ಅಭಿವೃದ್ಧಿ ಅಮಲಿನವರಿಗೆ ಅಮ್ಮಂದಿರ ಸಿಟ್ಟೂ ಅರ್ಥವಾಗಿಲ್ಲ!
ಧಾರೀದೇವಿಯನ್ನು ಅಲ್ಲಿಂದ ಕದಲಿಸಲು ಪ್ರಯತ್ನಿಸಿದಾಗಲೆಲ್ಲ ಅನಾಹುತಗಳಾಗಿವೆ.
ಇದೆಲ್ಲ ಕಾಗಕ್ಕ, ಗುಬ್ಬಕ್ಕನ ಕಥೆ ಎಂದು ಅನ್ನಿಸಬಹುದು. ಆದರೆ ಧಾರೀದೇವಿಯನ್ನು ಅಲ್ಲಿಂದ ಕದಲಿಸಲು ಪ್ರಯತ್ನಿಸಿದಾಗಲೆಲ್ಲ ಅನಾಹುತಗಳಾಗಿವೆ
ಅನುಮಾನವೇ ಇಲ್ಲ. ಆ ತಾಯಂದಿರು ಮುನಿಸಿಕೊಂಡಿದ್ದರು. ಅದು ಅಂತಿಂಥ ಕೋಪವಲ್ಲ. ಪ್ರಳಯಕಾಲದ ರೌದ್ರ ಮುಖವದು. ಅದನ್ನು ಶಮನಗೊಳಿಸುವ, ಅವರನ್ನು ಹತೋಟಿಗೆ ತರುವ ಸಾಮರ್ಥ್ಯ ಆ ಕ್ಷಣದಲ್ಲಿ ಯಾರಿಗೂ ಇರಲಿಲ್ಲ. ಪರಿಣಾಮ ಹಿಮಾಲಯದಲ್ಲಿ ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸುವ ವಿನಾಶ ಲೀಲೆ ನಡೆದೇ ಹೋಯಿತು. ಸುಂದರ ಗಿರಿ ಕಣಿವೆಯಲ್ಲಿ ಹರಿ-ಹರರ ಪದತಲದಲ್ಲಿ ಜುಳು ಜುಳು ನಿನಾದದೊಂದಿಗೆ ಮೈ ಬಳುಕಿಸುತ್ತಾ, ಅಂಕುಡೊಂಕಿನೊಂದಿಗೆ ಲಾಸ್ಯ ತೋರುತ್ತಾ ಹರಿಯುತ್ತಿದ್ದವರು ಅವರು. ಮಕ್ಕಳ ಎಲ್ಲ ಚೇಷ್ಟೆಗಳನ್ನೂ ಸಹಿಸಿಕೊಂಡಿದ್ದರು. ಮೌನವಾಗಿಯೇ ಎಲ್ಲ ಲಫಂಗತನವನ್ನೂ ನೋಡುತ್ತಿದ್ದರು. ಇವತ್ತಲ್ಲಾ ನಾಳೆಯಾದರೂ ಹದ್ದುಬಸ್ತಿಗೆ ಬಂದಾರು ಎಂದು ಕಾದಿದ್ದರು. ಒಂದೆರಡು ಬಾರಿ ಈ ಬಗ್ಗೆ ಸಣ್ಣದಾಗಿ ಗದರಿ ಮುನ್ನೆಚ್ಚರಿಕೆಯನ್ನೂ ಕೊಟ್ಟಿದ್ದರು. ಕಿವಿ ಹಿಂಡಿ ಬುದ್ಧಿ ಹೇಳಿದ್ದರು. ಹೆತ್ತಮ್ಮನ ಮೇಲಿನ ದೌರ್ಜನ್ಯವೆಂದರೆ ಅದು ವಿನಾಶಕ್ಕೆ ನಾಂದಿ ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದರು. ಹುಸಿ ಅಭಿವೃದ್ಧಿಯ ಅಮಲಿನಲ್ಲಿದ್ದ ತಿಳಿಗೇಡಿಗಳಿಗೆ ಅಮ್ಮಂದಿರು ಪರಿಪರಿಯಾಗಿ ಹೇಳಿದ ಆ ಪರಿಭಾಷೆ ಅರ್ಥವೇ ಆಗಲಿಲ್ಲ. ಬಹುಶಃ ಸ್ವಲ್ಪ ಗಮನ ಕೊಟಿದ್ದರೆ ಅರ್ಥವಾಗುತ್ತಿತ್ತೇನೋ. ಆದರೆ ಅಷ್ಟು ವಿವೇಚನೆ ಉಳಿದಿರಲಿಲ್ಲ. ತಾವು ದಾರಿ ತಪ್ಪಿದ್ದಲ್ಲದೇ ಅಮ್ಮಂದಿರ ದಿಕ್ಕನ್ನೂ ತಪ್ಪಿಸಿ ತಮ್ಮ ವಿನಾಶವನ್ನು ತಾವೇ ಬರೆದುಕೊಂಡುಬಿಟ್ಟರು. ಆಗಬಾರದ್ದು ಆಗಿಯೇ ಹೋಯಿತು. ಮಾಡಿದ ತಪ್ಪಿನ ಹೊಣೆಗಾರರು, ಅಲ್ಲದವರು ಎಲ್ಲರೂ ಶಿಕ್ಷೆ ಅನುಭವಿಸಿದರು. ಸಾತ್ವಿಕ ಕೋಪವೇ ಹಾಗೆ. ಒಮ್ಮೆ ಸ್ಫೋಟಗೊಂಡರೆ ಮುಗಿಯಿತು, ಮತ್ತಲ್ಲಿಗೆ ಸರ್ವನಾಶವೇ. ಅದು ಬ್ರಹ್ಮಾಸ್ತ್ರ ಪ್ರಯೋಗವಿದ್ದಂತೆ. ಹಿಮಾಲಯ ಶ್ರೇಣಿಯ ಒಂದಿಡೀ ಸಮುದಾಯವೇ ನಲುಗಿದ್ದು ಅಮ್ಮಂದಿರ ಅಂಥ ಸಾತ್ವಿಕ ಕೋಪದಿಂದಲೇ.
ಹೌದು, ಗಂಗೆಯ ಪ್ರಮುಖ ಶ್ರೋತಗಳಾದ, ಪ್ರಮುಖ ಉಪನದಿಗಳಾದ ಮಂದಾಕಿನಿ, ಅಲಕಾನಂದೆಯರು ಈಗ ಮೊದಲಿನಷ್ಟು ತಣ್ಣಗೆ ಮೈ ಹರವಿ ಹರಿಯುತ್ತಿಲ್ಲ. ತಮ್ಮ ಎಂದಿನ ಶ್ಲೀಲ ಸೌಂದರ್ಯಕ್ಕೆ ಅಪವಾದವಾಗಿ ಅಬ್ಬರಿಸುತ್ತಿದ್ದಾರೆ. ಗಿರಿ ರಾಜ್ಯಗಳಾದ ಹಿಮಾಚಲಪ್ರದೇಶ, ಉತ್ತರಾಖಂಡದಲ್ಲಿ ತಮ್ಮ ಮೇಲೆ ಮಕ್ಕಳಿಂದಲೇ ನಿರಂತರ ನಡೆಯುತ್ತಾ ಬರುತ್ತಿದ್ದ ಅತ್ಯಾಚಾರಕ್ಕೆ ಮೊದಲ ಸಲವೆಂಬಂತೆ ತೀವ್ರ ಪ್ರತಿರೋಧದ ಮೂಲಕ ಉತ್ತರ ಕೊಟ್ಟಿದ್ದಾರೆ. ತಮ್ಮನ್ನು ಕಟ್ಟಿಹಾಕುವುದು ಹುಲು ಮಾನವನಿಂದ ಆಗುವ ಕೆಲಸವಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ಬಿತ್ತರಿಸಿದ್ದಾರೆ. ಒಂದೇ ಒಂದು ಸಲ ಮೈಕೊಡವಿಕೊಳ್ಳುವ ಮೂಲಕ ತಾವು ತಾಳ್ಮೆಗೆಟ್ಟರೆ ಏನಾದೀತು ಎಂಬುದನ್ನು ಹೇಳಿದ್ದಾರೆ. ಅಷ್ಟೇ ಸಾಕಾಗಿದೆ, ಹಿಮದ ನಾಡು ನಲುಗಿದೆ. ತಣ್ಣಗೆ ಕುಳಿತಿದ್ದ ಜನಜೀವನದ ಎದೆ ನಡುಗಿದೆ.
