ಅಂಕಣಗಳು

ಭೂಗರ್ಭದ ಮಿಡಿತ ಅರಿತವರಿಗೆ ದುರಂತ ಅಚ್ಚರಿ ತರಲಿಲ್ಲ

ಉ.ಖಂಡದ ದುರಂತ ಭೂಗರ್ಭ ಶಾಸ್ತ್ರಜ್ಞರಿಗೆ ಯಾವುದೇ ಅಚ್ಚರಿ ಉಂಟುಮಾಡಿಲ್ಲ.

Published On :

ಪ್ರವಾಹೋತ್ತರಕಾಂಡ, ಭಾಗ-5

ಉತ್ತರಾಖಂಡದ ದುರಂತ ಭೂಗರ್ಭಶಾಸ್ತ್ರಜ್ಞರಿಗೆ ಯಾವುದೇ ಅಚ್ಚರಿ ಉಂಟುಮಾಡಿಲ್ಲ. ವೈಜ್ಞಾನಿಕ ಅಂದಾಜಿನ ಪ್ರಕಾರ, ಹಿಮಾಲಯದ ಸುನಾಮಿಯಲ್ಲಿ ಲಕ್ಷಕ್ಕಿಂತ ಹೆಚ್ಚು  ಜೀವ ಹಾನಿಯಾದುದರಲ್ಲಿ ಅತಿಶಯವೇನೂ ಇಲ್ಲ. ಹಿಮಾಲಯ ಪ್ರದೇಶದ ಅಧ್ಯಯನಿಗಳು ಹೇಳುವ ಪ್ರಕಾರ ಇದು ನಿರೀಕ್ಷಿತ. ಸರ್ಕಾರ ಮಾತ್ರ ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಪರಿಸರವನ್ನು ರಕ್ಷಿಸಬೇಕೆಂಬ ಬಗ್ಗೆ ಹೇಳುತ್ತಲೇ ಬರಲಾಗುತ್ತಿತ್ತು. ಆದರೆ ಇದನ್ನು ದುರಂತದ ಕ್ಷಣದವರೆಗೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬುದು ಭೂಗರ್ಭ ಶಾಸ್ತ್ರಜ್ಞರ ಅಭಿಮತ.
ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಗ್ಲೇಸಿಯಾಲಾಜಿಸ್ಟ್‌ಗಳು (ಜಿಎಸ್‌ಐ) ಕೇದಾರನಾಥ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿಖರ ಅಧ್ಯಯನ ನಡೆಸಿದ್ದರು. ಜಿಎಸ್‌ಐನ ಹಿಂದಿನ ನಿರ್ದೇಶಕ ಹಾಗೂ ನುರಿತ ಗ್ಲೇಸಿಯಾಲಾಜಿಸ್ಟ್ ದೀಪಕ್ ಶ್ರೀವಾತ್ಸವ ಮತ್ತು ಆತನ ತಂಡ ಪ್ರವಾಹದ ಬಳಿಕ ಕೇದಾರ ಸುತ್ತಲಿನ ಪ್ರದೇಶದಲ್ಲಿ ಪ್ರವಾಸ ನಡೆಸಿ ಕಾರಣಗಳನ್ನು ಹುಡುಕಿದೆ. ಈಗ ಸಂಭವಿಸಿದ ಘಟನೆಗೆ ಅವರು ನೀಡುವ ಕಾರಣ ಮತ್ತು ದುರಂತದ ಪ್ರಮಾಣದಲ್ಲಿ ಸಹಜತೆ ಇದೆ. ಕೇದಾರ ಪ್ರದೇಶದಲ್ಲಿ ಸೀಸನ್‌ನಲ್ಲಿ ಏರ್ಪಡುತ್ತಿರುವ ನೂಕುನುಗ್ಗಲು, ಈ ಪ್ರದೇಶದ ಯಾತ್ರಿಗಳ ಸಂಖ್ಯೆಯಲ್ಲಿನ ಮಿತಿ ಮೀರಿದ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಪರಿಸರಕ್ಕೆ ಅಪಾರ ಧಕ್ಕೆ ಉಂಟುಮಾಡುತ್ತಿದ್ದದ್ದು ಮೇಲ್ನೋಟಕ್ಕೆ ತಿಳಿಯುವಂಥದ್ದು. ವಿವಿಧ ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯ, ಹೋಟೇಲ್‌ಗಳು, ವಸತಿ ಗೃಹಗಳು, ಆಶ್ರಮಗಳು, ಚಿಕ್ಕಪುಟ್ಟ ವ್ಯಾಪಾರಿ ಸ್ಥಳಗಳು ನಿರಂತರ ತಲೆ ಎತ್ತುತ್ತಲೇ ಇದ್ದವು.
