ಅಂಕಣಗಳು

ದ್ವೇಷದ ಹೊಳೆಗೆ ಬಾಂಧವ್ಯದ ಸೇತುವೆ ಕಟ್ಟಿದ ಮೇಸ್ತ್ರಿ

ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿ ಕೆಂಪಾಪುರದ ದೊಡ್ಡೇಗೌಡರು ಸುತ್ತಲಿನ...

Published On :

ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿ ಕೆಂಪಾಪುರದ ದೊಡ್ಡೇಗೌಡರು ಸುತ್ತಲಿನ ಹತ್ತು ಊರುಗಳಲ್ಲಿ ಜಮೀನ್ದಾರ್ ಎಂದೇ ಹೆಸರಾಗಿದ್ದರು. ಅವರ ಮಾತಿಗೆ ಊರಿನ ಎಲ್ಲರೂ ಬೆಲೆ ಕೊಡುತ್ತಿದ್ದರು. ಕಷ್ಟ ಹೇಳಿಕೊಂಡು ಯಾರೇ ಬಂದರೂ ಅವರಿಗೆ ತಮ್ಮ ಕೈಲಾದ ನೆರವು ಮಾಡುತ್ತಿದ್ದ ಗೌಡರು ಈ ಕಾರಣದಿಂದಲೂ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು. ಬೆಂಗಳೂರಿನಿಂದ 40 ಕಿಲೋಮೀಟರ್ ದೂರವಿದ್ದರೂ ನಗರೀಕರಣದ ಪ್ರಭಾವಕ್ಕೆ ಒಳಗಾಗಿ ಹಾರೋಹಳ್ಳಿ ಹೋಬಳಿಯ ಕೆಂಪಾಪುರದಲ್ಲೂ ಒಂದೆರಡು ಅಪಾರ್ಟ್‌ಮೆಂಟ್‌ಗಳು ಎದ್ದುನಿಂತಾಗ, ಈ ಗದ್ದಲದ ಮಧ್ಯೆ ನೆಮ್ಮದಿಯಿಂದ ಬದುಕುವುದು ಕಷ್ಟ ಎಂದು ಗೌಡರಿಗೆ ಅರ್ಥವಾಗಿ ಹೋಯಿತು. ಅವರು ತಡಮಾಡಲಿಲ್ಲ. ಹಳ್ಳಿಯಿಂದ ಎರಡು ಕಿಲೋಮೀಟರ್ ದೂರವಿದ್ದ ಫಾರಂ ಹೌಸ್‌ನಲ್ಲಿ ದೊಡ್ಡದೊಂದು ಮನೆ ಕಟ್ಟಿಸಿಕೊಂಡು ಅಲ್ಲಿಗೆ ಶಿಫ್ಟಾದರು.
ಯಜಮಾನ್ ದೊಡ್ಡೇಗೌಡರ ಚಿಕ್ಕಪ್ಪನ ಮಗನೇ ರಾಜೇಗೌಡ. ರಾಜೇಗೌಡನಿಗೆ ಐದು ವರ್ಷವಿದ್ದಾಗಲೇ ಅವನ ತಂದೆ ತೀರಿಹೋದರು. ಪರಿಣಾಮ, ಚಿಕ್ಕಪ್ಪನ ಮಗನನ್ನು ಸಾಕುವ ಹೊಣೆಯೂ ದೊಡ್ಡೇಗೌಡರ ಹೆಗಲಿಗೆ ಬಿತ್ತು. ಒಡಹುಟ್ಟಿದವರ ಮೇಲೆ ತೋರುವ ಪ್ರೀತಿಗಿಂತ ಹೆಚ್ಚು ಮಮತೆಯಿಂದ ರಾಜೇಗೌಡನನ್ನು ನೋಡಿಕೊಂಡ ದೊಡ್ಡೇಗೌಡರು, ಫಾರಂ ಹೌಸ್‌ನ ಮತ್ತೊಂದು ಬದಿಯಲ್ಲಿ ಅವನಿಗೂ ಮನೆ ಕಟ್ಟಿಸಿಕೊಟ್ಟರು.
