ಅಂಕಣಗಳು

ಯಶಸ್ಸು ಕಾಣೋಕೆ ಬೇಕಿರುವುದು ಒಳಗಣ್ಣು!

ಕೆಲ ವಾರಗಳ ಹಿಂದೆ ಎರಿಕ್ ಎಂಬಾತನ ಬಗ್ಗೆ ಬರೆದಿದ್ದೆ. ಮೌಂಟ್ ಎವರೆಸ್ಟ್ ಏರಿದ...

Published On :

ನಾಯಕತ್ವವೆನ್ನುವುದು ಅಂಟುರೋಗದಂತಿರಬೇಕು. ಅದನ್ನು ದೇಹದಿಂದ ದೇಹಕ್ಕೆ, ಜೀವದಿಂದ ಜೀವಕ್ಕೆ  ತಗುಲಿಸಬೇಕು. ಎಲ್ಲರಲ್ಲೂ ಅದರ ಪೂರ್ಣ ಲಕ್ಷಣಗಳು ಕಾಣಿಸಿಕೊಳ್ಳಬೇಕು. ಆಗ ಮಾತ್ರ ಎಲ್ಲರೂ ಮಹಾನ್ ಕೆಲಸಗಳಿಗೆ ಮನಸ್ಸು ಮಾಡುತ್ತಾರೆ.

ಕೆಲ ವಾರಗಳ ಹಿಂದೆ ಎರಿಕ್ ಎಂಬಾತನ ಬಗ್ಗೆ ಬರೆದಿದ್ದೆ. ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ವ್ಯಕ್ತಿ ಆತ. 2001ರ ಮೇನಲ್ಲಿ ಇಂಥದೊಂದು ವಿಕ್ರಮವನ್ನು ಸಾಧಿಸಿದ ಎರಿಕ್‌ನನ್ನು ಜಗತ್ತು ಬೆರಗು ಕಂಗಳಿಂದ ನೋಡಿತು. ಈ ಪ್ರಸಿದ್ಧಿಯ ನೆರಳಲ್ಲೇ ತನ್ನ ವ್ಯಕ್ತಿತ್ವ ಕಟ್ಟಿಕೊಂಡ ಎರಿಕ್. ಸ್ಕೈ ಡೈವರ್ ಆಗಿ, ಮ್ಯಾರಥಾನ್ ರನ್ನರ್ ಆಗಿ, ಪರ್ವತ ಹತ್ತುವವರ ತರಬೇತುದಾರನಾಗಿ ಹಲವು ಸಾಧ್ಯತೆಗಳ ಆಯಾಮಗಳನ್ನು ಸ್ಪರ್ಶಿಸಿದ. ಟಿಬೆಟ್‌ನ ಬ್ಲೈಂಡ್‌ಸ್ಕೂಲ್ ಒಂದರ ಒಂದಿಷ್ಟು ಮಂದಿ ಹುಡುಗರನ್ನು ಪರ್ವತ ಹತ್ತಿಸಿ ಎದೆಯುಬ್ಬಿಸಿದ.
ಇವತ್ತಿಗೆ ಎರಿಕ್ ಒಬ್ಬ ವ್ಯಕ್ತಿತ್ವ ವಿಕಸನದ ಗುರು. ಆತನ ಮಾತು ಕೇಳಲು ಜನರು ಮುಗಿಬೀಳುತ್ತಾರೆ. ಕಾರ್ಪೊರೇಟ್ ಕಂಪನಿಗಳು ಆತನ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತವೆ. ಪ್ರಪಂಚದ ಬಹುತೇಕ ರಾಷ್ಟ್ರಗಳಿಗೆ ತೆರಳಿ ಜನರಿಗೆ ಬದುಕಿನ ಬಗ್ಗೆ ಪಾಠ ಮಾಡಿ ಬಂದಿದ್ದಾನೆ ಆತ. ಆ ಅಂಧನ ಮಾತಿನಲ್ಲಿ ನಿಮಗೂ ಬೆಳಕು ಕಾಣಿಸಬಹುದು. ಇನ್ನು ನೀವುಂಟು, ಆತನುಂಟು...
