ವಿಕ್ರಮನಿಗೆ ಬೇತಾಳವು ಹೇಳಿದ ಮತ ಪುರಾಣ!
ಮೊನ್ನೆ ಶನಿವಾರ ರಾತ್ರಿ ಬೆಂಗಳೂರಿನ ಮನೆಯೊಂದರ ಮೇಲೆ ವಿಕ್ಕಿ ಎಂಬ ವಿಕ್ರಮನು ಅಪರಾತ್ರಿ ಏಕಾಂಗಿಯಾಗಿ ಆಕಾಶ ನೋಡುತ್ತಿದ್ದನು. ಭಾರೀ ಅಸಹನೆಯಲ್ಲಿದ್ದಂತಿದ್ದ ವಿಕ್ಕಿಯು ಆಗೀಗ ತಲೆ ಕೆರೆದುಕೊಳ್ಳುತ್ತಿದ್ದನು. ಅವನ ಕಣ್ಣಳತೆಗೆ ದಕ್ಕುತ್ತಿದ್ದ ಯಾವ ಮನೆಗಳ ಒಳಗೂ ದೀಪ ಹೊತ್ತಿಕೊಂಡಿದ್ದದ್ದರ ಸುಳಿವಿರಲಿಲ್ಲ. ಟೆರೇಸಿನ ಮೇಲೆ ನಿಂತು ನೋಡುವವನಿಗೆ ಬೀದಿ ದೀಪಗಳ ಬೆಳಕಲ್ಲಿ ರಸ್ತೆಗಳು ಮತ್ತು ಅದರ ಇಕ್ಕೆಲಗಳಲ್ಲಿ ಬೆಳಗಾಗುವುದನ್ನೇ ಕಾಯುತ್ತಿರುವಂತೆ ನಿಂತಿರುವ ಕಾರು-ಬೈಕುಗಳು ಕಾಣುತ್ತಿದ್ದವು. ಆ ಏರಿಯಾದಲ್ಲಿ ಅಷ್ಟೊಂದು ಬೀದಿ ದೀಪಗಳಿದ್ದ ಕಾರಣಕ್ಕೇನೋ... ಜಗಮಗ ಬೆಳಕಿನಡಿಯಲ್ಲೇ ಬೆಂಗಳೂರು ನಿದ್ರೆಗೆ ಜಾರಿದಂತೆ ಗೋಚರಿಸಿ ವಿಸ್ಮಯವೆನಿಸುತ್ತಿತ್ತು.
ಅಂದ ಹಾಗೆ, ನಮ್ಮ ಕಥಾನಾಯಕ ವಿಕ್ಕಿಯು ಈ ಯಾವ ಅವ್ಯಕ್ತ ಭಾವಗಳನ್ನು ತಿಳಿದುಕೊಳ್ಳುವುದಕ್ಕೂ ತಾರಸಿ ಏರಿದವನಲ್ಲ. ಕಥೆ ಬರೆಯುವವನಿಗೇನೋ ಕ್ಯಾಮೆಯಿಲ್ಲ ಅಂತಂದ್ರೆ ಕಥಾನಾಯಕನಿಗೇನು ಕೆಲಸವಿಲ್ಲವೇ? ಬಿಸಿಲು-ಭೂಮಿ-ಬೆಳಕು ಅಂತೆಲ್ಲ ತಲೆಗೆ ಮೊಳೆ ಹೊಡೆದುಕೊಳ್ಳೋಕೆ? ವಿಕ್ಕಿ ಒಳ್ಳೆ ಸಂಬಳ ತರುವ ಕೆಲಸದಲ್ಲೇ ಇದ್ದಾನೆ. ಈ ಒಳ್ಳೆ ಸಂಬಳ ಎಂಬುದನ್ನು ಧರ್ಮಕ್ಕೆ ಕೊಡುವ ಔದಾರ್ಯ ಹಾಗೂ ಪಡೆವ ಅದೃಷ್ಟ ಕೆಲವೇ ಜನರಲ್ಲಿದೆಯಾದ್ದರಿಂದ, ವಿಕ್ಕಿಗೆ ಸಂಬಳಕ್ಕೆ ನ್ಯಾಯ ಒದಗಿಸಲು ವಾರದ ಐದು ದಿನ ತುರಿಸಿಕೊಳ್ಳುವುದಕ್ಕೆ ಪುರುಸೊತ್ತಿಲ್ಲದಂತೆ ದುಡಿಯಬೇಕಿದೆ, ಬಹುತೇಕ ಬೆಂಗಳೂರಿಗರಂತೆ. ಹೀಗಿರುವಾಗ ವೀಕೆಂಡ್‌ನಲ್ಲಿ ರಾತ್ರಿಯಷ್ಟೇ ಅಲ್ಲ, ಸಮಯವಿದ್ದಾಗಲೆಲ್ಲ ನಿದ್ರೆ ತೆಗೆಯಬೇಕಿರುವುದು ಘನ ಪರಂಪರೆ. ಆದರೆ, ಐಪಿಎಲ್ ಮ್ಯಾಚು ನೋಡಿ, ತದನಂತರ ಹೊಟ್ಟೆ ತುಂಬಾ 'ದ್ರವ ಪರಂಪರೆ'ಯನ್ನು ತುಂಬಿಸಿಕೊಂಡಿದ್ದಾಗಿಯೂ ವಿಕ್ಕಿಗೆ ನಿದ್ರೆ ಆವರಿಸುತ್ತಿಲ್ಲ. ಕಾರಣ, ಈ ಬಾರಿ ಮೇನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿಯೇ ಸಿದ್ಧ ಎಂಬ ಅಚಲ ನಿರ್ಧಾರಕ್ಕೆ ಬಂದಿರುವ ವಿಕ್ಕಿ, ನಂತರ ಯಾರಿಗೆ ಮತ ಕೊಡಲಿ ಎಂಬ ಬಗ್ಗೆ ತಾರ್ಕಿಕವಾಗಿ ಯೋಚಿಸುವುದಕ್ಕೆ ಹೋಗಿ ತಲೆಯನ್ನೆಲ್ಲಾ ಗೊಬ್ಬರ ಗುಂಡಿಯನ್ನಾಗಿಸಿಕೊಂಡು ತಾರಸಿ ಏರಿ ತಡರಾತ್ರಿ ಪರಿತಪಿಸುವ ಸನ್ನಿವೇಶ ಬಂದೊದಗಿದೆ.
'ಥತ್ತೇರಿಕೆ. ಎಲ್ಲರೂ ನಾಲಾಯಕ್‌ಗಳಾಗಿಯೇ ಕಾಣ್ತಿದ್ದಾರೆ. ಮತ ಹಾಕೋದೇ ಬೇಡ ಅನ್ಸುತ್ತೆ. ಆದರೆ ಮತದಾನದ ಪವಿತ್ರ ಕರ್ತವ್ಯ ನಿಭಾಯಿಸದೇ ನಂತರ ವ್ಯವಸ್ಥೆ ಸರಿ ಇಲ್ಲ ಎಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಜನವರ್ಗವನ್ನು ಎಲ್ಲರೂ ಗೇಲಿ ಮಾಡುವುದಕ್ಕೆ ಶುರು ಮಾಡಿರೋವಾಗ, ನಾನೂ ಆ ಸಾಲಲ್ಲಿ ನಿಂತು ನಗೆಯಾಡಿಸಿಕೊಳ್ಳೋದು ಸರಿಯಲ್ಲ. ಯಾರಾದರೂ ದೆವ್ವ ನನ್ಮಗ ಬಂದು ಈ ಒಗಟನ್ನಾದ್ರೂ ಬಿಡಿಸಿಕೊಡ್ಬಾರ್ದಾ? ಅಥವಾ ಈ ಹಾಳಾದ್ ದೇವ್ರು ನಿದ್ದೇನಾದ್ರೂ ಕರುಣಿಸಬಾರ್ದಾ' ಅಂತ ತನ್ನಷ್ಟಕ್ಕೆ ತಾನೇ ಗೊಣಗಿಕೊಂಡ ವಿಕ್ಕಿ.
