದು ಗೌಡನ ಕನಸಾಗಿತ್ತು. ಆವತ್ತಿನ ಸಂದರ್ಭದಲ್ಲಿ ರಾಜಮನೆತನದ ಹಾಗೂ ಬ್ರಾಹ್ಮಣ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಸಂಗೀತಪಾಠ ಹೇಳಿಕೊಡಲಾಗುತ್ತಿತ್ತು. ಈ ವಿಷಯ ತಿಳಿದಾಗ, ಒಕ್ಕಲಿಗ ಸಮುದಾಯಕ್ಕೆ ಸೇರಿದ್ದ ಕೆಂಪೇಗೌಡ ಸಂಕಟ ಮತ್ತು ಸಂಕೋಚದಿಂದ ತತ್ತರಿಸಿ ಹೋದ. ನಂತರ, ನನ್ನ ಹಣೆಬರಹ ಇದ್ದಂತಾಗಲಿ, ಇಲ್ಲಿದ್ದು ಸೇವೆ ಮಾಡುವ ಅವಕಾಶವನ್ನಾದರೂ ಪಡೆಯಬೇಕು ಎಂದು ನಿರ್ಧರಿಸಿ, ನಿಮ್ಮ ಮನೆಯಲ್ಲಿ ಏನಾದರೂ ಕೆಲಸ ಮಾಡಿಕೊಂಡಿರಲು ಅವಕಾಶ ಕೊಡಿ ಗುರುಗಳೇ ಎಂದು ಪ್ರಾರ್ಥಿಸಿದ.
ಕಾಕತಾಳೀಯವೆಂಬಂತೆ, ಅದುವರೆಗೂ ಸುಬ್ರಹ್ಮಣ್ಯ ಅಯ್ಯರ್ ಅವರ ಮನೆಯಲ್ಲಿ ಹಸುಗಳನ್ನು ನೋಡಿಕೊಳ್ಳುತ್ತಿದ್ದ ಹುಡುಗ, ದಿಢೀರನೆ ಕೆಲಸ ಬಿಟ್ಟಿದ್ದ. ಹೀಗೆ ಖಾಲಿಯಿದ್ದ ಕೆಲಸ ಕೆಂಪೇಗೌಡನ ಹೆಗಲಿಗೆ ಬಿತ್ತು. ಈ ಸಂದರ್ಭದಲ್ಲಿ, ಮುಂದೆ ಹೆಸರಾಂತ ಗಾಯಕರು ಅನ್ನಿಸಿಕೊಂಡ ಮೈಸೂರು ವಾಸುದೇವಾಚಾರ್ಯ, ಟೈಗರ್ ವರದಾಚಾರ್, ರಮಾನಂದ ಶ್ರೀನಿವಾಸ ಅಯ್ಯಂಗಾರ್ ಸೇರಿದಂತೆ ಹಲವರು ಸುಬ್ರಹ್ಮಣ್ಯ ಅಯ್ಯರ್‌ರ ಬಳಿ ಸಂಗೀತ ಕಲಿಯುತ್ತಿದ್ದರು.
