ಅಂಕಣಗಳು

ನಮ್ಮ ರಾಜಕಾರಣಿಗಳು ಮತ್ತು ಆ್ಯಂಕರ್‌ಗಳ ಹುಸಿ ಶೌರ್ಯ ಪ್ರದರ್ಶನ

ಆಪತ್ತುಗಳು ಒಂದೊಂದಾಗಿ ಬರುವುದಿಲ್ಲ. ಒಮ್ಮೇಲೇ ಎಲ್ಲವೂ ಬಂದು ಮೈಮೇಲೆರಗುತ್ತವೆ. ಇದರ ಅನುಭವ ನಮಗೆ ಬಹಳಷ್ಟು ಬಾರಿ ಆಗಿದೆ. ನಮ್ಮ ...

Published On :

ಆಪತ್ತುಗಳು ಒಂದೊಂದಾಗಿ ಬರುವುದಿಲ್ಲ. ಒಮ್ಮೇಲೇ ಎಲ್ಲವೂ ಬಂದು ಮೈಮೇಲೆರಗುತ್ತವೆ. ಇದರ ಅನುಭವ ನಮಗೆ ಬಹಳಷ್ಟು ಬಾರಿ ಆಗಿದೆ. ನಮ್ಮ ಆಡಳಿತ ಪಕ್ಷಗಳು ಮತ್ತು ನೆರೆಯ ರಾಷ್ಟ್ರಗಳು ಕಾಲಕಾಲಕ್ಕೆ ನಮ್ಮ ಮೇಲೆ ಆಪತ್ತುಗಳಜಲಪಾತವನ್ನೇ ಹರಿಸುತ್ತವೆ. ಹಾಗಿದ್ದರೆ ಇದು ನಮ್ಮ ದೇಶದ ಕೊನೆಯ ಕ್ಷಣದ ಆರ್ತನಾದವೇ? ನೆರೆಯ ದೇಶದ ನರಿಗಳ ಹಸಿವಿಗೆ ನಮ್ಮ ದೇಶ ಆಹಾರವಾಗುತ್ತಿದೆಯೇ?
ತೆಲಂಗಾಣ ರಾಜ್ಯ ರಚನೆಯ ವೇಳೆ ಮತ್ತು ಆನಂತರದ ಕಾಂಗ್ರೆಸ್‌ನ ಸಿನಿಕ ರಾಜಕೀಯ, ಇದಕ್ಕೆ ಸುಳಿವು ನೀಡುತ್ತಿದೆ. ರಾಜ್ಯ ಸರ್ಕಾರದಲ್ಲಿ ಒಂದೂ ಕಡತಗಳು ಅಲ್ಲಾಡುತ್ತಿಲ್ಲ. ಮಂತ್ರಿಗಳ ಮಧ್ಯೆ ಭಿನ್ನಮತ ಶುರುವಾಗಿದೆ, ಸಾಮಾನ್ಯ ಅಧಿಕಾರಿಗಳು ಪ್ರತಿಭಟನೆಯಲ್ಲಿ ತೊಡಗಿ, ಕೆಲವೊಮ್ಮೆ ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಹೋಗುತ್ತಿದ್ದಾರೆ. ತೆಲಂಗಾಣಾದ ಪ್ರಮುಖ ನಾಯಕ ಚಂದ್ರಶೇಖರ್, ಹೈದರಾಬಾದ್‌ನಲ್ಲಿರುವ ರಾಜ್ಯದ ಇನ್ನಿತರ ಭಾಗಗಳ ಜನರು ತಮ್ಮ ಊರಿಗೆ ತೆರಳಬೇಕೆಂದು ಆಜ್ಞೆ ನೀಡಿದ್ದಾರೆ. ಈಗವರು ರಾಜ್ ಠಾಕ್ರೆಯಂತೆ ಹೊರಗಿನವರನ್ನು ಹೊಡಿದೋಡಿಸುವ ಕೆಲಸಕ್ಕಿಳಿಯುತ್ತಾರೋ ಏನೋ! ವ್ಯಂಗ್ಯವೆಂದರೆ, ತೆಲಂಗಾಣಾದ ರಚನೆಯಿಂದ ಕಾಂಗ್ರೆಸ್‌ಗೆ ಯಾವರೀತಿಯ ಲಾಭವೂ ಆಗುವಂತೆ ಕಾಣುತ್ತಿಲ್ಲ.
