ಅಂಕಣಗಳು

ಬೇಕಾಗಿದ್ದಾರೆ, ನ್ಯಾಯಾಂಗದ ಅಂತಸ್ಸಾಕ್ಷಿ ರಕ್ಷಕರು

Published On :

ನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರು ಇತರರಿಗಿಂತ ಭಿನ್ನವಾಗಿ ಕಾಣಿಸಲು ಕಾರಣವಾದರೂ ಏನು? ಅವರು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಗೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದವರು, ಆ ಅವಧಿಯಲ್ಲಿ ಯಾವುದೇ ವಿಶಿಷ್ಟ ಕೇಸುಗಳೂ ಬಂದಿರಲಿಲ್ಲ. ಆದರೂ ಕಳೆದ ವಾರ ಅವರು ನಿಧನರಾದಾಗ, ಇಡೀ ದೇಶವೇ ಕಂಬನಿ ಮಿಡಿಯಿತು. ಲೋಧಿ ರುದ್ರಭೂಮಿಯಲ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದವರಲ್ಲಿ ಎಲ್.ಕೆ. ಆಡ್ವಾಣಿ ಮತ್ತು ಸೋನಿಯಾಗಾಂಧಿ, ಫಾಲಿ ನಾರಿಮನ್ ಮತ್ತು ರಾಮ್ ಜೇಠ್ಮಲಾನಿ, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕ ಗಣ್ಯರು, ಸುದ್ದಿವಾಹಿನಿಗಳ ಮುಖ್ಯಸ್ಥರು ಮತ್ತು ಹಿರಿಯ ಸಂಪಾದಕರೂ ಸೇರಿದ್ದರು. ಅಷ್ಟೇ ಅಲ್ಲದೆ, ನ್ಯಾಯಾಧೀಶರು ಮತ್ತು ವಕೀಲರ ದಂಡೇ ಅಲ್ಲಿ ನೆರೆದಿತ್ತು.
 ತಾವು ಅಲಂಕರಿಸಿದ್ದ ವಿವಿಧ ಹುದ್ದೆಗಳಿಗಿಂತಲೂ ಆಚೆಗೆ ವರ್ಮಾ ಅವರು ತಮ್ಮ ಛಾಪು ಒತ್ತಿದ್ದರು ಎಂಬುದು ಸ್ಪಷ್ಟ. ಅವರು ಪ್ರದರ್ಶಿಸಿದ ಸ್ವಾತಂತ್ರ್ಯ ಮತ್ತು ಶಿಫಾರಸು ಮಾಡಿದ ವಿಚಾರಗಳು ಅವರಿಗೆ ಅಪಾರ ಗೌರವವನ್ನು ತಂದುಕೊಟ್ಟಿದ್ದವು. ವರ್ಮಾ ಅವರು ಮಧ್ಯಪ್ರದೇಶ ಹೈಕೋರ್ಟಿನ ನ್ಯಾಯಾಧೀಶರಾಗಿದ್ದು 1973ರ ಜೂನ್‌ನಲ್ಲಿ. ದೇಶದ ಇತಿಹಾಸದಲ್ಲಿನ ಕೆಲ ಅತ್ಯಂತ ಪ್ರಮುಖ ಕೇಸುಗಳ ತೀರ್ಪು ಅದಾಗಲೇ ಪ್ರಕಟವಾಗಿತ್ತು. ಗೋಲಕ್‌ನಾಥ್ ಪ್ರಕರಣ(1967)ದಲ್ಲಿ ಸುಪ್ರೀಂಕೋರ್ಟಿನ 6:5 ತೀರ್ಪು ಸಂವಿಧಾನವು ನೀಡಿದ ಮೂಲಭೂತ ಹಕ್ಕುಗಳನ್ನು ಸಂಸತ್ತಿನ ಮೂಲಕ ತಿದ್ದುಪಡಿ ಮಾಡಲಾಗದು ಎಂದು ಸ್ಪಷ್ಟವಾಗಿ ಆದೇಶಿಸಿತ್ತು.