ದಿನವೂ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದ್ದ ಸಂಗೀತ ಪಾಠವನ್ನು, ಗುರುವಿಗೆ ಗೊತ್ತಾಗದಂತೆ ಕೆಂಪೇಗೌಡ ಆಲಿಸುತ್ತಿದ್ದ. ತಾನು ಕಲಿತಿದ್ದನ್ನೆಲ್ಲ ದನಕರುಗಳ ಮುಂದೆ ಹಾಡುತ್ತಿದ್ದ. ಅವನದು ಏಕಲವ್ಯನ ಅಭ್ಯಾಸ. ಕೋಗಿಲೆಯ ದನಿಯನ್ನು ಅಡಗಿಸಲು ಯಾರಿಗಾದರೂ ಸಾಧ್ಯವೆ? ಕೆಲವೇ ದಿನಗಳಲ್ಲಿ ಕೆಂಪೇಗೌಡನ ರಹಸ್ಯ ಸಂಗೀತ ಕಲಿಕೆಯ ವಿಷಯ ಗುರುಪತ್ನಿಗೆ ಗೊತ್ತಾಯಿತು. ಆಕೆ ಗಂಡನಿಗೆ ವಿಷಯ ತಿಳಿಸಿದರು. ಮನೆಯ ಮಕ್ಕಳಿಗಿಂತ ಹೆಚ್ಚಾಗಿ ಆತ ಎಲ್ಲಾ ಕೆಲಸ ಮಾಡ್ತಾ ಇದ್ದಾನೆ. ಅವನಿಗೂ ಸಂಗೀತ ಕಲಿಸಿ ಎಂದು ವಿನಂತಿಸಿದರು. ಹೆಂಡತಿಯ ಮಾತು ಕೇಳಿ ಕ್ಷಣಕಾಲ ಬೆರಗಾದ ಸುಬ್ರಹ್ಮಣ್ಯ ಅಯ್ಯರ್, ಕೆಲ ದಿನಗಳ ಕಾಲ ಕೆಂಪೇಗೌಡನನ್ನು ಗುಟ್ಟಾಗಿ ಪರೀಕ್ಷಿಸಿದರು. ಆತನ ಹಾಡುಗಾರಿಕೆಯನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡರು. ಹುಡುಗನಿಗೆ ಕಲಿಕೆಯಲ್ಲಿ ಆಸಕ್ತಿಯಿದೆ ಎಂಬುದು ಖಚಿತವಾದಾಗ, ಉಳಿದ ಶಿಷ್ಯರ ಸಾಲಿನಲ್ಲಿ ಅವನಿಗೂ ಅವಕಾಶ ಕಲ್ಪಿಸಿದರು. ಅಪಾರ ಗುರುಭಕ್ತಿ ಹಾಗೂ ಶ್ರದ್ಧಾವಂತ ಕಲಿಕೆಯ ಕಾರಣದಿಂದ ಮುಂದಿನ ಕೆಲವೇ ದಿನಗಳಲ್ಲಿ ಅಯ್ಯರ್ ಅವರ ಪಟ್ಟಶಿಷ್ಯ ಎಂದು ಕರೆಸಿಕೊಳ್ಳುವ ಯೋಗ ಕೆಂಪೇಗೌಡನದ್ದಾಯಿತು. ಗುರುಗಳೊಂದಿಗೆ ಸಲುಗೆಯಿಂದ ಮಾತಾಡುವುದಕ್ಕೂ ಅವಕಾಶ ಸಿಕ್ಕಿತು.
ಅದೊಮ್ಮೆ ಏನಾಯಿತೆಂದರೆ, ಅಯ್ಯರ್ ಅವರ ಮನೆಯ ಅಂಗಳದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಹಾಡುಗಾರಿಕೆಯಲ್ಲಿ ಅಯ್ಯರ್ ಮೈಮರೆತರು. ರಾತ್ರಿ 10 ಗಂಟೆ ದಾಟಿದರೂ ಅದನ್ನವರು ಗಮನಿಸಲೇ ಇಲ್ಲ. ಈ ಸಂದರ್ಭದಲ್ಲಿ ಕೆಂಪೇಗೌಡನ ಬಳಿ ಬಂದ ಅಯ್ಯರ್‌ರ ಪತ್ನಿ, -'ಹಾಡುವುದರಲ್ಲಿ ಮೈಮರೆತಿರುವ ಗುರುಗಳು ಊಟ ಮಾಡುವುದನ್ನೇ ಮರೆತಿದ್ದಾರೆ. ಇಂಥ ಸಂದರ್ಭದಲ್ಲಿ ಬೇರೆ ಯಾರಾದರೂ ಮಾತಾಡಿಸಿದರೆ ಸಿಟ್ಟಾಗುತ್ತಾರೆ. ಅವರನ್ನು ಎಬ್ಬಿಸುವುದು ನಿನಗೆ ಮಾತ್ರ ಸಾಧ್ಯ. ಹೋಗಿ ಅವರನ್ನು ಊಟಕ್ಕೆ ಕಳಿಸು' ಅಂದರಂತೆ. ಗುರುಪತ್ನಿಯ ಆದೇಶವನ್ನು ಮೀರುವುದುಂಟೆ? ಕೆಂಪೇಗೌಡ ಅಳುಕುತ್ತಲೇ ಗುರುಗಳ ಬಳಿಗೆ ಬಂದ. ಅವರ ಹಾಡುಗಾರಿಕೆ ನಿಂತು, ಹಿನ್ನೆಲೆ ಸಂಗೀತ ಶುರುವಾಗುತ್ತಿದ್ದಂತೆಯೇ -'ಗುರುಗಳೇ, ಅಮ್ಮ ಕರೆಯುತ್ತಿದ್ದಾರೆ. ದಯಮಾಡಿ ಊಟಕ್ಕೆ ಹೋಗಿ ಬನ್ನಿ. ಹತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ನಾನು ಹೇಗಾದರೂ ಸಂಭಾಳಿಸುತ್ತೇನೆ' ಎಂದು ಬಿಟ್ಟ. ಶಿಷ್ಯನ ಈ ಮಾತು ಅಯ್ಯರ್‌ಗೆ ಉದ್ಧಟತನದಂತೆ ಕಾಣಿಸಿತು. ಕೋಪದಿಂದ ಕಿಡಿ ಕಿಡಿಯಾದ ಅವರು ತಕ್ಷಣವೇ ಮೇಲೆದ್ದು -ಹೌದಾ? ನೀನೇ ಹಾಡ್ತೀಯ? ಹಾಡು ನೋಡೋಣ ಎಂದು ಹೇಳಿ ಸರಸರನೆ ಹೋಗಿ ಬಿಟ್ಟರು.
