ಅಂಕಣಗಳು

ಅಂಥ ಪಾಠವನ್ನು ಮತ್ಯಾರೂ ಕಲಿಸಲಿಲ್ಲ...

Published On :

ಈಗೆಲ್ಲಾ ವಾರ್ಷಿಕ ಪರೀಕ್ಷೆಗಳು ಮುಗಿಯುವ ಮೊದಲೇ ಸಮ್ಮರ್ ಕ್ಯಾಂಪ್‌ಗಳು ಆರಂಭವಾಗಿರುತ್ತವೆ. ಶಿಬಿರ ಆರಂಭಿಸುವ ಮೊದಲೇ- 'ಕೆಲವೇ ಸೀಟುಗಳು ಬಾಕಿ ಉಳಿದಿವೆ. ಶಿಬಿರಕ್ಕೆ ನಿಮ್ಮ ಮಗುವನ್ನು ತಕ್ಷಣವೇ ಸೇರಿಸಿ' ಎಂಬ ಹಸೀ ಸುಳ್ಳನ್ನು ಸಮ್ಮರ್ ಕ್ಯಾಂಪ್ ಆಯೋಜಿಸುವ ಪ್ರತಿಯೊಂದು ಸಂಸ್ಥೆಯೂ ಹೇಳಿರುತ್ತದೆ. ಮಗುವನ್ನು ಬೇಸಿಗೆ ಶಿಬಿರಕ್ಕೆ ಸೇರಿಸದೆ ಹೋದರೆ ಯಾವುದೋ ಒಂದು ಅಪೂರ್ವ ಅವಕಾಶದಿಂದ ವಂಚಿತರಾದೆವು ಎಂಬಂತೆ ವರ್ತಿಸುವುದನ್ನು ಪೋಷಕರೂ ಅಭ್ಯಾಸ ಮಾಡಿಕೊಂಡಿದ್ದಾರೆ.
ಹದಿನೈದು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆಗೆಲ್ಲ ಮಕ್ಕಳಿಗೆ ರಜೆ ಬಂತೆಂದರೆ, ಪೋಷಕರು ನಿರಾಳವಾಗಿರುತ್ತಿದ್ದರು. ಇಂಥ ಸಂದರ್ಭಗಳಲ್ಲಿಯೇ ನಗರ ಪ್ರದೇಶಗಳಿಗೆ ಸರ್ಕಸ್ ಕಂಪನಿಗಳು ಬರುತ್ತಿದ್ದವು. ನಾಲ್ಕೇ ದಿನಗಳ ಅವಧಿಯಲ್ಲಿ 'ಸರ್ಕಸ್‌ನಲ್ಲಿ ಆನೆ ಡ್ಯಾನ್ಸ್ ಮಾಡ್ತವಂತೆ, ಕೋತಿ ಸೈಕಲ್ ಹೊಡೆಯುತ್ತಂತೆ, ಹುಲಿ ಬೆಂಕಿಯ ಮಧ್ಯೆ ನುಗ್ಗಿ ಬರ್ತದಂತೆ...' ಎಂಬಂಥ ಮಾತುಗಳು ಎಲ್ಲ ಮನೆಗಳನ್ನೂ ತಲುಪುತ್ತಿದ್ದವು. ಪರಿಣಾಮವಾಗಿ, ಮನೆಮನೆಯಲ್ಲಿ 'ಸರ್ಕಸ್‌ಗೆ ಹೋಗೋಣಾ' ಎಂಬ ಮಕ್ಕಳ ರಾಗ ಶುರುವಾಗುತ್ತಿತ್ತು. ಸರ್ಕಸ್ ಬರೋದೇ ವರ್ಷಕ್ಕೊಂದ್ಸಲ ಅಲ್ವ ಎನ್ನುತ್ತ ಪೋಷಕರೂ ಹಣ ಹೊಂದಿಸುತ್ತಿದ್ದರು.
