ಅಂಕಣಗಳು

ಮರೆಯಲಾಗದ ಕ್ಷಣಗಳು

Published On :

ಆಕಸ್ಮಿಕವಾಗಿ ಓದಿದ ಕೆಲವು ಸಾಲುಗಳಿರುತ್ತವೆ. ಒಂದರ್ಥದಲ್ಲಿ ಅವು ರಾಷ್ಟ್ರಗೀತೆಯ ಸಾಲುಗಳಂತೆ ನೆನಪಲ್ಲಿ ಉಳಿದು ಬಿಡುತ್ತವೆ. ರಾಷ್ಟ್ರಗೀತೆಯ ಕಡೆ ಕಡೆಯ ಸಾಲುಗಳನ್ನು ಹೇಳುವಾಗ, ನಮಗೇ ಗೊತ್ತಿಲ್ಲದಂತೆ ಕಂಠ ಬಿಗಿದು ಬಂದು, ಆನಂದಭಾಷ್ಪವೊಂದು ಕಣ್ತುಂಬಿ ಕೊಳ್ಳುತ್ತದಲ್ಲ; ಅಂಥದೇ ಭಾವ ಎಂದೋ ಓದಿದ ಕೆಲವು ಪ್ರಸಂಗಗಳನ್ನು ನೆನಪಿಸಿಕೊಂಡಾಗಲೂ ಆಗುತ್ತದೆ. ಆ ಸಂದರ್ಭದಲ್ಲಿ ಉಂಟಾಗುವ ತಳಮಳ ಹಾಗೂ ಸಂತೋಷವನ್ನು ವಿವರಿಸಿ ಹೇಳುವಲ್ಲಿ ಪದಗಳೂ ಸೋತು ಹೋಗುತ್ತವೆ. ಕರುಳು ತಾಕುವಂತಿರುವ ಅಂಥ ಎರಡು ಆಪ್ತ ಪ್ರಸಂಗಗಳ ವಿವರಣೆ ಇಲ್ಲಿದೆ:
- ಈ ಘಟನೆ ನಡೆದದ್ದು ಹೈದರಾಬಾದ್‌ನಲ್ಲಿ. ಅದು ಜಿಲ್ಲಾಮಟ್ಟದ ಕ್ರೀಡಾಕೂಟ. ವಿಶೇಷವೆಂದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳೆಲ್ಲಾ ಮಾನಸಿಕ ಅಸ್ವಸ್ಥರು. ಅಂಗವಿಕಲರು. ವಿಧಿಯ ಷಡ್ಯಂತ್ರಕ್ಕೆ ಬಲಿಯಾಗಿ ದೇಹದ ಯಾವುದೋ ಅಂಗವನ್ನು ಕಳೆದುಕೊಂಡವರು. ಅವತ್ತು ನಡೆಯಲಿದ್ದುದು, ನೂರು ಮೀಟರ್ ಓಟದ ಅಂತಿಮ ಸುತ್ತಿನ ಸ್ಪರ್ಧೆ. ಕಣದಲ್ಲಿ ಉಳಿದಿದ್ದವರು ಎಂಟು ಮಂದಿ. ಆ ಪೈಕಿ, ಊರುಗೋಲಿನ ಸಹಾಯದಿಂದ ಓಡುವ ಒಂದು ಹುಡುಗಿ ಕೂಡ ಇದ್ದಳು. ಉಳಿದಂತೆ, ಒಬ್ಬಳಿಗೆ ಕೈಗಳಿರಲಿಲ್ಲ. ಇನ್ನೊಬ್ಬಳಿಗೆ ಪೋಲಿಯೋ ಕಾರಣದಿಂದ ಇದ್ದ ಕಾಲೂ ತಿರುಚಿಕೊಂಡಿತ್ತು. ಮತ್ತೊಬ್ಬಳಿಗೆ ದೃಷ್ಟಿ ಭಾಗ್ಯವಿರಲಿಲ್ಲ. ಮಗದೊಬ್ಬಳಿಗೆ ಬುದ್ಧಿಭ್ರಮಣೆ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಈ ಸ್ಪರ್ಧೆಯಲ್ಲಿ ಮೊದಲು ಗುರಿ ತಲುಪಿದವರಿಗೆ ಕಪ್, ಶೀಲ್ಡ್ ಕೊಡಲಾಗುವುದು ಎಂದು ಘೋಷಿಸಲಾಗಿತ್ತು.