ಈ ಇಬ್ಬರೂ ಸೋದರರಿಗೆ ತಲಾ 25 ಎಕರೆ ಜಮೀನಿತ್ತು. ಇಬ್ಬರ ಜಮೀನಿನ ಮಧ್ಯೆ ಹೊಳೆ ಹರಿಯುತ್ತಿತ್ತು, ಹಾಗಾಗಿ, ನಿರಾಯಾಸವಾಗಿ ವರ್ಷಕ್ಕೆ ಎರಡು ಬೆಳೆ ಬರುತ್ತಿತ್ತು. ಮನೆ, ಜಮೀನು ಹಾಗೂ ಕಷ್ಟದಲ್ಲಿದ್ದವರಿಗೆ ಏನಾದರೂ ಸಹಾಯ ಮಾಡುವುದರ ಹೊರತಾಗಿ ಬೇರ್ಯಾವುದೇ ವಿಷಯದ ಬಗ್ಗೆ ದೊಡ್ಡೇಗೌಡರು ಕನಸಲ್ಲೂ ಯೋಚಿಸುತ್ತಿರಲಿಲ್ಲ. ಅಣ್ಣ ಹಾಕಿದ ಗೆರೆಯನ್ನು, ರಾಜೇಗೌಡರು ಕೂಡ ದಾಟುತ್ತಿರಲಿಲ್ಲ.
ಹೀಗಿರುವಾಗಲೇ, ದೊಡ್ಡೇಗೌಡರ ಜನಪ್ರಿಯತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಒಂದೆರಡು ಪಕ್ಷಗಳ ಮುಖಂಡರು ಮುಂದಾದರು. 'ನೋಡೀ, ರಾಜಕೀಯ ನಮ್ಮಂಥವರಿಗಲ್ಲ, ನಾವೀಗ ನೆಮ್ಮದಿಯಿಂದ ಇದೀವಿ. ರಾಜಕೀಯದ ಹೆಸರು ಹೇಳಿ ನಮ್ಮ ನೆಮ್ಮದೀನ ಹಾಳು ಮಾಡಬೇಡಿ' ಎಂದು, ಮಾತುಕತೆಗೆ ಬಂದ ನಾಯಕರಿಗೆ ಗೌಡರು ಹೇಳಿಬಿಟ್ಟರು. ದೊಡ್ಡಗೌಡರಿಂದ ಮುಖಭಂಗಕ್ಕೆ ಈಡಾದ ನಾಯಕರು ಸುಮ್ಮನಾಗಲಿಲ್ಲ, ಅವರೆಲ್ಲ ಉಪಾಯವಾಗಿ, ರಾಜೇಗೌಡರನ್ನು ಭೇಟಿ ಮಾಡಿದರು. ತಾಲೂಕು ಪಂಚಾಯ್ತಿ ಚುನಾವಣೆಗೆ ಯುವಕರ ಅಗತ್ಯವಿದೆಯೆಂದೂ, ಒಮ್ಮೆ ಗೆದ್ದರೆ, ಮುಂದೆ ಎಂಎಲ್‌ಎ ಆಗಲೂ ಅವಕಾಶವಿದೆಯೆಂದೂ ಆಸೆ ಹುಟ್ಟಿಸಿದರು.
ಸುತ್ತಲಿನ ಹತ್ತು ಹಳ್ಳಿಗಳಲ್ಲಿ ತಮ್ಮ ಕುಟುಂಬಕ್ಕೆ ಸಿಗುವ ಗೌರವ ಎಂಥದೆಂದು ರಾಜೇಗೌಡರಿಗೂ ಗೊತ್ತಿತ್ತು. ಈ ಕಾರಣದಿಂದಲೇ ಅವರು ರಾಜಕೀಯಕ್ಕೆ ಇಳಿಯಲು ನಿರ್ಧರಿಸಿದರು. ಈ ಸಂಬಂಧವಾಗಿ ದೊಡ್ಡೇಗೌಡರ ಬಳಿ ಸಲಹೆ ಕೇಳಲು ಹೋದರು. 'ನೋಡೋ ಮಗಾ, ರಾಜಕೀಯದಲ್ಲಿ ಇರುವವರ ಬಗ್ಗೆ ಜನಕ್ಕೆ ಒಳ್ಳೇ ಅಭಿಪ್ರಾಯ ಇಲ್ಲ. ಅಂಥವರ ಸಹವಾಸ ಮಾಡಿ ಹೆಸರು ಕೆಡಿಸಿಕೊಳ್ಳುವ ಅಗತ್ಯ ನಮಗಿಲ್ಲ. ನನ್ಮಾತು ಕೇಳು, ಜಮೀನಿನಲ್ಲಿ ಕೆಲ್ಸ ಮಾಡಿಕೊಂಡು ಸುಮ್ನೆ ಇದ್ಬಿಡು' ಎಂದು ದೊಡ್ಡಗೌಡರು