ಚುನಾವಣಾ ಕಣದಲ್ಲಿ ಗರಿಗೆದರಿದ ಸುಪಾರಿ ರಾಜಕಾರಣ
ಚುನಾವಣಾ ಕಣದಲ್ಲಿ ಗರಿಗೆದರಿದ ಸುಪಾರಿ ರಾಜಕಾರಣ; ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿ..
ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿ ಸಹಜ. ಒಬ್ಬ ಅಭ್ಯರ್ಥಿಯನ್ನು ಸೋಲಿಸಲು ಮತ್ತೊಬ್ಬ ಅಭ್ಯರ್ಥಿ ಕಸರತ್ತು ನಡೆಸುವುದು, ನಾನಾ ತಂತ್ರಗಳನ್ನು ಅನುಸರಿಸುವುದು ಮಾಮೂಲು. ಏಕೆಂದರೆ, ಸೋಲಲೆಂದು ಯಾರೂ ಚುನಾವಣಾ ಕಣಕ್ಕಿಳಿಯುವುದಿಲ್ಲ. ಎಲ್ಲ ಉಮೇದುವಾರರ ಮೂಲಮಂತ್ರ ಗೆಲುವು ಎಂಬುದೇ ಆಗಿರುತ್ತದೆ. ಹೀಗಾಗಿಯೇ ಆಖಾಡದಲ್ಲಿ ನಾನಾ ಪಟ್ಟುಗಳ ಪ್ರಯೋಗವಾಗುತ್ತದೆ.
ಇದು ಚುನಾವಣಾ ಕಣದಲ್ಲಿರುವ ಉಮೇದುವಾರರ ವರಸೆಯಾದರೆ, ಇಂತಹವರು ಸೋಲಬೇಕು, ಇವರೇ ಗೆಲ್ಲಬೇಕು ಎಂದು ಬಯಸುವವರ ಸಂಖ್ಯೆಯೂ ರಾಜಕೀಯದಲ್ಲಿ ಕಡಿಮೆ ಏನಿಲ್ಲ. ಆದರಲ್ಲೂ ಒಬ್ಬ ಅಭ್ಯರ್ಥಿ ಸೋಲಿಗೆ ಸ್ವಪಕ್ಷೀಯರೇ ಪ್ರಯತ್ನಿಸುವ ಹೊಸ ಟ್ರೆಂಡ್ ಇತ್ತೀಚಿನ ಚುನಾವಣೆಗಳಿಂದ ಆರಂಭವಾಗಿದೆ. ಯಾವುದೇ ಪಕ್ಷದಲ್ಲಿ ಒಬ್ಬ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದು ಪ್ರಭಾವಿಯಾಗಿ ಬೆಳೆಯುವ ಲಕ್ಷಣ ಕಂಡರೆ ಸಾಕು, ಆ ಉಮೇದುವಾರನನ್ನು ಸ್ವಪಕ್ಷೀಯರೇ ಹೊಸಕಿ ಹಾಕುವ ಕೆಲಸ ಶುರುವಾಗಿದೆ. ಆತ ಬೆಳೆದರೆ ಪಕ್ಷದಲ್ಲಿ ತಮ್ಮ ನಾಯಕತ್ವ, ವರ್ಚಸ್ಸು ಅಥವಾ ಪ್ರಭಾವಕ್ಕೆಲ್ಲಿ ತೊಂದರೆಯಾಗುವುದೋ ? ಎಂಬ ಅನುಮಾನವೇ ಇದಕ್ಕೆ ಕಾರಣ. ಇದುವೇ 'ಸುಪಾರಿ' ರಾಜಕಾರಣ.
