ಮನೆಗೆ ಬಾ ಅತಿಥಿ ಅಂದ್ರೆ ಯಾರ್ದು ತಿಥಿ ಅಂತ ಕೇಳಿದ್ರಂತೆ
ನಾ ಬೆಂಕಿಯಂತೆ ನೀ ಗಾಳಿಯಂತೆ, ಈ ಜೋಡಿ ಮುಂದೆ ವೈರಿ ನಿಲ್ಲುವನೇ..?
ನಾ ಬೆಂಕಿಯಂತೆ ನೀ ಗಾಳಿಯಂತೆ, ಈ ಜೋಡಿ ಮುಂದೆ ವೈರಿ ನಿಲ್ಲುವನೇ..? ಅಂತೇಳಿ ಹಾಡ್ಕಂಡು ಬಂದು ವುಸ್ಸಪ್ಪ ಅಂತ ಕೂತ್ರು ಮಾಜಿ ಸಿಯೆಮ್ಮು ಯಡೂರಪ್ನೋರು.
'ನಾನು ನೀನು ಜೋಡಿ, ರಾಜ್ಕೀಯದಾಗೆ ಟೇಮು ನೋಡಿ ಬುಡ್ರಿ ಗಾಡಿ' ಅಂತ ಯೋಳ್ಕಂಡು ಇನ್ನೊಬ್ಬ ಮಾಜಿ ಸಿಯೆಮ್ಮು ಕುಮಾರಣ್ಣೋರೂವೆ ಬಂದ್ರು. 'ಹೆಂಗದೆ ಸಿವಾ ನಮ್ ಹಾಡು ? ಯಾವಾಗ್ಲೋ ಅಣ್ಣೋರು ಸಿನ್ಮಾದಾಗೆ ನೋಡಿದ್ದು. ನಾವು ವೊಂದಾದ್ಮೇಕೆ ಗೆಪ್ತಿಗೆ ಬಂತು ನೋಡಿ' ಅಂದ್ರು ಯಡೂರಪ್ನೋರು.
'ಏನರ ಆಗ್ಲಿ, ನೀವು ಹಾಡೂನೂವೆ ಸಂದಾಕಿ ಹಾಡ್ತೀರಪ್ಪ. ಯಾವಾಗ್ಲಾದ್ರೂವೆ ಸಿನ್ಮಾದಾಗೆ ಹಾಡ್ಕಂಡಿದ್ರೇನು?' ಅಂತ ಕೇಳುದ್ರು ಕುಮಾರಣ್ಣ. 'ತೆಗೀರಿ ಅತ್ಲಾಗೆ, ಸುಡ್ಗಾಡು ರಾಜ್ಕೀಯ ಮಾಡ್ಕಂಡು ಸಿನ್ಮಾಗಿನ್ಮಾ ಅಂತೇಳಿ ತಲೆ ಕೆಡಿಸ್ಕಳಕ್ಕೆ ಟೇಮು ಎಲ್ಲಿತ್ತು ಕಣೇಳಿ. ನೀವು ರಾಜ್ಕೀಯದ ಜೊತ್ಗೆ ಸಿನ್ಮಾನೂವೆ ಮಾಡ್ಬುಟ್ಟು ಪ್ರೊಡ್ಯುಸರ್ ಬ್ಯಾರೆ ಆಬುಟ್ರಿ. ನಮ್ಗೆ ಎಲ್ಲದೆ ಆ ನಸೀಬು. ಅದ್ರೂ ನಾವು ಕಲಾವಿದ್ರು ಬುಡಿ' ಅಂದ್ರು ಯಡೂರಪ್ನೋರು. 'ನೀವು ಏನರ ಯೋಳಿ ನಾವಿಬ್ರೂವೆ ಕಿಂಗು. ಬನ್ನಿ ಹಂಗೇ ಮಾಡ್ಕಂಡು ಬರಾವ ವಾಕಿಂಗು' ಅಂತ ಯೋಳ್ಬುಟ್ಟು ಯಡೂರಪ್ನೋರು ಕುಮಾರಣ್ಣುನ್ನ ಕರ್ಕಂಡು ವೊಂಟ್ರು. ದಾರಿನಾಗೆ ನಮ್ ಮೈಲಾರಿ 'ಕೆಂಪಾದವೋ ಎಲ್ಲ ಕೆಂಪಾದವೋ' ಅಂತೇಳ್ಕಂಡು ಅಡ್ಡ ಬಂದೋಬುಟ್ಟ. 