ರುಪಾಯಿ ಹಣೆಬರಹಕ್ಕೆ ಏನು ತಲೆಬರಹ?
ನಲವತ್ತು ವರ್ಷ ನಿಂತು ಪಾಠ ಮಾಡಿದ ಶಿಕ್ಷಕ, ಸೇವೆಯುದ್ದಕ್ಕೂ ಸಾವಿರಾರು ಗಿಡಗಳ ನೆಟ್ಟು..
ನಲವತ್ತು ವರ್ಷ ನಿಂತು ಪಾಠ ಮಾಡಿದ ಶಿಕ್ಷಕ, ಸೇವೆಯುದ್ದಕ್ಕೂ ಸಾವಿರಾರು ಗಿಡಗಳನ್ನು ನೆಟ್ಟು ಸಂರಕ್ಷಿಸಿದ ಫಾರೆಸ್ಟ್ ಗಾರ್ಡ್, ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ ರೈಲ್ವೆ ಸಿಗ್ನಲ್‌ಮನ್, ಮೂವತ್ತೈದು ವರ್ಷ ಬೆಂಗಳೂರಿನ ರಸ್ತೆ ಗುಡಿಸಿದ ಪೌರಕಾರ್ಮಿಕ ಮುಂತಾದವರು ನಿಧನರಾದಾಗ ಸುದ್ದಿಯೂ ಆಗುವುದಿಲ್ಲ.
ಬಡಪಾಯಿ ರುಪಾಯಿ ಪ್ರತಿದಿನ ಬೀಳುತ್ತಲೇ ಇದೆ. ರುಪಾಯಿ ಡಾಲರ್, ಪೌಂಡ್, ಯುರೋ ಮುಂದೆ ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳಲಾಗದ ದೈನೇಸಿ ಸ್ಥಿತಿಯನ್ನು ತಲುಪಿದೆ. ಕೆಲದಿನಗಳ ಹಿಂದೆ 'ವಕ್ರತುಂಡೋಕ್ತಿ'ಯಲ್ಲಿ ರುಪಾಯಿ ಪಾಡನ್ನು ನೆನೆದು ಹೀಗೆ ಬರೆದಿದ್ದೆ- 'ಜೀವನದಲ್ಲಿ ತೀರಾ ಕೆಳಗೆ ಬಿದ್ದಿದ್ದೇವೆಂದು ಬೇಸರಿಸಿಕೊಳ್ಳಬೇಡಿ. ರುಪಾಯಿಗೆ ಒದಗಿದ ಸ್ಥಿತಿ ನೋಡಿ ಸ್ವಲ್ಪ ಸಮಾಧಾನಪಟ್ಟುಕೊಳ್ಳಿ.' ನಮ್ಮ ಆರ್ಥಿಕ ಪರಿಣತ, ಅಂತಾರಾಷ್ಟ್ರೀಯ ಹಣಕಾಸು ತಜ್ಞ, ಪ್ರಧಾನಿ ಡಾ. ಮನಮೋಹನಸಿಂಗ್, ಹಣಕಾಸು ಸಚಿವ ಪಿ. ಚಿದಂಬರಂ, ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆರ್ಥಿಕ ತಜ್ಞ ಮಾಂಟೆಕ್‌ಸಿಂಗ್ ಅಹ್ಲುವಾಲಿಯ ಅವರನ್ನೊಳಗೊಂಡ ಘಟಾನುಘಟಿಗಳಿಗೆ ಅಕಲು ಹರಿಯದೇ ಕಲ್ಲವಿಲರಾಗಿದ್ದಾರೆ. ಅವರೆಲ್ಲರ ಸೂತ್ರ, ಸಿದ್ಧಾಂತಗಳು ಪಾಯಕ್ಕೆ ಬಿದ್ದಿರುವ ರುಪಾಯಿಯನ್ನು ಮೇಲಕ್ಕೆತ್ತಲು ಸಹಾಯಕ್ಕೆ ಬರುತ್ತಿಲ್ಲ. ಈ ತ್ರಿಮೂರ್ತಿಗಳು ಅಸಹಾಯಕರಾಗಿ ಕೈ ಕಟ್ಟಿ ಕುಳಿತು ಬಿಟ್ಟಿದ್ದಾರೆ.