ಅಷ್ಟೇ! ರಪ್ ಅಂತ ಹೆಗಲ ಮೇಲೆ ಯಾವುದೋ ಭಾರ ಬಿತ್ತು. ಗಾಬರಿಯಿಂದ ಕೊರಳು ಹೊರಳಿಸಿ ನೋಡಿದ್ರೆ ಹೆಗಲ ಮೇಲೆ ಬೇತಾಳ! ವಿಕ್ಕಿ ಜೀವವನ್ನೇ ಗಂಟಲಿಗೆ ತಂದು ಕೂಗಿಕೊಂಡ, ಸದ್ದೇ ಹೊರಡಲಿಲ್ಲ! ಬೇತಾಳ ವಿಕ್ಕಿಯ ಕಿವಿಯಲ್ಲಿ ಮೆಲುವಾಗಿ ನಕ್ಕಿತು. ಅದರಲ್ಲಿ ವಿಕಾರವೇನೂ ಇರಲಿಲ್ಲ. ಅದರೊಂದಿಗೆ ಬೇತಾಳ ಮಾತಿಗಿಳಿಯಿತು...
'ಹೆದರಬೇಡ ವಿಕ್ರಮನೇ. ನಾನು ನಿನ್ನ ಹಳೆ ಗೆಳೆಯ. ನಿಮ್ಮ ಜೀವ ನೀವು ಹೊತ್ತುಕೊಳ್ಳುವುದೇ ಕಷ್ಟವಾಗಿರುವ ಈ ದಿನಗಳಲ್ಲಿ 'ಛಲ ಬಿಡದ ವಿಕ್ರಮಾದಿತ್ಯನು ಸ್ಮಶಾನಕ್ಕೆ ಹೋಗಿ ಬೇತಾಳವನ್ನು ಹೆಗಲ ಮೇಲಿರಿಸಿಕೊಂಡನು' ಎಂಬ ವಿವರ ಪ್ರಸ್ತುತವಲ್ಲ. ಹೀಗಾಗಿ ನಾನೇ ನಿನ್ನ ಬಳಿ ಬಂದೆ. ಅಪರೂಪಕ್ಕೆ ನಿನ್ನ ತಲೆಗೆ ಭಿನ್ನ ಯೋಚನೆಯ ಕೆಲಸ ಕೊಟ್ಟಿರುವಾಗ, ನನ್ನ ಸಲಹೆಯೇನಾದರೂ ಉಪಯೋಗಕ್ಕೆ ಬರುವುದಾದರೆ ಇರಲಿ ಎಂದು ಮಾತನಾಡುವುದಕ್ಕೆ ಬಂದಿರುವೆ. ಹಿಂದಿನಂತೆ ಉದ್ದುದ್ದ ಕತೆ ಹೇಳಿ ಉತ್ತರಿಸದಿದ್ದರೆ ತಲೆ ಹೋಳಾಗಿಸುವ ಸ್ಕೀಮ್ ಏನೂ ಹಾಕಿಕೊಂಡಿಲ್ಲ. ಮಧ್ಯದಲ್ಲಿ ಮೌನ ಮುರಿದು ಮಾತನಾಡುವಂತಿಲ್ಲ ಎಂಬ ಷರತ್ತೂ ಹಾಕಲಾರೆ. ಏಕೆಂದರೆ ಇದು ಪ್ರಜಾಪ್ರಭುತ್ವ ಯುಗವಲ್ಲವೇ? ಭಿನ್ನದನಿಗಳಿಗೆ ಮಣೆಯುಂಟು. ಈ ಇರುಳಿನಲ್ಲಿ ನಿನ್ನ ಮನದ ಗೊಂದಲಗಳ ಕುರಿತಂತೆ ಹೀಗೆಯೇ ಹರಟುತ್ತೇನೆ. ಇದರಿಂದ ಪರಿಹಾರ- ತಿರುಳು ದೊರೆಯುತ್ತದೋ ಗೊತ್ತಿಲ್ಲವಾಗಲೀ ಮನೋಲ್ಲಾಸವಂತೂ ಆಗುತ್ತದೆ. ಸಂಭಾಷಣೆಯಲ್ಲೇ ಸುಖ ಹುಡುಕೋದು ಈಗಿನ ಟ್ರೆಂಡ್ ಅಲ್ವೇ? ಕೇಳಿಸಿಕೋ...'
