ಅಪಾಯದ ಕಟಕಟೆಗೆ ತಂದು ನಿಲ್ಲಿಸಿದ ಅಣೆಕಟ್ಟೆಗಳು
ಮೊನ್ನೆ ಮೊನ್ನೆ ಕೇದಾರನಾಥದ ಸುತ್ತಮುತ್ತಲೂ ನಡೆಯಿತಲ್ಲ ಆ ವಿಕೋಪವು ...
ಮೊನ್ನೆ ಮೊನ್ನೆ ಕೇದಾರನಾಥದ ಸುತ್ತಮುತ್ತಲೂ ನಡೆಯಿತಲ್ಲ ಆ ವಿಕೋಪವು ಮುಂಬರಲಿರುವ ಬಹುದೊಡ್ಡ ವಿನಾಶದ ಅಲೆಗಳ ಮುನ್ಸೂಚನೆಯೇ? ಹಾಗೊಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ ವಿಶ್ವದ ಪರಿಸರ ವಿಜ್ಞಾನಿಗಳು. ಏಕೆಂದರೆ, ಪರಿಸರವಾದಿಗಳ ಪ್ರಕಾರ, ಹಲವು ವರ್ಷಗಳಿಂದ ಅಪಾಯದ ಸೂಚನೆಗಳನ್ನು ನಿಸರ್ಗ ಕಳಿಸುತ್ತಲೇ ಇದೆ. ಆದರೆ ಅಧಿಕಾರಿಗಳು ಅದನ್ನು ಪರಿಗಣಿಸುತ್ತಿಲ್ಲ. ಕಳೆದ ವರ್ಷವೂ ಮೇಘಸ್ಫೋಟವಾಗಿ ಉತ್ತರಕಾಶಿ ಜಿಲ್ಲೆಯಲ್ಲಿ ಪ್ರವಾಹ ಕಂಡುಬಂದಿತ್ತು. ಈ ಭಾಗದ ಭೂಮಿ ಸಡಿಲಗೊಂಡಿದೆ. 1991ರಲ್ಲಿ ಭಾಗಿರಥಿಯ ತೀರದ ಉತ್ತರಕಾಶಿಯಲ್ಲಿ, ದೊಡ್ಡ ಭೂಕಂಪವೇ ಸಂಭವಿಸಿತ್ತು. ಅಮಾಕ್, ಮನೇರಿ ಭಾಲಿ ಒಂದನೇ ಯೋಜನಾ ಭಾಗದಲ್ಲಿ ಅತಿ ಹೆಚ್ಚು ಜೀವ ಹಾನಿಯಾಗಿತ್ತು. ಇದೀಗ ಇಡೀ ಭಾಗದ ಬದುಕೇ ಮಗುಚಿ ಬಿದ್ದಿದೆ. ಇಷ್ಟಾದರೂ ನಾವು ಎಚ್ಚೆತ್ತುಕೊಂಡಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಹಿಮಗಿರಿಯ ಮೇಲಿನ ದೌರ್ಜನ್ಯವನ್ನು ನಿರಂತರ ಮುಂದುವರಿಸಿಕೊಂಡೇ ಹೊರಟಿದ್ದೇವೆ. ತಕ್ಷಣಕ್ಕೆ ಇವನ್ನು ಸ್ಥಗಿತಗೊಳಿಸದಿದ್ದಲ್ಲಿ ಖಂಡಿತಾ ಪ್ರಳಯಾಂತಕ ವಿನಾಶವನ್ನು ಗಂಗೆಯ ಹರವಿನುದ್ದಕ್ಕೂ ಅನುಭವಿಸಲು ಮನುಕುಲ ಸಿದ್ಧಗೊಳ್ಳಲೇಬೇಕಿದೆ!
ಇದು ಕೇವಲ ಕಾಕತಾಳಿಯ ಅಥವಾ ಊಹಾತ್ಮಕ ಚಿತ್ರಣವಲ್ಲ. 2007ರಲ್ಲಿ, ವಿಷ್ಣುಪ್ರಯಾಗದಲ್ಲಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ನಡೆಯುತ್ತಿತ್ತು. ಆಗ ಚಾಯ್ ಗಾನ್ ಸ್ಯಾಂಕ್ ಮತ್ತಿತರೆಡೆ ಕಟ್ಟಡಗಳು, ಮನೆಗಳಲ್ಲಿ ಬಿರುಕುಗಳು ಕಂಡವು. ಹಲವು ಜನರು ತಮ್ಮ ಮನೆಗಳನ್ನು ಬಿಟ್ಟರು. 2008ರಲ್ಲಿ ಮನೇರಿ ಭಾಲಿ-2 ಕಾರ್ಯನಿರ್ವಹಿಸಲು ಆರಂಭಿಸಿದ ಮೇಲೆ, ಹದಿಮೂರು ಸರಣಿ ಹಳ್ಳಿಗಳಿರುವ ಧನರಿಪಟ್ಟಿಯ ಭೂ ಭಾಗದಲ್ಲಿ ಪದೇ ಪದೇ ಬಿರುಕುಗಳು ಕಂಡು ಬಂತು. ಈ ಪ್ರದೇಶದ ಅಂತರ್ಜಲ ಮಾಯವಾಯಿತು. 2010ರಲ್ಲಿ ಭಾರಿ ಮಳೆ ಉಂಟಾಯಿತು. ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಕಟ್ಟಲಾಗುತ್ತಿದ್ದ ಕೋಟೇಶ್ವರ್ ಪವರ್ ಹೌಸ್ ಪ್ರವಾಹಕ್ಕೆ ಸಿಲುಕಿತು. ಈ ಹಾನಿಯು ಸುಮಾರು ನೂರು ಕೋಟಿಗೂ ಹೆಚ್ಚೆನ್ನಲಾಗಿದೆ. ಮಳೆಯ ಪ್ರಮಾಣ ಕಡಿಮೆ ಆದ ನಂತರ ಕೋಟೇಶ್ವರ ಅಣೆಕಟ್ಟು ಖಾಲಿ ಮಾಡಿದ ಮೇಲೆ ಅಲ್ಲಲ್ಲಿ ಸುತ್ತಲಿನ ಭೂಪ್ರದೇಶದಲ್ಲಿ ಬಿರುಕು ಕಾಣಿಸಿಕೊಂಡಿದ್ದವು. 2010ರಲ್ಲಿ ಲೊಹರಿ ನಾಗ್ಪಾಲ್ ಜಲ ವಿದ್ಯುತ್ ಯೋಜನೆ ನಿರ್ಮಿಸಲಾಗುತಿತ್ತು. ಇದು ಹತ್ತಿರದ ಹಳ್ಳಿಗಳಲ್ಲಿ ಭೂಕಂಪನಗಳನ್ನು ಉಂಟುಮಾಡಿತು. ಇದರಿಂದಾಗಿ ಜನರು ಹಳ್ಳಿಗಳನ್ನು ತೊರೆದರು. ನಂತರದಲ್ಲಿ ಆ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು.
ಹಿಮಾಲಯದಲ್ಲಿಯೇ ಗರಿಷ್ಠ ಪ್ರಮಾಣದ ಹಿಮಾಪಾತ ನಡೆದಿರುವುದು ಗಢವಾಲ್‌ನಲ್ಲಿ. ಕಣಿವೆಯಲ್ಲಿ ನಿರಂತರವೆಂಬಂತಾಗಿರುವ ಸ್ಫೋಟ, ಅಣೆಕಟ್ಟುಗಳು, ಕಾಲುವೆಗಳ ನಿರ್ಮಾಣ, ಮಿತಿಮೀರಿದ ರಸ್ತೆಗಳ ನಿರ್ಮಾಣ, ಸರ್ಕಾರಿ ಪ್ರಾಯೋಜಿತ ಅಭಿವೃದ್ಧಿ ಯೋಜನೆಗಳಿಂದ ಇಡಿ ಹಿಮಾಲಯ ಶ್ರೇಣಿಯೇ ನಡುಗುವ ಹಂತದಲ್ಲಿದೆ ಎನ್ನುತ್ತಾರೆ ಹಲವಾರು ವರ್ಷಗಳಿಂದ ಗಂಗೆಯ ಹರಿವಿಗೆ ಅಣೆಕಟ್ಟು ಕಟ್ಟುವುದನ್ನು ವಿರೋಧಿಸುತ್ತಿರುವ ಜಲವಿದ್ಯುತ್ ಯೋಜನೆಗಳ ವಿರುದ್ಧದ ಹೋರಾಟಗಾರ್ತಿ, ಗಂಗಾ ಅಹವಾನ್ ಎಂಬ ಎನ್‌ಜಿಒ ಮುಖ್ಯಸ್ಥೆ ಮಲ್ಲಿಕಾ ಭಾನೊಟ್.
