ಅಂಕಣಗಳು

ಕೃಷ್ಣ ನೆನಪಾದ ಕ್ಷಣ, ಬದುಕಿಗೆ ಸಂಭ್ರಮದ ಸಾವಿರ ಬಣ್ಣ

ಆಕಾಶ ನೋಡೋದಕ್ಕೆ ಯಾಕೆ ನೂಕುನುಗ್ಗಲು? ಯಾವತ್ತೂ ಯಾವ ಗಳಿಗೆಯೂ...

ಕೃಷ್ಣ ನೆನಪಾದ ಕ್ಷಣ, ಬದುಕಿಗೆ ಸಂಭ್ರಮದ ಸಾವಿರ ಬಣ್ಣ
Published On :

ಆಕಾಶ ನೋಡೋದಕ್ಕೆ ಯಾಕೆ ನೂಕುನುಗ್ಗಲು? ಯಾವತ್ತೂ ಯಾವ ಗಳಿಗೆಯೂ ನೋಡಬಹುದಾದ ಸಂಗತಿ ಅದು. ಇಂತಿಂಥ ಪ್ರದೇಶಗಳಲ್ಲಿ ಮಾತ್ರವೆ ಆಕಾಶ ನೋಡುವುದಕ್ಕೆ ಸಿಗುತ್ತದೆ ಎಂಬ ಮಿತಿಯೇನೂ ಇಲ್ಲವಾದ್ದರಿಂದ ಆಕಾಶ ನೋಡೋದಕ್ಕೆ ಗಡಿಬಿಡಿಗೆ ಬೀಳಬೇಕಾದ ಅಗತ್ಯವಿಲ್ಲ ಎಂಬ ಮಾತು ಆ ಮಟ್ಟಿಗೆ ಸರಿ.
ಆದರೂ ನಾವು ಪುರಸೊತ್ತಿನಲ್ಲಿ ಆಕಾಶ ನೋಡಬೇಕು. ನಮಗರಿವಿಲ್ಲದಂತೆ ನೋಡುತ್ತೇವೆ ಸಹ. ನೂಕುನುಗ್ಗಲನ್ನು ಅಪೇಕ್ಷಿಸದ ನೀಲಿ ಆಕಾಶದಲ್ಲಿ ಲಾಗಾಯ್ತಿನಿಂದಲೂ ಅವ್ಯಕ್ತ ಸೋಜಿಗವೊಂದು ಅಡಗಿದಂತಿದೆ. ತುಂಬ ಖುಷಿಯಾಗಿ ಆ ಕ್ಷಣಕ್ಕೆ ನಾವು ಕೃತಜ್ಞತೆಯಿಂದ ತಲೆಬಾಗುವ ಸಂದರ್ಭಗಳಲ್ಲಿ ಆಯಾಚಿತವಾಗಿ ಆಕಾಶ ನೋಡುತ್ತೇವೆ. ಸೆಂಚುರಿ ಹೊಡೆಯುತ್ತಲೆ ಸಚಿನ್ ತೆಂಡುಲ್ಕರ್ ಹೆಲ್ಮೆಟ್ ಕಳಚಿ, ಆರ್ದ್ರ ಕಣ್ಣುಗಳಿಂದ ಮೇಲೊಮ್ಮೆ ಮುಖವಿಟ್ಟು ಕಾಣದ ಶಕ್ತಿಗೆ ಥ್ಯಾಂಕ್ಯೂ ಅಂದಂತೆ... ಎಲ್ಲ ದಾರಿಗಳೂ ಮುಚ್ಚಿದಂತಾಗಿ ದಿಕ್ಕೆಟ್ಟುಹೋದಾಗಲೂ ನಮ್ಮ ಕಿವಿಯಲ್ಲಿ ಪಿಸುಗುಟ್ಟಿ ಯಾರೋ ಕರೆದಿಹರು ಎಂಬಂತೆ ನೀಲಾಗಸಕ್ಕೆ ಕಣ್ಣು ನೆಡುತ್ತೇವೆ. ಹಲವು ಯೋಜನೆಗಳನ್ನು ಹರವಿಟ್ಟುಕೊಂಡು ಯಾವುದನ್ನು ಆರಿಸಿಕೊಳ್ಳುವುದು ಎಂಬ ಗೊಂದಲಕ್ಕೆ ಬಿದ್ದ ಒಬ್ಬ ಸೃಜನಶೀಲ, ಇನ್ಯಾರೋ ಉದ್ಯಮಿ ತಲೆಕೊಡವಿ ಎದ್ದುಹೋಗಿ ಬಾಲ್ಕನಿಯಲ್ಲಿ ನಿಂತು ಬೆಳದಿಂಗಳ ಆಕಾಶ ನೋಡಿದ್ದಾರೆ.
ತಿಳಿನೀಲಿಯನ್ನು ಹೊದ್ದ ಖಾಲಿ ಆಕಾಶ ನಮ್ಮೊಳಗಿನ ಶೂನ್ಯವನ್ನು ಸಂತೈಸುವ, ತುಂಬುವ ರೀತಿಯೇ ವಿಸ್ಮಯಕಾರಿ! ಇದೇಕೆ ಹೀಗೆ? ಆಕಾಶವನ್ನು ನೋಡುತ್ತಲೇ ಆ ಅನಂತದೊಂದಿಗೆ ನಮ್ಮ ಮನಸ್ಸು ಬೆಸೆದುಕೊಳ್ಳುತ್ತದೆಯೇ? ನಮ್ಮ ಮನೋಪರಿಧಿಯೂ ನೀಲಾಗಸದಂತೆ ಹರಡಿಕೊಂಡು ಹಗುರಾಗುತ್ತದೆಯೇ? ಆಕಾಶ ಎಂಬುದು ಸಾಧ್ಯತೆಗಳ ಅಂಗಳವೇ? ಬಹುಶಃ ಆ ನೀಲಿಕೊಳಕ್ಕೆ ಗಾಳಹಾಕಿ ನಮಗೆ ಬೇಕಾದ ಸ್ಫೂರ್ತಿಯೊಂದನ್ನು ಎತ್ತಿಕೊಳ್ಳುತ್ತೇವೆ. ಆ ನೀಲಿ ನಮ್ಮೆದೆಯ ಕ್ಯಾನ್ವಾಸ್‌ನಲ್ಲಿ ನವಿರು ಚಿತ್ರವೊಂದನ್ನು ಬರೆಯುತ್ತದೆ. ಆ ಕಲ್ಪನೆಯೇ ವರ್ತಮಾನದ ವಾಸ್ತವಗಳನ್ನು ನಿಭಾಯಿಸುವ ಶಕ್ತಿಯನ್ನು ದಯಪಾಲಿಸುತ್ತದೆ.
---
ಈ ತಿಳಿನೀಲಿಯ ಅಸ್ಪಷ್ಟ ಧಾಟಿಗೆ ಆಕಾರವೊಂದನ್ನು ಕೊಟ್ಟು ಅದನ್ನು ಅಚ್ಚರಿಯಿಂದ ನೋಡುತ್ತ ಬರಡು ಬದುಕಿಗೆ ಬೆರಗೊಂದನ್ನು ತಂದುಕೊಳ್ಳುವ ದಿನ ಇದೋ ಇಲ್ಲಿದೆ. ಶ್ರೀಕೃಷ್ಣಜನ್ಮಾಷ್ಟಮಿ!
