ಜೆಡಿಎಸ್ ಸೋಲಾ, ಕಾಂಗ್ರೆಸ್ ಗೆಲವಾ?
ಮಂಡ್ಯ- ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರಗಳ ಉಪಚುನಾಣೆಯನ್ನು ಜಾತ್ಯತೀತ ಜನತಾದಳ ಹಾಗೂ ಕಾಂಗ್ರೆಸ್ ಪಕ್ಷಗಳು ಕೇವಲ ಚುನಾವಣೆ ಎಂದು ಪರಿಗಣಿಸದೇ, ಒಂದು ರೀತಿಯಲ್ಲಿ ಅಳಿವು- ಉಳಿವಿನ ಸಮರವೆಂದೇ ಭಾವಿಸಿ, ಹಾಗೇ ಕಾದಾಡಿದ್ದು ಈಗ ಮುಗಿದ ಕತೆ.
ದಕ್ಷಿಣ ಕರ್ನಾಟಕದ ಮಧ್ಯ ಭಾಗದಲ್ಲಿ ಒಕ್ಕಲಿಗರ ಸಾಮ್ರಾಜ್ಯವೆಂದೇ ರಾಜಕೀಯವಾಗಿ ಗುರುತಿಸಲಾಗಿರುವ ಈ ಪ್ರದೇಶಗಳಲ್ಲಿ, ನಡೆದ ಉಪ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದು ಜಾತ್ಯತೀತ ಜನತಾ ದಳದ ಅಗ್ರಗಣ್ಯ ನೇತಾರರೆನಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಆತ್ಮೀಯ ಸಂಗಾತಿ ಚೆಲುವರಾಯ ಸ್ವಾಮಿ ಅವರು ಲೋಕಸಭೆ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜಿನಾಮೆ. ಇದರ ಹಿಂದೆ ಈ ಇಬ್ಬರು ನಾಯಕರ ರಾಜಕೀಯ ಆಕಾಂಕ್ಷೆಗಳೂ ಇವೆ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗುವ ಬಯಕೆ. ಚೆಲುವರಾಯ ಸ್ವಾಮಿ ಅವರಿಗೆ ಮಂತ್ರಿಯಾಗುವ ಬಯಕೆ. ಆದರೂ ಈ ಎರಡು ಜಿಲ್ಲೆಗಳ ಮೇಲಿನ ಪಕ್ಷದ ಸಾರ್ವಭೌಮತ್ವವನ್ನು ಉಳಿಸಿಕೊಂಡರೆ ಮಾತ್ರ ಪಕ್ಷದ ಅಸ್ತಿತ್ವ ಉಳಿದೀತು ಎನ್ನುವ ಭಾವನೆಯಿಂದ ಉಪ ಚುನಾವಣೆಯನ್ನು ಸಮರದ ರೀತಿಯಲ್ಲೇ ಪಕ್ಷ ಪರಿಗಣಿಸಿತ್ತು. ಇಲ್ಲಿ ಮಾಡು ಇಲ್ಲವೇ ಮಡಿ ಮನೋಧರ್ಮದ ಪ್ರವೃತ್ತಿ ಬೆಳಕಿಗೆ ಬಂದಿದ್ದು ಹಿಂದಿನ ತತ್ವ-ಸಿದ್ಧಾಂತದ ಮಾತನ್ನೆಲ್ಲ ಗಾಳಿಗೆ ತೂರಿ ನಾಲ್ಕು ವರ್ಷಗಳ ಕಾಲ ಸತತವಾಗಿ ಕೋಮುವಾದಿ ಪಕ್ಷವೆಂದು ಮೂದಲಿಸಿದ್ದ ಬಿಜೆಪಿಯ ಜತೆ ಸಮ್ಮತ ಎನ್ನುವ ಸ್ಥಿತಿಗೆ ಜೆಡಿಎಸ್ ತಲುಪಿದಾಗಲೇ. ನಿಜ. ಇದೆಲ್ಲ ಹಳೆಯ ಕತೆ. ಈಗ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿರ್ಣಾಯಕವಾದ ರೀತಿಯಲ್ಲಿ ಗೆದ್ದಿದೆ. ಆ ಸಾಧನೆಯನ್ನು ಮರೆಯಬಾರದು. ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಅವರಂತಹ ಪ್ರತಿಷ್ಠಿತ ಅಭ್ಯರ್ಥಿಯೇ ಭಾರಿ ಸೋಲನ್ನು ಅನುಭವಿಸಿದ್ದರೆ ಮಂಡ್ಯದಲ್ಲಿ ರಮ್ಯಾ ಕೂಡ ಜಿಲ್ಲೆಯ ಕಾಂಗ್ರೆಸ್ ಪ್ರಮುಖರೆಲ್ಲರ ದುಡಿಮೆಯಿಂದಾಗಿ ಗೆದ್ದಿದ್ದಾರೆ.