ಇಂಥದೊಂದು ಸಂದರ್ಭ ಹಾಗೂ ಸವಾಲನ್ನು ಕೆಂಪೇಗೌಡ ನಿರೀಕ್ಷಿಸಿರಲಿಲ್ಲ. ಮುಂದೇನು ಮಾಡುವುದೆಂದು ಗೊತ್ತಾಗದೆ ಆತ ಕಂಗಾಲಾಗಿ ನಿಂತಿದ್ದಾಗ, ಪಕ್ಕವಾದ್ಯದವರು ಧೈರ್ಯ ಹೇಳಿದರು. ಹೆದರಬೇಡ, ಹಾಡು ಎಂದು ಉತ್ತೇಜಿಸಿದರು. ಆಗಿದ್ದಾಗಲಿ ಎಂದುಕೊಂಡ ಕೆಂಪೇಗೌಡ, ಗುರುಗಳು ನಿಲ್ಲಿಸಿದ್ದರಲ್ಲ; ಅಲ್ಲಿಂದಲೇ ಆರಂಭಿಸಿ ಬಿಟ್ಟ. ಭೈರವಿ ರಾಗದಲ್ಲಿ ಆಲಾಪನೆಗೆ ಶುರು ಮಾಡಿದಾಕ್ಷಣ ಅಲ್ಲೊಂದು ಗಂಧರ್ವ ಲೋಕ ಸೃಷ್ಟಿಯಾಯಿತು. ಎರಡು ನಿಮಿಷ ಕಳೆಯುತ್ತಿದ್ದಂತೆಯೇ, ಶಿಷ್ಯನ ಗಾನಮಾಧುರ್ಯಕ್ಕೆ ಬೆರಗಾದ ಅಯ್ಯರ್, ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದು ಬಂದರು. ಪ್ರೇಕ್ಷಕರ ಅಪೇಕ್ಷೆಯಂತೆ ಅವತ್ತು ನಡುರಾತ್ರಿಯವರೆಗೂ ಕೆಂಪೇಗೌಡನ ಗಾಯನ ಮುಂದುವರಿಯಿತು. ಕಾರ್ಯಕ್ರಮ ಮುಗಿದಾಕ್ಷಣ, ಧಾವಿಸಿ ಬಂದು ಶಿಷ್ಯನನ್ನು ಆಲಂಗಿಸಿಕೊಂಡ ಅಯ್ಯರ್, ಗಂಧರ್ವರನ್ನು ನಾಚಿಸುವಂಥ ಸಿರಿಕಂಠ ನಿನ್ನದು. ಇಂದಿನಿಂದ ನೀನು 'ಭೈರವಿ ಕೆಂಪೇಗೌಡ' ಎಂದು ಕರೆದರಂತೆ. ನಂತರ, ಟ್ರಾವಂಕೂರ್ ಮಹಾರಾಜರಿಂದ ಬಹುಮಾನವಾಗಿ ಬಂದಿದ್ದ ಚಿನ್ನದ ರೇಕುಗಳಿಂದ ಕೂಡಿದ ಶಾಲು ಹೊದೆಸಿ ಗೌಡನನ್ನು ಸನ್ಮಾನಿಸಿ, ಬೀಳ್ಕೊಟ್ಟರಂತೆ.