ನಿಷ್ಠುರವಾಗಿಯೇ ಹೇಳಿಬಿಟ್ಟರು. ಈ ವೇಳೆಗಾಗಲೇ ಅಧಿಕಾರದ ಕನಸು ಕಾಣುತ್ತಿದ್ದ ರಾಜೇಗೌಡರಿಗೆ ಅಣ್ಣನ ಮಾತುಗಳು ಹಿಡಿಸಲಿಲ್ಲ. ಅಣ್ಣನ ಮನೆಯಿಂದ ಮೌನವಾಗಿ ಹೊರಬಂದವರು, ಆನಂತರದಲ್ಲಿ ಚುನಾವಣೆಗೆ ನಿಂತೇಬಿಟ್ಟರು. ಬಂಧುಗಳ ಜೊತೆ ಮಾತಾಡುತ್ತಾ- 'ಅಣ್ಣನ ಹಂಗಿನಲ್ಲೇ ಇನ್ನೆಷ್ಟು ದಿನ ಬದುಕಲಿ? ಸಾಯೋತನಕ ಅವರು ಹೇಳಿದಂಗೇ ಕೇಳ್ಕೊಂಡು ಇರೋಕಾಗುತ್ತಾ? ಎಂದರು. ಈ ಮಾತುಗಳು ಮತ್ತಷ್ಟು ರೆಕ್ಕೆಪುಕ್ಕದೊಂದಿಗೆ ದೊಡ್ಡೇಗೌಡರ ಕಿವಿಗೆ ಬಿದ್ದವು. ನಂತರದ ಕೆಲವೇ ದಿನಗಳಲ್ಲಿ ಚುನಾವಣೆ ನಡೆದು, ರಾಜೇಗೌಡರು ಅದರಲ್ಲಿ ಗೆದ್ದೂಬಿಟ್ಟರು, ಮರುದಿನದಿಂದಲೇ ಅವರ ಮನೆ ಪಕ್ಷದ ಕಾರ್ಯಕರ್ತರಿಂದ, ನಾಯಕರಿಂದ ತುಂಬಿಹೋಯಿತು. ಹೊಸ ಜವಾಬ್ದಾರಿಗಳು ಹೆಗಲೇರಿದ ಕಾರಣದಿಂದ ಹಾಗೂ ಅಣ್ಣನ ಮೇಲೆ ಸ್ವಲ್ಪ ಅಸಮಾಧಾನವೂ ಇದ್ದುದರಿಂದ, ಕೂಗಳತೆಯ ದೂರದಲ್ಲಿದ್ದ ಅಣ್ಣನ ಮನೆಗೆ ಹೋಗುವುದನ್ನೂ ರಾಜೇಗೌಡರು ಕಡಿಮೆ ಮಾಡಿಬಿಟ್ಟರು.
ಸ್ವಂತ ಮಗನಿಗಿಂತ ಹೆಚ್ಚು ಮುದ್ದಿನಿಂದ ಬೆಳೆಸಿದ ತಮ್ಮನಿಂದ ಇಂಥ ವರ್ತನೆಯನ್ನು ದೊಡ್ಡೇಗೌಡರು ನಿರೀಕ್ಷಿಸಿರಲಿಲ್ಲ, ಚುನಾವಣೆಯಲ್ಲಿ ಗೆದ್ದ ನಂತರ ತಮ್ಮನ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದು ಗೌಡರ ಗಮನಕ್ಕೆ ಬಂದಿತ್ತು. ಆತ ಜಮೀನನ್ನು ಅಭಿವೃದ್ಧಿಪಡಿಸಿಕೊಂಡಿದ್ದೂ ಗೊತ್ತಾಯಿತು. ಹೀಗೇ ಮುಂದುವರಿದರೆ, ಕಾಲಾಂತರದಲ್ಲಿ ತಮ್ಮನೇ ಎದುರಾಳಿಯಾಗುತ್ತಾನೆಂದೂ ಗೌಡರ ಒಳಮನಸ್ಸು ಪಿಸುಗುಟ್ಟಿತು. ಅಂಥದೊಂದು ಸಂದರ್ಭವನ್ನು ನೆನಪಿಸಿಕೊಂಡು ದೊಡ್ಡೇಗೌಡರು ತೀವ್ರ ಅಸಮಾಧಾನದಿಂದ ನಿಂತಲ್ಲೇ ಕಟಕಟನೆ ಹಲ್ಲು ಕಡಿದರು. ನಂತರ, ತಮ್ಮನ್ನೇ ತಾವು ಸಮಾಧಾನ ಮಾಡಿಕೊಂಡು, ಎಲ್ಲಾ ಭಗವಂತನ ಇಚ್ಛೆ. ಏನೇನಾಗತ್ತೋ ಆಗಿಬಿಡಲಿ ಎಂದುಕೊಂಡು ಸುಮ್ಮನಾದರು.