ಇಲ್ಲಿ ಒಂದು ಫ್ಲ್ಯಾಷ್ ಬ್ಯಾಕ್: ಚುನಾವಣೆಯ ಮತದಾನ ಮುಗಿದ ದಿನವೂ ಫಲಿತಾಂಶ ಏನಾಗಬಹುದೆಂದು ಯಾರನ್ನು ಕೇಳಿದರೂ (ಕಟ್ಟರ್ ಪಕ್ಷದ ಬೆಂಬಲಿಗರನ್ನು ಬಿಟ್ಟು) 'ಹೇಳಲಿಕ್ಕೆ ಬರುವುದಿಲ್ಲ. ಯಾರು ಬೇಕಾದರೂ ಗೆಲ್ಲಬಹುದು' ಎನ್ನುವ ಉತ್ತರವೇ ಸಿಕ್ಕಿದ್ದು. ಅಂದರೆ ಸಾಮಾನ್ಯ ಕಾರ್ಯಕರ್ತರಿಗೆ ಚುನಾವಣೆಯ ಆಳದ ಪರಿಚಯವೇ ಇರಲಿಲ್ಲ ಎಂದಾಯಿತು. ಈಗ ಫಲಿತಾಂಶ ಪ್ರಕಟವಾದ ಅನಂತರದ ವಿಶ್ಲೇಷಣೆಗಳಿಗೆ ಹೆಚ್ಚು ಮೌಲ್ಯವನ್ನೇನೂ ಆರೋಪಿಸಬೇಕಾಗಿಲ್ಲ. ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ತತ್‌ಕ್ಷಣದಲ್ಲೇ ಕೈಗೊಂಡ ಹಲವು ಒಳ್ಳೆಯ ನಿರ್ಧಾರಗಳು, ಅಂತಹ ವಿಚಾರಗಳನ್ನು ಗಮನಿಸುವವರಿಗೆ ಹಿಡಿಸಿದೆ ಎನ್ನಬಹುದು. ಕಾಂಗ್ರೆಸ್ಸಿನಲ್ಲಿ ಇತರರೂ ದುಡಿದಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಣಿಕೆ ಕಡಿಮೆ ಏನೂ ಅಲ್ಲ. ಆದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ, ಸಿದ್ದರಾಮಯ್ಯ ಅವರು ಕಿರೀಟ ತೊಟ್ಟರೆ ಚುನಾವಣೆಯ ಗೆಲವಿನ ಗರಿಯನ್ನೂ ಜೋಡಿಸಿಕೊಳ್ಳಬಹುದು. ಹಾಸ್ಯಕ್ಕಾಗಿ ಹೇಳುವುದಾದರೆ ಸದ್ಯಕ್ಕಾದರೂ ಮಂಡ್ಯದ ಗೌಡರ ಮೇಲೆ ಹಾಸನದ ಗೌಡರ ಸವಾರಿಯ ಕಾಲ ಮುಗಿಯಿತು ಎನ್ನಬಹುದು.
ನಿರ್ಣಾಯಕವಾಗಿ ಸೋತಿದ್ದು ಬಿಜೆಪಿ. ಪಕ್ಷಕ್ಕೆ ಮಂಡ್ಯ, ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಯಾವ ಪಾತ್ರವೂ ಇರಲಿಲ್ಲ. ಆದರೆ ಮೈಸೂರು, ದಾವಣಗೆರೆ, ಧಾರವಾಡ ಸೀಮೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ತಿನ 3 ಸ್ಥಾನಗಳನ್ನು ಕಳೆದುಕೊಂಡಿದ್ದು, ಪಕ್ಷದ ಇಳಿಜಾರಿನ ಜಾರುವ ಬಂಡೆಯ ಅಧಃಮುಖದ ಯಾತ್ರೆ ಆರಂಭದ ಸೂಚನೆ ಎನ್ನಬಹುದು. ಧಾರವಾಡದಲ್ಲಿ ಜಗದೀಶ ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್ ಸೋತಿದ್ದು ಆಘಾತವೇ. ಇನ್ನು ಆ ಪಕ್ಷ ತಲೆ ಎತ್ತಲು (ಎತ್ತಿದರೆ!) ಬಹುಕಾಲ ಬೇಕು.
