ಅಂಕಣಗಳು

ಸಿದ್ದರಾಮಯ್ಯ ಗೆದ್ದರು, ದೇವೇಗೌಡರು ಬಿದ್ದರು!

ಮುಖ್ಯಮಂತ್ರಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ...

Published On :

ಮುಖ್ಯಮಂತ್ರಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸೋತಿದೆ. ಗೌಡರಿಗೆ ಸಾತ್ ಕೊಟ್ಟ ಬಿಜೆಪಿಯವರು ಮಣ್ಣು ಮುಕ್ಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳ ಮರುಚುನಾವಣೆಯಲ್ಲಿ ತಮ್ಮ ವಿರುದ್ಧ ಜಿದ್ದಿಗೆ ಬಿದ್ದು ಸೆಡ್ಡು ಹೊಡೆದು ನಿಂತ ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿಯನ್ನು ಸಿದ್ದರಾಮಯ್ಯ ಗಂಟುಮೂಟೆ ಕಟ್ಟಿ ಕನ್ನಂಬಾಡಿಗೆ ಬಿಸಾಡಿದ್ದಾರೆ. 'ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡರು' ಎಂಬಂತೆ ವರ್ತಿಸಿದ ಬಿಜೆಪಿ ನೊಣ ತಿಂದು ಜಾತಿ ಕೆಡಿಸಿಕೊಂಡಿದೆ. ಜಾತಿ ನಂಬಿ ರಾಜಕೀಯ ಮಾಡುತ್ತಿದ್ದ ಜೆಡಿಎಸ್ ಮೈ ಸುಟ್ಟುಕೊಂಡಿದೆ. ತನ್ನ ತೆಕ್ಕೆಯಲ್ಲಿದ್ದ ಎರಡೂ ಕ್ಷೇತ್ರಗಳನ್ನು ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದೆ.
ಹೌದು, ಎರಡೂ ಕಡೆ ಕಾಂಗ್ರೆಸ್‌ಗೆ ಭರ್ಜರಿ ಜಯ ತಂದಿರುವ ಈ ಚುನಾವಣೆ ಹಲವು ಹತ್ತು ಕಾರಣಗಳಿಂದ ಗಮನ ಸೆಳೆದಿತ್ತು. ಅನೇಕ ಆಯಾಮಗಳನ್ನೂ ಒಳಗೊಂಡಿತ್ತು. ಇದು ಪಕ್ಷ-ಪಕ್ಷಗಳ ನಡುವಣ ಹೋರಾಟವಾಗಿರಲಿಲ್ಲ. ಬದಲಿಗೆ ವ್ಯಕ್ತಿ-ವ್ಯಕ್ತಿಗಳ ನಡುವಣ ಸೆಣಸಾಟವಾಗಿತ್ತು. ಅಧಿಕಾರ ಕಳೆದುಕೊಂಡವರ ಈರ್ಷೆ ಮತ್ತು ಪಡೆದುಕೊಂಡವರ ಗರ್ವದ ನಡುವಣ ಸಂಘರ್ಷದ ಪ್ರತೀಕವಾಗಿತ್ತು. ತತ್ವ-ಸಿದ್ಧಾಂತಗಳ ಜಾಗವನ್ನು ವೈಯಕ್ತಿಕ ದ್ವೇಷ, ಅಸೂಯೆ, ಪ್ರತಿಷ್ಠೆ ಆಕ್ರಮಿಸಿಕೊಂಡಿತ್ತು. ಭವಿಷ್ಯದ ಚುನಾವಣೆ ಮೈತ್ರಿ ಸಾಧಕ-ಬಾಧಕಗಳ ದಿಕ್ಸೂಚಿಯಾಗಿತ್ತು.