ಹೀಗಿರುವಾಗಲೇ ಅದೊಂದು ಮುಂಜಾನೆ, ದೊಡ್ಡೇಗೌಡರ ಮನೆಯ ಮುಂದೆ ಗುಂಪೊಂದು ಪ್ರತ್ಯಕ್ಷವಾಯಿತು. 'ನೀವೆಲ್ಲಾ ಯಾರು? ಯಾಕೆ ಬಂದಿದ್ದೀರಿ? ಯಾರನ್ನು ನೋಡಬೇಕಿತ್ತು?' ಎಂದು ಗೌಡರು ಕೇಳಿದರು. ಆ ಗುಂಪಿನ ಮುಖಂಡನಂತಿದ್ದ ವ್ಯಕ್ತಿಯೊಬ್ಬ ಮುಂದೆ ಬಂದು- 'ಯಜಮಾನ್ರೆ, ನಾನು ಮನೆ ಕಟ್ಟಿಸೋ ಮೇಸ್ತ್ರಿ, ಇವರೆಲ್ಲಾ ಕೆಲಸಗಾರರು. ನಾವೆಲ್ಲಾ ರಾಯಚೂರು ಕಡೆಯ ಜನ. ಬೆಂಗಳೂರಲ್ಲಿ ಕೆಲಸ ಸಿಗಬಹುದು ಅಂತ ಬಂದ್ವಿ. ಅಲ್ಲಿ ನೋಡಿದ್ರೆ ಎಲ್ಲಾ ಏರಿಯಾದಲ್ಲೂ ಎಲೆಕ್ಷನ್ ಬ್ಯುಸಿ. ಎಲ್ಲೂ ಕೆಲಸ ಸಿಗಲಿಲ್ಲ. ನಾವು ಒಟ್ಟು 30 ಜನ ಇದೀವಿ. ಇಷ್ಟು ಜನರ ಹೊಟ್ಟೆಪಾಡು ಹೇಗಪ್ಪಾ ಅನ್ನಿಸಿ ಚಿಂತೆಯಾಗಿತ್ತು. ಅಂಥ ಸಂದರ್ಭದಲ್ಲೇ ಯಾರೋ ಪುಣ್ಯಾತ್ಮರು ನಿಮ್ಮ ಅಡ್ರೆಸ್ ಕೊಟ್ರು. ಯಾವುದೇ ಕೆಲ್ಸ ಆದ್ರೂ ಸರಿ, ನಿಯತ್ತಿನಿಂದ ಮಾಡ್ತೀವಿ. ಹದಿನೈದು ದಿನಗಳ ಮಟ್ಟಿಗಾದ್ರೂ ನಮಗೆ ಕೆಲಸ ಕೊಡಿ. ಆಶ್ರಯ ಕೊಡಿ' ಎಂದು ಬೇಡಿಕೊಂಡ.
ಮೇಸ್ತ್ರಿಯ ಮಾತುಗಳಲ್ಲಿ ಮೋಸ, ಅಥವಾ ನಾಟಕೀಯತೆಯ ಕುರುಹುಗಳಿರಲಿಲ್ಲ. ಅದನ್ನು ಅರ್ಥ ಮಾಡಿಕೊಂಡ ಗೌಡರು- 'ಆಗಲಿ, ನಿಮಗೆ ಕೆಲಸ ಕೊಡೋಣ' ಎಂದರು. ಮರುದಿನ ಮೇಸ್ತ್ರಿಯನ್ನು ಜಮೀನಿನ ಬಳಿ ಕರೆದೊಯ್ದು ಹೇಳಿದರು: ಎದುರಿಗೆ ಕಾಣಿಸ್ತಾ ಇದೆಯಲ್ಲ, ಅದು ನನ್ನ ತಮ್ಮನ ಜಮೀನು. ಅವನನ್ನು ಸ್ವಂತ ಮಗನಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿದೆ. ಆದರೆ ಅವನೇ ಈಗ ನನಗೆ ಎದುರು ನಿಂತಿದ್ದಾನೆ. ನನ್ನ ಮಾತು ಮೀರಿ ನಡ್ಕೊಳ್ತಾ ಇದ್ದಾನೆ. ರಾಜಕೀಯಕ್ಕೆ ಸೇರಿದ್ದಾನೆ. ಈ ಹಿಂದೆ ಯಾವುದೇ ಕೆಲ್ಸ ಮಾಡುವ ಮೊದಲು ಮನೆಗೆ ಓಡಿಬಂದು - ಅಣ್ಣಾ ನಾನು ಹೀಗೆ ಮಾಡಬೇಕು ಅಂತ ಇದೀನಿ; ಮುಂದುವರಿಯಬಹುದಾ? ಇದಕ್ಕೆ ನಿನ್ನ ಒಪ್ಪಿಗೆ ಇದೆ ತಾನೆ ಎಂದು ಅಭಿಪ್ರಾಯ ಕೇಳುತ್ತಿದ್ದ. ಅಂಥವನು ಈಗ ಮನೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಅವನಿಗೆ ಬೇಡ ಅನ್ನಿಸಿದ ಮೇಲೆ ಈ ಸಂಬಂಧ ನನಗೂ ಬೇಕಿಲ್ಲ. ಈಗ ನೀನೊಂದು ಕೆಲ್ಸ ಮಾಡು. ಈ ಕಡೆಯಲ್ಲಿ ನನಗೆ ಸೇರಿದ ಜಮೀನಿದೆ. ಆ ಕಡೆಯಲ್ಲಿ ತಮ್ಮನ ಜಮೀನಿದೆ. ಮಧ್ಯೆ ಹೊಳೆ ಹರಿತಾ ಇದೆ. ನಾಳೆಯಿಂದ ತಮ್ಮನ ಮುಖವನ್ನಾಗಲಿ, ಅವನ ಮನೆ- ಜಮೀನನ್ನಾಗಲಿ ನೋಡದೆ ನಾನು ಬದುಕುವಂತಾಗಬೇಕು. ನನ್ನ ಜಮೀನಿದೆಯಲ್ಲ, ಅದರ ಉದ್ದಕ್ಕೂ ಆರು ಅಡಿ ಎತ್ತರದ ಕಾಂಪೌಂಡ್ ಕಟ್ಟಿಬಿಡು. ನಾಳೆಯೇ ಸಿಟಿಗೆ ಹೋಗಿ ಈ ಕೆಲಸಕ್ಕೆ ಎಷ್ಟು ಬೇಕೋ ಅಷ್ಟು ಸಿಮೆಂಟ್ ತಗೊಂಡು ಬಾ. ನದೀ ತೀರದಲ್ಲಿ ನೀರು ಹಾಗೂ ಮರಳಿಗೆ ತೊಂದರೆಯಿಲ್ಲ, ನಿಮ್ಮ ಪಾಡಿಗೆ ನೀವು ಕೆಲ್ಸ ಮುಂದುವರಿಸಿ. ಯಾರಾದ್ರೂ ಬಂದು ಕೇಳಿದ್ರೆ -'ದೊಡ್ಡೇಗೌಡರು ಕೆಲಸ ಹೇಳಿದ್ದಾರೆ. ಅವರು ಹೇಳಿರುವಂತೆಯೇ ನಾವು ಕೆಲಸ ಮಾಡ್ತಾ ಇದ್ದೇವೆ' ಅಂತ ಹೇಳು. ನೀವು ಕೆಲಸ ಶುರುಮಾಡಿದ ದಿನವೇ ನಾನು ಹದಿನೈದು ದಿನದ ಮಟ್ಟಿಗೆ ನೆಂಟರ ಊರಿಗೆ ಹೋಗಿಬಿಡ್ತೀನಿ. ನಾನು ಇಲ್ಲೇ ಇದ್ರೆ ನೋಡಿದ ಜನ ತಲೆಗೊಂದು ಮಾತಾಡ್ತಾರೆ. ಅಂಥ ಸಂದರ್ಭ ಬರೋದು ಬೇಡ' ಎಂದರು.
ಗೌಡರ ಮನಸ್ಸಿನಲ್ಲಿ ಏನಿದೆ ಎಂಬುದು ಮೇಸ್ತ್ರಿಗೆ ತಕ್ಷಣ ಅರ್ಥವಾಯಿತು. ತಪ್ಪು ತಿಳಿವಳಿಕೆಯ ಕಾರಣದಿಂದಾಗಿ ಅಣ್ಣ-ತಮ್ಮಂದಿರ ನಡುವೆ ದ್ವೇಷದ ಗೋಡೆ ಎದ್ದು ನಿಂತಿದೆ. ಈ ಸಂದರ್ಭದಲ್ಲಿ ಸೋಲಲು ಬಹುಶಃ ಇಬ್ಬರೂ ಸಿದ್ಧರಿಲ್ಲ ಎಂಬುದನ್ನು ಆತ ಬಹುಬೇಗ ಅರ್ಥ ಮಾಡಿಕೊಂಡ. ನಂತರ ದೊಡ್ಡೇಗೌಡರ ಮುಂದೆ ವಿಧೇಯನಾಗಿ ನಿಂತು ಹೇಳಿದ: 'ಯಜಮಾನರೆ, ನೀವು ಆರಾಮಾಗಿ ಹೋಗಿಬನ್ನಿ, ನೀವು ವಾಪಸ್ ಬರುವುದರೊಳಗೆ ಎಲ್ಲಾ ಕೆಲಸ ಮುಗಿಸಿರ್ತೇವೆ. ನಾವು ಉತ್ತರ ಕರ್ನಾಟಕ ಸೀಮೆಯ ಜನ. ಮಾತಿಗೆ ತಪ್ಪುವವರಲ್ಲ...' ಮೇಸ್ತ್ರಿಯ ಮಾತುಗಳಿಂದ ಗೌಡರು ಖುಷಿಯಾದರು. ತಮ್ಮ ಜಮೀನಿನ ಗಡಿ ಎಲ್ಲಿಂದ ಆರಂಭವಾಗುತ್ತೆ, ಎಲ್ಲಿ ಮುಕ್ತಾಯವಾಗುತ್ತೆ, ಎಲ್ಲಿಯವರೆಗೆ ಕಾಂಪೌಂಡ್ ನಿರ್ಮಿಸಬೇಕು ಎಂಬುದನ್ನು ಎರಡೆರಡು ಬಾರಿ ವಿವರವಾಗಿ ಹೇಳಿದರು. ನಂತರ, ಮೇಸ್ತ್ರಿಗೆ ಅಡ್ವಾನ್ಸ್ ಹಣ ನೀಡಿ ಬಂಧುಗಳ ಊರಿಗೆ ಹೋಗಿಬಿಟ್ಟರು.