ಶ್ರೀನಗರ ಹೈಡ್ರೋ ಪ್ರಾಜೆಕ್ಟ್, ಅಸ್ಸಿಗಂಗಾ ಹೈಡ್ರೋ ಪವರ್ ಪ್ರಾಜೆಕ್ಟ್, ಮನೇರಿ ಭಾಲಿ 1 ಮತು 2 ನೇ ಯೋಜನೆಗಳಲ್ಲದೇ ಗಂಗಾ ಮತ್ತು ಗಂಗಾ ನದಿಯ ಉಪ ನದಿಗಳುದ್ದಕ್ಕೂ ಅಂತಹುದೇ 70 ಯೋಜನೆಗಳನ್ನು ಉದ್ದೇಶಿಸಲಾಗಿದೆ. ಈಗಾಗಲೇ ನಿರ್ಮಿಸಿರುವ ಅಥವಾ ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಂದಲೇ ಇಷ್ಟೊಂದು ದುರಂತಗಳು ಸಂಭವಿಸುತ್ತಿರುವಾಗ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತಿರುವುದಾದರೂ ಏಕೆ ಎಂಬುದು ಎಲ್ಲರ ಪ್ರಶ್ನೆ.
2010ರಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರ ನಿರ್ದೇಶನ ನೀಡಿ ಹಲವಾರು ಪ್ರಾಜೆಕ್ಟ್‌ಗಳನ್ನು ತಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದವು. ಆದರೂ ಅದು ಪಾಲನೆಯಾಗಿಲ್ಲ. ಕೇಂದ್ರ ಸರ್ಕಾರಕ್ಕೆ ಉತ್ತರಾಖಂಡದ ಪರಿಸ್ಥಿತಿಯ ತೀವ್ರತೆಯ ಅರಿವಿದ್ದರೂ, ಅರೆಬರೆ ಮನಸ್ಸಿನಿಂದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗಂಗಾ ನದಿಯು ಹರಿವಿನಲ್ಲಿ ಗಂಗೋತ್ರಿಯಿಂದ ಉತ್ತರಕಾಶಿವರೆಗಿನ 130ಕಿ.ಮೀ.ನಷ್ಟು ಪ್ರದೇಶವನ್ನು ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಲಾಗಿದೆಯಾದರೂ ಅದರ ಅನುಷ್ಠಾನ ಆಗಿಲ್ಲ. ಆ ಭಾಗದಲ್ಲಿ ತಕ್ಷಣವೇ ಎಲ್ಲ ರೀತಿಯ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಬೇಕಿದೆ. ಅಕ್ರಮ ಮರಳು ಸಾಗಾಟ ಮತ್ತು ಪರ್ವತ ಪ್ರದೇಶದಲ್ಲಿ ಸ್ಫೋಟಕಗಳ ಬಳಕೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಈ ಸಂಬಂಧ ಕೇಂದ್ರದ ಆದೇಶವನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ. ಈ ಸಂಬಂಧ ಕಳೆದ 2013ರ ಮೇ 6ರಂದು ಉತ್ತರಾಖಂಡದ ಮುಖ್ಯಮಂತ್ರಿ ವಿಜಯ ಬಹುಗುಣ ನೇತೃತ್ವದ ಸಂಸದರು, ಶಾಸಕರನ್ನೊಳಗೊಂಡ ಕಾಂಗ್ರೆಸ್ ನಿಯೋಗ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿ, ಅದೇಶವನ್ನು ಜಾರಿಗೊಳಿಸದಂತೆ ಒತ್ತಡ ತಂದಿದೆ.
