ಅಂಕಣಗಳು

ಅಚ್ಚುಕಟ್ಟಾದ ಬದುಕಿನ ನಿರೀಕ್ಷೆಯಲ್ಲಿರುವ ಕರಾವಳಿಯ ಕೊರಗರು

ಮಡೆ ಮಡ ಸ್ನಾನದ ಬಗ್ಗೆ ರಾಜ್ಯಾದ್ಯಂತ ಇತ್ತೀಚೆಗೆ ಭಾರಿ ಚರ್ಚೆ ನಡೆಯಿತು.

Published On :

ಮಡೆ ಮಡ ಸ್ನಾನದ ಬಗ್ಗೆ ರಾಜ್ಯಾದ್ಯಂತ ಇತ್ತೀಚೆಗೆ ಭಾರಿ ಚರ್ಚೆ ನಡೆಯಿತು. ಎಂಜಲು ಎಲೆಯ ಮೇಲೆ ಉರುಳು ಸೇವೆ ಸಲ್ಲಿಸಿ ಸ್ನಾನ ಮಾಡುವ ಪದ್ಧತಿ ಇದು.
ಇದಕ್ಕಿಂತ ಹೀನಾಯವಾದ ಪದ್ಧತಿ ಈ ಹಿಂದೆ ಆಚರಣೆಯಲ್ಲಿತ್ತು. ತಿನ್ನವ ಅನ್ನದಲ್ಲಿ ಉಗುರು ಮತ್ತು ತಲೆಕೂದಲು ಸೇರಿಸಿ ಕೊಡುವುದು. ಕೇಳಿದರೇ ವಾಕರಿಕೆ ಬರುತ್ತದೆ. ಇನ್ನು ಈ ಪದ್ಧತಿಯನ್ನು ಅನುಸರಿಸಿದವರ ಪರಿಸ್ಥಿತಿ ಹೇಗಿರಬೇಡ ?
ಮೇಲ್ವರ್ಗದವರ ಪಾಲಿಗೆ ಅಸ್ಪೃಶ್ಯರಾಗಿ ಜೀತ ಪದ್ಧತಿಯಲ್ಲಿ ನೊಂದು ಬೆಂದು ಹೋದ ಕೊರಗರ ಮೇಲೆ ಇಂತಹ ಅನಿಷ್ಠ ಪದ್ಧತಿಯನ್ನು ಹೇರಲಾಗಿತ್ತು. ಪ್ರಸ್ತುತ ಈ ಪದ್ಧತಿ ನಿಂತಿದೆಯಾದರೂ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಅಮಾಯಕ ಜನ ಇಟ್ಟುಕೊಂಡಿರುವ ನಂಬಿಕೆಯೇ ಕಾರಣ.
ಅಷ್ಟೇ ಅಲ್ಲ, ತಮ್ಮ ಅನುಕೂಲಕ್ಕೆ ಮಾಡಿಕೊಂಡ ನಿಯಮಗಳನ್ನು ಈ ಹಿಂದೆ ಪದ್ಧತಿ ರೂಪದಲ್ಲಿ ಕೊರಗರು ಅನುಸರಿಸಬೇಕಿತ್ತು. ಅದು ಅವರ ಪಾಲಿಗೆ ನಂಬಿಕೆಯೂ ಆಗಿತ್ತು. ಇದಕ್ಕಿಂತ ಹೆಚ್ಚಾಗಿ ಹಾಗೆಂದು ಅವರನ್ನು ನಂಬಿಸಲಾಗಿತ್ತು. ಆದರೆ, ತಾವು ಎಂತಹ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬುದರ ಅರಿವು ಈ ಸಮುದಾಯದವರಿಗೆ ಇರಲಿಲ್ಲ. ಏಕೆಂದರೆ ಅವರು ಮುಗ್ಧರಾಗಿದ್ದರು.