ಅದು ಭಾರತೀಯರ ಪಾಲಿಗೆ ಪರಮಪವಿತ್ರ ತಾಣ. ಹಾಗೆ ನೋಡಿದರೆ ನಮ್ಮ ದೇವಗಂಗೆಗೆ ಆ ಹೆಸರು ಅನ್ವರ್ಥಗೊಳ್ಳುವುದೇ ಆ ಸ್ಥಳದಲ್ಲಿ. ಇಬ್ಬರು ತಾಯಂದಿರು ತಮ್ಮೆಲ್ಲ ವೈರುಧ್ಯವನ್ನು ಮರೆತು ಭರತ ಭೂಮಿಯ ಸರ್ವೋನ್ನತಿಗಾಗಿ ಅಲ್ಲಿ ಒಂದಾಗುತ್ತಾರೆ. ಯಾವ ದೃಷ್ಟಿಕೋನದಿಂದ ನೋಡಿದರೂ ಅದು ಪರಮ ಪುನೀತ ತಾಣ. ರುದ್ರಪ್ರಯಾಗ ಅದರ ಹೆಸರು. ಅಲ್ಲಿ ಎಡದಿಂದ ಬರುವ ಅಲಕೆ, ಬಲಕ್ಕೆ ಸಾಗಿ ಬರುವ ಮಂದಾಕಿನಿ ಸಸ್ನೇಹ ಬಂಧುತ್ವದ ಮುಗುಳು ನಗೆಯೊಂದಿಗೆ ಪರಸ್ಪರ ಕೈ, ಕೈ ಹಿಡಿದು ಮುಂದೆ ಸಾಗಲಾರಂಭಿಸುತ್ತಾರೆ. ನೋಡ ನೋಡುತ್ತಿದ್ದಂತೆಯೇ ಅವಳೊಳಗೆ ಇವಳು, ಇವಳೊಳಗೆ ಅವಳು ಬೆರೆತು, ಅವಳಿವಳೆನ್ನುವ ಭೇದವನ್ನೇ ಗುರುತಿಸಲಾಗದಂತೆ ಒಂದೇ ಭವ್ಯ ವ್ಯಕ್ತಿತ್ವದೊಂದಿಗೆ ಹೊರಟು ಬಿಡುತ್ತಾರೆ. ಹಾಗೆ ನೋಡಿದರೆ ಇಬ್ಬರ ಸ್ವಭಾವವೂ ವಿಭಿನ್ನ. ಮಂದಾಕಿನಿ ಪರಿಪೂರ್ಣ ಗೃಹಿಣಿ. ಘನ ಗಂಭೀರೆ. ಲಜ್ಜೆಯ ಹಿತಮಿತವಾದ ಮಿಳಿತದೊಂದಿಗೆ ಹೆಜ್ಜೆ ಹಾಕುವವಳು. ಯಾವತ್ತಿಗೂ ಹದ್ದು ಮೀರಿ ಹರಿದವಳಲ್ಲ. ಅಲಕೆ ಪಕ್ಕಾ ಸೊಕ್ಕಿನ ಸೊಗಸುಗಾತಿ. ತುಂಬು ಜವ್ವನದ ಕನ್ನಿಕೆ. ಧಾರ್ಮಿಕ, ಜಾನಪದ ನಂಬಿಕೆಗಳ ಪ್ರಕಾರವೂ ದೇಶದ ನದಿಗಳಲ್ಲಿ ಅವಿವಾಹಿತ, ಕನ್ಯತ್ವದೊಂದಿಗೆ ಪೂಜಿಸಿಕೊಳ್ಳುವ ಏಕೈಕ ಜಲದೇವತೆಯೆಂದರೆ ಅದು ಅಲಕಾನಂದೆಯೇ. ವಯಸ್ಸು, ರೂಪ, ಯೌವ್ವನ, ಸಾಮರ್ಥ್ಯ, ಸಮೃದ್ಧಿ ಹಾಗೂ ಇವುಗಳೆಲ್ಲದರ ವಿಪರೀತವೆನ್ನುವ ಚಾಂಚಲ್ಯ, ತುಂಟತನವನ್ನೂ ಮೀರಿದ ಕ್ರೇಜಿತನ ಅಲಕೆಯ ವ್ಯಕ್ತಿತ್ವ ಬಣ್ಣನೆಗೆ ನಿಲುಕುವ ವಿಶೇಷಣಗಳು. ಇವ್ಯಾವುದರಲ್ಲೂ ಅಲಕೆಗೆ ಸಾಟಿಯಾದ ಇನ್ನೊಂದು ನದಿ ದೇಶದಲ್ಲಿಲ್ಲ. ಇಂಥ ಅಲಕೆಯ ದರ್ಪ ಇಮ್ಮಡಿಗೊಳ್ಳುವುದು ರುದ್ರಪ್ರಯಾಗದಲ್ಲಿ ಮಂದಾಕಿನಿಯನ್ನೂ ತೆಕ್ಕಗೆ ತೆಗೆದುಕೊಂಡು ಹೊರಟಾಗ. ಅಲ್ಲಿಂದ ಮುಂದೆ ಮಂದಾಕಿನಿಯ ಅಸ್ತಿತ್ವವೇ ಮರೆಯಾಗಿ ಬಿಡುತ್ತದೆ. ಆಗಾಕೆ ಅಕ್ಷರಶಃ ಮಹಾಕಾಳಿಯೇ. ಅದರ ಪ್ರತೀಕವೆಂಬಂತೆ ನದಿಯ ಮಧ್ಯದಲ್ಲಿ ನಿಂತಿದ್ದಳು ಮಾತೆ ಧಾರೀದೇವಿ. ನದಿಯ ಮಧ್ಯಭಾಗದಲ್ಲಿ ತಲೆಯೆತ್ತಿ ನಿಂತಿದ್ದ, ನೂರಾರು ಮೀಟರ್ ಆಳಕ್ಕೆ ಇಳಿದು ಕುಳಿತಿದ್ದ ಬೃಹತ್ ಬಂಡೆಯಿಂದ ಆವೃತ್ತ ನಡುಗಡ್ಡೆಯಲ್ಲಿ ಸ್ಥಾಪಿತವಾಗಿದ್ದ ಧಾರೀದೇವಿ ಸಾಕ್ಷಾತ್ ಕಾಳಿ ಮಾತೆ ಎಂಬ ನಂಬಿಕೆ ಸ್ಥಳೀಯರದ್ದು.
ಧಾರೀದೇವಿ ನೆಲೆಗೊಳ್ಳಲು ತಾನಾಗಿಯೇ ಆರಿಸಿಕೊಂಡ ತಾಣ ಇದು ಎನ್ನುವ ಭಾವನೆ ಆ ಭಾಗದ ಜನರಲ್ಲಿದೆ.
ನೂರಾರು ವರ್ಷಗಳ ಹಿಂದೆ ಪ್ರವಾಹದಲ್ಲಿ ಒಮ್ಮೆ ಧಾರೀದೇವಿ ದೇವಾಲಯ ಕೊಚ್ಚಿ ಹೋಯಿತಂತೆ. ಆಗ ದೇವಿ ಪ್ರತಿಮೆ ಬಂಡೆಗಲ್ಲುಗಳ ನಡುವೆ ನಿಂತಿತಂತೆ. ಗ್ರಾಮಸ್ಥರಿಗೆ ರಾತ್ರಿಯಿಡೀ ದೇವಿ ರೋದಿಸುವ ಸದ್ದು ಕೇಳಿತಂತೆ. ಮುಂಜಾನೆ ಹೋಗಿ ನೋಡಿದಾಗ ತನ್ನನ್ನು ಇಲ್ಲಿಯೇ ಪ್ರತಿಷ್ಠಾಪಿಸುವಂತೆ ಆಜ್ಞೆ ಮಾಡಿದಳಂತೆ. ತನಗೆ ಆಕಾಶವೇ ಚಾವಣಿ ಎನ್ನುವುದನ್ನೂ ಧಾರೀದೇವಿಯೇ ಸ್ಪಷ್ಟಪಡಿಸಿದಳಂತೆ. ಅಲ್ಲಿಂದ ಮುಂದಕ್ಕೆ ಅಲಕಾನಂದೆಯ ಈ ತೀರವೇ ಅವಳ ನೆಲೆಯಾಯಿತು.