ರಾಜ್ಯ ವಿಧಾನಸಭೆ ಚುನಾವಣೆಯ ಕಣದಲ್ಲಿ ಈಗ ಪ್ರಚಾರದ್ದೇ ಅಬ್ಬರ. ಎಲ್ಲ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಆರ್ಭಟದಿಂದಾಗಿ ಕಣ ಕಳೆಗಟ್ಟಿದೆ. ಮತದಾನಕ್ಕೆ ಕೇವಲ ಏಳು ದಿನಗಳು ಬಾಕಿ ಉಳಿದಿರುವುದರಿಂದ ಉಮೇದುವಾರರು ಉಸಿರು ಬಿಗಿ ಹಿಡಿದು ಮತದಾರರನ್ನು ಓಲೈಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಫಲಿತಾಂಶದ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ಲೆಕ್ಕಾಚಾರಗಳು ತೇಲಿ ಬರುತ್ತಿವೆ. ಚುನಾವಣೆ ಬಳಿಕ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಏಕ ಪಕ್ಷದ ಸರ್ಕಾರವೋ, ಮತ್ತೆ ಮೈತ್ರಿ ಸರ್ಕಾರದ ಸಾಧ್ಯತೆ ಏನಾದರೂ ಇದೆಯೋ ಅಥವಾ ಅತಂತ್ರ ವಿಧಾನಸಭೆಯ ವಾತಾವರಣ ಸೃಷ್ಟಿಯಾಗುವುದೋ ? ಎಂಬಿತ್ಯಾದಿ ಚರ್ಚೆಗಳು ಎಡೆಬಿಡದೆ ಸಾಗಿದೆ.
ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸಾತಿ, ಪ್ರಣಾಳಿಕೆಗಳ ಪ್ರಕಟಣೆ ಎಲ್ಲವೂ ಮುಗಿದು ಒಟ್ಟಿನಲ್ಲಿ ವಿಧಾನಸಭೆಯ ಚುನಾವಣಾ ಕಣ ಸ್ಪಷ್ಟ ರೂಪ ಪಡೆದುಕೊಳ್ಳುವತ್ತ ಸಾಗಿದೆ. ಮತದಾರರ ನಾಡಿ ಮಿಡಿತ ಏನೆಂಬುದು ಅರ್ಥವಾಗದೆ ನಾಯಕರು ಫಲಿತಾಂಶದ ಬಗ್ಗೆ ತಮಗೆ ಹೊಳೆದಂತೆ ಗುಣಾಕಾರ, ಭಾಗಾಕಾರದಲ್ಲಿ ನಿರತರಾಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಮೀಕ್ಷೆಗಳ ಬಗ್ಗೆಯೂ ಅವರೆಲ್ಲ ತಲೆಕೆಡಿಸಿಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಇದಿಷ್ಟೂ ಅಖಾಡಲ್ಲಿನ ಸಂಗತಿಯಾದರೆ ಇನ್ನು ರಾಜಕೀಯ ಪಕ್ಷಗಳಲ್ಲಿ ಒಳಗೊಳಗೆ ಏನು ನಡೆಯುತ್ತಿದೆ ಎಂಬುದು ಕುತೂಹಲ ಮೂಡಿಸಿದೆ. ಪ್ರಮುಖವಾಗಿ ಕಾಂಗ್ರೆಸ್ ವಿಚಾರದಲ್ಲಿ ಹೇಳುವುದಾದರೆ, ಮುಖ್ಯಮಂತ್ರಿ ಹುದ್ದೆಯ ಮೇಲೆ ಆ ಪಕ್ಷದಲ್ಲಿ ಹೆಚ್ಚಿನ ಮಂದಿ ಕಣ್ಣಿಟ್ಟಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ರೇಸ್‌ನಲ್ಲಿ ಇನ್ನೂ ಹಲವರು ಇದ್ದಾರಾದರೂ ಫಲಿತಾಂಶ ಪ್ರಕಟವಾಗಲಿ ಆಮೇಲೆ ಒಂದು ಕೈ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವುದೇ ಕೆಲ ನಾಯಕರಿಗೆ ಸಂಕಷ್ಟ ತಂದೊಡ್ಡಿದೆ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಸಿದ್ದರಾಮಯ್ಯ, ಪರಮೇಶ್ವರ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಖರ್ಗೆ ಅವರು ತಮ್ಮ ಮನದಾಳದ ಇಂಗಿತವನ್ನು ಎಲ್ಲಿಯೂ ವ್ಯಕ್ತಪಡಿಸದಿದ್ದರೂ ಆ ಹುದ್ದೆಗೇರುವ ಆಸೆ ಅವರಲ್ಲಿ ಗೂಡು ಕಟ್ಟಿ ಯಾವುದೋ ಕಾಲವಾಗಿದೆ.