'ಎಲ್ಲರನ್ನೂ ಈಗ ಕಾಡುತ್ತಿರುವ ಹತಾಶೆ ಎಂದರೆ ಆಯ್ಕೆಗಳೇ ಇಲ್ಲದಷ್ಟು ವ್ಯವಸ್ಥೆ ಕಿಲುಬೆದ್ದುಹೋಗಿದೆ ಎಂಬುದು. ಅದು ನಿಜವೇ. ಎಲ್ಲರೂ ಭ್ರಷ್ಟರಾಗಿದ್ದಾರೆ. ಎಲ್ಲರಿಗೂ ಅವಕಾಶ ಕೊಟ್ಟು ನೋಡಿದ್ದಾಗಿದೆ. ಇಂಥ ಪಕ್ಷದ ಸರ್ಕಾರ ಬಂದರೆ ಚೆಂದ ಎಂದು ಹೇಳುವ ಧೈರ್ಯ ಯಾರಲ್ಲೂ ಉಳಿದಿಲ್ಲ. ಹೀಗೆಲ್ಲ ಇರುವಾಗ ಯಾವನಿಗೆ ಮತ ಕೊಡಲಿ ಎಂಬ ನಿರಾಸೆ ಹಾಗೂ ಯಾರಿಗೆ ಮತ ಕೊಟ್ಟು ಏನಾಗಬೇಕಿದೆ ಎಂಬ ಸಿನಿಕತೆ ಕಾಡುವುದು ಸಹಜ. ಆದರೆ ಈ ಸಿನಿಕತೆ ವ್ಯಕ್ತಿಯ ಆರೋಗ್ಯಕ್ಕೆ ಮತ್ತು ಪ್ರಜಾಪ್ರಭುತ್ವದ ಅಭ್ಯುದಯಕ್ಕೆ ಯಾವುದಕ್ಕೂ ಸಹಾಯಕವಲ್ಲವಾದ್ದರಿಂದ ಹೇಗೋ ಅದರಿಂದ ಹೊರಬರುವ ದಾರಿಯನ್ನಂತೂ ಕಂಡುಕೊಳ್ಳಲೇಬೇಕು.