ಕೃಷ್ಣನೆಂದರೆ ಅಳೆಯಲಾಗದ ಆಕಾಶದ ಅವತಾರ ರೂಪವೇನೋ ಎನ್ನಿಸುವುದುಂಟು. ನಿದ್ದೆಗೆ ಜಾರುವ ಮುಂಚೆ ಕತೆಗಳ ಮೂಲಕ ಮಾಯಾ ಪ್ರಪಂಚಕ್ಕೆ ಕಾಲಿಡುವ ಸನ್ನಾಹದಲ್ಲಿರುವ ಬಾಲ್ಯದ ಒದ್ದೆ ಮನಸುಗಳಿಗೆ, ಮುಂಗುರುಳು-ಮಂದಹಾಸಗಳ ಮೋಹದ ಪ್ರಪಂಚವೊಂದಕ್ಕೆ ಆಗಷ್ಟೇ ಕಾಲಿರಿಸಿ ನಿದ್ದೆಯನ್ನೇ ದೂರಮಾಡಿಕೊಂಡಿರುವ ಯೌವನದ ಬಿಸಿ ಉಸಿರುಗಳಿಗೆ, ಅಂಥದೇ ಒಂದು ಇರುಳಿನಲ್ಲಿ ತಾವು ಈವರೆಗೆ ಸವೆಸಿದ ದಾರಿಯನ್ನು ಕಣ್ಣೆದುರು ತಂದುಕೊಳ್ಳುತ್ತಾ ಜ್ಞಾನ-ಕರ್ಮಗಳ ಜಿಜ್ಞಾಸೆಗೆ ಬಿದ್ದಿರುವ ಮಾಗಿದ ಜೀವಗಳಿಗೆ.... ಯಾರೆಂದರೆ ಎಲ್ಲರಿಗೂ ಬೆಸೆದುಕೊಳ್ಳುವ ಅಗಾಧತೆಯ ಹೆಸರು ನೀಲಮೇಘಶ್ಯಾಮ.
ನಾಳೆ ರಾತ್ರಿ ಆ ಅಗಾಧತೆ ಅವತರಿಸಿದ ಗಳಿಗೆ. ಈ ಇರುಳು ಸುಮ್ಮನೆ ನಮ್ಮ ಪಾಡಿಗೆ ಕೃಷ್ಣನನ್ನು ನೋಡಬೇಕು. ಆಕಾಶ ನೋಡಿದಂತೆ. ನವಿಲುಗರಿಯ ನವಿರುತನ ಮೈಸೋಕಿದಂತಾಗಿ, ಕಿವಿಯಲ್ಲಿ ಕೊಳಳಿನ ತರಂಗ ತುಂಬಿಕೊಂಡರೆ ಸಾಕು ಅಲ್ಲೊಂದು ಮಾಯಾಲೋಕ ಸೃಷ್ಟಿಯಾಗುತ್ತದೆ. 'ಗೋಕುಲ ನಿರ್ಗಮನ'ದಲ್ಲಿ ಕವಿ ಪು.ತಿ.ನ ಅವರು ಕಟ್ಟಿಕೊಟ್ಟಂತೆ.....