ಈ ಆಪತ್ತು ತನಗೇ ಬಂದಪ್ಪಳಿಸುತ್ತದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿದಿರಲಿಲ್ಲ. ಮುತುವರ್ಜಿಯಿಂದ ಆಯ್ಕೆ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದ್ದೂ ಕಾಂಗ್ರೆಸ್ ಉಲ್ಟಾ ಹೊಡೆಯುತ್ತಿದೆ. ಯಾವಾಗ ಮನಮೋಹನ್ ಸಿಂಗ್ ಚಲನೆಯಿಲ್ಲದ ಮತ್ತು ಮಾತನಾಡಲೂಬಾರದ ವ್ಯಕ್ತಿಯೆಂದು ಜನರಿಗೆ ತಿಳಿಯಿತೋ ಆಗ ಅವರು ಸರ್ಕಾರದ ಎಲ್ಲಾ ವೈಫಲ್ಯಗಳಿಗೆ ಮತ್ತು ಹಗರಣಗಳಿಗೆ ಸೋನಿಯಾರನ್ನು ನೇರವಾಗಿ ದೂಷಿಸತೊಡಗಿದರು.
ಇನ್ನು ಹೈಕಮಾಂಡ್, ಯುವರಾಜ ರಾಹುಲ್‌ರಿಗೆ ರಾಜಕೀಯದ ಟ್ರೇನಿಂಗ್ ಕೊಡಲು ಪ್ರಯತ್ನಿಸುತ್ತಿದೆಯಾದರೂ ಆ ಪ್ರಯತ್ನವೂ ವಿಫಲವಾಗುತ್ತಿದೆ. ಎಷ್ಟು ಅಂಗಲಾಚಿದರೂ ಕೂಡ ರಾಹುಲ್ ಬಾಬಾ ತಮ್ಮ ಜೀವನಶೈಲಿ ಬದಲಿಸುತ್ತಿಲ್ಲ. ಅದಾಗ್ಯೂ ಏಕಾದರೂ ಬದಲಿಸಬೇಕು? ತುಸು ಕಾಲ ರಾಷ್ಟ್ರೀಯ ನಾಯಕನಾಗಿ, ಇನ್ನುಳಿದ ವೇಳೆ ಕಾಣೆಯಾಗುವ ಸ್ವಾತಂತ್ರ್ಯವನ್ನು ಅವರಾದರೂ ಏಕೆ ಬಿಟ್ಟುಕೊಟ್ಟಾರು? ಕಣ್ಣಿಗೆ ಕಾಣಿಸಲಿ ಅಥವಾ ಕಾಣೆಯಾಗಲಿ ಅವರ ಖಾತೆಗಂತೂ ಸಾಧನೆಯ ಸರಕುಗಳು ಬಂದು ಬೀಳುತ್ತಲೇ ಇರುತ್ತವೆ. ಚೆನ್ನಾಗಿ ಮಳೆಯಾಯಿತೆಂದರೆ ಅದಕ್ಕೆ ರಾಹುಲ್‌ರನ್ನು ಹೊಗಳಲಾಗುತ್ತದೆ, ನೆರೆ ಬಂದರೆ ಕಾಂಗ್ರೆಸ್‌ನ ಉಳಿದ ನಾಯಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ! ರಾಹುಲ್‌ರ ಜೀವನವಂತೂ ನಿಜಕ್ಕೂ ಸುಂದರವಾಗಿದೆ.
