ಅಂಕಣಗಳು

ಶಿಖರ ಶ್ರೇಣಿಯ ಸುಪ್ತಹಾದಿಯಲ್ಲಿ ಗುಪ್ತಕಾಶಿಯೆಡೆ...

ಮಾಮೂಲಿ ಬಿಸ್ಕೇಟ್‌ಗಳೂ ಅಷ್ಟೊಂದು ರುಚಿಯಿರಲು ಸಾಧ್ಯ ಎಂಬುದು....

Published On :

ಪ್ರವೋಹತ್ತರಕಾಂಡ, ಭಾಗ-10

ಮಾಮೂಲಿ ಬಿಸ್ಕೇಟ್‌ಗಳೂ ಅಷ್ಟೊಂದು ರುಚಿಯಿರಲು ಸಾಧ್ಯ ಎಂಬುದು ಜೀವನದಲ್ಲಿ ಅರಿವಾದದ್ದೇ ಅವತ್ತು. ಬೆಳಗ್ಗಿನಿಂದ ಹೊಟ್ಟೆಯಲ್ಲಿ ಏನೇನೂ ಇರಲಿಲ್ಲ. ಉತ್ತರಕಾಶಿಯಿಂದ ಬರುವಾಗ ಒಂದಕ್ಕೆ ಎರಡುಪಟ್ಟು ಹಣ ತೆತ್ತು ಖರೀದಿಸಿದ್ದ ನೀರಿನ ಬಾಟಲ್‌ನಲ್ಲಿನ ಕೊನೇ ಹನಿಯನ್ನು ತುಟಿಗಳಿಗೆ ಸೋಂಕಿಸಿಕೊಂಡು ಎಷ್ಟೋ ಹೊತ್ತಾಗಿ ಹೋಗಿತ್ತು. ನಾಲಗೆ ತುದಿಯಿಂದ ಎಲ್ಲವೂ ಒಣಗಿ ಹೋಗಿತ್ತು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವ ಅನುಭವ. ದಾರಿಯುದ್ದಕ್ಕೂ ಹುಡುಕಿದರೂ ಒಂದು ಕಾಳು ಅನ್ನವೂ ಸಿಗದ ಸ್ಥಿತಿ. ಬಸ್ ಎಂದು ಕರೆದುಕೊಳ್ಳುವ ಜಟಕಾ ಬಂಡಿಯೇರಿ ಆರು ತಾಸುಗಳೇ ಕಳೆದುಹೋಗಿತ್ತು. ಮುನ್ನಾದಿನ ತಿಲ್ವಾಡಾ, ಅಗಸ್ತ್ಯಮುನಿಗಳಲ್ಲಿನ ಅವಾಂತರವನ್ನು ಕಂಡು ವಿಷಾದದ ಛಾಯೆ ಹೊತ್ತು, ಉತ್ತರ ಕಾಶಿ ಮಾರ್ಗದಲ್ಲಿ ತೆಹ್ರಿ ಅಣೆಕಟ್ಟಿನ ದೈತ್ಯಾಕಾರಕ್ಕೆ ಬೆರಗಾಗಲೋ, ಮರುಗಲೋ ತಿಳಿಯದೇ ಸಂದಿಗ್ಧದಲ್ಲೇ ಹೊರಟು, ಇನ್ನಷ್ಟು ಸಂತ್ರಸ್ತ ಹಳ್ಳಿಗಳನ್ನು ಸುತ್ತಾಡಿ ಹೋಟೆಲ್ ರೂಮು ಸೇರುವಷ್ಟರಲ್ಲಿ ಕೈಕಾಲುಗಳಲ್ಲಿ ಒಂಚೂರೂ ತ್ರಾಣ ಇರಲಿಲ್ಲ. ಆಯಾಸ, ಸುತ್ತಾಟ, ಸತತ ಪ್ರಯಾಣದ ಒತ್ತಡಗಳಿಂದಾಗಿ ವಾಕರಿಕೆಯ ಅನುಭವ ಇನ್ನಷು ಹಿಂಸೆ ಕೊಡಲಾರಂಭಿಸಿತ್ತು. ಒಂದೆರಡು ಬಾರಿ ವಾಂತಿಯೂ ಆಗಿತ್ತು. ಉದ್ದಕ್ಕೂ ತೀವ್ರ ತಿರುವುಗಳ ಬೆಟ್ಟದ ಹಾದಿ, ನಿದ್ದೆಯ ಕೊರತೆ, ಹಾದಿಯಲ್ಲಿ ಸಿಕ್ಕದ್ದೇ ಆಹಾರವೆಂಬಂತಾಗಿ ಹೊಟ್ಟೆ ಮಾತು ಕೇಳುತ್ತಲೇ ಇರಲಿಲ್ಲ. ಹಾಸಿಗೆ ಕಂಡದ್ದಷ್ಟೆ ಗೊತ್ತಿತ್ತು. ಬೆಳಗ್ಗೆ ನನ್ನ ಸಾರಥಿ ಸತ್ಯೇಂದರ್ ಅಕ್ಷರಶಃ ಬಡಿದು ಎಬ್ಬಿಸಿದ್ದ. ಒಂದಷ್ಟು ನಿದ್ದೆ, ಸ್ನಾನದ ಹಿತದಿಂದ ತುಸು ನಿರಾಳವಾದಂತೆ ಕಂಡಿತು. 'ಕೇ...ಕೇ... ಕ್ಹೇದಾರ್ ಜಾನೇ ಕೇ..