-----
- ನಾವೆಲ್ಲರೂ ಬೆಳೆಯಲು(ಉನ್ನತಿ ಹೊಂದಲು) ಪ್ರತಿದಿನ ನಮಗೆ ನಾವೇ ಸವಾಲು ಹಾಕಿಕೊಳ್ಳಬೇಕು. ಎಲ್ಲರೂ 'ಕ್ಯಾಂಪ್‌' ಮಾಡುತ್ತಿರಲಿ ನಾವು ಮಾತ್ರ 'ಕ್ಲೈಂಬ್‌' ಮಾಡೋಣ!
- ಜೀವನದಲ್ಲಿ ಅಡೆತಡೆಗಳು ಬಂದೇ ಬರುತ್ತವೆ. ಅವು ನಮ್ಮನ್ನು ಹಿಂದೋಡಿಸುವ ಸಲುವಾಗೇ ಎದುರಾಗುತ್ತವೆ. ಅವನ್ನು ಜಿಗಿದು ಮುಂದೆ ಸಾಗಲು ಪ್ರಯತ್ನಿಸಿ. ಜಿಗಿಯಲಾಗದಿದ್ದರೆ ಅದನ್ನು ದಾಟಿ ಹೋಗಲು ಅನ್ಯ ಮಾರ್ಗಗಳನ್ನು ಹುಡುಕಿ.  ಆಗ ಹೊಸ ಸಾಧ್ಯತೆಗಳು ಮೆಲ್ಲಗೆ ಕೈ ಹಿಡಿಯುತ್ತವೆ. ಆದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯದಿರಿ.
- ಒಂದು ಸಂಸ್ಥೆ ಅಥವಾ ಒಬ್ಬ ವ್ಯಕ್ತಿ ತನ್ನ ಯೋಚನೆಯನ್ನು ಬದಲಿಸಿದಾಗ, ಅವರಿಗೆ/ಆತನಿಗೆ ಮೊದಲೆಲ್ಲ 'ಅಡ್ಡಿ'ಯಾಗುತ್ತಿದ್ದ ವಿಷಯಗಳೆಲ್ಲವೂ ಈಗ ಗೆಲುವಿನ ಅಡಿಪಾಯಗಳಾಗಿ ಬದಲಾಗುತ್ತವೆ. ಯೋಚನೆ ಬದಲಾದರೆ ಮಾತ್ರ ಪರಿವರ್ತನೆ ಸಾಧ್ಯ.
- ಬಹುತೇಕರು ಇನ್ನೊಬ್ಬರ ನಿರೀಕ್ಷೆಯನ್ನು ತಣಿಸುವುದಕ್ಕಷ್ಟೇ ಬದುಕುತ್ತಾರೆ. ಆಗ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗೇ ನಾವು ಬೆಳೆಯಬೇಕೆಂದರೆ ಬಾಹ್ಯ ಧ್ವನಿಗಳಿಗಿಂತ, ಆಂತರಿಕ ಸಾಮರ್ಥ್ಯದ ಧ್ವನಿಗೆ ಕಿವಿಗೊಡುವುದನ್ನು ಕಲಿಯಬೇಕು.
-ಅಸಾಧ್ಯವೆನಿಸುವಂತಹ ಕನಸುಗಳನ್ನು ಬೆಂಬತ್ತಿ. ದಿಟ್ಟತನ, ಸ್ಪಷ್ಟ ನಿರ್ಣಯವಿದ್ದರೆ ಜೀವನ ಕಣ್ಣೆದುರಿಗೇ ರೂಪಾಂತರವಾಗುವುದನ್ನು ನೋಡುತ್ತೀರಿ.
