ಅಂಕಣಗಳು

ವಾರಿಧಿಯ ವಿವರಿಸಿದವರುಂಟೆ ವರಾಹನ ತರಹ?

ಆ ಆಕಾರವೇ ನಮ್ಮನ್ನು ಬೆರಗುಗೊಳಿಸುತ್ತದೆ. ಅದರ ಹರವು, ವೈಶಾಲ್ಯ, ಆ ಕಾಂಡದ...

Published On :

ಆ ಆಕಾರವೇ ನಮ್ಮನ್ನು ಬೆರಗುಗೊಳಿಸುತ್ತದೆ. ಅದರ ಹರವು, ವೈಶಾಲ್ಯ, ಆ ಕಾಂಡದ ಗಾತ್ರ, ಬೇರುಗಳ ದಟ್ಟತೆ, ಆಳ, ಎಲೆಗಳ ಹಚ್ಚ ಹಸಿರು ಬಣ್ಣ, ಸದಾ ಅಲ್ಲಲ್ಲಿ ಇಣುಕುವ ಸುಕೋಮಲ ಸುಳಿ, ಒಗರು ಚಿಗುರು, ಫಲದ ಸಮೃದ್ಧತೆ... ಒಟ್ಟಾರೆ ಅದೊಂದು ಸುಂದರ ಮರ. ನೋಡಲು ಎರಡು ಕಣ್ಣುಗಳು ಸಾಲವು. ಒಂದು ಪುಟ್ಟ ಗಾಳಿಗೂ ಅದು ತೊನೆದಾಡುವುದನ್ನು ಕಂಡಾಗ ಮನವದೇನೋ ಪ್ರಫುಲ್ಲ. ಹಾಗೆ ತೊನೆತೊನೆದು ತೂಗುವಾಗ ಅದರ ರೆಂಬೆ ಕೊಂಬೆಗಳು ಇನ್ನೇನು ನೆಲವನ್ನೇ ಮುಟ್ಟಿಬಿಟ್ಟವೇನೋ ಅನ್ನುವಷ್ಟರ ಮಟ್ಟಿಗೆ ಬಾಗುತ್ತವೆ. ಅದಾದರೂ ಎಷ್ಟು ಅಗಲಕ್ಕೆ ಹರವಿಕೊಂಡಿವೆ? ಆ ಮರದಡಿಯಲ್ಲಿ ಹೋಗಿ ನಿಂತರೆ ಪುಟ್ಟದೊಂದು ಹಜಾರಕ್ಕೆ ಬಂದು ನಿಂತಂತಾಗುತ್ತದೆ...
ಇಂಥ ಮರವನ್ನು ನೀವೆಲ್ಲಿಯಾದರೂ ನೋಡಿದ್ದೀರಾ? ಸಾಮಾನ್ಯವಾಗಿ ನೋಡಿಯೇ ಇರುತ್ತೀರಿ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅತ್ಯಂತ ಸಬಲ ವೃಕ್ಷಗಳು ಸಾಮಾನ್ಯ. ಅದರ ಹೊರತಾಗಿಯೂ ಊರೊಳಗೆ, ಬಯಲುಗಳಲ್ಲಿ, ಅಲ್ಲೊಂದು ಇಲ್ಲೊಂದು ವಾರೆವ್ಹಾ...ಎನ್ನುವಂಥ ಮರಗಳು ಕಾಣಸಿಗುತ್ತವೆ. ಅಂಥ ಮರಗಳ ಕೆಳಗೆ ಹೋಗಿ ನಿಂತರೆ ಅದೇನೋ ತಣ್ಣನೆಯ ಅನುಭವ...ಮನದೊಳಗೆ ಏನೋ ಒಂಥರಾ... ಹಾಗಿದ್ದರೆ ಅಲ್ಲೇ ಸಮೀಪದಲ್ಲಿ ಅಂತರ್ಜಲ ಸಂಪನ್ಮೂಲ ಸಮೃದ್ಧವಾಗಿದೆಯೆಂದೇ ಅರ್ಥ. ಸುತ್ತಮುತ್ತಲ ಯಾವುದೇ ಭಾಗದಲ್ಲಿ ನೀವು ಬಾವಿ ತೋಡಿದರೂ ಅನಾಯಾಸವಾಗಿ ಬೇಕೆಂಬಷ್ಟು ನೀರು ಸಿಗದಿದ್ದರೆ ಹೇಳಿ.