ಕೇ... ಕ್ಹೇಲಿಯೆ ದೂಸರಾ ಔರ್ ರಾಸ್ತಾ ಹೈ ಸಾಬ್. ಚ...ಚ... ಚ್ಹಲಿಯೇನಾ... ಉಠೊನಾ ಸಾಬ್ ಜಲ್ದಿ, ಜಲ್ದಿ' ಸತ್ಯಾ ಭಾಯಿಯ ಉಗ್ಗು ಮತ್ತೆ ಆಪ್ತವಾಗಿ ಕಂಡಿತು. ಅದೇ ಸಂಭ್ರಮದಲ್ಲಿ ಇದ್ದಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು ಹೊರಟೆ. ಕಾರನ್ನೇರುವ ಮುನ್ನ ಕೊನೇಪಕ್ಷ ಒಂದು ಪರೋಟವನ್ನಾದರೂ ಹೊಟ್ಟೆಗಿಳಿಸಬೇಕೆಂಬ ಪ್ರಯತ್ನ ವಿಫಲವಾಯಿತು. ರಾತ್ರಿಯೂ ಏನೂ ತಿನ್ನಲಾಗಿರಲಿಲ್ಲ. ಕಾಳುಮೆಣಸು, ಅಲೂ, ಮೈದಾ ಸೇರಿದ ವಾಸನೆ ಇನ್ನಷ್ಟು ವಾಕರಿಕೆ ತರಿಸಿತು. ಒಂದಷ್ಟು ನೀರು ಕುಡಿದು ಟ್ಯಾಕ್ಸಿ ಏರಿದ್ದೆ.
ರುದ್ರ ಪ್ರಯಾಗದಿಂದ ತುಸು ಮುಂದಕ್ಕೆ ಹೋದರೆ ಬಲಕ್ಕೆ ಬದರಿಯ ಹಾದಿ, ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಕೇದಾರದತ್ತ ಮಾರ್ಗ, ಮತ್ತೂ ಎಡಕ್ಕೆ ಹೊರಟರೆ ಉತ್ತರಕಾಶಿ, ಗಂಗೋತ್ರಿ ಕಡೆ ಹೋಗಬಹುದು. ಬದರಿಯ ಹಾದಿ ಜೋಶಿಮಠಕ್ಕೆ ಅಂತ್ಯವಾಗಿದೆ. ಅಲ್ಲಿಂದ ಮುಂದಿನ ಸುಮಾರು ಹದಿನಾಲ್ಕು ಕಿ.ಮೀ. ರಸ್ತೆ ಪ್ರವಾಹದಲ್ಲಿ ಮುಚ್ಚಿಹೋಗಿದೆ. ಹಾಗೆಂದು ಬದರಿಯಲ್ಲಿ ಯಾವುದೇ ಅವಘಡಗಳಾಗಿಲ್ಲ. ಉತ್ತರಕಾಶಿಯ ಭಾಗದಲ್ಲಿ ಕಳೆದ ವರ್ಷವೂ ಸಾಕಷ್ಟು ಪ್ರವಾಹ ಬಂದು ಹಾವಳಿ ಎಬ್ಬಿಸಿಹೋಗಿತ್ತು. ಆ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ವರ್ಷವೂ ಅದು ಪ್ರವಾಹದ ಫಲಾನುಭವಿ. ಇನ್ನು ಕೇದಾರಕ್ಕೇ ಹೋಗುವ ಮುಖ್ಯ ಮಾರ್ಗ 85 ಕಿ.ಮೀ. ಉದ್ದಕೂ ಎಲ್ಲೆಂದರಲ್ಲಿ ಕುಸಿದು ಕುಳಿತಿದೆ. ಅದು ದುರಸ್ತಿಯಾಗಲು ಇನ್ನು ಎರಡು ವರ್ಷಗಳಾದರೂ ಬೇಕು. ಹೀಗಾಗಿ ಸತ್ಯೇಂದರ್ ಉತ್ತರಕಾಶಿ ಭಾಗದಲ್ಲಿ ಮುನ್ನಡೆದು ಮಯಾಲಿ ಮೂಲಕ ಬೆಟ್ಟವನ್ನೇರಿ ಸಾಗುವ ಪರ್ಯಾಯ ಮಾರ್ಗದಲ್ಲಿ ಕೇದಾರ ಸೇರಲು ಯೋಜಿಸಿದ್ದುದು ತಡವಾಗಿ ಅರಿವಿಗೆ ಬಂತು. ಗುಪ್ತಕಾಶಿಯವರೆಗೆ ಹೋಗಿಬಿಡೋಣ. ಅಲ್ಲಿಂದ ಮುಂದೆ ಕೇದಾರ 27 ಕಿ.