ಅಧಿಕಾರದಾಸೆಯೇ ಮುಂದೆ ಭಿನ್ನಾಭಿಪ್ರಾಯಗಳೆಲ್ಲಾ ಹಿಂದೆ!
ಲೋಕಸಭಾ ಚುನಾವಣೆಗಳಿಗೆ ಇನ್ನು ಒಂದು ವರ್ಷ ಬಾಕಿ ಉಳಿದಿರುವ ವೇಳೆಯಲ್ಲೇ, ಕರ್ನಾಟಕದ ರಾಜಕೀಯ ಚಿತ್ರಣ ಮೆಲ್ಲಗೆ ಬದಲಾಗತೊಡಗಿದೆ...
ಲೋಕಸಭಾ ಚುನಾವಣೆಗಳಿಗೆ ಇನ್ನು ಒಂದು ವರ್ಷ ಬಾಕಿ ಉಳಿದಿರುವ ವೇಳೆಯಲ್ಲೇ, ಕರ್ನಾಟಕದ ರಾಜಕೀಯ ಚಿತ್ರಣ ಮೆಲ್ಲಗೆ ಬದಲಾಗತೊಡಗಿದೆ. ಆಜನ್ಮ ಶತ್ರುಗಳು ಮಿತ್ರರಾಗುತ್ತಿದ್ದಾರೆ. ಅನುಕೂಲದ ಮದುವೆಗಳಿಗೆ ಸಿದ್ಧತೆ ನಡೆದಿದೆ. ಅವಕಾಶವಾದಿ ರಾಜಕಾರಣವಂತೂ ಅತ್ಯಂತ ಎತ್ತರದ ಮಟ್ಟದಲ್ಲಿ ಕುಣಿದಾಡುತ್ತಿದೆ. 4 ತಿಂಗಳಿನಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಅನ್ನು ಕೆಳಗಿಳಿಸಬೇಕೆಂಬುದೇ ಈ ಬದಲಾವಣೆಗೆ ಕಾರಣ. ತೃತೀಯ ರಂಗ ಹುಟ್ಟಿಕೊಳ್ಳುವ ಸಂಭವವಂತೂ ಕಾಣಿಸುತ್ತಿಲ್ಲವಾದರೂ, ಶತ್ರುಗಳಿಂದ ಮಿತ್ರರಾಗಿ ಬದಲಾದವರ ಗುಂಪೊಂದು ರಚನೆಯಾಗುವುದಂತೂ ನಿಶ್ಚಿತವೆನಿಸುತ್ತಿದೆ.
ಜೆಡಿಎಸ್‌ನ ವಿಷಯವನ್ನೇ ತೆಗೆದುಕೊಳ್ಳಿ. ಅಧಿಕಾರಕ್ಕಾಗಿ ಅದು ಮಿತ್ರರನ್ನೂ ಸಂಪಾದಿಸಬಲ್ಲದು, ಶತ್ರುಗಳನ್ನೂ ಸೃಷ್ಟಿಸಿಕೊಳ್ಳಬಲ್ಲದು. 8 ವರ್ಷದ ಹಿಂದೆ ಆಗಿದ್ದ ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿಯನ್ನು ಮರೆಯುವುದಕ್ಕಾದರೂ ಹೇಗೆ ಸಾಧ್ಯ? ತತ್ಫಲವಾಗಿ ಜೆಡಿಎಸ್ ಕರ್ನಾಟಕವನ್ನು 20 ತಿಂಗಳುಗಳವರೆಗೆ ಆಳಿತು. 'ತನ್ನನ್ನು ತಾನು ಸೆಕ್ಯುಲರ್ ಎಂದು ಕರೆದುಕೊಳ್ಳುವ ಪಕ್ಷವೊಂದು, ತಾನೇ ಕೋಮುವಾದಿ ಎಂದು ಜರಿಯುತ್ತಿದ್ದ ಪಕ್ಷದೊಂದಿಗೆ ಅದ್ಹೇಗೆ ತಾನೆ ಮೈತ್ರಿಮಾಡಿಕೊಂಡಿತೋ?' ಎಂದು ಅಂದು ಎಲ್ಲರೂ ಆಶ್ಚರ್ಯಪಟ್ಟಿದ್ದರು. ಆದರೆ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮತ್ತು ಮಿತ್ರರಲ್ಲ ಎನ್ನುವ ಮಾತಿದೆ. ಇದನ್ನು ಸಾಬೀತುಮಾಡಲೆಂಬಂತೆ ಜೆಡಿಎಸ್ ತನ್ನ ನಿಜ ಬಣ್ಣವನ್ನು ತೋರಿಸತೊಡಗಿತು. ಇಪ್ಪತ್ತು ತಿಂಗಳು ಅಧಿಕಾರ ಅನುಭವಿಸಿ, ಮುಂದಿನ ಇಪ್ಪತ್ತು ತಿಂಗಳನ್ನು ಬಿಜೆಪಿಯ ಕೈಗೆ ಹಸ್ತಾಂತರಿಸುವ ಬದಲು, ಮೈತ್ರಿ ಮುರಿದುಕೊಂಡಿತು. ಅಲ್ಲಿಗೆ ಇನ್ನುಳಿದ 20 ತಿಂಗಳು ಮುಖ್ಯಮಂತ್ರಿಯಾಗಬಹುದು ಎಂದು ಕಾದು ಕುಳಿತಿದ್ದ ಯಡಿಯೂರಪ್ಪನವರ ಕಣ್ಣಮುಂದೆಯೇ ಕನಸೊಂದು ಜಾರಿಹೋಯಿತು.