ಕೊರಗರು ಅರಣ್ಯ ವಾಸಿಗಳು
ಕೊರಗರು ಮೂಲತ: ಅರಣ್ಯ ವಾಸಿಗಳು. ದಟ್ಟವಾದ ಅರಣ್ಯವೇ ಅವರ ಪಾಲಿಗೆ ಮನೆ. ಕಾಡಿನಲ್ಲಿ ಸಿಗುವ ಬಿದಿರಿನಿಂದ ಬುಟ್ಟಿಗಳನ್ನು ಹೆಣೆದು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಇದರ ಜೊತೆಗೆ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಭೇಟೆ ಅವರ ಕುಲ ಕಸುಬು ಆಗಿತ್ತು. ಕಾಡಿನಲ್ಲಿದ್ದರೂ ನೆಮ್ಮದಿಯಿಂದ ಇದ್ದ ಕೊರಗರು ನಾಡಿಗೆ ಬಂದ ಬಳಿಕ ತೀವ್ರ ಸಂಕಷ್ಟಕ್ಕೆ ಗುರಿ ಆಗಿದ್ದಾರೆ. ಏಕೆಂದರೆ, ಬಿದಿರಿನಿಂದ ಬುಟ್ಟಿಗಳನ್ನು ಹೆಣೆಯುವುದು ಬಿಟ್ಟು ಅವರಿಗೆ ಬೇರೆ ಏನೂ ಗೊತ್ತಿರಲಿಲ್ಲ.
ಅರಣ್ಯದಿಂದ ಹೊರಬಂದ ಬಳಿಕ ಅವರಿಗೆ ಮೊದಲು ಎದುರಾಗಿದ್ದು ಉದ್ಯೋಗದ ಸಮಸ್ಯೆ. ಬೇರೆ ಕೆಲಸ ತಿಳಿಯದ ಅವರು ರಸ್ತೆ ಗುಡಿಸುವ, ಕಸ ವಿಲೇವಾರಿ ಮಾಡುವ, ಸತ್ತ ಪ್ರಾಣಿಗಳನ್ನು ಸಾಗಿಸುವ, ಮ್ಯಾನ್‌ಹೋಲ್‌ಗಳ ಒಳಗೆ ಇಳಿದು ಒಳ ಚರಂಡಿ ಸ್ವಚ್ಛ ಮಾಡುವ ಕಾಯಕಕ್ಕೆ ಮುಂದಾದರು. ಇದಕ್ಕೂ ಮುನ್ನ ಆಜಲು ಹೆಸರಿನ ಜೀತ ಪದ್ಧತಿ ಕೊರಗರ ಬದುಕನ್ನೇ ಜರ್ಝರಿತ ಮಾಡಿತ್ತು. ಪ್ರತಿರೋಧ ಒಡ್ಡುವ ಶಕ್ತಿ ಇಲ್ಲದೆ ಗುಲಾಮರಂತೆ ಇದ್ದ ಈ ಸಮುದಾಯದ ಜನರನ್ನು ಸಂಘಟಿಸುವ ಕೆಲಸ ಆರಂಭವಾದ ಬಳಿಕ ಪರಿಸ್ಥಿತಿ ಕೊಂಚ ಸುಧಾರಿಸಿದೆ.

ಇನ್ನೂ ಸಂಕಷ್ಟದಲ್ಲಿದ್ದಾರೆ
ಆದರೆ, ಕೊರಗರು ಇನ್ನೂ ಸಂಕಷ್ಟದಲ್ಲೇ ಇದ್ದಾರೆ. ಕಾರಣ, ಸರ್ಕಾರ ಅವರತ್ತ ನೋಡುತ್ತಿಲ್ಲ. ಮೂಢನಂಬಿಕೆ, ಅಜ್ಞಾನ, ಅಂಧಶ್ರದ್ಧೆ ಹಾಗೂ ಅಸ್ಪೃಶ್ಯತೆ ಪರಿಣಾಮ ಮಾನವ ಹಕ್ಕುಗಳಿಂದಲೇ ವಂಚನೆಗೊಳಗಾಗಿದ್ದ ಕೊರಗರಲ್ಲಿ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಅವರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಿಸಬೇಕಿದೆ. ಅಂದಹಾಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಾಡಿನಲ್ಲೇ ಇದ್ದರೂ ಕೊರಗರ ಆಚಾರ, ವಿಚಾರಗಳು ವಿಶೇಷವಾಗಿತ್ತು. ಅವರು ಅನುಸರಿಸುತ್ತಿದ್ದ ಸಂಪ್ರದಾಯ, ಸಾಂಸ್ಕೃತಿಕ ಜೀವನ ಸಹ ಸೊಗಸಾಗಿತ್ತು. ಯಾರು ಏನೇ ಹೇಳಿದರೂ ನಂಬಿಬಿಡುವಂತಹ ಮುಗ್ಧತೆ ಅವರಲ್ಲಿ ಮನೆ ಮಾಡಿತ್ತು. ಲೇಖಕರಾದ ಜಿ. ಭವಾನಿ ಶಂಕರ ಕೊರಗ, ಪ್ರೊ.ಎ.ವಿ.ನಾವಡ, ಈ ಜನರನ್ನು ಸಂಘಟಿಸಿ ಅವರಲ್ಲಿ ಅರಿವು ಮೂಡಿಸುತ್ತಿರುವ, ಗೌತಮ್, ಪಿ.ಗೋಕುಲದಾಸ್ ಮತ್ತಿತರರು ತಮ್ಮ ಬರವಣಿಗೆಗಳ ಮೂಲಕ ಕೊರಗರ ಬದುಕಿನ ಮೇಲೆ ಬೆಳಕು ಚೆಲ್ಲಿದ್ದಾರೆ.
ಪ್ರೊ.ಎ.ವಿ.ನಾವಡ ಅವರು ತಮ್ಮ 'ತುಳುಪೊಲಿ' ಪುಸ್ತಕದಲ್ಲಿ ಕೊರಗ ಸಮುದಾಯ ಹುಟ್ಟು, ಬೆಳವಣಿಗೆ, ಆಚಾರ, ವಿಚಾರಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಕಾಡಿನ ಅಂಚಿನಲ್ಲಿ ಕೊರಗರು ಗುಂಪು ಗುಂಪಾಗಿ ವಾಸ ಮಾಡುತ್ತಿದ್ದಾರೆ. 10-20 ಕುಟುಂಬಗಳು ಒಂದೆಡೆ ವಾಸ ಮಾಡುವ ಜಾಗವನ್ನು ಕೊರಗರ ಕೊಪ್ಪ, ಕೊಟ್ಟ ಎಂದು ಕರೆಯಲಾಗುತ್ತದೆ. ಬಿದಿರು ಮತ್ತು ಒಳ ಹುಲ್ಲಿನಿಂದ ತ್ರಿಕೋನ ಆಕಾರದಲ್ಲಿ ಇಳಿಜಾರಿನಂತೆ ಕಟ್ಟಿದ ಜೋಪಡಿಗಳೇ ಇವರಿಗೆ ಅರಮನೆ.