ಮೀ. ಮಾತ್ರ. ಅಲ್ಲಿನ ಚಾರ್‌ಧಾಮ್ ಮಿಲಿಟರಿ ಕ್ಯಾಂಪ್‌ನಲ್ಲಿ ಚಾಪರ್ ಇದೆಯಂತೆ ಎಂಬ ಮಾಹಿತಿಯನ್ನು ರಾತ್ರಿ 'ತೀರ್ಥ' ಸೇವನೆಗೆ ಹೋಗಿದ್ದಾಗ ಸಂಗ್ರಹಿಸಿಕೊಂಡು ಬಂದಿದ್ದ ಸತ್ಯೇಂದರ್. ಕೊನೆಗೂ ಕೇದಾರ ಕನಸು ನನಸಾಗುತ್ತದಲ್ಲ ಎಂದು ಒಳಗೊಳಗೇ ಪುಳಕಗೊಳ್ಳುತ್ತಿತ್ತು. ಪೈನ್ ಮರಗಳ ಸಾಲನ್ನು ಹಿಂದಿಕ್ಕುತ್ತಾ ಟ್ಯಾಕ್ಸಿ ಓಡುತ್ತಿತ್ತು. ಮರಗಳನ್ನು ದಿಟ್ಟಿಸುತ್ತಾ ಸಾಗುತ್ತಿದ್ದುದಕ್ಕೋ ತಿರುವು ಹೆಚ್ಚಿದ್ದರಿಂದಲೋ ಆಸಾಯದಿಂದಲೋ ಹಸಿವಿನಿಂದಲೋ ವಾಕರಿಕೆ ಇನ್ನಷ್ಟು ಹೆಚ್ಚಿ ಸಂಕಟ ತಡೆದುಕೊಳ್ಳಲಾಗುತ್ತಿರಲಿಲ್ಲ. ಏನೂ ಬೇಡ ತಿರುಗಿ ಹೊರಟು ಬಿಡೋಣ ಎನ್ನುವ ಹಂಬಲ ಮೂಡುತ್ತಿತ್ತು. ಇಷ್ಟಕ್ಕೇ ಹೆದರಿ ಹೊರಟರೆ ಪ್ರವಾಹದ ಸಂತ್ರಸ್ತ ಹಳ್ಳಿಹಳ್ಳಿ ಸುತ್ತಿ ಬರುತ್ತೇನೆ, ಕೇದಾರವನ್ನು ಕಣ್ಣಾರೆ ಕಂಡೇ ಬರುತ್ತೇನೆ... ಅದು ಎಷ್ಟೇ ದಿನಗಳಾಗಲಿ... ಅಂತೆಲ್ಲ ಬೆಂಗಳೂರಿನಲ್ಲಿ ಬಡಾಯಿ ಕೊಚ್ಚಿ ಬಂದದ್ದು ನೆನಪಾಗಿ ನಾಚಿಕೆಯಾಯಿತು. ಮನಸ್ಸು ಗಟ್ಟಿಮಾಡಿಕೊಂಡು ಕೂತೆ. ಮತ್ತೊಂದು ಅವೋಮಿನ್, ರ್ಯಾಂಟ್ಯಾಕ್ ಮಾತ್ರೆಗಳು ಒಳಹೋಗಿತ್ತು. ಸತ್ಯಭಾಯಿ ಮತ್ತೆ ಮಾತಿಗೆ ಶುರುವಿಟ್ಟುಕೊಂಡಿದ್ದ, ಮಾತ್ರೆಯ ಪರಿಣಾಮ ಸಣ್ಣ ಜೋಂಪು ಹತ್ತಿತ್ತು. ಎಚ್ಚರಾದಾಗ ಭರದಿಂದ ಹರಿಯುತ್ತಿರುವ ಅಲಕೆಯ ತೀರಾ ಸನಿಹದಲ್ಲೇ ಟ್ಯಾಕ್ಸಿ ನಿಂತಿತ್ತು. ಮುಂದಿನ ಸೀಟಿನಲ್ಲಿ ಸತ್ಯಾಭಾಯಿ ಕಾಣಲಿಲ್ಲ. ರಿಲ್ಯಾಕ್ಸ್ ಮಾಡಲು ತೆರಳಿರಬಹುದು ಎಂದುಕೊಂಡು ಮತ್ತೆ ಕಣ್ಮುಚ್ಚಲು ಹೊರಟವನಿಗೆ ಗದ್ದಲದಿಂದ ಪೂರ್ತಿ ಎಚ್ಚರಾಯಿತು. ನೋಡಿದರೆ ನಮ್ಮ ಟ್ಯಾಕ್ಸಿಯ ಹಿಂದೆ ಏನಿಲ್ಲವೆಂದರೂ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಿಟಕಿಯಿಂದ ಇಣುಕಿದರೆ ಮುಂದಿನ ರಸ್ತೆಯ ಮೇಲೆ ಮೂವತ್ತು ಅಡಿಯಷ್ಟು ಗುಡ್ಡ ಕುಸಿದು ಬಿದ್ದಿತ್ತು. ಜೆಸಿಬಿ ಮಣ್ಣಿನ ರಾಶಿಯನ್ನು ಬಗೆದು ಅದರ ಮೇಲೇ ತಾತ್ಕಾಲಿಕ ರಸ್ತೆ ನಿರ್ಮಿಸುವ ಕಾರ್ಯದಲ್ಲಿ ನಿರತವಾಗಿತ್ತು. ಅಷ್ಟರಲ್ಲಿ ಸತ್ಯೇಂದರ್ ಬಂದು ಟ್ಯಾಕ್ಸಿಯೊಳಗೆ ಇಣುಕಿದ. ಇನ್ನೂ ಒಂದೂವರೆ ತಾಸುಗಳಾದರೂ ಬೇಕು ರಸ್ತೆ ನಿರ್ಮಾಣವಾಗಲು. ಆನಂತರ ಎರಡೂ ಕಡೆಯ ತಲಾ ಒಂದೊಂದು ವಾಹನವನ್ನು ಸರದಿಯಂತೆ ಬಿಡುತ್ತಾರೆ! ನಮ್ಮ ಸರದಿ ಬರುವಾಗ ಇನ್ನೂ ಅರ್ಧಗಂಟೆ ಹೆಚ್ಚಾಗಬಹುದು ಎಂದು ವರದಿಯೊಪ್ಪಿಸಿದ. ಬೇರೇ ವಾಹನಗಳ ಚಾಲಕರು ಇದು ಸಹಜ ಎಂಬಂತೆ ಗಾಡಿ ಪಾರ್ಕ್ ಮಾಡಿ ಇಳಿದು ಹರಟೆಯಲ್ಲಿ ನಿರತರಾಗಿದ್ದರು. ಮಾತು ಮತ್ತದೇ ಪ್ರವಾಹದ ಸುತ್ತಲೇ ಸುತ್ತುತ್ತಿತ್ತು ಎಂದು ಪ್ರತ್ಯೇಕ ಹೇಳಬೇಕಿಲ್ಲ. ಏಕೆಂದರೆ ಒಂದೂವರೆ ತಿಂಗಳಿನಿಂದ ಇಬ್ಬರು ವ್ಯಕ್ತಿಗಳು ಸೇರಿದರೆಂದರೆ ಜೂನ್ 16ರ ಜಲಪ್ರಳಯ, ನಂತರದ ಪರಿಸ್ಥಿತಿ ಬಿಟ್ಟು ಬೇರಿನ್ನೇನೂ ಮಾತನಾಡುತ್ತಿಲ್ಲ ಅಲ್ಲಿನ ಜನ. ಅಷ್ಟರಲ್ಲಿ ಯಾವುದೋ ಚಾಲಕನನ್ನು ಸತ್ಯಾ ಮಾತಿಗಳೆದು ಕೇದಾರಕ್ಕೆ ಹೋಗುವ ಮುಂದಿನ ಹಾದಿಯ ಸ್ಥಿತಿಗತಿಗಳ ಬಗ್ಗೆ ವಿಚಾರಿಸಲು ತೊಡಗಿದ್ದ. ಆತ ಹೇಳಿದ ಸಂಗತಿ ಮತ್ತೆ ಚಿಂತೆಗೆ ಈಡುಮಾಡಿತ್ತು. ಮಯಾಲಿಯಿಂದ ಮುಂದೆ ಖಂಡಿತಾ ನನ್ನ ಪುಟ್ಟ ಟಾಟಾ ಇಂಡಿಕಾದಲ್ಲಿ ಹೋಗಲು ಸಾಧ್ಯವೇ ಇಲ್ಲ. ರಸ್ತೆ ಅಷ್ಟೊಂದು ಹದಗೆಟ್ಟಿದೆ. ತೀರಾ ದುಸ್ಥಿತಿಯಲ್ಲಿರುವ ರಸ್ತೆಯಲ್ಲಿ ವಿಪರಿತ ಓಡಾಟ, ಮಳೆಯ ಕಾರಣಕ್ಕೆ ಉದ್ದಕ್ಕೂ ಆಳದ ಕೊರಕಲು ನಿರ್ಮಾಣವಾಗಿದೆ. ಅಲಲ್ಲಿ ಭೂಕುಸಿತದ ಮಣ್ಣಿನಿಂದ ಕೆಸರು ತುಂಬಿದೆ. ಚಕ್ರಗಳು ಹುಗಿದುಕೊಳ್ಳುತ್ತವೆ. ಸ್ವಲ್ಪವೇ ಸ್ಕಿಡ್ ಅದರೂ ಪ್ರಪಾತವೇ ಗತಿ ಎಂದು ಹೆದರಿಸಿದ. ಕೊನೆಗೆ ಅವನೇ ಪರಿಹಾರ ಸೂಚಿಸಿ ತನ್ನ ಜೀಪ್ ಹಿಂಬಾಲಿಸುವಂತೆ ಸೂಚಿಸಿ, ಮಯಾಲಿಯಲ್ಲಿ ಗಾಡಿ ನಿಲ್ಲಿಸಿ ತನ್ನ ವಾಹನದಲ್ಲಿಯೇ ಗುಪ್ತಕಾಶಿವರೆಗೆ ಬರಬಹುದು ಎಂಬ ಪರಿಹಾರವನ್ನೂ ಸೂಚಿಸಿದ. ಮಯಾಲಿ ಇನ್ನೂ ಹತ್ತು ಕಿ.ಮೀ. ದೂರವಿತ್ತು ನಾವಿದ್ದ ಸ್ಥಳಕ್ಕೆ. ಸತ್ಯಾಭಾಯಿ ನನ್ನ ಮುಖ ನೋಡಿದ. ನನ್ನದೇನಿತ್ತು ಅಲ್ಲಿ? ಪರಿಸ್ಥಿತಿಗೆ ತಕ್ಕಂತೆ ಮುನ್ನಡೆಯಲೇಬೇಕಿತ್ತು. 'ಚಲೋ' ಎಂದೆ. ಬಿಸಿಲು ಬಾರಿಸುತ್ತಿತ್ತು. ಏನಿಲ್ಲವೆಂದರೂ 36 ಡಿಗ್ರಿ ಇದ್ದಿರಬಹುದು ಎಂದುಕೊಂಡೆ. ರಾತ್ರಿ ಮಳೆ, ಹಗಲಿನ ವಿಪರೀತ ಬಿಸಿಲು ಎರಡೂ ಹಿಮಾಲಯ ಕಣಿವೆಯ ಮಂದಿಯನ್ನು ಬಿಡದೇ ಕಾಡುತ್ತಿದ್ದವು. ಪರಿಹಾರ ಪುನರ್ವಸತಿ ವಿಳಂಬಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ.
