ಅಂಕಣಗಳು

ಶೌಚಾಲಯ ಸಾಹಿತ್ಯದ ಆಳ ಅರಸುತ್ತ...

ನೀವು ಯಾವುದೇ ಸಾರ್ವಜನಿಕ ಶೌಚಾಲಯಗಳಿಗೆ ಹೋಗಿ...

ಶೌಚಾಲಯ ಸಾಹಿತ್ಯದ ಆಳ ಅರಸುತ್ತ...
Published On :

ನೀವು ಯಾವುದೇ ಸಾರ್ವಜನಿಕ ಶೌಚಾಲಯಗಳಿಗೆ ಹೋಗಿ, ಗೋಡೆಯ ಮೇಲೆ ಒಂದಷ್ಟು ಸಾಹಿತ್ಯವನ್ನು ಕಂಡೇ ಕಾಣುತ್ತೀರಿ. ಯಾರಾದರೂ ಏನಾದರೂ ಗೀಚಿರುತ್ತಾರೆ. ಕೆಲವರು ಪೋಲಿ ಚಿತ್ರಗಳನ್ನು ಬಿಡಿಸಿರುತ್ತಾರೆ. ಹುಡುಗಿಯರ ಫೋನ್ ನಂಬರ್ ಬರೆದಿರುತ್ತಾರೆ. ಒನ್‌ಲೈನ್ ಜೋಕುಗಳನ್ನು ಬರೆದಿರುತ್ತಾರೆ. ಯಾವ ಶೌಚಾಲಯವೂ ಈ 'ಸಾಹಿತ್ಯ'ದಿಂದ ಮುಕ್ತವಾಗಿರಲಿಕ್ಕಿಲ್ಲ.
ಕಾಲೇಜು, ಯುನಿವರ್ಸಿಟಿ ಹಾಸ್ಟೆಲ್‌ಗಳ ಶೌಚಾಲಯಗಳನ್ನು ನೋಡಬೇಕು. ಅಲ್ಲಿ ಈ ಸಾಹಿತ್ಯದ ನಿಜವಾದ ಸೃಜನಶೀಲತೆ ನಾನಾ ಪ್ರಕಾರಗಳಲ್ಲಿ ಅನಾವರಣವಾಗಿರುತ್ತದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದುವಾಗ ನಾನು ನಿಜಲಿಂಗಪ್ಪ ಹಾಸ್ಟೆಲ್‌ನಲ್ಲಿ ಕೆಲ ತಿಂಗಳು ಉಳಿದುಕೊಂಡಿದ್ದೆ. ಅಲ್ಲಿನ ಯಾವ ಶೌಚಾಲಯಗಳಲ್ಲೂ ಬರೆಯಲು ಒಂದಂಗುಲ ಜಾಗ ಸಹ ಖಾಲಿ ಇರಲಿಲ್ಲ. ಸಾಹಿತ್ಯದ ಮಣ್ಣಿನ ವಾಸನೆ ಹೊರತಾಗಿ ಮತ್ತೆಲ್ಲವನ್ನೂ ಅಲ್ಲಿ ಅಘ್ರಾಣಿಸಬಹುದಾಗಿತ್ತು. ಅಲ್ಲಿ ಎಲ್ಲರೂ ಶೌಚಾಲಯ ಸಾಹಿತಿಗಳೇ. ಬಾತ್‌ರೂಮ್ ಸಿಂಗರ್‌ಗಳಂತೆ ಟಾಯ್ಲೆಟ್ ಸಾಹಿತಿಗಳು ಅಲ್ಲಿ ದಂಡಿಯಾಗಿದ್ದರು. ಹೇಳಿ ಕೇಳಿ ಧಾರವಾಡ ಸಾಹಿತಿಗಳ ತವರೂರು. ಈ ಶೌಚಾಲಯಗಳನ್ನು ನೋಡಿದರೆ ಆ ಮಾತು ಅಗ್ದಿಖರೆ ಅಂತ ಅನಿಸುತ್ತಿತ್ತು.
