ಕಮ್ಲ ಪಕ್ಸಕ್ಕೆ ಬ್ಯಾಡ್ ಟೈಮು, ಸಿಎಂಗಿಲ್ಲ ಟಾಕ್‌ಟೈಮು
ಎಲೆಕ್ಸನ್ ಕ್ಯಾನ್ವಾಸ್ಗೆ ಅಂತೇಳಿ ಮೈಲಾರಿ ವತ್ತಾರೆ ಎದ್ದು ವೋದೋನು...
ಎಲೆಕ್ಸನ್ ಕ್ಯಾನ್ವಾಸ್ಗೆ ಅಂತೇಳಿ ಮೈಲಾರಿ ವತ್ತಾರೆ ಎದ್ದು ವೋದೋನು ರಾತ್ರಿ ಬಂದು ವುಸ್ಸಪ್ಪ ಅಂತ ಮನೆ ಮುಂದ್ಲಾಗಡೆ ಬಂದು ಕೂತ್ಕಂಡ.
'ಲೇ ಮೈಲಾರಿ ಎತ್ಲಾಗೆ ವೊಂಟೋಗಿದ್ದೆ. ವತ್ತಾರೆಯಿಂದ ವುಡ್ಕಿ ವುಡ್ಕಿ ಸಾಕಾಗೋಯ್ತು. ರಾತ್ರಿ ಮಳೆ ಬಂತು. ಮಳೆ ನೀರ್ನಾಗೆ ಎಲ್ಲಾರ ಕೊಚ್ಕೊಂಡು ವೋಬುಟ್ಟಿದ್ದಾ ಹೆಂಗೆ ?' ಅಂತೇಳಿ ಅಮಾಸೆ ಕೇಳ್ದ.
'ನಾನೇನರ ನಿನ್ನಂಗೆ ನಯಾಪೈಸೆಗೆ ಲಾಯಕ್ಕು ಇಲ್ದೋನು ಅನ್ಕಂಬುಟ್ಟ ಹೆಂಗೆ ? ಲೀಡ್ರು ಕಣಲೇ ನಾನು. ಎಲೆಕ್ಸನ್ ಬಂದದೆ. ನನ್ ಕಿಮ್ಮತ್ತೇ ಬ್ಯಾರೆ ಈವಾಗ. ನಮ್ ಪಕ್ಸುಕ್ಕೆ ವೋಟು ಕೇಳಕ್ಕೆ ಬನ್ನಿ ಬನ್ನಿ ಅಂತ ಎಲ್ಲ ಪಕ್ಸುದೋರು ಕರೀತರೆ ಕಣಲೇ ಬಡ್ಡೀ ಹೈದ್ನೇ' ಅಂದ ಮೈಲಾರಿ.
'ವೂ ಕಣಪ್ಪ ಕರೀತರೆ, ದೊಡ್ ಲೀಡ್ರು ನೋಡು ನೀನು. ಯಾವ್ದಾರ ವೊಂದು ಪಕ್ಸುದೋರು ಕರೀತರೆ. ಎಲ್ಲ ಪಕ್ಸುದೋರು ಅದೆಂಗೆ ಕರೀತರೆ' ಅಂತ ಕೇಳ್ದ ಅಮಾಸೆ.
'ಈವಾಗ ಸಿನ್ಮಾ ಹೀರೋ ದರ್ಸನ್ನು ಕೈ ಪಕ್ಸುಕ್ಕೂ ವೋಟು ಕೇಳ್ತರೆ, ದ್ಯಾವೇಗೌಡ್ರು ಪಕ್ಸಕ್ಕೂ ವೋಟಾಕಿ ಅಂತರೆ ನಾನು ಹಂಗೇಯ' ಅಂದ ಮೈಲಾರಿ.