ಕಳೆದುಕೊಳ್ಳೋಕೆ ಇನ್ನೇನೂ ಇಲ್ಲ ಎಂಬ ಪರಿಸ್ಥಿತಿಯಲ್ಲೇ ಪಡೆದುಕೊಳ್ಳೋಕೆ ಹೊಸ ಸಂಗತಿಗಳು ಸಿಗುತ್ತವೆ. ಕೆಲ ಹಳೆ ನಂಬಿಕೆಗಳಿಂದ ಮುಕ್ತವಾಗುವುದಕ್ಕೆ ಮತದಾರನಿಗೊಂದು ಛಾನ್ಸು ಕೊಟ್ಟಿದೆ ಚೂರೆದ್ದಿರುವ ರಾಜಕಾರಣ. ನಮ್ಮ ಮುತ್ತಾತನ ಕಾಲದಿಂದ ನಮ್ಮನೇಲಿ ಇಂದಿರಮ್ಮನ ಪಕ್ಷಕ್ಕೇ ಓಟು ಎನ್ನುವವರು, ನಾವು ಪಕ್ಕಾ ಕೇಸರಿ, ಓಟೇನಿದ್ದರೂ ಬಿಜೆಪಿಗೆ ಎಂಬ ವಿಶಿಷ್ಟ ಭಕ್ತರು, ನಮ್ಮದೇನಿದ್ದರೂ ಜನತಾ ಪರಿವಾರ, ಅದೇನಾರ ಆಗ್ಲಿ ಎಂಬುವವರೆಲ್ಲ ಒಟ್ಟೊಟ್ಟಿಗೇ ಆ ಬಂಧದಿಂದ ಕಳಚಿಕೊಳ್ಳುವುದಕ್ಕೆ ಬೇಕಿರುವ ಎಲ್ಲ ಕಾರಣಗಳನ್ನೂ ದಯಪಾಲಿಸಿದೆ ಇಂದಿನ ಪರಿಸ್ಥಿತಿ. ಟಿಕೆಟ್ ಹಂಚಿಕೆ, ಪಕ್ಷಾಂತರ, ರೆಸಾರ್ಟ್ ಟೂರು ಇವೆಲ್ಲವಕ್ಕೂ ಸಾಕ್ಷಿಯಾದ ಮೇಲೆ ಇನ್ನೂ ಯಾವುದಾದರೂ ಪಕ್ಷ 'ತನ್ನದು' ಎಂಬಂಥದ್ದೊಂದು ಜಾಯಮಾನ ಕಾಪಿಟ್ಟುಕೊಂಡಿದೆ ಎಂದು ನಂಬುವುದು ಮೂರ್ಖತನದ ಪರಮಾವಧಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ಸಾರ್ ಎಂಬುದೆಲ್ಲ ಸುಮ್ಮನೇ ಅಭ್ಯರ್ಥಿಗಳ ಹುಟ್ಟಿಗೆ ಇರುವ ವೇದಿಕೆಗಳಂತಾಗಿವೆ ಅಷ್ಟೆ. ಹೀಗಾಗಿ ಪಕ್ಷ ಯಾವುದೇ ಇರಲಿ ವ್ಯಕ್ತಿಯನ್ನು ನೋಡಿ ಮತ ಹಾಕುತ್ತೇನೆ ಎಂಬ ನಿರ್ಧಾರಕ್ಕೆ ಇದು ಸಕಾಲ. ವ್ಯಕ್ತಿಗಳೂ ಸರಿಯಾದವರಿಲ್ಲ ಎಂಬುದು ಸಮಸ್ಯೆಯೇ ಹೌದಾದರೂ ಇದ್ದಿದ್ದರಲ್ಲೇ ಜರಡಿ ಹಿಡಿಯುವ ಕೆಲಸ ಆಗಬೇಕು. ಹೀಗಾದಾಗ ತಾನು ಇಂಥ ಪಕ್ಷದಲ್ಲಿರುವವನಾದ್ದರಿಂದ ಹೆಂಗಂದ್ರೂ ಆ ಕ್ಷೇತ್ರದಲ್ಲಿ ಗೆದ್ದು ಬರುತ್ತೇನೆ ಅಂತ ಯಾವ ಅಭ್ಯರ್ಥಿಯೂ ಅಂದುಕೊಳ್ಳುವ ವಾತಾವರಣ ಮುಂದಿನ ದಿನಗಳಲ್ಲಿ ಇಲ್ಲವಾಗುತ್ತದೆ. ಮತದಾರನನ್ನು ಟೇಕನ್ ಫಾರ್ ಗ್ರಾಂಟೆಡ್ ಅಂತ ಭಾವಿಸದೇ ತುಸುವಾದರೂ ಕೆಲಸ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕುತ್ತಾನೆ.