ಸೋನಿಯಾ ಗಾಂಧಿಯವರಿಗೆ ಅತ್ತ ತಮ್ಮ ಮಗನಿಂದ, ಇತ್ತ ಮನಮೋಹನ್‌ರಿಂದ ಸಹಾಯ ದೊರಕುತ್ತಿಲ್ಲ. ಹಾಗಾಗೇ ಪತ್ರ ಬರೆಯುವ ಕೆಲಸಕ್ಕೆ ತಾವೇ ಕೈ ಹಾಕಿದ್ದಾರೆ. ಬಹುಶಃ ಜವಾಹರ್‌ಲಾಲ್ ನೆಹರು ಇಂದಿರಾಗೆ ಬರೆದ ಪತ್ರಗಳನ್ನು 'ಬಂಚ್ ಆಫ್ ಲೆಟರ್ಸ್‌' ಎಂಬ ಹೆಸರಿನಲ್ಲಿ ಪ್ರಕಟಿಸಿದರಲ್ಲ, ಅದೇ ರೀತಿಯಲ್ಲಿ ಸೋನಿಯಾರಿಗೆ ತಾವು ಪ್ರಧಾನಿಗಳಿಗೆ ಬರೆದ ಪತ್ರಗಳನ್ನೆಲ್ಲ ಕೂಡಿಟ್ಟು 'ಇನ್ನಷ್ಟು, ಬಂಚ್ ಆಫ್ ಲೆಟರ್ಸ್‌' ಎನ್ನುವ ಹೆಸರಿನಲ್ಲಿ ಪ್ರಕಟಿಸುವ ಉದ್ದೇಶವಿರಬಹುದೇನೋ! ಈ ಪತ್ರಗಳಿಂದ ಸೋನಿಯಾರಿಗೆ ಇನ್ನೊಂದು ರೀತಿಯ ಲಾಭವಿದೆ- 'ಪ್ರಧಾನಿಗಳಿಂದ ಏನು ಪ್ರತಿಕ್ರಿಯೆ ಬರಬಹುದೋ?' ಎಂದು ಚಿಂತೆ ಮಾಡುವ ಅಗತ್ಯ ಅವರಿಗೆ ಎದುರಾಗುವುದಿಲ್ಲ. ಪ್ರಧಾನಿಗಳಿಗೆ ಬರೆದ ಒಂದು ಪತ್ರದಲ್ಲಿ(ನಿಸ್ಸಂಶಯವಾಗಿಯೂ ನಮ್ಮ ಪ್ರಧಾನಿಗಳಿಗೇ) ಭಾರತೀಯ ಸೈನಿಕರನ್ನು ಪಾಕಿಸ್ತಾನಿ ಸೈನಿಕರು ಬರ್ಬರವಾಗಿ ಕೊಂದದ್ದನ್ನು ಸೋನಿಯಾ ಖಂಡಿಸಿದ್ದಾರೆ. ಇದಪ್ಪ ದೇಶಭಕ್ತಿ ಅಂದರೆ. ಜೈ ಹಿಂದ್!ಆದರೆ ದುರ್ಗಾ ಶಕ್ತಿಯವರ ಕುರಿತಾಗಿ ಬರೆದ ಪತ್ರ ಈ ರೀತಿ ತಮ್ಮ ಕುತ್ತಿಗೆಗೆ ಬಂದು ಸುತ್ತಿಕೊಳ್ಳುತ್ತದೆ ಎನ್ನುವುದನ್ನು ಮಾತ್ರ ಅವರು ನಿರೀಕ್ಷಿಸಿರಲಿಲ್ಲ. ಇಲ್ಲಿಯವರೆಗೂ 'ಪ್ರಾಮಾಣಿಕತೆ ಮೆರೆದ ಪಾಪಕ್ಕೆ' ಸುಮಾರು 200 ಐಎಎಸ್ ಅಧಿಕಾರಿಗಳು ಶಿಕ್ಷೆ ಅನುಭವಿಸಿದ್ದಾರೆ. ಅವರುಗಳಲ್ಲಿ ಅರ್ಧದಷ್ಟು ಮಂದಿ ಉತ್ತರಪ್ರದೇಶದಲ್ಲಿದ್ದಾರೆ ಎನ್ನುವ ಸಂಗತಿ ನಿಮಗೆ ಆಶ್ಚರ್ಯ ತರಿಸಬಹುದಾದರೂ, ಅದು ನಿಜ. ಅಖಿಲೇಶ್-ಮುಲಾಯಂ ಸರ್ಕಾರ ಮತ್ತು ಕ್ರಿಮಿನಲ್ ಶಕ್ತಿಗಳ ನಡುವಿನ ಅನುರಾಗ ದಿನೇ ದಿನೇ ಹೆಚ್ಚಾಗುತ್ತಲೇ ಸಾಗುತ್ತಿದೆ. ಮಾಯಾವತಿ ಸರ್ಕಾರದ ಬಿಸಿ ಬಾಣಲೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಉತ್ತರಪ್ರದೇಶದ ಮತದಾರರು ಈಗ ಅಖಿಲೇಶ್ ಸರ್ಕಾರವೆಂಬ ಬೆಂಕಿಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ.