ಈಗ ಎಲ್ಲರ ಕೈಯಲ್ಲೂ ಮೊಬೈಲ್ ಬಂದಿರುವುದರಿಂದ ಹಾಗೂ ಅದು ಶೌಚಾಲಯದಲ್ಲೂ ಕೈಯಲ್ಲೇ ಇರುವುದರಿಂದ, ಶೌಚಾಲಯ ಸಾಹಿತ್ಯ ಹುಲುಸಾಗಿ ಬೆಳೆಯಲು ಅಡ್ಡಿಯಾಗಿರುವ ಸಾಧ್ಯತೆಯಿದೆ. ಶೌಚಾಲಯಗಳಲ್ಲಿ ಮೊದಲಿನಷ್ಟು ಫ್ರೀ ಸಮಯ ಸಿಗದಿರುವುದರಿಂದ, ಕ್ರಮೇಣ ಈ ಸಾಹಿತ್ಯ ಪ್ರಕಾರವೇ ನಶಿಸುವ ಸಾಧ್ಯತೆಯೂ ಇದೆ.
ಶೌಚಾಲಯ ಸಾಹಿತ್ಯ ಇದೆಯಲ್ಲ. ಅದು ಕೇವಲ ನಮ್ಮ ಊರು, ರಾಜ್ಯ, ದೇಶಕ್ಕೆ ಮಾತ್ರ ಸೀಮಿತವಾದುದಲ್ಲ. ನಾನು ಹೋದ ನಲವತ್ತೈದು ದೇಶಗಳಲ್ಲೂ ಈ 'ಸಾಹಿತ್ಯ' ವನ್ನು ಕಂಡಿದ್ದೇನೆ. ನಾನು ಇತ್ತೀಚೆಗೆ ವಿಯೆಟ್ನಾಮ್‌ಗೆ ಹೋಗಿದ್ದೆ. ಅಲ್ಲೊಂದು ಪುಸ್ತಕ ಕಂಡಿತು. ಅದರ ಶೀರ್ಷಿಕೆಯನ್ನು ಓದಿಯೇ ಖರೀದಿಸಬೇಕೆನಿಸಿತು. 'Closet Readin: 500 Years of humour on the loo'  ಅಂತ ಆ ಪುಸ್ತಕದ ಹೆಸರು. ಫಿಲ್‌ನಾರ್ಮನ್ ಈ ಕೃತಿಯ ಲೇಖಕ. ಶೌಚಾಲಯಗಳಲ್ಲಿನ ಪೋಲಿ ಸಾಲುಗಳನ್ನು ಸಂಗ್ರಹಿಸಿ ಒಂದು ಪುಸ್ತಕ ಮಾಡಿದರೆ ಹೇಗೆ ಎಂಬ ಒಂದು ಸಣ್ಣ ಆಲೋಚನೆಯೇ ಈ ಪುಸ್ತಕದ ಹುಟ್ಟಿಗೆ ಮೂಲ. ಆರಂಭದಲ್ಲಿ ಫಿಲ್‌ನಾರ್ಮನ್ ಸುಮಾರು ಐವತ್ತು ಶೌಚಾಲಯಗಳಿಗೆ, ಈ ಪೋಲಿ ಸಾಲುಗಳನ್ನು ಸಂಗ್ರಹಿಸಲೆಂದೇ ಹೋದ. ಆದರೆ ಈ ಪ್ರಕಾರದ ಸಾಹಿತ್ಯದಲ್ಲಿ ಕ್ರಮೇಣ ಆಸಕ್ತಿಯುಂಟಾಗಿ ಒಂದು ಸಾವಿರಕ್ಕೂ ಹೆಚ್ಚು ಶೌಚಾಲಯಗಳಿಗೆ ಭೇಟಿ ನೀಡಿದ. ಈ 'ಅಭಿಯಾನ'ಕ್ಕೆ ಸಂಶೋಧನೆಯ ರೂಪ ಕೊಟ್ಟ. ಅಂದರೆ ಅಷ್ಟು ಗಂಭೀರವಾಗಿ ತನ್ನ ಯೋಜನೆಯನ್ನು ಕೈಗೆತ್ತಿಕೊಂಡ. ಆದರೆ ಈ ಕೆಲಸ ಪೂರ್ಣವಾಗುವ ಹೊತ್ತಿಗೆ ಇದೊಂದು ಬೃಹತ್ ಗ್ರಂಥವಾಗಬಹುದೆಂಬ ಸಣ್ಣ ಅಂದಾಜು ನಾರ್ಮನ್‌ಗೆ ಇರಲಿಲ್ಲ.