ಕೇಶವಾನಂದ ಭಾರತಿ ಕೇಸಿನಲ್ಲಿ(1973) ಸುಪ್ರೀಂಕೋರ್ಟ್, ಹಿಂದಿನ ಆದೇಶವನ್ನು ಬದಲಾಯಿಸಿ ತೀರ್ಪು ನೀಡಿತ್ತು. ಸಂವಿಧಾನದ ಯಾವುದೇ ಭಾಗವನ್ನು ಸಂಸತ್ತು ತಿದ್ದುಪಡಿ ಮಾಡಬಹುದಾದರೂ, ಮೂಲ ತಿರುಳುಗಳನ್ನು ಎಂದೂ ರದ್ದುಮಾಡುವಂತಿಲ್ಲ ಎಂದು ನ್ಯಾಯಾಲಯ ಷರತ್ತು ವಿಧಿಸಿತ್ತು. ಈ ಮಹತ್ತರ ತೀರ್ಪುಗಳು ಹಾಗೂ ತುರ್ತು ಪರಿಸ್ಥಿತಿ ಕಾಲದಲ್ಲಿ ನ್ಯಾಯಾಲಯವನ್ನು ಕಡೆಗಣಿಸಿದ ಘಟನೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದವು. ಇಂಥ ಕಾಲಘಟ್ಟದಲ್ಲೇ 1989ರಲ್ಲಿ ನ್ಯಾಯಮೂರ್ತಿ ವರ್ಮಾ ಸುಪ್ರೀಂಕೋರ್ಟಿಗೆ ಬಡ್ತಿ ರು.
 ನ್ಯಾ. ವರ್ಮಾ ಅವರ ಅತ್ಯುತ್ತಮ ತೀರ್ಪುಗಳಲ್ಲಿ ವಿಶಾಖಾ ಪ್ರಕರಣದ ತೀರ್ಪೂ ಒಂದು. ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಗೆ ನ್ಯಾಯ ಕೋರಿ ರಾಜಸ್ಥಾನದ ಮಹಿಳಾ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದವು. ಸವರ್ಣೀಯ ಗುಂಪುಗಳಲ್ಲದೆ ಕೆಳ ನ್ಯಾಯಾಲಯಗಳು ಕೂಡ ಆಕೆಯನ್ನು ಗೋಳಾಡಿಸಿದ್ದವು. ವಿಶಾಖಾ ಮಾರ್ಗದರ್ಶಿಎಂದೇ ಖ್ಯಾತವಾದ ನ್ಯಾ. ವರ್ಮಾ ಅವರ ತೀರ್ಪು ಕೆಲಸದ ಸ್ಥಳದಲ್ಲಿನ ಲೈಂಗಿಕ ದೌರ್ಜನ್ಯಕ್ಕೆ ಒಂದು ವ್ಯಾಖ್ಯಾನವನ್ನು ನೀಡಿತು. ಅದನ್ನು ಎದುರಿಸುವಲ್ಲಿ ಅಗತ್ಯ ನಿರ್ದೇಶಗಳನ್ನು ನೀಡಿತು. ಅದೊಂದು ಮಾರ್ಗದರ್ಶಕ ಕಾರ್ಯವಾಗಿತ್ತು. ಏಕೆಂದರೆ, ಈ ವಿಚಾರದಲ್ಲಿ ಸಂಸತ್ತು ಕೂಡ ಹಿಂಜರಿಕೆ ವ್ಯಕ್ತಪಡಿಸಿತ್ತು. ವಿಶಾಖಾ ತೀರ್ಪಿನ 15 ವರ್ಷಗಳ ಬಳಿಕವಷ್ಟೇ ಲೈಂಗಿಕ ಕಿರುಕುಳ ತಡೆ ಮಸೂದೆಯನ್ನು ಅಂಗೀಕರಿಸುವಲ್ಲಿ ಸಂಸತ್ತು ಯಶಸ್ವಿಯಾಯಿತು. ಇಂಥ ಉಪಕ್ರಮಗಳಿಂದಾಗಿ ನ್ಯಾ. ವರ್ಮಾ ಅವರು ನ್ಯಾಯಾಂಗದ ಅಂತಸ್ಸಾಕ್ಷಿಯ ರಕ್ಷಕ ಎಂಬ ಗೌರವಕ್ಕೆ ಪಾತ್ರರಾದರು.
