ಐದು ವರ್ಷಗಳ ಬಳಿಕ ಆಸ್ಕರ್ ಏಕಾಂಗಿ ಫೋಟೋ

ಪತ್ರಿಕಾ ಛಾಯಾಗ್ರಾಹಕರಿಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ 'ಏಕಾಂಗಿ' ಫೋಟೋ ತೆಗೆಯುವುದೆಂದರೆ ದೊಡ್ಡ ಸವಾಲು. ಮನೆಯಲ್ಲಷ್ಟೇ ಅಲ್ಲ, ಯಾವುದೇ ಸರ್ಕಾರಿ ಅಥವಾ ಖಾಸಗಿ ಸಭೆ, ಸಮಾರಂಭಕ್ಕೆ ಹೋದರೂ ಅವರ ಪತ್ನಿ ಬ್ಲಾಸಮ್ ಫರ್ನಾಂಡಿಸ್ ಆಸ್ಕರ್‌ಗೆ ಅಂಟಿಕೊಂಡಿರುತ್ತಾರೆ. ಜತೆಗೆ ಬರುವುದು ತಪ್ಪಲ್ಲ ಬಿಡಿ, ಆದರೆ ವೇದಿಕೆ ಮೇಲೂ ಖುರ್ಚಿ ಮೀಸಲಿಡಬೇಕು. ಎಐಸಿಸಿ ಅಧಿವೇಶನದ ವೇದಿಕೆ ಮೇಲೂ ಅವರು ಪತಿ ಜತೆಗೆ ವೇದಿಕೆ ಹಂಚಿಕೊಳ್ಳುವಷ್ಟು ಪ್ರಭಾವಿ! ಇಷ್ಟೆಲ್ಲಾ 'ಪತ್ನಿ ಬಿಗಿ ಭದ್ರತೆ' ನಡುವೆಯೇ ಐದು ವರ್ಷಗಳ ಬಳಿಕ ಆಸ್ಕರ್ ಏಕಾಂಗಿಯಾಗಿರುವ ಫೋಟೋ ತೆಗೆಯುವಲ್ಲಿ ಮಂಗಳೂರು ಪತ್ರಿಕಾ ಛಾಯಾಗ್ರಾಹಕರು ಯಶಸ್ವಿಯಾಗಿದ್ದಾರೆ! ಕಳೆದ ಶನಿವಾರ ನಗರದ ಟೌನ್ ಹಾಲ್‌ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆಗೆ ಆಸ್ಕರ್ ಪತ್ನಿ ಸಮೇತವೇ ಬಂದಿದ್ದರು. ಉದ್ಘಾಟನೆಯಲ್ಲಿ ಪತ್ನಿ ಜತೆಗೇ ಇದ್ದ ಆಸ್ಕರ್ ಭಾಷಣ ಮುಗಿಸಿದ ಬಳಿಕ ತರಾತುರಿಯಲ್ಲಿ ಪತ್ನಿ ಬಿಟ್ಟು ತೆರಳಿದರು. ಇದೇ ಸುಸಂದರ್ಭ ಎಂದುಕೊಂಡ ಪತ್ರಿಕಾ ಛಾಯಾಗ್ರಾಹಕರು ಆಸ್ಕರ್ ಫೋಟೋವನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು!