ನಿಜ ಹೇಳಬೇಕೇಂದರೆ ಇದನ್ನು ಕಾಂಗ್ರೆಸ್ ಗೆಲವು ಎನ್ನುವುದಕ್ಕಿಂತ ಚುನಾವಣೆ ನಡೆದ ಹಳೇ ಮೈಸೂರು ಭಾಗದ ನಾಯಕರ ಗೆಲವು ಎಂದೇ ಹೇಳಬಹುದು. ಹಾಗೆಂದು ಅಭ್ಯರ್ಥಿಗಳ ಸಾಮರ್ಥ್ಯ, ವರ್ಚಸ್ಸು ಕಡೆಗಣಿಸುವಂತಿಲ್ಲ. ಆದರೂ ಈ ಚುನಾವಣೆಯ ಗುರಿಕಾರರೇ ಬೇರೆ ಆಗಿದ್ದರು. ಮೊದಲಿಗೆ ಸಿದ್ದರಾಮಯ್ಯನವರ ವಿರುದ್ಧ ದೇವೇಗೌಡರ ಕುಟುಂಬದವರು ತಮ್ಮ ಶ್ರಮವನ್ನೆಲ್ಲ ಒಟ್ಟುಗೂಡಿಸಿ ಪಣಕ್ಕಿಟ್ಟರು. ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಹೋಗಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ಏಳ್ಗೆ ಗೌಡರ ಕುಟುಂಬದಲ್ಲಿ ಅಸೂಯೆಯ ಜಲಪಾತವನ್ನೇ ಸೃಷ್ಟಿಸಿದೆ. ಅದು ದೇವೇಗೌಡರಿರಬಹುದು, ಕುಮಾರಸ್ವಾಮಿ ಇರಬಹುದು, ರೇವಣ್ಣ ಇರಬಹುದು, ರಾಜಕೀಯ ತೆರೆಯ ಹಿಂದಿರುವ ಇತರ ಸದಸ್ಯರೇ ಇರಬಹುದು. ಎಲ್ಲರದೂ ಒಂದೇ ಮಂತ್ರ. ಹೇಗಾದರೂ ಮಾಡಿ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕು ಎಂಬುದು. ಹೀಗಾಗಿ ಎಲ್ಲರೂ ಸೇರಿ ಸಾಧ್ಯವಿರುವ ಎಲ್ಲ ರಣತಂತ್ರಗಳನ್ನು ಹೆಣೆದರು. ಬಿಜೆಪಿ ಜತೆ ಮೈತ್ರಿ ಸಾಧಿಸಿ, ಅಭ್ಯರ್ಥಿಯನ್ನೇ ಕಣಕ್ಕಿಳಿಸದಂತೆ ನೋಡಿಕೊಂಡರು. ಇಲ್ಲಿ ದೇವೇಗೌಡರಿಗಾಗಲಿ, ಪುತ್ರ ಕುಮಾರಸ್ವಾಮಿಯವರಿಗಾಗಲಿ ಆ ಪಕ್ಷದ ಜತೆಗಿನ ಹಿಂದಿನ ವಿರಸ ಕಾಡಲಿಲ್ಲ. ಕೆಜೆಪಿಗೆ ಕೈ ಮುಗಿದಾಗ ಯಡಿಯೂರಪ್ಪನವರ ಜತೆಗಿನ ಹಳೆಯ ಜಿದ್ದು ಲೆಕ್ಕಕ್ಕೇ ಬರಲಿಲ್ಲ. ಅವಕಾಶವಾದ ರಾಜಕಾರಣದ ತಳಹದಿಯ ಮೇಲೆ ತಮ್ಮ ಒಂದು ಕಾಲದ ಶತ್ರುಗಳನ್ನೆಲ್ಲ ಒಟ್ಟಿಗೆ ಕರೆತಂದು, ಈಗಿನ ಶತ್ರು ಸಿದ್ದರಾಮಯ್ಯನವರ ವಿರುದ್ಧ ಸಮರ ಸಾರಿದರು. ಆದರೆ ಬೇರೆ-ಬೇರೆ ಪಕ್ಷಗಳ ನಾಯಕರು ಇವರ ಮಾತನ್ನು ಕೇಳಬಹುದು. ಆದರೆ ಮತದಾರರು ಕೇಳಬೇಕಲ್ಲ. ಈ ಚುನಾವಣೆಗೆ ಕಾರಣವಾದ ಜೆಡಿಎಸ್ ಅನ್ನೇ ಆಪೋಶನ ತೆಗೆದುಕೊಂಡಿದ್ದಾರೆ.
ವಿಧಾನಸಭೆಗೆ ಆಯ್ಕೆಗೊಂಡ ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ ತೆರವು ಮಾಡಿದ ಈ ಎರಡೂ ಲೋಕಸಭೆ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಪ್ರತಿಷ್ಠೆಯ ವಿಚಾರವಾಗಿತ್ತು. ಹೇಳಿಕೇಳಿ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರಗಳಿವು. ಇವನ್ನು ಕಳೆದುಕೊಂಡರೆ ಪಕ್ಷದ ಜೀವನಾಡಿಯೇ ಕತ್ತರಿಸಿಹೋದಂತೆ. ಹೀಗಾಗಿ ಗೌಡರ ಕುಟುಂಬ ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿ ಇದನ್ನು ವೈಯಕ್ತಿಕ ಜಿದ್ದಿನ ನೆಲೆಯಲ್ಲೇ ತೆಗೆದುಕೊಂಡರು. ಬಿಜೆಪಿ, ಕೆಜೆಪಿ ಸೇರಿದಂತೆ ಒಂದು ಕಾಲದ ಶತ್ರು ಪಕ್ಷಗಳನ್ನೆಲ್ಲ ತೆಕ್ಕೆಗೆ ತೆಗೆದುಕೊಂಡರು. ಆದರೆ ಹೊರಗಿನ ಶತ್ರುಗಳನ್ನು ರಮಿಸುವ ಭರದಲ್ಲಿ ಅವರಿಗೆ ಪಕ್ಷದೊಳಗೇ ಇರುವ ಸ್ನೇಹಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರಲ್ಲಿ ಚಿಗುರೊಡೆದಿರುವ ಅಸಮಾಧಾನ ನಿವಾರಣೆ ಮಾಡಿಕೊಳ್ಳಬೇಕು, ಅವರೆಲ್ಲರನ್ನೂ ಜತೆಯಲ್ಲಿ ಕರೆದೊಯ್ಯಬೇಕು ಎಂಬುದು ಗೋಚರವಾಗಲಿಲ್ಲ. ಈಗಾಗಲೇ ಕಾಂಗ್ರೆಸ್ ಬಾಗಿಲು ಬಡಿದಿರುವ ಕೆಲವರು ತಟಸ್ಥರಾದರು. ಎಲ್ಲಕ್ಕಿಂತ ಮಿಗಿಲಾಗಿ ಈಗಾಗಲೇ ವಿಧಾನಸಭೆ ಸೋತಿದ್ದ ಅನಿತಾ ಕುಮಾರಸ್ವಾಮಿ ಅವರನ್ನೇ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಗೂ ಅಭ್ಯರ್ಥಿ ಮಾಡಿದ್ದು ಕೆಲವರ ಅಸಮಾಧಾನಕ್ಕೂ ಕಾರಣವಾಯಿತು. ಇನ್ನೊಂದೆಡೆ ಮಂಡ್ಯದಲ್ಲಿ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಬದಲು ಪಾಂಡವಪುರದ ಪುಟ್ಟರಾಜು ಅಭ್ಯರ್ಥಿ ಮಾಡಲಾಯಿತು. ಕೃಷ್ಣ ಅವರು ಚುನಾವಣೆ ಹೊಸ್ತಿಲಲ್ಲಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರು. ಪುಟ್ಟರಾಜು ಕೂಡ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದವರು. ರೇವಣ್ಣನವರಿಗೆ ಆಪ್ತರು ಎಂಬ ಕಾರಣಕ್ಕೆ ಟೆಕೆಟ್ ಕೊಡಲಾಗಿತ್ತು. ಈ ಎಲ್ಲಕ್ಕೂ ಕಲಶವಿಟ್ಟಂತೆ ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರ ಹುಟ್ಟಿನ ಮೂಲ ಕೆದಕಿದ್ದು ಮತದಾರರಿಗೆ ಬೇಸರ ತರಿಸಿತ್ತು. ರಮ್ಯಾ ಪರ ಅನುಕಂಪಕ್ಕೂ ಕಾರಣವಾಯಿತು.