-ದೃಷ್ಟಿ ಎನ್ನುವುದು ಗುರಿಗಿಂತಲೂ ಹೆಚ್ಚು ಬಲಿಷ್ಠವಾದದ್ದು, ಸಂಕೀರ್ಣವಾದದ್ದು. ಅದು ನಮ್ಮ ಗುರಿಗಳ ಉಗಮ ಸ್ಥಾನ. ಅದಕ್ಕೆ ಬೆಳಕಿನ ಅವಶ್ಯಕತೆಯಿಲ್ಲ. ಅದೇ ಬೆಳಕು!
- ಒಮ್ಮೆ ಊಹಿಸಿಕೊಳ್ಳಿ. ಪ್ರತಿಕೂಲ ಸನ್ನಿವೇಶ ನಿಮ್ಮ ವೈರಿಯಾಗಿರದೆ, ನಿಮ್ಮ ಮಿತ್ರನಾಗಿದ್ದರೆ? ನಮ್ಮೆಲ್ಲರಲ್ಲೂ ಒಂದು ಬೆಳಕಿದೆ, ಅದು ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಉದ್ಭವವಾದಂಥ ಬೆಳಕು! ಆ ಬೆಳಕನ್ನು ಶಕ್ತಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು. ಸುಗಮ ದಾರಿಯಲ್ಲಿ ನಡೆಯುವವನಿಗೆ ಹಿಮಪರ್ವತಗಳನ್ನು ಏರುವ ಶಕ್ತಿ ಬರುವುದಾದರೂ ಹೇಗೆ? ಹಾಗಾಗೆ ಕಠಿಣ ದಾರಿಯನ್ನು ನೋಡಿ ಹೆದರದಿರಿ, ಅದರಲ್ಲಿ ಧೈರ್ಯವಾಗಿ ಮುನ್ನುಗ್ಗಿ. ಮುಗ್ಗರಿಸಿ ಬಿದ್ದರೂ ಚಿಂತೆಯಿಲ್ಲ! ಮುಂದೊಂದು ದಿನ ಅಂಥ ಸಾವಿರಾರು ದಾರಿಗಳು ಎದುರಾದರೂ ಸುಗಮವಾಗಿ ಅಡ್ಡಾಡುವ ಶಕ್ತಿ ನಿಮ್ಮಲ್ಲಿ ಬೆಳೆದಿರುತ್ತದೆ.
- 'ನೋಟಕ್ಕೆ ಸಿಗುವುದನ್ನೇ ನಂಬಬೇಕು' ಎನ್ನುವವರ ಸಂಗ ಮಾಡದಿರಿ. ಪ್ರತಿಭೆ, ಧೈರ್ಯ ಮತ್ತು 'ನಂಬಿಕೆಯೇ ನೋಟ' ಎನ್ನುವವರ ತಂಡದಲ್ಲಿರಿ.
- ಒಂದೇ ದಿನದಲ್ಲಿ ಅತಿ ಹೆಚ್ಚು ಜನ ಮೌಂಟ್ ಎವರೆಸ್ಟ್ ಏರಿದ ದಾಖಲೆ ನಮ್ಮ ತಂಡದ ಹೆಸರಿನಲ್ಲಿದೆ. ಅದಕ್ಕೆ ಮುಖ್ಯ ಕಾರಣ, ನಮ್ಮಲ್ಲಿರುವ ನಂಬಿಕೆ.
- ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದು ವಿಷಯ ಮಾತ್ರ ಬದಲಾಗಿಲ್ಲ. ಪರ್ವತ ಏರುವಾಗ ಗುರಿ(ತುದಿ) ಇನ್ನು ಎಷ್ಟು ಎತ್ತರದಲ್ಲಿದೆ ಎನ್ನುವ ಬಗ್ಗೆ ನಮಗೆ ಗೊತ್ತಿರುವುದೇ ಇಲ್ಲ. ಕೇವಲ ಅಂದಾಜಿನ ಮೇಲೆ ಏರುತ್ತಿರುತ್ತೇವೆ. ಆದರೆ ನಮ್ಮ ಅಂದಾಜು ಸರಿಯಾಗಿದೆ ಎನ್ನುವ ಬಗ್ಗೆಯೂ ಖಾತ್ರಿಯಿರುವುದಿಲ್ಲ. ಆದರೆ ಎತ್ತರೆತ್ತರಕ್ಕೆ ಹೋದಂತೆಲ್ಲ ಒಂದು ವಿಷಯ ಮನಸ್ಸಿನಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತದೆ. 'ಇಷ್ಟು ಎತ್ತರ ಬಂದ ಮೇಲೆ ಏನೇ ಆಗಲಿ ತುದಿ ಮುಟ್ಟದೆ ಹಿಂದಕ್ಕೆ ಹೋಗಬಾರದು'. ಗುರಿ ಮುಟ್ಟವ ಆಸೆ ತೀವ್ರವಾಗುತ್ತಾ ಹೋಗುವಷ್ಟು ಎತ್ತರಕ್ಕೇರುವುದನ್ನು ಕಲಿಯಿರಿ.
- ಜೀವನವೆನ್ನುವುದು ಕತ್ತಲಲ್ಲಿನ ನಿರಂತರ ಪಯಣದಂತೆ. ನಮಗೇನು ಎದುರಾಗುತ್ತದೋ ಎನ್ನುವುದು ಕಾಣಿಸುವುದಿಲ್ಲ. ಹಾಗಾಗೇ ನಮಗೆ ಬೇಕಿರುವುದು ಸಿಗುವವರೆಗೂ ಆ ಕತ್ತಲಲ್ಲಿ ಕುತೂಹಲದಿಂದ ನಡೆಯುತ್ತಾ ಹೋಗಬೇಕು. ಆದರೆ ಕೆಲವೊಬ್ಬರು ಹೆದರಿ 'ಬೆಳಕಿನ ಅಂಧಕಾರದಲ್ಲೇ' ಕುಳಿತುಬಿಡುತ್ತಾರೆ!
-ನಾಯಕತ್ವವೆನ್ನುವುದು ಅಂಟುರೋಗದಂತಿರಬೇಕು. ಅದನ್ನು ದೇಹದಿಂದ ದೇಹಕ್ಕೆ, ಜೀವದಿಂದ ಜೀವಕ್ಕೆ  ತಗುಲಿಸಬೇಕು. ಎಲ್ಲರಲ್ಲೂ ಅದರ ಪೂರ್ಣ ಲಕ್ಷಣಗಳು ಕಾಣಿಸಿಕೊಳ್ಳಬೇಕು. ಆಗ ಮಾತ್ರ ಎಲ್ಲರೂ ಮಹಾನ್ ಕೆಲಸಗಳಿಗೆ ಮನಸ್ಸು ಮಾಡುತ್ತಾರೆ.
----
ನಾಯಕತ್ವದ ಗುಣಗಳನ್ನು ಇನ್ನೊಬ್ಬರಿಗೆ ಕಲಿಸುವ ಮೂಲಕ ನಾವೂ ಉತ್ತಮ ನಾಯಕರಾಗಬಲ್ಲೆವು ಎನ್ನುತ್ತಾನೆ ಎರಿಕ್. ಟಿಬೆಟ್‌ನ ಆರು ಮಂದಿ ಅಂಧ ವಿದ್ಯಾರ್ಥಿಗಳೊಂದಿಗೆ ಮೌಂಟ್ ಎವರೆಸ್ಟ್‌ನ ಉತ್ತರ ಭಾಗದಲ್ಲಿ 21,500 ಅಡಿಯಷ್ಟು ಎತ್ತರದಲ್ಲಿ ನಿಂತಾಗ ಆದ ಅನುಭವವನ್ನು ಆತ ಹೇಳುವುದು ಹೀಗೆ: 'ಆ ಹುಡುಗರನ್ನೆಲ್ಲ
ಗುಲಾಮಗಿರಿಗೆ ತಳ್ಳಲಾಗಿತ್ತು. ಪ್ರತಿದಿನ ರಾತ್ರಿ ಅವರನ್ನು ಕತ್ತಲ ಕೊಣೆಯಲ್ಲಿ ಕಟ್ಟಿಹಾಕಲಾಗುತ್ತಿತ್ತು- ಅವರಲ್ಲಿ ಕ್ಷುದ್ರ ಶಕ್ತಿಗಳು ಮನೆ ಮಾಡಿವೆ ಎನ್ನುವ ಕಾರಣಕ್ಕೆ! ಆದರೆ ಅಂದು ಅದೇ ಅಂಧರು ಪ್ರಪಂಚದ ಎಲ್ಲರಿಗಿಂತಲೂ ಎತ್ತರದಲ್ಲಿ ನಿಂತಿದ್ದರು. ಗೆಲುವಿನ ನಗೆ ಬೀರುತ್ತಾ, ತಂಗಾಳಿಗೆ ತಮ್ಮ ತನುವನ್ನೊಡ್ಡುತ್ತಾ, ಆತ್ಮವಿಶ್ವಾಸದ ಬೆಳಕಿನಲ್ಲಿ ಜೀವನವನ್ನು ಹೊಸ ದೃಷ್ಟಿಯಿಂದ ನೋಡುತ್ತಾ....'.