ಇದೆಲ್ಲ ಕಾಗಕ್ಕ, ಗುಬ್ಬಕ್ಕನ ಕಥೆ ಎಂದು ಅನ್ನಿಸಬಹುದು. ಆದರೆ ಧಾರೀದೇವಿಯನ್ನು ಅಲ್ಲಿಂದ ಕದಲಿಸಲು ಪ್ರಯತ್ನಿಸಿದಾಗಲೆಲ್ಲ ಅನಾಹುತಗಳಾಗಿವೆ. 1882ರಲ್ಲಿಯೂ ಸ್ಥಾನಪಲ್ಲಟಗೊಳಿಸುವ ಪ್ರಯತ್ನವಾಗಿತ್ತು. ಮರುದಿನವೇ ಕೇದಾರ ಕಣಿವೆಯಲ್ಲಿ ಪ್ರವಾಹ ಉಂಟಾಗಿತ್ತು. ಈ ಬಾರಿಯೂ ಅಷ್ಟೇ. ಜಲ ವಿದ್ಯುತ್ ಉತ್ಪಾದನೆಗಾಗಿ ಅಣೆಕಟ್ಟೆ ನಿರ್ಮಿಸುವ ಉದ್ದೇಶದಿಂದ ಜೂನ್ 15ರಂದು ಧಾರೀದೇವಿಯನ್ನು ಸ್ಥಳಾಂತರಿಸಲಾಗಿದೆ. ಮಾರನೇ ದಿನವೇ ಅಂದರೆ ಜೂನ್ 16ರಂದು ಕಣಿವೆಯಲ್ಲಿ ಮೇಘಸ್ಫೋಟವಾಗಿದೆ; ಅಲಕಾನಂದಾ ಸಿಟ್ಟಿನಿಂದ ಅಬ್ಬರಿಸುತ್ತ ರೌದ್ರಾವತಾರ ತಾಳಿ ಎದುರಿಗೆ ಸಿಕ್ಕಿದ್ದನ್ನೆಲ್ಲ ಆಪೋಶನ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಧಾರೀದೇವಿ ಇದ್ದ ಜಾಗ ಮುಳುಗಡೆಯಾಗುತ್ತದೆ ಎನ್ನುವ ಕಾರಣದಿಂದಲೇ ಉಮಾಭಾರತಿ, ಬಿ.ಸಿ. ಖಂಡೂರಿ ಅವರಂಥ ನಾಯಕರು ಇಲ್ಲಿ ಅಣೆಕಟ್ಟೆ ನಿರ್ಮಾಣವನ್ನು ವಿರೋಧಿಸುತ್ತ ಬಂದಿದ್ದರು.
ಧಾರೀದೇವಿ ಸಾಕ್ಷಾತ್ ಕಾಳಿಯ ಪ್ರತಿರೂಪ ಎನ್ನುವುದು ಸ್ಥಳೀಯರ ನಂಬಿಕೆ ಮಾತ್ರವಲ್ಲ, ದೇವಿ ಭಾಗವತದಲ್ಲಿ ಉಲ್ಲೇಖಿಸಲಾಗಿರುವ 108 ಶಕ್ತಿಪೀಠಗಳಲ್ಲಿ ಇದೂ ಒಂದು. ಕಾಳಿಯ ಶರೀರದ ಮೇಲ್ಭಾಗದ ಶಕ್ತಿ ಧಾರೀದೇವಿಯಲ್ಲಿ ಪ್ರವಹಿಸುತ್ತಿದೆ, ಉಳಿದ ಭಾಗದ ಶಕ್ತಿ ರುದ್ರಪ್ರಯಾಗದ ಕಾಳಿಮಠದಲ್ಲಿ ಇದೆ ಎನ್ನುವುದೂ ನಂಬಿಕೆ. ಅದಕ್ಕೆ ಪೂರಕವಾಗಿ ಕಾಳಿಮಠದಲ್ಲಿ ಯಾವುದೇ ಪ್ರತಿಮೆ ಇಲ್ಲ. ಅಲ್ಲಿ ಪೂಜೆಗೊಳ್ಳುವುದು ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಶ್ರೀ ಯಂತ್ರ. ಅಲಕಾನಂದೆಯ ತೀರದಲ್ಲಿ ನೆಲೆಗೊಂಡ ಧಾರೀದೇವಿಗೆ ಕಟ್ಟಡವಿಲ್ಲ. ಬಯಲೇ ದೇಗುಲ, ಆಗಸವೇ ಚಾವಣಿ. ಬದರಿಗೆ ಹೋಗುವ ಸಾವಿರಾರು ಯಾತ್ರಿಕರು ಆಕೆಯ ದರ್ಶನ ಪಡೆದು ಸಾಗುತ್ತಾರೆ. ದೇವಿಯ ಫೋಟೋ ಕೂಡ ತೆಗೆಯುವಂತಿಲ್ಲ. ಅಷ್ಟು ಕಟ್ಟುನಿಟ್ಟು.
