ಅಂಕಣಗಳು

ರೋಗಗ್ರಸ್ತ ರಾಜ್ಯದಲ್ಲಿ ಗೆದ್ದವರಾರು?

ಕೇರಳ ಹಲವಾರು ವರ್ಷಗಳಿಂದ ರೋಗಗ್ರಸ್ತವಾಗಿದೆ. ಅದಕ್ಕೆ ತಗುಲಿರುವುದು ರಾಜಕೀಯ ರೋಗ. ಸಾಂಪ್ರದಾಯಿಕ ಶಕ್ತಿಗಳು ಮೆಲ್ಲಗೆ ಅಲ್ಲಿ ಜಾಗ...

Published On :

ಕೇರಳ ಹಲವಾರು ವರ್ಷಗಳಿಂದ ರೋಗಗ್ರಸ್ತವಾಗಿದೆ. ಅದಕ್ಕೆ ತಗುಲಿರುವುದು ರಾಜಕೀಯ ರೋಗ. ಸಾಂಪ್ರದಾಯಿಕ ಶಕ್ತಿಗಳು ಮೆಲ್ಲಗೆ ಅಲ್ಲಿ ಜಾಗ ಕಳೆದುಕೊಳ್ಳುತ್ತಿರುವ ವೇಳೆಯಲ್ಲೇ ಹೊಸ ಶಕ್ತಿಗಳು ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿವೆ. ಕಳೆದ ವಾರ ಅಲ್ಲಿ ನಡೆದ ಪ್ರತಿಭಟನೆಯೊಂದು ಕೇರಳದ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿತು. ತ್ರಿವೇಂದ್ರಂನಲ್ಲಿ ಜನಸಾಗರವೇ ಸೇರಿತ್ತು. ಮುಖ್ಯಮಂತ್ರಿಗಳು, ತಮ್ಮ ಕಚೇರಿಯನ್ನು ಸುತ್ತಿಕೊಂಡಿರುವ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಡಪಕ್ಷಗಳು ಆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. ಆಶ್ಚರ್ಯವೆಂದರೆ ಸಾಗರೋಪಾದಿಯಲ್ಲಿ ಜನ ನೆರೆದಿದ್ದರೂ ಪ್ರತಿಭಟನೆ, ಶಾಂತವಾಗಿ, ವ್ಯವಸ್ಥಿತವಾಗಿ ನಡೆಯಿತು. ಒಂದು ಚಿಕ್ಕ ಕಿಡಿ ಹತ್ತಿದ್ದರೆ ಯಾವ ಅನಾಹುತವಾಗುತ್ತಿತ್ತೋ ಏನೋ, ಆದರೆ ಪುಣ್ಯಕ್ಕೆ ಎಡಪಕ್ಷಗಳು ಅಂಥ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದವು. ಸಚಿವಾಲಯವನ್ನು 36 ಗಂಟೆಗಳವರೆಗೆ ಸುತ್ತುವರಿದಿದ್ದ ಎಡಪಕ್ಷಗಳ ನಾಯಕರು, ಕೊನೆಗೆ ತಮ್ಮ ಕಾರ್ಯಕರ್ತರನ್ನು ಮನೆಗೆ ಕಳುಹಿಸಿದರು. ಹಾಗಿದ್ದರೆ ಅಲ್ಲಿ ನಡೆದದ್ದೇನು?
ಕೇರಳದ ರಾಜಕೀಯ ನಾಟಕರಂಗದಲ್ಲಿ, ಕೆಲವೊಮ್ಮೆ ಏನಾಗಬೇಕೋ ಅದು ಆಗಿರುವುದಿಲ್ಲ ಮತ್ತು ಏನಾಗಬಾರದಿತ್ತೋ ಅದೇ ಆಗಿರುತ್ತದೆ. ಹಾಗಾಗೇ ಎರಡೂ ಕಡೆಯವರೂ ಗೆದ್ದರು ಮತ್ತು ಸೋತರು ಎಂದೇ ಹೇಳಬೇಕು. ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದರಿಂದ ಎಡಪಕ್ಷಗಳು ಗೆದ್ದವು, ಆದರೆ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ ಅವು ಸೋತವು! ಎಡ ಪಕ್ಷಗಳ ಮುಖ್ಯ ಬೇಡಿಕೆ ಮುಖ್ಯಮಂತ್ರಿಗಳ ರಾಜಿನಾಮೆಯೇ ಆಗಿತ್ತಾದರೂ, ಅದು ಸಿಗಲಿಲ್ಲ. ಇನ್ನೊಂದೆಡೆ ಮುಖ್ಯಮಂತ್ರಿ ಚಾಂಡಿ ಅವರು ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರಾದರೂ, ಆ ವಿಷಯದಲ್ಲಿ ಅವರು ಸೋಲುಂಡಿದ್ದಾರೆ ಎನ್ನುವ ಹಾಗೂ ಇಲ್ಲ. ಏಕೆ ಎಂದು ವಿವರಿಸುವ ಅಗತ್ಯ ಇಲ್ಲವೆಂದುಕೊಳ್ಳುತ್ತೇನೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಅಧಿಕಾರದಲ್ಲಿದ್ದವರ ಪರ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂಥದ್ದೇ ಅಲ್ಲವೇ? ಈ ವಿಷಯದಲ್ಲಂತೂ ಚಾಂಡಿಯವರ ಚಾಲಾಕಿತನ ತನ್ನ ಮೇರು ಮಟ್ಟವನ್ನು ಮುಟ್ಟಿತ್ತು ಎನ್ನಲೇಬೇಕು.
ಇಲ್ಲಿ ಪಡೆದ ಗೆಲುವುಗಳೆಲ್ಲದ್ದರ ಹಿಂದೆ ಚಾಲಾಕಿತನವಿತ್ತು. ಆದರೆ ಈ ವಿಷಯದ ಆಳಕ್ಕಿಳಿದು ನೋಡಿದಾಗ, ಇದರಿಂದ ಹೇಗೆ ಮುಖ್ಯಮಂತ್ರಿಗಳಿಗೆ ಮತ್ತು ಎಡಪಕ್ಷಗಳಿಗೆ ಲುಕ್ಸಾನಾಗಿದೆ ಎನ್ನುವುದು ಕಾಣುತ್ತದೆ. ಕಾಂಗ್ರೆಸ್ ಪಕ್ಷದ ಕೆಲವು ಪ್ರಮುಖರು ಮತ್ತು ಮಿತ್ರಪಕ್ಷಗಳು ಚಾಂಡಿಯವರ ವಿರುದ್ಧ ಸಾರ್ವಜನಿಕವಾಗೇ ಘರ್ಜಿಸಿವೆ. ಕೇಂದ್ರ ಸಶಸ್ತ್ರಪಡೆಗಳನ್ನು ಕರೆಸಿ ನಗರಗಳ ಕಾಲೇಜುಗಳ ಮುಂದೆ ನಿಲ್ಲಿಸಿದ್ದು, ಹೊಟೆಲ್, ಯಾತ್ರಿಕ ಕೇಂದ್ರಗಳು ಮತ್ತು ಟ್ಯಾಕ್ಸಿ ಸೇವೆಗಳಿಗೆ 'ವಿಸಿಟರ್‌ಗಳಿಗೆ ಸೇವೆ ನೀಡಬಾರದೆಂದು' ರಹಸ್ಯ ಹಾಗೂ ಏಕಪಕ್ಷೀಯ ಆದೇಶ ನೀಡಿದ್ದು ಬಹಳಷ್ಟು ಜನರಿಗೆ ಸರಿಬರಲಿಲ್ಲ. ಕೇರಳ ಕಾಂಗ್ರೆಸ್‌ನ ಚುನಾವಣಾ ಹಾದಿ ಈಗಂತೂ ಹಳ್ಳ ಹಿಡಿದಿದೆ. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಹೈಕಮಾಂಡ್ ಕೂಡಲೇ ಮುಂದಾಗದಿದ್ದರೆ, ಪರಿಸ್ಥಿತಿ ಇನ್ನೂ ಹದಗೆಡುವುದರಲ್ಲಿ ಸಂಶಯವಿಲ್ಲ.