ನಿಜ. ಕಣ್ಣುಗಳಲ್ಲ, ದೃಷ್ಟಿ ಮುಖ್ಯ. ಏನಂತೀರಿ?

ಸುದ್ದಿ ಸಹವಾಸದ ರಿಸ್ಕ್
ವರದಿಗಾರರಿಗೆ ಸುದ್ದಿ ಕಲೆಹಾಕುವ ಧಾವಂತ. ಕೆಲವೊಮ್ಮೆ ಈ ಅವಸರದಲ್ಲೇ ಅವರು ಅರ್ಧಂಬರ್ಧ ಸುದ್ದಿ ತಿಳಿದುಕೊಂಡು, ವಾಸ್ತವಕ್ಕಿಂತ ಭಿನ್ನ ವರದಿ ಮಾಡಿಬಿಡುತ್ತಾರೆ. ಅದರಲ್ಲೂ ಈ 24/7 ನ್ಯೂಸ್ ಚಾನೆಲ್‌ಗಳ 'ಬ್ಯುಸಿ' ವರದಿಗಾರರು ಇಂಥ ತಿರುಚು ಸುದ್ದಿಗಳ ಜನನಕ್ಕೆ ಅರಿವಿಲ್ಲದೇ ಕಾರಣರಾಗುತ್ತಾರೆ. ಅಮೆರಿಕದ ಪತ್ರಕರ್ತನೊಬ್ಬ ಇಂಥ ಎಡವಟ್ಟಿಗೆ ಎಡೆಯಾದ ತಮಾಷೆ ವೃತ್ತಾಂತವೊಂದು ಅಂತರ್ಜಾಲದಲ್ಲಿ ಕಣ್ಣಿಗೆ ಬಿತ್ತು. ಏನಾಯಿತಪ್ಪಾ ಅಂದರೆ...
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಒಂದು ಸರ್ಕಸ್ ಪ್ರದರ್ಶನವಾಗುತ್ತಿತ್ತು. ಬೈಕ್‌ನಲ್ಲಿ ಬಂದ ಸವಾರನೊಬ್ಬ ಬಗೆಬಗೆಯ ಕಸರತ್ತು ಪ್ರದರ್ಶಿಸುತ್ತಿದ್ದ. ಇದೇ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಪೋಷಕರೊಂದಿಗೆ ಕುಳಿತಿದ್ದ ಬಾಲೆಯೊಬ್ಬಳು, ಸಿಂಹ ಬಂದಿದ್ದನ್ನು ಕಂಡು ಖುಷಿಯಿಂದ 'ಹೋ' ಎಂದು ಕೂಗಿ ಚಪ್ಪಾಳೆ ತಟ್ಟಿದಳು. ಆ ಹೊತ್ತಿನಲ್ಲೇ ಆ ಘಟನೆ ನಡೆಯಿತು.