ಆದರೆ ರುಪಾಯಿ ಮಾತ್ರ ಕೆಳಕ್ಕಿಳಿಯುತ್ತಲೇ ಹೊರಟಿದೆ.
ರುಪಾಯಿ ಹಿಂದೆಂದೂ ಈ ಪರಿ ಅಧಃಪತನ ಕಂಡಿರಲಿಲ್ಲ. ಡಾಲರ್ ವಿರುದ್ಧ ರುಪಾಯಿ ಕಿಮ್ಮತ್ತು ಒಂದೇ ಸಮನೆ ಕೆಳಕ್ಕಿಳಿಯುತ್ತಿದ್ದರೆ, ಷೇರು ಪೇಟೆಯಲ್ಲಿ ಅಲ್ಲೋಲಕಲ್ಲೋಲ. ಕ್ಷಣಕ್ಷಣಕ್ಕೂ ರುಪಾಯಿ ಸ್ಥಿತಿಗತಿಯ ಬಗ್ಗೆ ಎಲ್ಲರ ಲಕ್ಷ್ಯ. ವಿದೇಶಿ ಬ್ಯಾಂಕುಗಳು, ಬಂಡವಾಳ ಹೂಡಿಕೆದಾರರೆಲ್ಲ ಕಂಗಾಲು. ಕೇಂದ್ರ ಸರ್ಕಾರ ನಿರುತ್ತರ.
ಕಳೆದ ಹದಿನೈದು ದಿನಗಳಿಂದ, ದಿನದಿಂದ ದಿನಕ್ಕೆ ರುಪಾಯಿ ಬೀಳುತ್ತಿದ್ದರೆ, ಪತ್ರಿಕೆಯವರಾದ ನಾವು, ಪ್ರತಿದಿನವೂ ಹೊಸ ಹೊಸ ಹೆಡ್‌ಲೈನ್ ಕೊಡುವುದಾದರೂ ಹೇಗೆ? ರುಪಾಯಿ ಬಿದ್ದರೆ ಒಬ್ಬೊಬ್ಬರದು ಒಂದೊಂದು ಚಿಂತೆ. ಮೂರು ದಿನಗಳ ಹಿಂದೆ ರುಪಾಯಿ ಇನ್ನಿಲ್ಲದಷ್ಟು ಅಧಃಪತನಕ್ಕೆ ಬಿತ್ತು. ಆಗ ಎಲ್ಲ ಚಾನೆಲ್‌ಗಳಲ್ಲಿ Rupee hits all time low ಎಂಬ ಬ್ರೇಕಿಂಗ್ ನ್ಯೂಸ್ ಬಿತ್ತರವಾಗುತ್ತಿತ್ತು. ಈ ಶೀರ್ಷಿಕೆಯನ್ನು ಎಷ್ಟು ಸಲ ಅಂತ ಓದೋದು? ಪ್ರತಿಸಲ ರುಪಾಯಿ ಮೌಲ್ಯ ಬಿದ್ದಾಗಲೂ ಇದೇ ಶೀರ್ಷಿಕೆ. ಏನಾದರೂ ತುಸು ಹೊಸತನ ಬೇಡವಾ? ಈ ಸುದ್ದಿಯನ್ನು ಓದಿ ಓದಿ ಓದುಗರಿಗೆ ಹಾಗೂ ವಿತ್ತಮಂತ್ರಿ ಚಿದಂಬರಂ ಅವರಿಗೆ ತಲೆಚಿಟ್ಟು ಹಿಡಿದಿರಬಹುದು.
Rupee and headline hit all time low, ಈ ಸುದ್ದಿಗೆ ಹೊಸ ಶೀರ್ಷಿಕೆಗಳಿದ್ದರೆ ಹೇಳಿ' ಎಂದು ಸುಮ್ಮನೆ ಟ್ವೀಟ್ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಹಲವು ಸಲಹೆಗಳು ಹರಿದು ಬಂದವು. ಪವನ್ ರಾವ್ ಎಂಬುವವರು, I feel Rupee touching 67 on the eve of 67th Independence Day will be such a proud moment for Indians ಎಂದು ಟ್ವೀಟ್ ಮಾಡಿದ್ದರು. 'ಹಣಕಾಸು ಸಚಿವರ ವಯಸ್ಸನ್ನು ಸರಿಗಟ್ಟಿದ ರುಪಾಯಿ. ಮುಂದಿನ ಗುರಿ ಶೀಘ್ರ ಪ್ರಧಾನಿಯವರ ವಯಸ್ಸನ್ನು ದಾಟುವುದು' ಎಂದು ಅಭಿಪ್ರಾಯಪಟ್ಟವರು ಕಾರ್ತಿಕೇಶ ಮೌದಗಲ್ಯ. ಇದಕ್ಕೆ ಮಧುಕುಮಾರ ಎನ್. ಎಂಬುವವರ ಪ್ರತಿಕ್ರಿಯೆRupee value at FM's age, Onion at PM's age, India at drainage. ಶ್ರೀವತ್ಸ ಎಂಬುವವರು 'ಚಿದಂಬರಂ ಅವರ ಧೋತಿಗಿಂತ ಕೆಳಗೆ ರುಪಾಯಿ ಜಾರಿ ಬಿದ್ದಿದೆ' ಎಂದು ಟ್ವೀಟ್ ಮಾಡಿದರು. ಅವಿನಾಶ ಬಿ. ಅವರೇಬೀಳ ಎಂಬುವವರು 'ದೇಶದ ಆರ್ಥಿಕ ವ್ಯವಸ್ಥೆಯನ್ನು ಚಿಂದಿ ಉಡಾಯಿಸಿದ ಚಿದು' ಎಂದು ಬರೆಯಿರಿ ಎಂದರು. 'ಭಗವಂತ ಕೈ ಹಿಡಿದು ಎತ್ತೋ, ಕೈ ಬಿಡಬೇಡ, ನನ್ನ ಕೈ ಎತ್ತುತ್ತಿದ್ದಿಯಲ್ಲ, ಬಿದ್ದವನು ನಾನಲ್ಲ, ರುಪಾಯಿ ಕೈ ಹಿಡಿದು ಎತ್ತು ಮಾರಾಯ' ಎಂದು ಹೇಳಿದವರು ಪ್ರವೀಣ ಸುಭಾಶ್. ರಘು ಎಂಬುವವರು 'ಷಷ್ಠಿಪೂರ್ತಿ ಆಚರಿಸಿಕೊಂಡ ರುಪಾಯಿ' ಎಂದು ಬರೆದು ಬಿಡಿ ಎಂದರು. ನಿಜವಾದ 'ಡೌನ್ ಟು ಅರ್ಥ್' ಅಂದ್ರೆ ರುಪಾಯಿ ಎಂದು ಇನ್ನಾರೋ ಹೇಳಿದರು. ರುಪಾಯಿಯ ಸರ್‌ನೇಮ್ (ಅಡ್ಡ ಹೆಸರು) ಏನು ಗೊತ್ತಾ? ಗಿರ್ಪಡೆ ಎಂದು ಯಾರೋ ಚಟಾಕಿ ಹಾರಿಸಿದರು. ಕನ್ನಡದ ಒಂದೆರಡು ಪತ್ರಿಕೆಗಳಲ್ಲಿ 'ಬಡಪಾಯಿ ರುಪಾಯಿ' ಎಂಬ ಶೀರ್ಷಿಕೆ ಪ್ರಕಟವಾಯಿತು. ನಮ್ಮ ಉಪಸಂಪಾದಕರೊಬ್ಬರು 'ರುಪಾಯಿ ಛಿದ್ರಂಬರ' ಎಂಬ ಶೀರ್ಷಿಕೆ ಕೊಟ್ಟರು. 'ಡಾಲರ್ ಹೆಸರಿನ ನಿಕ್ಕರ್ ಇದೆ. ಅದೇ ಎಷ್ಟೋ ವಾಸಿ. ನಿಕ್ಕರ್‌ಗೇನಾದರೂ ರುಪಾಯಿ ಎಂದು ಹೆಸರಿಟ್ಟಿದ್ದರೆ ಅದನ್ನು ತೊಟ್ಟವರ ಕತೆ ಏನಾಗುತ್ತಿತ್ತು?' ಎಂದು ಯಾರೋ ನಗೆಬುಗ್ಗೆ ಉಕ್ಕಿಸಿದರು. ಅರ್ಧಗಂಟೆಯಲ್ಲಿ ರುಪಾಯಿ ಪುಟ್ಟ 'ಸಂಚಲನ' ಮೂಡಿಸಿತು.