ರಾಜಕಾರಣ ಬದಲಾವಣೆ: ಈ ಚುನಾವಣೆಗಳ ನೇರ ಪರಿಣಾಮವನ್ನು ಅನುಭವಿಸುವುದು ಜೆಡಿಎಸ್ ಮಾತ್ರ. ಇದುವರೆಗೆ ಪಕ್ಷದಲ್ಲಿ ಒಂದೇ ಕುಟುಂಬದ ಸದಸ್ಯರ ಅಧಿಪತ್ಯವನ್ನು ಸಮರ್ಥಿಸಿಕೊಂಡೇ ಬಂದಿದ್ದ ದೇವೇಗೌಡರು (ಅದು ಅನಿವಾರ್ಯ ಎಂದ ದಿನಗಳೂ ಉಂಟು) ಬದಲಾಗಿದ್ದಾರೆ. ಎಂದಿನಂತೆಯೇ, ಮೂರು ತಿಂಗಳ ಕಾಲ ರಾಜ್ಯದ ಎಲ್ಲ ಕಡೆ ಪ್ರವಾಸ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡ್ತೀನಿ ಎಂದು ಪ್ರಕಟಿಸಿದ್ದಾರೆ. ಅದರ ಅರ್ಥ: ಪಕ್ಷದ ಮೇಲಿನ ಸಂಪೂರ್ಣ ನಿಯಂತ್ರಣ ಈಗ ನನ್ನದೇ ಎನ್ನುವ ಮಾತೇ. ಸದ್ಯಕ್ಕೆ ಅದು ಅನಿವಾರ್ಯವೂ ಆಗಿರಬಹುದು.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ, ಫಲಿತಾಂಶ ಪ್ರಕಟಿಸಿದ ದಿನವೇ ರಾಜಿನಾಮೆ ನೀಡಿದಾಗ ಅದನ್ನು ಅಂಗೀಕರಿಸಿದ ಪ್ರಕಟಣೆಯನ್ನು ದೇವೇಗೌಡರು ತಮ್ಮ ಹಾಸನ ಲೋಕಸಭೆ ಕ್ಷೇತ್ರದಲ್ಲಿನ ಕಡೂರಿನಲ್ಲೇ ಪ್ರಕಟಿಸಿದ್ದು ಗಮನಾರ್ಹ. ಇದಕ್ಕೆ ಮುಂಚೆ ಅಂತರಂಗದ ಮಾತುಕತೆಯಲ್ಲಿ, ಒಂದೆರಡು ಸಂದರ್ಭಗಳಲ್ಲಿ ಬಹಿರಂಗವಾಗಿ, ಕುಮಾರ ಸ್ವಂತ ಪ್ರತಿಷ್ಠೆಗೇ ಹೆಚ್ಚು ಗಮನ ನೀಡಿ, ಪಕ್ಷದ ಬೇರು ಮಟ್ಟದ ಸಂಘಟನೆಯನ್ನು ನಿರ್ಲಕ್ಷಿಸಿದ್ದ ಎಂದೂ ಹೇಳಿದ್ದಾರೆ. ಈಗಲೂ ಜೆಡಿಎಸ್ ತನ್ನ ರೈತಸ್ನೇಹಿ, ಬಡವರ ಹಿತರಕ್ಷಕ ಎನ್ನುವ ಬಹಿರಂಗ ಘೋಷಣೆಗೆ ಬದ್ಧರಾಗುವ ರೀತಿಯಲ್ಲಿ ಪಕ್ಷದ ಸ್ವರೂಪವನ್ನು ಬದಲಾಯಿಸದೇ ಹೋದರೆ, ರಾಜಕೀಯದ ನಿಲವೇನೂ ಬದಲಾಗುವುದಿಲ್ಲ. ನಿಜವಾದ ನಿರ್ಣಾಯಕ ಅಧಿಕಾರವಿರುವುದು ದೇವೇಗೌಡರ ಕೈಯಲ್ಲೇ. ನಿಜ. ದೇವೇಗೌಡರು ಏನು ಮಾಡಿದರೂ ಎಲ್ಲರನ್ನು ಕೇಳಿಯೇ ಮಾಡುವುದಾಗಿ ಹೇಳುತ್ತಾರೆ. ಆದರೆ ಎಲ್ಲರೂ ಎಂದರೆ ಯಾರು? ಅವರ ಮನೆಯವರು, ಇಷ್ಟ ಮಿತ್ರರು, ಬಂಧು-ಬಾಂಧವರೇ. ಸಹಸ್ರ ಚಂದ್ರ ದರ್ಶನ ಮಾಡಿ, ಹಲವು ಹತ್ತು ರಾಜಕೀಯ ದಂಡಯಾತ್ರೆಗಳನ್ನೇ ನಡೆಸಿರುವ ದೇವೇಗೌಡರಿಗೆ ನೇರವಾಗಿ ಏನನ್ನಾದರೂ ಹೇಳುವ ಶಕ್ತ ಇರುವವರು ಪಕ್ಷದ ಒಳಗೂ ಇಲ್ಲ. ಹೊರಗೂ ಇಲ್ಲ. ಅವರ ಓರಿಗೆಯವರೆಲ್ಲ ಕಣ್ಮರೆಯಾಗಿದ್ದಾರೆ, ಇಲ್ಲವೇ ರಾಜಕೀಯದಿಂದಲೇ ದೂರವಾಗಿದ್ದಾರೆ.
ಜೆಡಿಎಸ್, ಇತರ ಪಕ್ಷಗಳ ಸಹಕಾರವಿಲ್ಲದೇ ಏಕಾಂಗಿಯಾಗಿ ರಾಜಕೀಯ ಸಮರಗಳನ್ನು ನಡೆಸುವ ಶಕ್ತಿಯನ್ನು ಹೊಂದಿಲ್ಲ. ಕರ್ನಾಟಕದಲ್ಲಿ ಅದರ ಜತೆ ಸೇರಿಕೊಳ್ಳಲು ಸಿದ್ಧವಾಗಿರುವ ಪಕ್ಷವಾದರೂ ಎಲ್ಲಿದೆ? ದೇವೇಗೌಡರಿಗೆ ಬೇಕಾದಾಗ ಬಿಜೆಪಿಯ ಗಟ್ಟಿ ಓಟು (ಪ್ರಮಾಣ ಎಷ್ಟಾದರೂ ಇರಲಿ) ಬೇಕು ಆದರೆ ಆ ಪಕ್ಷದ ಕೇಸರಿ ಬಣ್ಣದ ಸಹವಾಸ ಬೇಡ, ಈ ತೊಳಲಾಟದಿಂದ ಅವರು ಹೊರಗೆ ಬರಲೇಬೇಕು. ಅದನ್ನ್ನು ನಿಜವಾದ ಅರ್ಥದಲ್ಲಿ ಒಂದು ರಾಜಕೀಯ ಪಕ್ಷವಾಗಿ ಬೆಳಸಬೇಕು. ಈಗ ಅದಕ್ಕೆ ಸಕಾಲ.