ಡೆಹ್ರಾಡೂನ್‌ನ ಪೀಪಲ್ಸ್ ಸೈನ್ಸ್ ಇನ್ಸ್‌ಟಿಟ್ಯೂಟ್‌ನ ರವಿ ಚೋಪ್ರಾ ಪ್ರಕಾರ 'ಈ ಭೂಪ್ರದೇಶದಲ್ಲಿನ ಭಾರಿ ಅನ್ವೇಷಣೆಯ ನಂತರ ಸಾಬೀತಾದ ಅಂಶವೆಂದರೆ ಮೇಘ ಸ್ಫೋಟ ಮತ್ತು ಪರ್ವತಗಳ ನಡುವೆ ಅನೂಹ್ಯ ಸಂಬಂಧ- ಹೊಂದಾಣಿಕೆಗಳಿವೆ. ಮೇಘ ಸ್ಫೋಟದಿಂದ ಭೂಮಿಗೆ ಧುಮುಕುವ ನೀರು, ಅದರ ಹರಿವು ಮತ್ತು ಅದರಿಂದಾಗುವ ಹಾನಿಯ ಮಟ್ಟವನ್ನು ಕಡಿಮೆ ಮಾಡುವುದು ಪರ್ವತಗಳಿಂದ ಮಾತ್ರ ಸಾಧ್ಯ. ಕೇದಾರ್‌ನಾಥ್ ಟೌನ್ ಶಿಪ್ ತಂಪಾದ ಹಿಮಮಯವಾದ ಶ್ರೇಣಿಯಲ್ಲಿದೆ. ಮಂದಾಕಿನಿ ನದಿಗೆ ಮೂಲ ನೀರು ಬರುವುದು ಚೌರಾಬಾರಿ ಮತ್ತು ಅದರೊಂದಿಗಿನ ಅಗಣಿತ ಹಿಮಜಲ ಬುಗ್ಗೆಗಳಿಂದ. ಅವೆಲ್ಲಾ ವೃತ್ತಾಕಾರದಲ್ಲಿ ಹರಿದು ಕೆಳಗಿನ ಕೇದಾರ ನಗರವನ್ನು ಬಳಸಿ ಹರಿಯುತ್ತವೆ. ಈ ಸರೋವರಗಳಲ್ಲಿ ಮಂಜಿನ ಸವಕಳಿ ಸಹಜ. ಹಿಮಾಲಯ ಶ್ರೇಣಿಯಲ್ಲಿನ ಜನ ದಟ್ಟಣೆ ಮೇಲ್ಪದರದಲ್ಲಿ ಹಿಮ ಕುಸಿಯುವಂತೆ ಮಾಡಿ ಈ ಸ್ಥಳದಲ್ಲಿರುವ ನದಿಯ ಒತ್ತಡವನ್ನು ಹೆಚ್ಚಿಸುತ್ತದೆ.