ಹೇಳಿ ಕೇಳಿ ಅದು ಅಂಗವಿಕಲರ ಕ್ರೀಡಾಕೂಟ ತಾನೆ? ಹಾಗಾಗಿ, ಓಟದ ಸ್ಪರ್ಧೆಯಲ್ಲಿ ಅಂಥ ಸ್ವಾರಸ್ಯವಾಗಲಿ, ತುರುಸಿನ ಸ್ಪರ್ಧೆಯಾಗಲಿ, ರೋಚಕ ಕ್ಷಣವಾಗಲಿ ಇರುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಆದರೂ ವಿಕಲಾಂಗರ ಕ್ರೀಡಾಕೂಟ ಹೇಗೆ ನಡೆಯುತ್ತದೋ ನೋಡೋಣ ಎಂಬ ಕುತೂಹಲದಿಂದಲೇ ಒಂದಷ್ಟು ಮಂದಿ ಸ್ಟೇಡಿಯಂಗೆ ಬಂದಿದ್ದರು. ಅಂಥ ಕುತೂಹಲಿಗಳ ಮಧ್ಯೆಯೇ ಸ್ಪರ್ಧಿಗಳಾಗಿದ್ದ ಮಕ್ಕಳ ಪೋಷಕರೂ ಇದ್ದರು. ಅವರೆಲ್ಲ, ಓಡಲು ಸಿದ್ಧವಾಗಿ ನಿಂತಿದ್ದ ಮಕ್ಕಳಿಗೆ ಬಗೆಬಗೆಯಲ್ಲಿ ಉಪದೇಶ ಮಾಡುತ್ತಿದ್ದರು: 'ಗೊತ್ತು ತಾನೆ? ವಿಷಲ್ ಹಾಕಿದ ತಕ್ಷಣವೇ ಓಡಲು ಶುರು ಮಾಡಬೇಕು. ಹಿಂದೆ ತಿರುಗಿ ನೋಡದೆ ಸ್ಪೀಡಾಗಿ ಓಡಿಬಿಡಬೇಕು. ಉಳಿದವರಿಗಿಂತ ಮೊದಲೇ ಗುರಿ ತಲುಪಿ, ಫಸ್ಟ್ ಪ್ರೈಜ್ ತಗೋಬೇಕು. ಗೊತ್ತಾಯ್ತಾ ಎಂದು ಹೇಳುತ್ತಿದ್ದರು. ಕಡೆಗೊಮ್ಮೆ ಮುಖ್ಯ ಕ್ರೀಡಾಧಿಕಾರಿಗಳು-ರೆಡೀ, ಒನ್, ಟೂ, ಥ್ರೀ ಎಂದು ಎಚ್ಚರಿಸಿ, ಮರುಕ್ಷಣವೇ -ವಿಷಲ್ ಹಾಕಿದರು.
ಅಷ್ಟೆ: ಎಂಟು ಮಕ್ಕಳೂ ಉತ್ಸಾಹದಿಂದ ಓಡಲು ಶುರು ಮಾಡಿದವು. ಆ ಕ್ಷಣಕ್ಕೆ ದೈಹಿಕ ಅಂಗವೈಕಲ್ಯವೆಂಬುದು ಆ ಮಕ್ಕಳಿಗೆ ನೆನಪಲ್ಲೇ ಇರಲಿಲ್ಲ. ಈ ಮಕ್ಕಳ ಆಮೆವೇಗದ ಓಟ ಕಂಡು ಕೆಲವರಿಗೆ ನಗು, ಕೆಲವರಿಗೆ ಅಚ್ಚರಿ. ಮತ್ತೆ ಕೆಲವರಿಗೆ ಅನುಕಂಪ. ಈ ಮಧ್ಯೆ ಪೋಷಕರು-ಬೇಗ ಬೇಗ ಓಡೂ ಎಂದು ಚೀರುತ್ತಿದ್ದರು. ಹೀಗಿದ್ದಾಗಲೇ, ಊರುಗೋಲಿನ ಸಹಾಯದಿಂದ ಓಡುತ್ತಿದ್ದ ಹುಡುಗಿ ಆಯತಪ್ಪಿ ಬಿದ್ದು ಬಿಟ್ಟಳು. ಬಿದ್ದ ರಭಸಕ್ಕೆ ಚರ್ಮ ಕಿತ್ತು ಬಂದಿತ್ತು. ನೋವಿನಿಂದ ಆಕೆ ಚೀರಿಕೊಂಡಳು. ಆ ಕ್ಷಣವೇ, ಮುಂದೆ ಓಡುತ್ತಿದ್ದ ಏಳು ಮಕ್ಕಳೂ ಹಿಂತಿರುಗಿ ನೋಡಿದರು. ಎರಡೇ ನಿಮಿಷಗಳಲ್ಲಿ ಅವರ ಕಂಗಳು ಮಾತಾಡಿಕೊಂಡವು. ಎಲ್ಲರೂ ಮತ್ತೆ ಹಿಂದಕ್ಕೆ ಓಡುತ್ತಾ ಗಾಯಗೊಂಡಿದ್ದಾಕೆಯ ಬಳಿ ಬಂದರು. ತಮಗೆ ತಿಳಿದಂತೆ, ಚಿಕಿತ್ಸೆ ನೀಡಿದರು.
ಸ್ಟೇಡಿಯಂನಲ್ಲಿ ಇದ್ದ ಜನರೆಲ್ಲ-'ಓಹ್, ಇವೆಲ್ಲಾ ಹೇಳಿ ಕೇಳಿ ಬುದ್ಧಿಭ್ರಮಿತ ಅಂಗವಿಕಲ ಮಕ್ಕಳು ತಾನೆ? ಅದೇ ಕಾರಣದಿಂದ, ಸ್ಪರ್ಧೆ ನಡೀತಿದೆ ಎಂಬ ವಿಷಯವೇ ಎಲ್ಲರಿಗೂ ಮರೆತು ಹೋಗಿರಬಹುದು ಎಂದು ಪಿಸಪಿಸ ಮಾತಾಡಿಕೊಂಡರು. ಮುಂದೇನಾದೀತೋ ಎಂದು ಅವರೆಲ್ಲ ಬೆರಗಿನಿಂದ ನೋಡುತ್ತಿದ್ದಾಗಲೇ- ಗಾಯಗೊಂಡಿದ್ದ ಹುಡುಗಿಯನ್ನು ಎತ್ತಿ ನಿಲ್ಲಿಸಿದ ಆ ಮಕ್ಕಳು, ನಂತರ ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು, ಒಂದೇ ವೇಗದಲ್ಲಿ ಓಡಲು ಶುರು ಮಾಡಿದರು. ಕೊನೆಗೆ, ಎಂಟು ಮಂದಿಯೂ ಒಟ್ಟಿಗೇ ಗುರಿ ತಲುಪಿದರು! ಆ ಕ್ಷಣದಲ್ಲಿ, ಆ ಮಕ್ಕಳ ಹೃದಯ ಮಾತಾಡಿತ್ತು! ಈ ಅಪರೂಪದ ದೃಶ್ಯ ಕಂಡ ಆ ಮಕ್ಕಳ ಪೋಷಕರು ಓಡೋಡಿ ಬಂದು ಮಕ್ಕಳನ್ನು ಅಪ್ಪಿಕೊಂಡರು. ಅಂಗವಿಕಲ ಮಕ್ಕಳು ಪ್ರದರ್ಶಿಸಿದ ದೊಡ್ಡ ಗುಣ ಕಂಡು ಮೂಕರಾದ ಅಧಿಕಾರಿಗಳು, ಎಲ್ಲ ಮಕ್ಕಳಿಗೂ ಪ್ರತ್ಯೇಕವಾಗಿಯೇ ಒಂದೊಂದು ಕಪ್ ನೀಡಿ ತಾವೂ ಕಣ್ಣೊರೆಸಿಕೊಂಡರು.
- ಅದೊಂದು ಪ್ರತಿಷ್ಠಿತ ಫುಟ್‌ಬಾಲ್ ಪಂದ್ಯ. ಒಂದೇ ಊರಿನ ಘಟಾನುಘಟಿ ಟೀಂ ಎಂದೇ ಹೆಸರಾಗಿದ್ದ ಎ ಮತ್ತು ಬಿ ತಂಡಗಳು ಕಣದಲ್ಲಿದ್ದವು. ಆಟದ ಅಂಗಳದಿಂದಾಚೆಗೂ ಈ ತಂಡಗಳ ನಡುವೆ ಜಿದ್ದು ಇತ್ತು. ಹಾಗಾಗಿ, ಯಾರೇ ಗೆದ್ದರೂ ನಗರದಲ್ಲಿ ಗಲಾಟೆಯಾಗಿ ಅಶಾಂತಿ ಸೃಷ್ಟಿಯಾಗುತ್ತಿತ್ತು.