ಕಾಂಗ್ರೆಸ್: ಮುಂದೇನು? ಚುನಾವಣೆಯ ಭರ್ಜರಿ ಗೆಲವಿನ ಸಂಭ್ರಮದಲ್ಲಿ ರಾಜಕೀಯವಾಗಿ ಪ್ರಸ್ತುತವೆನ್ನಬಹುದಾದ ಮುಖ್ಯವಾದ ವಿಷಯಗಳಿಗೆ ಸಿದ್ದರಾಮಯ್ಯ ಇನ್ನು ಗಮನ ಹರಿಸಿಲ್ಲ. ಈಗಿನ ವಿಜಯದ ಉತ್ಸಾಹ ಬಹುಕಾಲ ಉಳಿಯುವುದಿಲ್ಲ. ರಾಜಕೀಯವಾಗಿ ಕಾಂಗ್ರೆಸ್ಸಿನ ಮುಂದಿರುವ ಸವಾಲುಗಳಿಗೆ ಆಡಳಿತಾತ್ಮಕ ಸ್ವರೂಪದ ಪರಿಹಾರ ಹುಡುಕುವುದು ಕಷ್ಟ. ಹೈದರಾಬಾದ್ ಕರ್ನಾಟಕದ ಪ್ರದೇಶಕ್ಕೆ ಸಿಕ್ಕಿರುವ ವಿಶೇಷ ಸ್ಥಾನಮಾನ, ಅಲ್ಲಿನ ಜನರ ಜೀವನಮಟ್ಟದ ಸುಧಾರಣೆಯ ಜತೆಯಲ್ಲೇ ಸಾಮಾನ್ಯ ಜನರಲ್ಲಿ ತಮಗೂ ನ್ಯಾಯ ಸಿಗಲಿದೆ ಎನ್ನುವ ವಾತಾವರಣ ನಿರ್ಮಾಣವಾಗಬೇಕು. ಅದು ಸರ್ಕಾರಿ ನೌಕರರಿಂದ ಆಗುವ ಕೆಲಸವಲ್ಲ. ಆ ಭಾಗದ ಜನರ ಪ್ರತಿನಿಧಿಗಳನ್ನು ಒಳಗೊಳ್ಳುವ ಸಕ್ರಿಯ ರಾಜಕಾರಣ ಈಗ ಬೇಕಾಗಿದೆ. ಅವರ ಪ್ರವಾಸ ಕೇವಲ ಸರ್ಕಾರದ ಸಮಾರಂಭಗಳಿಗೇ ಮೀಸಲಾದರೆ, ಜನರಿಗೆ ಯಾವ ಬದಲಾವಣೆಯೂ ಕಂಡುಬರುವುದಿಲ್ಲ. ಹೌದು. ಸದ್ಯಕ್ಕೆ ಸಿದ್ದರಾಮಯ್ಯ ಅವರಿಗೆ ಪುರುಸೊತ್ತಿಲ್ಲ. ಚೀನಾ ಪ್ರವಾಸ, ಅನಂತರ ಶಾಸಕರಿಗೆ, ಪಕ್ಷದ ಕಾರ್ಯಕರ್ತರಿಗೆ ಅಧಿಕಾರದಲ್ಲಿ ಪಾಲನ್ನು ಹಂಚುವ ಕೆಲಸ, ನವರಾತ್ರಿಯ ಹಬ್ಬ ಹೀಗೇ ದಿನಗಳನ್ನು ಕಳೆದರೆ, ಮುಖ್ಯಮಂತ್ರಿ, ಮಂತ್ರಿಗಳು ಹೆದ್ದಾರಿಯಲ್ಲಿ ಓಡಾಡಿದರೆ, ಹಳ್ಳಿಯ ಬಡವರು ಬರಿಗಾಲಿನಲ್ಲೇ ಕಚ್ಚಾ ರಸ್ತೆಗಳಲ್ಲೇ ಓಡಾಡಬೇಕಾಗುತ್ತದೆ. ಸಿದ್ದರಾಮಯ್ಯ, ಪರಮೇಶ್ವರ ಸೇರಿದಂತೆ ಕಾಂಗ್ರೆಸ್ ನಾಯಕರು ಈಗಲೂ ಉ.ಕರ್ನಾಟಕದತ್ತ ಮುಖ ಮಾಡಿದಂತಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ದೊಡ್ಡ ರೀತಿಯಲ್ಲಿ ಕೈ ಹಿಡಿದದ್ದು ತುಂಗಭದ್ರಾ- ಕೃಷ್ಣಾ ನದಿಗಳ ನಡುವಣ ವಿಶಾಲವಾದ ಬಯಲು ಸೀಮೆಯ ಜನರೇ. ಆ ಜನರಿಗೆ ಮಾನಸಿಕವಾಗಿ ತೃಪ್ತಿ ಕೊಡುವ ರೀತಿಯಲ್ಲಾದರೂ ಸಮುದಾಯ ಆಧರಿತ ಕಾರ್ಯಕ್ರಮಗಳನ್ನು ನಡೆಸುವ ಅವಶ್ಯಕತೆಯಿದೆ. ಚುನಾವಣೆ ಅನಂತರ ಆ ಭಾಗಕ್ಕೆ ಸಿದ್ದರಾಮಯ್ಯ ಹೋಗಿರುವುದು ಕಡಿಮೆ. ಅವರಿಂದ ಜನ ನಿರೀಕ್ಷಿಸುವುದು, ಸಮಗ್ರ ರಾಜ್ಯದ ಅಭ್ಯುದಯದ ವಿಶಾಲ ಮನೋಧರ್ಮವನ್ನು. ಆ ಮನೋಧರ್ಮ ಇದ್ದರೆ ಸಾಲದು. ಅದನ್ನು ಜನಕ್ಕೆ ಗೊತ್ತಾಗುವಂತೆ ಪ್ರದರ್ಶಿಸಬೇಕು. ಕಾಂಗ್ರೆಸ್ಸಿನಲ್ಲಿ ಈಗಲೂ ಒಳಜಗಳಗಳು ಇಲ್ಲ ಎಂದೇನೂ ಅಲ್ಲ. ಅದು ಮೋಲ್ನೋಟಕ್ಕೆ ಕಾಣುತ್ತಿಲ್ಲ ಅಷ್ಟೇ.