ದುರ್ಗಾರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸೋನಿಯಾ ಪ್ರಧಾನಿಗೆ ಪ್ರಾಮಾಣಿಕವಾಗೇ ಪತ್ರ ಬರೆದಿರಬಹುದು. ಆದರೆ ಸಂಕಷ್ಟದಲ್ಲಿ ಸಿಲುಕಿದ್ದ ಮುಲಾಯಂರಿಗೆ ಈ ಪತ್ರವೇ ಚರ್ಚೆಯ ಹಾದಿ ತಪ್ಪಿಸಲು ಸಹಕಾರಿಯಾಯಿತು. ಹರ್ಯಾಣಾದ ಕಾಂಗ್ರೆಸ್ ಸರ್ಕಾರ ಖೇಮ್ಕಾರನ್ನು ವರ್ಗಾವಣೆ ಮಾಡಿದಾಗ ಏಕೆ ಸೋನಿಯಾ ಪ್ರಧಾನಿಗಳಿಗೆ ಪತ್ರ ಬರೆಯಲಿಲ್ಲ ಎಂದು ಮುಲಾಯಂ ಪ್ರಶ್ನಿಸುತ್ತಿದ್ದಾರೆ. ಒಳ್ಳೆಯ ಪ್ರಶ್ನೆಯೇ. ಭಾರತದ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ನಡುವಿನ ಭೂ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎನ್ನುವ ಕಾರಣಕ್ಕೆ ಅಶೋಕ್ ಖೇಮ್ಕಾ ಕ್ರಮ ಕೈಗೊಂಡಿದ್ದರು. ಆಗ ಅವರ ಮೇಲೆಯೇ ಕ್ರಮ ಕೈಗೊಂಡಿತು ಹರ್ಯಾಣಾ ಸರ್ಕಾರ. ಅಷ್ಟಕ್ಕೆ ನಿಲ್ಲದೆ, ರಾಬರ್ಟ್ ವಾದ್ರಾರಿಗೆ 'ಕ್ಲೀನ್ ಚಿಟ್‌' ಕೊಟ್ಟು ಕೃತಾರ್ಥವೂ ಆಯಿತು. ಸೋನಿಯಾಗಾಂಧಿ ದುರ್ಗಾ ಶಕ್ತಿಯವರಿಗೆ ಪತ್ರ ಬರೆದಾಗ ಅವರ ಇಬ್ಬಗೆಯ ನೀತಿ ಬಹಿರಂಗವಾಯಿತು. ಈ ಬಗ್ಗೆ ವಿವರಣೆ ನೀಡುವುದಕ್ಕೆ ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ.
ಬೂಟಾಟಿಕೆ ಮತ್ತು ಅಪರಾಧ ನಮ್ಮನ್ನು ಆಳತೊಡಗಿದಾಗ ಹೊರಗಿನ ಆಪತ್ತುಗಳೇಕೆ ಬೇಕು? ಆದರೂ ನಮ್ಮ ಧೀರ್ಘಕಾಲಿಕ ಹಿಂಸಕರು ಎಂದಿಗೂ ನಮ್ಮನ್ನು ಹಿಂಸಿಸುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಮೂಡ್ ಬಂದಾಗಲೆಲ್ಲ ಚೀನಿಯರು ಲದಾಖ್‌ಗೆ ನುಗ್ಗಿ ಹಿಂಸೆ ಕೊಡುತ್ತಾರೆ. ಮೂಡ್ ಬಂದಾಗಲೆಲ್ಲ ಪಾಕಿಸ್ತಾನ ನಮ್ಮ ಸೈನಿಕರ ತಲೆ ಕಡಿದು ಕೇಕೆ ಹಾಕುತ್ತದೆ. ಇದಕ್ಕೆ ಪ್ರತಿಯಾಗಿ ಅವರ ಮೇಲೆ ನಾವೂ ದಾಳಿ ಮಾಡುತ್ತೇವೆ, ಆದರೆ ನ್ಯೂಸ್ ಚಾನೆಲ್‌ಗಳ ಮೂಲಕ ಮತ್ತು ಸಂಸತ್ತಿನಲ್ಲಿ ಅಬ್ಬರಿಸುವ ಮೂಲಕ! ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ, ಹುಸಿ ಶೌರ್ಯ ಪ್ರದರ್ಶನ ಮಾಡುವುದರಲ್ಲಿ ಪ್ರಪಂಚದ ಯಾವುದೇ ಟಿ.ವಿ. ಆ್ಯಂಕರ್‌ಗಳು ಮತ್ತು ರಾಜಕಾರಣಿಗಳು ನಮ್ಮವರಿಗೆ ಸಾಟಿಯಾಗಲಾರರು. ಬಹುಶಃ ರುಪಾಯಿಯಂತೆ ನಮ್ಮ ದೇಶವೂ ಕುಸಿದು ಹೋಗುತ್ತದೇನೋ?


-ಟಿಜೆಎಸ್ ಜಾರ್ಜ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.