ಅಂಕಣಗಳು

ಎಟುಕದ ದ್ರಾಕ್ಷಿಗೇ ಕೈ ಚಾಚುವುದೇಕೆ?

ಸುನಂದಾ, ಬಡವರ ಮನೆ ಹುಡುಗಿ. ಆಕೆ ಸಾವಿತ್ರಮ್ಮನವರ ಸೊಸೆಯಾಗಿ ಮೂರು ವರ್ಷ ಕಳೆದಿವೆ. ಸಾವಿತ್ರಮ್ಮ ಈಗ ಅಜ್ಜಿಯಾಗಿದ್ದಾರೆ. ಸುನಂದಾ ...

Published On :

ಸುನಂದಾ, ಬಡವರ ಮನೆ ಹುಡುಗಿ. ಆಕೆ ಸಾವಿತ್ರಮ್ಮನವರ ಸೊಸೆಯಾಗಿ ಮೂರು ವರ್ಷ ಕಳೆದಿವೆ. ಸಾವಿತ್ರಮ್ಮ ಈಗ ಅಜ್ಜಿಯಾಗಿದ್ದಾರೆ. ಸುನಂದಾ ಈಗಲೂ ಅತ್ತೆಯ ಕುರಿತು ಪ್ರೀತಿ, ಭಯ, ಗೌರವ ಹೊಂದಿದ್ದಾಳೆ. ಹಾಗಿದ್ದರೂ ಸಾವಿತ್ರಮ್ಮನಿಗೆ ಸೊಸೆಯ ಕುರಿತು ಅಸಹನೆ. ಎದುರು ಮನೆಗೆ ಸೊಸೆಯಾಗಿ ಬಂದಾಕೆ, ವರದಕ್ಷಿಣೆಯ ರೂಪದಲ್ಲಿ ಹತ್ತು ತೊಲ ಬಂಗಾರ, ಒಂದು ಸೈಟು, ನಾಲ್ಕು ಲಕ್ಷ ರೂ. ನಗದು ತಂದಿದ್ದಾಳೆ ಎಂದು ತಿಳಿದಾಗಿನಿಂದ, ಸೊಸೆಯ ಕುರಿತು ಸಾವಿತ್ರಮ್ಮನವರ ಅಸಹನೆ ಹೆಚ್ಚುತ್ತಲೇ ಇದೆ. ವರದಕ್ಷಿಣೆಯೊಂದಿಗೆ ಬಂದ ಹುಡುಗಿ ಎದುರು ಮನೆಯಲ್ಲಿ ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಿದ್ದಾಳೆ ಎಂಬುದು ಗೊತ್ತಿದ್ದರೂ, ಸಾವಿತ್ರಮ್ಮ ಸ್ವಗತವೆಂಬಂತೆ ಹೇಳಿಕೊಳ್ಳುತ್ತಾರೆ: ನನಗೂ ಅಂಥ ಸೊಸೆ ಸಿಗಬಾರದಿತ್ತೆ? ಅಂದ ಹಾಗೆ, ಸಾವಿತ್ರಮ್ಮ ಹೆಸರಿನಲ್ಲಿ ಒಂದು ಮನೆ, ಸೈಟ್ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಇದೆ. ಆದರೂ ಅವರ ಮನಸ್ಸು ಇರದುದರೆಡೆಗೇ ತುಡಿಯುತ್ತಿದೆ...
- ಲೋಕೇಶನೂ, ಶಂಕರನೂ ಸ್ಪರ್ಧಾತ್ಮಕ ಪರೀಕ್ಷೆ ಬರೆದೇ ಸರ್ಕಾರಿ ನೌಕರಿಗೆ ಸೇರಿದವರು. ಆನಂತರವೂ ಲೋಕೇಶ ಓದಿದ. ಇಲಾಖೆಯ ಪರೀಕ್ಷೆಗಳನ್ನು ಬರೆದ. 'ಅಯ್ಯೋ ಬಿಡಪ್ಪಾ, ನಮಗೆ ಬೇಕಿರುವುದು ಮೂರು ಹೊತ್ತಿನ ಊಟ. ಅದಕ್ಕೆ ಯಾಕಿಷ್ಟು ಕಷ್ಟಪಡಬೇಕು?' ಎಂದು ವೇದಾಂತದ ಮಾತಾಡಿದವನು ಶಂಕರ. ಒಂದೊಂದೇ ಪರೀಕ್ಷೆ ಬರೆದು ಪಾಸಾದ ಲೋಕೇಶ ಈಗ ಇಲಾಖೆಯ ಮುಖ್ಯಸ್ಥನಾಗಿದ್ದಾನೆ. ಆತನ ಸಂಬಳ ಹಾಗೂ ಸಿಗುತ್ತಿರುವ ಸೌವಲತ್ತುಗಳ ಸಂಖ್ಯೆಯಲ್ಲೂ ವಿಪರೀತ ಹೆಚ್ಚಳವಾಗಿದೆ. ಅದನ್ನು ಕಂಡು ಶಂಕರನಿಗೆ ಇನ್ನಿಲ್ಲದ ಅಸಹನೆ. ಗೆಳೆಯರ ಬಳಿ-'ನಾವಿಬ್ರೂ ಒಂದೇ ಬ್ಯಾಚ್‌ನಲ್ಲಿ ಕೆಲಸಕ್ಕೆ ಸೇರಿದವರು. ಅವನು ಬಾಸ್‌ಗಳಿಗೆ ಮಸ್ಕಾ ಹೊಡೆದು, ಲಂಚ ಕೊಟ್ಟು ಮೇಲೆ ಹೋಗ್ಬಿಟ್ಟ. ಅಂಥದೇನೂ ಮಾಡಲಿಲ್ವಲ್ಲ, ಅದಕ್ಕೇ ನಾನು ಹೀಗೇ ಉಳಿದಿದ್ದೀನಿ' ಎಂದು ಹೇಳುತ್ತಾನೆ. ಹಾಗಂತ ಶಂಕರನ ಬದುಕು ಸಂಕಟದ ಮಧ್ಯೆ ಸಿಕ್ಕಿಕೊಂಡಿಲ್ಲ. ಸರ್ಕಾರಿ ನೌಕರಿ ಆಗಿರುವುದರಿಂದ ಆತನಿಗೆ ಸಂಬಳ, ಗಿಂಬಳ ಜೋರಾಗಿಯೇ ಸಿಗುತ್ತಿದೆ. ಹಾಗಿದ್ದೂ ಆತನ ಮನಸ್ಸು ಎಟುಕದ ದ್ರಾಕ್ಷಿಗೆ ಕೈ ಚಾಚುತ್ತದೆ!
- ಶ್ರೀದೇವಿಯ ಗಂಡ ಪುಟ್ಟ ಹೋಟೆಲಿನ ಮಾಲೀಕ. ಆತ ಹೆಂಡತಿಗೆ ಪ್ರತಿ ತಿಂಗಳೂ 3000 ರೂ. ಪಾಕೆಟ್ ಮನಿ ಕೊಡುತ್ತಾನೆ. ಪ್ರತಿ ಹಬ್ಬಕ್ಕೂ ಹೆಂಡತಿ ಬಯಸಿದ ಸೀರೆ ಕೊಡಿಸುತ್ತಾನೆ. ಆದರೂ ಅವಳಿಗೆ ಅಸಹನೆ. ಆಕೆ ಹೇಳುತ್ತಾಳೆ: 'ಎದುರು ಮನೆಯ ಮಾಲತಿ ಗಂಡ ಇದ್ದಾರಲ್ರಿ, ಅವರು ತಿಂಗಳಿಗೆ 6000 ರೂ. ಪಾಕೆಟ್ ಮನಿ ಕೊಡ್ತಾರಂತೆ. ಸೀರೆ ಬೇಕು ಅಂದ್ರೆ ಕಂಚಿಗೇ ಹೋಗಿ ತರ್ತಾರಂತೆ. ನೀವೂ ಇದೀರ ದಂಡಕ್ಕೆ. ಹೊಸಾ ಸೀರೆ ಬೇಕು ಅಂದ್ರೆ 6 ಸಾವಿರ ಕೊಟ್ಟು ಹೋಗ್ಬಿಡ್ತೀರ. ಚಿನ್ನದ ಸರ ಕೊಡಿಸಿ ಅಂದ್ರೆ, ನೀನೇ ಚಿನ್ನ ಅಂತ ರೈಲು ಬಿಡ್ತೀರ. ಏನ್ ಮಾಡೋಣ ಹೇಳಿ? ನಾನು ಪಡಕೊಂಡು ಬಂದಿರೋದು ಇಷ್ಟೆ. ಎಷ್ಟು ಗೋಳಾಡಿದ್ರೆ ತಾನೆ ಏನು ಪ್ರಯೋಜನ?'