ಈ ತಮಾಷೆಯೆಲ್ಲ ಪಕ್ಕಕ್ಕಿರಲಿ. ರುಪಾಯಿ ನಮ್ಮ ಪ್ರಧಾನಿಯವರ ಪೇಟಾ ಎತ್ತರಕ್ಕಾದರೂ ಶೀಘ್ರ ಏರಲಿ.
ಹೀಗೊಂದು ಶ್ರದ್ಧಾಂಜಲಿ ಲೇಖನ ಸಂಗ್ರಹ
ಬ್ರಿಟನ್‌ನ 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ಕಳೆದ ವರ್ಷ ತಾನು ಪ್ರಕಟಿಸಿದ ನಿಧನವಾರ್ತೆ (obituary) ಗಳ ಪೈಕಿ ಅತ್ಯುತ್ತಮವಾದವುಗಳನ್ನು ಆರಿಸಿ, ಸಂಕಲನವೊಂದನ್ನು ಪ್ರಕಟಿಸಿದೆ. ಪ್ರತಿದಿನ ಆ ಪತ್ರಿಕೆ ನಿಧನರಾದ ಎರಡು-ಮೂರು ವ್ಯಕ್ತಿಗಳ ಬಗ್ಗೆ ಲೇಖನವನ್ನು ಪ್ರಕಟಿಸುತ್ತದೆ. ನಿಧನರಾದವರು ಗಣ್ಯರೇ ಆಗಿರಬೇಕೆಂದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದರೂ ಅವರ ಕುರಿತು ಸ್ವಾರಸ್ಯಕರವಾದ obituary ಪ್ರಕಟಿಸುವ ಸಂಪ್ರದಾಯವನ್ನು ಆ ಪತ್ರಿಕೆ ಪಾಲಿಸಿಕೊಂಡು ಬಂದಿದೆ. ಈ ಲೇಖನಗಳನ್ನು ನುರಿತವರು, ಮೃತಪಟ್ಟ ವ್ಯಕ್ತಿಯನ್ನು ಹತ್ತಿರದಿಂದ ಬಲ್ಲವರಿಂದ ಬರೆಯಿಸಿರುತ್ತಾರೆ. ಹೀಗಾಗಿ ಈ ಬರಹಗಳು 'ಆಪ್ತ'ವಾಗಿರುತ್ತವೆ.
ಅದ್ಯಾಕೋ ಇಂಥ ಸಂಪ್ರದಾಯ ನಮ್ಮಲ್ಲಿ ಇಲ್ಲ. ಗಣ್ಯ ವ್ಯಕ್ತಿಗಳು ನಿಧನರಾದಾಗ ಮಾತ್ರ ನಾವು ಪುಟಗಟ್ಟಲೆ ಬರೆಯುತ್ತೇವೆ. ನಲವತ್ತು ವರ್ಷ ನಿಂತು ಪಾಠ ಮಾಡಿದ ಶಿಕ್ಷಕ, ಸೇವೆಯುದ್ದಕ್ಕೂ ಸಾವಿರಾರು ಗಿಡಗಳನ್ನು ನೆಟ್ಟು ಸಂರಕ್ಷಿಸಿದ ಫಾರೆಸ್ಟ್ ಗಾರ್ಡ್, ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ ರೈಲ್ವೆ ಸಿಗ್ನಲ್‌ಮನ್, ಮೂವತ್ತೈದು ವರ್ಷ ಬೆಂಗಳೂರಿನ ರಸ್ತೆ ಗುಡಿಸಿದ ಪೌರಕಾರ್ಮಿಕ, ಲೈನ್‌ಮನ್, ಮೀಟರ್ ರೀಡರ್, ಮೇಟಿ, ಆಯಾ, ಸೂಲಗಿತ್ತಿ, ಕಂಪೌಂಡರ್, ಕಂಡಕ್ಟರ್ ಮುಂತಾದವರು ನಿಧನರಾದಾಗ ಅವರ ಬಗ್ಗೆ ಲೇಖನ ಬರೆಯುವುದು ದೂರವೇ ಉಳಿಯಿತು. ಅವರು ಸತ್ತ ಸುದ್ದಿಯೂ ಚಿಕ್ಕದಾಗಿ ಪ್ರಕಟವಾಗುವುದಿಲ್ಲ.