ಹೊತ್ತು ಕಳೆಯಲು ಏನಾದರೂ ಮಾಡಲೇಬೇಕಿತ್ತು. ಆಯಾಸ, ಅಸಹನೆ ಹೆಚ್ಚುತ್ತಿತ್ತು. ಏಕತಾನತೆ ಕಾಡುತ್ತಿತ್ತು. ಯಾರೊಂದಿಗಾದರೂ ಹರಟೆ ಹೊಡೆಯೋಣವೆಂದರೆ ನನ್ನ ಹಿಂದೆ ಕೈಕೊಡುತ್ತದೆ. ಅದೂ ಕಣಿವೆಯ ಭಾಗದ ರಾಗ ಮಿಶ್ರಿತ ಗ್ರಾಮ್ಯ ಹಿಂದಿ ಅರ್ಥೈಸಿಕೊಳ್ಳಲು ತಿಣುಕಾಡಬೇಕು. ನಾವು ಕನ್ನಡಿಗರು ಸಿಕ್ಕಾಪಟ್ಟೆ ಇಷ್ಟ ಪಡುವ ನಮ್ಮ ಪ್ರತಿಷ್ಠೆಯ (?) ಇಂಗ್ಲಿಷ್ ಆ ಭಾಗದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಎಂಬುದು ಉತ್ತರಾಖಂಡಕ್ಕೆ ಬಂದ ದಿನವೇ ಅರ್ಥವಾಗಿತ್ತು. ಭಾರತದ ಇತರೆಲ್ಲೆಡೆ, ಅದೂ ಉತ್ತರಭಾರತದ ಯಾವುದೇ ರಾಜ್ಯಗಳಲ್ಲಿ ನೀವು ಹಿಂದಿ ಕಲಿತಿದ್ದರೆ ಮಾತ್ರವೇ ಬದುಕಬಲ್ಲಿರಿ. ಅದು ಹರುಕು ಮುರುಕಾಗಿದ್ದರೂ ಅವರು ಸಹಿಸುತ್ತಾರೆ. ಆದರೆ ಇಂಗ್ಲಿಷ್ ಇವತ್ತಿಗೂ ಅವರಿಗೆ ಅಲರ್ಜಿಯೇ. ತುಸು ದೂರದಲ್ಲಿ ಜೀನ್ಸ್ ತೊಟ್ಟಿದ್ದ, ಸುಶಿಕ್ಷಿತ ವ್ಯಕ್ತಿಯೊಬ್ಬರು ನನ್ನಂತೆ ಅಸಹನೆಯಿಂದ ಶತಪಥ ಹಾಕುತ್ತಿದ್ದರು. ಇಂಗ್ಲಿಷ್ ವರ್ಕೌಟ್ ಆಗಬಹುದೆಂದು ಪರಿಚಯಿಸಿಕೊಂಡೆ. ಆತ ಆರ್ಕಿಟೆಕ್ಟ್. ಹೆಸರು ಗೌತಮ್ ಭಾಟಿಯಾ. ಖಾಸಗಿ ಕಂಪನಿಯಿಂದ ನೇಮಕಗೊಂಡವನು. ಪ್ರವಾಹದಲ್ಲಿ ಕುಸಿದ ಬೃಹತ್ ಹೋಟೆಲ್ ಕಟ್ಟಡದ ಪುನರ್ ನಿರ್ಮಾಣ ಯೋಜನೆಗೆ ಹೊರಟಿದ್ದ. ಅವರ ಪ್ರಕಾರ 'ರಾಜ್ಯವನ್ನು ಮರುನಿರ್ಮಾಣ ಮಾಡುವುದು ಅತ್ಯಂತ ಕ್ಲಿಷ್ಟ ಸಮಸ್ಯೆ. ಹೊರಗಿನ ಜನರು ಬೇಸಿಗೆ ಹೋಮ್ಸ್, ಅಪಾರ್ಟ್‌ಮೆಂಟ್ಸ್ ಕಟ್ಟಲು, ಸುಂದರ ತಾಣಗಳ ಭೂಪ್ರದೇಶವನ್ನು ಆಕ್ರಮಿಸುತ್ತಿದ್ದಾರೆ. ಆ ಮೂಲಕ ಎಕೋ ಟೂರಿಸಂ ಮತ್ತು ಧಾರ್ಮಿಕ ಪ್ರವಾಸವನ್ನು ಉದ್ದಿಮೆಯಾಗಿಸಲು ಹವಣಿಸಲಾಗುತ್ತಿದೆ. ಇದಕ್ಕಾಗಿ ಒಂದು ಸಮಗ್ರ ನಿಯಮಾವಳಿ ಜಾರಿಗೆ ತರಲೇಬೇಕು. ಇಲ್ಲದಿದ್ದರೆ ಇಂಥ ಅವಾಂತರಗಳು ಇನ್ನು ಪ್ರತಿ ವರ್ಷದ ಮಾತಾಗಬಹುದು...' ತಜ್ಞನೊಬ್ಬನ ಕಳಕಳಿ ಮಾತಿನಲ್ಲಿ ವ್ಯಕ್ತವಾಗಿತ್ತು.