ನಾವೆಲ್ಲ ಈಗ ಹೇಗೆ ಒಂದಾಗಿದ್ದೇವೆ ನೋಡಿ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ಮೊನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲಿ ಶಾಸಕರು ಸಚಿವರನ್ನು ತಾರಾ ಮಾರಾ ಜಾಡಿಸಿದ್ದರು. ಪ್ರತಿಪಕ್ಷದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಾಯಿಗೆ ಬಂದಂತೆ ನಿಂದಿಸುತ್ತಿದ್ದರೂ ನೀವೆಲ್ಲ ಕೈಕಟ್ಟಿ ಕುಳಿತಿರುತ್ತೀರಿ, ಇಲ್ಲ ಕಣ್ಣು ಮುಚ್ಚಿ ನಿದ್ದೆ ಮಾಡುತ್ತೀರಿ. ಈ ಸೌಭಾಗ್ಯಕ್ಕೆ ಮಂತ್ರಿಯಾಗಬೇಕೇ? ಆಸಕ್ತಿ ಇಲ್ಲದಿದ್ದರೆ ರಾಜಿನಾಮೆ ನೀಡಿ ಎಂದು ಬಿಸಿ ಮುಟ್ಟಿಸಿದ್ದರು. ಇದಾದ ಮೇಲೆ ಕಲಾಪ ಸಂದರ್ಭದಲ್ಲಿ ಅನಗತ್ಯವಾಗಿಯಾದರೂ ಮಂತ್ರಿಗಳು ಕೂಗಾಡಲಾರಂಭಿಸಿದ್ದಾರೆ. ಇದು ಸ್ಪೀಕರ್ ಕಾಗೋಡು ತಿಮ್ಮಪ್ಪನವರ ಕೋಪಕ್ಕೆ ಕಾರಣವಾಗಿದೆ. ಏಕೆಂದರೆ ಪ್ರತಿಪಕ್ಷದವರಿರಲಿ, ಆಡಳಿತ ಪಕ್ಷದವರಿರಲಿ ಕಡಿಮೆ ಮಾತನಾಡಿದಷ್ಟು ತಿಮ್ಮಪ್ಪನವರಿಗೆ ಖುಷಿ. ಸಚಿವರ ಮಾತು ಸದನದೊಳಗೆ ಈ ಪರಿಸ್ಥಿತಿ ಸೃಷ್ಟಿಸಿದರೆ, ಹೊರಗೆ ಬೇರೆಯದೇ ಕತೆ. ತಮಗೆ ಬೈದ ಶಾಸಕರ ಬಳಿ ಬಂದು ಕೆಲವು ಸಚಿವರು, ನಾವೆಲ್ಲ ಈಗ ಹೇಗೆ ಒಂದಾಗಿದ್ದೇವೆ ನೋಡಿದ್ರಾ, ನೀವ್ಯಾರು ಮಂತ್ರಿಯಾಗೋ ಕನಸು ಕಾಣಬೇಡಿ ಎನ್ನುತ್ತಿದ್ದಾರಂತೆ!
ಟಿಕೆಟ್ ಜತೆಗೆ ನನಗೆ ಫಂಡೂ ಕೊಡಿ ಎಂದ ವಿಜಯಶಂಕರ್
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಕೇಂದ್ರ ಚುನಾವಣಾ ಆಯೋಗ ಯಾವಾಗ ಬೇಕಾದರೂ ದಿನಾಂಕ ಪ್ರಕಟಿಸಬಹುದು ಎಂಬ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಈಗಾಗಲೇ ಚಟುವಟಿಕೆಗಳು ಆರಂಭವಾಗಿವೆ. ಮೈಸೂರು ಲೋಕಸಭಾ ಕ್ಷೇತ್ರದಿಂದ ಒಮ್ಮೆ ಒಂದು ವರ್ಷ, ಮತ್ತೊಮ್ಮೆ ಐದು ವರ್ಷ- ಹೀಗೆ ಎರಡು ಬಾರಿ ಆಯ್ಕೆಯಾಗಿ, ಕಳೆದ ಬಾರಿ ಸೋತಿರುವ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿ. ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಮಾಜಿ ಸಚಿವೆ ಕೆಜೆಪಿಯ ಶೋಭಾ ಕರಂದ್ಲಾಜೆ ಅವರಿಗೂ ಮೈಸೂರು ಮೇಲೆ ಒಂದು ಕಣ್ಣಿದೆ. ಹೀಗಿರುವಾಗ ವಿಜಯಶಂಕರ್ ಅವರು, ನನಗೆ ಟಿಕೆಟ್ ಜತೆಗೆ ಫಂಡೂ ಕೊಡಬೇಕು. ಹಾಗಾದರೇ ಮಾತ್ರ ಸ್ಪರ್ಧಿಸುತ್ತೇನೆ ಎಂದು ಪಕ್ಷದ ವರಿಷ್ಠರ ಬಳಿ ಹೇಳಿಕೊಂಡಿದ್ದರಂತೆ. ಅದಕ್ಕೆ ಮುಖಂಡರು, ಕಾರ್ಯಕರ್ತರು, ಅಯ್ಯೋ, ಇವ್ರಿಗೆ ಟಿಕೆಟ್ ಜತೆಗೂ ಫಂಡು ಕೊಡುವ ಬದ್ಲು, ಫಂಡಿರೋ ಮಾಜಿ ಸಚಿವ ಎಸ್.ಎ. ರಾಮದಾಸ್ ಕ್ಯಾಂಡಿಡೇಟ್ ಆಗ್ಲಿ ಬಿಡ್ರಿ. ಅಸೆಂಬ್ಲಿ ಚುನಾವಣೇಲಿ ಸೋತಿರುವ ಅವರಿಗೆ ಟಿಕೆಟ್ ಜತೆಗೆ ಒಂದು ಛಾನ್ಸು ಕೊಟ್ಟಂತೆ ಆಗುತ್ತೆ. ಒಂದಷ್ಟು ಕಾಸು ಓಡಾಡುತ್ತೆ ಅಂತಾ ಹೇಳ್ಕೊಂಡು ಅಡ್ಡಾಡುತ್ತಿದ್ದಾರಂತೆ !
ಯುಪಿಎ ಸೋಲಬಹುದು, ಆದ್ರೆ ಮೋದಿ ಪ್ರಧಾನಿಯಾಗಲ್ಲ ಬಿಡಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಮೋದಿ ಘೋಷಣೆಯಾದ ಬಳಿಕ ಕಾಂಗ್ರೆಸ್‌ನಲ್ಲಿ ತಳಮಳ ಉಂಟಾಗಿದೆ. ರಾಷ್ಟ್ರಮಟ್ಟದಿಂದ ಹಿಡಿದು ಬೂತ್‌ಮಟ್ಟದ ಕಾಂಗ್ರೆಸ್ ನಾಯಕರೂ ತೆಗಳಲು ಶುರು ಮಾಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸುದ್ದಿಗಾರರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಮಾತು ಮೋದಿ ಕಡೆಗೆ ಹೊರಳುತ್ತಿದ್ದಂತೆ, 'ಬಿಜೆಪಿಯವರು ಗುಜರಾತ್ ಮಾದರಿ ಅಭಿವೃದ್ಧಿ ಹಾಗೇ ಹೀಗೆ ಎಂದು ಏನೆಲ್ಲ ಹೇಳುತ್ತಿದ್ದಾರೆ. ಆದರೆ ಅದು ಜನರಿಗೆ ತಟ್ಟುವುದಿಲ್ಲ. ಜನರಿಗೂ ಹತ್ತು ವರ್ಷದಿಂದ ಯುಪಿಎ ನೋಡಿ ಬೇಸರವಾಗಿದೆ. ಹೀಗಾಗಿ ಕೇಂದ್ರದಲ್ಲಿ ಬದಲಾವಣೆ ಬರಬಹುದು ಅಷ್ಟೆ. ಒಂದು ವೇಳೆ ಹಾಗೆನಾದರೂ ಆದರೆ ಕಾಂಗ್ರೆಸ್‌ನವರು ಸುಮ್ಮನಿರಲಿಕ್ಕಿಲ್ಲ. ದೇವೆಗೌಡರು ಹೇಗೆ ಪ್ರಧಾನಿ ಆದರು ನಿಮಗೆ ಗೊತ್ತಲ್ಲ. ಹಾಗೆ ಇನ್ನೊಬ್ಬರನ್ನು ಕಾಂಗ್ರೆಸ್ ಹುಡುಕುತ್ತದೆ' ಎಂದಾಗ ಪತ್ರಕರ್ತರು ಸುಸ್ತು!