'ಸುಭ ಕಾರ್ಯಕ್ಕೆ ವೋಗೋ ಟೇಮ್ನಾಗೆ ಅಡ್ಡ ಬರೋ ಬೆಕ್ನಂಗೆ ಬಂದ್ಬುಟ್ಟಲ್ಲೋ ಬೇವಾರ್ಸಿ ಮುಂಡೇದೆ. ತೆಗೀಲಾ ನಿನ್ ಮಖ ಅತ್ಲಾಗೆ' ಅಂತೇಳಿ ಯಡೂರಪ್ನೋರು ಸ್ಯಾನೆ ಸೀರಿಯಸ್ಸಾಗಿ ಬೈದಾಕ್ಬುಟ್ರು. 'ಅದೇ ಮತ್ತೆ ಬ್ಯಾಡ ಅನ್ನೋದು. ಏನೋ ನಿಮ್ಮುನ್ನ ನೋಡ್ಕಂಡು, ನಾಲ್ಕು ಮಾತು ಮಾತಾಡುಸ್ಕಂಡು ವೋಗಾಣ ಅಂತ ಬಂದ್ರೆ ಹಿಂಗಾ ಬಯ್ಯಾದು ವೋಗೋಗ್ರಿ' ಅಂತ ಮೈಲಾರಿನೂವೆ ಕೆಂಡ ಅಬುಟ್ಟ. 'ಅಲ್ಲಲೇ ಮೈಲಾರಿ ಏನಲಾ ಕೆಂಪಗೆ ಆಗಿದ್ದು ?' ಅಂತ ಯಡೂರಪ್ನೋರು ಕೇಳುದ್ರು. 'ಮೈಸೂರು ಪ್ರೋಗ್ರಾಂನಾಗೆ ಕುಮಾರಣ್ಣ ನಿಮ್ ಕಿವ್ಯಾಗೆ ಏನೋ ಯೋಳ್ತಾಯಿದ್ರು. ಟೀವಿನಾಗೆ ನೋಡ್ತಾಯಿದ್ದೆ. ಅವ್ರು ಕಿವಿ ಕಚ್ಚೋವಾಗ ನಿಮ್ ಕೆನ್ನೆ ರೆಡ್ ಆಬುಟ್ಟಿತ್ತು ಅಂತೀನಿ. ನೀವ್ ಆ ಪಾಟಿ ರೆಡ್ ರೆಡ್ ಆಗಿದ್ದುನ್ನ ನಮ್ಮಪ್ಪನಾಣ್ಗೂ ನೀವು ಸಿಎಂ ಆದಾಗ್ಲೂವೆ ನೋಡಿಲ್ಲ ಕಣೇಳಿ ಏನ್ ಇಸ್ಯ ?' ಅಂದ ಮೈಲಾರಿ. 'ಪ್ಯಾರ್ಗೆ ಅಬುಟ್ಟದೆ ಕಣಲೇ' ಅಂದ್ರು ಯಡೂರಪ್ನೋರು. 'ವಸಿ ಮೆತ್ಗೆ ಯೋಳಿ ಸಿವನೇ, ಯಾರರ ಕೇಳುಸ್ಕಂಡ್ರೆ ತೆಪ್ಪು ತಿಳ್ಕಂಬುಡ್ತರೆ' ಅಂತೇಳ್ದ ಮೈಲಾರಿ. 'ಲೇ, ಪ್ಯಾರ್ಗೆ ಆಬುಟ್ಟದೆ ಅಂದ್ರೆ ಆ ಥರುಕ್ಕೆ ಅಲ್ಲಲೇ, ಅವ್ರು ಮ್ಯಾಲೆ ನಂಗೆ ಪ್ರೀತಿ, ವಿಶ್ವಾಸ ಬಂದೋಗದೆ ಅಂತ ಅರ್ಥ ತಿಳೀತಾ ?' ಅಂದ್ರು ಯಡೂರಪ್ನೋರು.
