ಅಂಕಣಗಳು

ವಿಕೋಪದ ಸಾವಿನ ಸುಳಿಗೆ ಸಿಕ್ಕವರ ಸುಲಿಗೆ!

ಅದನ್ನು ತಣ್ಣನೆಯ ಕ್ರೌರ್ಯ ಎನ್ನದೇ ವಿಧಿ ಇಲ್ಲ. ಸದ್ದಿಲ್ಲದೇ ಜರುಗಿ ಹೋಗುವ ಅನಾಹುತ

Published On :

ಪ್ರವಾಹೋತ್ತರಕಾಂಡ, ಭಾಗ-5

ಅದನ್ನು ತಣ್ಣನೆಯ ಕ್ರೌರ್ಯ ಎನ್ನದೇ ವಿಧಿ ಇಲ್ಲ. ಸದ್ದಿಲ್ಲದೇ ಜರುಗಿ ಹೋಗುವ ಅನಾಹುತ, ಗೊತ್ತಾಗದಂತೆ ಅನುಭವಿಸಿದ ಅಸಾಧ್ಯ ನೋವಿನ ಕೊನೆ, ಮೇಲ್ನೋಟಕ್ಕೆ ಕಾಣ ಸಿಗದ ವಿಕೃತಿಗಳೆಲ್ಲವೂ ಅಲ್ಲಿತ್ತು. ಅತಿ ವಿಕ್ಷಿಪ್ತ ಮನಸ್ಸಿನ ವಿಕೃತಿಗಳ ಫಲ ಅದಾಗಿತ್ತು. ಅಲ್ಲಿ ತಣ್ಣನೆಯ ಭೌತಿಕ ಗುಣ ಮತ್ತು ಆಂತರ್ಯದಲ್ಲಿನ ಕ್ರೌರ್ಯ ಮನೋಭಾವ ಎರಡೂ ವ್ಯಕ್ತವಾಗಿತ್ತು. ಉತ್ತರಾಖಂಡದಲ್ಲಿ ಮೊನ್ನೆ ಹಿಮ ಕರಗಿ ಹರಿದು ಹಾವಳಿ ಎಬ್ಬಿಸಿದಾಗ ನಡೆದ ಕೆಲ ಘಟನೆಗಳು ನಿಜಕ್ಕೂ ವಿಕ್ಷಿಪ್ತ ಮತ್ತು ವಿಕೃತಿಗೆ ಮೀರಿದ್ದು. ಬಹುಶಃ ಹಿಮಗಡ್ಡೆಯೊಳಗಣ ಕೊರೆಯುವ ಚಳಿಯಲ್ಲೂ ಬೆವರು ಕಿತ್ತು ಬರುವಂಥ ಬೀಭತ್ಸ ಸಂಗತಿಗಳು ಆ ದಿನಗಳಲ್ಲಿ ನಡೆದುಹೋದವು. ಮನುಷ್ಯ ಹೀಗೂ ಇರಲು ಸಾಧ್ಯವೇ?