ಹಾಂ ಹೂಂ ಎನ್ನುವುದರೊಳಗೆ 15 ದಿನಗಳು ಕಳೆದುಹೋಗಿದ್ದವು. ಬಹುಶಃ ಈ ವೇಳೆಗೆ ಕೆಲಸ ಮುಗಿದಿರಬಹುದು. ಕೆಲಸ ನಡೆಯುವ ಸಂದರ್ಭದಲ್ಲಿ ತಮ್ಮನ ಕಡೆಯ ಜನ ಮೇಸ್ತ್ರಿಯನ್ನು ಬೆದರಿಸಿದ್ದಾರೋ ಹೇಗೆ? ಅಂಥದೊಂದು 'ಸಾಹಸ' ಮಾಡಿದ್ದರೆ, ಮೊದಲು ತಮ್ಮನಿಗೇ ನಾಲ್ಕೇಟು ಹಾಕಬೇಕು. ಆನಂತರ ನಾನೇ ಮುಂದಾಗಿ ಪೊಲೀಸರಿಗೆ ದೂರು ಕೊಡಬೇಕು. ಈ ವಿಷಯವಾಗಿ ಒಂದಿಷ್ಟು ದುಡ್ಡು ಖರ್ಚಾಗಬಹುದು. ಆಗಲಿ. ಆದರೆ, ತಮ್ಮನಿಗೆ ಮಾತ್ರ ಸರಿಯಾಗಿ ಬುದ್ಧಿ ಕಲಿಸಬೇಕು... ಹೀಗೆಲ್ಲ ಲೆಕ್ಕಾಚಾರ ಮಾಡಿಕೊಂಡೇ ದೊಡ್ಡೇಗೌಡರು ಮನೆಗೆ ಬಂದರು, ಯಜಮಾನರು ಬಂದಿದ್ದಾರೆ ಎಂದು ತಿಳಿದಾಕ್ಷಣ ಮೇಸ್ತ್ರಿ ಓಡೋಡಿ ಬಂದ. ಗೌಡರು ಅವಸರದಿಂದ ಕೇಳಿದರು: 'ಏನಪ್ಪಾ, ಎಲ್ಲಾ ಕೆಲ್ಸ ಮುಗೀತಾ? ಏನೂ ತೊಂದರೆ ಆಗಿಲ್ಲ ತಾನೆ?' 'ಯಾವ ತೊಂದರೇನೂ ಆಗ್ಲಿಲ್ಲ ಸ್ವಾಮಿ. ಕೆಲ್ಸ ಪೂರ್ತಿಯಾಗಿದೆ, ನೀವು ಬಂದ್ರೆ ತೋರಿಸ್ತೀನಿ' ಎಂದ ಮೇಸ್ತ್ರಿ. ದೊಡ್ಡೇಗೌಡರಿಗೆ ಕುತೂಹಲವಾಯಿತು. 'ಹೇಗೆ ಮಾಡಿದೀರ ಅಂತ ನೋಡಬೇಕು, ಹೋಗೋಣ ನಡಿ' ಎಂದು ಎದ್ದೇಬಿಟ್ಟರು.
