ಅಂಕಣಗಳು

ಚುನಾವಣಾ ಪ್ರಚಾರ ಶೈಲಿಯ ದುರ್ಗತಿ ನೋಡಿ

ಚುನಾವಣೆ ಪ್ರಚಾರದ ಗುಣಮಟ್ಟ ಎಲ್ಲಿಗೆ ಬಂದು ನಿಂತಿದೆ ಎನ್ನುವುದಕ್ಕೆ ಇದಕ್ಕಿಂತ ಉನ್ನತ...

Published On :

1996 ರಲ್ಲಿ ಮುಖ್ಯಮಂತ್ರಿ ಗಾದಿಗೆ ಸ್ಪರ್ಧಿ ಅಂದ ಸಿದ್ದರಾಮಯ್ಯಗೆ ಜೆ.ಎಚ್. ಪಟೇಲ್ ಮೆಟ್ಟು ತೋರಿಸಿದ್ದರು, ಎಸ್.ಎಂ. ಕೃಷ್ಣ ನನಗೆ ಕೊಟ್ಟಿರುವ ಕಾಟ ಆ ದೇವರಿಗೂ ಗೊತ್ತಿದೆ. ದೇವೇಗೌಡರು, ಮಾಜಿ ಪ್ರಧಾನಿ. ದೇವೇಗೌಡರು ಹಾಗೂ ಅವರ ಕುಟುಂಬದವರಿಗೆ ಮದುವೆ ಊಟ ಮಾಡಿ ಅಭ್ಯಾಸ ಇಲ್ಲ. ಅವರಿಗೇನಿದ್ದರೂ ತಿಥಿ ಊಟ ಅಂದ್ರೆ ಭಾಳ ಇಷ್ಟ. ಏಕೆಂದರೆ ಅವರು ಯಾವಾಗಲೂ ಬೇರೆಯವರನ್ನು ಮುಗಿಸುವುದರ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ.

 ದೇವೇಗೌಡರಂತೆ ತಿಥಿ ಊಟ ಮಾಡಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಲೋಕಸಭೆ ಚುನಾವಣೆ ಮುಗಿಯಲಿ. ಅವರು ಕಾಂಗ್ರೆಸ್‌ನ ತಿಥಿ ಊಟ ಮಾಡಿಯೇ ಹೋಗ್ತಾರೆ.
- ರೇವಣ್ಣ, ಜೆಡಿಎಸ್ ಮುಖಂಡ.

 ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಒಂದೇ ಹಾರಕ್ಕೆ ಕೊರಳೊಡ್ಡಿರುವುದು ಹೇಗಿದೆಯೆಂದರೆ ಯುವಕ-ಯುವತಿ ಚುಂಬನ ಸುಖ ಅನುಭವಿಸಿದಂತಿದೆ - ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ.

 ಬಿಜೆಪಿ ಜತೆ ಸೇರಿ ನನ್ನ ಮಗ ವಾಮಮಾರ್ಗದಿಂದ ಮುಖ್ಯಮಂತ್ರಿ ಅದ. ನಾನು ಮುಂದಿನ ಜನ್ಮದಲ್ಲಾದರೂ ಮುಸ್ಲಿಂ ಆಗಿ ಹುಟ್ಟಬಯಸುತ್ತೇನೆ ಎಂದಿದ್ದ ದೇವೇಗೌಡರು ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿಗೆ ಪೌರೋಹಿತ್ಯ ವಹಿಸಿದ್ದಾರೆ.
- ಎಸ್.ಎಂ. ಕೃಷ್ಣ, ಕೇಂದ್ರದ ಮಾಜಿ ಸಚಿವ.

 ಅಪ್ಪ ಯಾರು, ಜಾತಿ ಯಾವುದು ಎಂದು ಗೊತ್ತಿಲ್ಲದ ರಮ್ಯಾ ಪ್ರಣಾಳಶಿಶು ಇದ್ದಂತೆ.
- ಶ್ರೀನಿವಾಸ್, ಜೆಡಿಎಸ್ ಮುಖಂಡ.

