ಅಂಕಣಗಳು

ಇಂಥ ಭಾಷಣವನ್ನು ಇಂದು ನಮ್ಮ ಪ್ರಧಾನಿಯೂ ಮಾಡಬಾರದಾ?

ಹಿಂದಿನ ವಾರ ನಾನು ಸಿಂಗಾಪುರದಲ್ಲಿದ್ದೆ. ಅಲ್ಲಿಗೆ ಹೋಗದೆ ಎರಡು ವರ್ಷಗಳಾದವು...

Published On :

ಹಿಂದಿನ ವಾರ ನಾನು ಸಿಂಗಾಪುರದಲ್ಲಿದ್ದೆ. ಅಲ್ಲಿಗೆ ಹೋಗದೆ ಎರಡು ವರ್ಷಗಳಾದವು. ನಾನು ಆ ಪುಟ್ಟ ದೇಶಕ್ಕೆ ಏನಿಲ್ಲವೆಂದರೂ ಹತ್ತಾರು ಸಲ ಹೋಗಿ ಬಂದಿರಬಹುದು. ಬೆಂಗಳೂರಿನಿಂದ ಕಾರಿನಲ್ಲಿ ಚಿತ್ರದುರ್ಗಕ್ಕೆ ಹೋಗುವಷ್ಟರಲ್ಲಿ, ವಿಮಾನದಲ್ಲಿ ಸಿಂಗಾಪುರಕ್ಕೆ ಹೋಗಬಹುದು. ಅಷ್ಟು ಹತ್ತಿರದಲ್ಲಿದೆ. ಮೊದಲ ಸಲ ಭೇಟಿ ನೀಡುವ ಪ್ರವಾಸಿಗರಿಗೆ ಸಿಂಗಾಪುರ ಒಂದಷ್ಟು ಬೆರಗು, ವಿಸ್ಮಯ, ಕುತೂಹಲವನ್ನು ಮೂಡಿಸುತ್ತದೆ.
ಈ ಅನುಭವ ಎಲ್ಲ ಊರು, ದೇಶಗಳಿಗೆ ಹೋದಾಗಲೂ ಸಹಜವಾದರೂ, ಸಿಂಗಾಪುರ ಮತ್ತಷ್ಟು ಅಚ್ಚರಿ ಮೂಡಿಸಲು ಕಾರಣ ಅದರ ಕಿರಿದಾದ ಗಾತ್ರ. ಆ ಪುಟ್ಟ ದೇಶ ಬೆಂಗಳೂರಿನ ಅರ್ಧದಷ್ಟಿರಬಹುದು. ಆದರೆ ಅದು ಬೆಳೆದ ರೀತಿ, ಬೆಳೆಯುತ್ತಿರುವ ಗತಿ ಮಾತ್ರ ಅದ್ಭುತ. ಜಗತ್ತಿನ ಎಲ್ಲ ಬ್ಯಾಂಕುಗಳ ಶಾಖೆ ಆ ದೇಶದಲ್ಲಿದೆ. ಜಗತ್ತಿನ ಎಲ್ಲ ಬಹುರಾಷ್ಟ್ರೀಯ ಕಂಪನಿಗಳ ಒಂದು 'ಅಂಗಡಿ' ಅಲ್ಲಿದೆ. ಸಿಂಗಾಪುರವನ್ನು ಪಕ್ಕಕ್ಕಿಟ್ಟು ಇಂದು ಜಗತ್ತನ್ನು ನೋಡಲು ಸಾಧ್ಯವಿಲ್ಲ, ಜಗತ್ತನ್ನೂ ಕಟ್ಟಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಇಂದು ಜಾಗತಿಕ ಕ್ರಮ ಕಾಯ್ದುಕೊಳ್ಳಲು ಸಿಂಗಾಪುರ ಅನಿವಾರ್ಯ.
ವಿಚಿತ್ರ ಅಂದ್ರೆ ಸಿಂಗಾಪುರ ಪ್ರತಿಯೊಂದಕ್ಕೂ ಅಕ್ಕ-ಪಕ್ಕದ ದೇಶವನ್ನು ನೆಚ್ಚಿಕೊಂಡಿದೆ. ಅಲ್ಲಿನ ಬೇವಿನಸೊಪ್ಪಾಗಲಿ, ಬದನೆಕಾಯಿಯಾಗಲಿ ಬೆಳೆಯುವುದಿಲ್ಲ. ಅಲ್ಲಿ ಯಾರೂ ದನ, ಎಮ್ಮೆಗಳನ್ನು ಮೇಯಿಸುವುದಿಲ್ಲ. ಹಾಲು ಸಹ ಹೊರದೇಶಗಳಿಂದಲೇ ಹೋಗಬೇಕು. ಕೆಲವು ವರ್ಷಗಳ ಹಿಂದಿನವರೆಗೂ, ಕುಡಿಯುವ ನೀರನ್ನೂ ಸಹ ಬೇರೆ ದೇಶಗಳಿಂದ ತರಿಸಿಕೊಳ್ಳಬೇಕಿತ್ತು. ಈಗಂತೂ ಸಮುದ್ರದ ನೀರನ್ನೇ ಪರಿಷ್ಕರಿಸಿ ಕುಡಿಯುವ ನೀರನ್ನು ತಯಾರಿಸಿಕೊಳ್ಳುವುದರಿಂದ, ಸಮುದ್ರದಿಂದ ಆವೃತ್ತವಾಗಿರುವ ಸಿಂಗಾಪುರದಲ್ಲಿ ನೀರೋ ನೀರು.