ಅವತ್ತು ರಾತ್ರಿ ಅಂದರೆ ಜೂನ್ 16ರಂದು ಪ್ರವಾಹ ಏಕಾಏಕಿ ಆವರಿಸಿದ್ದು, ಕೊಚ್ಚಿ ಹೋಗಿದ್ದು ಗೊತ್ತೇ ಇದೆ. ಸಾವು ನೋವಿನ ಚಿರಾಟವೇ ತುಂಬಿದ್ದ ಆ ರಾತ್ರಿ ಮತ್ತು ಅದರ ನಂತರದ ಎರಡು ಮೂರು ದಿನಗಳು ನದಿಯ ಅಕ್ಕಪಕ್ಕದ ಹಳ್ಳಿಗಳಲ್ಲಿ ಒಂದಷ್ಟು ಮಂದಿ ಒಳಗೊಳಗೇ ಹಿಗ್ಗಿ ಕುಣಿದಾಡಿದರು. ಅವರ ಇಂಥ ಪರಿ ಖುಷಿಗೆ ಕಾರಣ ಮೇಲಿಂದ ತೇಲಿ ಬಂದು ದಡಕ್ಕೆ ಬೀಳುವ ಶವಗಳು. ಹೌದೌದು, ದೇವ ಸನ್ನಿಧಿಯಲ್ಲಿ ಶವಗಳನ್ನೂ ಬಿಡದೇ ಒಂದಷ್ಟು ಮಂದಿ ಅತ್ಯಂತ ಕ್ರೂರವಾಗಿ ದೋಚಿಬಿಟ್ಟರು ಎನ್ನುತ್ತಾರೆ ಗೌರಿಗಾಂವ್‌ನ ರಾಜೇಂದರ್. ಅಲ್ಲಲ್ಲಿ ಅರಣ್ಯದಲ್ಲಿ ಅವಿತು ಕುಳಿತ ಕೆಲವು ಮಂದಿ ತೇಲಿ ಬರುತ್ತಿದ್ದ ಶವಗಳನ್ನು ಎಳೆದೊಯ್ದು ಅವುಗಳ ಮೈಮೇಲಿದ್ದ ಅಭರಣಗಳು, ಬೆಲೆಬಾಳುವ ವಸ್ತುಗಳನ್ನು ದೋಚಿದರು. ಕಣಿವೆಯ ಕೆಳಗೆ ಒಬ್ಬಾತ ನೋಡ ನೋಡುತ್ತಿದ್ದಂತೆ ಸ್ತ್ರೀಯೊಬ್ಬರ ಕೈ, ಕಿವಿ, ಮೂಗನ್ನು ಕತ್ತರಿಸಿಕೊಂಡೇ ಅದರಲ್ಲಿದ್ದ ಆಭರಣ ಸಮೇತ ಪರಾರಿಯಾದ ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಇಂಥ ಘಟನೆಗಳು ನದಿಯ ಉದ್ದಕ್ಕೂ ಎರಡು ಮೂರು ದಿನ ಜರುಗಿದವು. ಇದಕ್ಕಿಂತ ಕ್ರೌರ್ಯ ಇನ್ನೊಂದಿದೆ. ದಡದಲ್ಲಿ ಬಿದ್ದವರೆಲ್ಲರೂ ಮೃತಪಟ್ಟಿರಲಿಲ್ಲ. ಕೆಲವರು ಎಚ್ಚರ ತಪ್ಪಿದವರೂ ಇದ್ದರು. ಅಂಥವರನ್ನೂ ಬಡಿದು, ಅಂಗಾಂಗ ಕತ್ತರಿಸಿ ದೋಚಲಾಯಿತು. ಭದ್ರತಾ ಪಡೆ, ಪೊಲೀಸರು ಸಂತ್ರಸ್ತರನ್ನು ಪಾರು ಮಾಡುವುದರಲ್ಲಿ ನಿರತರಾಗಿದ್ದುದು ಇಂಥವರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿತು. ಕೊನೆಗೆ ತಮ್ಮೂರಿನಲ್ಲಿ ಇದನ್ನು ತಡೆಯಲೆಂದೇ ಕೆಲವು ಯುವಕರನ್ನು ನದಿಯ ಭಾಗದಲ್ಲಿ ಕಾವಲಿರಿಸಲಾಯಿತು ಎನ್ನುತ್ತಾರೆ. ಈಗಲೂ ಸಂಬಂಧಿಗಳನ್ನು ಹುಡುಕುತ್ತಾ ಬರುವವರ ರಕ್ಷಣೆಗೆ ಅಲ್ಲಿನ ಯುವಕರು ಕೆಲಸ ಮಾಡುತ್ತಿದ್ದಾರೆ.