ಇಲ್ಲಿ ಇನ್ನೂ ಒಂದು ಬೆಳವಣಿಗೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಮತ್ತು ಅಂಬರೀಷ್ ನಡುವೆ ಟಿಕೆಟ್ ಹಂಚಿಕೆ ಗಲಾಟೆ. ಅವರ ದ್ವೇಷಕ್ಕೆ ಕಾಂಗ್ರೆಸ್ ಬಲಿಯಾಗಿತ್ತು. ಅದು ಜೆಡಿಎಸ್‌ಗೆ ವರದಾನವಾಗಿತ್ತು. ಆದರೆ ದೇವೇಗೌಡರ ವಿಚಾರದಲ್ಲಿ ಕೃಷ್ಣ, ಅಂಬರೀಷ್ ಇಬ್ಬರೂ ಸಮಾನ ಶತ್ರುಗಳು. ದೇವೇಗೌಡರ ಕಾರಣಕ್ಕೆ ಇವರಿಬ್ಬರೂ ಹಳೇಯ ದ್ವೇಷ ಮರೆತು ಕೆಲಸ ಮಾಡಿದ್ದು ರಮ್ಯಾ ಗೆಲುವಿನಲ್ಲಿ ಪ್ರತಿಫಲವಾಗಿದೆ.
ಇನ್ನೊಂದೆಡೆ ಬೆಂಗಳೂರು ಗ್ರಾಮಾಂತರದಲ್ಲಿ ದೇವೇಗೌಡರ ಕುಟುಂಬದ ಮತ್ತೊಬ್ಬ ರಾಜಕೀಯ ಶತ್ರು, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ತಮ್ಮ ಸೋದರ ಡಿ.ಕೆ. ಸುರೇಶ್ ಪರ ನೆಲಕಚ್ಚಿ ಕೆಲಸ ಮಾಡಿದರು. ಅವರ ಎದಿರು ಎರಡೆರಡು ಸವಾಲಿತ್ತು. ಒಂದು ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆಯುವುದು. ಇನ್ನೊಂದು ತಮಗೆ ತಪ್ಪಿ ಹೋಗಿರುವ ಸಚಿವ ಸ್ಥಾನದ ಬಯಕೆಯ ಪಣ. ಇದಕ್ಕಾಗಿ ಅವರು ಕೂಡ ಎಲ್ಲ ತಂತ್ರಗಳನ್ನು ಬಳಸಿದರು. ಮೊದಲಿಗೆ ಸಿದ್ದರಾಮಯ್ಯ ಅವರ ವಿಶ್ವಾಸದ ಗಳಿಕೆ. ವರಿಷ್ಠರನ್ನು ಒಪ್ಪಿಸಿ ತಮ್ಮನಿಗೆ ಟಿಕೆಟ್ ಪಡೆದದ್ದು. ಎಲ್ಲಕ್ಕಿಂತ ಮಿಗಿಲಾಗಿ ಶಾಸಕ ಸಿ.ಪಿ. ಯೋಗೀಶ್ವರ್ ಸೇರಿದಂತೆ ಕಾಂಗ್ರೆಸ್ ಹೊರಗೆ ಮತ್ತು ಒಳಗೆ ತಮ್ಮೊಡನೆ ಮುನಿಸಿಕೊಂಡಿದ್ದ ನಾಯಕರ ಸ್ನೇಹದ ಮರುಸಂಪಾದನೆ. ಇವೆಲ್ಲವೂ ಡಿ.ಕೆ. ಸುರೇಶ್ ಗೆಲುವಿಗೆ ಕಾರಣವಾಗಿದೆ. ಆದರೆ ನಿಜವಾಗಿಯೂ ಈ ಗೆಲುವು ಡಿ.ಕೆ. ಶಿವಕುಮಾರ್ ಅವರದ್ದಾಗಿದೆ. ಅವರಂತೆಯೇ ದೇವೇಗೌಡರ ಕುಟುಂಬದ ವಿರುದ್ಧ ಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ ಅವರದ್ದೂ ಆಗಿದೆ.  