ಹಾಗೆ ನೋಡಿದರೆ ಸಿಂಗಾಪುರ ಭಗವಂತನ ಲ್ಯಾಬೊರೇಟರಿಯಲ್ಲಿ ಹುಟ್ಟಿದ ದೇಶವಿರಬಹುದು ಎಂದು ನನಗೆ ಅನೇಕ ಸಲ ಅನಿಸಿದೆ. ಯಾಕೆಂದರೆ ಅದು ಅಷ್ಟು ಅಚ್ಚುಕಟ್ಟಾಗಿದೆ, ಸ್ವಚ್ಛವಾಗಿದೆ, ಸುಂದರವಾಗಿದೆ, ವ್ಯವಸ್ಥಿತವಾಗಿದೆ. ಓರೆ-ಕೋರೆಗಳಿಲ್ಲ, ಅಲ್ಲಿನ ಪತ್ರಿಕೆಗಳಲ್ಲಿ 'ದೂರು-ದುಮ್ಮಾನ' ಕಾಲಮ್ಮು ಇಲ್ಲದಿರುವಷ್ಟು ನಾಗರಿಕ ಸಮಸ್ಯೆಗಳಿಂದ ಮುಕ್ತವಾಗಿದೆ.
ಪ್ರತಿ ಸಲ ಅಲ್ಲಿಗೆ ಹೋದಾಗಲೂ ಒಂದಷ್ಟು ಬದಲಾವಣೆಯಾಗಿರುತ್ತವೆ, ಹೊಸ ಹೊಸ ಕಟ್ಟಡಗಳು, ಹೋಟೇಲ್ಗಳು, ಪಾರ್ಕುಗಳು ತಲೆಯೆತ್ತಿರುತ್ತವೆ. ಹೋಗಿ ಬರುವವರ, ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ, ವ್ಯವಸ್ಥೆ ಸುಧಾರಿಸುತ್ತದೆಯೇ ಶಿವಾಯ್, ಹಳ್ಳ ಹಿಡಿಯುವುದಿಲ್ಲ, ಹದ ತಪ್ಪುವುದಿಲ್ಲ. ಹಸುರು ಹಾಸು ಮತ್ತಷ್ಟು ವಿಸ್ತರಿಸಿರುತ್ತದೆ. ಒಂದು ನಗರವನ್ನು ಅಂದವಾಗಿ ರೂಪಿಸಿ ಅದನ್ನು ಷೋಕೇಸಿನಲ್ಲಿಟ್ಟು ನಲಿಯಬಹುದಾದರೆ ಅದಕ್ಕೆ ಸಿಂಗಾಪುರ ಎನ್ನಬಹುದು. ಎಲ್ಲ ಭಾರ, ಒತ್ತಡ, ತಳ್ಳಾಟಗಳನ್ನೆಲ್ಲ ಹೊಂದಿಯೂ ಒಂದು ನಗರ ವ್ಯವಸ್ಥಿತವಾಗಿ, ಬದುಕಲು ಸಹನೀಯವಾಗಿ ಇರುವುದು ಸಾಧ್ಯವಾಗುವುದು ಸಿಂಗಾಪುರದಲ್ಲಿ. ಅಲ್ಲಿಯೇ ವಾಸಿಸುವವರು ಈ ಮಾತನ್ನು ಎಷ್ಟು ಒಪ್ಪುತ್ತಾರೋ ಗೊತ್ತಿಲ್ಲ. ಬೇರೆ ದೇಶಗಳಿಂದ ಹೋದವರಿಗೆ, ಅಲ್ಲಿ ವಾರಗಟ್ಟಲೆ ಸುತ್ತು ಹಾಕಿದವರಿಗೆ ಅಂಥ ಒಳ್ಳೆಯ ಇಂಪ್ರೆಶನ್ ಮಾತ್ರ ಸಿಗುತ್ತದೆ. ಹಾಗಂತ ಅಲ್ಲಿ ಸಮಸ್ಯೆಗಳೇ ಇಲ್ಲ ಎಂದಲ್ಲ. ಖಂಡಿತವಾಗಿಯೂ ಇವೆ. ಆದರೆ ಒಬ್ಬ ಭಿಕಾರಿಯ ಕಣ್ಣೀರಿಗೂ ಬೆಂಜ್ ಕಾರಿನಲ್ಲಿ ಕುಳಿತು ಆಳುವವರ ಕಣ್ಣೀರಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ ತಾನೆ?
