ಯಾರು ಯಾರನ್ನು ನೋಡಿ ನಗುತ್ತಿದ್ದಾರೆ ಮಿಸ್ಟರ್ ಸಿಂಗ್?
The whole world is laughing at us!...ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ...
ಜಗತ್ತು ನಿಜವಾಗಲೂ ನಗುತ್ತಿರುವುದು ಭಾರತವನ್ನು ನೋಡಿಯೋ ಇಲ್ಲ ನಿಮ್ಮ ಸರ್ಕಾರದ ಆಡಳಿತದ ವೈಖರಿಗೊ?
The whole world is laughing at us!
ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ ಕಾನೂನು ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟಿಗೆ ಉತ್ತರಿಸುತ್ತ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ ಮಾತುಗಳಿವು. ಸಾಮಾನ್ಯ ಪರಿಸ್ಥಿತಿಗಳಲ್ಲಾಗಿದ್ದರೆ ಈ ಮಾತುಗಳಿಗೆ ಅರ್ಥ ಇರುತ್ತಿತ್ತು. ಆದರೆ ಯುಪಿಎ ಸರ್ಕಾರದ ಕಳೆದ ನಾಲ್ಕು ವರ್ಷಗಳ ನಿರ್ವೀರ್ಯತೆ, ನಿರ್ಲಿಪ್ತತೆ ಹಿನ್ನೆಲೆಯಲ್ಲಿ ಪ್ರಧಾನಿಯ ಈ ಮಾತುಗಳೇ ಹಾಸ್ಯಾಸ್ಪದ ಎನಿಸುತ್ತದೆ. ಬಜೆಟ್ ಅಧಿವೇಶನದ ಎರಡನೇ ಕಂತು ಒಂದು ದಿನವೂ ಕಲಾಪ ಕಂಡಿಲ್ಲ. ಪ್ರತಿಪಕ್ಷಗಳಂತೂ ಹಗರಣಗಳಿಂದ ಹೈರಾಣಾಗಿರುವ ಸರ್ಕಾರವನ್ನು ಸುಧಾರಿಸಿಕೊಳ್ಳಲು ಬಿಡುತ್ತಲೇ ಇಲ್ಲ. ಆದರೆ ಇದು ಪ್ರತಿಪಕ್ಷಗಳ ಹಕ್ಕು. Let us debate all the issues in parliament (ಎಲ್ಲ ವಿಷಯಗಳ ಬಗ್ಗೆಯೂ ಸಂಸತ್ತಿನಲ್ಲಿ ಚರ್ಚೆ ಮಾಡೋಣ) ಎಂದು ಪ್ರಧಾನಿ ಹೇಳಿದರೂ ಅವರ ಮಾತುಗಳನ್ನು ನಂಬಲು ಪ್ರತಿಪಕ್ಷಗಳು ಬಿಡಿ, ಸರ್ಕಾರದ ಬೆಂಬಲಿತ ಪಕ್ಷಗಳೇ ಸಿದ್ಧವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ, ಅದರ ಉದ್ದೇಶಗಳ ಕುರಿತಾದ ಅಪನಂಬಿಕೆ ಸಹನೆಯ ಮಿತಿ ಮೀರಿದೆ. ಎರಡು ವರ್ಷಗಳ ಹಿಂದೆ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಚಳಿಗಾಲದ ಅಧಿವೇಶನ ಒಂದು ದಿನವೂ ನಡೆಯದೇ ಬರ್ಖಾಸ್ತಾಗಿತ್ತು. ನಂತರ ಪ್ರತಿಪಕ್ಷಗಳ ಪಟ್ಟಿಗೆ ಒಪ್ಪಿದ ಸರ್ಕಾರ ಜಂಟಿ ಸಂಸದೀಯ ಸಮಿತಿ ರಚನೆಗೆ ಅಸ್ತು ಹೇಳಿ ತಿಕ್ಕಾಟದ ಪರಿಸ್ಥಿತಿ ತಿಳಿಯಾಗಿತ್ತು. ಈಗ ಅದೇ ಜೆಪಿಸಿ ಹಗರಣದ ಮುಖ್ಯ ರೂವಾರಿ ಅಂದಿನ ಟೆಲಿಕಾಂ ಸಚಿವ ಎ. ರಾಜಾ ಅವರ ವಿವರಣೆಯನ್ನೇ ಪಡೆಯದೆ ಹಗರಣದಲ್ಲಿ ಸರ್ಕಾರದ ಪಾತ್ರವೇ ಇಲ್ಲ ಎಂದು ಹೇಳುವ ವರದಿ ಸಿದ್ಧಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ "ಸಂಸತ್ತಿನಲ್ಲಿ ಕುಳಿತು ಚರ್ಚೆ ಮಾಡೋಣ" ಎಂಬ ಪ್ರಧಾನಿಯ ಮಾತಿಗೆ ಕಿಮ್ಮತ್ತಾದರೂ ಎಲ್ಲಿದೆ ಹೇಳಿ? ಹಗರಣಗಳನ್ನು ಸೃಷ್ಟಿಸಿ ಚರ್ಚೆಯ ಸೋಗಿನಲ್ಲಿ ಸತ್ಯ ಬಯಲು ಮಾಡುವ ಬದಲು ಅದನ್ನು ಮುಚ್ಚಿಹಾಕಲು ಮಾರ್ಗೋಪಾಯಗಳನ್ನು ಹುಡುಕುವುದೇ ಸರ್ಕಾರದ ಕೆಲಸವಾಗಿರುವಾಗ ಅದನ್ನು ನಂಬುವುದಾದರೂ ಹೇಗೆ?
ಇಷ್ಟಕ್ಕೂ ಪ್ರತಿಪಕ್ಷಗಳು ಕೇಳುತ್ತಿರುವುದರಲ್ಲಿ ತಪ್ಪಾದರೂ ಏನಿದೆ?. ಕೇಂದ್ರೀಯ ತನಿಖಾದಳ(ಸಿಬಿಐ) ಸರ್ಕಾರದ ಅಡಿಯಾಳಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದನ್ನು ಆ ಮಟ್ಟಕ್ಕೆ ಇಳಿಸಿದ ಕೀರ್ತಿ ಇದೇ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಅವರಿಗೆ ಸಲ್ಲಬೇಕು. ಸಿಬಿಐ ಗುಮ್ಮನನ್ನು ಮುಂದಿಟ್ಟುಕೊಂಡು ಇದೇ ಯುಪಿಎ ಯಾವ ರೀತಿ ಕೃತಕ ಬೆಂಬಲ ಗಿಟ್ಟಿಸಿಕೊಂಡಿದೆ, ವಿರೋಧವನ್ನು ಬಾಯಿಮುಚ್ಚಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಇದಾವುದಕ್ಕೂ ಪುರಾವೆ ಇರಲಿಲ್ಲ. ಆದರೆ ಈಗ ಕಾನೂನು ಸಚಿವ ಅಶ್ವನಿ ಕುಮಾರ್ ಸಿಬಿಐ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿ ನೇರವಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ಅದೂ ಕಲ್ಲಿದ್ದಲು ಹರಾಜಿನ ಅವ್ಯವಹಾರದ ತನಿಖೆಯ ವಿಷಯದಲ್ಲಿ ಈ ಹಸ್ತಕ್ಷೇಪ ಆಗಿದೆ. ಈ ಹಗರಣದ ಮೂಲಬಿಂದು ಸ್ವತಃ ಪ್ರಧಾನಿ ಸಿಂಗ್ ಅವರೇ ಆಗಿದ್ದಾರೆ. ಅವರು ಕಲ್ಲಿದ್ದಲು ಸಚಿವರಾಗಿದ್ದಾಗಲೇ 144 ಗಣಿಗಳ ಹರಾಜಾಗಿದ್ದು ಇದರಲ್ಲಿ ನೇರವಾಗಿ ಅವರ ಪಾತ್ರ ಇದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಷ್ಟೆ. ಆ ತನಿಖೆಯ ಹೊಣೆ ಸಿಬಿಐಗಿದೆ. ಅದೂ ಸುಪ್ರೀಂಕೋರ್ಟ್ ಆದೇಶದ ಮೇರೆಗೆ. ಈ ತನಿಖೆಯ ಪ್ರತಿ ಹಂತದಲ್ಲೂ ತನಗೆ ವಿವರಣೆ ನೀಡಬೇಕು ಎಂದು ಕೋರ್ಟು ಸಿಬಿಐಗೆ ಸೂಚಿಸಿತ್ತು. ಸಿಬಿಐ ಅಂತಹ ವರದಿ ತಯಾರಿಕೆ ಹಂತದಲ್ಲಿದ್ದಾಗಲೇ ಕಾನೂನು ಸಚಿವರು ಸಿಬಿಐ ನಿರ್ದೇಶಕರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ವರದಿಗೆ ತಿದ್ದುಪಡಿ ಮಾಡಿರುವುದು ಈಗ ಸಾಬೀತಾಗಿದೆ. ಎಲ್ಲವೂ Black and white ನಲ್ಲಿದೆ. ಇಂತಹ ಸಂದರ್ಭದಲ್ಲಿ ಸಚಿವರ ರಾಜಿನಾಮೆ ಕೇಳದೆ ಅವರನ್ನು ರಕ್ಷಿಸಲು ಪ್ರತಿಪಕ್ಷಗಳು ಪ್ರಯತ್ನಿಸಬೇಕೇ? ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡಲು ಏನಿದೆ. ಕಳ್ಳ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡ ಮೇಲೂ ಸಾಕ್ಷಿಪುರಾಣ ಕೇಳಬೇಕೆ? 'Let us not make a mockery of the system' ಎಂದು ನೀವು ಹೇಳಿದ್ದೀರಿ. ಆದರೆ ಸಿಬಿಐನಂತಹ ತನಿಖಾ ವ್ಯವಸ್ಥೆಯ mockery (ಮಾಕರಿ) ಮತ್ತು ರಾಜಕೀಯ ಬಿಕರಿ ಆರಂಭಿಸಿದ್ದೇ ನಿಮ್ಮ ಕಾಂಗ್ರೆಸ್ ಪಕ್ಷ ಅಲ್ಲವೇ? ಜಗತ್ತು ನಮ್ಮನ್ನು ನೋಡಿ ನಗುತ್ತಿದೆ ಎಂದು ನೀವು ಹೇಳಿದ್ದೀರಿ. ಆದರೆ ಜಗತ್ತು ನಿಜವಾಗಲೂ ನಗುತ್ತಿರುವುದು ಭಾರತವನ್ನು ನೋಡಿಯೋ ಇಲ್ಲ ನಿಮ್ಮ ಸರ್ಕಾರದ ಆಡಳಿತದ ವೈಖರಿಗೊ?
ಕಳೆದ ಐದು ವರ್ಷಗಳಲ್ಲಿ ಭಾರತ ಹಲವು ಬಾರಿ ನಗೆಪಾಟಲಿಗೆ ಗುರಿಯಾಗಿದೆ. ಶಾಂತಿಯ ಹೊಸಶಕೆ ತೆರೆಯುವ ಉತ್ಸಾಹ, ಉಮೇದಿನಲ್ಲಿ ಈಜಿಪ್ತ್‌ನ ಶರ್ಮ್ ಅವಶೇಖ್‌ನಲ್ಲಿ ಪಾಕಿಸ್ತಾನದ ಜತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯುವ ಪ್ರಸ್ತಾವಕ್ಕೆ ಒಪ್ಪಿದಾಗಲೇ ಭಾರತ ಹಾಸ್ಯದ ವಸ್ತುವಾಯಿತು. ನೀವೇ ಹೇಳಿ ಸಿಂಗ್, ಈ ಒಪ್ಪಂದದ ನಂತರ ಅದೆಷ್ಟು ಬಾರಿ ಪಾಕಿಸ್ತಾನವು ಭಾರತವನ್ನು ಮುಜುಗರಕ್ಕೆ ಈಡುಮಾಡಿಲ್ಲ. ಅದೆಷ್ಟು ವೇದಿಕೆಗಳಲ್ಲಿ ಭಾರತವನ್ನು ಹಾಸ್ಯಾಸ್ಪದವಾಗಿ ಕಂಡಿಲ್ಲ. ಪ್ರತಿ ಬಾರಿ ಶಾಂತಿಯ ಹೊಸ ಉಪಕ್ರಮಗಳಿಗೆ ಮುಂದಾದಾಗಲೂ ಪಾಕಿಸ್ತಾನ ಭಾರತವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಇಲ್ಲದಿದ್ದರೆ ಭಾರತದ ವೀರ ಯೋಧರನ್ನು ಗಡಿಯಲ್ಲಿ ತುಂಡರಿಸಿ ನಂತರ ಹವಾಮಾನ ವೈಪರೀತ್ಯದಿಂದ ಅವರ ದೇಹಗಳು ವಿರೂಪವಾಗಿದ್ದಿರಬಹುದು ಎಂದು ಪಾಕಿಸ್ತಾನದ ಸಚಿವ ಹೊಸದಿಲ್ಲಿಯಲ್ಲಿ ಕುಂತು ಹೇಳಿಕೆಕೊಡುವ ಧಾರ್ಷ್ಟ್ಯ ತೋರಲು ಸಾಧ್ಯವಿತ್ತೇ? ಇವತ್ತು ಪಾಕಿಸ್ತಾನವು ಯಾವುದೇ ವೇದಿಕೆಯಲ್ಲಿ ಭಾರತದ ಆಕ್ಷೇಪ, ಪ್ರತಿಭಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಲೇ ಇಲ್ಲ. ಇದಕ್ಕೆ ಯಾರು ಕಾರಣ. ಒಂದು ಕಡೆ ಪಾಕಿಸ್ತಾನವು ಬಾಲಬಿಚ್ಚುತ್ತಿದ್ದರೆ ಮತ್ತೊಂದು ಕಡೆ ಚೀನಾವು ಮತ್ತೆ ಗಡಿತಂಟೆಗೆ ಮುಂದಾಗಿದೆ. ಇದು ತೀರಾ ಗಂಭೀರ ವಿಷಯ. ದೌಲತ್ ಬೇಗ್ ಓಲ್ಡಿ ಎಂಬಲ್ಲಿ ಉಭಯ ದೇಶಗಳ ವಾಸ್ತವ ನಿಯಂತ್ರಣರೇಖೆಯಿಂದ 19 ಕಿಲೋಮೀಟರ್‌ಗಳಷ್ಟು ದೂರ ಭಾರತದ ನೆಲದೊಳಗೆ ಪ್ರವೇಶಿಸಿ ಚೀನಾದ ಸೇನೆ ಟೆಂಟುಗಳನ್ನು ನಿರ್ಮಿಸಿದೆ. ಈ ವಿಷಯವಾಗಿ ಸ್ಥಳೀಯ ಸೇನಾ ಕಮಾಂಡರ್‌ಗಳ ಜತೆ ಫ್ಲಾಗ್ ಮೀಟಿಂಗ್ ನಡೆಸಲು ಭಾರತ ಮಾಡಿದ ಮನವಿಗೆ ಚೀನಾ ಸ್ಪಂದಿಸಿಯೇ ಇಲ್ಲ. ಇಷ್ಟಾಗಿ ಈ ವಾಸ್ತವ ನಿಯಂತ್ರಣರೇಖೆಯ ವಸ್ತುಸ್ಥಿತಿಯ ಬಗ್ಗೆಯೇ ಚೀನಾಗೆ ತಕರಾರಿದೆ. ಇನ್ನು ಈ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರವು ತನ್ನ ವಿದೇಶ ವ್ಯವಹಾರಗಳ ಸಚಿವರನ್ನು ಚೀನಾಗೆ ಕಳುಹಿಸುತ್ತಿದೆ. ಅದೂ ಅಯಾಚಿತವಾಗಿ. ಪರಿಹಾರದ ಯಾವುದೇ ಭರವಸೆ ಇಲ್ಲದೆ. ಇನ್ನು ಈ ಸರ್ಕಾರದ ಮುಖ್ಯಸ್ಥರಾಗಿರುವ ಸಿಂಗ್ ಅವರಿಗೆ ಇದು ಕೇವಲ ಲೋಕಲ್ ಪ್ರಾಬ್ಲೆಮ್. ಇದೇ ಚೀನಾ ನೆರೆಯ ಜಪಾನಿನ ಗಡಿ ಸಮೀಪ ನಡೆಸಿದ ಯುದ್ಧದಾಟಕ್ಕೆ ಜಪಾನ್ ಉತ್ತರಿಸಿದ್ದಾದರೂ ಹೇಗೆ, ತನ್ನ ಗಡಿಯೊಳಗೆ 19 ಕಿ.ಮೀ. ಒಳನುಸುಳಿ ಟೆಂಟ್ ಸ್ಥಾಪಿಸಿ ಎಲ್ಲ ಅಂತಾರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ನೀತಿ ನಿಲುವುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಚೀನಾ ಬಗ್ಗೆ ನಾವು ಪ್ರತಿಕ್ರಿಯಿಸುತ್ತಿರುವುದಾದರೂ ಹೇಗೆ? ಹೀಗೇ ಆದರೆ ನಾಳೆ ನೆರೆಯ ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮುಂತಾದ ದೇಶಗಳು ಸಹ ಭಾರತವನ್ನು ಲಘುವಾಗಿ ಕಾಣಲು ನಾವೇ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಈಗ ಹೇಳಿ ಭಾರತವನ್ನು ನಗೆಪಾಟಲಿಗೆ ಈಡು ಮಾಡುತ್ತಿರುವಲ್ಲಿ ನಿಮ್ಮ ಪಾತ್ರ ಇಲ್ಲವೇ?