ಹೀಗೆ, ಅಯ್ಯರ್‌ರ ಅಪಾರ ಮೆಚ್ಚುಗೆಗೆ ಪಾತ್ರನಾದ ಕೆಂಪೇಗೌಡನ ವಿಷಯ ನಾಡಿನಾದ್ಯಂತ ಹರಡಿತು. ಇದೇ ಸಂದರ್ಭಕ್ಕೆ ಅಪಾರ ಲಾವಣ್ಯವತಿ ಎನಿಸಿಕೊಂಡ ಯುವತಿಯೊಂದಿಗೆ ಕೆಂಪೇಗೌಡರ ಮದುವೆಯಾಯಿತು. ಸಂಗೀತ-ಸೌಂದರ್ಯಗಳು ಮೇಳೈಸಿದ ಮೇಲೆ ಕೇಳಬೇಕೆ? ಸಂಭ್ರಮದ ಬದುಕಿನ ಸಡಗರದ ಮಧ್ಯೆ ಭೈರವಿ ರಾಗದ ಉಪಾಸನೆಯಲ್ಲಿ ಗೌಡರು ಮೈಮರೆತರು. ಆಗಲೇ ಆಗಬಾರದ ಅನಾಹುತ ಆಗಿಹೋಯಿತು. ದಿಢೀರ್ ಅನಾರೋಗ್ಯಕ್ಕೆ ತುತ್ತಾದ ಕೆಂಪೇಗೌಡರ ಪತ್ನಿ, ಅಷ್ಟೇ ಆಕಸ್ಮಿಕವಾಗಿ ಸತ್ತು ಹೋದಳು. ಮೋಹದ ಹೆಂಡತಿ ತೀರಿಹೋದದ್ದು ಗೌಡರ ಪಾಲಿಗೆ ದೊಡ್ಡ ಶಾಕ್. ಆನಂತರದಲ್ಲಿ ಅವರಿಗೆ ಯಾವುದರಲ್ಲೂ ಆಸಕ್ತಿ ಉಳಿಯಲಿಲ್ಲ. ಅವರು ಊಟ ಮರೆತರು. ತಿಂಡಿ ಮರೆತರು. ವಿರಾಗಿಯಂತೆ ಊರೂರು ಅಲೆದರು. ಹೆಂಡತಿಯ ನೆನಪಾದರೆ, ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು ಅನ್ನಿಸಿದರೆ ಇದ್ದಲ್ಲಿಯೇ ಭೈರವಿ ರಾಗದಲ್ಲಿ ಹಾಡಲು ಆರಂಭಿಸುತ್ತಿದ್ದರು. ಅವರ ತೇಜಸ್ವಿ ವ್ಯಕ್ತಿತ್ವ ಮತ್ತು ಮಧುರ ಗಾಯನಕ್ಕೆ ಮರುಳಾದ ಹಲವು ಕನ್ಯಾಪಿತೃಗಳು, ಗೌಡರನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಮಾತಾಡಿದರು. ಆದರೆ ಅದ್ಯಾವುದನ್ನೂ ಒಪ್ಪದ ಗೌಡರು, ಸೀದಾ ಮೈಸೂರಿಗೆ ಬಂದರು.