ಕರಾವಳಿ ಜಿಲ್ಲೆಗಳಲ್ಲಿದ್ದಾರೆ
ಮಂಗಳೂರು ಬಳಿ ಕುದ್ಕೋರಿ, ಗುಡ್ಕೆ, ಬಜಪೆ, ಮರವೂರು, ಬೈಕಂಪಾಡಿ, ಹಳೆಯಂಗಡಿ, ದೇರೆಬೈಲು, ಮುಲ್ಕಿ, ಕಿನ್ನಿ ಮುಲ್ಕಿ, ಮಿಜಾರು, ಬಪ್ಪನಾಡು, ಪುತ್ತೂರು, ಉಡುಪಿ ಬಳಿಯ ಬನ್ನಂಜೆ, ಇಂದ್ರಾಳಿ, ಮಣಿಪಾಲ, ಪರ್ಕಳ, ಕೊರಂಗ್ರಪಾಡಿ, ಚಿತ್ಪಾಡಿ, ಕುಂಬಾಶಿ, ಕುಂದಾಪುರ, ಅಸೋಡು, ಬಿದ್ಕಲ್ ಕಟ್ಟೆ, ಅಮಾಸೆ ಬೈಲ್, ವಕ್ವಾಡಿ, ವಡೇರ ಹಾಗೂ ಕಾರ್ಕಳ, ಸುಳ್ಯ, ಬೆಳ್ತಂಗಡಿಯಲ್ಲಿ ಕೊರಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕೊರಗರಲ್ಲಿ ಹಲವಾರು ಒಳ ಪಂಗಡಗಳಿವೆ. ಬಿದಿರಿನ ಕೊಳವೆಯಾಕಾರದ ಅಂಡೆಯನ್ನು ಕೊರಳಿಗೆ ನೇತು ಹಾಕಿಕೊಳ್ಳುತ್ತಿದ್ದವರು ಅಂಡೆ ಕೊರಗರು, ಗಿಡಮರಗಳ ಸೊಪ್ಪನ್ನು ದೇಹಕ್ಕೆ ಸುತ್ತಿಕೊಳ್ಳುತ್ತಿದ್ದವರು ಸೊಪ್ಪು ಕೊರಗರು, ಚಿಪ್ಪಿನಿಂದ ಮಾಡಿದ ಆಭರಣಗಳನ್ನು ಧರಿಸುತ್ತಿದ್ದವರು ಚಿಪ್ಪು ಕೊರಗರು, ಬಟ್ಟೆ ಹಾಕಿಕೊಳ್ಳುತ್ತಿದ್ದವರನ್ನು ಮುಂಡು ಕೊರಗ, ಕಪಡ ಕೊರಗ ಎಂದು ಕರೆಯಲಾಗುತ್ತಿತ್ತು. ಇದಲ್ಲದೆ, ಕುಂಟು, ತಿಪ್ಪಿ, ಒಂಟಿ, ಕುಪ್ಪಟ ಕೊರಗರೂ ಇದ್ದಾರೆ.
ವಿಶೇಷ ಎಂದರೆ ಅಂಡೆ ಕೊರಗರು ಊರಿನ ಒಳಗೆ ಉಗಿಯುವಂತಿರಲಿಲ್ಲ. ಎಂಜಲು ಬಂದರೆ ಕಟ್ಟಿಕೊಂಡಿದ್ದ ಅಂಡೆಯಲ್ಲಿ ಉಗಿದು ಅದನ್ನು ಊರಿನ ಹೊರಗೆ ಎಸೆಯಬೇಕಿತ್ತು. ಚಿಪ್ಪು ಕೊರಗರು ಊರೊಳಗೆ ನೀರು, ಆಹಾರ ಸೇವಿಸಲು ಚಿಪ್ಪನ್ನೇ ಬಳಸಬೇಕಿತ್ತು. ಇನ್ನು ಕೊರಗರಿಗೆ ಬಟ್ಟೆ ನಿಷೇಧ. ಸವರ್ಣೀಯರು ಸತ್ತರೆ ಹೆಣ ಮುಚ್ಚಲು ಬಳಸುತ್ತಿದ್ದ ಬಟ್ಟೆಯನ್ನು ಇವರಿಗೆ ಕೊಡಲಾಗುತ್ತಿತ್ತು. ಕಾಲ ಬದಲಾದಂತೆ ರೀತಿ ರಿವಾಜುಗಳೂ ಕಣ್ಣರೆ ಆಗುತ್ತಿವೆ. ಹಾಗೆಯೇ ಕೊರಗರಲ್ಲಿ ಇದ್ದ ನಿರ್ಬಂಧಗಳಿಗೂ ಕತ್ತರಿ ಬೀಳತೊಡಗಿದೆ.