 ಆತ್ಮಸಾಕ್ಷಿ ಅಥವಾ ಅಂತಸ್ಸಾಕ್ಷಿಯ ನಿಷ್ಠೆ ಎಂಬುದು ಸರ್ವೋತ್ಕೃಷ್ಟವಾದುದು. ನಾಲ್ಕು ಅಂಗಗಳ ಆಧಾರದ ಮೇಲೆ ನಿಂತಿರುವ ದೇಶ ನಮ್ಮದು. ಕಾರ್ಯಾಂಗವು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುವಲ್ಲಿ ಮೊದಲಿಗನಾಯಿತು. ಆನಂತರ ಸಂಸತ್ತು ತನ್ನ ಮೌಲ್ಯವನ್ನು ಕಳೆದುಕೊಂಡಿತು. ಆ ಬಳಿಕ ಮಾಧ್ಯಮವು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತು. ಭ್ರಷ್ಟಾಚಾರದ ಹೊರತಾಗಿಯೂ ನ್ಯಾಯಾಂಗವು ರಾಷ್ಟ್ರನಿರ್ಮಾಣ ಕಾರ್ಯವನ್ನು ಇನ್ನೂ ನಿರ್ವಹಿಸುತ್ತಿರುವುದು ಒಂದಷ್ಟು ಸಮಾಧಾನಕರ ವಿಚಾರ. ಕೇಶವಾನಂದ ಭಾರತಿ ಪ್ರಕರಣವು ಬಹುಮತವಿರುವ ಪಕ್ಷವೊಂದು ನಿರಂಕುಶ ಪ್ರಭುತ್ವ ನಡೆಸುವುದನ್ನು ತಡೆಗಟ್ಟಿತು. ಅನೇಕ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಅಂಥ ಹಾದಿ ಹಿಡಿಯಲು ಇಂದಿರಾಗಾಂಧಿ ಪ್ರಯತ್ನಿಸಿದ್ದುಂಟು. 1970ರ ದಶಕದ ನ್ಯಾಯಾಂಗದ ಆತ್ಮಸಾಕ್ಷಿ ಪ್ರಜ್ಞೆಯಿಂದಾಗಿ ನಮ್ಮ ದೇಶ ಇಂದು ಕೂಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿದೆ.
 ಮುಂದಿನ ದಿನಗಳಲ್ಲಿ ನ್ಯಾಯಮೂರ್ತಿ ವರ್ಮಾ, ನ್ಯಾಯಾಂಗ ಚಟುವಟಿಕೆಯನ್ನು ಇನ್ನಷ್ಟು ರಚನಾತ್ಮಕವನ್ನಾಗಿಸಿದರು. ಅವರ ಗುಣಗಳೇ ಅವರನ್ನು ವಿಶಿಷ್ಟ ವ್ಯಕ್ತಿಯನ್ನಾಗಿಸಿದವು. ಜನರ ಸಮಸ್ಯೆಗಳನ್ನು ಅವರು ಗುರುತಿಸುತ್ತಿದ್ದರು. ಅವರಲ್ಲಿನ ಕಾನೂನು ಪಾಂಡಿತ್ಯವು ಇತರ ನ್ಯಾಯಾಧೀಶರಲ್ಲಿ ಅಸೂಯೆ ಹುಟ್ಟಿಸುವಂತಿತ್ತು. ಅವರ ಪ್ರಾಮಾಣಿಕತೆಯು ರಾಜಕಾರಣಿಗಳಲ್ಲಿ ಹತಾಶೆ ಹುಟ್ಟಿಸುವಂತಿತ್ತು. ಅವರ ಕೊನೆಯ ಕಾರ್ಯವಂತೂ ಎಲ್ಲರೂ ಮೆಚ್ಚುವಂಥದ್ದಾಗಿತ್ತು. ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ ನಂತರ ಹೊರಬಂದ ವರ್ಮಾ ಸಮಿತಿಯ ವರದಿ ದಾಖಲೆ ಸೃಷ್ಟಿಸಿತು. ಆ ವರದಿಯಲ್ಲಿದ್ದ ಶಿಫಾರಸುಗಳು, ಪರಿಹಾರ ಕ್ರಮಗಳು ಎಲ್ಲರ ಗಮನ ಸೆಳೆದವು. ಆ ವರದಿಯ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ಸರ್ಕಾರ ತೋರಿದ ಅಸಮರ್ಥತೆ ನಿಜಕ್ಕೂ ದೇಶಕ್ಕಾದ ನಷ್ಟವೆಂದೇ ಹೇಳಬೇಕು.