ಕೆಲ ದಿನಗಳ ಬಳಿಕ ಹೀಗಾಯಿತು. ಮೈಸೂರಿನ ಅರಸರಾಗಿದ್ದ ಚಾಮರಾಜ ಒಡೆಯರ್ ಅವರು ಪರಿವಾರದೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಯಾವುದೋ ಮಧುರ ಗಾನದ ಸದ್ದು ಕೇಳಿಸಿತು. ಸದ್ದು ಬಂದ ಕಡೆಗೇ ನಡೆದು ಹೋದ ರಾಜಪರಿವಾರಕ್ಕೆ ಕಂಡದ್ದೇನು? ನೂರಾರು ಮಂದಿ ಸಾಮಾನ್ಯ ಪ್ರೇಕ್ಷಕರ ಮಧ್ಯೆ ಗಾಯಕನೊಬ್ಬ ಮೈಮರೆತು ಹಾಡುತ್ತಿದ್ದಾನೆ. ಸಮ್ಮೋಹನಕ್ಕೆ ಒಳಗಾದವರಂತೆ ಮಹಾರಾಜರೂ ಅಲ್ಲಿಯೇ ನಿಂತರು. ಹಾಡುಗಾರಿಕೆ ಮುಗಿಯುತ್ತಿದ್ದಂತೆಯೇ ಆ ಸಂಗೀತಗಾರನ ಬಗ್ಗೆ ವಿಚಾರಿಸಿದರು. ಆತ ಭೈರವಿ ಕೆಂಪೇಗೌಡ ಎಂದು ತಿಳಿದಾಕ್ಷಣ ಖುಷಿಯಾದರು. 'ನಮ್ಮ ದರ್ಬಾರ್‌ನಲ್ಲಿಯೂ ನಿಮ್ಮ ಹಾಡುಗಾರಿಕೆ ನಡೆಯಲಿ. ದಯವಿಟ್ಟು ಬನ್ನಿ' ಎಂದು ಆಹ್ವಾನಿಸಿದರು.
'ಇದೆಲ್ಲಾ ನಡೆದದ್ದು 1892ರಲ್ಲಿ. ಆಗ ಮಹಾರಾಜರ ಆಹ್ವಾನದಂತೆ ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿಯೇ ಅರಮನೆಯಲ್ಲಿ ಕೆಂಪೇಗೌಡರ ಸಂಗೀತ ಕಾರ್ಯಕ್ರಮ ನಡೆಯಿತು. ಗೌಡರು ಮೈ ಮರೆತು ಹಾಡಿದರು. ಕಾರ್ಯಕ್ರಮ ಮುಗಿದಾಗ ಸ್ವಾಮಿ ವಿವೇಕಾನಂದರು ಹೇಳಿದ್ದು: 'ಕೆಂಪೇಗೌಡರದ್ದು ಗಂಧರ್ವರನ್ನೂ ಮೀರಿಸುವಂಥ ಕಂಠ ಮಾಧುರ್ಯ. ಆಸ್ಥಾನ ವಿದ್ವಾಂಸರಾಗುವ ಎಲ್ಲ ಅರ್ಹತೆಯೂ ಅವರಿಗುಂಟು...' ಸ್ವಾಮೀಜಿಯವರ ಮಾತು ಮುಗಿಯುತ್ತಿದ್ದಂತೆಯೇ ಗೌಡರಿಗೆ ಆಸ್ಥಾನ ವಿದ್ವಾನ್ ಪಟ್ಟ ನೀಡಲು ಮಹಾರಾಜರು ಮುಂದಾದರು. ಆದರೆ, ಯಾವುದೇ ಪದವಿ ಕುರಿತೂ ನನಗೆ ಆಸಕ್ತಿಯಿಲ್ಲ ಎಂದು ಹೇಳಿದ ಗೌಡರು ಎದ್ದು ಹೊರಟೇಬಿಟ್ಟರು. ಆಗ, ಅಲ್ಲಿದ್ದ ಹಿರಿಯ ಸಂಗೀತಗಾರರೆಲ್ಲ ಸೇರಿ, ದಿನವೂ ಸಂಜೆ ಅರಮನೆಗೆ ಬಂದು ಹಾಡಿ ಹೋಗುವಂತೆ ಗೌಡರ ಮನವೊಲಿಸಿದರಂತೆ.
ಹಾಡುವುದು ನನ್ನ ಧರ್ಮ. ಅದು ಕಲಾಸೇವೆ ಎಂದು ನಂಬಿದ್ದ ಗೌಡರು ಯಾವತ್ತೂ ಹಣ ಸಂಪಾದನೆಯ ಬಗ್ಗೆ ಯೋಚಿಸಲಿಲ್ಲ. ಪರಿಣಾಮ, ಬದುಕಿನುದ್ದಕ್ಕೂ ಬರಿಗೈ ಬಂಟನಾಗಿಯೇ ಉಳಿದರು. ಮೋಹದ ಹೆಂಡತಿಯ ನೆನಪು ಮತ್ತೆ ಮತ್ತೆ ಕಾಡಿದಾಗ, ಆ ನೋವು ಮರೆಯಲು ಕುಡಿತದ ಮೊರೆ ಹೋದರು. ಒಂದೆರಡು ಸಂದರ್ಭದಲ್ಲಿ ಕಂಠಪೂರ್ತಿ ಕುಡಿದೇ ದರ್ಬಾರ್‌ಗೆ ಬಂದರು. ಆದರೆ ಹಾಡಲು ಆರಂಭಿಸಿದಾಗ ಕೇಳಿಸಿದ್ದು ಅದೇ ಗಂಧರ್ವಗಾನ. ಈ ಸಂದರ್ಭದಲ್ಲಿ ಗೌಡರ ಜನಪ್ರಿಯತೆ ಕಂಡು ಒಳಗೊಳಗೆ ಕುದಿಯುತ್ತಿದ್ದವರೆಲ್ಲ ಒಟ್ಟಾಗಿ ಮಹಾರಾಜರ ಬಳಿ ಹೋದರು. ದರ್ಬಾರ್‌ಗೆ ಕುಡಿದು ಬಂದ ಕೆಂಪೇಗೌಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಗ ಮಹಾರಾಜರು 'ಆತನ ಮಧುರಗಾಯನಕ್ಕಾಗಿ ಅಂಥ ಹತ್ತು ತಪ್ಪುಗಳನ್ನು ನಾನು ಒಪ್ಪಿಕೊಳ್ಳಬಲ್ಲೆ' ಎಂದರಂತೆ!
ಇಂಥ ಹಿನ್ನೆಲೆಯ ಕೆಂಪೇಗೌಡರು ಅದೊಮ್ಮೆ ತಂಜಾವೂರ್‌ಗೆ ಬಂದರು. ಆಗಲೇ ಅವರ ಆರೋಗ್ಯ ಕೆಟ್ಟಿತು. ಕೈಯಲ್ಲಿ ಬಿಡಿಗಾಸೂ ಇಲ್ಲದ ಕಾರಣ ಪಾಳು ಛತ್ರವೊಂದರಲ್ಲಿ ಮಲಗಿ ಬಿಟ್ಟರು. ದಿನ ಕಳೆದು ಸ್ವಲ್ಪ ಚೇತರಿಸಿಕೊಂಡಾಗ ಛತ್ರದ ಎದುರಿಗಿದ್ದ ಗುಡಿಸಿಲಿನಲ್ಲಿದ್ದ ತಾಯಿ-ಮಗಳು ಅಳುತ್ತಿರುವುದು ಕೇಳಿಸಿತು. ತಕ್ಷಣವೇ ಹೋಗಿ ವಿಚಾರಿಸಿದರು. 'ಮಗಳಿಗೆ ಮದುವೆ ನಿಶ್ಚಯವಾಗಿದೆ ಸ್ವಾಮೀ. 3 ಸಾವಿರ ರೂ.ಗಳನ್ನು ವರದಕ್ಷಿಣೆಯ ರೂಪದಲ್ಲಿ ಕೊಟ್ಟರೆ ಮಾತ್ರ ಮದುವೆ ಎಂದು ಗಂಡಿನ ಕಡೆಯವರು ಹೇಳುತ್ತಿದ್ದಾರೆ. ಅಷ್ಟು ಹಣ ನಮ್ಮಲ್ಲಿಲ್ಲ. ಹಾಗಾಗಿ ಮದುವೆ ನಿಂತು ಹೋಗುತ್ತದೆ' ಎನ್ನುತ್ತಾ ಆ ತಾಯಿ ಅಳುವುದನ್ನು ಮುಂದುವರಿಸಿದಳು. ಗೌಡರು ತಕ್ಷಣವೇ ತಂಜಾವೂರ್‌ನಲ್ಲಿದ್ದ ತಮ್ಮ ಪರಿಚಯದ ವರ್ತಕರ ಬಳಿ ಹೋದರು. ತುರ್ತಾಗಿ ಹಣಬೇಕು ಅಂದರು. 