ಕಷ್ಟವಾದ ಕಟ್ಟುಪಾಡುಗಳು
ಕೊರಗರ ಮೈಬಣ್ಣ ಕಪ್ಪು, ದಷ್ಟಪುಷ್ಟವಾದ ದೇಹ. ಗುಂಗುರು ಕೂದಲು, ಅಗಲವಾದ ಹಣೆ ಮತ್ತು ಚಪ್ಪಟೆ ಮೂಗು. ಒಟ್ಟಿನಲ್ಲಿ ಎದ್ದು ಕಾಣುವ ದೇಹದಾರ್ಢ್ಯತೆ ಇವರದ್ದು. ಇನ್ನು ಮೇಲ್ವರ್ಗದವರು ಕೊರಗರ ಮೇಲೆ ಹೇರಿದ್ದ ಕೆಲ ನಿಬಂಧನೆಗಳ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆ ಕೊರಗರ ಹೆಸರು ಹೇಳುವಂತಿರಲಿಲ್ಲ. ಊರೊಳಗೆ ಬರುವಾಗ ದಂಡ ಕುಟ್ಟುತ್ತಾ ಬರಬೇಕು. ಮೇಲು ಜಾತಿಯವರ ಎಂಜಲು ತಿನ್ನಬೇಕು. ನವರಾತ್ರಿಯಲ್ಲಿ ವೇಷ ಹಾಕಿಕೊಂಡು ಭಿಕ್ಷೆ ಬೇಡಬೇಕು. ಬಟ್ಟೆ ಧರಿಸಬಾರದು. ಸತ್ತರೆ ಊರೊಳಗೆ ಅಂತ್ಯ ಸಂಸ್ಕಾರ ಮಾಡಬಾರದು. ಶವವನ್ನು ಕಣ್ಣಿಗೆ ಕಾಣದಂತೆ ಕೊಂಡೊಯ್ಯಬೇಕು. ಮೇಲ್ವರ್ಗದ ಗರ್ಭಿಣಿಯ ಸೀಮಂತದಂದು ಆಕೆ ಉಂಡು ಬಿಟ್ಟಿದ್ದನ್ನು ಕೊರಗ ಮಹಿಳೆ ತಿನ್ನಬೇಕು, ಇವೇ ಮೊದಲಾದ ಆಚರಣೆಗಳನ್ನು ಹೇರಲಾಗಿತ್ತು.
ಇದಕ್ಕಿಂತ ವಿಶೇಷ ಎಂದರೆ ಬುಟ್ಟಿ ಹೆಣೆಯುವುದೇ ನಿಮ್ಮ ಕೆಲಸ. ಅದನ್ನು ದೇವರೇ ಹೇಳಿದ್ದು ಎಂದು ಕೊರಗರನ್ನು ನಂಬಿಸಲಾಗಿತ್ತು ಎಂದು ಬರೆಯುತ್ತಾರೆ ನಾವಡ ಅವರು. ಡೋಲು ಬಾರಿಸುವುದು ಮತ್ತು ಕೊಳಲು ನುಡಿಸುವುದು ಕೊರಗರ ಕಲೆಯಾಗಿತ್ತಂತೆ. ಕಾಡಿನಲ್ಲಿದ್ದಾಗ ಇವರ ಭಾಷೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲವಂತೆ. ಬಲಾಢ್ಯರು ಎನಿಸಿಕೊಂಡವರು ಈ ಕೊರಗರನ್ನು ಕಾಡಿನಿಂದ ಹೊರಗೆ ಕರೆತಂದು ತಮ್ಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳತೊಡಗಿದರು. ಅದಕ್ಕೆ ಅಜಲು ಸೇವೆ ಎಂಬ ಹೆಸರು ಕೊಟ್ಟರು. ಅವರು ಹೇಳಿದ್ದನ್ನೆಲ್ಲ ಮುಗ್ಧ ಕೊರಗರು ನಂಬಿದರು. ಸಮಾನತೆ ಬೇಕು ಎಂದು ಮನಸ್ಸು ಬಯಸಿದರೂ ವಿಧಿಸಿದ್ದ ಕಟ್ಟುಪಾಡುಗಳು ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.
ಆತಂಕದ ವಿಚಾರ ಮತ್ತೊಂದಿದೆ. ಭವಾನಿ ಶಂಕರ ಕೊರಗ ಅವರ ಪ್ರಕಾರ, ಈ ಸಮುದಾಯದ ಜನಸಂಖ್ಯೆ ಬ್ರಿಟಿಷರ ಕಾಲದಲ್ಲಿ 55 ಸಾವಿರ ಇತ್ತಂತೆ. 1992ರಲ್ಲಿ ನಡೆದ ಜನಗಣತಿಯಲ್ಲಿ ಅದು 22 ಸಾವಿರಕ್ಕೆ ಇಳಿದಿದೆ. 2004ರ ಜನಗಣತಿ ಪ್ರಕಾರ ಜನಸಂಖ್ಯೆ 18 ಸಾವಿರ. ಅರಣ್ಯದಿಂದ ಹೊರಬಿದ್ದ ಬಳಿಕ ಕೊರಗರು ನೀರಿನಿಂದ ಆಚೆಬಿದ್ದ ಮೀನಿನಂತೆ ಆದರು. ರೋಗ, ರುಜಿನಗಳು ಅವರನ್ನು ಕಾಡಿತು. ಎಂಜಲನ್ನ ತಿಂದ ಪರಿಣಾವೂ ಅವರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವಂತೆ ಮಾಡಿತು. ಒಟ್ಟಿನಲ್ಲಿ ತಮ್ಮ ಬದುಕು ಅಚ್ಚುಕಟ್ಟು ಆಗಬೇಕು ಎಂಬುದು ಕೊರಗರ ಬಯಕೆ. ಆಗುವುದೇ ? ಎಂಬುದು ಅವರಲ್ಲಿರುವ ಕೊರಗು.

- ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.