ಅದಿರಲಿ, ಹಿಂದಿನ ವಾರ ನಾನು ಸಿಂಗಾಪುರದಲ್ಲಿದ್ದ ಸಮಯದಲ್ಲಿ ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿತ್ತು. ಪ್ರತಿ ವರ್ಷ ಆಗಸ್ಟ್ 8ರಂದು ಸಿಂಗಾಪುರಿಗರು ಆ ದಿನವನ್ನು ರಾಷ್ಟ್ರೀಯ ದಿನ ಎಂದೇ ಆಚರಿಸುತ್ತಾರೆ. ಅದೇ ದಿನ ರಂಜಾನ್ ಹಬ್ಬದ ಅಂತಿಮ ದಿನ ಸೇರಿಕೊಂಡಿದ್ದರಿಂದ ಇನ್ನಷ್ಟು ಕಳೆಕಟ್ಟಿತ್ತು. ಅಂದು ಸಿಂಗಾಪುರದ ಪ್ರಧಾನಿ ದೇಶವನ್ನುದ್ದೇಶಿಸಿ ಮಾತಾಡುತ್ತಾರಾ ಎಂದು ನನ್ನೊಂದಿಗಿದ್ದ ಸ್ನೇಹಿತನನ್ನು ಕೇಳಿದೆ. ಆತ ಹೌದು ಎಂದ. ಕುತೂಹಲ ಹುಟ್ಟಿತು. ಆ ದೇಶದ ಪ್ರಧಾನಿ ಲೀ ಸಿಯೆನ್ ಲೂಂಗ್ ಏನು ಹೇಳಬಹುದು, ತನ್ನ ದೇಶವಾಸಿಗಳಿಗೆ ಯಾವ ಸಂದೇಶ ಕೊಡಬಹುದು, ತನ್ನ ಮನಸ್ಸಿನಲ್ಲಿರುವ ಕನಸುಗಳನ್ನು ಹೇಗೆ ಬಿಚ್ಚಿಡಬಹುದು, ಅಷ್ಟಕ್ಕೂ ಆತನ ಹಕೀಕತ್ತು ಏನಿದ್ದಿರಬಹುದು... ಮುಂತಾದ ಪ್ರಶ್ನೆಗಳು ಸಹಜವಾಗಿ ಉದ್ಭವಿಸಿದವು.
ಲೀ ಅರ್ಧ ಗಂಟೆ ಮಾತಾಡಿರಬಹುದು. ವ್ಯಕ್ತಿತ್ವ ವಿಕಸನ ಗುರುವೋ, ಧರ್ಮಗುರುಗಳೋ, ಚೆನ್ನಾಗಿ ಓದಿಕೊಂಡ ಸ್ವಾಮೀಜಿಯೋ ಮಾತಾಡಿದರೆ ಹೇಗಿರಬಹುದು ಹಾಗಿತ್ತು ಲೀ ಭಾಷಣ. ಇಡೀ ದೇಶವಾಸಿಗಳಲ್ಲಿ ಉತ್ಸಾಹ, ನವೋಲ್ಲಾಸ, ಚೇತನ, ಹುರುಪು, ಹುಮ್ಮಸ್ಸು, ವಿಶ್ವಾಸ, ನಂಬಿಕೆ, ಉಠಾವು ಮೂಡಿಸುವಂಥ ಮಾತುಗಳವು. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ನಮ್ಮ ರಾಷ್ಟ್ರಪತಿ ಮಹೋದಯರು ದೇಶವನ್ನುದ್ದೇಶಿಸಿ ಮಾತಾಡುತ್ತಾರೆ. ಎಷ್ಟು ಜನ ಗಮನವಿಟ್ಟು, ಕಿವಿಗೊಟ್ಟು ಕೇಳುತ್ತಾರೋ ಗೊತ್ತಿಲ್ಲ. ಇಪ್ಪತ್ತು- ಇಪ್ಪತ್ತೈದು ವರ್ಷಗಳ ಹಿಂದೆ ಅವರ ಭಾಷಣವನ್ನು ಪತ್ರಿಕೆಗಳಲ್ಲಾದರೂ ಓದಬಹುದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಪತಿ ಭಾಷಣ ಒಳಪುಟಕ್ಕೆ ತಳ್ಳಲ್ಪಟ್ಟಿದೆ. ಒಂದು ವೇಳೆ ಆ ಭಾಷಣವನ್ನು ಕೈ ಬಿಟ್ಟರೆ ಓದುಗರೂ ಕೇಳುವುದಿಲ್ಲ. ಇದ್ದುದರಲ್ಲಿ ಪ್ರಧಾನಿಯವರ ಭಾಷಣಕ್ಕೆ ಸ್ವಲ್ಪವಾದರೂ ಮಹತ್ವ, ನ್ಯೂಸ್ ವ್ಯಾಲ್ಯೂ (ಸುದ್ದಿ ಮೌಲ್ಯ) ಉಳಿದುಕೊಂಡಿದೆ. ಆದರೆ ಡಾ. ಮನಮೋಹನಸಿಂಗ್ ಪ್ರಧಾನಿಯಾದ ಬಳಿಕ ಕೆಂಪುಕೋಟೆ ಮೇಲಿನಿಂದ ಮಾಡುವ ಭಾಷಣ ಒಳಪುಟಕ್ಕೆ ಸರಿದಿದೆ. ಪ್ರಾಮಾಣಿಕತೆ, ದೇಶಭಕ್ತಿ, ಸಮಾಜಸೇವೆ, ತ್ಯಾಗ ಮುಂತಾದ ವಿಷಯಗಳ ಬಗ್ಗೆ ನಮ್ಮ ನಾಯಕರ್ಯಾರೂ ಮಾತಾಡುವುದಿಲ್ಲ. ಕಾರಣ ಆ ವಿಷಯ ಮಾತಾಡಿದರೆ ಜನರ್ಯಾರೂ ತಮ್ಮನ್ನು ನಂಬುವುದಿಲ್ಲವೆಂಬುದು ಅವರಿಗೂ ಗೊತ್ತು. (ಅಷ್ಟರಮಟ್ಟಿಗೆ ಅವರಲ್ಲಿ ಪ್ರಾಮಾಣಿಕತೆಯಿದೆ.)
ಹೀಗಾಗಿ ಸ್ವಾತಂತ್ರ್ಯ ದಿನದ ಪ್ರಧಾನಿ, ರಾಷ್ಟ್ರಪತಿ ಭಾಷಣ ದೇಶವಾಸಿಗಳಲ್ಲಿ ಯಾವುದೇ ರೋಮಾಂಚನ ಹುಟ್ಟಿಸುವುದಿಲ್ಲ. ಕೆಂಪುಕೋಟೆ ಭಾಷಣವನ್ನು ಆಲಿಸಲು ರೇಡಿಯೋಕ್ಕೆ ಕಿವಿ ಹಚ್ಚಿ ಕೇಳುತ್ತಿದ್ದ ಕಾಲವೂ ಇತ್ತು. ಈಗ ಯಾರಲ್ಲೂ ಆಸಕ್ತಿ ಉಳಿದಿಲ್ಲ. ಅಂಥ ನೈತಿಕತೆಯಿರುವ ನಾಯಕರು ಇಲ್ಲದಿರುವುದೇ ಅದಕ್ಕೆ ಕಾರಣ. ಹೀಗಾಗಿ ಪ್ರಧಾನಿ, ರಾಷ್ಟ್ರಪತಿಯ ಭಾಷಣ ಸಣ್ಣ ಚರ್ಚೆಗೂ ಗ್ರಾಸವಾಗುವುದಿಲ್ಲ. ಇನ್ನು ಅವರ ಮಾತುಗಳಿಂದ ಪ್ರಭಾವಿತರಾಗುವುದಂತೂ ದೂರವೇ ಉಳಿಯಿತು ಬಿಡಿ.
ಈ ಹಿನ್ನೆಲೆಯಲ್ಲಿ ಲೀ ಭಾಷಣ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಅವರು ಮಾತನ್ನಾರಂಭಿಸುವುದಕ್ಕಿಂತ ಮುನ್ನ ನನ್ನ ಮೊಬೈಲನ್ನು ಬಂದ್ ಮಾಡಿ ಟಿವಿ ಮುಂದೆ ಕುಳಿತಿದ್ದೆ. ಅಂದು ಅವರೇನು ಮಾತಾಡಿದರು ಎಂಬುದನ್ನು ನಿಮಗೂ ಕೇಳಿಸುತ್ತೇನೆ.
----
ನನ್ನ ಸಿಂಗಾಪುರವಾಸಿಗಳೇ, ನಾನು ಸಫ್ರಾ ಕ್ಲಬ್ ಹೌಸ್ನಿಂದ ನಿಮ್ಮನ್ನುದ್ದೇಶಿಸಿ ಮಾತಾಡುತ್ತಿದ್ದೇನೆ. 1973ರಲ್ಲಿ ಮೊಟ್ಟ ಮೊದಲ ಕ್ಲಬ್ಹೌಸನ್ನು ಸಫ್ರಾ ಕಟ್ಟಿಸಿದರು. ನಾವು ಅದನ್ನು ಪುನರುಜ್ಜೀವನಗೊಳಿಸಿ ನಮ್ಮ ಸೈನಿಕರು ಹಾಗೂ ಅವರ ಕುಟುಂಬದವರಿಗೆ ಅರ್ಪಿಸಿದ್ದೇವೆ. ಅವರ ತ್ಯಾಗ ಹಾಗೂ ಕೊಡುಗೆಗೆ ನಾವು ನೀಡಿದ ಸಣ್ಣ ಕಾಣಿಕೆಯಿದು. ವರ್ಷದಿಂದ ವರ್ಷಕ್ಕೆ ಸಿಂಗಾಪುರ ಬೆಳೆದಂತೆ ಸೌಲಭ್ಯಗಳನ್ನು ಸಹ ಹೇಗೆ ಹೆಚ್ಚಿಸುತ್ತಿದ್ದೇವೆ ಎಂಬುದಕ್ಕೆ ಇದು ಚಿಕ್ಕ ನಿದರ್ಶನವೂ ಹೌದು.
ಕಳೆದ ವರ್ಷ ನಾವು ಗಣನೀಯ ಸಾಧನೆ ಮಾಡಿದ್ದೇವೆ. ಹೌಸಿಂಗ್ ಬೋರ್ಡಿನ ಮನೆ ಖರೀದಿಸಲು ಸಾಕಷ್ಟು ಆಕಾಂಕ್ಷಿಗಳಿದ್ದರು. ಅಂಥವರಿಗೆ ಅವರವರ ಶಕ್ತ್ಯಾನುಸಾರದ ಮನೆಗಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ಅನಗತ್ಯ ಬೇಡಿಕೆಯಾಗದೇ, ಸುಲಭ ದರದಲ್ಲಿ ಜನರಿಗೆ ಮನೆಗಳನ್ನು ಖರೀದಿಸಲು ಸಾಧ್ಯವಾಗಿದೆ. ಕಳೆದ ವರ್ಷ ನಾವು ಸಿಂಗಾಪುರದಲ್ಲಿ ಸಾಕಷ್ಟು ಹೊಸ ಬಸ್ಗಳನ್ನು ಬಿಟ್ಟಿದ್ದೇವೆ, ಅಷ್ಟು ಮಾತ್ರ ಅಲ್ಲ, ಹೊಸ ಬಸ್ ರೂಟ್ಗಳನ್ನು ಆರಂಭಿಸಿದ್ದೇವೆ. ಇದರಿಂದ ಕೆಳಮಧ್ಯಮ ವರ್ಗದವರಿಗೆ ನಗರ ಸಂಚಾರ ಮತ್ತಷ್ಟು ಆರಾಮವಾಗಿದೆ.