'ಅಡಮಾನ ಇಟ್ಟುಕೊಳ್ಳದೆ ಯಾವುದೇ ವ್ಯವಹಾರವನ್ನೂ ನಾನು ಮಾಡುವುದಿಲ್ಲ' ಎಂದು ಆ ವರ್ತಕ ಹೇಳಿದಾಗ, ತಮ್ಮಲ್ಲಿ ಬೇರೇನೂ ಇಲ್ಲದ್ದರಿಂದ ಭೈರವಿ ರಾಗವನ್ನೇ ಒತ್ತೆ ಇಟ್ಟು ಹಣ ಪಡೆದು, ಆ ಅಪರಿಚಿತ ಕುಟುಂಬದ ಮದುವೆಗೆ ನೆರವಾದರು. ಆನಂತರದಲ್ಲಿ ಅವರು ಭೈರವಿ ರಾಗವನ್ನು ಹಾಡಲೇ ಇಲ್ಲ. ಮುಂದೊಮ್ಮೆ ತುಮಕೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭೈರವಿ ರಾಗದಲ್ಲಿ ಹಾಡಲೇಬೇಕೆಂದು ಪ್ರೇಕ್ಷಕರು ಪಟ್ಟು ಹಿಡಿದರು. ಆಗ, ಹಾಡುವುದನ್ನು ಅಷ್ಟಕ್ಕೇ ನಿಲ್ಲಿಸಿದ ಕೆಂಪೇಗೌಡರು ದಿಢೀರನೆ ವೇದಿಕೆಯಿಂದ ನಿರ್ಗಮಿಸಿದರು. ಉಳಿದ ಸಂಗೀತಗಾರರಿಂದ ವಿಷಯ ತಿಳಿದ ತುಮಕೂರಿನ ಕಲಾರಸಿಕರು ನೇರವಾಗಿ ತಂಜಾವೂರ್‌ಗೆ ಹೋಗಿ ಆ ವರ್ತಕನಿಗೆ ಹಣ ಪಾವತಿಸಿ ಭೈರವಿ ರಾಗದ ಅಡಮಾನವನ್ನು ಬಿಡಿಸಿದರಂತೆ. ಪರಿಣಾಮ, ಕೆಂಪೇಗೌಡರು ಮತ್ತೆ ಹಾಡಿದರು. ಗಂಧರ್ವ ಗಾಯನ ಮತ್ತೆ ಧರೆಗಿಳಿದು ಬಂತು!
ಆನಂತರದಲ್ಲಿ ಗೌಡರು ಮಹಾರಾಜರೊಂದಿಗೆ ಕೋಲ್ಕತ್ತಾಗೆ ಹೋಗುತ್ತಾರೆ. ದುರಾದೃಷ್ಟಕ್ಕೆ, ದಿಢೀರ್ ಅನಾರೋಗ್ಯದಿಂದ ಮಹಾರಾಜರು ತೀರಿ ಹೋಗುತ್ತಾರೆ. ಈ ಶಾಕ್‌ನಿಂದ ತತ್ತರಿಸಿ ಹೋದ ಗೌಡರು ವೈರಾಗ್ಯ ಭಾವದಿಂದ ಹಿಮಾಲಯಕ್ಕೆ ಹೋಗಿ ಬಿಡುತ್ತಾರೆ. ಕೆಲ ವರ್ಷಗಳ ನಂತರ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅನಾಥರಂತೆ ಸತ್ತು ಹೋಗುತ್ತಾರೆ!
----
ಕೆಂಪೇಗೌಡರನ್ನು ಕುರಿತು ಡಿ.ವಿ.ಜಿಯವರು, ಮೈಸೂರು ವಾಸುದೇವಾಚಾರ್ಯರು ಒಂದೊಂದು ಅಧ್ಯಾಯ ಬರೆದಿದ್ದಾರೆ. ಎಚ್.ಎಲ್. ನಾಗೇಗೌಡರು ಒಂದು ಕಾದಂಬರಿ ಬರೆದಿದ್ದಾರೆ ಎಂಬುದನ್ನು ಬಿಟ್ಟರೆ, ಈ ಮಹಾನ್ ಗಾಯಕನ ಕುರಿತು ಯಾವುದೇ ಮಾಹಿತಿಯೂ ಲಭ್ಯವಿಲ್ಲ. ಸ್ವಾಮಿ ವಿವೇಕಾನಂದರಂಥ ಮಹಾಮಹಿಮರಿಂದ ಹೊಗಳಿಸಿಕೊಂಡ ಗಾಯಕನ ವಿಷಯವಾಗಿ ಇಂಥದೊಂದು ನಿರ್ಲಕ್ಷ್ಯ ಖಂಡಿತ ಸಲ್ಲದು, ಅಲ್ಲವೇ?

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.