ಮುಖ್ಯಮಂತ್ರಿ ಹುದ್ದೆಗೆ ನಾನೂ ಆಕಾಂಕ್ಷಿ ಎಂದು ನಾಯಕರು ಹೇಳಿಕೊಳ್ಳಬಹುದೇ ಹೊರತು ಬೇರೆಯವರು ಹಾಗೆ ಹೇಳುವಂತಿಲ್ಲ, ಲಾಬಿ ಅಥವಾ ಪ್ರಯತ್ನ ನಡೆಸುವಂತಿಲ್ಲ ಎಂಬುದಾಗಿ ತಾಕೀತು ಮಾಡಲಾಗದು. ಹಾಗಾದರೆ, ಪೈಪೋಟಿದಾರರನ್ನು ದೂರ ಸರಿಸಲು ಏನು ಮಾಡಬೇಕು? ಅದಕ್ಕಾಗಿಯೇ ಶುರುವಾಗಿದೆ ಕುತಂತ್ರ ರಾಜಕಾರಣ.
ಸಿದ್ದರಾಮಯ್ಯ, ಪರಮೇಶ್ವರ ಅವರನ್ನು ಸೋಲಿಸಲು ಅವರ ಪಕ್ಷದಲ್ಲೇ ತಂತ್ರ ಹೆಣೆಯಲಾಗುತ್ತಿದೆ ಎಂಬುದು ಆದರ ಹೈಲೈಟ್. ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯದಂತೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ನೇತೃತ್ವದ ಕೆಜೆಪಿಯ ಪ್ರಭಾವ ಬೆಳೆಯದಂತೆ ನೋಡಿಕೊಳ್ಳಲು ಬಿಜೆಪಿ ನಾನಾ ಪಟ್ಟುಗಳ ಪ್ರಯೋಗ ನಡೆಯುತ್ತಿದೆ.
ಸಿದ್ದರಾಮಯ್ಯ ಅವರು ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅಲ್ಲಿ ಕುರುಬ ಮತಾದರರ ಜೊತೆಗೆ ಪರಿಶಿಷ್ಟರು ಮತ್ತು ಲಿಂಗಾಯತರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಾಗಬೇಕು ಎಂದು ಬಯಸಿ ಕಾಂಗ್ರೆಸ್ಸಿಗರೇ ತಂತ್ರ ಹೆಣೆದು ಕೂತಿದ್ದಾರೆ.
ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ಅಲ್ಲಿ ಪೈಪೋಟಿ ತೀವ್ರವಾಗಿಯೇ ನಡೆದಿದೆ. ಸಿದ್ದರಾಮಯ್ಯ ಅವರು ಗೆದ್ದು ಬಂದರೆ ಪೈಪೋಟಿ ಇನ್ನೂ ಹೆಚ್ಚಾಗುತ್ತದೆ. ಚುನಾವಣಾ ಕಣದಲ್ಲೇ ಅವರನ್ನು ಮಣಿಸಿದರೆ ತಮ್ಮ ಹಾದಿ ಸಲೀಸು ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತವರ ಬೆಂಬಲಿಗರು ವರುಣಾ ಕ್ಷೇತ್ರದಲ್ಲಿ ತಮ್ಮ ದಾಳ ಉರುಳಿಸಿದ್ದಾರೆ. ಅಲ್ಲಿ ಪರಿಶಿಷ್ಟರ ಮತಗಳು ಹೆಚ್ಚಾಗಿರುವುದರಿಂದ ಆ ಮತಗಳು ಸಿದ್ದರಾಮಯ್ಯ ಅವರ ಸಮೀಪದ ಪ್ರತಿಸ್ಪರ್ಧಿ, ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಪರ ಚಲಾವಣೆ ಆಗುವಂತೆ ಮಾಡಲು ಅವರು ಹೊರಟಿದ್ದಾರೆ. ಅಂದರೆ, ಸಿದ್ದರಾಮಯ್ಯ ಅವರ ಸೋಲಿಗೆ ಖರ್ಗೆ ಅವರು ಸುಪಾರಿ ಕೊಟ್ಟಿದ್ದಾರೆ ಎಂದರ್ಥ.