ಇದೇನಿದು ಗಿಡ ಮರಗಳು ಸಮೃದ್ಧವಾಗಿವೆ, ಹಚ್ಚ ಹಸುರಿನಿಂದ ಕೂಡಿವೆ ಎಂದರೆ ಅವಕ್ಕೆ ಸಾಕಷ್ಟು ನೀರು ಪೂರೈಕೆಯಾಗುತ್ತದೆ ಎಂಬುದು ಸಾಮಾನ್ಯ ಜ್ಞಾನ, ಹಾಗಿದ್ದ ಮೇಲೆ ಅಲ್ಲಿ ಅಂತರ್ಜಲ ಹೇರಳವಾಗಿದೆ ಎಂಬುದನ್ನು ಯಾರು ಬೇಕಾದರೂ ಹೇಳಬಹುದು. ಅದರಲ್ಲೇನು ವಿಶೇಷ? ವಿಶೇಷವಿರುವುದು ಯಾವ ಮರದ ಬೆಳವಣಿಗೆ ಹೇಗಿದ್ದರೆ, ಆ ಮರದಿಂದ ಎಷ್ಟು ದೂರದಲ್ಲಿ, ನೆಲದೊಳಗೆ ಎಷ್ಟು ಆಳಕ್ಕೆ, ಯಾವ ಪ್ರಮಾಣದಲ್ಲಿ ನೀರು ಸಿಗುತ್ತದೆ ಎಂಬುದನ್ನು ಹೇಳುವುದರಲ್ಲಿ. ಹಾಗೆ ನಿಮ್ಮಿಂದ ಹೇಳಲು ಸಾಧ್ಯವೇ?
ನಾವು ಭಾರತೀಯರು, ವಿಶ್ವದ ಮೊಟ್ಟ ಮೊದಲ ಜಲ ವಿಜ್ಞಾನದ ಪ್ರವರ್ತಕರೂ, ಜಲ ಸಂಶೋಧನೆಗೆ ಪ್ರತ್ಯೇಕವಾದೊಂದು ಪದ್ಧತಿಯನ್ನು ಕಂಡು ಹಿಡಿದವರೂ ನಾವೇ. ಹಾಗೆಂದು ಹೆಮ್ಮೆಯಿಂದ ಎದೆ ತಟ್ಟಿ ಹೇಳಿಕೊಳ್ಳಬಹುದು. ನಮ್ಮ ವೇದ ವಿಜ್ಞಾನದ ಶಾಖೆಗಳಲ್ಲಿ ಇದೂ ಸಹ ಒಂದಾಗಿತ್ತೆಂಬುದು ಇಂದು ಬಹುತೇಕರಿಗೆ ಅರಿವಿಲ್ಲ. ಆಧುನಿಕ ಅಣೆಕಟ್ಟೆಗಳು, ಬೃಹತ್ ನೀರಾವರಿ, ಬೋರ್‌ವೆಲ್‌ಗಳ ಹಾವಳಿಯಲ್ಲಿ ಇಂಥದನ್ನು ಗಮನಿಸುವ ತಾಳ್ಮೆಯಾದರೂ ನಮಗೆಲ್ಲಿ ಇದೆ? ಆದರೆ, ಇಂಥ ಸಂಶೋಧನಾ ಸತ್ಯಗಳನ್ನು ಯಾರೂ, ಯಾವತ್ತಿಗೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಪರಿಸರದ ಪ್ರತಿಯೊಂದೂ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ, ಅದರ ಎಲ್ಲ ಸ್ಪಂದನಗಳನ್ನೂ ಅದರದೇ ಭಾಷೆಯಲ್ಲಿ ಅರ್ಥೈಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಪುರಾತನ ಯುಗದಲ್ಲೇ ಹೊಂದಿದವರಿದ್ದರೆ ಅದು ನಾವು ಮಾತ್ರ. ನಮ್ಮದು ನಿಸರ್ಗಾಧಾರಿತ ವಿಜ್ಞಾನ. ಅಲ್ಲಿನ ಪ್ರಾಣಿ-ಪಕ್ಷಿಗಳು, ಗಿಡಮರಗಳು, ಆಗಸ, ಸೂರ್ಯ-ಚಂದ್ರ-ನಕ್ಷತ್ರಗಳು, ಅವುಗಳ ಚಲನವಲನಗಳು ಇತ್ಯಾದಿ ಇತ್ಯಾದಿಗಳೆಲ್ಲವೂ ನಮಗೆ ಅಧ್ಯಯನದ ಆಕರಗಳೇ. ನೀರು-ನೆರಳಿನ ವಿಚಾರದಲ್ಲಂತೂ ನಮ್ಮ ಲೆಕ್ಕಾಚಾರಗಳು ಎಷ್ಟು ನಿಖರವಾಗಿರುತ್ತವೆ ಎಂದರೆ ಇಂತಿಷ್ಟು ಗಂಟೆ, ಇಂತಿಷ್ಟು ನಿಮಿಷ, ಇಂತಿಷ್ಟು ಗಳಿಗೆ, ಇಂತಿಷ್ಟು ಸೆಕೆಂಡಿಗೇ ಮಳೆ ಬೀಳುತ್ತದೆಂದರೆ ಆ ಕ್ಷಣದಲ್ಲಿ ನಾಲ್ಕು ಹನಿ ಚೆಲ್ಲಿ ಹೋಗಿರದಿದ್ದರೆ ಆ ವರಾಹಮಿಹಿರನ ಆಣೆ.
ಹೌದು, ಯಾರು ಈ ವರಾಹಮಿಹಿರ? ಇಡೀ ವಿಶ್ವವೇ ಹೆಮ್ಮೆಪಡಬಹುದಾದ, ಹೊರ ಜಗತ್ತು ಗ್ರಹ ನಕ್ಷತ್ರಗಳನ್ನು ದೇವತೆಗಳೆಂದು ಕಲ್ಪಿಸಿಕೊಂಡು ಭಯ-ಭಕ್ತಿಯಿಂದ ನೋಡುತ್ತಿರುವ ಕಾಲದಲ್ಲೇ ಖಗೋಲ ವಿಜ್ಞಾನವೆಂಬುದೊಂದಿದೆ ಎಂಬುದನ್ನು ತೋರಿಸಿದ, ಆ ಬಗ್ಗೆ ಸಂಶೋಧನೆಗೆ ನಾಂದಿ ಹಾಡಿದ ಮಹಾನ್ ಭಾರತೀಯ ವಿಜ್ಞಾನಿ ವರಾಹಮಿಹಿರ. ಈತ ಗಣಿತಜ್ಞನೂ ಹೌದು. ಷಟ್ ಪಂಚಾಂಗ, ಹೋರಾ-ಪಂಚ-ಹೋತ್ರಿಯಾ, ಯೋಗಯಾತ್ರಾ, ಟಿಕನಿಯಾತ್ರಾ, ಬೃಹತ್‌ಜಾತಕ, ವಾಹ ಪಟಲ- ಮುಂತಾದುವುಗಳ ಕತೃ. ಕ್ರಿಸ್ತಶಕ ಸುಮಾರು ಆರನೆಯ ಶತಮಾನದ ಪ್ರಚಂಡ ಖಗೋಳ ಶಾಸ್ತ್ರಜ್ಞ. ಹಾಗೆ ನೋಡಿದರೆ ಭಾರತದಲ್ಲಿ ಗಣಿತದ ಸಂಶೋಧನೆಗೊಂದು ಭದ್ರ ಬುನಾದಿಯನ್ನು ಹಾಕಿಕೊಟ್ಟವನೇ ವರಾಹಮಿಹಿರ ಎನ್ನುತ್ತದೆ ಚರಿತ್ರೆ. ಇಲ್ಲಿನ ಉಜ್ಜಯನೀ ವಿಶ್ವವಿದ್ಯಾಲಯದಲ್ಲಿ ಕ್ರಿ.ಪೂ. 400ರ ಅವಧಿಯಲ್ಲಿಯೇ ಗಣಿತ ಸಂಶೋಧನೆಗಳು ಆರಂಭವಾಗಿದ್ದವು. ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವನು ವರಾಹಮಿಹಿರ. ಆನಂತರ ಆರ್ಯಭಟ ಇದನ್ನಾಧರಿಸಿಯೇ ಅಧ್ಯಯನ ನಡೆಸಿ ಆಧುನಿಕ ಗಣಿತದ ಕರ್ತೃ ಎನಿಸಿಕೊಂಡ ಎಂಬುದು ದಾಖಲೆಗಳಿಂದ ಲಭ್ಯ. ವರಾಹಮಿಹಿರ ಹುಟ್ಟಿದ್ದು ಕ್ರಿ.ಪೂ. 505ರಲ್ಲಿ, ಕಪಿತ್ಥ ಎಂಬ ಸ್ಥಳದಲ್ಲಿ ಎಂಬ ದಾಖಲೆ ಸಿಗುತ್ತವೆ.
ವಿಶೇಷವೆಂದರೆ ನಾವು ಭಾರತೀಯರೂ ಸೇರಿದಂತೆ ವಿಶ್ವದ ಯಾವ ದೇಶದವರೂ ಸೂರ್ಯ ಕೇಂದ್ರಿತ ಗ್ರಹಮಂಡಲದ ಕಲ್ಪನೆಯನ್ನೂ ಮಾಡಿಕೊಳ್ಳಲಾಗದಿದ್ದ ಕಾಲದಲ್ಲಿ ವರಾಹಮಿಹಿರ ಖಗೋಲದ ಅಧ್ಯಯನದಲ್ಲಿ ತೊಡಗಿದ್ದುದು ವಿಶೇಷ. ಅತ್ಯಂತ ಕೌತುಕಮಯ ಸನ್ನಿವೇಶದಲ್ಲಿ, ಅಷ್ಟೇ ಸಂಕೀರ್ಣ ವಿಷಯಗಳನ್ನು ಪ್ರತಿಪಾದಿಸಿ ಆಧುನಿಕ ಖಗೋಲ ವಿಜ್ಞಾನದ ಜನಕನಾದ ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.