ಕೇದಾರನಾಥ ಜ್ಯೋತಿರ್ಲಿಂಗ ಮತ್ತು ಧಾರೀದೇವಿ ದೇವಸ್ಥಾನಗಳ ನಡುವೆ ನೇರ ಸಂಬಂಧ. ಅದು ಪತಿ-ಸತಿ ಬಾಂಧವ್ಯ. ಇನ್ನು ಧಾರೀದೇವಿ ಮತ್ತು ಕಾಳಿಮಠ ದೇವಸ್ಥಾನಗಳು ಈಶಾನ್ಯ, ನೈಋತ್ಯ ದಿಕ್ಕಿನಲ್ಲಿವೆ. ಅವೆರಡಕ್ಕೂ ತಾಳೆಹಾಕಿ ನೋಡಿದರೆ ಕಾಳಿ ಮಾತೆ ಈಶಾನ್ಯ ದಿಕ್ಕಿನಲ್ಲಿ ಪಾದಗಳನ್ನು, ಆಗ್ನೇಯ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿದಂತೆ ಭಾಸವಾಗುತ್ತದೆ. ಇದು ಈಶಾನ್ಯ ದಿಕ್ಕಿನಲ್ಲಿ ಶಕ್ತಿ ಪ್ರವಹಿಸಲು ಕಾರಣವಾದರೆ, ಮುಖಭಾಗ ಹೊಂದಿರುವ ಅಂದರೆ ಧಾರೀದೇವಿ ರೂಪದಲ್ಲಿರುವ ಕಾಳಿಯನ್ನು ಶಿವ ಸಂತೈಸುತ್ತಿದ್ದಾನೆ. ಕಾಳಿ ಮಾತೆಯ ಕೆಳಭಾಗ ಎಂದು ಹೇಳಲಾಗುವ ಶ್ರೀ ಯಂತ್ರ ಸೃಷ್ಟಿ ಮೂಲವಾದ, ಶಕ್ತಿ ದೇವತೆಯ ಯೋನಿ ಸ್ವರೂಪ ಎನ್ನುವ ವ್ಯಾಖ್ಯಾನವನ್ನೂ ಅಲ್ಲಿನವರು ನೀಡುತ್ತಾರೆ.
ಕೇದಾರನಾಥ ಜ್ಯೋತಿರ್ಲಿಂಗ ಕಾಳಿಮಠದ ನೇರ ಉತ್ತರಕ್ಕಿದೆ. ದಕ್ಷಿಣದಲ್ಲಿರುವ ಕಾಳಿಯನ್ನು ಶಿವ ಸಮಾಧಾನಿಸುತ್ತಲೇ ಇರುತ್ತಾನೆ ಎನ್ನುವುದರ ದ್ಯೋತಕವೂ ಹೌದು ಇದು. ಉತ್ತರ ದಿಕ್ಕು ಅಹಿಂಸೆಯನ್ನು ಸೂಚಿಸಿದರೆ, ದಕ್ಷಿಣ ದಿಕ್ಕು ಕೋಪ, ಸಂಘರ್ಷ, ಯುದ್ಧಗಳನ್ನು ಸಂಕೇತಿಸುತ್ತದೆ. ಧಾರೀದೇವಿಯನ್ನು ಸ್ಥಳಾಂತರಿಸುವ ಮೂಲಕ ದಂಪತಿಯನ್ನು ಬೇರ್ಪಡಿಸಿದಂತಾಗಿದೆ ಎನ್ನುವುದು ಒಂದು, ದಿಕ್ಕು ಬದಲಿಸುವ ಮೂಲಕ ಸಿಟ್ಟಿಗೆದ್ದು ರಚ್ಚೆ ಹಿಡಿದಿರುವ ಧಾರೀದೇವಿಯನ್ನು ಸಂತೈಸಲು ಶಿವನಿಗೆ ಆಗದು ಎನ್ನುವುದು ಇನ್ನೊಂದು. ಧಾರೀದೇವಿಯ ಸ್ಥಳಾಂತರವನ್ನು ಸ್ಥಳೀಯರು ವಿರೋಧಿಸುತ್ತ ಬಂದಿದ್ದೂ ಈ ಹಿನ್ನೆಲೆಯಲ್ಲಿಯೇ. ಸ್ಥಳಾಂತರ ಮಾಡಿದರೆ ಧಾರೀ ಮತ್ತು ಕಾಳಿಮಠಗಳ ಜೋಡಣೆ ತಪ್ಪಿಹೋಗುತ್ತದೆ, ಧಾರೀದೇವಿಯನ್ನು ಸ್ಥಳಾಂತರಿಸುವಾಗ ಮಲಗಿದ್ದ ಕಾಳಿ ಎಚ್ಚರಗೊಂಡು ಸಿಟ್ಟಾಗುತ್ತಾಳೆ ಎನ್ನುವ ಅವರ ವಾದ ಹುಂಬ ಸರ್ಕಾರಕ್ಕೆ ಮೂಢನಂಬಿಕೆಯಾಗಿ ಕಂಡಿತಷ್ಟೇ.