ಹೀಗೆ ಮಾಡಿಬಿಟ್ಟರೆ ಇದ್ದವರಲ್ಲೇ ಒಳ್ಳೆಯವರು ಎನಿಸಿಕೊಂಡ ಆ ಪಕ್ಷದ ಒಂದಿಷ್ಟು, ಈ ಪಕ್ಷದ ಮತ್ತೊಂದಿಷ್ಟು ಆಯ್ಕೆಯಾಗಿ ಯಾರಿಗೂ ಬಹುಮತ ಬರದಲ್ಲ ಅನ್ನೋದೊಂದು ಪ್ರಶ್ನೆ. ಹತ್ತಿರ ಹತ್ತಿರ ಬಹುಮತ ದೊರಕಿಸಿಕೊಂಡವರೇ ತಮ್ಮ ತಮ್ಮಲ್ಲಿ ಭಯಾನಕವಾಗಿ ಕಚ್ಚಾಡಿಕೊಂಡು ಇನ್ನಿಲ್ಲದ ಅಸಹ್ಯ ಮೂಡಿಸಿರುವಾಗ, ಪಕ್ಷವೊಂದಕ್ಕೆ ಬಹುಮತ ಲಭಿಸಿದರೆ 'ಸ್ಥಿರ ಸರ್ಕಾರ' ಲಭಿಸುತ್ತದೆ ಎಂಬ ಪರಿಕಲ್ಪನೆಯೇ ಅಪ್ರಸ್ತುತವಾಗಿದೆ. ಇಂಥಾದ್ದೇ ಪಕ್ಷ ಇರಲಿ ಅಂತ ಅಲ್ಲಿನ ಭ್ರಷ್ಟರು, ಅಸಮರ್ಥರಿಗೆಲ್ಲ ಮತ ಒತ್ತುವುದಕ್ಕಿಂತ ಇದ್ದವರ ಪೈಕಿ ಸುಭಗರು ಎಂಬಂತಿರುವ ಶಾಸಕರ ಗುಂಪು ಮೂರ್ನಾಲ್ಕು ಪಕ್ಷಗಳಿಂದ ಉದ್ಭವವಾಗಿ ಕಿಚಡಿ ಸರ್ಕಾರವನ್ನೇ ಕೊಡಲಿ. ಬಹುಮತದ ಸರ್ಕಾರ ಎಸಗಿದ ಅಧ್ವಾನವನ್ನು ಮೀರಿಸುವಂಥದ್ದೇನೂ ಅವರು ಮಾಡಲಾರರು!
ಆ ಮನುಷ್ಯ ಬಹಳ ಒಳ್ಳೆಯವನಾಗಿದ್ದ, ಆದರೆ ಅಡ್ರೆಸ್ಸೇ ಇಲ್ಲದ ಪಕ್ಷದಿಂದ ನಿಂತಿದಾನೆ ಎಂಬ ಅನುಕಂಪ ಸುರಿಸುತ್ತಾರೆ ಕೆಲವರು. ಅವನಿಗೆ ಮತ ಕೊಡಬಹುದಿತ್ತು, ಆದ್ರೆ ಆತ ಹೆಂಗೂ ಗೆಲ್ಲೋದಿಲ್ಲವಾದ್ದರಿಂದ ಕೊಟ್ರೂ ಸುಮ್ನೆ ನಮ್ಮ ಮತ ವೇಸ್ಟ್ ಆಗುತ್ತೆ ಅನ್ನೋದು ಹಲವರ ಅಳಲು. ಅರೆ, ಗೆದ್ದೆತ್ತಿನ ಪರವಾಗಿದ್ದವರ ಮತವಷ್ಟೇ ಸಾರ್ಥಕ ಎಂಬ ಹುಚ್ಚು ಆಲೋಚನೆಗೆ ಅರ್ಥವೆಲ್ಲಿದೆ? ಸೋತವನಿಗೆ ಬಿದ್ದ ಮತದಲ್ಲೂ ಸಾರ್ಥಕತೆ ಇದೆ. ಸೋತವನಿಗೂ ಒಳ್ಳೆಯ ಪ್ರಮಾಣದಲ್ಲಿಯೇ ಮತಗಳು ಬಂದಿದ್ದರೆ ಆತನಿಗೆ ಒಂದು ದಿನ ಗೆಲ್ಲುವ ಆಸೆ ಜೀವಂತವಾಗಿರುತ್ತದೆ. ಒಳ್ಳೆಯ ಅಭ್ಯರ್ಥಿ ಸೋತರೂ ಪರವಾಗಿಲ್ಲ, ಶ್ರಮವಹಿಸಿದರೆ ಮುಂದೆ ಗೆಲುವಿದೆ ಎಂಬ ಆಸೆ ತೋರಿಸುವುದಕ್ಕೆ ಸಾಧ್ಯವಾದರೆ ಮತದಾರ ಗೆದ್ದಂತೆಯೇ. ಗೆದ್ದುಹೋದವ ಐದು ವರ್ಷಗಳ ಅವಧಿಯಲ್ಲಿ ಮುಖ ತೋರಿಸುತ್ತಾನೋ ಇಲ್ಲವೋ. ಆದರೆ ಸೋತವ ಮಾತ್ರ ಜನರ ನಡುವೆ ಇದ್ದು ತನ್ನ ಇತಿಮಿತಿಯಲ್ಲಿ ಸಮಾಜಕ್ಕೆ ಮಾಡಬಹುದಾದ ಸಹಾಯಗಳನ್ನು ಸಲ್ಲಿಸುತ್ತಲೇ ಇರುತ್ತಾನೆ. ಏಕೆಂದರೆ ಮುಂದಿನ ಬಾರಿಯಾದರೂ ಜನರ ಒಲವು ಹೆಚ್ಚಿಸಿಕೊಂಡು ಗೆಲ್ಲುವ ಉಮೇದು ಅವನಿಗಿರುತ್ತದೆ. ಕಮಲ ಪಕ್ಷವು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗಲೇ ಏಕೆ ಚೆಂದಿತ್ತು ಎಂಬುದಕ್ಕೆ ಕಾರಣವೂ ಇದೇ. ಹೀಗಾಗಿ ಗೆಲ್ಲುವ ಸಾಧ್ಯತೆ ಕಡಿಮೆ ಇರುವವನಿಗೂ ಆತ ಸಂಭಾವಿತನಾಗಿದ್ದಲ್ಲಿ ಮುಲಾಜಿಲ್ಲದೇ ಮತ ಕೊಡು. ಆತನ ಸೋಲಿನ ಮಾರ್ಜಿನ್ ಕಡಿಮೆ ಆದರೂ ಅದು ಮತದಾರನ ಗೆಲುವೇ. ಏಕೆಂದರೆ ಗೆದ್ದವನಿಗೂ ಹೆದರಿಕೆ ಇರುತ್ತದೆ, ಕೆಲಸ ಮಾಡದಿದ್ದರೆ ಬದಲಿ ವ್ಯವಸ್ಥೆ ಪ್ರಬಲವಾಗಿದೆ ಎಂದು!
ಅಲ್ಲಿ ಟಿಕೆಟ್ ಸಿಗದವರೇ ಇಲ್ಲಿಗೆ, ಇಲ್ಲಿಯೂ ಸಿಗದವರು ಮತ್ತೊಂದು ಬಳಗದಲ್ಲಿ ಭಾಗವಹಿಸಿರುವ ಈ ಚುನಾವಣೆಯಲ್ಲಿ, ತಾನು ಸದೃಢ ಸರ್ಕಾರ ಕೊಡುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಯಾವ ಪಕ್ಷ ಬೊಬ್ಬೆ ಹೊಡೆದರೂ ಅದು ಬೊಗಳೆಯೇ ಆಗಿರುತ್ತದೆ. ಹೀಗಾಗಿ ಪಕ್ಷವನ್ನು ಮುಖವೆತ್ತಿಯೂ ನೋಡದೇ ವ್ಯಕ್ತಿಯ ಸಾಮರ್ಥ್ಯ ನೋಡಿ ಮತ ಹಾಕುವುದು ಈ ಬಾರಿ ತೋರಬಹುದಾದ ಜಾಣತನ. ಇವತ್ತು ಪಕ್ಷಗಳಿರುವ ಸ್ಥಿತಿ ನೋಡಿದರೆ ಒಂದೇ ಪಕ್ಷ ಅಧಿಕಾರಕ್ಕೆ ಬಂದರೂ, ಇರುವ ಎಲ್ಲ ಪಕ್ಷಗಳು ಸೇರಿ ಸರ್ಕಾರ ರಚಿಸಿದರೂ ತೀರ ವ್ಯತ್ಯಾಸವೇನೂ ಆಗುವುದಿಲ್ಲ ಎಂಬುದು ತಿಳಿದಿರಲಿ.