'ಅಲ್ಲ ಸಾ, ದ್ಯಾವೇಗೌಡ್ರು ಪಕ್ಸುದೋರು ನಮ್ ಕೈನಾಗೆ ಅಧಿಕಾರ ಮಡುಗ್ದೆ ಚಿಪ್ಪು ಮಡ್ಗುದ್ರು ಅಂತೇಳಿ ವೂರೂರು ತಿರುಕ್ಕಂಡು ಸಂಖ ವೊಡುದ್ರಿ. ಜನ ವೋಗ್ಲಿ ಪಾಪ ಅಂತೇಳಿ ನಿಮ್ಮುನ್ನ ಪವರ್ಗೆ ತಕ್ಕಂಬಂದು ಕೂರ್ಸುದ್ರು. ಈವಾಗ ಪ್ಲೇಟು ತಿರಿಗಿಸ್ಕಂಡು ಕೂತಿದ್ದೀರಿ. ನೀವು, ಕುಮಾರಣ್ಣ ವೋಡಾಡೋದೇನು, ವೊಂದೇ ಹಾರುಕ್ಕೆ ಕೊಳ್ಳು ಮಡ್ಗದೇನು. ಅಬ್ಬಬ್ಬ, ಅದೇನು ಲವ್ವು, ಡವ್ವು ಬಂದೋಗದೆ. ಜನ ಏನಂದಾರು ಅನ್ನೋ ಭಯ ಐತಾ ನಿಮ್ಗೆ ?' ಅಂತೇಳಿ ಮೈಲಾರಿ ಕೇಳ್ದ. 'ಜನ ಎಂಜಾಯ್ ಮಾಡ್ತರೆ ಬುಡಲೇ, ಆ ಸಿಯೆಮ್ಮು ಸಿದ್ರಾಮಣ್ಣ ನಮ್ಗೂ ಎನಿಮಿ, ಕುಮಾರಣ್ಣಂಗೆ ದೊಡ್ಡ ಎನಿಮಿ. ಸತ್ರುವಿನ ಸತ್ರು ಮಿತ್ರ ಅನ್ನಲ್ವಾ ? ಅದುಕ್ಕೆ ಕಣ್ಲಾ ಪೆವಿಕಾಲು ಹಾಕ್ಕಂಡು ಕೈ ಜೋಡಿಸ್ಕಂಬುಟ್ಟಿದ್ದೀವಿ. ಹಳೇದೆಲ್ಲಾನೂವೆ ಮರ್ತೋಗದೆ. ನೀನು ರಿಕಾರ್ಡು ಹಾಕಿ ಹಾಕಿ ಅದನ್ನ ಗೆಪ್ತಿ ಮಾಡುಸ್ಬೇಡ. ವೋಗತ್ತಗೆ' ಅಂತೇಳಿ ಯಡೂರಪ್ನೋರು ಬೈದಾಕುದ್ರು. 'ವೋ, ಏನರ ಮಾಡ್ಕಳಿ. ನಂಗೇನು ? ಅಲ್ಲ, ಇತ್ತಿತ್ನಾಗೆ ತಿಥಿ ವೂಟ ಸ್ಯಾನೆ ಪೇಮಸ್ಸು ಆಗೋಬುಟ್ಟದೆ. ವತ್ತಾರೆ ಎದ್ರೆ ಸಾಕು, ದ್ಯಾವೇಗೌಡ್ರು, ಸಿದ್ರಾಮಣ್ಣ, ಕುಮಾರಣ್ಣ, ರೇವಣ್ಣ ಎಲ್ಲಾರೂವೆ ತಿಥಿ ವೂಟದ ವಿಚಾರ ಸುರು ಮಾಡ್ನತಾರೆ. ಯಾರ್ನಾದ್ರೂವೆ ಮನೆಗೆ ಬಾ ಅತಿಥಿ ಅಂತ ಕರುದ್ರೆ ಯಾರ್ದು ತಿಥಿ ಅಂತೇಳಿ ಕೇಳಂಗೆ ಆಗೋಗದೆ. ಕಾಲ ಕೆಟ್ಟೋಯ್ತು ಅಲ್ವಾ ಸಾ ?' ಅಂತೇಳಿ ಮೈಲಾರಿ ಯಡೂರಪ್ನೋರ್ನ ಕೇಳ್ದ.
'ನೀನ್ಯಾಕೋ ನಮ್ ಬುಡುಕ್ಕೆ ಬತ್ತಾಯಿದ್ದೀಯ. ಮೊದ್ಲು ಕಳುಚ್ಕೋ ಇಲ್ಲಿಂದ' ಅಂತೇಳಿ ಯಡೂರಪ್ನೋರು, 'ಬನ್ನಿ ಕುಮಾರಣ್ಣ ವಾಕಿಂಗು ಸುರು ಮಾಡಣ' ಅಂತೇಳಿ ವೊಂಟ್ರು.
-ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

