ಚಂದಮಾಮ ಕಥೆಗಳು ಎಲ್ಲಿ ಮಾಯವಾದವು?
ಉದ್ಯೋಗದ ನೆಪದಲ್ಲಿ ದೂರದ ಊರುಗಳಿಂದ ಬೆಂಗಳೂರಿಗೆ ಅಥವಾ ಇನ್ಯಾವುದೇ ನಗರಕ್ಕೆ ಬಂದು ಪಿ.ಜಿ.ಗಳಲ್ಲಿ ಉಳಿಯುವ ಹುಡುಗಿಯರ ಮುಖ್ಯ ಸಮಸ್ಯೆಯೆಂದರೆ ಹೋಂ ಸಿಕ್‌ನೆಸ್. ಕೆಲಸಕ್ಕೆ ಹೋಗುವ ನೆಪದಲ್ಲಿ ಅವರೆಲ್ಲ ಬೆಳಗ್ಗೆ ಲಗುಬಗೆಯಿಂದ ಮನೆ ಬಿಡುತ್ತಾರೆ. ಸಂಜೆಯ ವೇಳೆಗೆ ಸುಸ್ತಾದ ಮೈ-ಮನದೊಂದಿಗೆ ವಾಪಸ್ ಬರುತ್ತಾರೆ. ಆದರೆ, ಬೆಳಗಿನ ಹೊತ್ತು ಇವರನ್ನು ತುಂಬಾ ಕಾಳಜಿಯಿಂದ ಬೀಳ್ಕೊಡುವವರಾಗಲಿ, ಸಂಜೆಯ ವೇಳೆ ನಗುಮೊಗದಿಂದ ಸ್ವಾಗತಿಸುವವರಾಗಲಿ 'ಮನೆಯಲ್ಲಿ' ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಸಹಜವಾಗಿಯೇ ಹುಟ್ಟೂರು ನೆನಪಾಗುತ್ತದೆ. ಎಲ್ಲಾದರೂ ಹೊರಗೆ ಹೊರಟಾಗ ಅಥವಾ ಹೊರಗಿನಿಂದ ಬಂದ ತಮ್ಮನ್ನು ಬೀಳ್ಕೊಡುತ್ತಿದ್ದ/ ಸ್ವಾಗತಿಸುತ್ತಿದ್ದ ಕುಟುಂಬದ, ನೆರೆಹೊರೆಯ ಮಕ್ಕಳು ನೆನಪಾಗಿ ಬಿಡುತ್ತಾರೆ. ಇದನ್ನೇ ಮುಂದಿಟ್ಟುಕೊಂಡು, ಸ್ವಂತ ಮನೆಯಲ್ಲಿ ಪಡೆದಂಥ ಪ್ರೀತಿ -ವಿಶ್ವಾಸವನ್ನು ಈಗಲೂ ಪಡೆಯಬೇಕು ಎಂಬ ಆಸೆಯಿಂದ ಪಿ.ಜಿ.ಗೆ ಹೊಂದಿಕೊಂಡಂತಿರುವ ಮನೆಗಳ ಪುಟಾಣಿಗಳನ್ನು ಬಹಳಷ್ಟು ಹುಡುಗಿಯರು ಹಚ್ಚಿಕೊಳ್ಳುವುದುಂಟು.