ಆದರೆ 'ನ್ಯೂಯಾರ್ಕ್ ಟೈಮ್ಸ್' ಪ್ರಕಟಿಸಿದ ಪುಸ್ತಕದಲ್ಲಿ ಕೆಲವು ಗಣ್ಯರ ಜತೆ ಸಾಕಷ್ಟು ಸಾಮಾನ್ಯ ವ್ಯಕ್ತಿಗಳ ಕುರಿತು ಲೇಖನಗಳಿವೆ. ಈ ಕೃತಿಯಲ್ಲಿರುವ ಒಂದು ್ಟಛ್ಝಿಡ್ಡಿಛ್ಠಣ ಬಗ್ಗೆ ಹೇಳಲೇಬೇಕು. ಆಕೆಯ ಹೆಸರು ಸೆಲ್ಮಾಕೋಚ್. ಆಕೆ ನ್ಯೂಯಾರ್ಕಿನ ಮ್ಯಾನ್‌ಹಟನ್‌ನಲ್ಲಿ ಒಂದು ರೆಡಿಮೇಡ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾಳೆ. 'ಬ್ರಾ ಸೇಲ್ಸ್‌ವುಮನ್' ಎಂದೇ ಆಕೆ ಪರಿಚಿತಳು. ಆಕೆಯ ಅಂಗಡಿಗೆ ಮಹಿಳೆಯರು ಬರುತ್ತಿದ್ದಂತೆ, ಅವರನ್ನು ನೋಡಿಯೇ ಅವರಿಗೆ ಅಗ್ದಿ ಸರಿಹೊಂದುವ ಬ್ರಾಗಳನ್ನು ತಂದಿಡುತ್ತಿದ್ದಳು. ತನ್ನ ಅಂಗಡಿಗೆ ಬರುವವರು ತಮ್ಮ (ಬ್ರಾ) ಸೈಜುಗಳನ್ನು ಹೇಳಬೇಕಾಗಿರಲಿಲ್ಲ. ಕಣ್ಣಳತೆಯಲ್ಲಿ ಕ್ಷಣಾರ್ಧದಲ್ಲಿ ಅವರವರ ಬ್ರಾ ಸೈಜುಗಳನ್ನು ಹೇಳಿ ಬಿಡುತ್ತಿದ್ದಳು. ಈ ಕಾರಣದಿಂದ ಆಕೆಯ ಅಂಗಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದರು. ಆಕೆ ಕೊಡುವ ಬ್ರಾಗಳನ್ನು ಸುಮ್ಮನೆ ಖರೀದಿಸಿ ಹೋಗುತ್ತಿದ್ದರು. ಇದೊಂದೇ ಕಾರಣದಿಂದ ಸೆಲ್ಮಾ ಅಮೆರಿಕದಲ್ಲಿ 'ಗಮನ ಸೆಳೆದ ಮಹಿಳೆ'ಯೂ ಆದಳು. ಆಕೆ ತೊಂಬತ್ತೈದನೆ ವಯಸ್ಸಿನಲ್ಲಿ ನಿಧನಳಾಗುವ ಕೆಲ ತಿಂಗಳುಗಳವರೆಗೂ ಅಂಗಡಿಗೆ ಬರುತ್ತಿದ್ದಳು. ಅವಳು ತನ್ನ ಅಂಗಡಿಯಲ್ಲಿ ಅಳತೆ ತೆಗೆದುಕೊಳ್ಳುವ ಟೇಪನ್ನು ಇಟ್ಟಿರಲಿಲ್ಲ. ಈಕೆಯನ್ನು ಬಹುತೇಕ ಎಲ್ಲ ಟಿ.ವಿ. ಚಾನೆಲ್‌ಗಳು, ರೆಡಿಯೋಗಳು ಕರೆದು ಸಂದರ್ಶನ ಪ್ರಸಾರ ಮಾಡಿದ್ದವು.