ಇನ್ನೂ ಒಂದು ವಿಚಾರ. ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಜತೆ ಬಿಜೆಪಿ ಕೈ ಜೋಡಿಸಿದ್ದು ಮತದಾರರಿಗೆ ರುಚಿಸಲಿಲ್ಲ. ಮಂಡ್ಯದಲ್ಲಾದರೆ ಬಿಜೆಪಿಗೆ ನೆಲೆ ಇಲ್ಲ. ಆದರೆ ಬೆಂಗಳೂರು ಗ್ರಾಮಾಂತರಕ್ಕೆ ಈ ಮಾತು ಅನ್ವಯವಾಗುವುದಿಲ್ಲ. ಅಭ್ಯರ್ಥಿ ಹಾಕದಿದ್ದರೂ ಪರವಾಗಿರಲಿಲ್ಲ. ಆದರೆ ಬಿಜೆಪಿ ನಾಯಕರು ಜೆಡಿಎಸ್ ಪರ ಪ್ರಚಾರ ಮಾಡಿದ್ದು ಮತದಾರರಿಗೆ ಸಹ್ಯವಾಗಲಿಲ್ಲ. ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಮಾಡಿದ ಪ್ರಯೋಗ ಇಲ್ಲಿ ಕೈ ಕೊಟ್ಟಿದೆ. ಬಿಜೆಪಿ-ಜೆಡಿಎಸ್ ಒಂದಾದರೂ ಕಾಂಗ್ರೆಸ್‌ಗೆ ಸಾಟಿಯಿಲ್ಲ, ಕಾಂಗ್ರೆಸ್ ಮಣಿಸಲಾಗದು ಎಂಬ ಸಂದೇಶ ರವಾನೆಯಾಗಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತು. ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ  ಮರ್ಯಾದೆಯಾದರೂ ಉಳಿಯುತ್ತಿತ್ತು. ಗೆಲುವಿಗಿಂಥ ಮರ್ಯಾದೆ ಮುಖ್ಯ ಎಂದಾಗುತ್ತಿತ್ತು. ಆದರೆ ಇದೀಗ 'ಕಾಸೂ ಕೇಡು, ತಲೆಯೂ ಬೋಳು' ಎಂಬಂತಾಗಿದೆ. ಒಂದೆಡೆ ಗೆಲುವು ಸಿಗಲಿಲ್ಲ. ಇನ್ನೊಂದೆಡೆ ಸ್ಪರ್ಧಿಸಿದ ಅತ್ಮತೃಪ್ತಿಯೂ ಇಲ್ಲ. ರಾಷ್ಟ್ರೀಯ ಪಕ್ಷ ಕಣಕ್ಕೆ ಇಳಿಯಲಿಲ್ಲ ಎಂಬ ಅವಮಾನ ವಿಷಾದದ ಜತೆಗೂಡಿದೆ.