ಮಾಲತಿಯ ಗಂಡ ಬಿಜಿನೆಸ್‌ನ ಕಾರಣಕ್ಕೆ ಎರಡು ತಿಂಗಳಿಗೊಮ್ಮೆ ಕಂಚಿಗೆ ಹೋಗುವುದುಂಟು. ಆ ಸಂದರ್ಭದಲ್ಲಿ, ಸ್ವಾಮಿ ಕಾರ್ಯದೊಂದಿಗೆ ಸ್ವಕಾರ್ಯ ಎಂಬಂತೆ ಆತ ಸೀರೆ ತಂದಿರುವುದುಂಟು. ಅದಕ್ಕೂ ಮಿಗಿಲಾದ ವಾಸ್ತವವೆಂದರೆ, ಶ್ರೀದೇವಿಯ ಬಳಿ 38 ರೇಷ್ಮೆ ಸೀರೆಗಳಿವೆ. ಮಾಲತಿಗಿಂತ ಆಕೆ ಎಲ್ಲ ರೀತಿಯಿಂದಲೂ ಜೋರಾಗಿದ್ದಾಳೆ. ಆದರೂ...
- ನಾಗರಾಜ ಬ್ಯಾಂಕ್ ಉದ್ಯೋಗಿ. ಆತನದು ಪ್ರೇಮವಿವಾಹ. ಹೆಚ್ಚಿನ ಸಂದರ್ಭದಲ್ಲಿ, ಹೆಂಡತಿ ಸೆಕ್ಸಿಯಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವನ ಆಸೆ. ಆದರೆ, ಹೆಂಗಸರು ಯಾವಾಗ್ಲೂ ಗಂಭೀರವಾಗಿ ಇರಬೇಕು ಎಂಬುದು ಅವನ ಹೆಂಡತಿಯ ವಾದ. ಇಂಥ ಸಂದರ್ಭದಲ್ಲೆಲ್ಲ ನಾಗರಾಜನಿಗೆ ವಯ್ಯಾರದಿಂದ ಮಾತನಾಡುವವರು, ಹೊಕ್ಕಳು ಕಾಣಿಸಿಕೊಳ್ಳುವಂತೆ ಸೀರೆ ಉಡುವವರೇ ಅಪ್ಸರೆಯಂತೆ ಕಾಣುವುದುಂಟು. ಅಂಥವರನ್ನೇ ಮದುವೆಯಾಗಿದ್ದರೆ ಮಜವಾಗಿ ಇರಬಹುದಿತ್ತೇನೋ ಎಂದೆಲ್ಲಾ ಆತ ಯೋಚಿಸುವುದುಂಟು. ಹೆಂಗಸರು ಹಾಗೆಲ್ಲಾ ವಯ್ಯಾರದಿಂದ ವರ್ತಿಸಿದರೆ ಅದರಿಂದ ತೊಂದರೆಗಳಾಗುವ ಸಂಭವವೇ ಹೆಚ್ಚು. ಅದಕ್ಕಿಂತ ಮುಖ್ಯವಾಗಿ ಅಂಥ ಹೆಂಗಸರಿಂದ ಕುಟುಂಬಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ ಎಂದು ನಾಗರಾಜನಿಗೂ ಗೊತ್ತಿದೆ. ಆದರೂ ಅವನ ಮನಸ್ಸು ಬೇರ್ಯಾವುದೋ ಸೀರೆಯ ಹಿಂದೆ ಗಿರಕಿ ಹೊಡೆಯುತ್ತಿದೆ...