ಈ ಪ್ರಸಂಗ ನಡೆದದ್ದು ನಾನು 8ನೇ ತರಗತಿಯಲ್ಲಿದ್ದಾಗ. ಪರೀಕ್ಷೆ ಮುಗಿದು ವಾರ ಕಳೆಯುತ್ತಿದ್ದಂತೆಯೇ ಸರ್ಕಸ್ ಕಂಪನಿಯೊಂದು ಮೈಸೂರಿಗೆ ಬಂತು. ಅಪ್ಪ, ತಾವೇ ಮೊದಲು ಈ ಸುದ್ದಿ ಹೇಳಿದರು. 'ಈಗ ಬಂದಿರೋದು ಜೆಮಿನಿ ಸರ್ಕಸ್. ಆರು ಆನೆ, ಎರಡು ಹುಲಿ, ಎರಡು ಸಿಂಹ, ನಾಲ್ಕು ಒಂಟೆ... ಹೀಗೆ ತುಂಬಾ ಪ್ರಾಣಿಗಳಿವೆಯಂತೆ. ಒಂದು ಭಾನುವಾರ ಹೋಗಿ ಬರೋಣ ಎಂದೂ ವಿವರಿಸಿದರು.
ಅಂದಿನಿಂದ ಪ್ರತಿ ಭಾನುವಾರವೂ ನಾನೂ, ಅಮ್ಮನೂ ಬೆಳಗ್ಗೆಯೇ ನೆನಪಿಸುತ್ತಿದ್ದೆವು. ತಂದೆಯವರೂ ಸಂಜೆ ಹೋಗೋಣ ಎಂದಿರುತ್ತಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಯಾರಾದರೂ ಆಕಸ್ಮಿಕವಾಗಿ ಮನೆಗೆ ಬಂದು ಬಿಡುತ್ತಿದ್ದರು. ಅತಿಥಿಗಳನ್ನು ಆದರಿಸುವ ನೆಪದಲ್ಲಿ ಹಾಂ ಹೂಂ ಅನ್ನುವುದರೊಳಗೆ ಸಂಜೆಯಾಗಿ ಬಿಡುತ್ತಿತ್ತು.
ಹೀಗೇ ದಿನಗಳು ಕಳೆದವು. ಈ ಭಾನುವಾರವೇ ಕೊನೆಯ ಪ್ರದರ್ಶನ ಎಂಬ ಸುದ್ದಿಯೂ ಬಂತು. ಅವತ್ತು ಉಳಿದೆಲ್ಲ ಕೆಲಸವನ್ನೂ ಮರೆತು ತಂದೆಯವರು ಸರ್ಕಸ್‌ಗೆ ಹೊರಟು ನಿಂತರು. ನನಗೋ, ಆಕಾಶವನ್ನೇ ಕೈಲಿ ಹಿಡಿದಷ್ಟು ಹಿಗ್ಗು.
ಟಿಕೆಟ್ ಕೌಂಟರಿನಲ್ಲಿ ಹೆಚ್ಚಿನ ರಶ್ ಇರಲಿಲ್ಲ. ಅದನ್ನು ಗಮನಿಸಿದ ತಂದೆಯವರು, ಎಲ್ರೂ ಟಿಕೆಟ್ ತಗೊಳ್ಳಲಿ. ನಾವು ಆಮೇಲೆ ತಗೊಳ್ಳೋಣ ಎಂದರು. ನಾವು ನಿಂತಿದ್ದ ಸ್ಥಳದಿಂದ ಸ್ವಲ್ಪ ಮುಂದೆ ಆರು ಮಕ್ಕಳು ಶಿಸ್ತಾಗಿ ನಿಂತಿದ್ದವು. ಹೊರಗೆ ಹೋದಾಗ ಶಿಸ್ತಿನಿಂದ ವರ್ತಿಸಬೇಕು ಎಂದು ಆ ಮಕ್ಕಳ ತಂದೆ -ತಾಯಿ ಮೊದಲೇ ಹೇಳಿಕೊಟ್ಟಿದ್ದರೇನೋ. ಹಾಗಾಗಿ ಎಲ್ಲ ಮಕ್ಕಳೂ ಒಂದೇ ಕಡೆ ಶಿಸ್ತಾಗಿ ಕೂತಿದ್ದವು. ಪೋಷಕರು ತಮ್ಮನ್ನು ಗಮನಿಸುತ್ತಿಲ್ಲ ಅನ್ನಿಸಿದಾಗ, ಸರ್ಕಸ್‌ನಲ್ಲಿ ತಾವು ಏನೇನು ನೋಡಬಹುದೆಂದು ಮಾತಾಡಿಕೊಳ್ಳುತ್ತಿದ್ದವು.