ದಾಪುಗಾಲು ಹಾಕುತ್ತಾ ಜಮೀನಿನ ಬಳಿ ಬಂದ ಗೌಡರು ಎದುರಿನ ದೃಶ್ಯ ಕಂಡು ಮಾತೇ ಹೊರಡದೆ ನಿಂತುಬಿಟ್ಟರು. ಕಾರಣ, ಅವರ ಜಮೀನಿನ ಉದ್ದಕ್ಕೂ ಕಾಂಪೌಂಡ್ ನಿರ್ಮಾಣವಾಗಿರಲಿಲ್ಲ, ಬದಲಿಗೆ, ಅಣ್ಣ-ತಮ್ಮಂದಿರ ಜಮೀನಿನ ಮಧ್ಯೆ ಇದ್ದ ಹೊಳೆಗೆ ಅಡ್ಡಲಾಗಿ ಒಂದು ಸೇತುವೆ ಕಟ್ಟಲಾಗಿತ್ತು. ಹೊಳೆಯ ನೀರು ಎರಡೂ ಕಡೆಯ ಜಮೀನಿಗೆ ಸಮನಾಗಿ ಹರಿಯುವಂತೆ ಪುಟ್ಟ ಪುಟ್ಟ ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಅಷ್ಟೇ ಅಲ್ಲ, ಎರಡೂ ಕಡೆಯ ಜಮೀನುಗಳಲ್ಲಿ ಬೋರ್‌ವೆಲ್‌ನ ವ್ಯವಸ್ಥೆ ಕೂಡ ಆಗಿತ್ತು. 'ಏನಪ್ಪಾ ಇದೂ? ಎಂದು ದೊಡ್ಡೇಗೌಡರು ಮೇಸ್ತ್ರಿಯನ್ನು ಪ್ರಶ್ನಿಸಲು ಮುಂದಾದರು. ಅಷ್ಟರಲ್ಲಿ, ಆ ಕಡೆಯಿಂದ ರಾಜೇಗೌಡರು ಓಡೋಡುತ್ತಾ ಬರುವುದು ಕಾಣಿಸಿತು. ಬಹಳ ದಿನಗಳ ನಂತರ ತಮ್ಮನನ್ನು ನೋಡಿದರಲ್ಲ; ಅದೇ ಕಾರಣಕ್ಕೆ ಅವನ ಮೇಲಿದ್ದ ಅಸಮಾಧಾನವೆಲ್ಲ ಯಜಮಾನ್ ದೊಡ್ಡೇಗೌಡರಿಂದ ಕ್ಷಣಕಾಲ ಮಾಯವಾಯಿತು. ಈ ವೇಳೆಗೆ ಓಡಿಬಂದಿದ್ದ ರಾಜೇಗೌಡರು, ಅಣ್ಣನನ್ನು ಬಾಚಿ ತಬ್ಬಿಕೊಂಡು, ಬಿಕ್ಕಳಿಸುತ್ತಲೇ ಹೇಳಿದರು: 'ಅಣ್ಣಾ, ನಿನ್ನ ಬುದ್ಧಿಮಾತು ಕೇಳದೆ ನಾನು ಅಹಂಕಾರದಿಂದ ವರ್ತಿಸಿದೆ. ನಿನ್ನ ಮನೆಗೆ ಬರುವುದನ್ನೇ ನಿಲ್ಲಿಸಿದೆ. ಜಮೀನಿನ ಕೆಲಸ ಶುರುವಾದಾಗ, ನನ್ನ ಪಾಲಿನದನ್ನು ಮಾತ್ರ ನೋಡಿಕೊಂಡೆ. ಅವರಿವರ ಬಳಿ ನಿನ್ನ ಬಗ್ಗೆ ಲಘುವಾಗಿ ಮಾತಾಡಿದೆ. ಆದರೆ, ನಿನ್ನದು ತಾಯಿಮನಸ್ಸು. ನನ್ನ ಸಣ್ಣತನವನ್ನೆಲ್ಲ ಕ್ಷಮಿಸಿ, ಎರಡೂ ಜಮೀನುಗಳ ಮಧ್ಯೆ ಸೇತುವೆ ಕಟ್ಟಿಸಿದೀಯ. ಇದರಿಂದ ನಮಗೆ ಮಾತ್ರವಲ್ಲ, ಈ ಪ್ರದೇಶದಲ್ಲಿ ತಿರುಗಾಡುವ ಎಲ್ಲರಿಗೂ ಅನುಕೂಲ ಆಗುತ್ತೆ. ಎರಡೂ ಜಮೀನುಗಳಲ್ಲಿ ಪುಟ್ಟ ಪುಟ್ಟ ಕಾಲುವೆ, ಬೋರ್‌ವೆಲ್ ಹಾಕ್ಸಿದೀಯ. ಇದನ್ನೆಲ್ಲ ನೋಡ್ತಿದ್ದಂಗೆ ನಿನ್ನ ಮುಂದೆ ನಾನು ಚಿಲ್ರೆ ಮನುಷ್ಯ ಅನ್ನಿಸಿಬಿಡ್ತು ಅಣ್ಣಾ. 