ಏಕೆಂದರೆ ಆಗ ನಾವು ನಂಬುತ್ತಿದ್ದುದು 'ಏಕೋ ಅಶ್ವ ವಹತಿ ಸಪ್ತ ನಮಾ' (ಋಗ್ವೇದ) ಎಂಬುದನ್ನಷ್ಟನ್ನೇ. ಅಂದರೆ ನಮ್ಮ ದೃಷ್ಟಿಯಲ್ಲಿ ಸೂರ್ಯನೆಂದರೆ ಒಂಟಿ ಚಕ್ರದ ರಥ, ಕುಂಟೇಳು ಕುದುರೆಗಳು, ಕುರುಡು ಸಾರಥಿಯನ್ನೊಳಗೊಂಡ ಬೆಳಕಿನ ಭಗವಂತ. ಅಂಥ ಸೂರ್ಯ ಒಂದು ನಕ್ಷತ್ರ, ಅದನ್ನು ಕೇಂದ್ರೀಕರಿಸಿದ ಒಂದು ಗ್ರಹ ಮಂಡಲವಿದೆ. ಅದಕ್ಕೆ ಭೌತಿಕ ಶರೀರ ಇಲ್ಲ...ಎಂದು ಪ್ರತಿಪಾದಿಸುವುದು ಸುಲಭವಾಗಿರಲಿಲ್ಲ. ಮೂಲಭೂತ ನಂಬಿಕೆಯನ್ನೇ ಧಿಕ್ಕರಿಸಿದಂತಾಗುವುದರ ಜತೆಗೆ ಧರ್ಮದ್ರೋಹವೂ ಆಗುವ ಅಪಾಯಗಳಿತ್ತು. ಇಂಥ ಸಂದರ್ಭದಲ್ಲಿ ವೇದಗಳನ್ನೇ, ಅದರ ಸಾಲುಗಳನ್ನೇ ವ್ಯಾಖ್ಯಾನಿಸಿ ನೈಜ ಅರ್ಥವನ್ನೂ, ವೇದದ ಮೂಲ ಆಶಯವನ್ನೂ ಎತ್ತಿ ತೋರಿಸಿದವನು ವರಾಹಮಿಹಿರ.
ಸಪ್ತ ತ್ವಾ ಹರಿತೋ ರಥೇ ವಹನ್ತಿ ದೇವ ಸೂರ್ಯ ಶೋಚಿಕ್ಷೇಶಮ್...(ಋಗ್ವೇದ)
ಅವ ದಿವಸ್ತಾರಯನ್ತಿ ಸಪ್ತ ಸೂರ್ಯಸ್ಯ ರಶ್ಮ್ಯಃ (ಅಥರ್ವ ವೇದ)
ಇದನ್ನೇ ವರಾಹಮಿಹಿರ ಮರು ವ್ಯಾಖ್ಯಾನಿಸುತ್ತಾನೆ. ವೇದಗಳ ಸಾಲುಗಳನ್ನೇ ಆಧರಿಸಿ ಸೂರ್ಯನ 7 ಬಣ್ಣದ ಕಿರಣಗಳಿಂದ ದಿನ ನಿರ್ಮಾಣವಾಗುತ್ತದೆ. ಹಾಗೆಂದು ಸೂರ್ಯನು ಏಳು ಬಣ್ಣಗಳ ಕಿರಣಗಳಷ್ಟನ್ನೇ ಹೊರಸೂಸುವುದಿಲ್ಲ. ಆತನಿಂದ ಲಕ್ಷಲಕ್ಷ ಕಿರಣಗಳು ಹೊರ ಸೂಸುತ್ತವೆ. ಆದರೆ ಒಂದೊಂದು ಬೆಳಕಿನ ಕಿರಣಗಳೂ ಏಳು ಬಣ್ಣಗಳಿಂದ ಮೂಡಿದೆ. ವೇದದ ಪಾರಿಭಾಷಿಕ ಕೋಶವು 'ಸಪ್ತ ಅಶ್ವಾರೂಢ' ಎಂದು ಉಲ್ಲೇಖಿಸುತ್ತದೆ. ಇದರರ್ಥ ಏಳು ಬಣ್ಣದ ಬಿಳಿಯ ಸೂರ್ಯನ ಕಿರಣಗಳು. ವೇದದ 'ಅಶ್ವ' ಎಂಬ ಪದದ ಅರ್ಥವೂ 'ಬೆಳಕಿನ ಕಿರಣ' ಎಂಬುದನ್ನು ಸಂಕೇತಿಸುತ್ತದೆ. ಏಕೆಂದರೆ ಆಗಿನ ಕಾಲದಲ್ಲಿದ್ದ ಅತಿವೇಗದ ಸಂಪರ್ಕ ಮಾಧ್ಯಮ ಕುದುರೆ ಮಾತ್ರ. ಹೀಗಾಗಿ ಅತಿ ಬೇಗ ನಭದಿಂದ ಭೂಮಿಗೆ ತಲುಪಬಲ್ಲ ಕಿರಣಗಳಿಗೆ ಅಶ್ವದ ಹೋಲಿಕೆಯನ್ನು ನೀಡಲಾಗಿದೆ... ಹೀಗೆ ಸಾಗುತ್ತದೆ ಆತನ ಪ್ರತಿಪಾದನೆ. ಜನ ಅದನ್ನು ಒಪ್ಪುತ್ತಾರೆ. ಅದೇ ಮತ್ತೊಂದು ಗ್ರಂಥಕ್ಕೆ ಆಕರವಾಗುತ್ತದೆ.