ಯಡಿಯೂರಪ್ಪ ನಿಲವು: ಮಂಡ್ಯ, ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರಗಳ ಹಾಗೂ ವಿಧಾನ ಪರಿಷತ್ತಿನ ಮೂರು ಸ್ಥಾನಗಳ ಉಪಚುನಾವಣೆಗಳಲ್ಲಿ ಯಡಿಯೂರಪ್ಪ ಅವರ ಕೆಜೆಪಿಗೆ ವಿಶೇಷವಾದ ಪಾತ್ರವೇನೂ ಇರಲಿಲ್ಲ. ಆ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಪಡೆಯಲಿಲ್ಲ ಎನ್ನುವುದೂ ನಿಜ. ಅಲ್ಲಿ ಕೆಲವು ಮಾಜಿ ಸಮಾಜವಾದಿಗಳು ಬಿಜೆಪಿಯನ್ನು ಉಗ್ರವಾಗಿ ವಿರೋಧಿಸುತ್ತಾರೆ. ಉಳಿದವರಲ್ಲಿ ಕೆಲವರು ಹಿಂದೆ ಉಗ್ರ ಬಿಜೆಪಿ ಕಾರ್ಯಕರ್ತರೇ ಆಗಿದ್ದವರು. ಯಡಿಯೂರಪ್ಪ ಅವರೂ ಗೊಂದಲದಲ್ಲಿದ್ದಾರೆ. ಅವರಿಗೆ ಮಾರ್ಗದರ್ಶನ ಮಾಡುವಂತಹ ಹಿರಿಯರಿಲ್ಲ. ಆದರೂ ಅವರ ಹಿಂಬಾಲಕರನ್ನು ತಬ್ಬಲಿಗಳಾಗಲು ಅವರು ಬಿಡಬಾರದು. ಯಾವುದಾದರೊಂದು ಪ್ರಬುದ್ಧ ಪಕ್ಷದ ಕಡೆಗೆ ಸಾಗಲೇಬೇಕಾಗುತ್ತದೆ. ಸಿದ್ದರಾಮಯ್ಯ ಸರ್ಕಾರ ಈಗ ನೂರು ದಿನಗಳ ಸಾಧನೆಯ ಚಿತ್ರವನ್ನು ಜನರ ಮುಂದಿಟ್ಟಂತೆಯೇ ಕನಿಷ್ಠ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ದರ್ಶನದ ಚಿತ್ರವನ್ನು ಜನರಿಗೆ ತೋರಿಸಬೇಕು.
ಕಿಡಿಗೇಡಿತನ: ಪ್ರತಿಷ್ಠಿತರ ತೇಜೋವಧೆಯೇ ತನಿಖಾ ಮಾಧ್ಯಮ ವ್ಯವಸಾಯದ ಗುರಿ ಆಗಬಾರದೆಂದು ಸೋನಿಯಾ ಗಾಂಧಿ, ಮನಮೋಹನ ಸಿಂಗ್ ಅವರು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ?
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