ಇದಾದ ನಂತರ ಬಿಜೆಪಿ ಅನುಕಂಪದ ಅಲೆಯ ಮೇಲೆ ಅಧಿಕಾರಕ್ಕೆ ಬಂದಿತು. ಆದರೆ ಆಗ ಬಿಜೆಪಿಯ ವಿರುದ್ಧ ಕಾಂಗ್ರೆಸ್‌ಗಿಂತಲೂ ಜೆಡಿಎಸ್ ಪಕ್ಷವೇ ಹೆಚ್ಚು ಅಬ್ಬರಿಸತೊಡಗಿತು. ಯಾವಾಗ ಯಡಿಯೂರಪ್ಪ ಅವರ ಹೆಗಲ ಮೇಲೆ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳು ಬಂದು ಕುಳಿತವೋ, ಆಗ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಆರ್ಭಟವೂ ಹೆಚ್ಚಾಯಿತು. ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಿದ್ದಂತೆ ಬಿಜೆಪಿ ಒಡೆದ ಕುಟುಂಬವಾಯಿತು. ಈ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಜೆಡಿಎಸ್ ಅತ್ಯುತ್ಸಾಹದಿಂದ ಮಾಡಿತು. ಕೊನೆಗೆ ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಸಿಲುಕಿ ಬಿಜೆಪಿ ಕೊಚ್ಚಿಹೋಯಿತು. ಇದರಿಂದ ಜೆಡಿಎಸ್‌ಗೆ ಲಾಭವಾಗಲಿಲ್ಲವಾದರೂ ಕಾಂಗ್ರೆಸ್ ಮಾತ್ರ ಸ್ಪಷ್ಟ ಬಹುಮತ ಪಡೆದು ಗದ್ದುಗೆಯ ಮೇಲೆ ಆರೂಢವಾಯಿತು.
ಲೋಕಸಭಾ ಕ್ಷೇತ್ರಕ್ಕಾಗಿ ನಡೆಯಲಿರುವ ಎರಡು ಉಪಚುನಾವಣೆಗಳಿಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಹಾಗಾಗೆ ಶತ್ರುಗಳು ಮತ್ತೆ ಮಿತ್ರರಾಗಿದ್ದಾರೆ. ತಮ್ಮ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗೊತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಕಾಂಗ್ರೆಸ್‌ಗೆ ಸ್ಪರ್ಧೆಯೊಡ್ಡಲು ಸಿದ್ಧವಾಗಿವೆ. ಯಡಿಯೂರಪ್ಪನವರೊಂದಿಗೆ ದೋಸ್ತಿ ಮಾಡಿರುವ ಕುಮಾರಸ್ವಾಮಿ, ಕೆಜೆಪಿ ಕೂಡ ಈ ಹೋರಾಟಕ್ಕೆ ಸಾಥ್ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದಷ್ಟೇ ಅಲ್ಲ, ಹಿಂದಾದ ಘಟನೆಗಳನ್ನೆಲ್ಲ ಮರೆತು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ಬೆಸೆಯಲು ಯಡಿಯೂರಪ್ಪ ಸಿದ್ಧರಾಗಿದ್ದಾರೆ. ಅಧಿಕಾರದಾಹ ಎಂಥ ಪ್ರಬಲ ಶತ್ರುಗಳನ್ನೂ ಮಿತ್ರರಾಗಿಸಬಲ್ಲದು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಕುತೂಹಲಕರ ಅಂಶವೆಂದರೆ, ತಮ್ಮೊಂದಿಗೆ ಕೈ ಜೋಡಿಸಲು ಕಾಂಗ್ರೆಸ್ ಕೂಡ ಯಡಿಯೂರಪ್ಪ ಅವರಿಗೆ ಆಹ್ವಾನವಿತ್ತಿದೆ. ಆದರೆ ಬಿಜೆಪಿಯೊಂದಿಗಿದ್ದರೆ ಮಾತ್ರ ತಮಗೆ ಉತ್ತಮ ಭವಿಷ್ಯವಿದೆ ಎಂದು ಯಡಿಯೂರಪ್ಪ ಭಾವಿಸುತ್ತಾರೆ.