ಶೌಚಾಲಯ ಸಾಹಿತ್ಯದ ಬಗ್ಗೆ ಲಘುಧಾಟಿಯಲ್ಲಿ ಸಾಕಷ್ಟು ಕೃತಿಗಳಿವೆ. ಆದರೆ ಈ ಪುಸ್ತಕ ಆಳವಾದ ಅಧ್ಯಯನದ ಪರಿಶ್ರಮದಿಂದ ಮೂಡಿಬಂದಿದೆ. ಫಿಲ್ ನಾರ್ಮನ್ ನೂರಕ್ಕೂ ಹೆಚ್ಚು ಶೌಚಾಲಯ ಸಾಹಿತಿಗಳೊಂದಿಗೆ ಚರ್ಚಿಸಿದ್ದಾನೆ. ಈ ಸಾಹಿತ್ಯ ರಚನೆಯ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.
ನಮ್ಮೆಲ್ಲರಿಗೂ ಶೌಚಾಲಯ ಸಾಹಿತ್ಯ ಅಂದರೆ ಇತ್ತೀಚಿನದ್ದಿರಬಹುದೆಂಬ ಭಾವನೆಯಿರಬಹುದು. ಆದರೆ ಇದು ನಮ್ಮ ನವೋದಯ, ಪ್ರಗತಿಪರ, ನವ್ಯ, ಬಂಡಾಯ ಸಾಹಿತ್ಯಕ್ಕಿಂತ 'ಪ್ರಾಚೀನ' ಇತಿಹಾಸವಿದೆ. ಐದು ನೂರು ವರ್ಷಗಳ ಭವ್ಯ ಇತಿಹಾಸವಿದೆ. ಫ್ರೆಂಚ್ ಕ್ರಾಂತಿಗೆ ಶೌಚಾಲಯ ಸಾಹಿತ್ಯ ಎಂಥ ಕೊಡುಗೆ ನೀಡಿದೆಯೆಂಬುದನ್ನು ನಾರ್ಮನ್ ವಿವರಿಸಿದ್ದಾನೆ. ಬಹುತೇಕ ಕೃತಿಗಳ ಹುಟ್ಟಿಗೆ ಶೌಚಾಲಯ ಎಂಥ ಪ್ರೇರಣೆ ನೀಡಿದೆಯೆಂಬುದನ್ನು ಆತ ಬಣ್ಣಿಸಿದ್ದಾನೆ. ಶೌಚಾಲಯ ಸಾಹಿತ್ಯದ ಬಗ್ಗೆ ನಿಜಕ್ಕೂ ಬೆಳಕು ಚೆಲ್ಲುವ ಕೃತಿ. ಈ ಪುಸ್ತಕ ಓದಿದ ಬಳಿಕ ನಿಮ್ಮ ಶೌಚಾಲಯ ಹಾಗೂ ಸಾಹಿತ್ಯದ ಬಗೆಗಿನ ನಿಮ್ಮ 'ಬಹಿರ್ದೆಸೆ' ಬದಲಾಯಿಸುವುದಂತೂ ಸತ್ಯ.