 ಬೋರೇಗೌಡ ನಮ್ಮ ತಾತ ಎನ್ನುವ ರಮ್ಯಾ ಅವರಿಗೆ ಅಪ್ಪನ ಹೆಸರೇಳಲು ಏನು ಕಷ್ಟ? ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್‌ನ ನ್ಯಾಪ್‌ಕಿನ್ ಇದ್ದಂತೆ.
- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

 ಕುಮಾರಸ್ವಾಮಿ ಮತ್ತು ರಾಧಿಕಾ ಸಂಬಂಧ ಏನು ಎಂದು ಅನಿತಾ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು.
- ಧನಂಜಯ, ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ.

ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಮರುಚುನಾವಣೆ ಹಿನ್ನೆಲೆಯಲ್ಲಿ ಘಟಾನುಘಟಿ ರಾಜಕೀಯ ಮುಖಂಡರು ಆಡುತ್ತಿರುವ ಮಾತುಗಳ ಸ್ಯಾಂಪಲ್ ಇದು. ಇದನ್ನು ಮಾತುಗಳು ಎನ್ನುವುದಕ್ಕಿಂತ ಒಬ್ಬರ ಮೇಲೊಬ್ಬರು ಸುರಿಯುತ್ತಿರುವ ಬಕೆಟ್‌ಗಟ್ಟಲೆ ಮಸಿಯ ತದ್ರೂಪು ಎನ್ನಬಹುದು. ಚುನಾವಣೆ ಪ್ರಚಾರದ ಗುಣಮಟ್ಟ ಎಲ್ಲಿಗೆ ಬಂದು ನಿಂತಿದೆ ಎನ್ನುವುದಕ್ಕೆ ಇದಕ್ಕಿಂತ ಉನ್ನತ ನಿದರ್ಶನ ಬೇಕೇ?
ಇಲ್ಲಿ ಯಾವ ಮಾತನ್ನು ಆಡಲಾಗಿದೆ? ಯಾವ ಶಬ್ದಗಳನ್ನು ಬಳಸಲಾಗಿದೆ ಎನ್ನುವುದಕ್ಕಿಂತ, ಈ ಮಾತುಗಳನ್ನು ಆಡಿರುವವರು ಯಾರು? ಅವರು ಅಲಂಕರಿಸಿದ್ದ ಹುದ್ದೆಗಳ ಘನತೆ-ಗೌರವ ಏನು? ಅವರ ಅನುಭವ ಏನು? ಎಂಬುದೇ ಮುಖ್ಯವಾಗುತ್ತದೆ. ಮಾಜಿ ಪ್ರಧಾನಿ, ಕೇಂದ್ರದ ಮಾಜಿ ಸಚಿವರಿಂದ ಹಿಡಿದು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಯವರೆಗೂ ಎಲ್ಲರೂ ಈ ವೈಯಕ್ತಿಕ ನಿಂದನೆ, ಅವಹೇಳನಗಳ ವಾರಸುದಾರರಾಗಿದ್ದಾರೆ. ಇಲ್ಲಿ ಒಂದು ಪಕ್ಷದ ತತ್ವ-ಸಿದ್ಧಾಂತಗಳು ಮಾತನಾಡುತ್ತಿಲ್ಲ. ಕಾರ್ಯಕ್ರಮಗಳು, ಯೋಜನೆಗಳು ಸ್ಧಾನ ಪಡೆದುಕೊಂಡಿಲ್ಲ. ತಾವು ಹಿಂದೆ ಮಾಡಿದ ಜನಪರ ಕೆಲಸಗಳು, ಭವಿಷ್ಯದ ಯೋಜನೆ, ಯೋಚನೆಗಳು ಠಳಾಯಿಸಿಲ್ಲ. ಆಚಾರ-ವಿಚಾರಗಳು ಚರ್ಚೆಯಾಗಿಲ್ಲ. ಆದರ್ಶದ ಮಾತುಗಳಿಲ್ಲ. ಪ್ರೇರಣೆಯ ಪ್ರಸ್ತಾಪವಿಲ್ಲ. ಬದಲಿಗೆ ತೀರಾ ಖಾಸಗಿ ವಿಚಾರಗಳು, ವೈಯಕ್ತಿಕ ಗುಣಾವಗುಣಗಳು ವಿಜೃಂಭಿಸಿವೆ. ಒಬ್ಬರು ಮತ್ತೊಬ್ಬರ ಮೇಲೆ ಕೆಸರು ಎರಚುವ ಭರದಲ್ಲಿ ತಮ್ಮ, ತಮ್ಮ ಕೈಗಳನ್ನು ಕೆಸರು ಮಾಡಿಕೊಂಡಿದ್ದಾರೆ. ಇನ್ನೊಬ್ಬರನ್ನು ಜರಿಯುವ ರಭಸದಲ್ಲಿ ತಮ್ಮ ಯೋಗ್ಯತೆ ಏನು ಎಂಬುದನ್ನು ಅನಾವರಣ ಮಾಡಿಕೊಂಡಿದ್ದಾರೆ. 'ಕುಲವಂ ಪೇಳ್ವುದು ನಾಲ್ಗೆ' ಎಂಬಂತೆ ಅವರ ಮಾತುಗಳೇ ಅವರ ವ್ಯಕ್ತಿತ್ವವನ್ನು ಎಲ್ಲರ ಮುಂದೆ ತೆರೆದಿಟ್ಟಿದೆ.