ಆವನೀ ಮಾಯಾವಿ ಇಂತು ಸಮರಾತ್ರಿಯೊಳು
ಕೊಳಲ ಬಾರಿಸುತಿರಳ ಮೌನವನು ವ್ಯಥಿಪನಿಂತೆ
ಬೆಳಕಿರುಳ ಮುದ್ದಿಸಿದೆ ಜನ ಸೊಗದಿ ನಿದ್ದಿಸಿದೆ
ಗಾಳಿ ಬಾಂದೊಟ್ಟಿಲೊಳು ಪವಡಿಸಿದೆ ಹಸುಳೆಯಂತೆ
---
ದೇವರ ಅವತಾರದ ಯಾವ ಕತೆಗಳಲ್ಲೂ ಪವಾಡ-ಫ್ಯಾಂಟಸಿಗಳೇ ಮೂಲದ್ರವ್ಯ ಅಲ್ಲ. ಅವು ಕತೆಯಲ್ಲಿ ಬರುವ ಝಲಕುಗಳು ಅಷ್ಟೆ. 'ದೇವರೇ ನನ್ನನ್ನು ಸುಖವಾಗಿಡು' ಎಂದು ನಾವು ಆರಾಧಿಸುವ ಅವತಾರಗಳ್ಯಾರೂ ಹಂಸತೂಲಿಕಾತಲ್ಪದಲ್ಲಿ ಆರಾಮಾಗಿ ಪವಡಿಸಿಕೊಂಡವರಲ್ಲ. ಮಾನವನ ದಾರಿಯಲ್ಲಿ ನಡೆದು ನಾವು ಚುಚ್ಚಿಸಿಕೊಂಡ ಮುಳ್ಳನ್ನೇ ತಮ್ಮ ಕಾಲುಗಳಿಗೂ ಕಪ್ಪಿಸಿಕೊಂಡು ನಗುತ್ತ ಕಿತ್ತಿಟ್ಟವರು. ಅಯೋಧ್ಯೆಯ ರಾಜವೈಭೋಗದಲ್ಲಿ ಉಳಿದುಹೋಗಬಹುದಾಗಿದ್ದ ರಾಮ ವನವಾಸದ ಹಾದಿ ಹಿಡಿದ. ತಳಮಟ್ಟದ ಬದುಕು ಎಂದು ಯಾವುದನ್ನು ಗುರುತಿಸಲಾಗುವುದೋ ಅದಕ್ಕೆ ಮುಖಾಮುಖಿಯಾದ. ಮಡದಿಯ ಅಪಹರಣದಂಥ ಅಧೀರಗೊಳಿಸುವ ಅನುಭವ ಎದುರಾಯಿತು. ಹಿಂದಡಿಯಿಡದೆ ಮುನ್ನುಗ್ಗಿದಾಗ ಅಧರ್ಮದ ವಿರುದ್ಧ ಸಮರವೊಂದಕ್ಕೆ ನಾಂದಿಯಾಯಿತು. ಈ ಕತೆಯನ್ನು ನಮಗೆ ಕಟ್ಟಿಕೊಟ್ಟ ವಾಲ್ಮೀಕಿ, ಸಂಸ್ಕಾರದ ಸೋಪಾನಗಳನ್ನು ಏರುವುದಕ್ಕೆ ಮುಂಚೆ ಒಬ್ಬ ಬೇಡ.
ಕೃಷ್ಣನ ಬದುಕಂತೂ ಇನ್ನೂ ರೋಚಕ ಅನುಭವಗಳ ಪಾಕ. ವ್ಯಕ್ತಿಯ ಬಾಲ್ಯ ಆತನ ಮುಂದಿನ ಬದುಕಿನ ಹರಿವು ಮತ್ತು ವಿಸ್ತಾರವನ್ನು ನಿರ್ಧರಿಸುತ್ತದೆಯಲ್ಲವೇ? ನಮ್ಮ ಸಾಮಾನ್ಯ ಜೀವನದ ಮಟ್ಟದಲ್ಲಿ ಗ್ರಹಿಸಿದರೂ ಬಾಲ್ಯ ಎಂಬುದು ಬಹಳ ಮಹತ್ವದ್ದು. ಬಾಲ್ಯ ಚಲನಶೀಲವಾಗಿರಬೇಕು, ಚಟುವಟಿಕೆಯಿಂದ ಪುಟಿದುಕೊಂಡಿರಬೇಕು. ಆಗಲೇ ವ್ಯಕ್ತಿಯೊಬ್ಬನ ಎದೆಯೊಳಗಿನ ಆಕಾಶ ತೆರೆದುಕೊಳ್ಳುತ್ತದೆ. ಬಾಲ್ಯದ ಸುತ್ತಲಿನ ಬದುಕು ಚಿತ್ತ ಅರಳಿಕೊಳ್ಳುವ ಕಲ್ಪನೆಗಳ ಸೊಬಗನ್ನು ಉಣಿಸುವಂತಿದ್ದರೆ ಆ ಕಂದಮ್ಮ ಅದರ ಸತ್ವವನ್ನು ಹೀರಿ ತನ್ನೊಳಗೆ ಶ್ರೀಮಂತಿಕೆ ತುಂಬಿಕೊಂಡು ಬೆಳೆಯುತ್ತದೆ. ಹುಟ್ಟಿದ್ದು ಸೆರೆಯಲ್ಲಾದರೂ ಕೃಷ್ಣನ ಬಾಲ್ಯ ತೆರೆದುಕೊಂಡಿದ್ದು ಗೋಕುಲದಲ್ಲಿ. ಕಂಸನ ಕಾರಾಗೃಹದಿಂದ ಪಾರಾಗಿ ಬಂದ ಶಿಶುವನ್ನು ಅದೆಷ್ಟು ಸಂಭ್ರಮದಿಂದ ಸ್ವಾಗತಿಸಿತು ಗೋಕುಲ. ಯಮುನಾತೀರ, ಗೋವುಗಳ ಅಂಬಾ, ಗೋವರ್ಧನ ಗಿರಿ, ನವಿಲುಗರಿ, ಬಿದಿರ ಕೊಳಲು.... ಅದ್ಭುತ ಬಾಲ್ಯ ಅರಳಿಕೊಳ್ಳಲು ಇನ್ನೇನು ಬೇಕು? ಬೆಣ್ಣೆಕದ್ದು ಬಾಲ್ಯವನ್ನು ಸಂಭ್ರಮಿಸಿದ ನಂದಕಿಶೋರನ ಚಿತ್ರಣಕ್ಕೆ ಇನ್ನೆಷ್ಟು ಯುಗಗಳು ಸಂದರೂ ವಯಸ್ಸಾಗುವುದಿಲ್ಲ.
ಈಗ ಬಾಲ್ಯವೆಂಬುದು ಎಷ್ಟೆಲ್ಲ ರಕ್ಷಣಾತ್ಮಕವಾಗಿಬಿಟ್ಟಿದೆ? ಎಲ್ಲ ಕಂದಮ್ಮಗಳ ತಲೆಯಲ್ಲೂ ಒಂದೇ ಕಲ್ಪನೆಯನ್ನು ತುರುಕಿಸುವಷ್ಟು ಏಕತಾನತೆಗೆ ಪಕ್ಕಾಗಿದೆ. ಕೃಷ್ಣನ ಬಾಲ್ಯದಿಂದ ಗರಿಯೊಂದನ್ನು ಎತ್ತಿಕೊಳ್ಳಬಲ್ಲೆವೇ?
---
ಹರೆಯದ ವಿಷಯಕ್ಕೆ ಬಂದಾಗ ಎಲ್ಲರೂ ಕೃಷ್ಣನೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಮುನ್ನುಗ್ಗುವವರೇ. ಫ್ಲರ್ಟ್ ಎಂಬ ಪದದಲ್ಲಿ ಹೊಂದಿಕೊಳ್ಳುವ ಎಲ್ಲ ಬಗೆಯ ಸಲ್ಲಾಪಗಳಿಗೆ ಕೃಷ್ಣಾವತಾರವನ್ನು ಆರೋಪಿಸಿಕೊಂಡು ಪುಳಕಗೊಳ್ಳುವವರೇ ಎಲ್ಲ. ಅಗಾಧವಾದ ಬಲ ಎಂಬುದು ಅತಿಯಾದ ಜವಾಬ್ದಾರಿಯನ್ನು ಹೊತ್ತು ಬರುತ್ತದೆ ಎಂಬ ಮಾತೊಂದಿದೆ. ಅದು ರೋಮಾನ್ಸ್‌ಗೂ ಅನ್ವಯಿಸುತ್ತದೆ ಎಂಬಂತಿದೆ ಕೃಷ್ಣನ ನಡೆ. ರಾಧಾಕೃಷ್ಣರ ಸರಸ, ಗೋಪಿಕೆಯರೊಡನೆ ತುಂಟಾಟ ಎಲ್ಲರೂ ಬಯಸುವ ಒಂದು ಯೌವನ ಸ್ವಪ್ನ. ಇದರೊಂದಿಗೆ ನಾವು ಗುರುತಿಸಿಕೊಳ್ಳಲು ಇಚ್ಛಿಸದ ಹೊಣೆಗಾರಿಕೆಯೊಂದಿದೆ. ಕೃಷ್ಣನಿಗೆ ಹದಿನಾರು ಸಾವಿರ ಹೆಂಡಿರಂತೆ ಎಂದು ಹುಬ್ಬು ಹಾರಿಸುವಾಗ ನೆನಪಾಗಬೇಕಾದ ಅನನ್ಯ ಸಾಮಾಜಿಕ ಬದ್ಧತೆ. ಈ 16100 ಮಹಿಳೆಯರನ್ನು ನರಕಾಸುರ ಬಲವಂತದಿಂದ ತನ್ನ ಬಳಿ ಇರಿಸಿಕೊಂಡಿದ್ದ. ಕೃಷ್ಣನೇನೊ ನರಕಾಸುರನನ್ನು ಕೊಂದು ಅವರೆಲ್ಲರನ್ನು ಬಂಧಮುಕ್ತಗೊಳಿಸಿದ. ಆದರೆ ಅವರಿಗೆ ಬಿಡುಗಡೆಯೇ ಬೇಡಿಯಾಯಿತು. ನರಕಾಸುರನೊಂದಿಗೆ ಇದ್ದು ಬಂದವರೆಂದು ಅವರನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲ. ಅವರ ಕುಟುಂಬಗಳಲ್ಲೂ ಸ್ವಾಗತ ಸಿಗಲಿಲ್ಲ. ಅವರೆಲ್ಲರನ್ನೂ ಮದುವೆಯಾಗುವ ಮೂಲಕ ಸಾಮಾಜಿಕ ಸಮ್ಮತಿಯನ್ನು ದೊರಕಿಸಿಕೊಟ್ಟ ಕೃಷ್ಣ ಅವರೆಲ್ಲರಿಗೂ ಆಶ್ರಯ ಕಲ್ಪಿಸಿದ. ರಸಿಕತೆ ಎಂಬುದು ಚಪಲದಿಂದ ಬೇರಾಗಿ ನಿಲ್ಲುವುದು ಇಂಥ ನಡೆಗಳಿಂದ. ಚಪಲ ಮಾತ್ರವಿದ್ದವರು ಬೇರೆಯದೆ ಬುಡಕಟ್ಟಿನಂತೆ ತೋರಿಬರುವ ಜಾಂಬವತಿಯನ್ನು ವಿವಾಹವಾಗುವುದನ್ನು ಕಲ್ಪಿಸಿಕೊಳ್ಳಲಾಗದು. ಧುರ್ಯೋಧನನೊಂದಿಗೆ ಮದುವೆ ಇಷ್ಟವಿಲ್ಲ ಎಂದ ಮಿತ್ರವಿಂದಳನ್ನು ಅಲ್ಲಿಂದ ಪಾರುಮಾಡಿ ಕಟ್ಟಿಕೊಳ್ಳುವ ಗೋಜಿಗೂ ಹೋಗುವುದಿಲ್ಲ.
