ನಾವು ಎಂದಾದರೊಮ್ಮೆ ಹೀಗೆಲ್ಲ ಯೋಚಿಸಿದ್ದೇವಾ?
'ಒಂದು ವಾರದಿಂದ ಕಣ್ಣು ವಿಪರೀತ ಉರೀತಾ ಇವೆ ಕಣೇ. ಪೇಪರ್ ಅಥವಾ ಪುಸ್ತಕ ಓದುತ್ತಾ ಅರ್ಧ ಗಂಟೆ ಕಳೆದರೆ ಸಾಕು; ಕಣ್ಣೀರ ಧಾರೆಯಾಗಿ ಸುರಿಯಲು ಶುರುವಾಗುತ್ತೆ. ಜಾಸ್ತಿ ಹೊತ್ತು ನೀವು ಕಂಪ್ಯೂಟರ್ ನೋಡ್ತಾ ಇರ್ತೀರಲ್ಲ, ಅದಕ್ಕೆ ಹೀಗಾಗ್ತಿದೆ. ಕಂಪ್ಯೂಟರ್ ನೋಡುವುದನ್ನು ಸ್ವಲ್ಪ ಕಡಿಮೆ ಮಾಡಿ ಎಂದು ಕೆಲವರು ಸಲಹೆ ಮಾಡಿದ್ರು. ಅವರ ಮಾತು ನಂಬಿ ಕಳೆದ ಒಂದು ತಿಂಗಳಿಂದ ಕಂಪ್ಯೂಟರ್ ನೋಡುವುದನ್ನೇ ಬಿಟ್ಟಿದ್ದೀನಿ. ಆದ್ರೂ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಯಾಕೋ ಹೆದರಿಕೆ ಆಗ್ತಿದೆ. ಯಾರಾದ್ರೂ ಐ ಸ್ಪೆಷಲಿಸ್ಟ್ ಹತ್ರ ಹೋಗಿ ಬರೋಣ. ಪ್ಲೀಸ್, ನನಗೆ ಕಂಪನಿ ಕೊಡು...' ಎಂದು ಸಂಕಟದ ದನಿಯಲ್ಲಿ ಹೇಳಿದಳು ಸಹೋದ್ಯೋಗಿ ದೀಪಿಕಾ.
ಅಯ್ಯೋ, ಅದಕ್ಕೇನಂತೆ? ಖಂಡಿತ ಬರ್ತೇನೆ. ಜಯನಗರದಲ್ಲಿ ಬಹಳ ಫೇಮಸ್ ಆಗಿರೋ ಐದಾರು ಶಾಪ್‌ಗಳಿವೆ. ಅಲ್ಲಿಗೇ ಹೋಗೋಣ. ಚೆಕಪ್ ಮುಗಿದ ಮೇಲೆ ಮಲ್ಲೇಶ್ವರಂಗೆ ಬಂದು ಶಾಪಿಂಗ್ ಮಾಡಿ, ತಿಂಡಿ ತಿಂದ್ಕೊಂಡು ಹೋಗೋಣ ಎಂದೆ. ನನ್ನ ಮಾತು ಕೇಳಿ ದೀಪಿಕಾ ಖುಷಿಯಾದಳು. ಅವತ್ತೇ ಡಾಕ್ಟರ್ ಬಳಿ ಅಪಾಯಿಂಟ್‌ಮೆಂಟ್ ತೆಗೆದುಕೊಂಡಳು. ಶಾಪ್‌ಗೆ ಹೋಗಬೇಕಿದ್ದ ದಿನ, ಅವಳಿಗೆ ಮತ್ತೊಂದಷ್ಟು ಹೆಚ್ಚುವರಿ ಕೆಲಸಗಳು ಬಿದ್ದವು. 'ನಾನು ಮೊದಲೇ ಜಯನಗರಕ್ಕೆ ಹೋಗಿರ್ತೇನೆ. ಒಂದಷ್ಟು ಬೇರೆ ಕೆಲಸಗಳಿವೆ. ಅದೆಲ್ಲಾ ಮುಗಿಸ್ಕೊಂಡು, ಬಸ್‌ಸ್ಟಾಪ್‌ನಲ್ಲಿ ನಿನ್ನನ್ನೇ ಕಾಯ್ತಾ ಇರ್ತೇನೆ. ಲೇಟ್ ಮಾಡಬೇಡ. ಬೇಗ ಬಂದು ಬಿಡು' ಅಂದಳು. ನಮ್ಮ ಪಿ.