ಸೆಲ್ಮಾ ನಿಧನಳಾದಾಗ 'ನ್ಯೂಯಾರ್ಕ್ ಟೈಮ್ಸ್' ಬರೆದ ಮೊದಲ ಪ್ಯಾರಾ Selma Koch, a Manhattan store owner who earned a national reputation by helping women find the right bra size, mostly through a glance and never with a tape measure, died Thrusday. She was 95 and a 34B..(ಈ ಬರಹ ಬರೆದ ಡಗ್ಲಾಸ್ ಮಾರ್ಟಿನ್‌ನ ಕಿಲಾಡಿತನವನ್ನು ನೋಡಿ.)
ಆಲೂಗಡ್ಡೆ- ಮೊಟ್ಟೆ- ಕಾಫಿ
ಮಗಳು ತನ್ನ ತಂದೆಯ ಬಳಿ ಅಲವತ್ತುಕೊಳ್ಳುತ್ತಿದ್ದಳು. ಬದುಕು ಕೇವಲ ಕಷ್ಟಗಳ ಸಂತೆ ಎಂದು ಅವಳಿಗೆ ಅನ್ನಿಸುತ್ತಿತ್ತು. 'ಒಂದು ಸಮಸ್ಯೆ ಪರಿಹರಿಸಿಕೊಳ್ಳುತ್ತಿದ್ದಂತೆ ಇನ್ನೊಂದು ಬಂದೆರಗುತ್ತದೆ ಪಪ್ಪಾ. ಈ ಬದುಕನ್ನು ಎದುರಿಸುವುದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ' ಎಂದು ಅಳಲು ತೋಡಿಕೊಂಡಳು.
ಅಪ್ಪ ಅವಳನ್ನು ಅಡುಗೆ ಮನೆಗೆ ಕರೆದೊಯ್ದ. ಮೂರು ಪಾತ್ರೆಗಳಲ್ಲಿ ನೀರು ಸುರುವಿ ಅವನ್ನು ಕಾವಿನ ಮೇಲೆ ಇರಿಸಿದ. ಮೂರೂ ಪಾತ್ರೆಗಳ ನೀರು ಕುದಿಯತೊಡಗಿತು. ಆಗಾತ ಒಂದು ಪಾತ್ರೆಗೆ ಆಲೂಗಡ್ಡೆಯನ್ನು, ಇನ್ನೊಂದಕ್ಕೆ ಮೊಟ್ಟೆಯನ್ನು ಹಾಗೂ ಮತ್ತೊಂದಕ್ಕೆ ಕಾಫಿ ಬೀಜಗಳನ್ನೂ ಹಾಕಿದ. ಅನಂತರ ಏನೂ ಮಾತಾಡದೆ ಅವು ಇನ್ನಷ್ಟು ಕಾಯುವುದನ್ನೇ ಗಮನಿಸುತ್ತ ಮಗಳೊಂದಿಗೆ ಕುಳಿತ. ಮಗಳಿಗೆ ತನ್ನಪ್ಪ ಏನು ಮಾಡುವುದಕ್ಕೆ ಹೊರಟಿದ್ದಾನೆ ಎಂಬುದು ತಲೆಬುಡ ಹರಿಯಲಿಲ್ಲ. ಇಪ್ಪತ್ತು ನಿಮಿಷಗಳು ಕಳೆದ ಮೇಲೆ ಆತ ಎಲ್ಲ ಪಾತ್ರೆಗಳನ್ನು ಉರಿಯಿಂದ ಇಳಿಸಿದ.