ಅಂಕಣಕಾರರು ಹಾಗೂ ಸಂಪಾದಕರು
ಪತ್ರಿಕೋದ್ಯಮದ ಎಲ್ಲ ಪ್ರಕಾರಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ. ಆದರೆ 'ಅಂಕಣ ಬರೆಯುವುದು ಹೇಗೆ?' ಎಂಬ ಪುಸ್ತಕಗಳು ಇದ್ದಂತಿಲ್ಲ. ಕಾರಣ ಇಷ್ಟೇ, ಎಲ್ಲರೂ ಅಂಕಣಕಾರರಾಗುವುದಿಲ್ಲ. ಅಂಕಣ ಬರೆಯುವ ಹಂತ ತಲುಪಿದ್ದಾನೆಂದರೆ ಅವರಿಗೆ ಉಪದೇಶ, ಸಲಹೆ, ಕಿವಿಮಾತು ಅಗತ್ಯವಿರುವುದಿಲ್ಲ ಎಂಬುದಿರಬಹುದು. ಸಾಮಾನ್ಯವಾಗಿ ಸಂಪಾದಕರು ಸಹ ಅಂಕಣಕಾರರಿಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಹೇಳುವುದಿಲ್ಲ. ಅಂಕಣವನ್ನು ಎಡಿಟ್ ಸಹ ಮಾಡುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅಂಕಣಕಾರರು ಬರೆದಿದ್ದು ಯಥಾವತ್ತು ಅಚ್ಚಾಗುತ್ತವೆ. (ನಮ್ಮ ಪ್ರಸಿದ್ಧ ಅಂಕಣಕಾರ ಪ್ರತಾಪಸಿಂಹ ಅವರ ಅಂಕಣವನ್ನು ಯಥಾವತ್ತು ಮುದ್ರಣಕ್ಕೆ ಕಳಿಸಿದಾಗಲೆಲ್ಲ ಅದು ನೀರಸ ಹಾಗೂ ಪ್ರಚೋದಕವಾಗಿಲ್ಲ ಎಂದು ನನಗೆ ಅನೇಕ ಸಲ ಅನಿಸಿದ್ದಿದೆ. ಅವರು ಬರೆದಿದ್ದನ್ನು ಯಥಾವತ್ತು ಪ್ರಕಟಿಸಿದ್ದರೆ ಕನಿಷ್ಠ ಹತ್ತು ಸಲವಾದರೂ ನನ್ನ ಕೆಲಸಕ್ಕೆ ಸಂಚಕಾರ ಬರುತ್ತಿತ್ತು, ಅದಿರಲಿ.) ಅಂಕಣ ಆರಂಭಿಸುವ ಮುನ್ನ ಅಂಕಣಕಾರರೊಂದಿಗೆ ಸಂಪಾದಕರು ಪತ್ರಿಕೆಯ ಧೋರಣೆ, ನಿಲುವು, ವಿಷಯ, ಅಂಕಣ ಚೌಕಟ್ಟು... ಮುಂತಾದ ಸಂಗತಿಗಳ ಬಗ್ಗೆ ಚರ್ಚಿಸುವುದುಂಟು. ಒಂದು ರೀತಿಯಲ್ಲಿ, ಪತ್ರಿಕೆಯಲ್ಲಿ ಅತಿ ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುವವರೆಂದರೆ ಅಂಕಣಕಾರರು.