ಇಂಥದೊಂದು ಬಾಂಧವ್ಯದ ಮೂಲಕ ನನಗೆ ಹತ್ತಿರವಾದ ಮಗುವೇ ಮೋನಿಷಾ. ಆಕೆಯ ಮನೆ, ನಮ್ಮ ಪಿ.ಜಿ.ಯಿಂದ ನಾಲ್ಕು ಮನೆಗಳ ಆಚೆಗಿದೆ. 6ನೇ ತರಗತಿಯಲ್ಲಿರುವ ಮೋನಿಷಾಳ ತಂದೆ-ತಾಯಿ ಸಣ್ಣ ಸಂಬಳದ ಕೆಲಸಗಳಿಗೆ ಹೋಗುತ್ತಾರೆ. ಅಜ್ಜ-ಅಜ್ಜಿ ದೂರದ ಹಳ್ಳಿಯಲ್ಲಿದ್ದಾರೆ. ಅವರು ಬೆಂಗಳೂರಿಗೆ ಬರುವುದು, ಇವರು ಹುಟ್ಟೂರಿಗೆ ಹೋಗುವುದು ವರ್ಷಕ್ಕೆ ಎರಡೇ ಬಾರಿ. ಮಧ್ಯಾಹ್ನ ನಾಲ್ಕು ಗಂಟೆಗೆ ಶಾಲೆಯಿಂದ ಬಂದ ನಂತರ ಮನೆಯೊಳಗೆ ಮೋನಿಷಾ ಹೇಗಿರುತ್ತಾಳೆ? ಆ ಪುಟ್ಟ ಮಗು ಅಪ್ಪ-ಅಮ್ಮ ಬರುವವರೆಗೂ ಹೇಗೆ ಒಂಟಿಯಾಗಿರುತ್ತದೆ? ಒಂದು ವೇಳೆ ಆಟವಾಡಬೇಕು ಅನ್ನಿಸಿದರೆ ಏನು ಮಾಡುತ್ತದೆ? ಸುಸ್ತಾಗಿ ಮನೆಗೆ ಬರುವ ಪೋಷಕರು ಆ ಮಗುವಿನಿಂದ ಹೋಂವರ್ಕ್ ಮಾಡಿಸುತ್ತಾರಾ? ಈ ಪ್ರಶ್ನೆಗಳನ್ನು ಮೋನಿಷಾಳ ತಾಯಿಗೆ ಕೇಳಿದಾಗ ಆಕೆ, ಯಾವುದೇ ಸಂಕೋಚವಿಲ್ಲದೆ ತೀರಾ ಸಹಜವೆಂಬಂತೆ ಹೇಳಿದರು: 'ಹೋಂ ವರ್ಕ್ ಮಾಡಿಸಲು ನಮಗೆ ಟೈಂ ಎಲ್ಲಿರುತ್ತದೆ ರೀ. ಮಗಳೇ ಹೋಂವರ್ಕ್ ಮಾಡ್ಕೋತಾಳೆ. ಟಿ.ವಿ.ಲಿ. ಕಾರ್ಟೂನ್ ನೆಟ್‌ವರ್ಕ್ ನೋಡಿಕೊಂಡು ಆರಾಮಾಗಿ ಇರ್ತಾಳೆ. ಮನೇಲಿ ಒಬ್ಬಳೇ ಇರುವಾಗ ಒಳಗಿಂದ ಲಾಕ್ ಮಾಡಿಕೊಂಡು ಇರೋದನ್ನು ಹೇಳಿಕೊಟ್ಟಿದ್ದೀವಿ...'
ಮೋನಿಷಾಳ ತಾಯಿಯ ಮಾತನ್ನು ಮತ್ತೆ ಮತ್ತೆ ಮೆಲುಕು ಹಾಕಿದಾಗ ಬೇಸರವಾಯಿತು. ಒಂಟಿತನ ಮತ್ತು ಅರ್ಥವಿಲ್ಲದ ಕಾರ್ಟೂನ್ ನೆಟ್‌ವರ್ಕ್‌ನ ಮಧ್ಯೆ ಕಳೆದು ಹೋಗುವ ಮೋನಿಷಾಳ ಸಂಕಟದ ಮುಖಭಾವ ಹೇಗಿರಬಹುದೆಂಬ 'ಚಿತ್ರವೂ' ಕಣ್ಮುಂದೆ ಸುಳಿದು ಹೋಯಿತು. ಮರುಗಳಿಗೆಯೇ ನನ್ನ ಬಾಲ್ಯದ ಮಧುರ ನೆನಪೂ ಜೊತೆಯಾಯಿತು.
ಯಾರು ಏನೇ ಹೇಳಲಿ: 20 ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾಗಿದ್ದರಲ್ಲ; ಅವರ ಬಾಲ್ಯಕ್ಕೆ ಒಂದು ವಿಶಿಷ್ಟ ಹೊಳಪಿತ್ತು. ಆಗೆಲ್ಲ ಸಂಜೆ 6 ಗಂಟೆ ಆಗುತ್ತಿದ್ದಂತೆ ನಡುಮನೆಯಲ್ಲಿ ಐದಾರು ಮಕ್ಕಳು ಶಿಸ್ತಾಗಿ ಓದಲು ಕೂರುತ್ತಿದ್ದರು. ಹೀಗೆ ಕೂತವರಲ್ಲಿ ನೆರೆಹೊರೆಯ/ಬಂಧುಗಳ ಮಕ್ಕಳೂ ಇರುತ್ತಿದ್ದರು. ಮನೆಯಲ್ಲಿದ್ದ ಹಿರಿಯರು, ಶಿಕ್ಷಕರಂತೆ ಓದಿಸಲು ಕೂತಿರುತ್ತಿದ್ದರು. ಅವರು ಕನ್ನಡ/ಇಂಗ್ಲಿಷಿನ ಡಿಕ್ಟೇಷನ್ ಬರೆಸುತ್ತಿದ್ದರು. ನಂತರ ಅವುಗಳನ್ನು ಪರಿಶೀಲಿಸಿ ಮಾರ್ಕ್ಸ್ ಕೊಡುತ್ತಿದ್ದರು. ನಾನೇ ಹೆಚ್ಚು ಅಂಕ ಪಡೆಯಬೇಕೆಂಬ ಆಸೆ ಎಲ್ಲರಿಗೂ ಇತ್ತು. ಎಲ್ಲ ಮಕ್ಕಳನ್ನು ಗಲಿಬಿಲಿ ಮಾಡುತ್ತಿದ್ದ ವಿಷಯವೆಂದರೆ ಗಣಿತ! ಓದಿಸಲು ಕೂತವರು ಇದ್ದಕ್ಕಿದ್ದಂತೆ ಹದಿನೇಳಾರ್ಲಿ ಎಷ್ಟು ಎಂದರೆ ಎಲ್ಲ ಮಕ್ಕಳೂ ಒಂದರೆಕ್ಷಣ ತಡವರಿಸುತ್ತಿದ್ದವು. ಹದಿನೆಂಟ್‌ಟೇಳ್ಲಿ ಎಷ್ಟು ಎಂದಾಗಲೂ ಗೊಂದಲವಾಗುತ್ತಿತ್ತು. ಈ ಸಂದರ್ಭದಲ್ಲಿ ತಪ್ಪು ಉತ್ತರ ಹೇಳಿದವರನ್ನು ಒಂದೆರಡು ನಿಮಿಷಗಳ ಕಾಲ ಒಂಟಿಕಾಲಲ್ಲಿ ನಿಲ್ಲಿಸುವ 'ಶಿಕ್ಷೆ'ಯೂ ಇತ್ತು.
ಎಲ್ಲ ಮಕ್ಕಳ ಪಾಲಿಗೂ ಇದನ್ನು ಮೀರಿದ ಖುಷಿಯ ಸಂಗತಿಯೊಂದಿತ್ತು. ಅದೇನೆಂದರೆ, ಬಹುಪಾಲು ಎಲ್ಲ ಮನೆಗಳ ಪೋಷಕರೂ ರಾತ್ರಿ ಮಲಗುವಾಗ ಮಕ್ಕಳಿಗೆ ಅಪರೂಪದ ಕತೆಗಳನ್ನು ಹೇಳುತ್ತಿದ್ದರು. ಊಟದ ನಂತರ ಮಕ್ಕಳು ವಿನಾಕಾರಣ ಹರಟೆಗೆ, ಕೋಳಿ ಜಗಳಕ್ಕೆ ನಿಂತಿದ್ದರೆ, ಅದನ್ನು ಗಮನಿಸಿದ ಅಮ್ಮಂದಿರು ಇದ್ದಕ್ಕಿದ್ದಂತೆ -'ಒಂದೂರಲ್ಲಿ ಒಬ್ಬ ರಾಜ ಇದ್ನಂತೆ' ಎಂದು ಬಿಡುತ್ತಿದ್ದರು. ಅಷ್ಟೆ; ಮಕ್ಕಳ ಜಗಳ ನಿಂತು ಹೋಗುತ್ತಿತ್ತು. ಅವೆಲ್ಲಾ ಓಡಿ ಬಂದು ಅಮ್ಮನ ಮಗ್ಗುಲಲ್ಲಿ ಜಾಗ ಮಾಡಿಕೊಂಡು- 'ಒಂದೂರಲ್ಲಿ ಒಬ್ಬ ರಾಜ ಇದ್ನಂತೆ. ಆಮೇಲೆ ಏನಾಯ್ತಮ್ಮ...' ಎಂದು ಪ್ರಶ್ನೆ ಹಾಕುತ್ತಿದ್ದವು. ಕಥೆ ಹೇಳುವವರಿಗಿದ್ದ ತಿಳಿವಳಿಕೆಗೆ ತಕ್ಕಂತೆ ಅದು ಮುಂದುವರಿಯುತ್ತಿತ್ತು. ಕೆಲವು ಸಂದರ್ಭಗಳಲ್ಲಂತೂ ಹಿರಿಯರು-'ಒಂದೂರಲ್ಲಿ ಒಬ್ಬ ರಾಜ ಇದ್ನಂತೆ' ಎಂದರೆ, ಮಕ್ಕಳು -ರಾಜನ ಕಥೆ ಬೇಡ. ಆನೆ ಕತೆ ಬೇಕೂ' ಎಂದು ರಾಗ ಎಳೆಯುತ್ತಿದ್ದವು.