ಚುನಾವಣೆಯಲ್ಲೇ ಸಿದ್ದರಾಮಯ್ಯ ಸೋತು ಹೋದರೆ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ನಡೆಯುವ ಶಾಸಕಾಂಗ ಸಭೆಯಲ್ಲಿ ಪೈಪೋಟಿಯೇ ಇರುವುದಿಲ್ಲ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ತಂತ್ರಗಾರಿಕೆ ಭರ್ಜರಿಯಾಗಿ ನಡೆದಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ಈ ನಡೆಗೆ ಕಾರಣವೂ ಇಲ್ಲದಿಲ್ಲ. ಅವರು ಕಾಂಗ್ರೆಸ್‌ನ ಹಿರಿಯ ರಾಜಕಾರಣಿ. ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲ ಅವರಲ್ಲಿ ಬಹು ದಿನಗಳಿಂದಲೂ ಇದೆ. ಈ ಹಿಂದೆ ಅಂದರೆ, 1999ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರು ಪ್ರಯತ್ನ ನಡೆಸಿದ್ದರು. ಆದರೆ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದರು. 2006ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಖರ್ಗೆ ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿದ್ದರು. ಆದರೆ, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಉರುಳಿಸಿದ ದಾಳದ ಪರಿಣಾಮ ಧರ್ಮಸಿಂಗ್ ಅವರಿಗೆ ಆ ಹುದ್ದೆ ಅನಿರೀಕ್ಷಿತವಾಗಿ ಒಲಿದು ಬಂತು. ಹೀಗಾಗಿ ಖರ್ಗೆ ಅವರು ಪಕ್ಕಕ್ಕೆ ಸರಿಯಬೇಕಾಯಿತು.
ಸರ್ಕಾರ ಉರುಳಿದ ಬಳಿಕ ಅವರು ಪ್ರತಿಪಕ್ಷ ನಾಯಕರಾದರೂ ಆ ಹುದ್ದೆಯೂ ಹೆಚ್ಚು ಕಾಲ ಉಳಿಯಲಿಲ್ಲ. ಇದೇ ಸಿದ್ದರಾಮಯ್ಯ ಅವರಿಗೆ ಸ್ಥಾನ ಬಿಟ್ಟುಕೊಟ್ಟು ಖರ್ಗೆ ಅವರು ಕೇಂದ್ರದ ದಾರಿ ಹಿಡಿದರು. ಈಗ ಮತ್ತೊಮ್ಮೆ ಅವರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ನಾನಾ ತಂತ್ರಗಾರಿಕೆ ಶುರುವಿಟ್ಟುಕೊಂಡಿದ್ದಾರೆ. ಅದರಲ್ಲಿ ಸುಪಾರಿ ರಾಜಕಾರಣವೂ ಒಂದು. ಕೇವಲ ಸಿದ್ದರಾಮಯ್ಯ ಮಾತ್ರ ಖರ್ಗೆ ಅವರ ಗುರಿಯಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ಕ್ಷೇತ್ರದಲ್ಲೂ ಅವರ ಕೈಗಳು ಹರಿದಾಡುತ್ತಿದೆ.
2006ರ ಚುನಾವಣೆಯಲ್ಲೂ ಇದೇ ಸನ್ನಿವೇಶ ಉಂಟಾಗಿತ್ತು. ನಮ್ಮವರೇ ನಮ್ಮ ಕಾಲೆಳೆದರು. ಇಲ್ಲದಿದ್ದರೆ ಕಾಂಗ್ರೆಸ್ ಸರಳ ಬಹುಮತ ಪಡೆಯುತ್ತಿತ್ತು ಎಂದು ಇದೇ ಖರ್ಗೆಯವರು ಆಗ ಹೇಳಿದ್ದರು. ಅದನ್ನೀಗ ಅವರು ಮಾಡಿ ತೋರಿಸುತ್ತಿದ್ದಾರೆ. ವರುಣಾ ಮತ್ತು ಪರಮೇಶ್ವರ ಅವರ ಕೊರಟಗೆರೆ ಕ್ಷೇತ್ರದಲ್ಲಿ ಜಾತಿಯ ಮುಖಂಡರನ್ನು ಹಿಡಿದುಕೊಂಡು, ಅವರಿಗೆ ಹಣ ಪೂರೈಸಿಕೊಂಡು ಸುಪಾರಿ ರಾಜಕೀಯವನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.