ಹಿಂದೆಲ್ಲ ಪ್ರಚಾರ ಭಾಷಣದ ವೈಖರಿಯೇ ಒಂದು ಚೆಂದ. ಕೇಳಲು ಕರ್ಣಾನಂದ. ಅದು ಮಾಜಿ ಪ್ರಧಾನಿ ಇಂದಿರಾಗಾಂಧಿ ಇರಬಹುದು, ಅಟಲ್‌ಬಿಹಾರಿ ವಾಜಪೇಯಿ ಇರಬಹುದು. ಮಧು ದಂಡವತೆ ಇರಬಹುದು, ಜಾರ್ಜ್ ಫರ್ನಾಡಿಸ್ ಇರಬಹುದು. ಅವರ ಭಾಷಣದ ಖದರ್ರೇ ಬೇರೆ. ಜನರನ್ನು ಸೂಜಿಗಲ್ಲಿನಂತೆ ಸೆಳೆವ ಮೋಡಿ ಅವರ ಮಾತುಗಳಲ್ಲಿ ಇರುತ್ತಿತ್ತು. ಇಂದಿರಾಗಾಂಧಿ ಹಾಗೂ ವಾಜಪೇಯಿ ಅವರ ಭಾಷಣಕ್ಕಂತೂ ಜನ ಮುಗಿ ಬೀಳುತ್ತಿದ್ದರು. ದೇಶದ ಪ್ರಗತಿ, ಜನಪರ ಕಾಳಜಿ, ಬಡವರು, ದೀನರ ಬಗ್ಗೆ ಮಮಕಾರ ಅವರ ವಿಚಾರಧಾರೆಯಲ್ಲಿ ತುಂಬಿ ತುಳುಕುತ್ತಿತ್ತು. ವೈಯಕ್ತಿಕ ನಿಂದನೆ, ಖಾಸಗಿ ವಿಚಾರಗಳಿಗೆ ಆಸ್ಪದ ಇರುತ್ತಿರಲಿಲ್ಲ. ವಾಜಪೇಯಿ ಅವರು ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾಷಣಕ್ಕೆ ನಿಂತರೆ ಜನ ನಿಬ್ಬೆರಗಾಗಿ ಗಂಟೆಗಟ್ಟಲೆ ಕಿವಿಯಾಗುತ್ತಿದ್ದರು. ಅವರು ಬಳಸುವ ಭಾಷೆ, ಪ್ರಯೋಗಿಸುವ ಪದ, ವಿಚಾರ, ತರ್ಕ, ವಿಮರ್ಶೆ, ವಿಶ್ಲೇಷಣೆಗೆ ತಲೆದೂಗುತ್ತಿದ್ದರು. ಕರ್ನಾಟಕದಲ್ಲಿ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಎಸ್.ಎಂ. ಕೃಷ್ಣ ಮಾತಿಗೆ ಒಂದು ತೂಕ ಇರುತ್ತಿತ್ತು. ಆದರೆ ಈಗ ಭಾಷಣದ ಪರಿ ಎಲ್ಲಿಗೆ ಬಂದು ನಿಂತಿದೆ ಎಂಬುದಕ್ಕೆ ಮೇಲೆ ಉಲ್ಲೇಖಿಸಿರುವ ನಿದರ್ಶನಗಳೇ ಸಾಕ್ಷಿ.