-----
ಹಿಮಾಲಯದಲ್ಲಿ ಜರುಗಿಹೋದ ಆ ಒಂದು ವಿಕೋಪ ಲೀಲೆ ಗುಡ್ಡಗಾಡಿನ ಜನರಲ್ಲಿನ ಎದೆಗಾರಿಕೆಯನ್ನು, ಯಾತ್ರಾರ್ಥಿಗಳು- ಪ್ರವಾಸಿಗರ ನಂಬಿಕೆಯನ್ನು ಪರೀಕ್ಷಿಸಿದ್ದು ಸುಳ್ಳಲ್ಲ. ದುರದೃಷ್ಟಕರ ಎನ್ನುವ ಇನ್ನೊಂದು ರೀತಿಯ ಸಂಗತಿ ಅಲ್ಲಿನ ಹಳ್ಳಿಗಳನ್ನು ಸುತ್ತುವಾಗ ಗಮನಕ್ಕೆ ಬಂತು. ಅದನ್ನು ಕೇಳಿದ ಮೇಲಂತು ಸಾವೆಂಬುದು ಅಲ್ಲಿ ನಿಜಕ್ಕೂ ಜೂಜಾಡಿಬಿಟ್ಟಿತ್ತು ಆ ದಿನಗಳಲ್ಲಿ ಎನಿಸುತ್ತದೆ. ಮನುಷ್ಯನಿಗೆ ತಾನು ತನ್ನ ಜೀವದ ಪ್ರಶ್ನೆ ಬಂದಾಗ ಉಳಿದೆಲ್ಲವೂ ನಗಣ್ಯವೆನಿಸಿಬಿಡುತ್ತದೆ. ಅವತ್ತು ಪ್ರವಾಹ ಉಕ್ಕೇರುತ್ತಿದ್ದಂತೆಯೇ ಸೋನ್ ಪ್ರಯಾಗದಲ್ಲಿ ಒಂದಷ್ಟು ಮಂದಿ ಹೇಗಾದರೂ ಪಾರಾಗಿಬಿಡಬೇಕೆಂಬ ಸಾಹಸಕ್ಕೆ ಮುಂದಾದರು; ಕಂಡ ಕಂಡ ವಾಹನವನ್ನು ಏರಿದರು. ಅಷ್ಟರಲ್ಲಿ ಮಿಲಿಟರಿ ವಾಹನಗಳೂ ದೌಡಾಯಿಸಿದವು. ಜನರನ್ನು ತುಂಬಿಕೊಂಡು ಹೊರಟ ವಾಹನಗಳಿಗೆ ಹಾದಿಯೆಂಬುದೇ ಇರಲಿಲ್ಲ. ನದಿ ರಸ್ತೆಯನ್ನೂ ನುಂಗಿ ಹಾಕಿತ್ತು. ಹೀಗಾಗಿ ಗುಡ್ಡ ಪಕ್ಕದಲ್ಲಿ, ಅರಣ್ಯದ ಕವಲಿನಲ್ಲೇ ವಾಹನಗಳನ್ನು ಚಲಾಯಿಸುವುದು ಅನಿವಾರ್ಯವಾಗಿತ್ತು. ಅದರೆ ಅಲ್ಲೂ ತೇಲಿಬಂದ ಯಾತ್ರಾರ್ಥಿಗಳ ಹೆಣಗಳು ಅಡ್ಡಮಲಗಿದ್ದವು. ಆ ರಾತ್ರಿ ಹಾಗೆ ಬಿದ್ದಿದ್ದ ದೇಹಗಳ ಮೇಲೆಯೇ ವಾಹನಗಳು ಹಾದು ಹೋದವು ಎನ್ನುತ್ತಾರೆ ಅವತ್ತಿನ ಪ್ರತ್ಯಕ್ಷದರ್ಶಿ ಘರವಾಲ್‌ನ ಸತ್ಯೇಂದರ್. ಅವರ ಅನುಮಾನದ ಪ್ರಕಾರ, ನದಿಯಲ್ಲಿ ಕೊಚ್ಚಿಕೊಂಡು ಬಂದು ಬಿದ್ದಿದ್ದವರಲ್ಲಿ ಎಲ್ಲರೂ ಮೃತಪಟ್ಟಿರಲಿಲ್ಲ. ಎಚ್ಚರ ತಪ್ಪಿದ್ದಿರಬಹುದು. ಏಳಲಾಗದ ಸ್ಥಿತಿಯಲ್ಲಿದ್ದಿರಬಹುದು. ಆದರೆ ವಾಹನಗಳ ಚಕ್ರ ಅಂಥ ಎಷ್ಟೋ ಮಂದಿಗೆ ಮುಕ್ತಿ ದೊರಕಿಸಿತು. ಕೆಲವಷ್ಟು ಜನ ಸಕಾಲಕ್ಕೆ ನೆರವೂ ಸಿಗದೇ ಮೃತಪಟ್ಟರು. ಇನ್ನಷ್ಟು ಮಂದಿ ಸುರಿಯುವ ಚಳಿಯಲ್ಲಿ ಆಶ್ರಯ ಸಿಗದೇ ಮೃತಪಟ್ಟರು. ಹಸಿವು ಸಾಕಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಒಟ್ಟಾರೆ ಅಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಾವು ಲಾಸ್ಯವಾಡಿದೆ.