ಈಗೇನು ನೋಡುತ್ತಿರುವೆ ಹೇಳು ಎಂದು ಮಗಳನ್ನು ಪ್ರಶ್ನಿಸಿದ. ಆಲೂ, ಮೊಟ್ಟೆ ಮತ್ತು ಕಾಫಿ ಎಂದಳು ಮಗಳು. ಇನ್ನಷ್ಟು ಹತ್ತಿರದಿಂದ ಗಮನಿಸು ಎಂದ ಅಪ್ಪ.
ಆಕೆ ಆಲೂಗಡ್ಡೆಯನ್ನು ಮುಟ್ಟಿದಳು. ಅದು ಮೆತ್ತಗಾಗಿತ್ತು. ನಂತರ ಅಪ್ಪ ಮೊಟ್ಟೆಯನ್ನು ಕೈಗೆತ್ತಿಕೊಂಡು ಅದನ್ನು ಒಡೆಯುವಂತೆ ಹೇಳಿದ. ಹೊರಗಿನ ಸಿಪ್ಪೆ ತೆಗೆದು ನೋಡಿದರೆ ಒಳಗಿನ ಭಾಗ ಗಟ್ಟಿಯಾಗಿತ್ತು. ಕೊನೆಯಲ್ಲಿ ಕಾಫಿ ಗುಟುಕರಿಸುವುದಕ್ಕೆ ಹೇಳಿದ. ಕಾಫಿ ಹೀರುತ್ತಿದ್ದಂತೆ ಆಕೆಯ ಮುಖದಲ್ಲಿ ಉಲ್ಲಾಸ ಲಾಸ್ಯವಾಡಿತು.
ಆಗ ತಂದೆ ವಿವರಣೆ ಕೊಟ್ಟ: 'ಕುದಿಯುತ್ತಿರುವ ನೀರಿನಲ್ಲಿ ಆಲೂಗಡ್ಡೆ, ಮೊಟ್ಟೆ, ಕಾಫಿ ಎಲ್ಲವೂ ಒಂದೇ ಬಗೆಯ ಸಂಕಷ್ಟವನ್ನು ಎದುರಿಸಿದವು. ಆದರೆ ಪರಿಸ್ಥಿತಿಗೆ ಅವೆಲ್ಲವೂ ಪ್ರತಿಕ್ರಿಯಿಸಿದ ಬಗೆ ಭಿನ್ನ. ಗಟ್ಟಿತನ ಹೊಂದಿದ್ದ ಆಲೂಗಡ್ಡೆ ಕುದಿನೀರಿನಲ್ಲಿ ಮೆತ್ತಗಾಯಿತು. ಮೊಟ್ಟೆಯ ಹೊರಗಿನ ಬಿಳಿಭಾಗ ಒಡೆದರೆ ದ್ರವಭಾಗ ಚೆಲ್ಲುತ್ತದೆ. ಆದರೆ ನೀರಿನಲ್ಲಿ ಕುದಿದ ಮೊಟ್ಟೆಯ ಒಳಭಾಗ ಗಟ್ಟಿಯಾಯಿತು. ಕಾಫಿಯ ಕತೆ ಭಿನ್ನ. ಅದು ಕುದಿನೀರಿನ ಸಹವಾಸಕ್ಕೆ ಬೀಳುತ್ತಲೇ ಆ ನೀರಿನ ಜಾಯಮಾನವನ್ನೇ ಬದಲಿಸಿ ಹೊಸರುಚಿಯ ಹುಟ್ಟಿಗೆ ಕಾರಣವಾಯಿತು. ಬದುಕಿನಲ್ಲಿ ಕಷ್ಟಗಳು ಎದುರಾಗುವುದನ್ನು ತಡೆಯಲಾಗುವುದಿಲ್ಲ. ಆದರೆ ಅದಕ್ಕೆ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ನೀನು ಆಲೂಗಡ್ಡೆಯಾಗುವೆಯೋ, ಮೊಟ್ಟೆಯೋ ಇಲ್ಲವೇ ಕಾಫಿಯೋ ಎಂಬುದು ನಿನಗೆ ಬಿಟ್ಟಿದ್ದು...'
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