ಇನ್ನು ಚನ್ನಪಟ್ಟಣದಲ್ಲಿ ನಡೆಯುತ್ತಿರುವುದೂ ಸುಪಾರಿ ರಾಜಕಾರಣವೇ. ಅಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ಟಿಕೆಟ್‌ನ ಆಕಾಂಕ್ಷಿಯಾಗಿದ್ದರು. ಬಿಜೆಪಿಯಲ್ಲಿದ್ದ ಅವರು ಇದಕ್ಕಾಗಿ ಮಂತ್ರಿ ಮತ್ತು ಶಾಸಕ ಸ್ಥಾನ ಎರಡಕ್ಕೂ ರಾಜಿನಾಮೆ ನೀಡಿದರು. ಆದರೆ, ಅವರಿಗೆ ಟಿಕೆಟ್ ಸಿಗದಂತೆ ನೋಡಿಕೊಂಡವರು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್.
ಚನ್ನಪಟ್ಟಣ ಭಾಗದಲ್ಲಿ ಶಿವಕುಮಾರ್ ಪ್ರಭಾವ ಇದೆ. ಯೋಗೀಶ್ವರ್ ಗೆದ್ದು ಬಂದರೆ ಅದಕ್ಕೆಲ್ಲಿ ಸಂಚಕಾರ ಬಂದೊದಗುವುದೋ ಎಂಬ ಕಾರಣಕ್ಕೆ ಅವರು ಟಿಕೆಟ್ ತಪ್ಪಿಸಿದರು. ಹೀಗಾಗಿ ಯೋಗೀಶ್ವರ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆ ಸೋಲುಣಿಸಲು ಶಿವಕುಮಾರ್ ಅವರು ಜೆಡಿಎಸ್‌ನವರಿಗೆ ಸುಪಾರಿ ಕೊಟ್ಟಿದ್ದಾರೆ. ಅಂದರೆ, ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿದ್ದಾರೆ. ತಮ್ಮ ಕಾರ್ಯಕ್ಷೇತ್ರವಾದ ಕನಕಪುರದಲ್ಲೂ ಶಿವಕುಮಾರ್ ಇದೇ ವರಸೆ ತೋರಿಸಿದ್ದಾರೆ. ಅಲ್ಲಿ ಪಿ.ಜಿ.ಆರ್.ಸಿಂಧ್ಯಾ ಜೆಡಿಎಸ್ ಉಮೇದುವಾರ. ಆದರೆ, ಅವರು ಗೆಲ್ಲುವುದು ಪಕ್ಷದವರಿಗೇ ಇಷ್ಟವಿಲ್ಲ. ಹೀಗಾಗಿ ಸಿಂಧ್ಯಾ ಸೋಲಿಗೆ ಅವರು ಶಿವಕುಮಾರ್ ಜೊತೆ ಕೈ ಜೋಡಿಸಿದ್ದಾರೆ. ಇನ್ನು ಮಂಡ್ಯ ಜಿಲ್ಲೆಯಲ್ಲಂತೂ ಸುಪಾರಿ ರಾಜಕಾರಣದ ನಾನಾ ಮಗ್ಗಲುಗಳ ಪರಿಚಯವಾಗುತ್ತಿದೆ.
ಈ ಸುಪಾರಿ ರಾಜಕಾರಣ ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿ ಮತ್ತು ಕೆಜೆಪಿಯನ್ನೂ ಅಲುಗಾಡಿಸುತ್ತಿದೆ. ಉದಾಹರಣೆಗೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಚುನಾವಣೆಯಲ್ಲಿ ಅವರು ಸೋಲಲೇಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹದಾಸೆ. ಏಕೆಂದರೆ, ತಾವು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಈಶ್ವರಪ್ಪ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಅವರ ಸಿಟ್ಟು. ಹಾಗೆಯೇ ಯಡಿಯೂರಪ್ಪ ಅವರು ಸೋಲಬೇಕು ಎಂದು ಈಶ್ವರಪ್ಪ ಹರಕೆ ಹೊತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಇರಬೇಕು ಎಂಬುದು ಅವರ ಬಯಕೆ. ಹೀಗಾಗಿ ಅವರ ಸೋಲಿಗೆ ಇವರು, ಇವರ ಸೋಲಿಗೆ ಅವರು ಸುಪಾರಿ ಕೊಟ್ಟಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನ ಶ್ರೀರಾಮುಲು ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಮತ್ತು ಎಲ್ಲ ಜಿಲ್ಲೆಗಳಲ್ಲೂ ಸುಪಾರಿ ರಾಜಕಾರಣ ಗರಿಗೆದರಿದೆ.