ಈ ಚುನಾವಣೆ ಮೈತ್ರಿ ಬಗ್ಗೆ ಬಿಜೆಪಿ ನಾಯಕರು ಇನ್ನಿಲ್ಲದಂತೆ ಪುಳಕಿತರಾಗಿದ್ದರು. ತಮ್ಮದೇ ಆದ ವ್ಯಾಖ್ಯಾನ, ಸಮರ್ಥನೆ ಮಾಡಿಕೊಂಡಿದ್ದರು. ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆಗಿರುವ ಹಿನ್ನೆಲೆಯಲ್ಲಿ ಒಂದೊಂದು ಸ್ಥಾನವೂ ಮುಖ್ಯ ಎಂಬ ಕಾರಣಕ್ಕೆ ಕಾಂಗ್ರೆಸ್ಸೇತರ ಪಕ್ಷಗಳ ಜತೆ ಮೈತ್ರಿಗೆ ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳಿಕೊಂಡಿದ್ದರು. ಕಾಂಗ್ರೆಸ್ ಸೋಲಿಸಲು ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದರು. ಆದರೆ ಪ್ರಯೋಗವೇ ಠುಸ್ ಆಗಿದೆ. ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆ ಬೇಡವೇ ಎಂಬ ಬಗ್ಗೆ ಹೊಸ ಚರ್ಚೆ ಹುಟ್ಟು ಹಾಕಿದೆ.
ಹೀಗಾಗಿ ಸಹಜವಾಗಿಯೇ ಆ ಪಕ್ಷದ ನಾಯಕರು ಈ ಚುನಾವಣೆಯ ಫಲಿತಾಂಶಕ್ಕೆ ಬೇರೆಯದೇ ಆದ ವ್ಯಾಖ್ಯಾನ ನೀಡಲಾರಂಭಿಸಿದ್ದಾರೆ. ಆಡಳಿತಾರೂಢ ಪಕ್ಷದ ಪರವಾಗಿ ಉಪಚುನಾವಣೆಯಲ್ಲಿ ಜನರು ಮತ ಚಲಾಯಿಸುವುದು ಸಹಜ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹಾಗೆಯೇ ಆಗಿತ್ತು. ಎದುರಿಸಿದ ಎಲ್ಲ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಇನ್ನಿಲ್ಲದಂತೆ ಮಣ್ಣುಮುಕ್ಕಿತ್ತು ಎಂಬ ಸಮರ್ಥನೆ ಆ ಪಕ್ಷದ ಮುಖಂಡರಿಂದ ಬರುತ್ತಿದೆ. ಇದು ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಹೇಳಿದ್ದಕ್ಕಿಂತ ಬೇರೆಯಲ್ಲ.
ಆದರೆ ಯಾರು ಏನೇ ಹೇಳಿದರೂ ಈ ಉಪಚುನಾವಣೆ ಜಾತ್ಯತೀತ ಜನತಾ ದಳದ ಪಾಲಿಗೆ ದೊಡ್ಡ ಹಿನ್ನಡೆ. ಏಕೆಂದರೆ ಈ ಚುನಾವಣೆ ಕೇವಲ ಕಾಂಗ್ರೆಸ್-ಜೆಡಿಎಸ್ ನಡುವಿನ ಪ್ರತಿಷ್ಠೆಯಾಗಿರಲಿಲ್ಲ. ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ನಡುವಿನ ವೈಯಕ್ತಿಕ ಜಿದ್ದಾಜಿದ್ದಿಗೂ ಸೀಮಿತವಲ್ಲ. ಬದಲಾಗಿ ಹಳೆ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿನ ನಾಯಕತ್ವ ಬದಲಾವಣೆಯ ಪ್ರಶ್ನೆಯೂ ಆಗಿತ್ತು. ಸರ್ಕಾರ ಬದಲಾದರೂ ಒಕ್ಕಲಿಗ ಜನಾಂಗದ ರಾಜಕೀಯ ಅಧಿಪತ್ಯ ದೇವೇಗೌಡರು ಹಾಗೂ ಅವರ ಕುಟುಂಬ ವರ್ಗದವರಲ್ಲೇ ಅಡಕವಾಗಿತ್ತು.