ಟಿ ರಂಗೇಗೌಡರೂ, ನಾಗೇಗೌಡರೂ ನೆರೆಹೊರೆಯವರು. ಇಬ್ಬರಿಗೂ ಎರಡಂತಸ್ತಿನ ಮನೆಗಳಿವೆ. ತಿಂಗಳ ಹಿಂದೆ ನಾಗೇಗೌಡರು ಇನ್ನೂ ಎರಡು ಮಹಡಿಗಳನ್ನು ಕಟ್ಟಿಸಲು ಮುಂದಾಗಿದ್ದಾರೆ. ಕೂಲಿಯವರನ್ನು ಹುಡುಕಬೇಕು. ಮರಳು, ಇಟ್ಟಿಗೆ, ಸಿಮೆಂಟು, ನೀರಿಗೆ ವ್ಯವಸ್ಥೆ ಮಾಡಬೇಕು. ಬ್ಯಾಂಕ್‌ನಿಂದ ಪಡೆದಿರುವ ಸಾಲಕ್ಕೆ ಬಡ್ಡಿ ಪಾವತಿಸಬೇಕು. ಎಲ್ಲ ಕೆಲಸವೂ 'ಪಕ್ಕಾ' ಆಗಿರುವಂತೆ ನೋಡಿಕೊಳ್ಳಬೇಕು... ಹೀಗೆ ಅವರಿಗೆ ನೂರೆಂಟು ತಲೆಬಿಸಿ. ಇಂಥ ಯಾವ ರಗಳೆಯೂ ಇಲ್ಲದ ರಂಗೇಗೌಡರು ನಿಜವಾಗಿಯೂ ಸುಖೀಪುರುಷರು. ಆದರೆ ಅವರ ಲೆಕ್ಕಾಚಾರವೇ ಬೇರೆ. ಮೊನ್ನೆ ಮೊನ್ನೆಯವರೆಗೂ ನನ್ನಂತೆಯೇ ಇದ್ದ ನಾಗೇಗೌಡ ಇನ್ನು ಮುಂದೆ ಮೂರು ಮನೆಯ ಬಾಡಿಗೆ ಹಣ ಎಣಿಸಿಕೊಂಡು ಸಾಹುಕಾರನಾಗುತ್ತಾನೆ. ನನಗೆ ಆ ಯೋಗ ಇಲ್ಲವಲ್ಲ, ಛೆ... ಈಗಾಗಲೇ 65 ವರ್ಷಗಳನ್ನು ದಾಟಿರುವ ರಂಗೇಗೌಡರು ಈಗ ಹಣ ಮಾಡಿ ಅನುಭವಿಸಬೇಕಾದದ್ದು ಏನೂ ಇಲ್ಲ. ಜೊತೆಗೆ, ಹೊಸ ಮನೆ ಕಟ್ಟಿಸುವಂಥ ಆರ್ಥಿಕ ಬಲವೂ ಅವರಿಗಿಲ್ಲ. ಇದೆಲ್ಲ ರಂಗೇಗೌಡರಿಗೇ ಚೆನ್ನಾಗಿ ಗೊತ್ತಿದೆ. ಹಾಗಿದ್ದರೂ ಅವರು...
- ಬಸ್‌ಗಾಗಿ ಕಾದಿರುತ್ತೇವೆ. ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ. ಆ ಮಾರ್ಗಕ್ಕೆ ರೈಲು ಇರುವುದಿಲ್ಲ. ಬಸ್ ಸಿಕ್ಕಿತೆಂದು ನಾವು ಖುಷಿಪಡುವುದಿಲ್ಲ. ಬದಲಿಗೆ, ಥತ್, ಏನ್ ರಶ್ಯುರೀ ಎನ್ನುತ್ತೇವೆ. ಒಂದೆರಡು ಸ್ಟಾಪ್‌ನ ನಂತರ ಸೀಟ್ ಸಿಗುತ್ತದೆ. ಆಗ ಖುಷಿಪಡುವ ಬದಲು ಕಿಟಕಿ ಪಕ್ಕದ ಸೀಟು ಸಿಗಲಿಲ್ಲ ಎಂದು ಗೊಣಗುತ್ತೇವೆ.. ಕಡೆಗೊಮ್ಮೆ ಊರು ತಲುಪಿದಾಗ, ಬಸ್ಸು, ಜಟಕಾ ಗಾಡಿಯ ಥರಾ ಬಂತು. ಅದೇ ರೈಲಾಗಿದ್ದಿದ್ರೆ... ಅನ್ನುತ್ತೇವೆ. ಆ ಮಾರ್ಗಕ್ಕೆ ರೈಲು ಸೌಕರ್ಯವಿಲ್ಲ ಎಂದು ಗೊತ್ತಾದ ನಂತರವೂ ಇರದುದಡೆಗೆ ತಿರುಗಿ ನಿಂತಿರುತ್ತೇವೆ.
--------
ಇವೆಲ್ಲಾ, ನನ್ನ-ನಿಮ್ಮ ಹಾಗೂ ಸುತ್ತಮುತ್ತಲಿನ ಜನರ ಮನಸ್ಸಿನ ಮಿಡಿತಗಳು. ನಾವೆಲ್ಲಾ ಯಾಕೆ ಇರದುದರೆಡೆಗೇ ತುಡಿಯುತ್ತೇವೆ! ಕೈ ಎಟುಕದ ದ್ರಾಕ್ಷಿಗೇ ಯಾಕೆ ಹೀಗೆ ಪದೇ ಪದೆ ಕೈ ಚಾಚುತ್ತೇವೆ?
ನನ್ನಲ್ಲಿ ಪ್ರಶ್ನೆಯಷ್ಟೇ ಇದೆ. ಉತ್ತರವಿಲ್ಲ...

-ನಾನು ಪ್ರಣತಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.