ಭ್ರಷ್ಟಾಚಾರ ಭಾರತದ ಮುಂದಿರುವ ಅತಿ ದೊಡ್ಡ ಸವಾಲು ಎಂದು ಸಿಕ್ಕಸಿಕ್ಕ ಕಡೆಯಲ್ಲಿ ನೀವೇ ಭಾಷಣ ಮಾಡುತ್ತೀರಿ. ಆದರೆ ನಿಮ್ಮದೇ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದ, ಬರುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ, ಅವು ದೇಶದ ಇಮೇಜಿಗೆ ಉಂಟುಮಾಡಿರುವ ಹಾನಿಯ ಬಗ್ಗೆ ಏನು ಹೇಳುತ್ತೀರಿ? ದಿಲ್ಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಆದ ಅವ್ಯವಹಾರ, ಅಕ್ರಮ ತಡೆಗಟ್ಟಲು, ಅದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಮಾಡಲು ನಿಮ್ಮ ಸರ್ಕಾರ ಏನು ಮಾಡಿದೆ ಹೇಳಿ? ಒಂದು ಹಂತದಲ್ಲಿ ಕಾಮನ್ವೆಲ್ತ್ ಸಂಘಟಕರು ಕ್ರೀಡಾಕೂಟವನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವ ಧಮಕಿ ಹಾಕಿದ್ದು ಮರೆತುಹೋಯಿತೇ? ಹಾಗೇನಾದರೂ ಆಗಿದ್ದರೆ ಭಾರತವು ನಿಜಕ್ಕೂ ಅಪಹಾಸ್ಯದ ವಸ್ತುವಾಗಿರುತ್ತಿರಲಿಲ್ಲವೇ? ಇಂದೂ ಸಹ ನಿಮ್ಮ ಸರ್ಕಾರದ ಹಸ್ತಕ್ಷೇಪದ ಪರಿಣಾಮ ಭಾರತವು ಅಂತಾರಾಷ್ಟ್ರೀಯ ಒಲಿಂಪಿಕ್ ಒಕ್ಕೂಟದ ಸದಸ್ಯತ್ವ ಕಳೆದುಕೊಂಡಿರುವುದು ದೇಶಕ್ಕೆ ಕೀರ್ತಿ ತರುವ ವಿಚಾರವೇ? ನಿಮ್ಮ ಆಡಳಿತದ ಎರಡನೇ ಅವಧಿಯಲ್ಲಿ 2ಜಿ ತರಂಗಾಂತರ ಗುಚ್ಛ ಮತ್ತು ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ಉಂಟಾಗಿರುವ ನಷ್ಟ ಸುಮಾರು 4 ಲಕ್ಷ ಕೋಟಿ ರು.ಗಳೆಂದರೆ ಅದಕ್ಕಿಂತ ನಾಚಿಕೆಗೇಡಿನ ವಿಷಯ ಯಾವುದಿದೆ ಹೇಳಿ? ಇದಾವುದೂ ನಿಮ್ಮನ್ನು ತಲೆತಗ್ಗಿಸುವಂತೆ ಮಾಡಿಲ್ಲವೇ? ಇನ್ನು ದೇಶದ ಅರ್ಥವ್ಯವಸ್ಥೆಯ ವಿಷಯಕ್ಕೆ ಬಂದರೆ ಭಾರತದ ಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದನ್ನು