ಅಂಕಣಗಳು

ಗೋವಾಕ್ಕೆ ಹೊಸ ರಂಗು ಕೊಡಲಿದ್ದಾರೆಯೇ ಪರಿಕ್ಕರ್?

ಗೋವಾದಲ್ಲೂ ಕೂಡ ಇನ್ನಿತರ ರಾಜ್ಯಗಳಲ್ಲಿ ನಂತೆ ಕ್ಷುದ್ರ ಶಕ್ತಿಗಳ ಮೇಲಾಟ ಹೆಚ್ಚಾಗುತ್ತಿದೆ.

Published On :

ಗೋವಾದಲ್ಲೂ ಕೂಡ ಇನ್ನಿತರ ರಾಜ್ಯಗಳಲ್ಲಿನಂತೆ ಕ್ಷುದ್ರ ಶಕ್ತಿಗಳ ಮೇಲಾಟ ಹೆಚ್ಚಾಗುತ್ತಿದೆ. ಹಾಗಾಗೆ ಅದರ ಭವಿಷ್ಯ ಎಲ್ಲಾ ರಾಜ್ಯಗಳಂತೆಯೇ ಅಯೋವುಯವಾಗಿದೆ. ಆದರೆ ಈಗ ಗುಣಾತ್ಮಕ ಕಿರಣವೊಂದು ಮೆಲ್ಲಗೆ ಆ ರಾಜ್ಯದಲ್ಲಿ ಬೆಳಕು ಮೂಡಿಸುತ್ತಿದೆ. ಗೋವಾದಲ್ಲಿ ಸಮುದ್ರ ಕಿನಾರೆಗಳು ಮತ್ತು ಹಿಪ್ಪಿಗಳದ್ದೇ ಆರ್ಭಟವಿರುವ ಕಾರಣ, ಅಲ್ಲಿನ ಇನ್ನಿತರ ಬದಲಾವಣೆಗಳು ಹೆಚ್ಚಾಗಿ ಯಾರ ಗಮನಕ್ಕೂ ಬರುವುದಿಲ್ಲ.
ಗೋವಾದಲ್ಲೊಂದು ವಿಶ್ವವಿದ್ಯಾಲಯವಿದೆ ಮತ್ತದು ದೇಶದ ಇನ್ನುಳಿದ ವಿಶ್ವವಿದ್ಯಾಲಯಗಳಿಗಿಂತಲೂ ರಚನಾತ್ಮಕವಾಗಿ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಕೋಲ್ಕತ್ತಾದ ಪ್ರೆಸಿಡೆನ್ಸಿ ವಿ.ವಿ, 'ಎನಿಗ್ಮಾ ಆಫ್ ಲವ್‌' ಎನ್ನುವ ಕೋರ್ಸ್ ಒಂದನ್ನು ಶುರುಮಾಡಲಿದ್ದು, ಅದು ಪ್ರೀತಿಯ ಬಗೆಗಿನ ಸೈದ್ಧಾಂತಿಕ ವಿಚಾರವನ್ನು ಒಳಗೊಂಡಿರುತ್ತದೆ ಎನ್ನುವ ವಿಷಯವೇ ನಮ್ಮಲ್ಲಿ ಹೆಚ್ಚು ಸದ್ದು ಮಾಡುತ್ತದೆ. ಆದರೆ ಇಂಥ ಶೈಕ್ಷಣಿಕ ಕುಚೋದ್ಯವನ್ನು ಗೋವಾದ ವಿಶ್ವವಿದ್ಯಾಲಯದ ಸಾಧನೆಯೊಂದಿಗೆ ಹೋಲಿಸಿ ನೋಡಿ? ಗೋವಾ ವಿಶ್ವವಿದ್ಯಾಲಯ ಅರ್ಧ ಡಜನ್‌ನಷ್ಟು ಸಂಶೋಧನಾ ಪೀಠಗಳನ್ನು ಸ್ಥಾಪಿಸಿದೆ. ರಾಜಕೀಯ ಆರ್ಥಿಕತೆ, ಇಂಟರ್ ಡಿಸಿಪ್ಲೀನರಿ ಸ್ಟಡೀಸ್, ಕಂಪೇರಿಟಿವ್ ಲಿಟ್ರೇಚರ್‌ನಂಥ ವಿಷಯಗಳನ್ನಷ್ಟೇ ಅಲ್ಲದೆ, ಇನ್ನೂ ಹಲವು ಕೋರ್ಸುಗಳಿಂದಾಗಿ ಅದು ಎಲ್ಲ ವಿಶ್ವವಿದ್ಯಾವಯಗಳಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತದೆ.
