ಹಾಲಿನ ಹೊಳೆಯಲ್ಲಿ ಈಜಿದರೂ ದಡ ಸೇರಲಿಲ್ಲ ಗೌಳಿಗಳ ಬದುಕು
ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ...
ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ...
ಹಾಡೊಂದರ ಈ ಸಾಲುಗಳನ್ನು ಕೇಳಿದರೆ, ಗೋವುಗಳು, ಗೋಪಾಲಕರು ಕಣ್ಣಮುಂದೆ ಹಾದುಹೋಗುತ್ತಾರೆ. ಹೈನುಗಾರಿಕೆ ಇಂದು ಅಥವಾ ನಿನ್ನೆಯದಲ್ಲ. ಭಾರತ ದೇಶದಲ್ಲಿ ಹೈನೋದ್ಯಮ ಭಾರಿ ಪ್ರಮಾಣದಲ್ಲಿ ಬೆಳೆದು ಬಂದಿದೆ. ತಂತ್ರಜ್ಞಾನ ಬೆಳೆದಂತೆ ಉದ್ಯಮದ ಸ್ವರೂಪ ಬದಲಾಗುತ್ತಿದೆಯೇ ಹೊರತು ಕೋಟ್ಯಂತರ ರೈತ ಕುಟುಂಬಗಳ ಪಾಲಿಗೆ ಹೈನುಗಾರಿಕೆ ಎಂಬುದೇ ಇಂದಿಗೂ ಜೀವನಕ್ಕೆ ಆಧಾರವಾಗಿದೆ.
ಮುಂಜಾನೆ ಎದ್ದು ಹಸುಗಳಿಂದ ಹಾಲು ಕರೆದು ಅದನ್ನು ಮನೆ ಮನೆಗೆ ತಲುಪಿಸುವ ಕಾಯಕ ಬಹು ಹಿಂದಿನಿಂದ ನಡೆದುಕೊಂಡು ಬಂದಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈಗ ಪಾಕೆಟ್ ಹಾಲಿನ ಸಂಸ್ಕೃತಿ ಬೆಳೆದಿದೆ. ಆದರೆ, ಹಳ್ಳಿಗಳಲ್ಲಿ ಇಂದಿಗೂ ಹಳೆಯ ಪದ್ಧತಿಯೇ ಚಾಲ್ತಿಯಲ್ಲಿದೆ.
ಆದರೆ, ಈ ಹಿಂದೆ ದನ,ಕರುಗಳೆಂದೇ ಮೀಸಲಾಗಿದ್ದ ಗೋಮಾಳ, ಕೆರೆ-ಕುಂಟೆಗಳು ಮಾಯವಾಗುತ್ತಿವೆ. ಜೊತೆಗೆ ಜೀವನೋಪಾಯಕ್ಕೆ ಹೈನುಗಾರಿಕೆ ನೆಚ್ಚಿಕೊಂಡಿದ್ದವರ ಪೈಕಿ ಬಹುತೇಕ ಮಂದಿ ಅದರಿಂದ ವಿಮುಖರಾಗುತ್ತಿದ್ದಾರೆ.
ಪ್ರಬಲವಾದ ಸಮುದಾಯವಿದು: ವಿಷಯ ಏನೆಂದರೆ ರಾಜ-ಮಹಾರಾಜರ ಕಾಲದಲ್ಲಿ ಅರಮನೆಗಳಿಗೆ ಹಾಲು ಸರಬರಾಜು ಮಾಡುತ್ತಿದ್ದ ಜನ ಇದ್ದರು. ಅವರೇ ಗೌಳಿಗಳು. ಉತ್ತರ ಭಾರತದ ನಾನಾ ರಾಜ್ಯಗಳಲ್ಲಿ ಗೌಳಿ ಸಮಾಜ ಪ್ರಬಲವಾಗಿದೆ. ಕರ್ನಾಟಕದಲ್ಲೂ ಬೆಳಗಾವಿ, ಧಾರವಾಡ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲಿ ಈ ಸಮುದಾಯದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಇವರ ಜನಸಂಖ್ಯೆ ಸುಮಾರು ಐದು ಲಕ್ಷ.