 ಬೆಳಗಿನ ಜಾವದ ಸಂದರ್ಭದಲ್ಲಿ ಸಂಚರಿಸುವವರಿಗೆ ಉಚಿತ ಎಂಆರ್ಟಿ (ಮಾಸ್ ರ್ಯಾಪಿಡ್ ಟ್ರಾನ್ಸಿಟ್) ಸೇವೆಯನ್ನು ಆರಂಭಿಸಬೇಕೆಂದು ನಿರ್ಧರಿಸಿದ್ದೇವೆ. ಇದರಿಂದ ಬೆಳಗ್ಗೆ ಎಂಟು ಗಂಟೆ ನಂತರ ಉದ್ಭವಿಸುವ ಸಂಚಾರದಟ್ಟಣೆ ಕಡಿಮೆಯಾಗಲಿದೆ.ಈಗಿರುವ ಮಾರ್ಗದಲ್ಲಿ ಇನ್ನಷ್ಟು ಟ್ರೇನುಗಳನ್ನು ಸೇರಿಸಲಿದ್ದೇವೆ. ಈ ವರ್ಷದ ಡಿಸೆಂಬರ್ನಿಂದ ಹೆಚ್ಚು ರೈಲುಗಳು ಓಡುವುದರಿಂದ ದಟ್ಟಣೆ ಕುಗ್ಗಲಿದೆ.
ಮದುವೆ, ಪಾಲಕತ್ವ (Parenthood)  ಹಾಗೂ ಜನಸಂಖ್ಯೆಯಂಥ ಗಂಭೀರ ವಿಷಯಗಳ ಬಗ್ಗೆ ನಾವು ಚಿಂತನೆಯಲ್ಲಿ ತೊಡಗಿದ್ದೇವೆ. ಈ ವರ್ಷದ ಜನವರಿಯಲ್ಲಿ ಜನಸಂಖ್ಯೆಗೆ ಸಂಬಂಧಿಸಿದಂತೆ ಹೊರತಂದ ಶ್ವೇತಪತ್ರದ ಬಗ್ಗೆ ಸಾಕಷ್ಟು ಉಗ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಆ ಸಮಸ್ಯೆಯ ತೀವ್ರತೆಯನ್ನು ಅರಿಯಲು ನಮಗೆ ಸಹಾಯಕವಾಯಿತು.
ನಮ್ಮ ಆರ್ಥಿಕತೆಯನ್ನು ಬಲಪಡಿಸಲು ನಮಗೆ ವಿದೇಶಿಯರು ಬೇಕು. ಹೊರ ದೇಶಗಳ ಕೆಲಸಗಾರರು ಬೇಕು. ಆದರೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ನಮ್ಮತನಕ್ಕೆ ಎಲ್ಲೋ ಧಕ್ಕೆಯುಂಟಾಗುತ್ತಿದೆ. ಸಿಂಗಾಪುರಕ್ಕೆ ಅದರದ್ದೇ ಆದ ಐಡೆಂಟಿಟಿ ಇದೆ. ಅದಕ್ಕೆ ಸ್ವಲ್ಪವೂ ಚ್ಯುತಿ ಬರಬಾರದು. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಎಚ್ಚರದಿಂದ ಮುಂದಡಿಯಿಡಬೇಕಾಗಿದೆ. ನಾವು ತೆಗೆದುಕೊಳ್ಳುವ ನಿರ್ಧಾರ ಸಿಂಗಾಪುರದ ಅಸ್ಮಿತೆಗೆ ಭಂಗವನ್ನುಂಟು ಮಾಡಬಾರದು.
ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಸಿಂಗಾಪುರದ ಆರ್ಥಿಕತೆ ಸುಭದ್ರವಾಗಿದೆ. ನಾವು ಗುಣಮಟ್ಟದ ಬಂಡವಾಳ ಆಕರ್ಷಿಸುವುದರಲ್ಲಿ ಯಶಸ್ವಿಯಾಗಿದ್ದೇವೆ. ನಿರುದ್ಯೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ವರ್ಷದ ಮೊದಲಾರ್ಧದಲ್ಲಿ ನಾವು ಶೇ. 3ರಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ಈ ವರ್ಷದ ಕೊನೆಯಲ್ಲಿ ಇದು ಶೇ. 2.5ರಿಂದ ಶೇ. 3.5ಕ್ಕೆ ಹೆಚ್ಚಲಿದೆ. ಇದು ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಜಾಸ್ತಿ ಎಂಬುದು ಗಮನಾರ್ಹ.