ಜಿ.ಯಿಂದ ಜಯನಗರಕ್ಕೆ ಬಸ್‌ನಲ್ಲಿ ನಲವತ್ತು ನಿಮಿಷದ ಪ್ರಯಾಣ. ಅದು ಗೊತ್ತಿದ್ದರೂ, ದೀಪಿಕಾಳನ್ನು ಕಾಯಿಸಬಾರದು ಎಂದುಕೊಂಡು, ಒಂದು ಗಂಟೆ ಮೊದಲೇ ಬಸ್ ಹತ್ತಿದೆ. ಬೆಳಗಿನ ಹೊತ್ತು, ಬೆಂಗಳೂರಿನ ಸಿಟಿ ಬಸ್ಸು ಎಂದ ಮೇಲೆ ಕೇಳಬೇಕೆ? ವಿಪರೀತ ರಶ್ ಇತ್ತು. ಹಾಂ ಹೂಂ ಎನ್ನುವುದರೊಳಗೆ ಅರ್ಧ ಗಂಟೆ ಕಳೆದು ಹೋಯಿತು. ಆದರೆ ಅರ್ಧ ದಾರಿಯೂ ಸವೆದಿರಲಿಲ್ಲ. ಪ್ರಯಾಣಿಕರು ತುಂಬ ಅಸಹನೆಯಿಂದ -'ಸ್ಪೀಡಾಗಿ ಹೋಗಪ್ಪಾ ಟೈಂ ಆಯ್ತು. ಒಳ್ಳೇ ಜಟಕಾ ಗಾಡಿ ಥರ ಹೋಗ್ತಿದೀಯಲ್ಲಪ್ಪಾ...' ಎಂದು ಕೂಗುತ್ತಿದ್ದರು. ಉಹುಂ, ಆಗಲೂ ಬಸ್‌ನ ಸ್ಪೀಡ್ ಹೆಚ್ಚಾಗಲಿಲ್ಲ.
ಕಡೆಗೂ ನಾನು ಅರ್ಧ ದಾರಿ ಹೋಗುವುದರೊಳಗೆ ಒಂದು ಗಂಟೆ ಮುಗಿದೇ ಹೋಯಿತು. ಎರಡು ನಿಮಿಷಗಳ ನಂತರ, ದೀಪಿಕಾ ಫೋನ್ ಮಾಡಿ-'ಎಲ್ಲಿದ್ದೀಯಾ? ಇನ್ನೂ ಎಷ್ಟು ಹೊತ್ತಾಗುತ್ತೆ ಬರೋದಕ್ಕೆ? ನಾನು ಸ್ಟಾಪ್‌ಗೆ ಬಂದು ಆಗಲೇ ಅರ್ಧ ಗಂಟೆ ಕಳೀತು. ತುಂಬಾ ಲೇಟ್ ಮಾಡಬೇಡ. ಡಾಕ್ಟರ್ ಹೇಳಿರೋ ಟೈಂ ಹತ್ರ ಬರ್ತಾ ಇದೆ...' ಎಂದಳು.
ನಾನು ಆಸ್ಪತ್ರೆ ತಲುಪುವ ಹೊತ್ತಿಗೆ ಮತ್ತೊಂದು ಗಂಟೆ ಕಳೆದು ಹೋಯಿತು. ಈ ಹೊತ್ತಿಗೆ ದೀಪಿಕಾಳ ಚೆಕಪ್ ಕೂಡ ಮುಗಿದಿತ್ತು. 'ಅಂಥದೇನೂ ಪ್ರಾಬ್ಲಂ ಇಲ್ಲ ಅಂದಿದಾರೆ ಕಣೇ. ಐ ಡ್ರಾಪ್ ಬರೆದು ಕೊಟ್ಟಿದ್ದಾರೆ. ಡಾಕ್ಟರ್ ಮಾತು ಕೇಳಿ ನನಗಂತೂ ಖುಷಿಯಾಯ್ತು. ನೆಮ್ಮದಿ ಸಿಕ್ತು. ಒಂದಿಪ್ಪತ್ ನಿಮಿಷ ಸುಮ್ನೆ ಸುತ್ತಾಡೋಣ. ಆಮೇಲೆ ಇಲ್ಲೇ ಎಲ್ಲಾದ್ರೂ ಜ್ಯೂಸ್ ಕುಡಿದು ಮಲ್ಲೇಶ್ವರಂಗೆ ಬಸ್ ಹತ್ತೋಣ' ಅಂದಳು.