ನಾವು ಶ್ರೀಕೃಷ್ಣ ಪರಮಾತ್ಮನ ಅನುಯಾಯಿಗಳು. ಆತ ನಮ್ಮ ಆರಾಧ್ಯ ದೈವ. ಮೊದಲು ನಾವು ರಾಜ-ಮಹಾರಾಜರಿಗೆ ಹಾಲು ಪೂರೈಕೆ ಮಾಡುತ್ತಿದ್ದೆವು. ಅವರು ಎಲ್ಲಿಗೇ ಹೋದರೂ ನಮ್ಮ ತಂಡ ಅವರನ್ನು ಹಿಂಬಾಲಿಸುತ್ತಿತ್ತು. ರಾಜರ ಆಳ್ವಿಕೆ ಹೋದ ಮೇಲೆ ನಮ್ಮವರೆಲ್ಲ ವಲಸೆ ಹೋಗಲು ಶುರು ಮಾಡಿದರು. ದೇಶದ ನಾನಾ ರಾಜ್ಯಗಳಿಗೆ ಹೋಗಿ ನೆಲೆಸಿದರು ಎಂದು ವಿವರಿಸುತ್ತಾರೆ ಸಮುದಾಯದ ಮುಖಂಡರಾದ ಸೂರಜ್ ಗೌಳಿ.
ಗೌಳಿ ಸಮಾಜದವರಿಗೆ ಗೋವುಗಳೆಂದರೆ ಅಚ್ಚುಮೆಚ್ಚು. ಈ ಹಿಂದೆ ಪ್ರತಿಯೊಬ್ಬರ ಮನೆಗಳಲ್ಲೂ ಕನಿಷ್ಠ 8-10 ಹಸು, ಎಮ್ಮೆಗಳಿರುತ್ತಿದ್ದವು. ಕೆಲವರು 70-80ರವಗೆಗೆ ಆಕಳುಗಳನ್ನು ಹೊಂದಿದ್ದರು.
ಈಗ ದನ-ಕರುಗಳನ್ನು ಮೇಯಿಸಲು ಜಾಗ ಇಲ್ಲ. ಅವುಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಕಟ್ಟಡಗಳು ಎದ್ದು ನಿಂತಿವೆ. ಕೆರೆ-ಕಟ್ಟೆಗಳು ಒತ್ತುವರಿಯಾಗಿವೆ. ರಿಯಲ್ ಎಸ್ಟೇಟ್ ಉದ್ಯಮಕ್ಕೂ ಬಲಿಯಾಗಿವೆ. ಇದರಿಂದ ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಜೊತೆಗೆ ಹೈನುಗಾರಿಕೆಯೂ ದುಬಾರಿಯಾಗುತ್ತಿದೆ. ಹೀಗಾಗಿ ನಮ್ಮವರು ಹಸುಗಳ ಸಾಕಣೆಯಿಂದ ವಿಮುಖರಾಗುತ್ತಿದ್ದಾರೆ ಎಂಬುದು ಸೂರಜ್ ಗೌಳಿ ಅವರ ಅಭಿಪ್ರಾಯ.
ಶ್ರೀಕೃಷ್ಣನೇ ಆರಾಧ್ಯ ದೈವ: ಗೋಪಾಲಕರಿಗೆ ಶ್ರೀಕೃಷ್ಣನೇ ಆರಾಧ್ಯ ದೈವ. ಹೀಗಾಗಿ ಗೌಳಿಗಳ ಮನೆಯಲ್ಲಿ ನಿತ್ಯ ಕೃಷ್ಣನಿಗೆ ಪೂಜೆ ನಡೆಯುತ್ತದೆ. ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಳಗ್ಗೆ ಲಕ್ಷ್ಮಿಪೂಜೆ ಇರುತ್ತದೆ. ಅದೇ ದಿನ ಸಂಜೆ ದನಗಳನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಕೆಲವೆಡೆ ಕಿಚ್ಚು ಹಾಯಿಸುವ ಸಂಪ್ರದಾಯವೂ ಉಂಟು. ಇದರ ಜೊತೆಗೆ ರಾತ್ರಿ ಗೌಳಿಗಳು ಒಂದು ಕಡೆ ಸೇರಿ ಹಾಡು,ಕುಣಿತದಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಅಂದಹಾಗೆ ರಂಜಾನ್ ಹಬ್ಬವನ್ನೂ ಇವರು ಆಚರಿಸುತ್ತಾರೆ.