ಗಂಗಾ ನ್ಯಾಷನಲ್ ರಿವರ್ ಅಂಡ್ ಕಾನ್‌ಸ್ಟಿಟ್ಯೂಟಿಂಗ್‌ನಡಿಯಲ್ಲಿ 'ನ್ಯಾಶನಲ್ ಗಂಗಾ ರಿವರ್ ಬೇಸಿನ್ ಅಥಾರಿಟಿ' ಸ್ಥಾಪಿಸಲಾಗಿದ್ದು, ಅದಕ್ಕೆ ಪ್ರಧಾನಮಂತ್ರಿಯವರೇ ಮುಖ್ಯಸ್ಥರಾಗಿದ್ದರೂ ದುರದೃಷ್ಟವಶಾತ್, ಆರಂಭದಲ್ಲಿ ಕೆಲವು ಸಭೆಗಳ ನಂತರ ಸಭೆಯ ಉಸಾಬರಿಗೇ ಹೋಗಿಲ್ಲ. ಜೂನ್ 16ರ ಪ್ರವಾಹ ದುರಂತದ ನಂತರ ಒಮ್ಮೆಯೂ ಸಭೆ ಕರೆಯುವ ಕನಿಷ್ಠ ಸೌಜನ್ಯವನ್ನೂ ಪ್ರಧಾನಿ ತೋರಿಲ್ಲ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ ಮಾಜಿ ಡೈರೆಕ್ಟರ್ ಜನರಲ್ ಗೌತಮ್ ಕೌಲ್ ಹೇಳುವ ಪ್ರಕಾರ, ಉತ್ತರಾಖಂಡದ ಪ್ರವಾಸೋದ್ದಿಮೆಯೇ ಅದರ ಬಹುದೊಡ್ಡ ಶತ್ರು. ರಾಜ್ಯದಲ್ಲಿ ಪ್ರವಾಸಿ ಅಭಿವೃದ್ಧಿ ಬೋರ್ಡ್ ಚಾಲ್ತಿಯಲ್ಲಿದ್ದು, ಇದು ವಿದೇಶಿ ಸಂಸ್ಥೆಗಳನ್ನು ಕರೆತಂದು ಅವರ ಮೂಗಿನ ನೇರಕ್ಕೆ ಪ್ರವಾಸಿ ನೀತಿ ರೂಪಿಸಿ ವ್ಯವಹಾರಕ್ಕಿಳಿದಿದೆ. ನಿಜವಾಗಿ ಈ ಮಂಡಳಿಯಿಂದ ಹಣ ಮತ್ತು ನಿಸರ್ಗ ಎರಡೂ ಹಾಳಾಗುತ್ತಿದೆ ಎನ್ನುತ್ತಾರೆ ಹೃಷಿಕೇಶದ ಹೋಟೆಲ್ ಉದ್ದಿಮೆದಾರರು. 150ಕ್ಕಿಂತ ಹೆಚ್ಚು ಕಂಪನಿಗಳಿಗೆ ಕ್ಯಾಂಪ್ ನಡೆಸಲು ಲೈಸೆನ್ಸ್ ಒದಗಿಸಲಾಗಿದೆ. ಇನ್ನೂ 150 ಕಂಪನಿಗಳು ಕ್ಯೂನಲ್ಲಿ ಅಪ್ಪಣೆಗಾಗಿ ಕಾದಿವೆ. ಹೆಚ್ಚಿನ ಕಂಪನಿಗಳವರಿಗೆ ಸರಿಯಾದ ಅನುಭವ, ಮಾಹಿತಿ, ಪ್ರಾದೇಶಿಕ ಪರಿಚಯ, ತರಬೇತಿ ಯಾವುದೂ ಇಲ್ಲ. ಕಳೆದ ಎರಡು ತಿಂಗಳಲ್ಲಿ ಜಲಕ್ರೀಡೆಗೆ ಸಂಬಂಧಿಸಿದ 15 ಸಾವುಗಳು ಸಂಭವಿಸಿವೆ. ಸರ್ಕಾರ ಸಾಹಸಿ ಪ್ರವಾಸವನ್ನು ತಡೆಯುವ ಬದಲಾಗಿ, ಬೇಕಾಬಿಟ್ಟಿಯಾಗಿ ಕೈಬಿಟ್ಟಿದೆ ಎನ್ನುತ್ತಾರೆ ಗೌತಮ್.
ಇಳಿಜಾರಿನ ಪ್ರದೇಶವೇ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯದಲ್ಲಿ ಇಂಥ ಪ್ರದೇಶದಲ್ಲಿನ ನಿರ್ಮಾಣಕ್ಕೆ ವ್ಯವಸ್ಥಿತ ನಿಯಮಗಳೇ ಇಲ್ಲ. ಒಂದು ಪ್ರಬಲ ಯಾತ್ರಾರ್ಥಿ ನಿಯಮವು ಇದೇ ಸನ್ನಿವೇಶದಲ್ಲಿ ಜಾರಿಗೆ ಬರಬೇಕಾದ ಅಗತ್ಯವಿದೆ. ಎಷ್ಟು ಯಾತ್ರಾರ್ಥಿಗಳನ್ನು ಕಣಿವೆಯಲ್ಲಿ ಈ ನಿರ್ದಿಷ್ಟ ಸಮಯದಲ್ಲಿ ಬಿಡಬೇಕು, ಎಷ್ಟು ಜನ ಬೆಟ್ಟದ ಮೇಲೆ ಹೋಗಬೇಕು ಎಂಬಿತ್ಯಾದಿಗಳ ಬಗ್ಗೆ ಖಾಸಗಿ ನಿರೀಕ್ಷಕರ ನಿಗಾ ವ್ಯವಸ್ಥೆ ಜಾರಿಗೊಳ್ಳಬೇಕು. ಸ್ಥಳೀಯ ಜನತೆಗೆ ತುರ್ತು ಪರಿಸ್ಥಿತಿಯ ಕುರಿತು ತರಬೇತಿ ನೀಡಬೇಕು ಎಂಬುದು ಅವರ ಆಶಯ.