ಮಲ್ಲೇಶ್ವರಗೆ ಹತ್ತಿದ ಬಸ್ ಎರಡು ಸ್ಟಾಪ್ ಹೋಗುವುದರೊಳಗೆ ಅರ್ಥವಾಗಿ ಹೋಯಿತು. ಇದು ಬೆಳಿಗ್ಗೆ ಹತ್ತಿ ಬಂದಿದ್ದ ಜಟಕಾ ಬಂಡಿ ಬಸ್! ಈಗಲೂ ಅಷ್ಟೆ: ತುಂಬ ನಿಧಾನವಾಗಿ ಹೋಗುತ್ತಿದ್ದ. ಬಸ್ಸಲ್ಲಿ ರಶ್ ಇರಲಿಲ್ಲ. ಆದರೂ ಇದ್ದವರಲ್ಲೇ ಕೆಲವರು ಗೊಣಗಿದರು: 'ಡ್ರೈವರ್ರು ಮುದುಕ ಅನ್ಸುತ್ತೆ. ನನ್ಮಗ ಎಮ್ಮೆ ಥರಾ ಹೋಗ್ತಾ ಇದಾನೆ...' 'ಈ ಬಸ್‌ನಲ್ಲಿ ಹೋಗೋದಕ್ಕಿಂತ ನಡೆದು ಹೋದ್ರೆ ಬೇಗ ಮನೆ ಸೇರಬಹುದು...'
ಜನ ಹೀಗೆಲ್ಲ ಮಾತಾಡುತ್ತಿದ್ದಂತೆ ಧಡಾಲ್ ಎಂದು ಸದ್ದಾಗಿ, ಇಡೀ ಬಸ್ಸೇ ಒಮ್ಮೆ ಅಲುಗಾಡಿ, ದಿಢೀರ್ ಬ್ರೇಕ್‌ನೊಂದಿಗೆ ಒಂದು ಬದಿಯಲ್ಲಿ ನಿಂತು ಬಿಟ್ಟಿತು. ದಿಢೀರನೆ ಬ್ರೇಕ್ ಹಾಕಿದ ಕಾರಣಕ್ಕೆ ಒಂದಿಬ್ಬರು ಮುಗ್ಗರಿಸಿ ಬಿದ್ದರು. ಕಿಟಕಿ ಪಕ್ಕದ ಸೀಟುಗಳಲ್ಲಿ ಕೂತು ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದವರು, ದಿಢೀರನೆ ಎಚ್ಚರಗೊಂಡು-'ಯಾವನಯ್ಯಾ ಅವ್ನು ಡ್ರೈವರ್? ಕಣ್ಣು ಕಾಣ್ಸೋದಿಲ್ವಾ? ಎಲ್ರನ್ನೂ ಸಾಯಿಸಬೇಕು ಅಂತ ತೀರ್ಮಾನಿಸಿದ್ದೀಯೋ ಹೆಂಗೆ?' ಎಂದು ಜಗಳಕ್ಕೇ ಹೋಗಿ ಬಿಟ್ಟರು.
ಡ್ರೈವರ್ ಸೀಟ್‌ನಲ್ಲಿದ್ದ ಸುಮಾರು 55 ವರ್ಷದ ಅಜ್ಜ. ಆತ ನಿಧಾನವಾಗಿ ಎದ್ದು ನಿಂತು ಹೇಳಿದ; ಎಂಜಿನ್ ಪ್ರಾಬ್ಲಂ. ಹಾಗಾಗಿ ಬಸ್ ಹೋಗೋ ಸ್ಥಿತೀಲಿಲ್ಲ. ಹತ್ತಿಪ್ಪತ್ತು ನಿಮಿಷದಲ್ಲಿ ಬೇರೆ ಬಸ್ ಬರುತ್ತೆ. ಹತ್ತಿಸಿಕೊಡ್ತೇವೆ. ಆದ್ರೆ ಸ್ವಾಮೀ, ನಿಮಗೆ ಎಲ್ಲರಿಗೂ ನಾಲ್ಕು ಪ್ರಶ್ನೆ ಕೇಳೋದಿದೆ. ಪ್ರಯಾಣಿಕರಾಗಿ ಬಸ್ ಹತ್ತಿದ ನೀವೆಲ್ಲಾ ಏನಾಡ್ತೀರಿ ಹೇಳಿ? ಸೀಟು ಸಿಕ್ಕಿದ್ರೆ ಹತ್ತೇ ನಿಮಿಷದಲ್ಲಿ ನಿದ್ರೆಗೆ ಜಾರುತ್ತೀರಿ. ಗೊರಕೆ ಹೊಡೀತೀರಿ. ಸೀಟ್ ಸಿಗದಿದ್ರೆ ಫ್ರೆಂಡ್ ಜೊತೆ, ಪ್ರಯಾಣಿಕರ ಜೊತೆ ಹರಟೆಗೆ ನಿಲ್ತೀರಿ. ಪರಿಚಯದವರಿಗೆ ಫೋನ್ ಮಾಡ್ತೀರಿ. ಎಫ್‌ಎಂ ಹಾಕ್ಕೊಂಡು ಹಾಡು ಕೇಳ್ತೀರಿ. ಮೊನ್ನೆ ಫ್ರೆಂಡ್ಸ್ ಜೊತೆ, ಬೆಳಿಗ್ಗೆ ಕುಟುಂಬದವರ ಜೊತೆ ಆದ ಜಗಳ ನೆನಪಿಸಿಕೊಂಡು, ಸಿಟ್ಟಾಗಿ ಎದುರಿಗಿರೋ ವಸ್ತುವಿಗೆ ರಪ್ಪಂತ ಹೊಡೀತೀರಿ. ಒಂದೊಂದ್ಸಲ ನಿಂತುಕೊಂಡೇ ತೂಕಡಿಸ್ತೀರಿ ಹೌದು ತಾನೆ? ಅಂದ. ಜನ, ಹೌದು ಹೌದು ಅಂದರು.