ಶ್ರೀಕೃಷ್ಣ ಜನ್ಮಾಷ್ಮಮಿ ಇವರ ಪಾಲಿಗೆ ಬಹುದೊಡ್ಡ ಹಬ್ಬ. ಅಂದು ತೊಟ್ಟಿಲಲ್ಲಿ ಕೃಷ್ಣನ ವಿಗ್ರಹ ಇರಿಸಿ ಪೂಜೆ ಮಾಡುತ್ತಾರೆ. ಮೊಸರು ಗಡಿಗೆ ಕಟ್ಟಿ ಅದನ್ನು ಒಡೆಯುವ ಆಟ ಆಡುತ್ತಾರೆ. ಆ ಹಬ್ಬದ ದಿನ ಯಾರಿಗೂ ಹಾಲು ಮಾರುತ್ತಿರಲಿಲ್ಲ. ಬದಲಿಗೆ ಎಲ್ಲರಿಗೂ ಉಚಿತವಾಗಿ ಹಂಚುತ್ತಿದ್ದರು. ನಾಗರ ಪಂಚಮಿಯನ್ನೂ ಇವರು ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ಈ ಹಬ್ಬದಲ್ಲಿ ಹೆಣ್ಣು ಮಕ್ಕಳ ಸಂಭ್ರಮ ಹೆಚ್ಚು. ನಾಗರ ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯಗಳಲ್ಲಿ ಒಂದು.
ಐದು ದಿನಗಳ ಮದುವೆ: ಈ ಸಮುದಾಯದಲ್ಲಿ ಮದುವೆ ಐದು ದಿನಗಳ ಕಾಲ ನಡೆಯುತ್ತದೆ. ಮೊದಲ ದಿನ ಬೆಳಗ್ಗೆ ವರನಿಗೆ ಸ್ನಾನ ಮಾಡಿಸಿ, ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಲಾಗುತ್ತದೆ. ಎರಡನೇ ದಿನ ಅರಿಶಿಣ ಹಚ್ಚುವ ಶಾಸ್ತ್ರ ಇರುತ್ತದೆ. ಮೂರನೇ ದಿನ ವಧುವಿನ ಮನೆಯವರು ಬಂದು ಶಾಸ್ತ್ರ ಪೂರೈಸುತ್ತಾರೆ. ನಾಲ್ಕನೇ ದಿನ ಮೆಹಂದಿ. ಇನ್ನು ಐದನೇ ದಿನ ಮದುವೆ. ಅದೇ ದಿನ ರಾತ್ರಿ ಊರಿನಲ್ಲಿ ನವ ವಧು-ವರನ ಮೆರವಣಿಗೆ ನಡೆಯುತ್ತದೆ. ವರನನ್ನು ಕುದುರೆಯ ಮೇಲೆ ಕೂರಿಸಿ ಕರೆದೊಯ್ಯುವ ಸಂಪ್ರದಾಯವೂ ಇವರಲ್ಲಿ ಇದೆ. ಇನ್ನು ಮದುವೆ ನಿಗದಿಯಾಗದ ಕುಟುಂಬದಲ್ಲಿ ಯಾರಾದರೂ ಸತ್ತರೆ 40 ದಿನ ಯಾವುದೇ ಶುಭ ಕಾರ್ಯಕ್ರಮ ಇರದು.
ಯಾವುದೇ ಕುಟುಂಬದಲ್ಲಿ ಮಗುವಿನ ಜನನವಾದರೆ ಎಲ್ಲರೂ ಸೇರಿ ಹಾಡಿ ಕುಣಿಯುತ್ತಾರೆ. ತಿನ್ನುವ ಎಲೆಯನ್ನು ಮಗುವಿನ ಕಿವಿಯೊಳಗೆ ಇಟ್ಟು ಹೆಸರು ನಾಮಕರಣ ಮಾಡುತ್ತಾರೆ. ಮಗುವಿನ ಸೋದರ ಮಾವ ಆ ಕೆಲಸ ಮಾಡುತ್ತಾನೆ.