-----
ದುರಂತದ ಒಂದು ತಿಂಗಳ ಬಳಿಕ, ಉತ್ತರಾಖಂಡದ ಎಲ್ಲ ಏರ್‌ಪೋರ್ಟ್, ರೇಲ್ವೆ ನಿಲ್ದಾಣ, ಬಸ್ ನಿಲ್ದಾಣಗಳ ಪ್ರತಿ ಬೆಳಗು ಒಂದೇ ರೀತಿಯಲ್ಲಿರುವಂತೆ ಭಾಸವಾಗುತ್ತದೆ. ನಿತ್ಯ ಬೆಳಗಿನ ಜಾವದಿಂದಲೇ ದೇಶದ ಬೇರೆ ಬೇರೆ ಕಡೆಗಳಿಂದ ಬಂದಿಳಿಯುತ್ತಿದ್ದಾರೆ ಒಂದಷ್ಟು ಯುವಕರು ಮತ್ತು ಮುದುಕರು. ಅವರಾರೂ ಯಾತ್ರಾರ್ಥಿಗಳಲ್ಲ. ಅವರ ಕೈಗಳಲ್ಲಿ ಫೋಟೋಗಳಿರುತ್ತವೆ. ಕೆಲವರು ಪಾಸ್‌ಪೋರ್ಟ್ ಸೈಜಿನ ಫೋಟೋಗಳನ್ನು ಹಿಡಿದುಕೊಂಡಿದ್ದರೆ, ಮತ್ತೆ ಕೆಲವರು ಸಂಬಂಧಿಕರು ಹಾಗೂ ಮಿತ್ರರ ಜತೆಗಿನ ಫೋಟೊ (ಯಾವಾಗಲೋ ತೆಗೆದ ಗ್ರೂಪ್ ಫೋಟೊ)ಗಳನ್ನು ಹಿಡಿದು ಬರುತ್ತಾರೆ. ಹೆಚ್ಚಿನ ಯಾತ್ರಿಗಳು ಹಿರಿಯರು. ಎಲ್ಲರೂ ಪ್ರೀತಿಪಾತ್ರರೇ. ಹೆಚ್ಚಿನವರೆಲ್ಲ 20- 30 ಜನರ ಗುಂಪಿನಲ್ಲಿ ಬಂದಿದ್ದರೆ ಇನ್ನಷ್ಟು ಜನ ಬೃಹತ್ ಸಂಖ್ಯೆಯಲ್ಲೂ ಬಂದಿದ್ದ ಉದಾಹರಣೆಗಳಿದ್ದವು. ಅವರಲ್ಲಿ ಮರಳಿ ಹೋದವರು ಅತ್ಯಂತ ಕಡಿಮೆ ಎಂಬುದು ಈಗ ಅವರನ್ನು ಹುಡುಕುತ್ತಾ ಬರುವ ಜನರನ್ನು ಕಂಡಾಗ ಅರಿವಾಗುತ್ತದೆ.
ಈ ದೃಷ್ಟಿಯಿಂದ ನೋಡಿದರೆ ಇದು ಖಂಡಿತಾ ಉತ್ತರಖಂಡದ ದುರಂತ ಅಲ್ಲವೇ ಅಲ್ಲ. ಇದು ನೂರಕ್ಕೆ ನೂರು ರಾಷ್ಟ್ರೀಯ ದುರಂತ. ಹಾಗೆಂದು ಸರಕಾರ ಘೋಷಿಸಲೇಬೇಕಿದೆ. ಏಕೆಂದರೆ ಯಾತ್ರಾರ್ಥಿಗಳು ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದರು. ಆಂಧ್ರಪ್ರದೇಶ, ಅಸ್ಸಾಂ, ತಮಿಳುನಾಡು, ಕರ್ನಾಟಕ, ಪಂಜಾಬ್, ಗುಜರಾತ್... ಹೀಗೆ ಎಲ್ಲಾ ರಾಜ್ಯಗಳ, ಎಲ್ಲ ಭಾಷೆಯ ಮಂದಿ ಅಲ್ಲಿದ್ದರು.