'ಹೀಗೆಲ್ಲ ಮಾಡಿ ಅಂತ ದೊಡ್ಡ ಯಜಮಾನರು ಹೇಳಿ ಹೋಗಿದ್ದಾರೆ ಎಂದು ಈ ಮೇಸ್ತ್ರಿ ಹೇಳಿದ್ರು. ನಿನಗೆ ಇರುವಂಥ ಕ್ಷಮಾಗುಣ, ನಿನಗೆ ಇರುವಂಥ ಒಳ್ಳೆಯ ಮನಸ್ಸು ನನಗೆ ಯಾಕಣ್ಣ ಬರಲಿಲ್ಲ? ನಿನ್ನಿಂದ ದೂರವಿದ್ದು ಇಷ್ಟು ದಿನದಲ್ಲಿ ಒಂದಲ್ಲ ಎರಡಲ್ಲ, ನೂರಾರು ತಪ್ಪು ಮಾಡಿದೀನಿ ಅದನ್ನೆಲ್ಲ ಕ್ಷಮಿಸ್ತೀಯ ಅಲ್ವಾ ಅಣ್ಣಾ...' ಹೀಗೆಲ್ಲ ಮಾತಾಡುತ್ತ, ರಾಜೇಗೌಡರು ಬಿಕ್ಕಳಿಸುತ್ತಿದ್ದರೆ, ತಮ್ಮಿಬ್ಬರ ಮಧ್ಯೆ ದ್ವೇಷದ ಕಾಂಪೌಂಡ್‌ನ ಬದಲು ಬಾಂಧವ್ಯದ ಸೇತುವೆ ನಿರ್ಮಿಸಿದ ಮೇಸ್ತ್ರಿಯನ್ನೇ ದೊಡ್ಡೇಗೌಡರು ಮೆಚ್ಚುಗೆಯಿಂದ ನೋಡಿದರು. ಅವರ ಕಂಗಳಲ್ಲಿ ಪಶ್ಚಾತ್ತಾಪದ ನೀರಿತ್ತು.
ಮರುದಿನ, ಎಲ್ಲ ನೌಕರರೊಂದಿಗೆ ಮೇಸ್ತ್ರಿ ಹೊರತು ನಿಂತ. 'ಎಲ್ಲಿ ಹೋಗ್ತೀಯಪ್ಪ? ನಿಮಗೆ ಮತ್ತಷ್ಟು ಕೆಲಸ ಕೊಡ್ತೇನೆ. ಇಲ್ಲೇ ಇದ್ದುಬಿಡಿ ಎಂದರು ದೊಡ್ಡೇಗೌಡ. 'ಸ್ವಾಮೀ, ನಾವು ಇನ್ನೂ ಹತ್ತಿಪ್ಪತ್ತು ಕಡೆಗಳಲ್ಲಿ ಇಂಥಾ ಸೇತುವೆಗಳನ್ನು ಕಟ್ಟಬೇಕಿದೆ. ಒಳ್ಳೇದಾಗ್ಲಿ ಅಂತ ಹಾರೈಸಿ. ನಾವು ಹೋಗಿಬರ್ತೇವೆ' ಎನ್ನುತ್ತಾ ತನ್ನ ನೌಕರರ ಪರಿವಾರದೊಂದಿಗೆ ಮೇಸ್ತ್ರಿ ಹೊರಟುಹೋದ.
-----
ಸಣ್ಣದೊಂದು ತಪ್ಪು ಕಲ್ಪನೆಯಿಂದ ಮನಸ್ಸು ಕೆಡಿಸಿಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಿರುವ ದೊಡ್ಡೇಗೌಡ - ರಾಜೇಗೌಡರಂಥವರು ನಮ್ಮ ಮಧ್ಯೆ ಸಾವಿರಾರು ಮಂದಿ ಇದ್ದಾರೆ. ಆದರೆ, ಸೋದರರ ಮಧ್ಯೆ ದ್ವೇಷದ ಅಡ್ಡಗೋಡೆಯ ಬದಲು ಬಾಂಧವ್ಯದ ಸೇತುವೆ ನಿರ್ಮಿಸುವ ಮೇಸ್ತ್ರಿಗಳು ಎಷ್ಟು ಹುಡುಕಿದರೂ ಸಿಗುವುದಿಲ್ಲ, ಇದೇ ಸತ್ಯ, ಇದೇ ವಾಸ್ತವ. ಹೌದಲ್ಲವೆ?

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.