ಮೊದಲನೆಯದಾಗಿ ಅದು ಅಸ್ವಾಭಾವಿಕ ಮತ್ತು ಹೊಸತನದ ಅಭ್ಯಾಸ ಕ್ರಮವನ್ನು ಶುರುಮಾಡಿರುವುದು. ಮೊದಲನೆಯದು ಪಾಶ್ಚಿಮಾತ್ಯ ಸಂಗೀತದ ಕುರಿತಾಗಿದ್ದರೆ, ಎರಡನೆಯದು ಸಾಂಪ್ರದಾಯಿಕ ಸಂಗೀತ ಮತ್ತು ಭಜನೆಗಳನ್ನೊಳಗೊಂಡಿದೆ. ಇನ್ನು ಮೂರನೆಯದು ಗೋವಾದ ಪ್ರಖ್ಯಾತ ಚಿತ್ರಕಾರ ಮಾರಿಯೋ ಮಿರಾಂಡಾನ ಹೆಸರಿನಲ್ಲಿ ಸ್ಥಾಪಿತವಾದ ಚಿತ್ರಕಲೆ ಮತ್ತು ವ್ಯಂಗ್ಯಚಿತ್ರಗಳ ಕುರಿತಾದ ಪಠ್ಯಕ್ರಮ. ಇಂದು ಭಾರತದಲ್ಲಿ ಚಪರಾಸಿಯಿಂದ ಹಿಡಿದು ಪ್ರೊಫೆಸರ್‌ಗಳವರೆಗೆ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕೆಂದರೂ ಜಾತಿ, ಹಣ ಮತ್ತು ಮಂತ್ರಿಗಳ ಸಹಕಾರ ಬೇಕಾಗುತ್ತದೆ. ಆದರೆ ಗೋವಾ ವಿಶ್ವವಿದ್ಯಾಲಯ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ವಿಶ್ವವಿದ್ಯಾಲಯಕ್ಕೆ ಮಾಧವ್ ಗಾಡ್ಗಿಲ್, ರೋಮಿಲಾ ಥಾಪರ್, ಮೇಘ್‌ನಾದ್ ದೇಸಾಯಿ ಮತ್ತು ಶುಭಾ ಮುದಗಲ್‌ರನ್ನು ತಂದು ಕೂರಿಸಿದೆ.
ಸಮಗ್ರತೆಗೆ ಬಹಿರಂಗವಾಗಿ ಮತ್ತು ಆಗಾಗ ಈ ರೀತಿ ಮನ್ನಣೆ ಸಿಗುವುದನ್ನು ಎಲ್ಲಾದರೂ ನೋಡಿದ್ದೀರಾ? ನಿಸ್ಸಂಶಯವಾಗಿಯೂ ಗೋವಾ ವಿಶ್ವವಿದ್ಯಾಲಯ ಜಾತಿ, ಹಣ..ಇತ್ಯಾದಿಗಳನ್ನು ಕಡೆಗಣಿಸಿ ಇವರನ್ನೆಲ್ಲ ನೇಮಕ ಮಾಡಿರಬಹುದು. ಆದರೆ ಒಂದು ವೇಳೆ ಇನ್ನಿತರ ರಾಜ್ಯಗಳಲ್ಲಿನಂತೆ ಆ ವಿಶ್ವವಿದ್ಯಾಲಯಕ್ಕೂ ಕೂಡ ರಾಜಕಾರಣಿಗಳ ಪ್ರವೇಶವಾಗಿತ್ತೆಂದರೆ, ಇದೆಲ್ಲ ಸಾಧ್ಯವಾಗುತ್ತಿತ್ತೇ? ಹಾಗಂತ ಆ ವಿಶ್ವವಿದ್ಯಾಲಯದಲ್ಲಿ ರಾಜಕಾರಣಿಗಳ ಚೇಲಾಗಳು ಇಲ್ಲವೆಂದಲ್ಲ. ವಿ.ವಿ ತನ್ನ ಖರ್ಚಿನಲ್ಲಿ ಬಿಜಿಪಿ ವಿರೋಧಿ ಬುದ್ಧಿಜೀವಿ ರೋಮಿಲಾ ಥಾಪರ್ ಅವರನ್ನು ಕರೆಸುತ್ತಿದೆ ಎಂದು ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಕೆಲವರು ಚಾಡಿ ಹೇಳಿದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಪರಿಕ್ಕರ್, 'ಇದು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ವಿಷಯ, ಇದರಲ್ಲಿ ಮೂಗು ತೂರಿಸಲು ನಾನ್ಯಾರು?' ಎಂದು ಬಿಟ್ಟರು!
ಇದೇ ಗುಣ ಪರಿಕ್ಕರ್ ಅವರನ್ನು ಎಲ್ಲಾ ಮುಖ್ಯಮಂತ್ರಿಗಳಿಗಿಂತಲೂ ಭಿನ್ನವಾಗಿ ನಿಲ್ಲಿಸುತ್ತದೆ. ಆದರೆ ಹಿಂದೆ ಪರಿಕ್ಕರ್ ಹಿಂದುತ್ವವಾದಿಗಳ ಒತ್ತಡಕ್ಕೆ ಮಣಿದು ಗೋವಾದಲ್ಲೊಂದು ಎಡವಟ್ಟು ಮಾಡಿಬಿಟ್ಟಿದ್ದರು. 'ಈಗಿನಿಂದ ಗುಡ್ ಫ್ರೈಡೆಯಂದು ಸಾರ್ವಜನಿಕ ರಜೆ ಇರುವುದಿಲ್ಲ' ಎಂದು ಘೋಷಿಸಿಬಿಟ್ಟರು. ಇದೇ ಕಾರಣಕ್ಕಾಗಿ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿತು. ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಕ್ರಿಶ್ಚಿಯನ್ನರ ಬೆಂಬಲದಿಂದಲೇ ಈ ಬಿಜೆಪಿಯ ನಾಯಕ ಮತ್ತೆ ಮುಖ್ಯಮಂತ್ರಿಯಾದರು. ಪರಿಕ್ಕರ್ ತಮ್ಮ ಪಾಠವನ್ನು ಕಲಿತಿದ್ದಾರೆ ಎನ್ನುವುದು ಕ್ರಿಶ್ಚಿಯನ್ನರಿಗೆ ಅರಿವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್‌ನಲ್ಲಿರುವ ಕ್ರಿಶ್ಚಿಯನ್ ಮಂತ್ರಿಗಳ ಗೂಂಡಾಗಿರಿಯಿಂದ, ಅವ್ಯವಹಾರಗಳಿಂದ ಅವರು ಬೇಸತ್ತಿದ್ದರು. ಹಾಗಾಗೆ ಬಿಜೆಪಿಯ ಪರಿಕ್ಕರ್ ಅವರಿಗೇ ಮತ ನೀಡಿ ಗೆಲ್ಲಿಸಿದರು.
ಬಿಜೆಪಿ ಸೋತ ನಂತರ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಹಿಂದೆ ಕಂಡು ಕೇಳರಿಯದಂಥ ಕುಕೃತ್ಯಗಳಲ್ಲಿ ವ್ಯಸ್ಥವಾಯಿತು. ಕಾಂಗ್ರೆಸ್‌ನ ಮಂತ್ರಿಗಳು ಅತ್ಯಾಚಾರ, ಕೊಲೆಯ ಜೊತೆಗೆ ಭಂಡತನದಿಂದ ಭ್ರಷ್ಟಾಚಾರದಲ್ಲೂ ತೊಡಗಿದರು. ತನ್ನ ಧ್ವಜ ಹಿಡಿದುಕೊಂಡು ಗೋವಾದಲ್ಲಿ ಈ ಪರಿಯ ಅನಾಹುತವೆಸಗುತ್ತಿರುವವರ ವಿರುದ್ಧ ಹೈ ಕಮಾಂಡ್ ಅದೇಕೆ ಸುಮ್ಮನಿತ್ತೋ ಎನ್ನುವುದೇ ಆಶ್ಚರ್ಯ. ಅಥವಾ ಅದೂ ಕೂಡ ಇದರಲ್ಲಿ ಶಾಮೀಲಾಗಿತ್ತೆ? ಹಾಗಂತ ಬಿಜೆಪಿಯೇನೂ ಅತಿ ಪ್ರಾಮಾಣಿಕ ಪಕ್ಷವೆನ್ನುತ್ತಿಲ್ಲ. ಕುತೂಹಲಕರ ವಿಷಯವೆಂದರೆ ಗೋವಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡರಲ್ಲೂ ಕೂಡ 33.3 ಪ್ರತಿಶತ ಶಾಸಕರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ! ಆದರೆ ಕಾಂಗ್ರೆಸ್‌ನ ಹಳವಂಡದ ಮುಂದೆ ಬೇರಾವ ಪಕ್ಷಗಳ ಭ್ರಷ್ಟತೆಯೂ ಕಣ್ಣು ಕುಕ್ಕುವುದಿಲ್ಲ.