ವಿದೇಶಿ ಕೆಲಸಗಾರರು ಸಿಂಗಾಪುರಕ್ಕೆ ಬರುವುದರ ವಿರುದ್ಧ ಕಡಿವಾಣ ಹಾಕಿದ್ದೇವೆ ನಿಜ, ಆದರೆ ಜಾಗತಿಕ ಬಂಡವಾಳದಾರರ ವಿಶ್ವಾಸವನ್ನು ಸದಾ ಹಸಿರಾಗಿಡಬೇಕಾದುದೂ ಅಷ್ಟೇ ಅವಶ್ಯ. ಆದ್ದರಿಂದ ಹೂಡಿಕೆದಾರರಿಗೆ ಸಿಂಗಾಪುರವನ್ನು ಮುಕ್ತವಾಗಿಡೋಣ.
ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ನಮ್ಮ ಊಹೆಗೂ ನಿಲುಕದಂತೆ ಬದಲಾಗುತ್ತಿದೆ. ತಂತ್ರಜ್ಞಾನ ನಮ್ಮ ಬದುಕನ್ನು ತೀವ್ರಗತಿಯಲ್ಲಿ ಬದಲಿಸುತ್ತಿದೆ. ಸಮಾಜದ ಎಲ್ಲೆಡೆ ಒತ್ತಡ ಹೆಚ್ಚುತ್ತಿದೆ. ಉದ್ಯೋಗದಲ್ಲಿ ಖಾತ್ರಿ ಇಲ್ಲ. ಸಂಬಳದಲ್ಲಿ ಏರಿಕೆ ಪ್ರಮಾಣ ಹೆಚ್ಚುತ್ತಿಲ್ಲ. ಗಂಡ-ಹೆಂಡತಿ ದುಡಿದರೂ ಕುಟುಂಬದವರಿಗೆ ಕಷ್ಟವಾಗುತ್ತಿದೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಚಿಂತಿತರಾಗಿದ್ದಾರೆ. ಸಿಂಗಾಪುರವೂ ಬದಲಾಗುತ್ತಿದೆ. ಆರ್ಥಿಕತೆ ಪ್ರಬುದ್ಧವಾಗುತ್ತಿದೆ ಖರೆ, ಆದರೆ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಒಂದೇ ಕುಟುಂಬದಲ್ಲಿ ಹಲವು ವರ್ಗಗಳು, ಒಂದೇ ಸಮಾಜದಲ್ಲಿ ಹಲವು ಸ್ಥರಗಳು ಹುಟ್ಟಿಕೊಂಡಿವೆ. ವೃದ್ಧರು ತಮ್ಮ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಬದುಕು ಸಾಗಿಸುವುದು ದುಸ್ತರವಾಗಿದೆ. ಯುವಕರು ವಿದ್ಯಾಭ್ಯಾಸದ ಹೊಸ ಸಾಧ್ಯತೆಯ ಬಗ್ಗೆ ಉತ್ಸುಕರಾಗಿದ್ದಾರೆ. ಮಧ್ಯ ವಯಸ್ಸಿನವರಿಗೆ ಕೈಗೆಟಕುವ ದರದಲ್ಲಿ ಮನೆ ಬೇಕಾಗಿದೆ. ನಾವು ಈ ಎಲ್ಲ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಅಭಿವೃದ್ಧಿಯ ನಕ್ಷೆಯನ್ನು ರೂಪಿಸಬೇಕಾಗಿದೆ. ಹೀಗಾಗಿ ನಾವು ಇಷ್ಟು ವರ್ಷ ತಳೆದ ಮಾರ್ಗವನ್ನು ಬಿಟ್ಟು ಹೊಸ ಮಾರ್ಗವನ್ನು ತುಳಿಯಬೇಕಾಗಿದೆ.
ಈ ಭೂಮಿಯ ಮೇಲೆ ಸಿಂಗಾಪುರವೇ ನಮ್ಮ ಅತ್ಯುತ್ತಮವಾದ ನೆಲೆಬೀಡು, ಮನೆ ಎಂದು ಹಿಂದಿನ ವರ್ಷದ ನನ್ನ ಭಾಷಣದಲ್ಲಿ ಹೇಳಿದ್ದೆ. ಆನಂತರ ನಾವು ಸಿಂಗಾಪುರ ಸಂರಕ್ಷಣೆ ಎಂಬ ಯೋಜನೆಯನ್ನು ಉದ್ಘಾಟಿಸಿದ್ದೆ. ಅದಕ್ಕೆ ನೀವು ನೀಡಿದ ಪ್ರತಿಕ್ರಿಯೆಗೆ ನಾನು ಆಭಾರಿ.