ಈ ಹಿಂದೆ ಹೆಸರುಗಳನ್ನು ಇಡುವುದರಲ್ಲೂ ವಿಶೇಷ ಇತ್ತು. ಹೆಣ್ಣು ಮಕ್ಕಳಿಗೆ ಗಂಗಾ, ಜಮುನಾ ಎಂದು ಹೆಸರಿಡುತ್ತಿದ್ದರು. ಆಕಳುಗಳಿಗೂ ನಾಮಕರಣ ಮಾಡುತ್ತಿದ್ದರಂತೆ. ಈಗ ಟಿವಿ ಚಾನೆಲ್‌ಗಳಲ್ಲಿ ಬರುವ ಧಾರಾವಾಹಿಗಳನ್ನು ನೋಡಿ ಹೆಸರುಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುತ್ತಾರೆ ಸೂರಜ್ ಗೌಳಿ ಅವರು.
ಗೌಳಿ ಸಮುದಾಯದಲ್ಲೂ ಈ ಹಿಂದೆ ನ್ಯಾಯ ಪಂಚಾಯಿತಿ ವ್ಯವಸ್ಥೆ ಇತ್ತು. ಯಾವುದೇ ತಕರಾರು ತಲೆದೋರಿದಾಗ ಪಂಚಾಯಿತಿಯ ಮುಖಂಡನಿಗೆ ದೂರು ಹೋಗುತ್ತಿತ್ತು. ಕಟ್ಟೆಯಲ್ಲಿ ದೂರುದಾರ ಮತ್ತು ಪ್ರತಿವಾದಿಯ ವಿಚಾರಣೆ ನಡೆಯುತ್ತಿತ್ತು. ತಪ್ಪು ಮಾಡಿದವನಿಗೆ ಹಿರಿಯರು ಶಿಕ್ಷೆ ವಿಧಿಸುತ್ತಿದ್ದರು. ಮುಂದೆ ತಪ್ಪು ಮಾಡದಂತೆ ಬುದ್ಧಿ ಮಾತು ಹೇಳಿ ಕಳುಹಿಸುತ್ತಿದ್ದರು.
ಕೆಂಪು ಇವರ ನಿಶಾನೆ: ಈ ಸಮುದಾಯದಲ್ಲಿ ಹಿರಿಯರು ಕುರ್ತಾ, ರುಮಾಲು, ಹೆಗಲ ಮೇಲೆ ಕೆಂಪು ಟವೆಲ್ ಧರಿಸುತ್ತಾರೆ. ಕೈಯ್ಯಲ್ಲಿ ಕೆಂಪು ಬಣ್ಣ ಹಚ್ಚಿದ ಬಿದಿರಿನ ಕೋಲು ಇರುತ್ತದೆ. ಕೆಂಪು ಬಣ್ಣ ಈ ಸಮುದಾಯದ ಸಂಕೇತ. ಮದುವೆಗೆ ಬಂದವರಿಗೆ ಕೆಂಪು ರುಮಾಲು ಹಾಕುವುದು ಇವರ ಮತ್ತೊಂದು ವಿಶೇಷ. ಬೆಳಗ್ಗೆ ಮನೆ ಮನೆಗೆ ಹಾಲು ಹಾಕಲೂ ಹೋಗುವಾಗಲೂ ರುಮಾಲು ಇದ್ದೇ ಇರಬೇಕು.