'ಅವರನ್ನು ಸೂಕ್ಷ್ಮವಾಗಿ ಗಮನಿಸಿದ ಅಮ್ಮ, ಒಂದು ಕುಟುಂಬಕ್ಕೆ ಆರು ಮಕ್ಕಳು ಬೇಕಾ? ಅಂದುಬಿಟ್ಟರು. ತಕ್ಷಣವೇ ಉತ್ತರಿಸಿದ ಅಪ್ಪ- ಹುಷಾರಾಗಿ ನೋಡೇ. ಅಲ್ಲಿ ಎರಡು ಮಕ್ಕಳು ಒಂದು ಥರಾ ಇವೆ. ಬಾಕಿ ನಾಲ್ಕು ಮಕ್ಕಳು ಬೇರೆ ಥರಾ ಕಾಣ್ತಾ ಇವೆ. ಬಹುಶಃ ಅವು ಬೇಸಿಗೆ ರಜೆಗೆಂದು ಬಂದ ಬಂಧುಗಳ ಮಕ್ಕಳಿರಬೇಕು' ಎಂದರು. ಈ ಮಾತುಕತೆ ಸಾಗುತ್ತಿದ್ದಾಗಲೇ ಆ ಮಕ್ಕಳ ತಂದೆ ಟಿಕೆಟ್ ಕೌಂಟರ್‌ಗೆ ಹೋಗಿದ್ದರು. ಒಟ್ಟು 8 ಟಿಕೆಟ್ ಬೇಕು. ಎಷ್ಟಾಗುತ್ತೆ ಹೇಳಿ ಎಂದರು. ಕ್ಯಾಷ್ ಕೌಂಟರಿನಿಂದ ಬಂದ ಉತ್ತರ ಕೇಳಿದೊಡನೆಯೇ ಅವರ ಮುಖ ಕಪ್ಪಿಟ್ಟಿತು. ಒಂದು ನಿಮಿಷ ಟೈಂ ಕೊಡಿ ಎಂದವರೇ ಸರಸರನೆ ಹಿಂದೆ ಬಂದು ಹೆಂಡತಿಯನ್ನು ಕರೆದರು. 'ಆರು ಟಿಕೆಟ್‌ಗೆ ನೂರೈವತ್ತು ರೂಪಾಯಿ ಅಂತಿದ್ದಾರೆ. ಏನ್ಮಾಡೋಣ? ನನ್ನ ಹತ್ರ ಇರೋದು ನೂರೈವತ್ತು. ಎಲ್ಲವನ್ನೂ ಟಿಕೆಟ್‌ಗೆ ಕೊಟ್ರೆ ವಾಪಸ್ ಮನೆಗೆ ಹೋಗಲು ಬಸ್ ಚಾರ್ಜ್‌ಗೆ ದುಡ್ಡಿರಲ್ಲ ಎಂದರು. ನಾವು ಅವರಿಗೆ ತುಂಬ ಹತ್ತಿರದಲ್ಲೇ ನಿಂತಿದ್ದರಿಂದ ಅವರ ಮಾತುಗಳು ತುಂಬ ಸ್ಪಷ್ಟವಾಗಿ ಕೇಳಿಸುತ್ತಿದ್ದವು. ತಂದೆ, ಕೌಂಟರ್‌ನಿಂದ ಹೊರಬಂದದ್ದನ್ನು ಗಮನಿಸಿದ ಮಕ್ಕಳು ಟಿಕೆಟ್ ತಂದಿರಬಹುದೆಂದು ಭಾವಿಸಿ ಹೋ ಎಂದು ಖುಷಿಯಿಂದ ಕುಣಿಯುತ್ತಾ ಇತ್ತ ಬಂದವು. 'ಶ್‌' ಎಂದು ಎಲ್ಲರನ್ನೂ ಸುಮ್ಮನಿರಿಸಿದ ಆ ಮಕ್ಕಳ ತಾಯಿ-'ಡ್ಯಾಡಿ ಹತ್ರ ಎಲ್ಲರ ಟಿಕೆಟ್‌ಗೂ ಆಗುವಷ್ಟು ದುಡ್ಡಿಲ್ಲ ಕಣ್ರೋ. ಬೇಜಾರಾಗಬೇಡಿ ಪ್ಲೀಸ್. ಎಲ್ರೂ ಮನೆಗೆ ಹೋಗೋಣ ನಡೀರಿ' ಎಂದರು. ಈ ಮಾತು ಕೇಳುತ್ತಿದ್ದಂತೆಯೇ ಆರು ಮಕ್ಕಳ ಮುಖ ಕಪ್ಪಿಟ್ಟಿತು. ಒಂದಿಬ್ಬರಂತೂ ಬೇಸರದಿಂದ ಅತ್ತೇ ಬಿಟ್ಟರು. ಆ ಮಕ್ಕಳ ತಂದೆ-'ಯಾರಾದ್ರೂ ಫ್ರೆಂಡ್ಸ್ ಸಿಕ್ಕಿದ್ರೆ ಸಾಲ ಕೇಳಬಹುದಿತ್ತು' ಎನ್ನುತ್ತಾ ಪೇಚಾಡಿಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ಅಪ್ಪ ಮಾಡಿದ ಕೆಲಸವನ್ನು ನಾನು ಯಾವತ್ತೂ ಮರೆಯಲಾರೆ. ಅವರು ನಿಧಾನವಾಗಿ ಆ ದಂಪತಿ ನಿಂತಿದ್ದ ಕಡೆಗೆ ಹೋದರು. ತಮ್ಮ ಜೇಬಿನಿಂದ ನೂರು ರೂಪಾಯಿ ನೋಟೊಂದನ್ನು ಆ ದಂಪತಿಗೆ ಗೊತ್ತಾಗದಂತೆ ಬೀಳಿಸಿದರು. ನಂತರ, ಅದನ್ನು ತಾವೇ ಎತ್ತಿಕೊಂಡು ಹೋಗಿ ಆ ಆರು ಮಕ್ಕಳ ತಂದೆಯ ಮುಂದೆ ಹಿಡಿದು- 'ಸರ್, ತಗೊಳ್ಳಿ. ಇದು ನಿಮ್ಮ ಹಣ. ಟಿಕೆಟ್ ತಗೊಳ್ಳಲು ನೀವು ಗಡಿಬಿಡಿಯಿಂದ ಓಡಾಡ್ತಿದ್ದಾಗ ಬಿದ್ದು ಹೋಯ್ತು. ನೀವು ಗಮನಿಸಲಿಲ್ಲ. ಈಗ ಖುಷಿಯಾಗಿ ಹೋಗಿ ಬನ್ನಿ ಸರ್‌' ಎಂದುಬಿಟ್ಟರು.
ಗಡಿಬಿಡೀಲಿ ನಿಮ್ಮ ಯಜಮಾನರು ದುಡ್ಡು ಬೀಳಿಸಿದ್ರಮ್ಮಾ. ಅದನ್ನು ನೀವ್ಯಾರೂ ಗಮನಿಸಲಿಲ್ಲ. ಈಗ ಯಾಕೋ ಪೇಚಾಡ್ತಾ ಇದೀರಲ್ಲ ಎಂದು ಆ ಮಕ್ಕಳ ತಾಯಿಗೂ ಹೇಳಿದರು. ಅದೇ ಸಂದರ್ಭದಲ್ಲಿ, ಅಪ್ಪನ ಕೈಗೆ ದುಡ್ಡು ಬಂದದ್ದನ್ನು ಕಂಡು ಎಲ್ಲ ಮಕ್ಕಳೂ ಖುಷಿಯಿಂದ ಎದ್ದು ನಿಂತವು. ಆ ಮಕ್ಕಳ ತಂದೆ ಏನೋ ಹೇಳಲು ಹೊರಟ. ಆದರೆ ಅಪ್ಪ ಅದಕ್ಕೆ ಅವಕಾಶ ಕೊಡದೆ, ಒಮ್ಮೆ ಅವನ ಕೈ ಅದುಮಿ ಬಂದು ಬಿಟ್ಟರು. ಅಪ್ಪನ ಜೇಬೂ ಖಾಲಿಯಾಗಿದ್ದ ಕಾರಣದಿಂದ ಅವತ್ತು ನಾವು ನಾವು ಸರ್ಕಸ್‌ಗೆ ಹೋಗಲಿಲ್ಲ.
ಅವತ್ತು, ಒಂದೇ ಒಂದು ಮಾತೂ ಆಡದೆ ಮಾನವೀಯತೆಯ ಮಹಾಪಾಠವನ್ನು ಅಪ್ಪ ಹೇಳಿಕೊಟ್ಟಿದ್ದರು. ಆನಂತರದಲ್ಲಿ ಅಂಥದೊಂದು ಪಾಠವನ್ನು ನನಗೆ ಯಾವ ವಿಶ್ವವಿದ್ಯಾಲಯವೂ ಕಲಿಸಲಿಲ್ಲ...

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.