ಅಷ್ಟರಲ್ಲಿ ಅದೇ ಹಾದಿಯಲ್ಲಿ ಪಯಣಿಸುತ್ತಿದ್ದ ಇಂಡೋ, ಟಿಬೇಟಿಯನ್ ಬಾರ್ಡರ್ ಪೊಲೀಸ್ ಮಾಜಿ ಡೈರೆಕ್ಟರ್ ಜನರಲ್ ಗೌತಮ್ ಕೌಲ್ ಆಕಸ್ಮಿಕವಾಗಿ ಪರಿಚಯವಾದರು. ಪಕ್ಕಾ ಪತ್ರಕರ್ತನ ಶೈಲಿಯಲ್ಲೇ ತಮ್ಮ ಅಭಿಪ್ರಾಯವೇನು ಸರ್ ಎಂದೆ. ವಿಚಿತ್ರವಾಗೊಮ್ಮೆ ನನ್ನನ್ನು ದಿಟ್ಟಿಸಿ 'ಈ ಪ್ರದೇಶದಲ್ಲಿನ ರಸ್ತೆಗಳನ್ನು ಡೊಂಕಾಗಿರುವ ಬದಲು ಗುಡ್ಡದ ಬಳಿ ನೇರವಾಗಿ ನಿರ್ಮಿಸಬೇಕು. ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲಿ ಬೆಟ್ಟಗಳ ಮೂಲಕ ಕೊರೆದು ರಸ್ತೆ ನಿರ್ಮಿಸಲಾಗಿದೆ. ಇದರಿಂದ ಮಣ್ಣಿನ ಸವಕಳಿಯಿಂದಾಗಿ ರಸ್ತೆಗಳು ಅಲ್ಲಲ್ಲಿ ಬ್ಲಾಕ್ ಆಗುವುದು ತಪ್ಪುತ್ತದೆ...' ಎಂದು ಗಂಭೀರವಾಗಿ ಹೇಳಿ ಸುಮ್ಮನಾದರು. ಹೆಚ್ಚಿಗೆ ಮಾತಾಡಲು ಅವರಲ್ಲಿ ಉತ್ಸಾಹ ಇದ್ದಂತಿಲ್ಲ. ಅವರ ಆಕ್ರೋಶ ರಸ್ತೆ ಕುಸಿತದ ಬಗ್ಗೆಯೇ ಇತ್ತು. ಸುದೈವಕ್ಕೆ ರಸ್ತೆ ಅಷ್ಟರಲ್ಲಿ ಸರಿಯಾಗಿತ್ತು! ಲಗುಬಗೆಯಿಂದ ಟ್ಯಾಕ್ಸಿ ಏರಿ ಹೊರಟೆವು. ಮುಂದಿನ ಹದಿನೈದು ನಿಮಿಷದಲ್ಲಿ ಮಯಾಲಿ ತಲುಪಿದ್ದೆವು. ಅಲ್ಲಿಯವರೆಗೆ ನಮ್ಮ ಮುಂದೆಯೇ ಇದ್ದ, ನಮ್ಮನ್ನು ಕರಕೊಂಡು ಹೋಗುತ್ತೇನೆ ಎಂದಿದ್ದ ಜೀಪ್‌ನ ಡ್ರೈವರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟ. ಮಯಾಲಿಯಲ್ಲಿ ತುಸು ವಾಹನ ದಟ್ಟಣೆಯಲ್ಲಿ ಅವನನ್ನು ನಾವು ತಪ್ಪಿಸಿಕೊಂಡುಬಿಟ್ಟಿದ್ದೆವು. ಮುಂದೇನು ಮಾಡುವುದು? ಸಾಕಷ್ಟು ಹೆದರಿಕೆಯನ್ನು ಹುಟ್ಟು ಹಾಕಿ ಅವನು ಹೊರಟು ಹೋಗಿದ್ದ. ಮತ್ತೆ ಪೀಕಲಾಟಕ್ಕಿಟ್ಟುಕೊಂಡಿತು. ಅವನನ್ನು ಹುಡುಕುತ್ತಾ ತುಸು ವೇಗವಾಗಿಯೇ ಹೊರಟೆವು. ಹತ್ತು ಕಿ.