ನಾನು 'ವಿಜಯ ಕರ್ನಾಟಕ' ಪತ್ರಿಕೆಯ ಸಂಪಾದಕನಾಗಿದ್ದ ಆರಂಭದ ದಿನಗಳಲ್ಲಿ ಹಿರಿಯ ಪತ್ರಕರ್ತ ಬಿ.ವಿ. ವೈಕುಂಠರಾಜು ಪತ್ರಿಕೆಯಲ್ಲಿ 'ಸಂಸ್ಕೃತಿ' ಎಂಬ ಅಂಕಣ ಬರೆಯುತ್ತಿದ್ದರು. ನಾನು ಸಂಪಾದಕನಾಗಿ ಬರುವುದಕ್ಕಿಂತ ಮುನ್ನವೇ ಆ ಅಂಕಣ ಆರಂಭವಾಗಿತ್ತು. ಅವರು ಅಂಕಣಕಾರರಾಗಿ ಮುಂದುವರಿಯಲಿ ಎಂಬುದು ನನ್ನ ಇಂಗಿತವೂ ಆಗಿತ್ತು. ಒಂದು ದಿನ ಸಂಪಾದಕೀಯ ಪುಟವನ್ನು ಅಚ್ಚಿಗೆ ಕಳಿಸುವ ಮುನ್ನ ವೈಕುಂಠರಾಜು ಅವರ ಅಂಕಣವನ್ನು ಓದುತ್ತಿದ್ದೆ. ಅದನ್ನು ಯಥಾವತ್ತು ಪ್ರಕಟಿಸಲು ಸಾಧ್ಯವೇ ಇರಲಿಲ್ಲ. ನಿಶ್ಚಿತವಾಗಿಯೂ ಅದು ಉತ್ತಮ ಅಭಿರುಚಿಯಿಂದ ಬರೆದ ಅಂಕಣವಾಗಿರಲಿಲ್ಲ. ಡೆಡ್‌ಲೈನ್ ಸಮೀಪಿಸುತ್ತಿತ್ತು. ಅವರನ್ನು ಸಂಪರ್ಕಿಸುವ ನನ್ನ ಪ್ರಯತ್ನ ಕೈಗೂಡಲಿಲ್ಲ. ಆ ಸಮಯದಲ್ಲಿ ಅವರ ಅಂಕಣ ಬಿಟ್ಟು ಬೇರೆ ಲೇಖನ ಪ್ರಕಟಿಸಬಹುದಿತ್ತು. ಆದರೆ ವೈಕುಂಠರಾಜು ಇದರಿಂದ ಬೇಸರಿಸಿಕೊಳ್ಳಬಹುದೆನಿಸಿತು. ಆದರೆ ನನ್ನ ಮುಂದೆ ಆಯ್ಕೆಗಳಿರಲಿಲ್ಲ. ತೀರಾ ಆಕ್ಷೇಪಾರ್ಹವಾದ ಎರಡು ಪ್ಯಾರಾಗಳನ್ನು ಎಡಿಟ್ ಮಾಡಿ, ಮುದ್ರಣಕ್ಕೆ ಕಳಿಸಿದೆ.
ಮರುದಿನ ವೈಕುಂಠರಾಜು ಕೆಂಡಾಮಂಡಲ! 'ನನಗೆ ಅನುಭವವಾದಷ್ಟು ನಿಮಗೆ ವಯಸ್ಸಾಗಿದೆಯೇನ್ರಿ? ಅಂಕಣವನ್ನು ಎಡಿಟ್ ಮಾಡಬಾರದು ಎಂಬ ಪ್ರಾಥಮಿಕ ತಿಳಿವಳಿಕೆ ನಿಮಗೆ ಇದೆಯೇನ್ರಿ?' ಎಂದು ಏರಿದ ದನಿಯಲ್ಲಿ ಕಿರುಚಿದರು. ಅವರಿಗೆ ಮನವರಿಕೆ ಮಾಡಿಕೊಡುವ ಎಲ್ಲ ಪ್ರಯತ್ನವನ್ನೂ ಸಮಾಧಾನದಿಂದಲೇ ಮಾಡಿದೆ. ಆದರೆ ಅವರ ಸಿಟ್ಟು ವೈಕುಂಠದೆತ್ತರದಲ್ಲಿತ್ತು. 'ನನಗೆ ಅವಮಾನವಾಗಿದೆ, ಇನ್ನು ಮುಂದೆ ಬರೆಯುವುದಿಲ್ಲ' ಅಂದರು. 