ಆ ಪಂದ್ಯದಲ್ಲಿ 'ಎ' ತಂಡದವರು 2-1 ಗೋಲುಗಳಿಂದ ಮುಂದಿದ್ದರು. ಆ ಪಂದ್ಯದಲ್ಲಿ ತಾವು ಗೆದ್ದರೆ ಪರಿಣಾಮ ಏನಾಗಬಹುದು ಎಂದು 'ಎ' ತಂಡದ ನಾಯಕನಿಗೆ ಚೆನ್ನಾಗಿ ಗೊತ್ತಿತ್ತು. ಪಂದ್ಯ ಮುಗಿಯಲು ನಾಲ್ಕೇ ನಿಮಿಷ ಬಾಕಿಯಿದ್ದಾಗ 'ಬಿ' ತಂಡದವರಿಗೆ ಗೋಲ್ ಹೊಡೆಯುವ ಅವಕಾಶ ಸಿಕ್ಕರೂ ಅದರಲ್ಲಿ ಅವರು ಯಶಸ್ಸು ಕಾಣಲಿಲ್ಲ. ಆ ತಂಡದವರ ಮುಖ ಸಿಟ್ಟಿನಿಂದ ಕೆಂಪಗಾಗಿತ್ತು. ಹೀಗಿರುವಾಗಲೇ, ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ 'ಎ' ತಂಡದ ನಾಯಕ, ತನ್ನ ತಂಡದ ವಿರುದ್ಧ, ತೀರಾ ಆಕಸ್ಮಿಕವೆಂಬಂತೆ ತಾನೇ ಗೋಲು ಹೊಡೆದು ಬಿಟ್ಟ. ಪರಿಣಾಮವಾಗಿ, ಮ್ಯಾಚು 'ಟೈ' ಆಯಿತು. 'ಎ' ತಂಡದ ನಾಯಕ ಮಾಡಿದ ಆಕಸ್ಮಿಕದ ತಪ್ಪನ್ನು ಕ್ಷಮಿಸಲು ಹೆಚ್ಚಿನವರು ಸಿದ್ಧರಿರಲಿಲ್ಲ. ಪಂದ್ಯದ ನಂತರ ಈ ಬಗ್ಗೆ ಟಿ..ವಿ.ಯವರು ಪ್ರಶ್ನಿಸಿದಾಗ ಆತ ಹೇಳಿದ: 'ಅದು ಆಕಸ್ಮಿಕವಾಗಿ ಹೊಡೆದ ಗೋಲ್ ಅಲ್ಲ. ಉದ್ದೇಶಪೂರ್ವಕವಾಗಿಯೇ ನಾನು ಹಾಗೆ ಮಾಡಿದೆ. ಒಂದು ಟೀಂ ಮಾತ್ರ ಗೆದ್ದಿದ್ದರೆ, ನಗರದಲ್ಲಿ ಗಲಭೆ ಆಗುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಆಟಗಾರರ ಮಧ್ಯೆಯೇ ದ್ವೇಷ ಬೆಳೆಯುತ್ತಿತ್ತು. ಈಗ ಎಲ್ಲರೂ ಗೆದ್ದಿರುವುದರಿಂದ ಅಂಥ ಯಾವ ರಗಳೆಯೂ ಇಲ್ಲ. ವೈಯಕ್ತಿಕ ಸಾಧನೆಗಿಂತ ಸಕಲೆಂಟು ಮಂದಿಯ ನೆಮ್ಮದಿಯೇ ಹೆಚ್ಚು ಖುಷಿ ಕೊಡುತ್ತೆ...
***
ಈ ಹುಡುಗಿಯ ವೈಯಕ್ತಿಕ ವಟವಟ ಹೆಚ್ಚಾಯ್ತೆಂದು ವಾರದ ಹಿಂದೆ ಕೆಲವರು ದೂರಿದ್ದರು. ಹಾಗಾಗಿ, ಫಾರ್ ಎ ಛೇಂಜ್ ಎಂಬಂತೆ ಈ ಬರಹ...


- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.