ದೇವೇಗೌಡರ ಮಾತನ್ನೇ ತೆಗೆದುಕೊಳ್ಳೋಣ. ಒಂದೊಮ್ಮೆ ಅವರು ಹೇಳಿರುವಂತೆ ಪಟೇಲರು ಸಿದ್ದರಾಮಯ್ಯನವರಿಗೆ ಪಾದರಕ್ಷೆಯೇ ತೋರಿಸಿದ್ದರು ಎಂದಿಟ್ಟುಕೊಳ್ಳೋಣ. ಅದನ್ನು ಬಹಿರಂಗಪಡಿಸದಿದ್ದರೆ ಗೌಡರು ಕಳೆದುಕೊಳ್ಳುವಂಥದ್ದು ಏನೂ ಇರಲಿಲ್ಲ. ಅದನ್ನು ಹೇಳಿದ್ದರಿಂದ ಗಳಿಸಿದ್ದೂ ಏನೂ ಇಲ್ಲ. ಹೇಳಿದ್ದಕ್ಕಿಂತ ಹೇಳದಿದ್ದರೆ ಮಾತಿನ ತೂಕ ಹೆಚ್ಚುತ್ತಿತ್ತು. ಅದೂ ಅಲ್ಲದೇ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಏಕವಚನದಲ್ಲಿ ಕಿತ್ತಾಡಿಕೊಂಡದ್ದು ಸರಿಯಲ್ಲ ಎನ್ನುವುದನ್ನು ಹೇಳುವಾಗಲೇ ಈ ವಿಚಾರವನ್ನೂ ಗೌಡರು ಅರುಹಿದ್ದು ಒಂದು ವಿಪರ್ಯಾಸವೇ ಸರಿ.
ಅದೇ ರೀತಿ ಸಿದ್ದರಾಮಯ್ಯನವರು ಗೌಡರಿಗೆ ಮದುವೆ ಊಟಕ್ಕಿಂತ ತಿಥಿ ಊಟವೇ ಚೆನ್ನಾಗಿ ರುಚಿಸುತ್ತದೆ ಎಂದು ಹೇಳುವ ಮೂಲಕ ಅವರಿಗಿಂತ ತಾವೇನೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಸಕಾರಾತ್ಮಕ ವಿಚಾರಗಳಲ್ಲಿ ಒಬ್ಬರು ಮತ್ತೊಬ್ಬರನ್ನು ಮೀರಿಸಬೇಕೇ ಹೊರತು ನಕಾರಾತ್ಮಕ ವಿಚಾರಗಳಲ್ಲಿ ಅಲ್ಲ. ಬೆಳವಣಿಗೆಯಲ್ಲಿ ಒಬ್ಬರು ಮತ್ತೊಬ್ಬರನ್ನು ಹಿಂದಿಕ್ಕಬೇಕೇ ವಿನಹ ಕುಸಿತದಲ್ಲಿ ಅಲ್ಲ. ಕೆಲವೊಮ್ಮೆ ಒಬ್ಬರ ಹೇಳಿಕೆಗೆ ಇನ್ನೊಬ್ಬರ ಪ್ರತಿಕ್ರಿಯೆ ಬೀರುವ ಪರಿಣಾಮಕ್ಕಿಂತ ಮೌನ ಮತ್ತು ಉದಾಸೀನ ಹೆಚ್ಚು ಮಾತನಾಡುತ್ತದೆ. ಪ್ರಖರ ಸಂದೇಶ ರವಾನಿಸುತ್ತದೆ.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಲು, ಸಾಲು ಸಮಸ್ಯೆಗಳು ಬೆನ್ನತ್ತಿ ಬಂದವು. ವೀರಪ್ಪನ್‌ನಿಂದ ವರನಟ ರಾಜ್‌ಕುಮಾರ್ ಅಪಹರಣ, ಮಾಜಿ ಸಚಿವ ನಾಗಪ್ಪ ಅಪಹರಣ ಮತ್ತು ಹತ್ಯೆ, ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್ ಛೀಮಾರಿ, ಇದೆಲ್ಲಕ್ಕೂ ಕಳಸವಿಟ್ಟಂತೆ ಸತತ ನಾಲ್ಕು ವರ್ಷ ಕಾಡಿದ ಬರಗಾಲ ಕೃಷ್ಣ ಅವರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿತ್ತು. ಆಗೆಲ್ಲ ಪ್ರತಿಪಕ್ಷಗಳು ಪ್ರಯೋಗಿಸಿದ ನಾನಾ ಟೀಕಾಸ್ತ್ರಗಳಿಗೆ ಕೃಷ್ಣ ಅವರ ಮಿತಭಾಷೆ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಮೌನ ಹೆಚ್ಚಿನ ಉತ್ತರ ಕೊಟ್ಟಿತ್ತು. ಅವರು ಎಂದಿಗೂ ಹೆಚ್ಚು ಮಾತಾಡಿದವರಲ್ಲ. ವ್ಯಕ್ತಿಗತ ನಿಂದನೆಗೆ ಇಳಿದವರಲ್ಲ. ಆದರೆ ಅದೇ ಕೃಷ್ಣ ಇದೀಗ ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಮಾಡಿರುವ ಪ್ರತಿಕ್ರಿಯಾತ್ಮಕ ಟೀಕೆಯಲ್ಲಿ ತಮ್ಮ ಎಂದಿನ ಘನತೆ-ಗೌರವ ಲೀನ ಮಾಡಿದ್ದಾರೆ. ಅವರು ಆಡಿರುವುದು ಆಡಬಾರದ ಮಾತಲ್ಲವಾದರೂ ಅವರ ರೂಢಿಯನ್ನು ಮೀರಿದ್ದಾಗಿದೆ. ಹೀಗಾಗಿಯೇ ಎಲ್ಲರ ಹುಬ್ಬೇರಿಸಿದೆ.
ಒಂದು ಪಕ್ಷಕ್ಕೆ ಹೇಳಿಕೊಳ್ಳಲು ಏನೂ ಇಲ್ಲದಿದ್ದರೆ, ಪ್ರತಿಪಾದಿಸಲು ಯಾವುದೇ ತತ್ವ-ಸಿದ್ದಾಂತಗಳೂ ನಿಲುಕದಿದ್ದರೆ, ಆಯಾ ಪಕ್ಷಗಳು ಅಧಿಕಾರದಲ್ಲಿದಾಗ ಮಾಡಿರುವ ಕೆಲಸಗಳು ಹೆಚ್ಚು ಸೌಂಡ್ ಮಾಡದಿದ್ದರೆ ಆಗ ವೈಯಕ್ತಿಕ ಟೀಕೆ-ಟಿಪ್ಪಣಿಗಳು ಪಾಪಸ್ತ್ರವಾಗುತ್ತವೆ. ಖಾಸಗಿ ಬದುಕಿನ ವಿಚಾರಗಳು ಅವರ ಜಿಹ್ವಾ ಚಾಪಲ್ಯ ನೀಗಿಸುತ್ತವೆ. ನಟಿ ರಮ್ಯಾ ಹಾಗೂ ಕುಮಾರಸ್ವಾಮಿ ವೈಯಕ್ತಿಕ ಬದುಕಿನ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ಮುಖಂಡರು ಪರಸ್ಪರ ಮಾಡುತ್ತಿರುವ ಟೀಕೆಗಳು ಕೀಳುಮಟ್ಟಕ್ಕಿಂತ ಮಿಗಿಲಾದ ಕುಸಿತ ಕಂಡಿವೆ. ರಮ್ಯಾ ಜಾತಿ ಯಾವುದು ಮತ್ತು ತಂದೆ ಯಾರು ಎಂಬುದು ಪ್ರಚಾರಕ್ಕೆ ವಸ್ತುವಾಗಿರುವುದು ಹೀನಾತಿ ಹೀನ ಸಂಪ್ರದಾಯ. ಜಾತಿ ಆಧಾರದ ಮೇಲೆ ಮತದಾರರನ್ನು ಎತ್ತಿ ಕಟ್ಟುವ ಹುನ್ನಾರ ಇದರ ಹಿಂದಿದೆ. ಅವರ ತಂದೆ ಕಟ್ಟಿಕೊಂಡು ಮತದಾರರಿಗೆ ಏನಾಗಬೇಕಿದೆ? ಅವರ ತಂದೆ ಮುಖ ನೋಡಿ ವೋಟ್ ಮಾಡುತ್ತಾರೆಯೇ? ಅಲ್ಲಿ ರಮ್ಯಾ ವಿರುದ್ಧ ನಿಂತಿರುವ ಜೆಡಿಎಸ್‌ನ ಪುಟ್ಟರಾಜು ತಂದೆ ನೋಡಿ ಮತ ಹಾಕುತ್ತಾರೆಯೇ? ಅಭ್ಯರ್ಥಿ ಹಾಗೂ ಅವರು ಪ್ರತಿನಿಧಿಸುವ ಪಕ್ಷ ಮಾತ್ರ ಗಣನೆಗೆ ಬರುತ್ತದೆ ಅಲ್ಲವೇ? ರಮ್ಯಾ ಅಪ್ಪನ ಬಗ್ಗೆ ಪಿಎಚ್‌ಡಿ ಮಾಡಿ, ಡಾಕ್ಟರೇಟ್ ಪಡೆಯುವ ತವಕ ಇವರಿಗೇಕೆ?