ಈ ಪಟ್ಟವನ್ನು ಕಳಚಿಕೊಳ್ಳುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಎಳ್ಳಷ್ಟೂ ಸಿದ್ದರಿರಲಿಲ್ಲ. ಆದರೆ ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಆ ಸ್ಥಾನಮಾನವನ್ನು ಕಿತ್ತುಕೊಳ್ಳುವಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಮನಗರವನ್ನು ಹೊರತುಪಡಿಸಿ ಜೆಡಿಎಸ್‌ನ ಎಲ್ಲ ಪಾಳೆಪಟ್ಟುಗಳಲ್ಲಿ ಕಾಂಗ್ರೆಸ್ ಹೆಚ್ಚು ಮತ ಪಡೆದುಕೊಂಡಿದೆ. ಆ ಮೂಲಕ ಡಿಕೆ.ಶಿವಕುಮಾರ್ ಕಾಂಗ್ರೆಸ್‌ನ ಒಕ್ಕಲಿಗ ನಾಯಕರಾಗಿ ಮಾತ್ರವಲ್ಲ, ಹಳೆ ಮೈಸೂರು ಭಾಗದಲ್ಲೂ ತಮ್ಮ ಹಿಡಿತವನ್ನು ಬಿಗಿಗೊಳಿಸಿದ್ದಾರೆ.
ಈ ಚುನಾವಣೆಯ ಗೆಲುವಿನಿಂದ ಆಡಳಿತಾರೂಢ ಕಾಂಗ್ರೆಸ್ ಗಳಿಸಿದ್ದೇನೂ ಇಲ್ಲ. ಆದರೆ ಕಳೆದುಕೊಂಡ ಜೆಡಿಎಸ್‌ನಲ್ಲಿ ಹಲವು ಬದಲಾವಣೆಯ ಮುನ್ಸೂಚನೆ ನೀಡಿದೆ. ಮೊದಲ ಹೆಜ್ಜೆಯಾಗಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮೇಲ್ನೋಟಕ್ಕೆ ಇದು ನೈತಿಕ ಹೊಣೆ ಹೊತ್ತು ಕುಮಾರಸ್ವಾಮಿ ತೆಗೆದುಕೊಂಡ ನಿರ್ಧಾರದಂತೆ ಕಂಡರೂ ಆಳದಲ್ಲಿ ಅಷ್ಟು ಸುಲಭದ ಕೆಲಸವಲ್ಲ. ಪಕ್ಷದ ಸದ್ಯದ ಸ್ಥಿತಿ ಹಾಗೂ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ತಮ್ಮ ಕುಟುಂಬ ವರ್ಗದವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಮುಂದಾಗಲಾರರು. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಯಾರ ಕುಟುಂಬ ರಾಜಕಾರಣದ ಸೊತ್ತಲ್ಲ ಎಂದು ಮತದಾರರು ತೀರ್ಪು ನೀಡಿದ್ದಾರೆ. ಇದರ ಸೂಕ್ಷ್ಮವನ್ನು ಗ್ರಹಿಸಿ ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಅವರು ಮುಂದಾಗಬಹುದು. ಹೀಗಾಗಿ ಹಲವು ವರ್ಷಗಳ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ದೇವೇಗೌಡರ ಕುಟುಂಬಕ್ಕೆ ಸೇರದೇ ಇರುವವರ ಪಾಲಾಗುವ ಸಾಧ್ಯತೆ ಇದೆ. ಬಹುಷಃ ಇದೊಂದೇ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಸೃಷ್ಟಿಸಿದ ಮಹಾನ್ ಬದಲಾವಣೆ.
ಲಗೋರಿ: ಹಗೆ, ಸಾಧಿಸುವವನನ್ನೇ ಸುಟ್ಟು ಭಸ್ಮ ಮಾಡುತ್ತದೆ

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.