ಪುಟಾಣಿ ಹುಡುಗಿ ಜೋರಾಗಿ ಚೀರಿದಳಲ್ಲ; ಆ ಸದ್ದಿನಿಂದ ಸಿಟ್ಟಿಗೆದ್ದ ಸಿಂಹ, ಆ ಹುಡುಗಿಯ ಕೈ ಕಚ್ಚಲು ಮುಂದಾಯಿತು. ಗುರ್ರ್‌ರ್ರ್‌ರ್ರ್ ಎಂದು ಅಬ್ಬರಿಸುತ್ತಾ ಆ ಮಗುವಿನ ಫ್ರಾಕ್‌ಗೆ ಬಾಯಿ ಹಾಕಿ ಎಳೆದೇ ಬಿಟ್ಟಿತು. ಸಿಂಹ ಎಳೆದ ರಭಸಕ್ಕೆ ಆ ಪುಟ್ಟ ಹುಡುಗಿಯ ಕೈ, ಮುಂದಿನ ಕೆಲವೇ ಕ್ಷಣಗಳಲ್ಲಿ ಸಿಂಹದ ಬಾಯಿ ಸೇರುವುದು ಗ್ಯಾರಂಟಿ ಎಂದು ಎಲ್ಲರಿಗೂ ಖಚಿತವಾಯಿತು. ಅನಾಹುತವನ್ನು ಊಹಿಸಿದ ಆ ಮಗುವಿನ ಪೋಷಕರು ಹೆಲ್ಪ್ ಹೆಲ್ಪ್ ಎಂದು ಚೀರಿಕೊಂಡರು.
ಈ ಚೀತ್ಕಾರದ ಕರೆ ಕಿವಿಗೆ ಬಿದ್ದೊಡನೆ ಬೈಕ್‌ನಲ್ಲಿ ಕಸರತ್ತು ಪ್ರದರ್ಶಿಸುತ್ತಿದ್ದ ಯುವಕ ಮಿಂಚಿನ ವೇಗದಲ್ಲಿ ನುಗ್ಗಿ ಬಂದು ಸಿಂಹದ ಮೂತಿಗೆ ಬಲವಾದ ಪಂಚ್ ಕೊಟ್ಟ. ಈ ಅನಿರೀಕ್ಷಿತ ಆಕ್ರಮಣದಿಂದ ಕಂಗಾಲಾದ ಸಿಂಹ, ತಕ್ಷಣವೇ ಮಗುವನ್ನು ಬಿಟ್ಟು, ಎರಡು ಹೆಜ್ಜೆ ಹಿಂದಿಟ್ಟಿತು. ಅದೇ ಕ್ಷಣಕ್ಕೆ ಮಗುವನ್ನು ಬಾಚಿ ತಬ್ಬಿಕೊಂಡ ಬೈಕ್‌ವಾಲಾ ಆಕೆಯನ್ನು ಪೋಷಕರ ಸುಪರ್ದಿಗೆ ಒಪ್ಪಿಸಿದ. ಬೈಕ್ ಸವಾರನ ಸಾಹಸ ಹಾಗೂ ಸಮಯಪ್ರಜ್ಞೆಯನ್ನು ಅಲ್ಲಿದ್ದವರೆಲ್ಲ ಶ್ಲಾಘಿಸಿದರು. ಇದೇ ಸರ್ಕಸ್‌ಗೆ ಅಮೆರಿಕದ ಪತ್ರಕರ್ತನೂ ಬಂದಿದ್ದ. ಆತ ಇಡೀ ಘಟನೆಯನ್ನು ಪ್ರತ್ಯಕ್ಷ ಕಂಡಿದ್ದ. ತಾನು ನೋಡಿದ್ದನ್ನೆಲ್ಲ ಸ್ಕೂಪ್ ನ್ಯೂಸ್ ಮಾಡಬೇಕೆಂಬ ತಹತಹದಿಂದಲೇ ಆತ ಬೈಕ್ ಸವಾರನ ಮುಂದೆ ನಿಂತು ಹೇಳಿದ: 'ಸರ್, ನಿಮ್ಮ ಸಾಹಸ, ಪಂಚ್ ಎರಡೂ ಮೈನವಿರೇಳಿಸುವಂಥಾದ್ದು. ನನ್ನ ಈವರೆಗಿನ ಜೀವನದಲ್ಲಿ ಇಂಥ ಅಪೂರ್ವ ಸಾಹಸವನ್ನು