ಜೀವನದಲ್ಲಿ ಯಶಸ್ಸು ಸಾಧಿಸಿ, ಮೇಲಕ್ಕೇರಬೇಕು, ಜೀವನದಲ್ಲಿನ ಆಸೆಗಳನ್ನು ಪೂರೈಸಿಕೊಳ್ಳಬೇಕು, ವ್ಯಕ್ತಿಯೊಬ್ಬ ಯಶಸ್ಸು ಸಾಧಿಸಲು ಹಲವು ಮಾರ್ಗಗಳು ರೂಪುಗೊಳ್ಳಬೇಕು, ಇಂಥ ಯಶಸ್ವಿ ವ್ಯಕ್ತಿಗಳೇ ತುಂಬಿದ ಸಮಾಜದಲ್ಲಿ ಶಾಂತಿ ನೆಲೆಗೊಳ್ಳಬೇಕು. ಆಗ ಜನರಿಗೆ ನೆಮ್ಮದಿ, ತಲೆಬಿಸಿ ಇಲ್ಲದ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ದುರ್ಬಲರಿಗೆ ಸಹಾಯ ಸಿಗುವಂಥ ಸಮುದಾಯ ರೂಪಿತವಾಗಬೇಕು. ಹೆಚ್ಚು ಹೆಚ್ಚು ಸಾಧಿಸಿದವರು ತನ್ನ ಜತೆಯಲ್ಲಿ ಇತರರನ್ನೂ ಕರೆದುಕೊಂಡು ಹೋಗಬೇಕು- ಇಂಥ ವಾತಾವರಣ ಸಿಂಗಾಪುರದಲ್ಲಿ ನೆಲೆಸಬೇಕು. ಸಿಂಗಾಪುರದಲ್ಲಿ ಇವೆಲ್ಲವೂ ಸಾಧ್ಯವಾಗಬೇಕು. ಇವೆಲ್ಲವನ್ನು ಸಾಧ್ಯವಾಗಿಸುವ ಯೋಜನೆಯನ್ನು ರೂಪಿಸೋಣ. ನಾವು ಕೈಗೊಳ್ಳುವ ಎಲ್ಲ ನಿರ್ಧಾರಗಳು ನಮ್ಮ ಈ ಆಶೋತ್ತರಗಳನ್ನು ಈಡೇರಿಸುವಂತಾಗಲಿ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರಕ್ಕೆ ಎತ್ತರದ ಸ್ಥಾನ. ಹಲವು ದೇಶಗಳು ನಮ್ಮನ್ನು ಕಂಡು ಅಭಿಮಾನ ಪಡುತ್ತವೆ. ಅಭಿವೃದ್ಧಿ ಹೊಂದಿದ ದೇಶಗಳು ನಮ್ಮಿಂದ ಐಡಿಯಾಗಳನ್ನು ಬಯಸುತ್ತವೆ. ಬಲಿಷ್ಠ ಸಿಂಗಾಪುರ ಬ್ರ್ಯಾಂಡ್ನಿಂದಾಗಿ ದೇಶದ ಪ್ರತಿ ಪ್ರಜೆಗೂ ಲಾಭವಾಗಿದೆ. ಸಿಂಗಾಪುರದ ಪ್ರಜೆ ವಿಶ್ವದ ಯಾವುದೇ ದೇಶಕ್ಕೆ ಹೋದರೂ ಅವನಿಗೆ ಸಿಗುವ ಮರ್ಯಾದೆಯೇ ವಿಶೇಷವಾದುದು.
ನಾವೊಂದೇ ಅಲ್ಲ, ಬೇರೆ ದೇಶಗಳೂ ಅಭಿವೃದ್ಧಿಯಲ್ಲಿ ದಾಪುಗಾಲನ್ನಿಡುತ್ತಿವೆ. ಏನೇ ಆಗಲಿ ನಾವು ಈ ಪೈಪೋಟಿಯಲ್ಲಿ ಹಿಂದೆ ಬೀಳಬಾರದು. ನಮ್ಮ ಸ್ಥಾನವನ್ನು ಬಿಟ್ಟುಕೊಡಬಾರದು. ಬದಲಾದ ಈ ಸನ್ನಿವೇಶದಲ್ಲಿ ಯಶಸ್ಸನ್ನು ಕಾಣಲು ದೇಶ ನಿರ್ಮಾಣಕ್ಕಾಗಿ ನಾವು ಅನುಸರಿಸುತ್ತಾ ಬಂದಿರುವ ಮೂಲಮಂತ್ರವನ್ನು ಮರೆಯಬಾರದು. ನಮ್ಮ ಸಮಾಜ, ಸಮುದಾಯದಲ್ಲಿರುವ ಸಾಂಘಿಕ ಶಕ್ತಿಯನ್ನು ಇನ್ನಷ್ಟು ಬಲಪಡಿಸಬೇಕು. ನಮಗಿಂತ ಕೆಳಗಿರುವವರನ್ನು ಮೇಲಕ್ಕೆತ್ತುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಇಲ್ಲದಿದ್ದರೆ ಕೆಳಗಿರುವವರು ಅಲ್ಲಿಯೇ ಇರುತ್ತಾರೆ. ಅವರು ಮೇಲಕ್ಕೇರದೇ ನೀವು ಮತ್ತಷ್ಟು ಮೇಲಕ್ಕೇರಲಾಗದು. ಬಿಕ್ಕಟ್ಟಿನ ಸಂದರ್ಭದಲ್ಲಿ ನಮಗೆ ಇದು ಮನವರಿಕೆಯಾಗಿದೆ. ಒಬ್ಬ ಅಥವಾ ಕೆಲವರಷ್ಟೇ ಅಭಿವೃದ್ಧಿಯಾದರೆ ಸಾಲದು, ಎಲ್ಲರೂ ಆಗಬೇಕು. ಸಿಂಗಾಪುರ ಅಂದ್ರೆ ಇದು. ಇಲ್ಲಿ ಎಲ್ಲರ ಹೊಣೆಗಾರಿಕೆ ಸಹಭಾಗಿತ್ವವನ್ನು ನಾನು ಅಪೇಕ್ಷಿಸುತ್ತೇನೆ. ಈ ನಿಟ್ಟಿನಲ್ಲಿ ಸರ್ಕಾರವೂ ನಿಮ್ಮೊಂದಿಗಿರುತ್ತದೆ. ಶಿಕ್ಷಣ ಹಾಗೂ ಜೀವನದುದ್ದ ಕಲಿಕೆಯಿಂದ ಇದನ್ನು ಸಾಧ್ಯವಾಗಿಸಬಹುದು. ಅಶಕ್ತವಾದ ಪ್ರತಿ ಕುಟುಂಬಕ್ಕೂ ಸರ್ಕಾರ ನೆರವಿನ ಹಸ್ತ ಚಾಚಲಿದೆ. ನೀವೂ ಸರ್ಕಾರಕ್ಕೆ ಸಾಥ್ ನೀಡಿ.