ಕಥೆ ಹೇಳುವ ಸಂದರ್ಭದಲ್ಲಿ ಮಕ್ಕಳು ನಿಮಿಷಕ್ಕೊಮ್ಮೆ 'ಹೂಂ ಹೂಂ' ಅನ್ನಲೇ ಬೇಕಿತ್ತು. ಅನ್ನದಿದ್ದರೆ ಕಥೆಗಳು ನಿಂತಲ್ಲೇ ನಿಂತು ಬಿಡ್ತವೆ ಎಂದು ಹೆದರಿಸುತ್ತಿದ್ದುದೂ ಉಂಟು. ಕಥೆ ನಿಲ್ಲದಿರಲಿ ಎಂಬ ಆಸೆಯಿಂದ ಹೂಂ ಹೂಂ ಅನ್ನುತ್ತಲೇ ನಿದ್ದೆಗೆ ಜಾರುತ್ತಿದ್ದ ಮಕ್ಕಳ ಲೆಕ್ಕ ಇಟ್ಟವರ್ಯಾರು? ಹಾಗೆಯೇ, ಅಡುಗೆ ಮನೆಯಲ್ಲಿ ಮೊಮ್ಮಗುವಿಗೆ ಅಜ್ಜಿ ಹೇಳಿದ ಸೆಂಟಿಮೆಂಟ್ ಕಥೆ ಕೇಳಿ, ಪಕ್ಕದ ರೂಂನಲ್ಲಿ ಮಲಗಿರುತ್ತಿದ್ದವರು ಕಣ್ಣೀರು ಒರೆಸಿಕೊಳ್ಳುತ್ತಿದ್ದುದು ಉಂಟು.
'ಹೀಗೆಲ್ಲ ಹೇಳುವ ಸಂದರ್ಭದಲ್ಲಿ ಆಕರ್ಷಕ ಚಿತ್ರ ಮತ್ತು ಅಪರೂಪದ ಕಥೆಗಳನ್ನು ಹೊತ್ತು ತರುತ್ತಿದ್ದ ಚಂದಮಾಮವನ್ನು ನೆನಪಿಸಿಕೊಳ್ಳಬೇಕು. 25-30 ಕಥೆಗಳಿಂದ ತುಂಬಿರುತ್ತಿದ್ದ ಆ ಪುಸ್ತಕದಲ್ಲಿ ಜಾನಪದ, ಪೌರಾಣಿಕ, ಚಾರಿತ್ರಿಕ ಕಥೆಗಳಿರುತ್ತಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಬೇತಾಳ ಕಥೆಗಳ ಧಾರಾವಾಹಿ ಇತ್ತು! ಒಂದು 'ಚಂದಮಾಮ' ವನ್ನು ಕೈಗೆತ್ತಿಕೊಂಡರೆ, ಮನೆಯಲ್ಲಿ ನಾನು ಒಂಟಿ ಎಂಬ ಭಾವನೆ ಯಾವ ಮಕ್ಕಳಿಗೂ ಆಗುತ್ತಿರಲಿಲ್ಲ.
ಈಗಲೂ ಚಂದಮಾಮ ಇದೆ. ಆದರೆ ಅದನ್ನು ಓದುವವರಿಲ್ಲ. ಅಜ್ಜ-ಅಜ್ಜಿ ಊರು ಸೇರಿದ್ದಾರೆ. ಪೋಷಕರಿಗೆ ಕಥೆ ಹೇಳಲು ಬಿಡುವಿಲ್ಲ. ಅವರಿಗೆ ಕಥೆಗಳೂ ಗೊತ್ತಿಲ್ಲ. ಹಾಗಾಗಿ, ಈಗಿನ ಕಾಲದ ಮಕ್ಕಳು ಅರ್ಥವಾಗದ ಕಾರ್ಟೂನ್ ನೆಟ್‌ವರ್ಕ್‌ನ ಮಧ್ಯೆಯೇ ಪೆದ್ದುಪೆದ್ದಾಗಿ ನಗುತ್ತಿದ್ದಾರೆ; ಬೇಸರ, ಸಂಕಟ ಮತ್ತು ಅಸಹಾಯಕತೆಯಿಂದ...
ಸಮಯ ನೋಡಿ, ಮೋನಿಷಾಳ ಅಮ್ಮನಿಗೆ ಇದನ್ನೆಲ್ಲಾ ಹೇಳಬೇಕು!
-ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