-----
ಸತ್ತವರ ಬಗ್ಗೆ, ತೇಲಿಬಂದ ದೇಹಗಳ ಕುರಿತ ಲೆಕ್ಕಾಚಾರ, ಅವರ ಅಂತ್ಯಸಂಸ್ಕಾರ, ಮುಂತಾದ ವಿವರಗಳ ಕುರಿತು ಹೆಚ್ಚಿನವರಿಗೆ ಅಲ್ಲೀಗ ಮಾತನಾಡಲು ಮನಸ್ಸಿಲ್ಲ. ಸರ್ಕಾರಿ ಅಂಕಿ-ಅಂಶಗಳು ಕೆಲ ನೂರು, ಸಾವಿರ ಎನ್ನುತ್ತಿದ್ದರೂ ನೈಜ ಚಿತ್ರಣದಲ್ಲಿ ಲಕ್ಷಕ್ಕೆ ಮೀರಿದೆ. ಹೃಷಿಕೇಷ, ಹರಿದ್ವಾರ ಮತ್ತಿತರೆಡೆಯ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿಹೋಗಿವೆ. ಅವರೆಲ್ಲರನ್ನೂ ತಮ್ಮ ನೋವಿಗಿಂತ ಆ ದಿನದ ಭೀಕರ ನೆನಪುಗಳು, ಭಯಾನಕ ಕಲ್ಪನೆಗಳು ಕಾಡುತ್ತಿವೆ. ಯಾತ್ರಿಗಳ ಕಣ್ಣಲ್ಲಿ ಕೇದಾರನಾಥ ದೇವಾಲಯದ ಪೂಜನೀಯತೆಗಿಂತ ಅವತ್ತಿನ ಅಲ್ಲಿನ ನರಕ ಸದೃಶ ದೃಶ್ಯವೇ ಇದೆ. ದೇವಾಲಯದ ಹೆಬ್ಬಾಗಿಲು ಹೆಣ, ಕಸಕಡ್ಡಿ ಮುಂತಾದ ರಾಶಿಯನ್ನೇ ಹೊತ್ತು ನಿಂತಿದ್ದ ದೃಶ್ಯ ಮರುಕಳಿಸುತ್ತಿದೆ.
-----
ಕೇದಾರನಾಥದ ದಾರಿಯಲ್ಲಿ, ರುದ್ರಪುರ ಎಂಬ ಹಳ್ಳಿ ಇದೆ. ಅಲ್ಲಿನ ಗಂಡಸರು ದೇವಾಲಯದ ಪವಿತ್ರ ಸ್ಥಳದಲ್ಲಿ ಪೌರೋಹಿತ್ಯ ಮಾಡುತ್ತಾರೆ. ಆ ದುರ್ದಿನದಂದು ಹತ್ತು ಜನರು ಕಾಣೆಯಾಗಿದ್ದಾರೆ. ಹಾಗೆ ಕಾಣೆಯಾದವರಲ್ಲಿ ಹೆಚ್ಚಿನವರು ಗಂಡಸರೇ. ಕೆಲವರು ಪೋರ್ಟರ್ಸ್ ಅಥವಾ ದಾಬಾಗಳಲ್ಲಿ, ಧರ್ಮಶಾಲೆಗಳಲ್ಲಿ ಕೈ ತುಂಬಾ ಯಾತ್ರೆಯ ಸೀಸನ್ನಿನ ಕೆಲಸ ಸಿಕ್ಕುತ್ತದೆ ಎಂದೇ ಬರುತ್ತಿದ್ದರು. ಕಳೆದ ಎಲ್ಲರ ಜೀವನವೂ ದುರಂತವೇ, ಆದರೆ ಯಾತ್ರಾರ್ಥಿಗಳ ಮೇಲಷ್ಟೇ ಎಲ್ಲರ ಆಸಕ್ತಿ ಕೇಂದ್ರಿಕೃತವಾದದ್ದು. ಸ್ಥಳೀಯರ ಬಗ್ಗೆ ಯಾರಿಗೂ ಕಾಳಜಿ ಇದ್ದಂತೆ ಕಾಣಿಸುತ್ತಿಲ್ಲ ಎಂದು ಹೃಷಿಕೇಶದ ನೀರಾವರಿ ಇಲಾಖೆಯ ನೌಕರನೊಬ್ಬ ದೂರುತ್ತಾನೆ. ಆತನ ಕಚೇರಿ ಗಂಗಾ ತೀರದಲ್ಲಿತ್ತು, ನೀರು ನುಗ್ಗಿ ಜೂನ್ 17ರಂದು ಕೊಚ್ಚಿ ಹೋಗಿದೆ. ಸ್ಥಳೀಯರಿಗೆ ಅ ದಿನಗಳಲ್ಲಿ ಹೆಚ್ಚಿನ ನೆರವು ಸಿಕ್ಕಲಿಲ್ಲ, ಕಿ.ಮೀ.ಗಟ್ಟಲೆ ಹಿರಿಯರು, ಗಾಯಗೊಂಡವರು, ಚಿಕ್ಕ ಮಕ್ಕಳು, ಹಸಿವಿನಿಂದ, ನೋವಿನಿಂದ ಸಾಗಬೇಕಾಯ್ತು ಎನ್ನುತ್ತಾರೆ ಅವರು.
ಗೌರಿಕುಂಡದಿಂದಲೂ ಸ್ಥಳೀಯ ವಾಸಿಗಳು ಹಾನಿಗೊಳಗಾಗಿದ್ದಾರೆ. ಆದರೆ, ಅವರೆಲ್ಲರಿಗೂ ಹೃದಯಸ್ಪರ್ಶಿಯಾದ ಯಾವುದೇ ಸಹಾಯ ಇದುವರೆಗೆ ನೀಡಿಲ್ಲ. ಸೈನ್ಯದ ಗುಂಪುಗಳು ದೆಹಲಿ ಮತ್ತು ಹರಿಯಾಣದಿಂದ ಧಾವಿಸಿವೆ, ಅಲ್ಲದೆ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್‌ಮೆಂಟ್ ಕಮಿಟಿಯು ಖಾಸಗಿ ವ್ಯಕ್ತಿಗಳ ನೆರವು ತಂದು ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದೆ. ಜೋಶಿನಾಥ್, ಹೃಷಿಕೇಶ, ಗೌಚಾರ್ ಮತ್ತು ಗೋವಿಂದ್‌ಘಾಟ್‌ನಲ್ಲಿ ಅಡುಗೆ ತಯಾರಿಸಿ ಬಡಿಸುವ ವ್ಯವಸ್ಥೆ ಮಾಡಲಾಗಿದೆ.