ಈ ದೇಶ ಎಲ್ಲರಿಗೂ ಸೇರಿದ್ದು. ಇಲ್ಲಿ ಎಲ್ಲರ ಪಾಲೂ ಇದೆ. ಸಿಂಗಾಪುರದಲ್ಲಿ ಉತ್ತಮ ಜೀವನ ಸಾಗಿಸಲು ವಿಫುಲ ಅವಕಾಶಗಳಿವೆ. ನೆನಪಿರಲಿ, ಪ್ರತಿಯೊಬ್ಬರೂ ಇನ್ನಷ್ಟು ಯಶ ಸಾಧಿಸಲು ಇನ್ನಷ್ಟು ಅವಕಾಶಗಳಿವೆ. ನಾವು ಇನ್ನಷ್ಟು ಸಂಪನ್ಮೂಲ ಜೀವಿಗಳಾಗೋಣ, ಸ್ವಾವಲಂಬಿಗಳಾಗೋಣ. ಸಿಂಗಾಪುರ ಇನ್ನಷ್ಟು, ಮತ್ತಷ್ಟು ಯಶಸ್ಸನ್ನು ಯಾವಾಗ ಸಾಧಿಸುತ್ತದೆ ಗೊತ್ತಾ, ಪ್ರತಿಯೊಬ್ಬರಿಗೂ ತನ್ನ ಪಾಲಿನ ಕೊಡುಗೆ ನೀಡಿದಾಗ ಮಾತ್ರ. ಇವೆಲ್ಲ ಯಾವಾಗ ಸಾಕಾರವಾಗುತ್ತದೆ ಗೊತ್ತಾ, ನಾವೆಲ್ಲ ಒಂದೇ ಆದಾಗ ಮಾತ್ರ. ನಮ್ಮನ್ನು ಸದಾ ಸಮರ್ಥ, ಪ್ರಾಮಾಣಿಕ ಹಾಗೂ ಸಮಾಜಕ್ಕೆ ಬದ್ಧರಾದ ನಾಯಕರು ಆಳಬೇಕು. ಅಂಥವರನ್ನು ಸಿಂಗಾಪುರಿಗರು ನಂಬುತ್ತಾರೆ. ನಮಗೆ ಉತ್ತಮ ಸರ್ಕಾರ ಸದಾಬೇಕು. ಗಂಭೀರವಾಗಿ ಯೋಚಿಸುವ, ಹತ್ತು ವರ್ಷಮುಂದೆ ನಿಂತು ಆಲೋಚಿಸುವ ನಾಯಕರು, ಸರ್ಕಾರ ಬೇಕು. ನಮ್ಮ ಕಾಳಜಿ, ಆಸೆಯನ್ನು ಅರಿಯುವವರಿರಬೇಕು. ಆ ಮೂಲಕ ನಾವು ಸುಂದರ, ಸದೃಢ ಸಿಂಗಾಪುರ ಕಟ್ಟಲು ಸಾಧ್ಯ. ನಾವು ಬಹಳ ದೂರ ಕ್ರಮಿಸಿದ್ದೇವೆ. ಮುಂಬರುವ ದಿನಗಳು ಇನ್ನಷ್ಟು ಸುಂದರವಾಗಿರಲಿವೆ. ನಮ್ಮ ಭವಿಷ್ಯ ರೂಪಿಸಲು ಹಾಗೂ ಸಿಂಗಾಪುರದ ಹೊಸ ಯಶೋಗಾಥೆ ಬರೆಯಲು ನಾವು ಸಶಕ್ತರು. ನಮ್ಮ ಮುಂದಿರುವ ನೂತನ ಸಿಂಗಾಪುರ ನಿರ್ಮಾಣಕ್ಕೆ ಈಗಿಂದಲೇ ಕಾರ್ಯಪ್ರವೃತ್ತರಾಗೋಣ.
-----
ವಾವ್! ಲೀ  ಮಾತು ಮುಗಿಸುವ ಹೊತ್ತಿಗೆ ನಾನಂತೂ ಪೂರ್ಣ ಪ್ರೇರಣೆ ಪಡೆದವನಂತೆ ಛಾರ್ಜ್ ಆಗಿದ್ದೆ. ಇಂಥ ಭಾಷಣವನ್ನು ನಮ್ಮ ಪ್ರಧಾನಿಯೂ ಮಾಡಬಾರದಾ ಎಂದುಕೊಂಡೆ. ಅಂದ ಹಾಗೆ ಇಂದು ನಮ್ಮ ಪ್ರಧಾನಿ ಡಾ. ಮನಮೋಹನ ಸಿಂಗ್ರ ಭಾಷಣ ಕೇಳಿ ಕೃತಾರ್ಥರಾಗೋಣ.

-ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.