ಅದೇ ರೀತಿ ಕಾಂಗ್ರೆಸ್‌ನವರು ಕುಮಾರಸ್ವಾಮಿ-ರಾಧಿಕಾ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡುವಂತೆ ಅನಿತಾ ಕುಮಾರಸ್ವಾಮಿ ಅವರಿಗೆ ದುಂಬಾಲು ಬಿದ್ದಿದ್ದಾರೆ. ಪಾಪ, ಏನು ಕೆಟ್ಟ ಕುತೂಹಲ ಇವರದು? ಮೊದಲಿಗೆ ಆ ಸಂಬಂಧದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೇ-ಬೇಡವೇ ಎಂಬುದು ಅನಿತಾ ಅವರಿಗೆ ಬಿಟ್ಟದ್ದು. ಅವರಿಗೆ ತಲೆ ಕೆಡಿಸಿಕೊಳ್ಳಿ ಎಂದು ಫರ್ಮಾನು ಹೊರಡಿಸಲು ಇವರು ಯಾರು? ಅವರ ಖಾಸಗಿ ಬದುಕು ಇವರಿಗೇಕೆ ಬೇಕು? ಎಲ್ಲಕ್ಕೂ ಮಿಗಿಲಾಗಿ ಇದರಿಂದ ಕಾಂಗ್ರೆಸ್ ಮುಖಂಡರು ಕಳೆದುಕೊಂಡಿರುವುದಾದರೂ ಏನು? ಈಗಾಗಲೇ ಈ ಪ್ರಕರಣ ಕೋರ್ಟ್‌ನಲ್ಲಿ ಇತ್ಯರ್ಥ ಆಗಿದೆ. ಆದರೂ ಕಾಂಗ್ರೆಸ್ ಮುಖಂಡರಿಗೆ ಬಾಯಿ ಚಪಲ.
ಹೌದು, ಒಬ್ಬ ವ್ಯಕ್ತಿಯ ಟೀಕೆಗೆ ಅನ್ಯ ವಿಷಯಗಳು ಸಿಗದೇ ಹೋದಾಗ ಈ ರೀತಿ ವೈಯಕ್ತಿಕ ವಿಚಾರಗಳನ್ನು ಮುಂದೊಡ್ಡಿ ಮತಭಿಕ್ಷೆ ಕೇಳುವುದು ಆ ಪಕ್ಷಗಳಿಗೆ ಇರುವ ವಿಶ್ವಾಸದ ಕೊರತೆಯ ದ್ಯೋತಕ. ತಮ್ಮ ನ್ಯೂನ್ಯತೆಗಳಿಂದ ಮತದಾರರ ಗಮನವನ್ನು ಬೇರೆಡೆ ಸೆಳೆಯಲು ಇಂಥ ಕೀಳು ಮಟ್ಟದ ಪ್ರಚಾರಕ್ಕೆ ಇಳಿಯುತ್ತವೆ. ಇದಕ್ಕೆ ರಮ್ಯಾ ಆಗಲಿ, ಅನಿತಾ ಕುಮಾರಸ್ವಾಮಿ ಆಗಲಿ ಹೊಣೆಯೂ ಅಲ್ಲ, ಉತ್ತರದಾಯಿಗಳೂ ಅಲ್ಲ.