ಇಂಥವೆಲ್ಲ ಪರಿಸ್ಥಿತಿಗಳನ್ನು ಅಳೆದು ಸೂಕ್ತ ವ್ಯಕ್ತಿಗೆ ಮತ ಹಾಕು ಎಂಬುದು ನನ್ನ ಆಪ್ತ ಸಲಹೆ. ಕೆಲ ಯೋಚನೆಗಳು ಫಿಲಾಸಫಿಕಲ್ ಅನಿಸಬಹುದು. ಆದರೆ ಸಿನಿಕಲ್ ಆಗುವುದಕ್ಕಿಂತ ಫಿಲಾಸಫಿಕಲ್ ಆಗೋದು ಒಳ್ಳೇದು. ನಾನಿನ್ನು ಬರಲೇ...' ಬೇತಾಳ ಮಾತು ಮುಗಿಸಿತು.
ಅದುವರೆಗೂ ಸಮ್ಮೋಹನಕ್ಕೆ ಒಳಗಾದಂತಿದ್ದ ವಿಕ್ರಮನು ಥಟ್ಟನೇ, 'ಎಲೈ ಬೇತಾಳವೇ, ನೀನು ಯಾರು? ಹೀಗೆಲ್ಲ ಬುದ್ಧಿವಾದ ಹೇಳುತ್ತಿರುವ ನಿನ್ನ ಉದ್ದೇಶವಾದರೂ ಏನು' ಎಂದು ಪ್ರಶ್ನಿಸಿದನು. 'ಹಿಂದಿನ ಚುನಾವಣೆಯಲ್ಲಿ ಪಕ್ಷವೊಂದರ ಪರವಾಗಿ ಮತದಾರರಿಗೆ ಹೆಂಡ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವ ನಾನು. ಹಂಚಿ ಉಳಿದಿದ್ದರ ರುಚಿ ನೋಡುವ ಖಯಾಲಿಯಾಗಿ, ರುಚಿಹತ್ತಿ ವಿಪರೀತ ಕುಡಿದು ಸತ್ತುಹೋದೆ. ಗೊಂದಲದಲ್ಲಿರುವ ಕೆಲ ಮತದಾರರಿಗಾದರೂ ದಾರಿ ತೋರಿಸಿದರಷ್ಟೇ ನನಗೆ ಮೋಕ್ಷವಂತೆ. ಇನ್ನೂ ಹಲವರ ಮನವೊಲಿಸಬೇಕಿದೆ. ನನ್ನ ಮೋಕ್ಷಕ್ಕೆ ನಿನ್ನದೂ ಹಾರೈಕೆ ಇರಲಿ' ಎನ್ನುತ್ತಲೇ ಬೇತಾಳವು ವಿಕ್ರಮನ ಉತ್ತರಕ್ಕೂ ಕಾಯದೇ ಕಾಂಕ್ರೀಟ್ ಕಾಡಿನಲ್ಲಿ ಹುಣಸೆಮರವನ್ನು ಹುಡುಕುತ್ತ ಹಾರಿಹೋಯಿತು.
-ಚೈತನ್ಯ ಹೆಗಡೆ
cchegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