-----
ಸೇನಾ ಸಿಬ್ಬಂದಿ, ಕೆಲಸಗಾರರು ತಾತ್ಕಾಲಿಕ ರಸ್ತೆಗಳನ್ನು, ಸೇತುವೆಗಳನ್ನು ಮತ್ತು ಸಣ್ಣ ಕಾಲುದಾರಿಯನ್ನು ನಿರ್ಮಿಸಿ, ಹಳ್ಳಿಗಳನ್ನು ಸಂಪರ್ಕಿಸುವಲ್ಲಿ ನಿರತರಾಗಿದ್ದಾರೆ. ನೂರಾರು ಸೈನಿಕರು ಮತ್ತು ಅಧಿಕಾರಿಗಳು ಗೌರಿಕುಂಡದಿಂದ ಆಹಾರ, ಔಷಧ ಇತ್ಯಾದಿಗಳನ್ನು ಸರಬರಾಜು ಮಾಡುತ್ತಿದ್ದಾರೆ. ಇನ್ನಷ್ಟು ದಿನ ಅಲ್ಲಿ ಸೈನಿಕರ ಸೇವೆ ಅನಿವಾರ್ಯ. ಅದೇ ಅಲ್ಲಿನವರಿಗೆ ನೈತಿಕ ಸ್ಥೈರ್ಯ ನೀಡಲಿದ್ದಾರೆ. ಗಾಯಾಳುಗಳೆಲ್ಲರೂ ತಕ್ಷಣವೇ ಮರಳುವುದು ಅಸಾಧ್ಯ. ವಯಸ್ಸಾದವರಿಗೆ ಹತ್ತಿರದ ಡೆಹ್ರಾಡೂನ್‌ನಂಥ ನಗರಗಳಿಗೆ ಕಳುಹಿಸಲು ಏರ್ಪಾಡು ನಡೆದಿದೆ. ಅವರು ಉಳಿದಿರುವುದೇ ಒಂದು ಅಚ್ಚರಿ. ಈ ದುರಂತದಿಂದ ಸಂಪೂರ್ಣ ಹೊರಬರಲು ಅವರಿಗೆ, ಇನ್ನಷ್ಟು ಸಮಯ ಹಿಡಿಯುತ್ತದೆ.
ಸೈನಿಕರ ಎದೆಯಾಳದಿಂದ ಮೊದಲು ಬರುವ ಮಾತು 'ಸುರಕ್ಷೆ, ಗೌರವ ಮತ್ತು ದೇಶದ ಯೋಗಕ್ಷೇವು. ಇದು ಯಾವಾಗಲೂ ಮತ್ತು ಪ್ರತಿ ಬಾರಿಯೂ', ದುರಂತದ ಸಂದರ್ಭದಲ್ಲೂ ಇದೇ ಮೊದಲಿಗೆ ಬರುತ್ತದೆ.   ಅಲ್ಲಿ ಸೈನಿಕರು ಸ್ವಾರ್ಥ ರಹಿತರಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವುದು ನೋಡಿದರೆ ಇದು ನಿಜ ಎನಿಸುತ್ತದೆ. 'ಅವರು ತಮ್ಮ ಜೀವನದ ಬಗ್ಗೆ ಎಂದಿಗೂ ಯೋಚಿಸಲಿಲ್ಲ, ಅಲ್ಲಿ ಸಾಂಕ್ರಮಿಕ ರೋಗಗಳು ಹರಡಬಹುದೆಂಬ ಎಚ್ಚರಿಕೆಗೂ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ' ಎನ್ನುತ್ತಾರೆ ಸ್ಕ್ವಾಡ್ರನ್ ಲೀಡರ್ ಮನೋಜ್ ಗೌತಮ್.  
-----
ಉತ್ತರಾಖಂಡದಲ್ಲಿ ಯಾವಾಗಲೂ ಮೋಡಗಳು ಡಿಕ್ಕಿ ಹೊಡೆಯುವುದು, ಪ್ರವಾಹದ ಅಲೆಗಳು ಸಾಮಾನ್ಯ, ಆದರೆ ದುರಂತದ ಪ್ರಮಾಣ ಮಾತ್ರ ಊಹಿಸಲಸದಳ. ಇಲ್ಲಿ ವಾಣಿಜ್ಯ ಮತ್ತು ಅಭಿವೃದ್ಧಿಯ ಕುರುಡು ಪೂಜೆ ನಡೆಯುತ್ತಿದೆ. ಪರಿಸರಕ್ಕೆ ಹಾನಿಕಾರಕ ಅಕ್ರಮ ಕಟ್ಟಡ, ನಿರ್ಮಾಣ ಕಾರ್ಯ ಮುಂದುವರಿದಿದೆ. ಮನುಷ್ಯ ತಾನು ಮೊದಲಿಗೆ ಪೂಜಿಸಿದ್ದು ಪರಿಸರವನ್ನು ಎಂಬುದನ್ನು ಮರೆತಿದ್ದಾನೆ. ಇದರಲ್ಲಿ ಚೌಕಾಸಿಯ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬುದನ್ನು ಅರಿಯಬೇಕಿದೆ.

- ರಾಧಾಕೃಷ್ಣ ಎಸ್ ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.