ಈ ಸಮಾಜದಲ್ಲಿ ಹಿಂದೆ ಪೈಲ್ವಾನರು ಇದ್ದರಂತೆ. ಅದಕ್ಕೆ ತಕ್ಕಂತೆ ಗರಡಿ ಮನೆಗಳೂ ನಿರ್ಮಾಣವಾಗಿದ್ದವು. ಅವರು ಗೌಳಿ ಪೈಲ್ವಾನರು ಎಂದೆ ಖ್ಯಾತರಾಗಿದ್ದರಂತೆ. ಕುಸ್ತಿ ಪಂದ್ಯಗಳನ್ನಾಡಲು ಅವರು ಕೊಲ್ಲಾಪುರಕ್ಕೆ ಹೋಗಿ ಬರುತ್ತಿದ್ದರಂತೆ. ಗರಡಿ ಮನೆಗಳಲ್ಲಿ ಇವರು ಇತರರಿಗೂ ಕುಸ್ತಿ ಬಗ್ಗೆ ತರಬೇತಿ ಕೊಡುತ್ತಿದ್ದರು. ತಾಲೀಮಿನಲ್ಲಿ ಭಾಗಿಯಾಗುತ್ತಿದ್ದರು.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಗೌಳಿ ಸಮುದಾಯ ಅಷ್ಟೇನೂ ಮುಂದವರೆದಿಲ್ಲ. ರಾಜಕೀಯ ಪ್ರಾತಿನಿಧ್ಯವೂ ಅಷ್ಟಕ್ಕಷ್ಟೆ. ಧನರಾಜ್ ಗೌಳಿ ಎಂಬುವರು ಉಪ ಮೇಯರ್ ಆಗಿದ್ದರು. ಅದನ್ನು ಹೊರತು ಪಡಿಸಿದರೆ ರಾಜಕಾರಣದಲ್ಲಿ ಉನ್ನತ ಹುದ್ದೆಗೆ ಹೋದವರು ಇಲ್ಲ.
ಸೂರಜ್ ಗೌಳಿ, ಅನಿತ್ ಗೌಳಿ, ಬಾಬು ಗೌಳಿ ಅವರುಗಳು ಸಮುದಾಯದ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಸರ್ಕಾರದ ಜಾತಿ ಪಟ್ಟಿ ಪ್ರಕಾರ ಇವರು ಪ್ರವರ್ಗ-1ರಲ್ಲಿದ್ದಾರೆ. ಶಿಕ್ಷಣದ ಮಟ್ಟ ಇತ್ತೀಚೆಗೆ ಕೊಂಚ ಪರವಾಗಿಲ್ಲ. ಆದರೂ 10ನೇ ತರಗತಿ ಬಳಿಕ ಹುಡುಗರನ್ನು ಕೆಲಸಕ್ಕೆ ಹಚ್ಚಲಾಗುತ್ತಿದೆ. ಹೈನುಗಾರಿಕೆ ಕೈ ಕಚ್ಚುತ್ತಿರುವುದು ಇದಕ್ಕೆ ಕಾರಣ.
ಈ ಮೊದಲು ದನ-ಕರುಗಳಿಗೆ ಮೇಯಲು ಜಾಗ ಇತ್ತು. ಅದೆಲ್ಲ ಈಗ ಮಾಯವಾಗಿದೆ. ಗೊಬ್ಬರ ಸಂಗ್ರಹಿಸಲೂ ಅವಕಾಶ ಇಲ್ಲದಂತೆ ಆಗಿದೆ. ಜಾನುವಾರುಗಳಿಗೆ ಕುಡಿಯಲೂ ನೀರು ಸಿಗದ ಪರಿಸ್ಥಿತಿ ಇದೆ. ಹೀಗಾಗಿ ಗೌಳಿ ಸಮುದಾಯದವರು ತಮ್ಮ ಕಸುಬಿನಿಂದ ಹಿಂದೆ ಸರಿಯುತ್ತಿದ್ದಾರೆ. ಇನ್ನು 5-10 ವರ್ಷದಲ್ಲಿ ಒಂದೇ ಒಂದು ಆಕಳು ಇರದು. ಅಂತಹ ಪರಿಸ್ಥಿತಿ ಬರುತ್ತದೆ.
- ಸೂರಜ್ ಗೌಳಿ, ಗೌಳಿ ಸಮುದಾಯದ ಮುಖಂಡ
- ಕೆ.ವಿ. ಪ್ರಭಾಕರ
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