ನೈಸ್ ಮಾಡೋಕೆ ಅಶೋಕ ಖೇಣಿ ಬಂದ್ರು ಓಡಿ.. ಓಡಿ.. ಕುಮಾರಣ್ಣ
ದೇವೇಗೌಡರು ಹಾಗೂ ಅಶೋಕ ಖೇಣಿ ಅವರದ್ದು ಎಣ್ಣೆ ಸಿಗೇಕಾಯಿ ಸಂಬಂಧ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ. ಅವಕಾಶ ಸಿಕ್ಕಾಗೆಲ್ಲ ಒಬ್ಬರ ವಿರುದ್ಧ ಇನ್ನೊಬ್ಬರು ಬಾಯನ್ನೇ ಮಷಿನ್‌ಗನ್ ತರ ಬಯ್ಯುವುದಕ್ಕೆ ಬಳಸುತ್ತಾರೆ. ಇಂಥ ದುಷ್ಮನಿ ನಡುವೆಯೇ ಅಶೋಕ ಖೇಣಿ ವಿಧಾನಸೌಧ ಪ್ರವೇಶಿಸಿದ್ದಾರೆ. ಸೌಧಕ್ಕೆ ಬಂದಾಗಲೆಲ್ಲ ಎದುರಿಗೆ ಸಿಗುವ ದೇವೇಗೌಡರ ಪುತ್ರ, ಪ್ರತಿಪಕ್ಷ ನಾಯಕ ಕುಮಾರಸ್ವಾಮಿಗೆ ಹಾಯ್, ಹಲೋ ಎಂದು ದೋಸ್ತಿ ಮಾಡಿದ್ದಾರೆ. ಕುಮಾರಸ್ವಾಮಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದೊಡ್ಡ ಗೌಡರಿಗೆ ಎಲ್ಲಿ ವಿಷಯ ಗೊತ್ತಾಗಿ ಬಿಡುತ್ತದೋ ಎಂಬ ಭಯದಲ್ಲೇ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ವಾಪಸ್ ಬೆಂಗಳೂರಿಗೆ ಬರಲು ವಿಮಾನವೇರಿ ಕುಳಿತಿದ್ದರು. ಅವರ ದುರಾದೃಷ್ಟಕ್ಕೋ ಎಂಬಂತೆ ಖೇಣಿ ಸಹ ಬೆಂಗಳೂರಿಗೆ ಬರಲು ಅದೇ ವಿಮಾನವೇರಿದ್ದರು. ಮೊದಲೇ ಆಸೀನರಾಗಿದ್ದ ಎಚ್‌ಡಿಕೆ, ಖೇಣಿ ಬರುವುದನ್ನು ಕಂಡು ನಿದ್ರೆಗೆ ಜಾರಿದಂತೆ ನಾಟಕವಾಡಿದರು. ಬೆಂಗಳೂರಿಗೆ ಬರುವವರೆಗೂ ಕಣ್ಣು ಬಿಡಲೇ ಇಲ್ಲ! ಹೊರ ಬರುತ್ತಿದ್ದಂತೆ ಮಾತಿಗೆಳೆದ ಖೇಣಿ, 'ನಿಮ್ಮ ಹತ್ರ ತುಂಬಾ ಮಾತಾಡೋದಿತ್ತು. ನೀವು ನಿದ್ರೆ ಮಾಡ್ತಿದ್ರಿ. ಅದಕ್ಕೆ ಡಿಸ್ಟರ್ಬ್ ಮಾಡ್ಲಿಲ್ಲ' ಅಂದ್ರಂತೆ. ಓ ಮೈ ಗಾಡ್ ಸದ್ಯಕ್ಕೆ ಬಚಾವ್ ಆದೆ ಅಂತಾ ಕುಮಾರಣ್ಣ ಜಾಗ ಖಾಲಿ ಮಾಡಿದ್ರಂತೆ!
- ನಂಬಿರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