 ಮುಂದೊಂದು ದಿನ, ನ್ಯಾಯಾಂಗದ ಸದಸ್ಯರು ಮತ್ತು ಅವರ ಕೊಡುಗೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬಹುದು. ಫಾಲಿ ನಾರಿಮನ್ ಅವರ ಆತ್ಮಚರಿತ್ರೆ(ಬಿಫೋರ್ ಮೆಮೊರಿ ಫೇಡ್ಸ್, 2010)ಯಲ್ಲಿ ಸುಪ್ರೀಂಕೋರ್ಟ್‌ನ ಕೆಲ ನ್ಯಾಯಾಧೀಶರ ಬಗ್ಗೆ ಒಂದು ಅಧ್ಯಾಯವೇ ಇದೆ. ಅವರು ಮೂರು ವರ್ಗದ ನ್ಯಾಯಾಧೀಶರನ್ನು ಗುರುತಿಸುತ್ತಾರೆ. ರಾಜಕೀಯ ಕಾರ್ಯಸೂಚಿಯುಳ್ಳ ನ್ಯಾಯಾಧೀಶರು, ಸಾಮಾಜಿಕ ಕಾರ್ಯಸೂಚಿಯುಳ್ಳ ನ್ಯಾಯಾಧೀಶರು ಹಾಗೂ ಯಾವುದೇ ಕಾರ್ಯಸೂಚಿ ಇಲ್ಲದ ನ್ಯಾಯಾಧೀಶರು. ಮೊದಲನೆಯವರು (ನ್ಯಾಯಮೂರ್ತಿ ಸುಬ್ಬಾರಾವ್ ಅವರಂಥವರು) ಮತ್ತು ಎರಡನೆಯ ವರ್ಗದವರು (ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರಂಥವರು) ನ್ಯಾಯಾಧೀಶರ ಧೋರಣೆಯನ್ನು ಬದಲಾಯಿಸುವಲ್ಲಿ ನೆರವಾದರು, ಮಾತ್ರವಲ್ಲದೆ ಸೃಜನಾತ್ಮಕ ನ್ಯಾಯಾಂಗ ಚಿಂತನೆ ಮೂಡಿಸುವಲ್ಲಿ ತಮ್ಮ ಪ್ರಭಾವ ಬೀರಿದರು. ಮೂರನೆಯ ವರ್ಗದವರು ಹೊಸ ಹೊಸ ಕಾನೂನು ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದರು.
 ಇನ್ನೊಂದು ವರ್ಗದ ನ್ಯಾಯಾಧೀಶರೂ ಇರುತ್ತಾರೆ. ಹಣದ ದುರಾಸೆಯುಳ್ಳವರನ್ನು ಮರೆತುಬಿಡಿ, ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿಯ ಮೆಚ್ಚುಗೆ ಗಳಿಸಲು ನ್ಯಾಯಾಂಗದ ತತ್ವಗಳನ್ನೇ ಪ್ರಹಸನವನ್ನಾಗಿ ಪರಿವರ್ತಿಸಿದವರ ಬಗ್ಗೆ ಏನೆನ್ನಬೇಕು? ಪ್ರಸ್ತುತ ಸಂದರ್ಭದಲ್ಲಿ, ಎ.ಎನ್. ರೇ ಮತ್ತು ಎಂ.ಎಚ್. ಬೇಗ್, ಹಾಗೆಯೇ ಎಚ್.ಆರ್. ಖನ್ನಾ ಮತ್ತು ಜೆ.ಎಸ್. ವರ್ಮಾ ಅವರ ಕೊಡುಗೆಗಳನ್ನು ವಿಮರ್ಶಿಸುವಂಥ ಪುಸ್ತಕಗಳು ಹೊರಬರಬೇಕಾಗಿದೆ. ಒಳ್ಳೆಯತನವನ್ನು ಮೆಚ್ಚುವಂತೆಯೇ ಕೆಡುಕಿನ ಪ್ರವೃತ್ತಿ, ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಗತ್ಯವಾದ ಕಾರ್ಯವೇ.

- ಟಿ ಜೆ ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.