ಆತ ಮುಂದುವರಿಸಿದ: 'ನೆನಪಿಟ್ಟುಕೊಳ್ಳಿ ಸ್ವಾಮಿ. ಡ್ರೈವರ್‌ಗಳೂ ಕೂಡ ನಿಮ್ಮಂತೆಯೇ ಮನುಷ್ಯರು. ಡ್ರೈವಿಂಗ್ ಸೀಟಲ್ಲಿ ಕೂತಾಗ ಅವರಿಗೂ ನಿದ್ರೆ ಬರುತ್ತೆ. ತಲೆ ನೋವು ಬರುತ್ತೆ. ಮತ್ತೊಂದು ವಾಹನವನ್ನು ಹಿಂದಿಕ್ಕುವಾಗಲೇ, 'ಆಕ್ಷೀ' ಎಂಬ ಸೀನು ಬರುತ್ತೆ. ಯಾವಾಗ್ಲೂ ಹೊಟೇಲಲ್ಲಿ ತಿನ್ನುವುದರಿಂದ ಹೊಟ್ಟೆ ನೋವು ಬರುತ್ತೆ. ಡ್ರೈವರುಗಳ ಮನೆಯಲ್ಲೂ ಜಗಳ ಆಗುತ್ತೆ. ಎಂಜಿನ್ ಹಳೇದಾಗಿರೋದ್ರಿಂದ ಬಸ್‌ನ ಸ್ಪೀಡು ಕಡಿಮೆಯಾಗುತ್ತೆ. ಪ್ರಯಾಣದ ಆಯಾಸದಿಂದ ಸುಸ್ತಾಗಿ ಡ್ರೈವರ್ ಒಂದೇ ನಿಮಿಷ ತೂಕಡಿಸಿದ್ರೂ ಸಾಕು; ಬಸ್ಸೊಳಗೆ ಇದ್ದವರ ಕತೆ ಗೋವಿಂದಾ ಆಗಿಬಿಡುತ್ತೆ. ಹೀಗೇನೂ ಆಗದಂತೆ ಬಹಳ ಡ್ರೈವರ್ಸ್ ನೋಡ್ಕೋತಾರೆ. ಎಚ್ಚರದಿಂದ ಬಸ್ ಓಡಿಸಿ ಲಕ್ಷಾಂತರ ಮಂದಿಯ ಜೀವ ಉಳಿಸ್ತಾರೆ. ಅಂಥವರು, ಆಕಸ್ಮಿಕವಾಗಿ, ಅನಿವಾರ್ಯವಾಗಿ ಬ್ರೇಕ್ ಹಾಕಿದ್ರೆ ನೀವು ಹೀಗೆಲ್ಲಾ ಹಂಗಿಸ್ತೀರ ನೋಡಿ... ಇದೆಲ್ಲಾ ಸರೀನಾ?'
ಅಜ್ಜ ಮಾತು ಮುಗಿಸಿದ್ದ. ಎಲ್ಲರೂ ತಲೆ ತಗ್ಗಿಸಿದ್ದರು. ಬಸ್ ಡ್ರೈವರ್‌ಗಳ ಕುರಿತು ಹೀಗೂ ಯೋಚಿಸಬೇಕಲ್ಲವೆ ಎಂದುಕೊಳ್ಳುತ್ತಲೇ ದೀಪಿಕಾಳೊಂದಿಗೆ ಬೇರೊಂದು ಬಸ್ ಹತ್ತಿದೆ...
- ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