ತತ್ವ-ಸಿದ್ದಾಂತಗಳ ಬದಲು ವ್ಯಕ್ತಿಗತ ವಿಚಾರಗಳು ಮುಖ್ಯವಾಗಲು ಇಲ್ಲಿ ಇನ್ನೂ ಒಂದು ಕಾರಣವಿದೆ. ಈ ಚುನಾವಣೆ ಹೋರಾಟ ನಡೆಯುತ್ತಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆದರೂ ಇದು ದೇವೇಗೌಡ ಕುಟುಂಬ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವಣ ಸಂಘರ್ಷ ಎಂದೇ ಗುರುತಿಸಿಕೊಂಡಿದೆ. ಹೇಗಾದರೂ ಮಾಡಿ ಸಿದ್ದರಾಮಯ್ಯನವರನ್ನು ಮಣಿಸಬೇಕೆಂದು ಜೆಡಿಎಸ್ ಸಾಧ್ಯವಿರುವ ಎಲ್ಲ ತಂತ್ರಗಳ ಮೊರೆ ಹೋಗಿದ್ದು, ಬಿಜೆಪಿ ಕೂಡ ಕೈ ಜೋಡಿಸಿದೆ. ಸಿದ್ದರಾಮಯ್ಯ ಮತ್ತು ದೇವೇಗೌಡ ಇಪ್ಪತ್ತೈದು ವರ್ಷ ಒಟ್ಟಿಗೆ ರಾಜಾಕಾರಣ ಮಾಡಿದವರು. ಗೌಡರ ಗರಡಿಯಲ್ಲಿ ಸಿದ್ದರಾಮಯ್ಯನವರು ಚೆನ್ನಾಗಿಯೇ ಪಳಗಿದ್ದಾರೆ. ಒಬ್ಬರ ವೈಯಕ್ತಿಕ ವಿಚಾರಗಳು ಮತ್ತೊಬ್ಬರಿಗೆ ಚೆನ್ನಾಗಿಯೇ ಗೊತ್ತು. ಒಟ್ಟಿಗೆ ಇರುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಈಗ ಇಬ್ಬರು ಬೇರೆ-ಬೇರೆ ಆಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಚುನಾವಣೆ ಪ್ರಚಾರದಲ್ಲಿ ಪಕ್ಷ ಆಧರಿತ ವಿಚಾರಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಸಂಗತಿಗಳೇ ತುಂಬಿವೆ. ಅದರೊಳಗೆ ರೋಷ-ದ್ವೇಷ ಮಡುಗಟ್ಟಿದ್ದು, ಎರಡು ಪಕ್ಷಗಳ ಬೇರೆ-ಬೇರೆ ನಾಯಕರ ಬಾಯಲ್ಲಿ ವಿಭಿನ್ನವಾಗಿ ಹೊರಹೊಮ್ಮುತ್ತಿವೆ. ಆದರೆ ಮೂಲಭಾವ ಒಂದೇ. ಅದುವೇ ವೈಷಮ್ಯ. ಹೀಗಾಗಿ ಚುನಾವಣೆ ಪ್ರಚಾರ ಅನಾರೋಗ್ಯಕರ ಹಾದಿ ಹಿಡಿದಿದೆ. ಇಂಥ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ನಾಯಕರೇ ಅದಕ್ಕೆ ಕಡಿವಾಣ ಹಾಕಬೇಕಾದ ಸ್ಥಾನದಲ್ಲೂ ಇರುವುದು ಪರಿಸ್ಥಿತಿಯ ವೈಪರಿತ್ಯ.
ಲಗೋರಿ: ಯಾವುದೇ ವ್ಯಕ್ತಿ ತನ್ನ ಸಾಧನೆಯಿಂದ ಶಕ್ತಿವಂತನಾಗಬೇಕೇ ಹೊರತು ಅನ್ಯರ ದೌರ್ಬಲ್ಯದಿಂದಲ್ಲ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.