'ನಿಮ್ಮ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಗುವುದು' ಅಂದೆ. ಮರುದಿನವೇ ಪತ್ರಿಕಾಲಯದಲ್ಲಿ ಹಾಜರಾದರು, ತಮ್ಮ ಮಾತುಗಳನ್ನು ವಾಪಸ್ ಪಡೆಯುವುದಾಗಿ ಹೇಳಿದರು. 'ನೀವು ಹಿರಿಯ ಪತ್ರಕರ್ತರು, ನಿಮ್ಮನ್ನು ನೋಡಿಕೊಂಡು, ಓದಿಕೊಂಡು ನಾವು ಪತ್ರಿಕೋದ್ಯಮಕ್ಕೆ ಬಂದಿರುವವರು, ಬರೆಯಿರಿ, ಅಂಕಣ ಮುಂದುವರಿಸಿ' ಎಂದೆ. ಆಯಿತು ಎಂದು ಹೋದವರು ಅಂಕಣವನ್ನು ಯಾಕೋ ಕಳಿಸಿಕೊಡಲಿಲ್ಲ. ಅವರು ಬರೆದಿದ್ದನ್ನು ಪ್ರಕಟಿಸಿದ್ದರೆ ಎಂಥ ಅನಾಹುತವಾಗುತ್ತಿತ್ತು ಎಂಬುದನ್ನು ಅವರ ಗಮನಕ್ಕೆ ತಂದಾಗ, ನೀವು ಎಡಿಟ್ ಮಾಡಿದ್ದೇ ಒಳ್ಳೆಯದಾಯಿತು ಎಂಬುದನ್ನು ಹತ್ತಾರು ಸಲ ಹೇಳಿದರು. ಆದರೆ ಅವರು ಅಂಕಣ ನಿಲ್ಲಿಸಿದ್ದು ಯಾಕೆ ಎಂಬುದು ಗೊತ್ತಾಗಲಿಲ್ಲ.
ನಾನು ಇತ್ತೀಚೆಗೆ ಖ್ಯಾತ ಪತ್ರಕರ್ತ ಡೆವಿಡ್ ರ್ಯಾಂಡಲ್ ಅಂಕಣಕಾರರ ಬಗ್ಗೆ ಬರೆದ ಪುಸ್ತಕವನ್ನು ಓದುತ್ತಿದ್ದಾಗ ಇದು ನೆನಪಾಯಿತು. ನನ್ನ ಅಂಕಣ ಮುಂದುವರಿಸದಿದ್ದರೆ ನಿನ್ನನ್ನು ಕೊಲ್ಲುವುದಾಗಿ ಸಂಪಾದಕನಿಗೆ ಬೆದರಿಕೆ ಹಾಕಿದ ಅಂಕಣಕಾರನ ಬಗ್ಗೆ ಅವರು ಬರೆದಿದ್ದರು. ಪುಣ್ಯವಶಾತ್ ನಮ್ಮಲ್ಲಿ ಅಂಥ ಅಂಕಣಕಾರರಿಲ್ಲ. ನಮ್ಮ ಓದುಗರು ವಿಶಾಲ ಹೃದಯಿಗಳು. ಏನೇ ಬರೆದರೂ ಹೊಟ್ಟೆಗೆ ಹಾಕಿಕೊಳ್ಳುವುದಿಲ್ಲ, ತಲೆಯೊಳಗೆ ತುಂಬಿಕೊಳ್ಳುತ್ತಾರೆ. ಹೀಗಾಗಿ ನಾವೆಲ್ಲ ಬಚಾವ್!
ಅತಿ ಚಿಕ್ಕ ಅಂಕಣ
ಇದೇ ಪುಸ್ತಕದಲ್ಲಿ ಡೆವಿಡ್ ರ್ಯಾಂಡಲ್ ಜಗತ್ತಿನ ಅತಿ ಚಿಕ್ಕ ಅಂಕಣವನ್ನು ಪ್ರಸ್ತಾಪಿಸಿದ್ದಾರೆ. ಅಂಕಣಕಾರನ ಹೆಸರು ಬಾಬ್ ಕಾನ್ಸಿಡೈನ್. 1973ರಲ್ಲಿ ಈತ ಒಂದು ಅಂಕಣ ಬರೆದಿದ್ದ. ಆತನ ಫೋಟೊದೊಂದಿಗೆ ಅವನ ಅಂಕಣ ಪ್ರಕಟವಾಗಿತ್ತು. ಅದರಲ್ಲಿ ಹೀಗಿತ್ತು-'I have nothing to say today.'


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.