'ಅದುಕ್ಕೆ ಕೈ ಪಕ್ಸುದೋರು ಯೋಳಿರಾದು ದರ್ಸನ್ನು ಮ್ಯಾಲೆ ಕ್ರಮ ತಕ್ಕತೀವಿ' ಅಂತ ಅಂದ ಅಮಾಸೆ. 'ಅದೆಂಗಲಾ ಕ್ರಮ ತಕ್ಕತರೆ. ದರ್ಸನ್ನು ಏನರ ಕೈ ಪಕ್ಸ ಸೇರ್ಕಂಡವ್ರಾ ? ನಿಮ್ ಪಕ್ಸುಕ್ಕೇ ವೋಟು ಕೇಳ್ತೀನಿ ಅಂತ ಬಾಂಡ್ ಪೇಪ್ರು ಮ್ಯಾಲೆ ಬರ್ಕೊಟ್ಟವ್ರಾ? ಈವಾಗ ಕೈ ಪಕ್ಸುದ್ದು ಸಮಾವೇಸ ಅದ್ರೆ ಯಾರೋ ಬಂದು ಪೆಂಡಾಲು ಹಾಕ್ತರೆ. ನೀನು ಬ್ಯಾರೆ ಪಕ್ಸುದೋರ್ಗೆ ಪೆಂಡಾಲು ಹಾಕಂಗಿಲ್ಲ ಅಂತೇಳುದ್ರೆ ನಡೀತದೇನ್ಲಾ ಅಮಾಸೆ' ಅಂತ ಮೈಲಾರಿ ಯೋಳ್ದ. 'ಜನ್ರಲ್ ನಾಲೆಜ್ಜು ಇಲ್ದಿರೋ ಲೀಡ್ರು ಯಾರೋ ಹೇಳಿರ್ಬೇಕು ಬುಡು ಕ್ರಮ ತಕ್ಕತೀವಿ ಅಂತ' ಅಂದ ಮೈಲಾರಿ.
'ಇನ್ನೇನು ಇಲ್ಲಪ್ಪ, ಈವತ್ತು ಚೀಟಿ ಅದೆ ಮನೆತವ ಬಂದೋಗು ಅಂದ ಅಮಾಸೆ. ಈ ಚೀಟಿ ಯಾವಾರ ಎಲ್ಲಾವ ನಾನು ಬುಟ್ಟಾಕ್ತೀನಿ ಕಣ್ಲಾ. ಸದಾನಂದಗೌಡ್ರು ಸಿಎಂ ಆಗಿದ್ದಾಗ ಮಂತ್ರಿ ಅಸೋಕಪ್ಪುಂಗೆ ಚೀಟಿ ಕೊಟ್ಟು ಈವಾಗ ತಗ್ಲಾಕ್ಕಂಡವ್ರೆ. ಹಂಗೇ ನಾನೂನೆ ಸಿಕ್ಕಾಕ್ಕಂಬುಟ್ರೆ ರಾಜ್ಕೀಯದಾಗೆ ಹೆಸ್ರು ಕೆಟ್ಟೋಯ್ತದೆ. ಚೀಟೀನೂ ಬ್ಯಾಡ ಏನೂ ಬ್ಯಾಡ ವೋಗಪ್ಪ' ಅಂದ ಮೈಲಾರಿ.
'ಆ ಚೀಟಿ ಬ್ಯಾರೆ ಕಣ್ಲಾ, ಅದು ಕಾಸು ತಕ್ಕಳೋದು, ಇದು ಕಾಸು ವುಳ್ಸೋದು' ಅಂದ ಆಮಾಸೆ. ಆಟೋತ್ಗೆ ವೋಟು ಕೇಳಕ್ಕೆ ಅಂತ ಸದಾನಂದಗೌಡ್ರೇ ಬಂದ್ಬುಟ್ರು.
'ಸಾ ಅದೇನು ನಿಮ್ದು ಚೀಟಿ ಯಾವಾರ' ಅಂತ ಮೈಲಾರಿ ಕೇಳೇಬುಟ್ಟು. 'ನಾವು ಚೀಟಿ ಯಾವಾರನಾದ್ರು ಮಾಡ್ಕಂತೀವಿ. ಚಿಟ್‌ಪಂಡು ಯಾವಾರಾನಾದ್ರೂ ಮಾಡ್ಕಂತೀವಿ. ನಿಂಗ್ಯಾಕೆ ?' ಅಂತ ಗೌಡ್ರು ಕೇಳುದ್ರು.