ಕಂಡೇ ಇರಲಿಲ್ಲ. ಸಿಂಹದೊಂದಿಗೆ ಹೋರಾಡುವುದೆಂದರೆ ಸುಮ್ಮನೆ ಆಯ್ತಾ ಸಾರ್?' ಬೈಕ್ ಸವಾರ ತಕ್ಷಣವೇ ಹೇಳಿದ: 'ನೀವು ಉತ್ಪ್ರೇಕ್ಷೆ ಮಾಡ್ತಾ ಇದೀರ ಸಾರ್. ವಾಸ್ತವ ಏನು ಗೊತ್ತಾ? ಸಿಂಹ ಪಂಜರದೊಳಗಿತ್ತು. ಅದು ಪಂಜರದೊಳಗೆ ಇದೆ ಎಂದು ಗೊತ್ತಿದ್ದರಿಂದಲೇ, ಅದು ನನ್ನ ಮೇಲೆ ಆಕ್ರಮಣ ನಡೆಸಲು ಸಾಧ್ಯವಿಲ್ಲ ಎಂದು ಅರ್ಥವಾದ ಮೇಲೆಯೇ ನಾನು ಅದರ ಮೂತಿಗೆ ಬಲವಾದ ಪಂಚ್ ಕೊಟ್ಟೆ. ಪ್ರಾಣ ಭಯದಿಂದ ನಡುಗುತ್ತಿದ್ದ ಮಗುವನ್ನು ಉಳಿಸುವುದು ನನ್ನ ಕರ್ತವ್ಯ ಆಗಿತ್ತು...'
'ಸರಿ ಸರಿ. ಈಗ ಕೇಳಿ. ನಾನು ಪತ್ರಕರ್ತ. ಇಡೀ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿ. ಇವತ್ತು ನಡೆದದ್ದನ್ನೆಲ್ಲ ವಿವರವಾಗಿ, ಆಕರ್ಷಕ ಹೆಡ್ಡಿಂಗ್‌ನೊಂದಿಗೆ ಮುಖಪುಟದಲ್ಲೇ ಪ್ರಕಟಿಸಬೇಕೆಂಬ ಉದ್ದೇಶ ನನ್ನದು. ಈಗ ಹೇಳಿ. ನೀವು ಯಾರು? ನೀವು ಏನು ಕೆಲಸ ಮಾಡ್ತೀರಿ?
ಈ ಪ್ರಶ್ನೆಗೆ ಆ ಬೈಕ್ ಸವಾರ ಹೀಗೆಂದ: 'ನಾನು ಒಬ್ಬ ಅಮೆರಿಕನ್. ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದೇನೆ...'
'ಥ್ಯಾಂಕ್ಸ್‌' ಎಂದಷ್ಟೇ ಉತ್ತರಿಸಿ ಆ ಪತ್ರಕರ್ತ ಹೊರಟು ಹೋದ. ಮರುದಿನದ ಪತ್ರಿಕೆಯಲ್ಲಿ ಆನೆ ಗಾತ್ರದ ಅಕ್ಷರದಲ್ಲಿ ಸುದ್ದಿ ಪ್ರಕಟಗೊಂಡಿತ್ತು:
'ಆಫ್ರಿಕಾದಿಂದ ವಲಸೆ ಬಂದವನ ಮೇಲೆ ಹಲ್ಲೆ ನಡೆಸಿ, ಅವನ ಆಹಾರ ಕಿತ್ತುಕೊಂಡ ಅಮೆರಿಕದ ನೌಕಾ ಸಿಬ್ಬಂದಿ...!'

= ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.