ಇನ್ನೊಂದು ದುರದೃಷ್ಟಕರ ಸಂಗತಿ ಎಂದರೆ ಎಲ್ಲರೂ ಹಿಮಾಲಯ ಪರ್ವತ ಶ್ರೇಣಿಯನ್ನು ಉಳಿಸುವ ಬಗ್ಗೆ ಕೂಗೆದ್ದಿದ್ದರೂ, ದೇಶಾದ್ಯಂತ ಇಷ್ಟು ಚರ್ಚೆ ನಡೆಯುತ್ತಿದ್ದರೂ ಯಾವುದೇ ಪರಿಣಾಮ ಆಗಿಲ್ಲ. ಪಾರ್ಲಿಮೆಂಟ್‌ನಲ್ಲಿ ಇದರ ಕುರಿತು ಎರಡು ಬಾರಿ ಚರ್ಚೆ ನಡೆದಿದೆ. ಎರಡು ಬಾರಿಯೂ ಎಲ್ಲರಿಂದ ಒಕ್ಕೂರಲಿನ ಮಾತುಗಳು ಕೇಳಿಬಂದಿವೆ. ಆದರೂ ಪರಿಣಾಮ ಕಂಡಿಲ್ಲ. 'ಗಂಗಾ ಹರಿವಿನುದ್ದಕ್ಕೂ ನಿರ್ಮಾಣ ಹಂತದಲ್ಲಿರುವ ಮತ್ತು ಉದ್ದೇಶಿತ ಎಲ್ಲ ಯೋಜನೆಗಳು ತಕ್ಷಣವೇ ನಿಲ್ಲಬೇಕು. ಗಂಗೆಯಲ್ಲಿ ಶೇ.60ರಷ್ಟು ನೀರು ವರ್ಷದ ಎಲ್ಲ ಕಾಲದಲ್ಲೂ ಹರಿಯುವಂತಾಗಬೇಕು. ಉದ್ದೇಶಿತ ಸಂರಕ್ಷಣೆಯ ವಿಧಾನಗಳನ್ನು ತಕ್ಷಣವೇ ಅನುಷ್ಠಾನಗೊಳಿಸಿ ಹಿಮಾಲಯ ಶ್ರೇಣಿಗಳನ್ನು ಯಥಾವತ್ ಉಳಿಸಿಕೊಳ್ಳುವ ಕಾರ್ಯ ಮಾಡಬೇಕು' ಎನ್ನುತ್ತಾರೆ ಮತ್ತೊಬ್ಬ ಪರಿಸರಾಸಕ್ತ, ಸಂಸದ ಆರ್. ರಮಣ ಸಿಂಗ್. ಇವರ ನೇತೃತ್ವದಲ್ಲಿ ಒಂದು ಪಾರ್ಲಿಮೆಂಟರಿ ಫೋರಮ್ ಗಂಗೆಯ ರಕ್ಷಣೆಗಾಗಿ ಸೂಕ್ತ ನಿಯಮಗಳನ್ನು ಸಿದ್ಧಪಡಿಸಿದೆ.
ಈ ವರ್ಷದ ಪ್ರವಾಹ ದುರಂತವಾದರೂ ಕೇಂದ್ರ ಸರ್ಕಾರವನ್ನು ಹಿಮಗಿರಿಯಲ್ಲಿ ನಡೆಯುತ್ತಿರುವ ಅವ್ಯಾಹತ ಪಾರಿಸಾರಿಕ ಹಸ್ತಕ್ಷೇಪಗಳ ಬಗ್ಗೆ ಆಲೋಚಿಸುವಂತೆ ಮಾಡಬೇಕಿದೆ. ಉತ್ತರಾಖಂಡವು ತನ್ನ ದುರಂತಗಳಿಂದ ತಕ್ಕ ಪಾಠ ಕಲಿಯಬೇಕು. ಮಾತ್ರವಲ್ಲ ಉತ್ತರಾಖಂಡದ ದುರಂತದಿಂದ ಅಣೆಕಟ್ಟೆಯೇ ಅಭಿವೃದ್ಧಿ ಎಂದುಕೊಂಡಿರುವ ಎಲ್ಲ ರಾಜ್ಯಗಳೂ ಆತ್ಮವಿಮರ್ಶೆಗೆ ನಿಲ್ಲಬೇಕು. ಆಗಲಾದರೂ, ಇಂತಹ ದುರಂತಗಳನ್ನು ಭವಿಷ್ಯದಲ್ಲಿ ನಿಯಂತ್ರಿಸಲು ಸಾಧ್ಯವಾಗಬಹುದು.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