ಈ ಚುನಾವಣೆಯಲ್ಲಿ ಒಂದು ವೇಳೆ ಕೆಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸನ್ನಿವೇಶ ನಿರ್ಮಾಣವಾದರೆ? ಎಂಬ ಭಯ ಬಿಜೆಪಿಯನ್ನು ಕಾಡುತ್ತಿದೆ. ಹಾಗೊಂದು ವೇಳೆ ಕಾಂಗ್ರೆಸ್ ಪಕ್ಷವೇನಾದರೂ ಕೆಜೆಪಿ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸಿದರೆ ನಮ್ಮ ಕಥೆ ಮುಗಿದಂತೆ ಎಂಬ ಆತಂಕವೂ ಬಿಜೆಪಿಯವರಿಗಿದೆ. ಹೀಗಾಗಿ ಪಕ್ಷದ ಮತಗಳು ಕೆಜೆಪಿಗೆ ಚದುರಿ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದೆ. ಗೆಲ್ಲುವ ಸಾಮರ್ಥ್ಯ ಇಲ್ಲದ ಕ್ಷೇತ್ರಗಳಲ್ಲಿ, ಅದರಲ್ಲೂ ಕೆಜೆಪಿಗೆ ಅವಕಾಶ ಇರುವ ಕಡೆ ಪಕ್ಷದ ಮತಗಳನ್ನು ಕೊಡುಗೆ ರೂಪದಲ್ಲಿ ಕಾಂಗ್ರೆಸ್ಸಿಗೆ ಕೊಡಿಸುವ ಹುನ್ನಾರವೂ ನಡೆದಿದೆ.
ವಿಶೇಷವೆಂದರೆ, ಈ ಕುತಂತ್ರ ರಾಜಕಾರಣಕ್ಕೆ ನಾನಾ ಜಾತಿಗಳ ಮುಖಂಡರು, ಮಠಾಧೀಶರನ್ನೂ ಬಳಸಿಕೊಳ್ಳುತ್ತಿರುವುದು ದುರಂತ. ಏಕೆಂದರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ಬೆಂಗಳೂರಿನ ಮಹದೇವಪುರ ಕ್ಷೇತ್ರಕ್ಕೆ ವಲಸೆ ಬರಲು ನಿರ್ಧರಿಸಿದರು. ಕೊನೆ ಗಳಿಗೆಯಲ್ಲಿ ಅವರ ನಿರ್ಧಾರ ಬದಲಾಯಿತು. ಇದಕ್ಕೆ ಕಾರಣ ಮಠಾಧೀಶರ ಒತ್ತಡ ಮತ್ತು ಜ್ಯೋತಿಷಿಗಳ ಸಲಹೆ. ಮಹದೇವಪುರದಲ್ಲಿ ಕಣಕ್ಕಿಳಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಜ್ಯೋತಿಷಿಗಳಿಂದ ಹೇಳಿಸಲಾಯಿತು. ಹೀಗಾಗಿ ಪರಮೇಶ್ವರ ಅವರು ಕೊರಟಗೆರೆಗೇ ಅಂಟಿಕೊಳ್ಳುವಂತೆ ಆಯಿತು. ಒಟ್ಟಿನಲ್ಲಿ ಅಧಿಕಾರದ ಆಸೆ, ದುರಾಸೆ ಎಂಬುದು ಈ ಚುನಾವಣೆಯಲ್ಲಿ ನಾಯಕರ ನಾನಾ ಮುಖಗಳನ್ನು ಪರಿಚಯಿಸುತ್ತಿದೆ.
-ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