ತಮ್ಮ ಮಗ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿದಾಗಲೆಲ್ಲ ಮೊಸಳೆ ಕಣ್ಣೀರು ಹಾಕಿ, ನಂತರ ಯು-ಟರ್ನ್ ಹೊಡೆಯುವ ಜೆಡಿಎಸ್ ಮುಖಂಡ ದೇವೇಗೌಡರು, ಈ ಬಾರಿ ನೇರವಾಗಿ ಕಾಂಗ್ರೆಸ್‌ನತ್ತ ಕೆಂಗಣ್ಣುಬೀರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಅನ್ನು 'ಅಪ್ಪ-ಮಕ್ಕಳ ಪಕ್ಷ' ಎಂದು ಅಣುಕಿಸಿದರೆ, ದೇವೇಗೌಡರು ಕಾಂಗ್ರೆಸ್ ಅನ್ನು 'ತಾಯಿ-ಮಗನ ಪಕ್ಷ' ಎಂದು ಕುಟುಕಿದ್ದಾರೆ. ವ್ಯಂಗ್ಯವೆಂದರೆ ಇದೇ ದೇವೇಗೌಡರು ಕೆಲವು ವರ್ಷಗಳ ಹಿಂದೆ 'ಕೋಮುವಾದಿ' ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ನೊಂದಿಗೆ ಜಾತ್ಯತೀತ ಮೈತ್ರಿ ಮಾಡಿಕೊಂಡಿದ್ದರು! ನಿಜಕ್ಕೂ ಈ ರಾಜಕಾರಣಿಗಳೇ ವಿಚಿತ್ರ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ.
ಈಗ ನಡೆಯುತ್ತಿರುವುದು, ಮುಂದಿನ ವರ್ಷದ ಸಂಸತ್ ಚುನಾವಣೆಗೆ ಪೂರ್ವತಯಾರಿ ಎನಿಸುತ್ತಿದೆ. ಮುಂಬರುವ ಉಪ ಚುನಾವಣೆಗಳಲ್ಲಿ ಈ ಪಕ್ಷಗಳೆಲ್ಲ ಸೇರಿ ಕಾಂಗ್ರೆಸ್ ಅನ್ನು ಸೋಲಿಸಲು ಸಫಲವಾದವೆಂದರೆ, ಲೋಕಸಭೆ ಚುನಾವಣೆಗಳವರೆಗೂ ಅವೆಲ್ಲ ಒಟ್ಟಾಗಿ ಕೆಲಸ ಮಾಡಲಿವೆ ಎಂದರ್ಥ. ಆಗ ಕಾಂಗ್ರೆಸ್‌ಗೆ ಬಹಳ ಕಠಿಣ ಸವಾಲುಗಳು ಎದುರಾಗುತ್ತವೆ. ಕರ್ನಾಟಕ ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲಬೇಕು ಎಂದು ಹೈಕಮಾಂಡ್ ಆಪೇಕ್ಷಿಸುತ್ತದೆ ಎನ್ನುವುದು ಸಿದ್ದರಾಮಯ್ಯನವರಿಗೆ ಗೊತ್ತು. ಒಂದು ವೇಳೆ ಬಿಜೆಪಿ-ಕೆಜೆಪಿ-ಜೆಡಿಎಸ್‌ನ ಈ ಅನುಕೂಲದ ಮದುವೆಗೆ ಮತದಾರರು ಮಂಗಳವಾದ್ಯ ಬಾರಿಸದಿದ್ದರೆ, ನಿಸ್ಸಂಶಯವಾಗಿಯೂ ಕಾಂಗ್ರೆಸ್ ಉತ್ತಮ ಸ್ಥಾನಗಳನ್ನು ಪಡೆಯಲಿದೆ. ಮುಂಬರುವ ಎರಡು ಉಪ ಚುನಾವಣೆಗಳ ಫಲಿತಾಂಶ ಏನಾಗಲಿದೆಯೋ ಎನ್ನುವುದನ್ನು ಕಾದು ನೋಡೋಣ.
ಕೊನೆಯ ಗುಟುಕು: ಫೇಸ್‌ಬುಕ್‌ನಲ್ಲಿ ಕಂಡ ಸಂದೇಶ- 'ಅವಶ್ಯಕತೆ', 'ಸೌಕರ್ಯ' ಮತ್ತು 'ಸುಖ' ಒಂದೇ ದರದಲ್ಲಿ ಸಿಗುತ್ತಿವೆ. ಈರುಳ್ಳಿ-80 ರುಪಾಯಿ, ಪೆಟ್ರೋಲ್-80 ರುಪಾಯಿ ಮತ್ತು ಬಿಯರ್- 80 ರುಪಾಯಿ!
-ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