'ಮಾಡ್ಕಳಿ ಮಾಡ್ಕಳಿ, ಚೀಟಿಂಗ್ ಯಾವಾರ ಮಾತ್ರ ಮಾಡ್ಕಬೇಡಿ. ಈವಾಗ್ಲೇ ನಿಮ್ ಪಕ್ಸುಕ್ಕೆ ಬ್ಯಾಡ್ ಟೈಮು ಸುರ್ವಾಗದೆ. ನೀವು ಏನರ ಯೋಳಿ ಕಮ್ಲ ಪಕ್ಸ ಸ್ಯಾನೆ ಹೈಟೆಕ್ಕು. ಬ್ಯಾಂಕ್ನೋರು ಕೊಡೋ ಎಟಿಎಂನಾಗೆ ಕಾರ್ಡು ಹಾಕುದ್ರೆ ಕಾಸು ಬತ್ತದೆ. ನಿಮ್ ಪಕ್ಸುದೊಳ್ಗೆ ಚೀಟಿ ಮಡ್ಗುದ್ರೂ ಕಾಸು ಬತ್ತದೆ ಅಲ್ವಾ ?' ಅಂತ ಮೈಲಾರಿ ಕೇಳ್ದ.
ಸದಾನಂದಗೌಡ್ರು ಸಿಕ್ಕಾಪಟ್ಟೆ ನಕ್ಬುಟ್ಟು, 'ನನ್ನಿಂದೆ ಸಿಎಂ ಸೆಟ್ರು ಅವ್ರೆ ಕೇಳ್ಕಳಿ' ಅಂತೇಳಿ ವೊಂಟೋದ್ರು.
'ಬನ್ನಿ ಸೆಟ್ರೆ ಬನ್ನಿ, ನಿಮ್ದು ಅಂಗ್ಡಿನಾಗೆ ಬಿಜ್ನೆಸ್ಸು ಹೆಂಗೆ ನಡ್ಡದೆ. ಎಲೆಕ್ಸನ್ ಬ್ಯಾರೆ ಬಂತು. ಸ್ಯಾನೆ ಡಲ್ಲು ಆಗೋಗಿರ್ಬೇಕು ಅಲ್ವಾ ?' ಅಂತ ಮೈಲಾರಿ ಕೇಳ್ದ. ಸೆಟ್ರು ಯಾಕೋ ಸೈಲೆಂಟಾಗೇ ಇದ್ದೋದ್ರು. ಮಾತೇ ಇಲ್ಲ.
ಇದ್ಯಾಕೆ? ಮಾತಾಡಿ ಸೆಟ್ರೆ ಮಾತಾಡಿ' ಅಂತ ಮೈಲಾರಿ ಕೇಳ್ಕಂಡ್ರೂ ಸೆಟ್ರು ತುಟಿ ಎರ್ಡು ಮಾಡ್ಲಿಲ್ಲ. 'ಲೇ ಅಮಾಸೆ ಇದೇನಲೇ ಸಿಎಂ ಹಿಂಗೆ ಇದ್ದೋದ್ರು' ಅಂತ ಮೈಲಾರಿ ಕೇಳ್ದ.
'ಅಲ್ಲಣ್ಣೋ, ಸೆಟ್ರು ಸ್ಯಾನೆ ಮಾತಾಡಕ್ಕಿಲ್ಲ ಅಂತ ಗೊತ್ತಿಲ್ವಾ?' ಅಂದ ಅಮಾಸೆ. 'ಅದ್ಯಾಕಲೇ ಮೂದೇವಿ, ಏನರ ವ್ರತ ಮಾಡ್ತಾವ್ರಾ?' ಅಂತ ಮೈಲಾರಿ ಕೇಳ್ದ.
'ಇದೇನಣ್ಣೋ ಹಿಂಗೆ ಕೇಳ್ತೀಯ. ಅವ್ರು ನೆಟ್ಗೆ ಮಾತಾಡಿರೋದ್ನ ಯಾರು ನೋಡವ್ರೆ ಯೋಳು. ನೀವು ವೊಂದಿನುಕ್ಕೆ ಇಷ್ಟೇ ಮಾತಾಡ್ಬೇಕು ಅಂತೇಳಿ ಮನ್ಯಾಗೆ ಟಾಕ್‌ಟೈಮು ಕೊಟ್ಟಿರ್ತರೆ. ಈವತ್ತು ಕೊಟ್ಟಿರೋ ಟಾಕ್‌ಟೈಮು ಮುಗ್ದೋಗದೆ. ಅವ್ರು ಮತಾಡ್ಬೇಕು ಅಂದ್ರೆ ರೀಚಾರ್ಜೂ ಆಬೇಕು. ಅದುಕ್ಕೆ ನೀನು ನಾಳೆಗಂಟ ಕಾಯ್ಬೇಕು' ಅಂತಂದ ಆಮಾಸೆ.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