ಹಿಮದ ಕುಸಿತಕ್ಕೆ ಕಾರಣಗಳು ಹಲವು, ಅಂದರೆ ನೈಸರ್ಗಿಕವಾಗಿ ಹಿಮ ಜರುಗುವುದು, ಹೊರಗಿನ ಮತ್ತು ಮೆಕ್ಯಾನಿಕಲ್ ಒತ್ತಡಗಳು, ಇಳಿಜಾರಿನ ಸ್ಥಿತಿಗಳನ್ನು ಅವಲಂಬಿಸಿದೆ. ಕೇದಾರ್‌ನಾಥ್‌ದಲ್ಲಿ ಚಳಿಗಾಲದ ಒಂದು ಹಿಮ ಮಳೆಯು ಎರಡು ಮೀಟರ್‌ಗಳಷ್ಟು ಹಿಮವನ್ನು ಮುಚ್ಚಬಲ್ಲದು. ಕೇದಾರನಾಥದ ಹಿಂಭಾಗದಲ್ಲಿರುವ ಬಟ್ಟಲಾಕಾರದ ಸರೋವರವು, ಕಣಿವೆಯಲ್ಲಿ ಬಿರುಗಾಳಿಯನ್ನು, ಸೈಕ್ಲೋನಿಕ್ ಅಲೆಗಳನ್ನು ಉಂಟುಮಾಡುವುದು. ಇಲ್ಲಿ ನಿರ್ಮಿಸಲಾದ ಒಂದು ಮೈಕ್ರೋ ಹೈಡಲ್ ಪ್ರಾಜೆಕ್ಟ್ ಕೇದಾರ್ ಕಣಿವೆಯಲ್ಲಿನ ಭಾರತ್ ಸೇವಾಶ್ರಮ್ ಅನ್ನು ಹಾನಿಗೊಳಪಡಿಸಿತು. ವಾಸ್ತವದಲ್ಲಿ ಈ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ಕಾರ್ಯಕ್ಕೆ ಅನುಕೂಲಕರ ಪರಿಸ್ಥಿತಿಯೇ ಇಲ್ಲ.
ಮಂದಾಕಿನಿ  ಕಣಿವೆಯ ಮೇಲಿನ ಭಾಗದಲ್ಲಿ ಕೇವಲ ಆಲ್ಪೈನ್‌ನಂತಹ ಹುಲ್ಲು ಮಾತ್ರ ಬೆಳೆಯುತ್ತದೆ. ಗರುಡ್ ಚಾಟ್ಟಿಯ ಸುತ್ತಲಿನ ಕಣಿವೆಯಲ್ಲಿ ಪೊದೆಗಳು ಬೆಳೆಯುತ್ತವೆ ಮತ್ತು ಘುನಿಂದೆರ್ ಪಾನಿಯಲ್ಲಿ ಪೈನ್ ಮತ್ತು ಬಿರ್ಚ್ ಮರಗಳು ಬೆಳೆಯುತ್ತವೆ. ಈ ಇಳಿಜಾರು ಪ್ರದೇಶಗಳು ಹಿಮದ ಕುಸಿಯುವಿಕೆಯನ್ನು ತಡೆಯಲು ಸಶಕ್ತವಾಗಿರುವುದಿಲ್ಲ. ಈ ಭಾಗವು ಹಿಮದ ಕುಸಿತವನ್ನು ತಡೆಯುವ ತಡೆಗೋಡೆಯಂತೆ ವರ್ತಿಸುವುದಿಲ್ಲ. ಎಡಭಾಗದಲ್ಲಿ ಕೇದಾರಕ್ಕೆ ಉತ್ತಮ ತಡೆಗೋಡೆ ಇದ್ದರೂ ಬಲಭಾಗದಲ್ಲಿ ಯಾವುದೇ ರೀತಿಯ ನೈಸರ್ಗಿಕ ತಡೆಗೋಡೆ ಇಲ್ಲ. ತಕ್ಕಮಟ್ಟಿಗೆ ವಿಸ್ತಾರವಾದ ಸುಂದರ ಸ್ಥಳವಾದ ಇಲ್ಲಿ ಜನರು ಕಟ್ಟಡ ಮುಂತಾದವುಗಳನ್ನು ಕಟ್ಟಲು ಮನಸ್ಸು ಮಾಡುತ್ತಾರೆ. ಆದರೆ ಬಲಭಾಗದ ಈ ಪ್ರದೇಶವನ್ನು ಮಾನವ ಹಸ್ತಕ್ಷೇಪವಿಲ್ಲದ ಹಾಗೆ (ನಾನು ವರದಿಯಲ್ಲಿ ತಿಳಿಸಿದ ಹಾಗೆ )ಇರಿಸಬೇಕು' ಎಂದು ದೀಪಕ್ ಶ್ರೀವಾತ್ಸವ ಅಭಿಪ್ರಾಯ ಪಡುತ್ತಾರೆ. ಶ್ರೀವಾತ್ಸವ ಅವರ ವರದಿಯಲ್ಲಿ, 28 ಸಂಖ್ಯೆಯ ಕುಸಿತದ ಸ್ಥಳಗಳನ್ನು ಗುರುತಿಸಿದ್ದಾರೆ. ಇದು 3,888-4,000 ಮೀಟರ್‌ಗಳ ಅಕ್ಷಾಂಶಗಳ ನಡುವೆ ಬರುತ್ತದೆ.  ಪ್ರತಿ ಕುಸಿತವು ಸುಮಾರು 900 ಮೀಟರ್‌ಗಳ ಪ್ರವಾಹದ ರೂಟ್ ಹೊಂದಿದ್ದು, 70,891 ಕ್ಯುಬಿಕ್ ಮೀಟರ್ಸ್ ಸರಾಸರಿಯಾಗಿ ಹಿಮಪ್ರಮಾಣವಿರುವುದು. ಪ್ರಭಾವಿಸಬಲ್ಲ ಒತ್ತಡವು ಪ್ರತಿ ಕ್ಯುಬಿಕ್ ಮೀಟರ್‌ಗೆ 84.8 ಟನ್‌ಗಳು.
ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆಂದರೆ, 10ಟನ್‌ಗಳ ವೇಗ ಪ್ರತಿ ಕ್ಯುಬಿಕ್ ಮೀಟರ್ ಮರಗಳನ್ನೇ ಬುಡಮೇಲು ಮಾಡಬಲ್ಲುದು. ಪ್ರತಿ ಕ್ಯುಬಿಕ್ ಮೀಟರ್‌ಗೆ 100ಟನ್ ವೇಗ ಇದ್ದರೆ ಅದು ಸ್ಥಿರವಾದ ಕಟ್ಟಡಗಳನ್ನು ನೆಲಸಮ ಮಾಡುವುದು.
ನಿರ್ಮಾಣ ಚಟುವಟಿಕೆಗಳೇ ಭೂಮಿಯನ್ನು ದುರ್ಬಲಗೊಳಿಸಿದೆ ಎಂಬುದನ್ನು ಅವರ ವರದಿ ಖಡಾಖಡಿಯಾಗಿ ಸಾರುತ್ತದೆ. 1985ರಿಂದ ಈ ಪ್ರದೇಶವನ್ನು ಭೇಟಿ ಮಾಡುತ್ತಲೇ ಇರುವ ಶ್ರೀವಾತ್ಸವ ಅವರು, 'ಇಲ್ಲಿ ಚರಂಡಿ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಮಾಡುವುದರಿಂದ ದುರಂತಗಳು ಕಡಿಮೆಯಾಗುವುದು ಎಂಬ ಮೇಲ್ಮಟ್ಟದ ಶಿಫಾರಸುಗಳಿಂದ ಪ್ರಯೋಜನವಿಲ್ಲ. ಏಕೆಂದರೆ ಇದು ಸೂಕ್ಷ್ಮ ಪ್ರದೇಶ. ಧನಾತ್ಮಕ ಬೆಳವಣಿಗೆಗಳು ಉಂಟಾಗಬೇಕೆಂದರೆ, ಸೂಕ್ಷ್ಮ ಪ್ರದೇಶಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಾಣವಾಗಬೇಕು' ಎನ್ನುತ್ತಾರೆ ಚೋಪ್ರಾ.