ಮೀ. ಸಾಗಿದರೂ ಅವನ ಸುಳಿವಿಲ್ಲ. ಮುಂದೆ ರಸ್ತೆ ತನ್ನ ನೈಜ ಅವತಾರ ತೋರತೊಡಗಿತ್ತು. ಜೀಪ್ ಚಾಲಕ ಹೇಳಿದ್ದು ಸತ್ಯವೆನಿಸಿತು. ಒಂದೊಂದು ಸ್ಥಳದಲ್ಲಂತೂ ರಸ್ತೆಯೇ ಇಲ್ಲದೇ ಬರೀ ಕೆಸರಿನ ಹೊಂಡವಾಗಿ ಮಾರ್ಪಟ್ಟು ಸತ್ಯಾಭಾಯಿ ಜತೆಗೆ ಟ್ಯಾಕ್ಸಿಯೂ ತಡವರಿಸಲಾರಂಭಿಸಿತು. ನಾವು ಪರದಾಡುತ್ತಿರುವಾಗಲೇ ನಮ್ಮನ್ನು ಹಿಂದಿಕ್ಕಿ ಹೋದ ಒಂದಷ್ಟು ದೊಡ್ಡ ವಾಹನಗಳವರು ನಮ್ಮನ್ನು ನೋಡಿ ವಿಚಿತ್ರ ಅನುಕಂಪ, ವ್ಯಂಗ್ಯ, ಹಾಸ್ಯ ಬೆರೆತ ನೋಟ ಬೀರಿ ಮುಂದಕ್ಕೆ ಹೋಗಿದ್ದರು. ಖಂಡಿತಾ ಇನ್ನು ಮುಂದೆ ಇದರಲ್ಲಿ ಪಯಣ ಸಾಧ್ಯವೇ ಇಲ್ಲವೆಂದು ಕೈಚೆಲ್ಲಿದ ಸತ್ಯೇಂದರ್. ತಲೆಮೇಲೆ ಕೈ ಹೊತ್ತು ಕುಳಿತಿದ್ದಾಗಲೇ ದೂರದಲ್ಲಿ ಮಿನಿ ಬಸ್‌ನ ಆಕಾರ ಓಲಾಡುತ್ತಾ ಏದುಸಿರು ಬಿಡುತ್ತಾ ಬರುತ್ತಿರುವುದು ಕಾಣಿಸಿತು. ಏನೋ ಯೋಚಿಸಿದ ನನ್ನ ಸಾರಥಿ 'ಉತರ್ರಿಯೇ ಸಾಬ್ ಉತರ್‌' ಎಂದು ಹರಿಬರಿ ಮಾಡಿದ. ಬಳಿ ಬಂದ ಬಸ್ಸಿಗೆ ಕೈ ಅಡ್ಡಮಾಡಿ ನಿಲ್ಲಿಸಿಬಿಟ್ಟ. ಏನೊಂದೂ ಅರ್ಥವಾಗದೇ ಗಲಿಬಿಲಿಗೊಳಗಾದೆ. ನನ್ನ ಬ್ಯಾಗ್ ಅನ್ನು ಅವನೇ ತೆಗೆದು ಬಸ್‌ಗೆ ಹಾಕಿ ಅವಸರಿಸಿದ. ಟ್ಯಾಕ್ಸಿ ಇಳಿದು ನಿಂತೆ. ಗಾಡಿಯನ್ನು ಅಲ್ಲೇ ಪಕ್ಕದ ಮನೆಯೊಂದರ ಮುಂದೆ ನಿಲ್ಲಿಸಿ ಲಾಕ್ ಮಾಡಿ, ಹೆಚ್ಚೂ ಕಡಿಮೆ ನನ್ನ ಎಳೆದುಕೊಂಡೇ ಬಸ್ ಏರಿದ.