ಆದರೆ ಪ್ರತಿಭಟನೆ ಮಾಡಿದ ಎಡಪಕ್ಷಗಳಿಗೂ ಹಿನ್ನಡೆಯಾಗಿದೆ. ಅದರಲ್ಲೂ ಎಲ್ಲರಿಗಿಂತ ಸಿಪಿಎಮ್ ಪಕ್ಷಕ್ಕೆ ಹೆಚ್ಚು ಹಾನಿಯಾಗಿದೆ. ಇಂಥ ಬೃಹತ್ ಪ್ರತಿಭಟನೆಯನ್ನು ಏಕಾಏಕಿ ನಿಲ್ಲಿಸಿದ್ದೇಕೆ? ಬಹುಶಃ ಸಿಪಿಎಮ್ ಮತ್ತುಸರ್ಕಾರದ ನಡುವೆ ಏನೋ ಒಳಒಪ್ಪಂದವಾಗಿರಬಹುದೇ ಎಂದು ಸಂಶಯ ಎಲ್ಲೆಡೆಯೂ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವೆನ್ನುವಂಥ ಹಲವಾರು ಮಾಹಿತಿಗಳೂ ಮೆಲ್ಲಗೆ ವಿವಿಧ ರೂಪದಲ್ಲಿ ಹೊರಬರುತ್ತಿವೆ. ಮುಖ್ಯಮಂತ್ರಿ ಕಾರ್ಯಾಲಯದ ಪ್ರವೇಶಕ್ಕೆ ನಾಲ್ಕು ಗೇಟುಗಳಿವೆ. ಪ್ರತಿಭಟನೆಗೂ ಮುನ್ನ ಎಡಪಕ್ಷಗಳು ನಾಲ್ಕೂ ಗೇಟುಗಳನ್ನು ಮುತ್ತಿಗೆ ಹಾಕುವುದಾಗಿ ಹೇಳಿದವಾದರು, ಕೊನೆಗೆ ಅವು ಸುತ್ತುವರಿದದ್ದು ಕೇವಲ 3 ಗೇಟುಗಳನ್ನು ಮಾತ್ರ. ಇನ್ನೊಂದು ಗೇಟಿಗೆ ಪೊಲೀಸ್ ಬಂದೋಬಸ್ತ್ ಇತ್ತು. ಅಲ್ಲಿಂದ ಸರಾಗವಾಗಿ ಸರ್ಕಾರದ
ಶಾಸಕರು, ಅಧಿಕಾರಿಗಳು ಓಡಾಡುತ್ತಿದ್ದರು! ಇನ್ನೊಂದು ಗೇಟನ್ನು ಖುಲ್ಲಾ ಬಿಟ್ಟಿದ್ದೇಕೆ ಎನ್ನುವ ಬಗ್ಗೆ ಯಾರೂ ಉಸಿರೆತ್ತುತ್ತಿಲ್ಲ. ಅಲ್ಲದೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಕಾರಣಗಳೂ ಸ್ಪಷ್ಟವಾಗುತ್ತಿಲ್ಲ. ಹಾಗಿದ್ದರೆ ಅಲ್ಲಿ ಏನು ನಡೆಯಿತು?
ಕೇರಳದ ಪ್ರಸಕ್ತ ಪರಿಸ್ಥಿತಿ ಇದಕ್ಕೊಂದು ಉತ್ತರ ಕೊಡುತ್ತದೆ. ಒಂದೊಮ್ಮೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದ್ದ ಈ ರಾಜ್ಯ ಈಗ ಅದೇ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಕೇರಳದ ನೂರಾರು ನದಿಗಳು ಇಂದು ಮರಳು ಮಾಫಿಯಾದ ಉಪಟಳದಿಂದ ಕಾಣೆಯಾಗುತ್ತಿವೆ. ರೋಗಗಳು ಹೆಚ್ಚಾಗುತ್ತಿವೆ, ಕೃಷಿ ಕಂಗಾಲಾಗಿದೆ. ಇನ್ನು ಮೊದಲಿನಿಂದಲೂ ಕೇರಳದಲ್ಲಿ ರಸ್ತೆಗಳು ಕೆಟ್ಟದಾಗೇ ಇದ್ದವಾದರೂ ಈಗ ಅವುಗಳ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಹಲವಾರು ಬಸ್ ಕಂಪನಿಗಳು ಈಗ ಸ್ಟ್ರೈಕ್ ಮಾಡುತ್ತಿವೆ. ಒಳ್ಳೆಯದು ಕೆಟ್ಟದಾಗುತ್ತಿರುವ, ಕೆಟ್ಟದ್ದು ಇನ್ನಷ್ಟು ಹದಗೆಡುತ್ತಿರುವ ಸಂದರ್ಭದಲ್ಲಿ ಸೋತವರ್ಯಾರು, ಗೆದ್ದವರ್ಯಾರು? ಹಾಗೆ ನೋಡಿದರೆ ರೋಗಗ್ರಸ್ತ ರಾಜ್ಯದಲ್ಲಿ ಎಲ್ಲರೂ ಸೋತವರೇ!

ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.