ಡಾ. ವಿ.ಕೆ. ಜೋಶಿ (ಎಕ್ಸ್ ಡೈರೆಕ್ಟರ್, ಜಿಎಸ್‌ಐ) ಅವರ ಪ್ರಕಾರ ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಭಾರಿ ಮಳೆಯಿಂದಾಗಿ ಕೆಲವೇ ಗಂಟೆಗಳಲ್ಲಿ ಎರಡು ದುರಂತಗಳು ಉಂಟಾದವು. ಮೊದಲನೆಯದಾಗಿ, ಭಾರಿ ಪ್ರಮಾಣದಲ್ಲಿ ಸಂಗ್ರಹವಾದ ನೀರು ಹರಿದದ್ದು. ಕೆಲವು ಗಂಟೆಗಳ ಮೊದಲು, ಇನ್ನೊಂದು ಇಳಿಜಾರಿನ ಪ್ರದೇಶದಲ್ಲಿ ನದಿ ಹರಿವ ಸ್ಥಳವು ತೀವ್ರವಾಗಿ ಹಾನಿಗೊಳಗಾಗಿತ್ತು. ಅತಿಯಾದ ಮಳೆ, ಮಿತಿಮೀರಿದ ಮಾನವ ಚಟುವಟಿಕೆಗಳು ಇವೆಲ್ಲಾ ವಿಕೋಪದ ವೇಗವನ್ನು ಹೆಚ್ಚಿಸಿದವು.  
ವಿಜ್ಞಾನಿಗಳ ಪ್ರಕಾರ ಇಂತಹ ಅಪಾಯದ ಸ್ಥಳದಲ್ಲಿ ನಿರ್ಮಾಣ ಕಾರ್ಯ ನಡೆಸದಿದ್ದರೆ ವಿಕೋಪ ಇಷ್ಟು ತೀವ್ರವಾಗಿ ಹಾನಿ ಮಾಡುತ್ತಿರಲಿಲ್ಲ. ಇದಕ್ಕೆ ಸರಳ ಉಪಾಯ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವುದು, ಅಥವಾ ಒಂದು ಮಿತಿಗೆ ತರುವುದು. ಎರಡನೆಯದಾಗಿ ಪರಿಸರ ಹಾನಿ ನಿಲ್ಲಿಸುವುದು. (ಮರ ಕಡಿಯುವುದು, ರಸ್ತೆಗಳನ್ನು ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ಗಳ ಕಟ್ಟಡಗಳಲ್ಲಿ ಸಮರ್ಪಕವಾಗಿ ಇಳಿಜಾರಿನ ವ್ಯವಸ್ಥೆ ಮಾಡದೆ ಕಟ್ಟಿರುವುದು). ಮಳೆಗಾಲದಲ್ಲಿ ಜನರು ಯಾವೆಲ್ಲ ಪ್ರದೇಶಗಳಲ್ಲಿ ಇರಬಾರದು ಎಂಬ ಅಪಾಯದ ಎಚ್ಚರಿಕೆಯ ವ್ಯವಸ್ಥೆ ಸ್ಪಷ್ಟವಾಗಿರಬೇಕು. ಕೇದಾರನಾಥ್, ಬದ್ರಿನಾಥ್, ಗಂಗೋತ್ರಿ, ಮತ್ತು ಯಮುನೋತ್ರಿಯಲ್ಲಿದ್ದ ಜನರಿಗೆ ಅಪಾಯದಲ್ಲಿದ್ದಾಗ ಹೇಗೆ ಮುಂದುವರೆಯಬೇಕು ಎಂಬುದೇ ಗೊತ್ತಿರಲಿಲ್ಲ ಎಂಬುದು ಸತ್ಯ.

- ರಾಧಾಕೃಷ್ಣ ಎಸ್ ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.