ಅದು ಗುಪ್ತಕಾಶಿಗೆ ಇರುವ ಏಕೈಕ ಬಸ್. ಬೆಳಗ್ಗೆ 6ಕ್ಕೆ ರುದ್ರಪ್ರಯಾಗದಿಂದ ಹೊರಟು ಸಂಜೆ 7ಕ್ಕೆ ಗುಪ್ತಕಾಶಿ ತಲುಪುತ್ತಿತ್ತು. 85 ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ 13 ತಾಸು ತೆಗೆದುಕೊಳ್ಳುತ್ತಿತ್ತು. ಅಂತೂ ಗುಪ್ತಕಾಶಿ ತಲುಪುವುದು ಖಚಿತವಾಯಿತು ಎಂದುಕೊಂಡೆ. ಆದರೆ ಅರ್ಧ ತಾಸೂ ಕಳೆದಿರಲಿಲ್ಲ. ಎದುರಿದ್ದ ರಸ್ತೆ, ಬಸ್‌ನ ಓಲಾಟ ನೋಡಿ ಬೆವತುಬಿಟ್ಟೆ. ಜೀವಂತ ಹೋಗಿ ಸೇರುವ ಬಗ್ಗೆ ಸಂಶಯ ಮೊಳತದ್ದೇ ಅಲ್ಲಿ. ಹೆಜ್ಜೆ ಹೆಜ್ಜೆಗೂ ಅಪಾಯ ಎದುರಾಗುತ್ತಿತ್ತು. ಏರು ದಿಣ್ಣೆ, ಹೊಂಡ, ಭೂ ಕುಸಿತಗಳ ಸರಣಿಯನ್ನು ದಾಟಿ ಗಿರಿಯ ತುತ್ತತುದಿಗೆ ಏರಿ ಹೊರಟಿತ್ತು ನಮ್ಮ ಜಟಕಾಗಾಡಿ. ಮೇಲೇರಿದಂತೆಲ್ಲ ಉಸಿರಾಟ ಕಷ್ಟವಾಗತೊಡಗಿತು. ಹೊಟ್ಟೆ ಮತ್ತಷ್ಟು ತೊಳೆಸಲಾರಂಭಿಸಿತು. ಹಸಿವು, ನಿತ್ರಾಣ ಹೆಚ್ಚುತ್ತಲಿತ್ತು. ಜೊತೆಗೆ ಪರ್ವತಪ್ರದೇಶದಲ್ಲಿ ಮೊದಲ ಬಾರಿಗೆ ಆಮ್ಲಜನಕದ ಕೊರತೆ ಅನುಭವಿಸತೊಡಗಿದ್ದೆ. ಕಿವಿಗಳು ದಬಾಕಿಕೊಂಡುಬಿಟ್ಟವು. ಏದುಸಿರುಬಿಡತೊಡಗಿದ್ದೆ. ಆಗಲೇ ಹತ್ತಾರು ಹಳ್ಳಿ ದಾಟಿ ಬಂದಿದ್ದೆ. ಪಕ್ಕಕ್ಕೆ ಹೊರಳಿದೆ. ನೂರಾರು ಮೀಟರ್‌ನ ಕಂದಕ. ಸ್ವಲ್ಪ ಆಯತಪ್ಪಿದರೆ... ತಲೆ ಸುತ್ತಿ ಬಂತು. ಕಣ್ಮುಚ್ಚಿ ಕುಳಿತೆ. ಡ್ರೈವರ್ ನೆನಪಾದ ತುಸುವೇ ಕಣ್ಣುಬಿಟ್ಟು ಮುಂದೆ ನೋಡಿದೆ. ಆತ ಏಕಾಗ್ರತೆಯಿಂದ ಗಾಡಿ ಓಡಿಸುತ್ತಿದ್ದ. ಸ್ವಲ್ಪ ಧೈರ್ಯ ಬಂತು. ಬ್ಯಾಗ್‌ನಿಂದ ನೀರಿನ ಬಾಟಲ್ ತೆಗೆದು ನೋಡಿದೆ. ಒಂದೇ ಒಂದು ಹನಿ ನೀರಿತ್ತು. ತುಟಿಗಳನ್ನು ಒದ್ದೆ ಮಾಡಿಕೊಂಡೆ. ದಾಹ, ಹಸಿವು ಇಮ್ಮಡಿಸಿತ್ತು. ಪಕ್ಕದಲ್ಲಿದ್ದ ಸತ್ಯೇಂದರ್ ಏನೂ ಹೇಳದೇ ನನ್ನ ಭುಜವನ್ನು ಮೃದುವಾಗೊಮ್ಮೆ ಒತ್ತಿದ. 'ಮೈ ಹ್ಞೂಂ ನಾ' ಎಂದ ಅಂದುಕೊಂಡೆ. ಹತ್ತು ನಿಮಿಷದಲ್ಲಿ ಪುಟ್ಟ ಹಳ್ಳಿ ಸಿಕ್ಕಿತ್ತು. ಬಸ್ ನಿಲ್ಲಿಸಿ. ಎರಡು ಬಿಸ್ಕೆಟ್ ಪೊಟ್ಟಣ ತಂದು ಕೈಗಿಟ್ಟ. ಬರಗೆಟ್ಟವನಂತೆ ತಿಂದೆ. ನೀರಿನ ಬಾಟಲಿಯನ್ನು ಅಲ್ಲೇ ತುಂಬಿಸಿಕೊಂಡು ಬಂದಿದ್ದ. ಗಟಗಟನೆ ಒಂದಷ್ಟು ನೀರನ್ನು ಹೊಟ್ಟೆಗೆ ಸುರುವಿಕೊಂಡೆ. ಸ್ವಲ್ಪ ಹಾಯ್ ಎನಿಸಿತು. ಹೊತ್ತು ಇಳಿಯುತ್ತಿತ್ತು. ಬಸ್ ಡ್ರೈವರ್ ಹಾದಿಯಲ್ಲಿ ಸಿಕ್ಕ ಎಲ್ಲ ಹಳ್ಳಿಗರತ್ತಲೂ ಸ್ಮೈಲ್ ಬೀರುತ್ತಾ, ಅಲ್ಲಲ್ಲಿ ಕೆಲವರನ್ನು ಮಾತನಾಡಿಸುತ್ತಾ ಅದೇ ವಿಶ್ವಾಸದಲ್ಲಿ ಗಾಡಿ ಓಡಿಸುತ್ತಿದ್ದ. ಏನೋ ಭಂಡತನದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಾನು ಕುಳಿತಿದ್ದೆ...

- ರಾಧಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.