ಪರಿಕ್ಕರ್ ಅಧಿಕಾರಕ್ಕೆ ಬಂದು ಅದಾಗಲೇ ಒಂದು ವರ್ಷವಾಗಿದೆ. ಅಧಿಕಾರದ ನಿಷ್ಠುರ ಸತ್ಯಗಳು ಅವರಿಗೆ ಅರಿವಾಗುತ್ತಿವೆ, ಅವರ ಅಧಿಕಾರದ ವೈಖರಿ ಜನರಿಗೂ ಅರ್ಥವಾಗುತ್ತಿದೆ. ಚುನಾವಣಾ ಸಮಯದಲ್ಲಿ ಅವರು, ಜೂಜು ಅಡ್ಡಾಗಳನ್ನು ಇಲ್ಲವಾಗಿಸುತ್ತೇನೆ, ಗಣಿ ಧಣಿಗಳಿಂದ ಗೋವಾವನ್ನು ಬಚಾವು ಮಾಡುತ್ತೇನೆ ಎಂದು ದೊಡ್ಡದಾಗಿ ಅಶ್ವಾಸನೆ ಕೊಟ್ಟಿದ್ದರಾದರೂ, ಅವೆಲ್ಲ ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ ಎಂದು ಜನರಿಗೂ ಗೊತ್ತಿದೆ. ಆದರೆ ಅವರ ಆಡಳಿತ ಇದೇ ರೀತಿಯಲ್ಲಿ ಪಾರದರ್ಶಕವಾಗಿ ಮುಂದುವರಿದರೆ, ಮತದಾರರು ಚಿಕ್ಕ ವೈಫಲ್ಯಗಳನ್ನು ಮಾಫಿ ಮಾಡುತ್ತಾರೆ. ಅದಾಗ್ಯೂ ಉದಾರೀಕರಣದ ನಂತರದ ಯಾವ ಮುಖ್ಯಮಂತ್ರಿಗೂ ಸಿಗದ ಅವಕಾಶ ಪರಿಕ್ಕರ್‌ಗೆ ಎದುರಾಗಿದೆ. ಅವರ ಶಿಕ್ಷಣ ಮತ್ತು ತಾಂತ್ರಿಕ ಹಿನ್ನೆಲೆಯ ಜೊತೆಗೆ ಅವರ ಸಂಯಮದ ಗುಣವನ್ನು ವಿರೋಧಿಗಳೂ ಕೂಡ ಗೌರವಿಸುತ್ತಾರೆ.
ಒಬ್ಬ ಉತ್ತಮ ನಿರ್ವಾಹಕನೆಂಬ ಹೆಸರು ಗಳಿಸಿದ್ದಾರೆ ಪರಿಕ್ಕರ್. ಅವರು ಇದೇ ರೀತಿಯ ಗೌರವಾದರಗಳಿಗೆ ಮುಂದೆಯೂ ಪಾತ್ರರಾಗಲು ಬಯಸುತ್ತಾರೆಂದರೆ, ತಮ್ಮ ಪಕ್ಷದ ಸಿದ್ಧಾಂತವನ್ನು ಅಥವಾ ಕಿವಿ ಚುಚ್ಚುವವರನ್ನು ದೂರ ಸರಿಸಿ ಗೋವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಹೆಚ್ಚಾಗಿ ಗಮನದಲ್ಲಿಟ್ಟುಕೊಂಡು ಅಧಿಕಾರ ನಡೆಸಬೇಕು. ಮನೋಹರ್ ಪರಿಕ್ಕರ್ ಎಂಬ ಬಿಜೆಪಿಯ ನಾಯಕನಿಗೆ ಗೋವಾದ ಅಚ್ಚುಮೆಚ್ಚಿನ ನಾಯಕನಾಗುವ ಅವಕಾಶವಿದೆ. ಅವರದನ್ನು ಸರಿಯಾಗಿ ಬಳಸಿಕೊಳ್ಳಲಿ.

-ಟಿಜಿಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.