ಬಹುಕಾಲ ಉಜ್ಜಯನಿ ವಿಶ್ವವಿದ್ಯಾಲಯದಲ್ಲಿ ಗಣಿತಜ್ಞನಾಗಿಯೇ ದುಡಿದ ವರಾಹಮಿಹಿರ ಈ ಜಗತ್ತಿನ ಮೊಟ್ಟಮೊದಲ ಜಲವಿಜ್ಞಾನಿಯೂ ಹೌದು. ಮಳೆ, ಅಂತರ್ಜಲ, ಹರಿವು, ಹದನು ಇತ್ಯಾದಿಗಳ ಬಗ್ಗೆ ಸಾವಿರದೈದುನೂರು ವರ್ಷಗಳ ಹಿಂದೆಯೇ ಹತ್ತು ಹಲವು ಗ್ರಂಥಗಳನ್ನು ಈತ ಪ್ರಕಟಿಸಿದ್ದ. ಅವುಗಳಲ್ಲಿ ಅತಿ ಮುಖ್ಯವಾದುದು ಬೃಹತ್ ಸಂಹಿತೆ. ಹೆಸರೇ ಸೂಚಿಸುವಂತೆ ಇದು ಸಮಗ್ರ ಮಾಹಿತಿಯನ್ನೊಳಗೊಂಡ ಬೃಹತ್ ಕೋಶ. 124 ಸಂಪುಟಗಳನ್ನು ಹೊಂದಿರುವ ಮೂಲ ಬೃಹತ್ ಸಂಹಿತೆಯ 54ನೇ ಅಧ್ಯಾಯ ಸಂಪೂರ್ಣವಾಗಿ ಅಂತರ್ಜಲದ ಮಾಹಿತಿಯನ್ನೇ ಒಳಗೊಂಡಿದೆ. ಭೂಜಲವನ್ನು ಗುರುತಿಸುವುದು ಹೇಗೆ? ಯಾವ ಸನ್ನಿವೇಶದಲ್ಲಿ ಎಷ್ಟು ಜಲ ಸಂಪನ್ಮೂಲ ಲಭ್ಯವಾಗುತ್ತದೆ? ಮಣ್ಣಿನ ಗುಣಮಟ್ಟ ಹೇಗಿದ್ದರೆ ನೀರಿನ ಪರಿಸ್ಥಿತಿ ಹೇಗಿರುತ್ತದೆ?  ನೀರಿನ ಮೂಲ ಸ್ರೋತ ಹೇಗಿರುತ್ತದೆ? ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ನೀರಿನ ಹರಿವಿರುತ್ತದೆ? ಇದನ್ನು ಗುರುತಿಸುವುದು ಹೇಗೆ? ನಿಸರ್ಗದ ಅಂಶಗಳನ್ನು ಆಧರಿಸಿ ಜಲಶೋಧನೆ ಅಂದರೇನು? ಕಲ್ಲು ಭೂಮಿಯಲ್ಲಿ ಬಂಡೆಗಳನ್ನು ಒಡೆದು ನೀರನ್ನು ತಲುಪುವುದು ಹೇಗೆ? ಪ್ರವಾಹ ತಡೆ ಹೇಗೆ? ಬರಕ್ಕೇನು ಪರಿಹಾರ ಮತ್ತು ಬರ ನಿರೋಧಕ ಜಾಣ್ಮೆ ಹೇಗೆ?.....