ನಿಮಗೆ ವಿವರಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ರೋಗಿಯ ಸ್ಥಿತಿ ಉಲ್ಬಣವಾಗುವುದಕ್ಕೆ ಬಿಟ್ಟು ನಂತರ ಚಿಕಿತ್ಸೆಗೆ ಮುಂದಾಗುವ ವೈದ್ಯನಂತಾಗಿದೆ ನಿಮ್ಮ ಸ್ಥಿತಿ. ದೇಶದ ಆರ್ಥಿಕತೆಯನ್ನು ಮೇಲ್ಮುಖದ ದಾರಿಯಲ್ಲಿ ಕರೆದೊಯ್ಯಲೆಂದೇ ಅಲ್ಲವೇ ಈ ದೇಶದ ಮತದಾರ ಎರಡನೇ ಅವಧಿಗೆ ನಿಮ್ಮನ್ನು ಆರಿಸಿ ಕಳುಹಿಸಿದ್ದು. ಆದರೆ ಆ ಮತದಾರನ ವಿಶ್ವಾಸವನ್ನು ನೀವು ಉಳಿಸಿಕೊಂಡಿದ್ದೀರಾ? ಅಂತಾರಾಷ್ಟ್ರೀಯ ಪತ್ರಿಕೆಗಳು ಭಾರತದ ಅರ್ಥವ್ಯವಸ್ಥೆ ಮತ್ತು ನಿಮ್ಮ ನಾಯಕತ್ವವನ್ನು ಯಾವ ಪರಿ ಅಪಹಾಸ್ಯ ಮಾಡಿವೆ. ಅದು ಈ ದೇಶದ ಅವಹೇಳನ ಅಲ್ಲವೇ? ಆಗ ನಿಮಗೆ ದೇಶ ಹಾಸ್ಯದ ವಸ್ತುವಾಗಿದೆ ಎಂಬ ಅರಿವು ಉಂಟಾಗಲಿಲ್ಲವೇ? ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಭಾರತದ ಅರ್ಥವ್ಯವಸ್ಥೆ ಕುಸಿತದ ಅಪಾಯದಲ್ಲಿದ್ದು, ಅದನ್ನು ತಡೆಯುವ ಅಥವಾ ಮೇಲೆತ್ತುವ ಪ್ರಯತ್ನ ಕೈಕೊಳ್ಳುವ ನಾಯಕತ್ವದ ಕೊರತೆ ಎದುರಿಸುತ್ತಿದೆ ಎಂದು ಹೇಳಿದಾಗ, ಭಾರತವನ್ನು Junk(ಕುಲಗೆಟ್ಟ) ಸ್ಟೇಟಸ್‌ಗೆ ಇಳಿಸುವ ಬೆದರಿಕೆ ಹಾಕಿದಾಗ ಅದರಿಂದ ಜಾಗತಿಕ ಮಟ್ಟದಲ್ಲಿ ದೇಶದ ಮಾನ ಹರಾಜಾಗುತ್ತಿದೆ ಎಂದು ನಿಮಗೆ ಅನ್ನಿಸಲಿಲ್ಲವೇ? ಈಗ ನಿಮ್ಮ ವಿತ್ತ ಸಚಿವರು ವಿದೇಶಿ ಹೂಡಿಕೆಯ ಭಿಕ್ಷಾಪಾತ್ರೆ ಹಿಡಿದು ಜಪಾನ್,ಅಮೆರಿಕ ಮುಂತಾದ ದೇಶಗಳಿಗೆ ತೆರಳಿ ಭಿಕ್ಷೆ ಬೇಡುತ್ತಿರುವುದು ದೇಶ ಈಗಾಗಲೇ ಹಾಸ್ಯಾಸ್ಪದವಾಗಿದೆ ಮತ್ತು ಅದಕ್ಕೆ ಕಾರಣ ನಿಮ್ಮದೇ ಆಡಳಿತ ಎಂದು ನಿಮಗೆ ತಿಳಿಯುತ್ತಿಲ್ಲವೇ ಪ್ರಧಾನಿ ಸಿಂಗ್?
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