---
ಇಂಥ ಮೋಜುಗಳನ್ನೆಲ್ಲ ದಾಟಿ ಮಹಾಭಾರತದ ಯುದ್ಧವನ್ನು ಪಾಂಡವರು ಗೆಲ್ಲುವಂತೆ ಕಾರ್ಯತಂತ್ರ ರೂಪಿಸಿದ, ನಿತ್ಯ ಬದುಕಿನ ಸಮರಕ್ಕೂ ಲಗತ್ತಾಗುವಂತೆ ಗೀತಾಸಾರ ಬೋಧಿಸಿದ ಪ್ರೌಢಿಮೆಯ ಮುಖವಿದೆ. ಯಾವ ಹಂತದಲ್ಲಿ ನೆನಪಿಸಿಕೊಂಡರೂ ಕೃಷ್ಣನದು ಉದ್ದಕ್ಕೂ ಬದುಕನ್ನು ಸಂಭ್ರಮಿಸಿಕೊಂಡು ಬಂದಿರುವ ಲಹರಿ. ತಾನು ಚಕ್ರವರ್ತಿ ಆಗಬೇಕು ಎಂದು ಆತ ಯುದ್ಧದ ಸಾರಥ್ಯ ವಹಿಸಲಿಲ್ಲ. ಶಮಂತಕ ಮಣಿಯನ್ನು ಹುಡುಕಿ ತಂದವನು ಅದನ್ನು ತಾನಿಟ್ಟುಕೊಳ್ಳಲಿಲ್ಲ. ಹಾಗೆ ನೋಡಿದರೆ ಮಹಾನ್ ಎನ್ನುವಂಥದ್ದೇನನ್ನೂ ಆತ ನಿರೂಪಿಸಲೇ ಇಲ್ಲ. ಬದುಕನ್ನು ಸಹಜವಾಗಿಸಿಕೊಳ್ಳುವುದು ಹೇಗೆ, ಅದನ್ನು ಪ್ರತಿ ಹಂತದಲ್ಲಿ ಸಂಭ್ರಮಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟವ ಆತ. ಬೃಂದಾವನದ ಜನರಿಗೆ ಆತ ತಿಳಿ ಹೇಳಿದ್ದನಂತೆ: ಯಾರೋ ಇಂದ್ರನಿಗೆ ತಲೆಬಾಗುವುದೇಕೆ? ನಿಮ್ಮ ಬದುಕನ್ನು ಕಟ್ಟಿಕೊಡುತ್ತಿರುವ ಗೋವುಗಳು ಮತ್ತು ಪರಿಸರವನ್ನು ಆರಾಧಿಸಿ ಎಂದು. ಯಮುನೆಯಲ್ಲಿ ವಿಷಕಾರುತ್ತಿದ್ದ ಕಾಳಿಂಗನ ಹೆಡೆ ತುಳಿದಿದ್ದರಲ್ಲಿ, ಗೋವರ್ಧನ ಗಿರಿ ಎತ್ತಿ ಸ್ಥಳೀಯರನ್ನು ರಕ್ಷಿಸಿದ್ದರಲ್ಲಿ ಇರುವುದು ಇದೇ ಕಾಳಜಿಯಲ್ಲವೇ?
ಕೃಷ್ಣನ ನೆನಪಿನಲ್ಲಿ ಮೀಯುವುದೆಂದರೆ ಜೀವನವನ್ನು ಸಂಭ್ರಮಿಸುವುದು, ಬದುಕಿಗೆ ಬೇಕಾದುದ್ದನ್ನು ಹೀರಿಕೊಳ್ಳುವುದು. ಆಕಾಶ ನೋಡಿದಂತೆ....
----
ಕೊನೆಯಲ್ಲಿ ಮತ್ತೆ ಹಿಡಿದೆಳೆಯುತ್ತಿದೆ 'ಗೋಕುಲ ನಿರ್ಗಮನ'ದ ಸಾಲು.
ನೀನಂದು ಗೋಕುಲದಿ ಕೊಳಲ ಬಿಸುಟಂದದೊಳು
ಭಾರತದ ಬಾಳ್ವೆ ಇರಲಿಂದು ರಸಬತ್ತಿ
ಮರಳಿ ಬಹೆಯಾ ಕೊಳಲ ತುಟಿಗೆ ತಹೆಯಾ ಎಂಬ
ಹಂಬಲದೊಳಾವಗಂ ನಿಲೆ ಚಿತ್ತವೃತಿ

- ಚೈತನ್ಯ ಹೆಗಡೆ
cchegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.