ಇತ್ಯಾದಿ ಇತ್ಯಾದಿ ಎಲ್ಲ ವಿಚಾರಗಳ ಬಗ್ಗೆಯೂ ವರಾಹಮಿಹಿರ ತನ್ನ ಬೃಹತ್ ಸಂಹಿತೆಯಲ್ಲಿ ಅತ್ಯಂತ ವಿಷದವಾಗಿ ಚರ್ಚಿಸಿದ್ದಾನೆ. ಸಮಸ್ಯೆಗಳು ಮಾತ್ರವೇ ಇಲ್ಲಿ ಗುರುತಿಸಲ್ಪಟ್ಟಿಲ್ಲ, ಬದಲಾಗಿ ಅವಕ್ಕೆ ಪರಿಹಾರಗಳೇನು ಎಂಬುದನ್ನೂ ಸೂಚಿಸಿರುವುದು ವಿಶೇಷ. ಅನೇಕ ಕೌತುಕಮಯ ಸಂಗತಿಗಳೂ ಈ ಬೃಹತ್ ಗ್ರಂಥದಲ್ಲಿ ತೆರೆದುಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಮರಗಿಡಗಳು, ಹುಲ್ಲು-ಗರಿಕೆಗಳ ವರ್ತನೆ, ಇರುವೆ-ಗೆದ್ದಲುಗಳ ಹರಿದಾಟ, ಚಿಟ್ಟೆ-ಪತಂಗಗಳ ಹಾರಾಟ ಇತ್ಯಾದಿಗಳನ್ನು ಅವಲಂಬಿಸಿಯೇ ವರಾಹಮಿಹಿರ ಅಂತರ್ಜಲದ ಇರುವಿಕೆಯನ್ನು ಪತ್ತೆ ಹಚ್ಚುವ ನಿಖರ ಶಾಸ್ತ್ರವನ್ನು ರೂಪಿಸಿದ್ದಾನೆ. ಅಂತರ್ಜಲಕ್ಕೂ-ಹುತ್ತಕ್ಕೂ ಇರುವ ಸಂಬಂಧವನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದವನೇ ಆತ. ನೀರಿಲ್ಲದೆಡೆ ಗರಿಕೆ ಬೆಳೆಯಲು ಸಾಧ್ಯವೇ ಇಲ್ಲ, ಗೆದ್ದಲು ಬದುಕಲು ತೇವಾಂಶ ಬೇಕೇಬೇಕು ಎಂಬಿತ್ಯಾದಿ ಸಾಮಾನ್ಯ ತರ್ಕಗಳೇ ಆತನ ಅಧ್ಯಯನಕ್ಕೆ ಮೂಲ ಆಕರ. ಇವತ್ತೇನೋ ಇದೆಲ್ಲ ಸಾಮಾನ್ಯ ಸಂಗತಿಗಳಾಗಿ ಕಾಣುತ್ತದೆ. ಆ ಹಂತಕ್ಕೆ ನಮ್ಮ ಜ್ಞಾನ ಮಟ್ಟವನ್ನು ಕೊಂಡೊಯ್ದು ನಿಲ್ಲಿಸಿದ ಕೀರ್ತಿ ವರಾಹಮಿಹಿರನದ್ದೇ. ಮೇರಾ ಭಾರತ್ ಮಹಾನ್ ಎಂದೆನ್ನಿಸುವುದಿಲ್ಲವೇ ಇಂಥವನ್ನು ಕೇಳಿದಾಗ?

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.