ಈಗಿನ ಅನಾಹುತದ ಬಗ್ಗೆಯೂ ಸ್ಥಳೀಯರು ಹೇಳುವುದು ಅದನ್ನೇ. ಧಾರೀದೇವಿಯನ್ನು ಸ್ಥಳಾಂತರಿಸುವಾಗ ಎಚ್ಚರಗೊಂಡ ಕಾಳಿ ಮಾತೆ ರಕ್ತ ಬೀಜವನ್ನು ಬಯಸುತ್ತಿದ್ದಾಳೆ. ಪುರಾಣಗಳ ಪ್ರಕಾರ ರಕ್ತ ಬೀಜ ಎಂದರೆ ಅದು ಸಹಸ್ರಾರು ಜೀವಗಳ ಬಲಿ ಮತ್ತು ಅದನ್ನು ಬಯಸುವ ಸಿಟ್ಟು ಎಂದರೆ ಎಲ್ಲವನ್ನೂ ಸರ್ವನಾಶಗೊಳಿಸುವ ಆಕ್ರೋಶ. ಕಾಳಿಯನ್ನು ಸಮಾಧಾನಪಡಿಸಲು ಧಾರೀದೇವಿ ವಿಗ್ರಹವನ್ನು ಮೊದಲಿದ್ದಲ್ಲಿಯೇ ಪುನರ್ ಪ್ರತಿಷ್ಠಾಪಿಸಿ ಶಾಂತಳಾಗುವಂತೆ ಪೂಜೆ, ಪ್ರಾರ್ಥನೆ ಆರಂಭಿಸಬೇಕು. ಶ್ರೀ ಯಂತ್ರವನ್ನು ಕಾಳಿ ಮಠದಿಂದ ಬೇರೆಡೆ ಒಯ್ಯಬಾರದು. ಕೇದಾರನಾಥನನ್ನು ಬಿಲ್ವಪತ್ರೆಗಳಿಂದ ಅರ್ಚಿಸಬೇಕು. ಇಷ್ಟಾದರೆ ಕಾಳಿ ಮಾತೆ ನಿಧಾನವಾಗಿ ಶಾಂತಳಾಗುತ್ತಾಳೆ. ಇದು ಧಾರೀ ಸುತ್ತಮುತ್ತಲಿನ ಗ್ರಾಮಸ್ಥರು ಹೇಳುವ ಪರಿಹಾರ.
ಇದೇ ಸಂದರ್ಭದಲ್ಲಿ ಈಜಿಪ್ತ್‌ನ ಇತಿಹಾಸದಲ್ಲಿ ದಾಖಲಾದ ಘಟನೆಯೊಂದನ್ನು ನೆನಪಿಸಿಕೊಳ್ಳಬೇಕು. ಐವತ್ತು ವರ್ಷಗಳ ಹಿಂದಿನ ಮಾತು. ಅಲ್ಲೊಂದು ಅಣೆಕಟ್ಟು ಕಟ್ಟಲು ನಿರ್ಧರಿಸಲಾಗಿತ್ತು. ಬೃಹತ್ ನೀರಾವರಿಯ ಈ ಯೋಜನೆಗೆ ಎಲ್ಲಡೆಯಿಂದ ಭಾರೀ ವಿರೋಧ ವ್ಯಕ್ತವಾಗತೊಡಗಿತು. ರಾಷ್ಟ್ರಾದ್ಯಂತ ಆಂದೋಲನವೊಂದು ರೂಪುಗೊಂಡಿತು. ವಿಶೇಷವೆಂದರೆ ಇಂಥ ವಿರೋಧ ವ್ಯಕ್ತವಾಗಿದ್ದು ನಮ್ಮಲ್ಲಿಯಂತೆ ಪರಿಸರ, ಅರಣ್ಯ, ಜನಜೀವನ ಮುಳುಗಡೆಯಾಗುತ್ತದೆ ಎಂಬ ಕಾರಣಕ್ಕಲ್ಲ. ಒಂದೊಮ್ಮೆ 1959ರಲ್ಲಿ ಈಜಿಪ್ತ್‌ನಲ್ಲಿ ಆ ಅಣೆಕಟ್ಟು ನಿರ್ಮಿಸಿದ್ದರೆ ಅಲ್ಲಿನ ಖಜಾನೆ ಎಂದೇ ಪ್ರಸಿದ್ಧವಾಗಿದ್ದ ಅತ್ಯಂತ ಪ್ರಾಚೀನ 'ಅಬು ಸಿಂಬೆಲ್ ದೇವಾಲಯ' ಮುಳುಗಡೆಯಾಗುವ ಅಪಾಯವಿತ್ತು. ಆ ದೇಗುಲವನ್ನು ಉಳಿಸಿಕೊಳ್ಳುವುದು ಸರಕಾರದ ಆದ್ಯತೆಯಾಗಬೇಕೆಂಬ ಒತ್ತಾಯ ಸ್ಥಳೀಯ ಸಂಘಟನೆಗಳದ್ದು. ದಿನದಿಂದ ದಿನಕ್ಕೆ ಅಭಿಯಾನ ಬಲಗೊಳ್ಳಲಾರಂಭಿಸಿತು. ಇದಕ್ಕೆ ಪ್ರಮುಖ ಒತ್ತಾಸೆಯಾಗಿ ನಿಂತದ್ದು ಯುನೆಸ್ಕೊ. ಅಮೆರಿಕ ಸೇರಿದಂತೆ ಹಲವು ದೇಶಗಳು ಈ ಅಭಿಯಾನಕ್ಕೆ ಸಹಮತ ವ್ಯಕ್ತಪಡಿಸಿದವು. ಜಗತ್ತಿನಲ್ಲಿರುವ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಸ್ಥಳಗಳನ್ನು ಸಂರಕ್ಷಿಸುವ ಸಲುವಾಗಿ ಅಂದು ಆರಂಭಗೊಂಡ ಅಭಿಯಾನ ಇಂದಿಗೂ ನಿಂತಿಲ್ಲ. ನಮಗೆ ಸಾವಿರಾರು ವರ್ಷಗಳ ಇತಿಹಾಸದ ಧಾರೀದೇವಿಯಂಥ ಸಾಂಸ್ಕೃತಿಕ, ಧಾರ್ಮಿಕ ತಾಣಗಳು ಮುಖ್ಯವಾಗುವುದೇ ಇಲ್ಲ, ಅದು ಏಕೋ?
ಧಾರೀದೇವಿಯ ಸ್ಥಳಾಂತರ ವಿರೋಧಿಸಿ, ಅಣೆಕಟ್ಟುಗಳು ಸೃಷ್ಟಿಸಬಹುದಾದ ಅವಾಂತರಗಳ ವಿರುದ್ಧ ಜಾಗೃತಿಗಾಗಿ ಹೃಷಿಕೇಶದ ಶಿವಾನಂದ ಆಶ್ರಮದಲ್ಲಿ ಜೂನ್ 13 ರಿಂದ ನಿರಶನವನ್ನು ಆರಂಭಿಸಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಜಿ ಪ್ರೊಫೆಸರ್ ಜಿ. ಡಿ. ಅಗರವಾಲ್ (ಸಾನಂದ ಸ್ವಾಮೀಜಿ) ಪ್ರತಿಭಟನೆಗೆ ಇವತ್ತಿಗೆ ಸರಿಯಾಗಿ ಐವತ್ತು ದಿನಗಳು ತುಂಬಿವೆ. 80 ವರ್ಷದ ಜ್ಞಾನಿಯ ಗಂಗಾ ತಪಸ್ಸಿನ ಬಿಸಿಯೂ ಸರಕಾರವನ್ನು ತಟ್ಟಿಲ್ಲ. ಅಭಿವೃದ್ಧಿ ಎನ್ನುವ ಅಮಲಿನಲ್ಲಿ ತೇಲುತ್ತಿರುವ ಹಿಮಾಚಲಪ್ರದೇಶ, ಉತ್ತರಾಖಂಡ ಸರ್ಕಾರಗಳಿಗೆ ಅಮ್ಮಂದಿರ ಆಸ್ಫೋಟಿಸಿದ ಸಾತ್ವಿಕ ಸಿಟ್ಟೂ ಪಾಠ ಕಲಿಸುವಂತೆ ಕಾಣುತ್ತಿಲ್ಲ!
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

